Sunday, July 29, 2018

ಆರೋಗ್ಯದಾಯಕ ಕೆಸುವಿನ ಗಡ್ಡೆ.


ಆರೋಗ್ಯದಾಯಕ ಕೆಸುವಿನ ಗಡ್ಡೆ.

ನಮ್ಮ ದಿನದ  ಆಹಾರದಲ್ಲಿ  ಕೆಸುವಿನ ಗಡ್ಡೆಯ ಉಪಯೋಗ ಕಮ್ಮಿನೆ. ಆದರೆ ವಿರಳವಾಗಿ ಬಳಸುವ ಈ ಗಡ್ಡೆಯಲ್ಲಿ ಅತ್ಯಧಿಕ ಫೈಬರ್ ಅಂಶ ಹೊಂದಿದೆ. ಇದು ಜೀರ್ಣ ಕ್ರೀಯೆಗೆ ಅನುಕೂಲವಗುತ್ತದೆ. ಇದಲ್ಲದೆ ಇದರಲ್ಲಿ ಕೊಬ್ಬಿನಂಶ ಇರದ ಕಾರಣ ಮದುಮೇಹ ಮತ್ತು ತೀವ್ರ ರಕ್ತದೊತ್ತಡ ಇರುವವರಿಗೂ ಇದು ಒಳ್ಳೆಯ ಆಹಾರ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುವ ಕಾರಣ  ದೇಹ ತೂಕ ಕಡಿಮೆ ಮಾಡುವವರಿಗೂ ವರದಾನವೆ. ದೇಹಕ್ಕೆ ಬೇಕಾಗುವ ಎಲ್ಲ ರೀತಿಯ ವಿಟಾಮಿನ್, ಫೈಬರ್, ಫಾಲಿಕ್ ಆಸಿಡ್,ಕಬ್ಬಿಣಂಶ…ಇರುವ ಈ ಕೆಸುವಿನ ಗಡ್ಡೆಯನ್ನು ವಾರಕ್ಕೆ ಒಮ್ಮೆಯಾದರು ಉಪಯೋಗಿಸಿದರೆ ಒಳ್ಳೆಯದು.

ಕೆಸುವಿನ ಗಡ್ಡೆ ಗೊಜ್ಜು;

ಬೇಕಾಗುವ ಸಾಮಗ್ರಿಃ
ಕೆಸುವಿನ ಗಡ್ಡೆ 5 ರಿಂದ 6,  ಬ್ಯಾಡಗಿ ಮೆಣಸು 7 ರಿಂದ 8, ಎಣ್ಣೆ, ಕುತ್ತುಂಬರಿ ಬೀಜ 2 ಚಮಚ, ಕಡ್ಲೆ ಬೇಳೆ 2 ಚಮಚ, ಮೆಂತೆ 1 ಚಮಚ, ಜೀರಿಗೆ 1 ಚಮಚ,  ಸಾಸಿವೆ ½ ಚಮಚ, ಅರಿಶಿಣ ½  ಚಮಚ, ಇಂಗು, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನ ತುರಿ ಕಾಲ್ ಕಪ್, ಹುಣಸೆ ಹಣ್ಣು ಸುಮಾರು ನಿಂಬೆ ಗಾತ್ರ,  ಬೆಲ್ಲ ರುಚಿಗೆ ತಕ್ಕಷ್ಟು, ನೀರು, ಕರಿಬೇವು.
ತಯಾರಿಸುವ ವಿಧಾನಃ
ಮೊದಲು ಕೆಸುವಿನ ಗಡ್ಡೆಯನ್ನು  ಚನ್ನಾಗಿ  ತೊಳೆದು ಕುಕ್ಕರಿನಲ್ಲಿ ಎರಡು ವಿಸಲ್ ಕೂಗಿಸಿ. ಬೆಂದ ಕೆಸುವಿನ ಗಡ್ಡೆಯ ಸಿಪ್ಪೆ ತೆಗೆದು (ಆಲು ಗಡ್ಡೆ ತರಹ) ಒಂದರಲ್ಲಿ ಎರಡು ಭಾಗ ಗಳಾಗಿ ಮಾಡಿ.
ಮಸಾಲೆಗೆಃ
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ನಂತರ  ಎಣ್ಣೆಗೆ ಕಡ್ಲೆಬೇಳೆ, ಉದ್ದಿನ ಬೇಳೆ,ಮೆಂತೆ,ಜೀರಿಗೆ, ಸಾಸಿವೆ, ಮೆಣಸಿನಕಾಯಿ,ಎಲ್ಲ ಒಂದೊಂದೆ ಹಾಕಿ ಫ್ರೈ ಮಾಡ್ತಾ ಬನ್ನಿ. ಸ್ವಲ್ಪ ಫ್ರೈ ಆದ ಮೇಲೆ ಕರಿಬೇವು ಇದರ ಜೊತೆ ಫ್ರೈ ಆಗಲಿ.ಹೊಂಬಣ್ಣ ಬರುವ ವರೆಗೆ ಪ್ರೈ ಆಗಲಿ.ಈಗ ಕುತ್ತುಂಬರಿ ಬೀಜ ಕಾಕಿ. ಇದು ಸ್ವಲ್ಪ ಫ್ರೈ ಆಗಲಿ. ಈಗ ಮಿಕ್ಸಿಗೆ ಕಾಯಿತುರಿ ಹಾಕಿ ಮೇಲೆ ಪ್ರೈ ಮಾಡಿದ ಮಸಾಲೆ ಮಿಕ್ಸ್ ಮಾಡಿ. ಇದಕ್ಕೆ ನೀರು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿ. ಈಗ ಮಸಾಲ ರೆಡಿ.
ಇನ್ನೊಂದು ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಇದಕ್ಕೆ ಬಿಡಿಸಿಟ್ಟ ಕೆಸುವಿನ ಗಡ್ಡೆ ಹಾಕಿ ಪ್ರೈ ಮಾಡಿ. ಪ್ರೈ ಮಾಡುವಾಗಲೆ ಅರಿಶಿಣ ಮತ್ತು ಹುಣಸೆಹಣ್ಣು ಹಾಕಿ. ಕೆಸುವಿನ ಗಡ್ಡೆಯ ಲೊಳೆ ಅಂಶ ಹೋಗುವ ವರೆಗೆ ಪ್ರೈ ಆಗಲಿ. ಪ್ರೈ ಆದ ಮೇಲೆ ರುಬ್ಬಿದ ಮಸಾಲೆ ಹಾಕಿ. ನೀರು ಹಾಕಿ. ಇದು ಸ್ವಲ್ಪ ಗಟ್ಟಿಯಾಗೆ ಇರಲಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಹಾಕಿ.  ಚನ್ನಾಗಿ ಕುದಿಸಿ. ಕುದಿಯುವಾಗ ತಳ ಸೀದದ ಹಾಗೆ ಕೈ ಆಡಿಸುತ್ತಿರಿ. ಬೇಕಿದ್ದರೆ ಕೊನೆಯಲ್ಲಿ ಸಾಸಿವೆ ಇಂಗಿನ ಒಗ್ಗರಣೆ ಕೊಡಬಹುದು. ಇದು ಅನ್ನದ ಜೊತೆ ಚನ್ನಾಗಿ ಇರತ್ತೆ.

