Wednesday, January 2, 2019

ಕಿವಿ ಕೇಳದ್ದು ಕಣ್ಣು ತೆರೆಸಿತು…..


                                       ಕಿವಿ ಕೇಳದ್ದು    ಕಣ್ಣು  ತೆರೆಸಿತು…..

ನಗರದಲ್ಲಿ ಬೆಳೆದ ದೃತಿಗೆ ಏಳನೆ ತರಗತಿಗೆ ಬಂದರು ಕೆಲವು ಸೂಕ್ಮಗಳು ತಿಳಿಯದಾಗಿತ್ತು. ಸ್ಕೂಲಿನಿಂದ ಲಂಚ್ ಬಾಕ್ಸ್ ಖಾಲಿ  ಆಗದೆ ಹಾಗೆ ಮನೆಗೆ ಬರುತಿತ್ತು. ಯಾಕೆ ಅಂತ ಕೇಳಿದರೆ ಬಿಸಿ ಇಲ್ಲ ಆರಿರತ್ತೆ ನನಗೆ ಸೇರಲ್ಲ..ಹೀಗೆ ಉತ್ತರಗಳು ಬರುತಿದ್ದವು. ಮನೆಯಲ್ಲು ಪ್ಲೇಟ್ ನಲ್ಲಿ ಅನ್ನ ವನ್ನು ಅರ್ಧ-ಬರ್ಧ ತಿಂದು ಹಾಗೆ ಬೆಸಿನ್ಗೆ ಹಾಕುತಿದ್ದಳು. ಹಾಲು ಲೋಟದಲ್ಲಿ ಹಾಗೆ ಇರುತಿತ್ತು. ಏನಾದ್ರು ಹೇಳಿದರೆ ಉಡಾಫೆ ಉತ್ತರ ಹೇಳುತಿದ್ದಳು. ದೃತಿಗೆ ಹಾಲು, ಅಕ್ಕಿ, ತರಕಾರಿ ಸುಪರ್ ಮಾರ್ಕೆಟ್ ನಲ್ಲಿ ಸಿಗುವುದು ತಿಳಿದಿತ್ತೆ ಹೊರತು ಅದರ ಹಿಂದಿನ ಬೆಳೆದವರ ಕಷ್ಟ ತಿಳಿಯದಾಗಿತ್ತು. ದೃತಿಯ ಅಮ್ಮನಿಗೆ ಇದೊಂದು ತಲೆ ನೋವಾಯಿತು. ಗಿಡದಲ್ಲೆ ಬಗ್ಗಿಸ ಬೇಕು. ಇಲ್ಲ ಅಂದರೆ ಇದರ ಪರಿಣಾಮ ವಿಪರಿತ ವಾಗುವುದು ಎಂದು ತಿಳಿದು ಒಂದು ದಾರಿ ಹುಡುಕಿದಳು.
ಈ ಸಲದ ಬೆಸಿಗೆ ರಜದಲ್ಲಿ ಸಮ್ಮರ್ ಕ್ಯಾಂಪ್ ಗೆ ಹಾಕುವ ಬದಲು ತನ್ನ ಅಜ್ಜಿ ಮನೆ ಹೊನ್ನಳ್ಳಿಗೆ ಹೋಗುವ ಯೋಚನೆ ಮಾಡಿದಳು. ಅಲ್ಲಿ ತಾನು ರಜದಲ್ಲಿ ಕಳೆದ ಹಾಗೆ ಈ ಬಾರಿ ಮಗಳು ರಜ ಕಳೆಯಲಿ ಹಳ್ಳಿಯ ವಾತಾವರಣ ಅವರ ದುಡಿಮೆ ನೋಡಲಿ ಎಂದಾಗಿತ್ತು. ಯಾವಾಗಲು ಕಿವಿಯಲ್ಲಿ ಕೇಳಿರುವುದಕಿಂತ ಕಣ್ಣಲ್ಲಿ ನೋಡುವುದು ಬೇಗ ಅರ್ಥವಾಗುವುದು. ಅವಳು ಅಂದುಕೊಂಡ ಹಾಗೆ ಬೆಸಿಗೆ ರಜದಲ್ಲಿ ಹೊನ್ನಳ್ಳಿಗೆ ಹೋದಳು. ದೃತಿ ಮೊದಲ ಬಾರಿ ಹಳ್ಳಿಯ ವಾತಾವರಣ ನೋಡಿದಳು. ಎಲ್ಲವು ವಿಭಿನ್ನವಾಗಿತ್ತು.  