ಕೆಸುವಿನ ಗಡ್ಡೆಯ ಖಾರದ ಕಡ್ಡಿ:

ಬೇಕಾಗುವ ಸಾಮಗ್ರಿಃ
ಕೆಸುವಿನ ಗಡ್ಡೆ 10, ಅಕ್ಕಿ ಹಿಟ್ಟು 1 ಕಪ್, ಜೀರಿಗೆ ಪುಡಿ 1 ದೊಡ್ಡ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಇಂಗು ಸ್ವಲ್ಪ,ಅಚ್ ಖಾರದ ಪುಡಿ (ಖಾರಕ್ಕೆ ಅನುಸಾರವಾಗಿ), ಎಣ್ಣೆ ಕರಿಯಲು.
ತಯಾರಿಸುವ ವಿಧಾನಃ
ಮೊದಲು ಕೆಸುವಿನ ಗಡ್ಡೆಯನ್ನು ಚನ್ನಾಗಿ ತೊಳೆದು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಬೆಂದ ಕೆಸುವಿನ ಗಡ್ಡೆಯನ್ನು ಸಿಪ್ಪೆ ತೆಗೆದು ಚನ್ನಾಗಿ ನುರಿದುಕೊಳ್ಳಿ.(ಆಲುಗಡ್ಡೆ ತರಹ) ಈಗ ಇದಕ್ಕೆ ಜೀರಿಗೆ ಪುಡಿ, ಇಂಗು, ಅಚ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಇವೆಲ್ಲಾ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಈಗ ಅಕ್ಕಿ ಹಿಟ್ಟು ಮಿಕ್ಸ್ ಮಾಡುತ್ತಾ ಚನ್ನಾಗಿ ಕಲಸಿ. ಕೆಸುವಿನ ಗಡ್ಡೆಯಲ್ಲಿ ನೀರಿನ ಅಂಶ ಇರುವುದರಿಂದ ಮೇಲಿಂದ ನೀರು ಹಾಕುವುದು ಬೇಡ. ಎಷ್ಟು ಅಕ್ಕಿ ಹಿಟ್ಟು ಹಿಡಿಯುತ್ತದೆಯೋ ಅಷ್ಟು ಹಾಕಿ ಕಲಸಿ. ಇದು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಈಗ ಚಕ್ಕಲಿ ಒರಳಿಗೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ಇದರ ಒಳಗೆ ತುಂಬಿ ಕಾದ ಎಣ್ಣೆಯಲ್ಲಿ ಕರಿಯಿರಿ. ಸ್ವಲ್ಪ ಸಣ್ಣ ಉರಿಯಲ್ಲಿ ಕರಿಯಿರಿ. ಹೊಂಬಣ್ಣ ಬಂದ ಮೇಲೆ ತೆಗೆಯಿರಿ.  ಇದು ಸುಮಾರು ಹದಿನೈದು ದಿನ ಇಡಬಹುದು. ಸಂಜೆ ಟೀ, ಕಾಫಿ ಜೊತೆ ಚನ್ನಾಗಿ ಇರತ್ತೆ.

ಕೆಸುವಿನ ಗಡ್ಡೆ ಡ್ರೈ ಪಲ್ಯಃ

ಬೇಕಾಗುವ ಸಾಮಗ್ರಿಃ
ಕೆಸುವಿನ ಗಡ್ಡೆ 10, ಅಚ್ ಖಾರದ ಪುಡಿ 2  ಚಮಚ, ಜೀರಿಗೆ ಪುಡಿ ಮತ್ತು ದನಿಯಾ ಪುಡಿ 1 ಚಮಚ, ಇಂಗು ಸ್ವಲ್ಪ, ಹಳದಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಹುಟ್ಟು 2 ದೊಡ್ಡ ಚಮಚ, ಹುಳಿ ಪುಡಿ(ಆಮ್ ಚೂರ್ ಪುಡಿ) ಮೊಸರು, ಎಣ್ಣೆ
ತಯಾರಿಸುವ ವಿಧಾನಃ
ಮೊದಲಿಗೆ ಕೆಸುವಿನ ಗಡ್ಡೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಇದನ್ನು ಸ್ವಲ್ಪ ಗಟ್ಟಿಯಾಗೆ ಬೇಯಿಸಿಕೊಳ್ಳಿ. ಬೆಂದ ಕೆಸುವಿನ ಗಡ್ಡೆಯ ಸಿಪ್ಪೆ ತೆಗೆದು ಗೋಲಾಕಾರ ಸ್ಲೈಸ್ ಮಾಡಿ.
ಇನ್ನೊಂದು ಪಾತ್ರೆಯಲ್ಲಿ ಅಚ್ ಖಾರದ ಪುಡಿ, ಜೀರಿಗೆ ಮತ್ತು ದನಿಯಾ ಪುಡಿ, ಇಂಗಿ. ಉಪ್ಪು,ಹಳದಿ,ಹುಳಿಪುಡಿ, ಅಕ್ಕಿ ಹಿಟ್ಟು, ಎಲ್ಲಾ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಸ್ವಲ್ಪ ಮೊಸರು ಹಾಕಿ. ಬೈಂಡಿಂಗ್ ಗೆ ಅನುಕೂಲವಾಗುವಷ್ಟು. ಈಗ ಕಟ್ ಮಾಡಿಟ್ಟ ಕೆಸುವಿನ ಗಡ್ಡೆಯನ್ನು ಈ ಮಿಕ್ಸ್ ನಲ್ಲಿ ಉರುಳಿಸಿ . ಈಗ ಒಂದು ತವಾದಲ್ಲಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಎರಡು ಕಡೆ ಎಣ್ಣೆ ಹಾಕುತ್ತಾ ಬೇಯಿಸಿ. ಇದು ಮೊಸರನ್ನದ ಜೊತೆ ಸೈಡ್ ಡಿಶ್ ಆಗಿ ಚನ್ನಾಗಿ ಇರತ್ತೆ. ಬೇಕಿದ್ದರೆ ಚಪಾತಿ ಜೊತೆನು ತಿನ್ನಬಹುದು.

ಕೆಸುವಿನ ಗಡ್ಡೆ ಬೊಂಡಾಃ     
                
ಕೆಸುವಿನ ಗಡ್ಡೆ 10, ಈರುಳ್ಳಿ 2, ಹಸಿಮೆಣಸು, ಕರಿಬೇವು, ಕುತ್ತುಂಬರಿ ಸೊಪ್ಪು, ಇಂಗು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಕಡಲೆ ಹಿಟ್ಟು ½  ಕಪ್,  ಅಕ್ಕಿ ಹಿಟ್ಟು ½ ಕಪ್,  ಓಂ ಸ್ವಲ್ಪ, ಜೀರಿಗೆ ಪುಡಿ, ಅಚ್ ಖಾರದ ಪುಡಿ, ಕರಿಯಲು ಎಣ್ಣೆ,
ತಯಾರಿಸುವ ವಿಧಾನಃ
ಮೊದಲು ಕೆಸುವಿನ ಗಡ್ಡೆಯನ್ನು ಬೇಯಿಸಿಕೊಳ್ಳಿ. ಬೆಂದ ಕೆಸುವಿನ ಗಡ್ಡೆಯ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಈರುಳ್ಳಿ, ಹಸಿಮೆಣಸು, ಕರಿಬೇವು, ಕುತ್ತುಂಬರಿ ಸೊಪ್ಪು ಎಲ್ಲವನ್ನು ಹೆಚ್ಚಿಟ್ಟುಕೊಳ್ಳಿ.
ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಇದಕ್ಕೆ ಉದ್ದಿನ ಬೇಳೆ, ಸಾಸಿವೆ ಹಾಕಿ. ಸಾಸಿವೆ ಚಟ ಚಟ ಅಂದ ಮೇಲೆ ಇಂಗು ಹಸಿಮೆಣಸು, ಕರಿಬೇವು, ಕುತ್ತುಂಬರಿ ಸೊಪ್ಪು, ಹಾಕಿ ಫ್ರೈ ಮಾಡಿ. ಈಗ ಉಪ್ಪು ಮತ್ತು ಹುಳಿಪುಡಿಯನ್ನು ಮಿಕ್ಸ್ ಮಾಡಿ ಚನ್ನಾಗಿ ಪ್ರೈ ಆಗಲಿ. ಸ್ವಲ್ಪ ಎಣ್ಣೆ ಜಾಸ್ತಿ ಹಾಕಿ ಫ್ರೈ ಮಾಡಿ. ಕೆಸುವಿನ ಗಡ್ಡೆಯ ಲೊಳೆ ಅಂಶ ಹೋಗಲಿ. ಸ್ವಲ್ಪ ಆರಿದ ಮೇಲೆ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಇಟ್ಟುಕೊಳ್ಳಿ.
ಇನ್ನೊಂದು ಪಾತ್ರೆಗೆ ಅಕ್ಕಿಹಿಟ್ಟು, ಕಡಲೆಹಿಟ್ಟು, ಓಂ, ಜೀರಿಗೆ ಪುಡಿ,ಉಪ್ಪು ರುಚಿಗೆ ತಕ್ಕಷ್ಟು, ಖಾರದ ಪುಡಿ ರುಚಿಗೆ ಅನುಸಾರ, ಎಲ್ಲ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಈಗ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ರೆಡಿ ಮಾಡಿ. ಇದನ್ನು ಅರ್ಧ ಗಂಟೆ ಬಿಡಿ. ನಂತರ ಮೇಲೆ ಮಾಡಿಟ್ಟ ಉಂಡೆಗಳನ್ನು ಈ ಹಿಟ್ಟಿನಲ್ಲಿ ಅದ್ದು ಕಾದ ಎಣ್ಣೆಯಲ್ಲಿ ಕರಿಯಿರಿ. ಇದು ಹೊಂಬಣ್ಣ ಬಂದ ಮೇಲೆ ತೆಗೆಯಿರಿ. ಇದು ಸಂಜೆಯ ಟೀ, ಕಾಫಿ ಜೊತೆ ಚನ್ನಾಗಿ  ಇರತ್ತೆ.

Wednesday, July 11, 2018

ಎಮ್ಮ ಮನೆಯಂಗಳದಿ ಬೆಳೆದಂತ ಹೂವನ್ನು….


ಎಮ್ಮ ಮನೆಯಂಗಳದಿ ಬೆಳೆದಂತ ಹೂವನ್ನು….

ಕುಲವಧು ಕನ್ನಡ ಸಿನಿಮಾದಲ್ಲಿ ಬಂದಂತ  ಈ ಹಾಡು ಬಿ.ಸಿತಾರಾಮಯ್ಯನವರ ಅದ್ಬುತವಾದ ರಚನೆ. ಜಾನಕಿ ಅಮ್ಮನವರು ಅಷ್ಟೇ ಚನ್ನಾಗಿ ಹಾಡಿದ್ದಾರೆ. ಈ  ಹಾಡನ್ನು ಕೇಳಿದವರ ಕಣ್ಣಲ್ಲಿ ನೀರು ಬರದೆ ಹೋಗಲ್ಲ. ಇದರ ರಚನೆಯೇ ಹಾಗೆ. ಒಮ್ಮೆ ರವಿ ಬೆಳೆಗೆರೆಯವರು ಎಂದು ಮರೆಯದ ಹಾಡು ಪ್ರೋಗ್ರಾಮ್ ನಲ್ಲಿ ಹೇಳಿದ್ರು...”ಈ ಹಾಡ್ ಕೇಳಿ ಮದುವೆ ಮನೆಲಿ ಕಣ್ಣೀರ್ ಇಡ್ದೆ ಎದ್ದು ಹೋದ್ರು ಅಂದ್ರೆ ಅವ್ರು ವಾಲಗದವರು  ಆಗಿರಲ್ಲಾ…”  ಎಂದು. ಹೌದು ಅದು ಅಕ್ಷರಶ ನಿಜ. ಹೂವಂತೆ ಬೆಳೆದ ಮಗಳನ್ನು ಇನ್ನೊಬ್ಬರಿಗೆ ಕನ್ಯಾ ದಾನ ಮಾಡಿ ಕೊಡಬೇಕಿದ್ದರೆ ಆ ಅಪ್ಪ-ಅಮ್ಮನ ಮನಸ್ಥಿತಿ ಹೇಗಿರಬೇಡ.
ಈಗಿನ ಕಾಲದಲ್ಲಿ ಹೆಣ್ಣೋ ಗಂಡೋ ಎಲ್ಲಾ ಮಕ್ಕಳನ್ನು ಸಮನಾಗಿ ಬೆಳೆಸಿರುತ್ತಾರೆ. ಮಗನಿಗೆ ಕೊಡೊ ಸ್ವಾತಂತ್ರ ಮಗಳಿಗೂ ಕೊಟ್ಟಿರುತ್ತಾರೆ. ನಿಜ ಹೇಳಬೇಕೆಂದರೆ ಮಗನಿಗಿಂತ ಮಗಳನ್ನೇ ಈಗಿನ ಕಾಲದ ಅಪ್ಪ-ಅಮ್ಮ ಹೆಚ್ಚಾಗಿ ಹಚ್ಚಿಕೊಂಡಿರುತ್ತಾರೆ. ಮಗಳಲ್ಲಿ ಏನೋ ಒಂದು ತರ ಸಲುಗೆ ಪ್ರೀತಿ ಇದ್ದೆ ಇರತ್ತೆ. ಮದುವೆ ಯಾದರು ಮಗಳು ತಮ್ಮ ಮನೆಯ ಒಂದು ಭಾಗವೆ ಆಗಿರುತ್ತಳೆ. “ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ” ಗಾದೆ ಮಾತು ಇದೇಯೆ ಹೊರತು ಈಗ ಯಾವ ಅಪ್ಪ-ಅಮ್ಮನಲ್ಲು  ಈ ತರಹದ ಭಾವನೆ ಇಲ್ಲ. ತವರು ಮನೆಯಲ್ಲಿ ಅವಳ ಜಾಗ ಅವಳಿಗೆ ಇದ್ದೆ ಇರತ್ತೆ. ಮೊದಲಿನ ಕಾಲದ ಹಾಗೆ ಡಜನ್ ಹೆಣ್ಮಕ್ಕಳು ಈಗೀನವರಿಗೆ ಇಲ್ಲದೆ ಇರೋ ಕಾರಣಕ್ಕೆನೋ ಈ ಎಲ್ಲ ವ್ಯವಸ್ಥೆ ಈಗೀನ ಹೆಣ್ಣು ಮಕ್ಕಳಿಗೆ.
ಕಾಲೇಜ್, ಫ್ರೇಂಡ್ಸ್, ಹೀಗೆ ಹುಡುಗಾಟಿಕೆಯಲ್ಲಿ ಬೆಳೆದ ಹೆಣ್ಣಿಗೆ ಮದುವೆ ಆಗಿ ಬಂದ ಹೊಸ ಪರಿಸರಕ್ಕೆ ಮತ್ತು ಒಂದು ಜೀವನ ಶೈಲಿಯಿಂದ ಇನ್ನೊಂದು ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯವೆ ಹಿಡಿಯತ್ತದೆ. ಇದನ್ನು ಆಕೆಯ ಗಂಡನ ಮನೆಯವರು ಅರ್ಥ ಮಾಡಿಕೊಳ್ಳ ಬೇಕು. 

ಮದುವೆ ಆಗಿ ಬಂದ ಸೊಸೆ ತನ್ನ ಮಗನಿಗೆ ಮೊದಲು ಹೊಂದಿಕೊಳ್ಳಲಿ ಅನ್ನೊ ಭಾವನೆ ಬಿಟ್ಟು ತಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ಆಕೆಯ ಮೇಲೆ ಹೊರಿಸುವುದಲ್ಲ. ಇನ್ನು ಗಂಡ ಹೆಂಡತಿ ಇಬ್ಬರೆ ಇದ್ದರೆ ಆಯ್ತು ಮನೆ ತುಂಬಾ ಜನ ಇದ್ದು ತಲೆಗೆ ಒಂದೊಂದು ಮಾತಾಡುವರಾದರೆ ಆ ಹೆಣ್ಣು ಮಗಳ ಪರಿಸ್ಥಿತಿ ಏನಾಗ ಬೇಡ?