ತಾನು ಹಾಲು ಕುಡಿಯುವ ಹಸುವನ್ನು ಮೊದಲು ನೋಡಿದಳು. ಹಸುವಿಗೆ ಕೊಡುವ ಮೇವು-ಹಿಂಡಿಯನ್ನು ನೋಡಿದಳು. ಹಸುವಿಗೆ ಅವಳ ಅತ್ತೆ-ಮಾವ ಮಾಡುವ ಆರೈಕೆ ನೋಡಿದಳು. ತಾನು ಸುಪರ್ ಮಾರ್ಕೆಟ್ ನಿಂದ ತಂದು ತಿನ್ನುವ ಅಕ್ಕಿ ಬೆಳೆಯುವುದನ್ನು ನೋಡಿದಳು. ಅನ್ನದಾತನ ಬಗ್ಗೆ ಪುಸ್ತಕದಲ್ಲಿ ಓದಿದ್ದಳು. ಆದ್ರೆ ಆ ಬಿಸಿಲಿನಲ್ಲಿ ಗದ್ದೆಯಲ್ಲಿ ಕೆಲಸ ಮಾಡುವುದು ಮತ್ತು ನೀರು ಬಿಡುವುದು ನೋಡಿದಳು. ಹೊಲದಲ್ಲಿ ಊಟ ಮಾಡುವುದನ್ನು ನೋಡಿದಳು. ತಾನು ಒಮ್ಮೆ ಅವರ ಜೊತೆ ಕುಳಿತಳು. ಬಿಸಿ ಬಿಸಿ ಊಟದ ರುಚಿಗಿಂತ ತಂಗಳೆ ರುಚಿ ಅನಿಸಿತು.ಬೆಳೆದ ತರಕಾರಿಗೆ ತಾನು ನೀರು ಹಾಕಿದಳು. ಆಳುಗಳ ಜೊತೆ ತರಕಾರಿ ಕೊಯ್ದಳು. ಕೆಲಸ ಮಾಡುವಾಗ ದೃತಿಗೆ ಸುಸ್ತಾಯಿತು. ಆಲ್ಲೆ ಕೂತು ಸುಧಾರಿಸಿಕೊಂಡಳು. ಆಗ ಅಳುಗಳು ತರಕಾರಿ ಬುಟ್ಟಿ ತುಂಬುತ್ತಿರುವುದನ್ನು ನೋಡಿದಳು.  ಚನ್ನಾಗಿರುವ ತರಕಾರಿಯನ್ನು ಮಾರ್ಕೆಟ್ ಗೆ ಕಳುಹಿಸಿ ಸುಮಾರಾಗಿ ಇರುವುದನ್ನು ತಮ್ಮ ಮನೆಯ ಉಪಯೋಗಕ್ಕಾಗಿ ಬೇರೆ ಇಡುತ್ತಿದ್ದರು.  ಇದನ್ನು ನೋಡಿದ ದೃತಿಗೆ ಮನಸ್ಸಿನಲ್ಲಿ ಬೆಸರ ಆಯಿತು.  ಇವರು ಇಷ್ಟು ಕಷ್ಟ ಪಟ್ಟು ಬೆಳೆದುದನ್ನು ಹಾಳು ಮಾಡುವುದು ಸರಿಯಲ್ಲ ಅಂತ ತನ್ನಷ್ಟಕ್ಕೆ ಯೋಚಿಸಿದಳು.    ತಾನು ತಿನ್ನುವ ಅನ್ನದ ಹಿಂದೆ ಇಷ್ಟು ಜನರ ಪರಿಶ್ರಮ ಇರುವುದು ನೋಡಿ ಆಶ್ಚರ್ಯವಾಯಿತು. ತಾನು ತಿನ್ನದೆ ಹಾಳು ಮಾಡುವುದು ತಪ್ಪು ಎಂದು ಅವಳಿಗೆ ಮನವರಿಕೆಯಾಯಿತು. ಕಿವಿಯಲ್ಲಿ ಕೇಳಿದ್ದು ಅರ್ಥ ಆಗದೆ ಇದ್ದಾಗ ಕಣ್ಣು ಅರ್ಥ ಮಾಡಿಸಿತು.