ಇನ್ನು ಅತ್ತೆಗೆ ತನಗೆ ಸಿಗದ ಸುಖ ಸಂತೋಷ ಇವಳಿಗೆ ಸಿಕ್ಕಿತೆಂಬ ಮನೋಭಾವನೆ ಬೆಳೆಸಿಕೊಳ್ಳೊದಲ್ಲ. ಆಗಿನ ಕಾಲಕ್ಕು ಈಗಿನ ಕಾಲಕ್ಕು ಜೀವನ ಪದ್ದತಿಯಲ್ಲಿ ವ್ಯತ್ಯಾಸ ಇರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆ ಹೊರತು, ತನ್ನ ಅತ್ತೆಯ ಮೇಲಿನ ಸಿಟ್ಟು, ಆಕೆ ಕೊಟ್ಟ ನೋವು ತನ್ನ  ಸೊಸೆಯ ಮೇಲೆ ತೋರಿಸಿ ರಿವೇನ್ಜ್ ತೀರಿಸಿಕೊಳ್ಳುವದಲ್ಲ.  ಇನ್ನು ಮಾವನಿಗೆ ಅವನದ್ದೆ ಆದ ನಿಲುವು. ಈಗಿನ ಕಾಲದ ಗಂಧ ಗಾಳಿ ತಿಳಿದೆ ತನ್ನದೆ ವಾದ ಮಾಡಿದರೆ ಯಾವ ಹೆಣ್ಣು ಮಗಳು ಸಹಿಸಿಕೊಳ್ಳುವದಿಲ್ಲ. ಈಗಿನ ಜನರೇಶನ್ಗೆ ಸ್ವಲ್ಪ ವಾದರು ಹೊಂದಿಕೊಳ್ಳಲೆ ಬೇಕು. ಇನ್ನು ಮೈದುನ-ನಾದಿನಿಯರು ಇದ್ದರೆ ಅಣ್ಣನ ಪ್ರೀತಿ ಸಲುಗೆ ಅತ್ತಿಗೆ ಕಿತ್ತು ಕೊಂಡಳು ಅನ್ನೋ ಭಾವನೆ. ಹೀಗಾದರೆ ಆ ಗಂಡನ ಪರಿಸ್ಥಿತಿ ಅಡಗತ್ತರಿಯಲ್ಲಿ ಸಿಕ್ಕ ಅಡಿಕೆ ಅಗುವುದು ಗ್ಯಾರಂಟಿ. ಈ ಸೂಕ್ಷವಾದ ವಿಚಾರವನ್ನು ಮೊದಲೆ ಅವರ ಅಪ್ಪ-ಅಮ್ಮ ಹೇಳಿರ ಬೇಕು.  ಇದೆಲ್ಲವು ಒಮ್ಮೆಲೆ  ಮದುವೆ ಆಗಿ ಹೋದ ಮಗಳಿಗೆ ಸಿಕ್ಕರೆ ಅಲ್ಲಿ ಅವಳ ಪರಿಸ್ಥಿತಿ ಏನಾಗ ಬೇಡ. ಡೆಲ್ಲಿ ಸಿಕ್ಸ್ ಎಂಬ ಹಿಂದಿ ಸಿನಿಮಾದಲ್ಲಿ ಒಂದು ಸಾಂಗ್ ಇದೆ…ಪಲ್ಲವಿಯ ಕೊನೆಯಲ್ಲಿ “ಸಸುರಾಲ್ ಗೇಂಡಾ ಫೂಲ್.” ಅಂತ ಬರುವುದು. ಈ ಸಾಲು ತುಂಬಾ ಅರ್ಥ ಗರ್ಭಿತವಾಗಿದೆ. ದೂರದಿಂದ ನೋಡಲು ಸುಂದರ…ಹತ್ತಿರ ಬಂದರೆ ಪರಿಮಳ ಇಲ್ಲದ ಕ್ರತಕ ಹೂ. ಇದು ಯಾವ ಹೆಣ್ಣಿನ ಜೀವನದಲ್ಲು  ಆಗ್ಬಾರದು.

ಇದು ನಾಣ್ಯದ ಒಂದು ಮುಖ. ಒಂದೇ ಕೋನದಿಂದ ನೋಡದೆ ಗಂಡನ ಮನೆಯವರ ದ್ರಷ್ಟಿಯಿಂದಲು ನೋಡಬೇಕು. ಮದುವೆ ಆಗಿ ಹೋದ ಮಗಳು ತನ್ನ ಅತ್ತೆ ಮನೆಯನ್ನು ತನ್ನ ತವರು ಮನೆಯವರಂತೆ ನೋಡಿಕೊಳ್ಳ ಬೇಕು. ಹೆಣ್ಣನ್ನು ಬಣ್ಣಿಸುವ  ಕೆಲವು ಗುಣಗಳು ಅವಳಲ್ಲಿ ಇನ್ನು ಇರಬೇಕು. ಈಗೀನ ಕಾಲದವರಾದರು ಎಷ್ಟೆ ಮೊಡ್ ಆದರು ಹೆಣ್ಣು ತನ್ನ ಕೆಲವು ಗುಣಗಳನ್ನು ಬಿಡಬಾರದು.  ಹೆಣ್ಣಿಗೆ ಪ್ರೀತಿ, ವಾತ್ಸಲ್ಯ, ಕಾಳಜಿಯಿಂದ ನೋಡಿಕೊಳ್ಳುವ ಗುಣ ದೈವದತ್ತವಾಗಿ ಬಂದಿರುವುದು. ಇದರಿಂದ  ತಾನು ತನ್ನದು ಮತ್ತು ತನ್ನ ತವರು ಮನೆಯೆ ತನ್ನದು  ಅನ್ನೊ ಭಾವನೆ  ಬಿಟ್ಟು ಎಲ್ಲರಲ್ಲು ಹೊಂದಿಕೊಡು ಹೋಗಬೇಕು.  ಒಂದೆ ಕೈ ಯಿಂದ ಚಪ್ಪಾಳೆ ಹೇಗೆ ಆಗುವುದಿಲ್ಲವೋ ಹಾಗೆ ಒಬ್ಬರಿಂದಲೇ ತಪ್ಪು ಆಗುವುದಿಲ್ಲ. ಇಬ್ಬರಲ್ಲು ಹೊಂದಿಕೊಂಡು ಹೋಗೋ ಗುಣ ಗಳಿದ್ದರೆ ಯಾವ ಸಮಸ್ಯೆಯು ಬರುವುದಿಲ್ಲ.  ಮತ್ತು ಸುಂದರ ಸಂಸಾರವಾಗಿರತ್ತೆ. ವ್ರದ್ದಾಶ್ರಮದ ಅವಶ್ಯಕತೆ ಮತ್ತು ಕೌಂಟುಂಬಿಕ ನ್ಯಾಯಲಯದ ಅವಶ್ಯಕಥೆ  ನಮ್ಮ ಸಮಾಜಕ್ಕೆ ಇರುವುದಿಲ್ಲ.

Tuesday, July 10, 2018

ಮಾತಿಗ್ ಮಾತ್ ಹೊಡಿಯೋ ಮಲ್ಲಜ್ಜಿ...


ಮಾತಿಗ್ ಮಾತ್ ಹೊಡಿಯೋ ಮಲ್ಲಜ್ಜಿ.

ಸುಶೀಲಾ ಳಿಗೆ ಮದುವೆ ಆಗಿ ಆರು ಏಳು ತಿಂಗಳಿಗೆ ಯಾಕೋ ಅತ್ತೆ ಮಲ್ಲಜ್ಜಿಯ ಬಾಯಿಗೆ ಬೆಸತ್ತು ಹೋದಳು. ಮಲ್ಲಜ್ಜಿ ಯ ಸ್ವಭಾವ ಊರಿಗೆ ತಿಳಿದ ವಿಷಯ. ಆದ್ರೆ ಸುಶೀಲಾಳಿಗೆ ಅವ್ಳ ಸಹಿಸಿಕೊಳ್ಳೋದು  ಉಗುಳೊಕು ಆಗ್ದೆ ನುಂಗೊಕು ಆಗ್ದೆ ಇರೋ ಬಿಸಿ ತುಪ್ಪ. ಸುಶೀಲಾಳಿಗೆ ಗಂಡ ರಾಮುನಿಂದ ಯಾವ ತಲೆ ನೋವು ಇಲ್ಲ. ತನ್ನ ಹೈನುಗಾರಿಕೆಯಿಂದ ಹೇಗೊ ಮನೆ ನಡೆಸಿಕೊಂಡು ಹೋಗ್ಬಹುದಾಗಿತ್ತು. ಅದು ಅಲ್ದೆ ಮಿಕ್ಕ್ ಹಾಲಿನಿಂದ ಮೊಸರು ಹೆಪ್ಪು ಹಾಕಿ ಬೆಣ್ಣೆ ಮಾರ್ತಾ ಇದ್ರು.
 ಸುಶೀಲಾಳ ತಲೆ ನೋವು ಈ ಮಲ್ಲಜ್ಜಿಯ ಬೆಣ್ಣೆ ವ್ಯಾಪಾರ. ಮಲ್ಲಜ್ಜಿಯೇ ಸ್ವಂತ ಮೊಸರು ಕಡಿದು ತಾನೆ ಬೆಣ್ಣೆ ತೆಗೆದು ಬೆಣ್ಣೆ ಮಾರ್ತಾ ಇದ್ಲು. ತಾನು ಬೆಣ್ಣೆ ಕೊಡೊ ಖಾಯಂ ಮನೆಗೆ ಹೋಗಿ ಅವರ ಕಷ್ಟ ಸುಖ ಮತಾಡಿಕೊಂಡು ಬರ್ತಾ ಇದ್ಲು. ಇದು ಇಷ್ಟಕ್ಕೆ ಮುಗಿಯಲಿಲ್ಲ. ಮಲ್ಲಜ್ಜಿ ಬೇರೆ ಮನೆಯ ಕಷ್ಟ-ಸುಖ ವಿಚಾರಿಸುವುದರ ಜೊತೆ ತನ್ನ ಸೊಸೆಯ ಇಲ್ಲ ಸಲ್ಲದ ಗುಣಗಾನ ಮಾಡೋಕೆ ಶುರು ಮಾಡಿದ್ಲು. ಇದರ ಜೊತೆಗೆ ಬೆಣ್ಣೆ ಮಾರಿದ ಬಿಡಿ ಕಾಸು ಸುಶೀಲಾಳ ಕೈ ಗಾಗಲಿ ರಾಮುವಿನ ಕೈ ಗಾಗಲಿ ಸೇರ್ತಾ ಇಲ್ವಾಗಿತ್ತು.  ಒಮ್ಮೆ ಸುಶೀಲಾ ಅತ್ತೆ ಬಳಿ ಕೇಳಿದ್ಲು, “ ನಾನು ಮನೆ ಮನೆಗೆ ಹೋಗಿ ಬೆಣ್ಣೆ ಮಾರಿ ಬರ್ತೀನಿ. ನೀವು ಈ ವಯಸ್ಸಿನಲ್ಲಿ ಯಾಕೆ ಮನೆ ಮನೆ ಅಲಿತೀರ ಅಂತ”.  ಸೊಸೆ ಹೇಳಿದ ಈ ಮಾತಿಗೆ  ಕಾಗೆ ಬಾಯಲ್ಲಿ ಕೊಕ್ಕೆ ಹಾಕಿದ ಹಾಗೆ ಮಲ್ಲಜ್ಜಿ ಸೊಸೆಗೆ ಸಹಸ್ರ ನಾಮ ಶುರು ಮಾಡೆ ಬಿಟ್ಲು. “ನನಗೆ ವಯಸ್ಸಾಯಿತು ಅಂತ ಮೂಲೆಲಿ ಕುರಿಸಿ ನೀನು ಯಜಮಾನಿಕೆ ಮಾಡೊ ಹುನ್ನಾರಾ..ಇದೆಲ್ಲಾ ನನ್ನ ಹತ್ತಿರ ಬೇಡ ನನ್ನ ಕೈ ಕಾಲು ಗಟ್ಟಿ ಇರೋ ತನಕ ನಾನೇ ಮನೆ ಮನೆ ತಿರುಗಿ ಬೆಣ್ಣೆ ಮಾರುವವಳು “ ಅಂತ ಕಡ್ಡಿ ಮುರಿದ ಹಾಗೆ ಹೇಳಿದ್ದಳು. ಅದೇ ಕೊನೆ ಮಲ್ಲಜ್ಜಿಯ ಬಾಯಿಗೆ ಹೆದರಿ ಸುಶೀಲಾ ಅತ್ತೆಯ ಹತ್ತಿರ ಈ ವಿಚಾರ ಮಾತಾಡಿದ್ದೆ ಇಲ್ಲ.
ಒಮ್ಮೆ ಸುಶೀಲಾ ಜಾಣ್ಮೆಯಿಂದ ಗಂಡನ ಬಳಿ ತಾನು ಬೆಣ್ಣೆ ವ್ಯಾಪಾರಕ್ಕೆ ಹೋಗೊ ರಾಗ ಎಳೆದಳು. ತಾಯಿ ಗುಣ ತಿಳಿದಿರೋ ಮಗ ಅಷ್ಟೇ ಜಾಣ್ಮೆಯಿಂದ ತನಗೂ ಇದಿಕ್ಕು ಸಂಭಂದವೆ ಇಲ್ಲ ಅನ್ನೋ ರೀತಿ ನುಳುಚಿಕೊಂಡ. ಅತ್ತೆ ಸೊಸೆಯ ಮದ್ಯ ಬಂದರೆ ಆಗೋ ಅನಾಹುತ ಮೊದ್ಲೇ ಉಹಿಸಿದ್ದ. ಸುಶೀಲಾ ಯಾವ ದಾರಿನು ಕಾಣದೆ ಒಮ್ಮೆ ಮಾರಿ ಅಮ್ಮನ ಗುಡಿಯ ಒಳಗೆ ಸಪ್ಪಗೆ ಕುಳಿತಿದ್ದಳು. ಅದೇ ಸಮಯಕ್ಕೆ ಅದೇ ಊರಿನ ಗಂಗಜ್ಜಿ ಬಂದ್ಲು. ಸುಶೀಲಾಳ ಸಪ್ಪೆ ಮುಖ ನೋಡಿ ಅವಳ ಬಳಿ ಬಂದು ಪ್ರೀತಿಯಿಂದ…”ಯಾಕೆ ಸುಶೀಲಾ ಊಟದ್ ಸಮ್ಯ ಆಯ್ತು..ಮನೆಗೆ ಹೋಗ್ದೆ ಇಲ್ಲಿ ಯಾಕ್ ಕುತಿದೀಯಾ”  ಅಂತ ವಿಚಾರಿಸಿದ್ಲು. ಸುಶೀಲಾ ಗಂಗಜ್ಜಿಯ ಹತ್ತಿರ ಏನೋ ಹಾರಿಕೆ ಉತ್ತರ ಕೊಟ್ಲು. ಅತ್ತೆ ಗಂಗಜ್ಜಿ ಮನೆಗೆ ಬೆಣ್ಣೆ ಮಾರುವುದು ಸುಶೀಲಾಳಿಗೆ ತಿಳಿದ ವಿಚಾರವೇ. ಏನಾದ್ರು ಅತ್ತೆ ಕಿವಿಗೆ ಬಿದ್ದರೆ ತನ್ನ ಕಥೆ ಅಷ್ಟೇ ಅನ್ನೋ ಒಳ-ಒಳಗೆ ಭಯ ಇತ್ತು. ಆದ್ರು ಗಂಗಜ್ಜಿಗೂ ಮಲ್ಲಜ್ಜಿಯ ಸ್ವಭಾವ ತಿಳಿದ ಕಾರಣ ಸುಶೀಲಾಲ ಹತ್ತಿರ ನಯವಾಗಿ ಮಾತಾಡಿ ಇದ್ದ ವಿಷಯ ತಿಳಿದುಕೊಂಡಳು. ಗಂಗಜ್ಜಿ ಸುಶೀಲಾಳಿಗೆ ಸಮಾಧಾನ ಮಾಡ್ತಾ “ ನೋಡು ಸುಶೀಲಾ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯ ಬೇಕು. ಇದು ಹಾಗೆ. ಮಲ್ಲಜ್ಜಿ ನಮಗೆ ಮೊದ್ಲಿನಿಂದನು ಪರಿಚಯ. ಆಕೆಯ ಬಾಯಿಗೆ ಹೆದರಿ ಅವಳ ಗಂಡನು ಅವಳ ಹತ್ತಿರ ಯಜಮಾನಿಕೆ ಕೇಳಿದೋನಲ್ಲ. ಇನ್ನು ನಿನಗೆ ಬೆಣ್ಣೆ ವ್ಯಾಕಾರಕ್ಕೆ ಬಿಟ್ಟಾಳೆ. ಇದಕ್ಕೆ ನಾನು ಒಂದು ಉಪಾಯ ಮಾಡ್ತೀನಿ. ನೀನು ಇನ್ನು ಸ್ವಲ್ಪ ದಿನ ಕಾಯಿ. ನೋಡ್ತಾ ಇರು. ನಿನ್ನ ಸಮಸ್ಯೇ ಹೇಗೆ ಬಗೆ ಹರಿಯತ್ತೆ ಅಂತ”. ಇಷ್ಟು ಹೇಳಿದ್ದೆ ಹೇಳಿದ್ದು ಸುಶೀಲಾಳಿಗೆ ಏನೋ ಒಂದು ದಾರಿ ಕಾಣಿಸಿದ ಹಾಗೆ ಆಗಿ, “ನೋಡಿ ಗಂಗಜ್ಜಿ ನೀವು  ನನ್ಗೆ ಇದ್ವೊಂದು ಉಪಹಾರ ಮಾಡಿದ್ರೆ ನಾನು ನಿಮ್ಮನ್ನಾ ನನ್ನ ಉಸಿರು ಇರೋ ತನಕ ನೆನ್ಪಲ್ಲಿ ಇಟ್ಟುಗೊಳ್ತೀನಿ. ದಯವಿಟ್ಟು ಹೇಗಾದ್ರು ಮಾಡಿ ಅತ್ತೆ ಮನೆಲೇ ಇದ್ದು ಬೆಣ್ಣೆ ವ್ಯಾಪಾರ ನನ್ಗೆ ಕೊಡೋ ತರ ಮಾಡಿ”  ಅಂತ ಬೇಡಿಕೊಳ್ತಾಳೆ. ಗಂಗಜ್ಜಿ ಗೆ ಇವಳ ಸಂಕಟ ಅರ್ಥವಾಗಿ “ ಹೇಳಿದ್ನಲ್ಲಾ ಇನ್ನು ಸ್ವಲ್ಪ ದಿನ ತಾಳ್ಮೆಯಿಂದ ಕಾಯಿ ಅಂತ .ನೀನು ಈಗ ಮನೆಗೆ ಹೋಗಿ ಊಟ ಮಾಡು. ಹೀಗೆ ಹೊತ್ತು ಗೊತ್ತು ಇಲ್ಲದೆ ಯೋಚ್ನೆ ಮಾಡ್ತಾ ನಿನ್ನ ಆರೋಗ್ಯ ಹಾಳು ಮಾಡ್ಕೊಳ್ ಬೇಡ” ಅಂತ ಸುಶೀಲಾಳನ್ನು ಸಮಾಧಾನ ಮಾಡಿ  ಮನೆಗೆ ಕಳಿಸುತ್ತಾಳೆ. ಏನೋ ನೆಮ್ಮದಿಯಿಂದ ಸುಶೀಲಾ ಮನೆಗೆ ಬರ್ತಾಳೆ. ಇವಳು ಮನೆಲಿ ಇಲ್ಲದಿರುವದನ್ನು ನೋಡಿ ಕೆಂಡ ಕಾರ್ತಾ  ಮನೆಗೆ ಬರೋದೆ ಕಾಯ್ತಾ ಇರೋ ಮಲ್ಲಜ್ಜಿ ತನ್ನ ಮಾತಿನ ಚಟಾಕಿ ಶುರು ಮಾಡೆ ಬಿಡ್ತಾಳೆ. ಸೊಸೆನಾ ಕೆಂಗಣ್ಣಲ್ಲಿ ನೋಡ್ತಾ…” ಕಾಲಿಗೆ ನಾಯಿ ಗೆರೆ ಇದ್ರೆ ಹೀಗೆ ಊರ್ ಸುತ್ತುತ್ತಾ ಇರ್ಬೇಕು ಅನ್ನ್ಸೋದು. ಇಲ್ಲಿ ನಾನು ಮನೆಲಿ ಒಂದು ತುತ್ತು ಅನ್ನಾ ಇಲ್ದೆ ಸಾಯ್ತಾ ಇದ್ದೀನಿ ನೀನ್ ಎಲ್ಲಿ ಊರ್ ಸುತ್ತೋಕೆ ಹೋಗಿದ್ಯೆ. ನನ್ಗೆ ಒಂದ್ ತುತ್ತು ಬೇಯಿಸಿ ಹಾಕೋಕ್ ಆಗಲ್ವೇನೆ…” ಹೀಗೆ ಕೂಗ್ತಾ ತಟ್ಟೆಲಿ ಸುಶೀಲಾಳೆ ಮಾಡಿಟ್ಟ ಅನ್ನ ಹುಳಿಯನ್ನು ಬಡಿಸಿಕೊಳ್ಳುವಾಗ ಸುಶೀಲಾಳ ಪಿತ್ತ ನೆತ್ತಿಗೆ ಏರಿತ್ತು. ಆದ್ರು ಏನು ಮಾತಾಡದೇ ತನ್ನ ಪಾಡಿಗೆ ತನ್ನ ಕೆಲಸಕ್ಕೆ ಹೋದಳು. ಅವಳಿಗೆ ತಿಳಿದಿತ್ತು..ಕೊಚ್ಚೆಗೆ ಕಲ್ಲು ಎಸೆದರೆ ತನ್ನ ಮುಖಕ್ಕೆ ಸಿಡಿಯುವುದು ಎಂದು.
ಪ್ರತಿ ದಿನದ ತರ ಗಂಗಜ್ಜಿ ಮನೆಗೆ ಬೆಣ್ಣೆ ಮಾರಲು ಹೋದ ಮಲ್ಲಜ್ಜಿ ತನ್ನ ಕಷ್ಟ ಹೇಳಿಕೊಂಡಳು. ಅವಳ ಸೊಸೆಯ ಬಗ್ಗೆ ತಿಳಿದ ಗಂಗಜ್ಜಿ ಉಪಾಯವಾಗಿ ಮಾತ್ ಶುರು ಮಾಡಿದಳು. ”ನೋಡೆ ಮಲ್ಲು ನಾನು ಮನೆಲಿ ಹಾಯಾಗಿ ಕುಳಿತಿರ್ತೀನಿ. ನನ್ಗೆ ಯಾಕೆ ಈ ವ್ಯಾಪಾರ  ವ್ಯವಹಾರ ಎಲ್ಲಾ. ಮಗ-ಸೊಸೆ ನೋಡಿಕೊಳ್ಳುವಾಗ ನಾನು ಇವರು  ತಂದಿರೋದನ್ನಾ ತನ್ನ ಕೈಲಾದಷ್ಟು ಬೇಯಿಸಿ ಹಾಕ್ತಿನಿ. ಸುಮ್ನೆ ಯಾಕ್ ಈ ವಯಸ್ಸಿನಲ್ಲಿ ನಾವು ಕಷ್ಟ ಪಡೋದು. ನಮ್ಮ ಮಕ್ಕಳಿಗೂ ಕೆಲಸ ತಿಳಿದಿರಲಿ. ನಮ್ಗೆ ಯಾಕ್ ಈ ವಯಸ್ಸಿನಲ್ಲಿ ಈ ಎಲ್ಲಾ ರಾಮಾಯಣ “. ಅಂತ ಗಂಗಜ್ಜಿ ಮಲ್ಲಜ್ಜಿ  ಹತ್ತಿರ ದಿನ ಹೇಳ್ತಾ ಇದ್ಲು. ದಿನ ಹೇಳಿದ್ದೆ ಹೇಳ್ತಾ ಹೋದ್ರೆ ಒಂದಲ್ಲಾ ಒಂದು ದಿನ ಅವಳಿಗೆ ಅರ್ಥ ಆಗ್ಬಹುದು ಅನ್ನೊ ಗಂಗಜ್ಜಿಯ ನಂಬಿಕೆ. ಏನೇ  ಆದ್ರು ಜಗ್ಗದ ಮಲ್ಲಜ್ಜಿ. “ಇದೆಲ್ಲಾ ನಿನ್ಗೆ ಕಣೇ ಗಂಗು ನಾನ್ ಬದುಕಿರೋ ತನಕ ನನ್ನ ವ್ಯಾಪಾರ ಬಿಟ್ಗೊಡಲ್ಲ”. ಅಂತ ಮಲ್ಲಜ್ಜಿ ತನ್ನ ನಿರ್ಧಾರ ಹೇಳೆ ಬಿಟ್ಲು. ಗಂಗಜ್ಜಿ ಗೆ ಇವಳು ಇಷ್ಟು ಸಲೀಸಾಗಿ ಬಗ್ಗೊಳಲ್ಲ ಅಂತ ತಿಳಿದ ವಿಚಾರನೆ. ಆದರು ಸುಶೀಲೆಗೆ ಕೊಟ್ಟ ಮಾತು ಉಳಿಸಿಕೊಳ್ಳಲು  ಗಂಗಜ್ಜಿ ಇನ್ನೊಂದು ದಿನ ನಯವಾಗಿ ಮಲ್ಲಜ್ಜಿಯ  ತಲೆಗೆ ಹುಳ ಬಿಟ್ಟೆ ಬಿಟ್ಲು. “ ಏನ್ ಮಲ್ಲು..ನೀನು ಈ ಬಿಸಿಲಲ್ಲಿ  ಮನೆ ಮನೆ ತಿರುಗಿ ಬೆಣ್ಣೆ ಮಾರ್ತಾ ಇದ್ದೀಯ…ಅಲ್ಲಿ ನಿನ್ನ ಸೊಸೆ ಅರಾಂ ಆಗಿ ಮನೆಲಿ ಕುತಿರ್ತಾಳೆ. ಅದು ಅಲ್ದೆ ನೀನು ಈ ಕಡೆ ಬಂದಾಗ ಅವ್ಳು ರುಚಿ ರುಚಿ ಮಾಡ್ಕೊಂಡು ತಿಂದ್ರೆ…? ನಿನ್ಗೆ ಯಾಕ್ ಈ ಬಿಸ್ಲಲ್ಲಿ ಅಲೆಯೋ  ಕರ್ಮನೆ. ಸೊಸೆಗೆ ಕೆಲಸ ಕೊಡೋದ್ ಬಿಟ್ಟು ನೀನ್ ಯಾಕ್ ಕಷ್ಟ ಪಡ್ತಾ ಇದ್ದೀಯಾ..? ನಾನಂತು ಏಲೆ ಮಾರೋದಕ್ಕೆ ನನ್ನ ಸೊಸೆನೆ ಕಳಿಸೋದು. ನಾನು ತಂಪಾಗಿ ಮನೆಲೆ ಇದ್ದು ಬಿಡ್ತೀನಿ”. ಅಂತ ಗಂಗಜ್ಜಿ ಮಲ್ಲಜ್ಜಿಗೆ ತಾಗೋ ತರ ಹೇಳಿದಳು. ಮಲ್ಲಜ್ಜಿಗೆ ಸೊಸೆ ತಂಪಾಗಿ ಮನೆಲಿ ಇರೋದನ್ನೇ ಕಲ್ಪನೆ ಮಾಡ್ತಾ  ಸೀದಾ ಮನೆಗೆ ಬಂದ ಮಲ್ಲಜ್ಜಿಗೆ ಕಾಗೆ ಕೂರೊದಕ್ಕೂ ಹೆಣೆ ಮುರಿಯೊದಕ್ಕು ಸರಿ ಆದಂತೆ  ಮನೆಲಿ ಸೊಸೆ ಗಂಡನ ಜೊತೆ ಹರಟೆ ಹೊಡಿತಾ ಚಹಾ ಕುಡಿತಾ ಕುಳಿತಿದ್ದದ್ದು ನೋಡಿ ಪಿತ್ತ ಮತ್ತು ಕೆಣಕಿದ ಹಾಗೆ ಆಯ್ತು. ಬೆಣ್ಣೆ ಮಡಿಕೆಯನ್ನು ಅವಳ ಕೈ ನಲ್ಲಿ ಕೊಡ್ತಾ…”ನೋಡೆ ನೀನು ಮನೆಲಿ ಹಾಯಾಗಿ ಗಂಡನ ಜೊತೆ ಹರಟೆ ಹೊಡಿಯೋದ್ ಬೇಕಾಗಿಲ್ಲ. ನನ್ನ ತರನೇ ಮನೆ ಮನೆಗೆ ಅಲೆದು ಬೆಣ್ಣೆ ವ್ಯಾಪಾರ ಮಾಡು. ನಿನ್ಗು ನನ್ನ ಕಷ್ಟ ಏನು ಅಂತ ತಿಳಿಯತ್ತೆ. ನಾಳೆಯಿಂದ ಈ ಬೆಣ್ಣೆ ವ್ಯಾಪಾರ ಮತ್ತು ಈ ವ್ಯವಹಾರ ಎಲ್ಲಾ ನಿನ್ನದೆ. ನಾನು ಹಾಯಾಗಿ ಮನೆಲಿ ಅಡಿಗೆ ಮಾಡಿಕೊಂಡಿ ಇರ್ತೀನಿ”  ಅಂತ ಒಂದೇ ಉಸುರಿಗೆ ಹೇಳಿದಳು. ರಾಮುನಿಗೆ ತನ್ನ ತಾಯಿ ಬೆಣ್ಣೆ ವ್ಯಾಪಾರ ಸೊಸೆಗೆ ವಹಿಸಿದ್ದು ನೋಡಿ ಪರಮಾಶ್ಚರ್ಯ ವಾದರು ಸುಶೀಲೆಗೆ  ಗಂಗಜ್ಜಿ ಬಿಟ್ಟ ಬಾಣ ಏನು ಅನ್ನೊದು ಅರ್ಥವಾಯಿತು. ಮನಸ್ಸಿನಲ್ಲೆ ಒಮ್ಮೆ ನಕ್ಕು ಮಲ್ಲಜ್ಜಿಗೆ ನಯವಾಗಿ..” ನೀವು ಹೇಗೆ ಹೇಳ್ತಿರೊ ಹಾಗೆ ಆಗಲಿ”  ಅಂತ ತನ್ನ ನಿರ್ಧಾರ ಹೇಳಿದಳು.






Friday, July 6, 2018

ಮಳೆಗಾಲಕ್ಕಾಗಿ ಕಳಲೆ ಖಾದ್ಯಗಳು.


ಮಳೆಗಾಲಕ್ಕಾಗಿ ಕಳಲೆ ಖಾದ್ಯಗಳು…
ಕಳಲೆ ( ಎಳೆ ಬಿದಿರು) ಮಲೆನಾಡಿನ ಜನರಿಗೆ ಚಿರ ಪರಿಚಿತ. ಇದು ಹೆಚ್ಚಾಗಿ ಮಲೆನಾಡಿನ ಜನ ಉಪಯೋಗಿಸುತ್ತಾರೆ. ಮಳೆಗಾಲದ ಸಮಯದಲ್ಲಿ ಸಿಗುವ ಈ ಕಳಲೆಯನ್ನು ತಿಂದರೆ ಆರೋಗ್ಯಕ್ಕು ತುಂಬಾ ಒಳ್ಳೆಯದು. ಕಳಲೆ ವೇಟ್ ಲಾಸ್ ಗೆ ತುಂಬಾ ಸಹಾಯ ಮಾಡತ್ತೆ.  ಕೊಲೆಸ್ಟೋಲ್ ಲೆವಲ್ ಬ್ಯಾಲೆನ್ಸ್ ಮಾಡತ್ತೆ. ಇದರಲ್ಲಿ ಹೇರಳವಾಗಿ ಪ್ರೋಟಿನ್, ವಿಟಾಮಿನ್, ಮಿನಿರಲ್ಸ ಗಳಿವೆ. ವರ್ಷ ಕ್ಕೆ ಒಂದು ಬಾರಿ ಸಿಗುವ ಕಳಲೆಯನ್ನು ಉಪಯೋಗಿಸಿದರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು.
ಕಳಲೆ ಯನ್ನು ಎಲ್ಲಾ ತರಕಾರಿ ತರ ಮನೆಗೆ ತಂದು ನೇರವಾಗಿ ಉಪಯೋಗಿಸಲು ಆಗುವುದಿಲ್ಲ. ಕಳಲೆಯನ್ನು ಕಟ್ ಮಾಡಿ  ಮೂರು ಅಥವಾ ನಾಲ್ಕು ದಿನ ನೀರಲ್ಲಿ ನೆನೆಸಿಡಿ. ಅಲ್ಲದೆ ಪ್ರತಿ ದಿನ ಈ ನೀರನ್ನು ಬದಲಾಯಿಸ ಬೇಕು. ಇದು ಬಹು ಮುಖ್ಯ. ಕಳಲೆಯನ್ನು ಸಂಸ್ಕರಿಸದೆ ಉಪಯೋಗಿಸ ಬಾರದು.
ಕಳಲೆ ಹುಳಿ/ಸಂಬಾರ್;
ಬೇಕಾಗುವ ಸಾಮಗ್ರಿಗಳುಃ
ಸಂಸ್ಕರಿಸಿದ ಕಳಲೆ  (ರೌನ್ಡ್ ಆಗಿ ಕಟ್ ಮಾಡಿದರೆ ಚನ್ನಾಗಿ ಇರತ್ತೆ.) ತೊಗರಿ ಬೇಳೆ ಅರ್ಧ ಕಪ್, ತೆಂಗಿನ ತುರಿ ಕಾಲು ಕಪ್, ಸಾಸಿವೆ ಅರ್ಧ ಚಮಚ, ಜೀರಿಗೆ ಅರ್ಧ ಚಮಚ, ಮೆಂತೆ ಕಾಲು ಚಮಚ, ಉದ್ದಿನ ಬೇಳೆ ಅರ್ಧ ಚಮಚ, ಕುತ್ತುಂಬರಿ ಬೀಜ ಅರ್ಧ ಚಮಚ,ಎಳ್ಳು ಅರ್ಧ ಚಮಚ, ಬ್ಯಾಡಗಿ ಮೆಣಸು 5 ರಿಂದ  6,  ಕರಿಬೇವಿನ ಸೊಪ್ಪು  8 ರಿಂದ 10 ಎಸಳು, ಹುಣಸೆ ಹಣ್ಣು ಸ್ವಲ್ಪ,  ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಸ್ವಲ್ಪ ಬೆಲ್ಲ, ಅರಿಶಿಣ, ಎಣ್ಣೆ.
ಮಾಡುವ ವಿಧಾನಃ
ಮೊದಲು ಕುಕ್ಕರಿನಲ್ಲಿ ತೊಗರಿ ಬೇಳೆ ಮತ್ತು ಕಳಲೆ ಯನ್ನು ಬೇರೆ-ಬೇರೆಯಾಗಿ ಬೇಯಿಸಿಟ್ಟುಕೊಳ್ಳಿ.  ಅದು ಬೇಯವಷ್ಟರಲ್ಲಿ ರುಬ್ಬಲು ಮಸಾಲಾ ರೆಡಿ ಮಾಡಿಕೊಳ್ಳಿ.  ಸ್ವಲ್ಪ ಎಣ್ಣೆಗೆ ಬ್ಯಾಡಗಿ ಮೆಣಸು, ಮೇಲೆ ಹೇಳಿದ ಮಸಾಲೆ ಪದಾರ್ಥ ಗಳು ಇಂಗು, ಜೀರಿಗೆ, ಕುತ್ತುಂಬರಿ,ಮೆಂತೆ, ಉದ್ದಿನ ಬೇಳೆ, ಎಳ್ಳು, ಸಾಸಿವೆ ಸ್ವಲ್ಪ ಪ್ರೈ ಮಾಡಿ. (ಬೇರೆ ಸಂಬಾರ್  ಗೆ ಮಾಡಿದ ತರನೆ) ತೆಂಗಿನ ತುರಿಗೆ ಸ್ವಲ್ಪ ಅರಿಶಿಣ. ಹುಣಸೆ ಹಣ್ಣು, ಮೇಲೆ ಹುರಿದಿಟ್ಟ ಪದಾರ್ಥ ಗಳನ್ನು ಮಿಕ್ಸಿಗೆ ಹಾಕಿ  ಸ್ವಲ್ಪ ನೀರು ಹಾಕಿ ಮಿಕ್ಸಿನಲ್ಲಿ ರುಬ್ಬಿ.
ಈಗ ಬೇಯಿಸಿಟ್ಟುಕೊಂಡ ಕಳಲೆ ಮತ್ತು ತೋಗರಿಬೇಳೆ ಯನ್ನು ಒಂದು ಪಾತ್ರೆಗೆ ಮಿಕ್ಸ್ ಮಾಡಿ. ಇದಕ್ಕೆ ಮಿಕ್ಸಿನಲ್ಲಿ ರುಬ್ಬಿಟ್ಟುಕೊಂಡ ಪದಾರ್ಥ ಗಳನ್ನು ಹಾಕಿ. ಈಗ ಎಲ್ಲಾ ಸೇರಿಸಿ ಕುದಿಯಲು ಬಿಡಿ. ಕುದಿಯುವಾಗ ರುಚಿಗೆ ತಕ್ಕಷ್ಟು ಉಪ್ಪು , ಸ್ವಲ್ಪ ಬೆಲ್ಲ, ಕರಿಬೇವು ಹಾಕಿ. ಚನ್ನಾಗಿ ಕುದಿ ಬಂದ ಮೇಲೆ ಸ್ಟೋವ್ ಆರಿಸಿ.  ಇದು ಅನ್ನದ ಜೊತೆ ಚನ್ನಾಗಿರತ್ತೆ. ಸಂಬಾರಿನಲ್ಲಿ ಬೆಂದ ಕಳಲೆ ಹೋಳು  ತಿನ್ನಲು ರುಚಿ.

ಕಳಲೆ ಹಶಿ/ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿಗಳುಃ
ಸಂಸ್ಕರಿಸಿದ ಕಳಲೆ ಅರ್ಧ ಕಪ್.(ಚಿಕ್ಕದಾಗಿ ಹೆಚ್ಚಿದರೆ ಚನ್ನಾಗಿರತ್ತೆ), ಈರುಳ್ಳಿ ಕಾಲು ಕಪ್, ಹಸಿಮೆಣಸು ಎರಡು, ಕರಿಬೇವು ನಾಲ್ಕು ರಿಂದ ಐದು, ಒಗ್ಗರಣೆಗೆ  ಎಣ್ಣೆ, ಉದ್ದಿನ ಬೇಳೆ, ಸಾಸಿವೆ,ಇಂಗು, ಮೊಸರು.
ಮಾಡುವ ವಿಧಾನಃ
ಒಂದು ಬಾಣೆಲೆಗೆ  ಎಣ್ಣೆ ಹಾಕಿ. ಇದಕ್ಕೆ ಕಟ್ ಮಾಡಿದ ಹಸಿ ಮೆಣಸು ಹಾಕಿ. ಇದು ಪ್ರೈ ಆಗ್ತಾ ಇದ್ದಂತೆ ಇಂಗು ಉದ್ದಿನ ಬೇಳೆ, ಸಾಸಿವೆ ಹಾಕಿ. ನಂತರ  ಹೆಚ್ಚಿದ ಈರುಳ್ಳಿ ಹಾಕಿ ಪ್ರೈ ಮಾಡಿ. ಇದು ಹೊಂಬಣ್ಣ ಬಂದ ನಂತರ ಹೆಚ್ಚಿದ ಕಳಲೆ ಮತ್ತು ಉಪ್ಪು ಹಾಕಿ ಫ್ರೈ ಮಾಡಿ. ಸ್ವಲ್ಪ ಎಣ್ಣೆ ಜಾಸ್ತಿ ಇರಲಿ. ಇದು ಎಣ್ಣೆಯಲ್ಲೇ ಚನ್ನಾಗಿ ಪ್ರೈ ಆಗಲಿ. ಬೆಂದ ನಂತರ ಓಲೆಯಿಂದ ಕೆಳಗೆ ಇಳಿಸಿ ತಣ್ಣಗಾದ ನಂತರ ಮೊಸರು ಹಾಕಿ. ಮೊಸರು ನಮ್ಮ ಕಣ್ಣಂದಾಜಿನ ಪ್ರಕಾರ ಮಿಕ್ಸ್ ಮಾಡಿ.  ಇದು ಅನ್ನದ ಜೊತೆ ಚನ್ನಾಗಿ ಇರತ್ತೆ.

ಕಳಲೆ ಡ್ರೈ ಪಲ್ಯಃ
ಬೇಕಾಗುವ ಸಾಮಗ್ರಿಃ
ಸಂಸ್ಕರಿಸಿದ ಕಳಲೆ (ಸಣ್ಣಗೆ ಹೆಚ್ಚಿರಲಿ), ಈರುಳ್ಳಿ, ಕರಿಬೇವು, ಉದ್ದಿನ ಬೇಳೆ, ಸಾಸಿವೆ, ಎಣ್ಣೆ
ಮಸಾಲೆಗೆಃ
ಎಣ್ಣೆ, ಕಡ್ಲೆ ಬೇಳೆ ಎರಡು ಚಮಚ, ಬ್ಯಾಡಗಿ ಮೆಣಸು  5 ರಿಂದ  6, ಇಂಗು, ಕುತ್ತುಂಬರಿ 2 ಚಮಚ, ಎಳ್ಳು 2 ಚಮಚ, ಮೆಂತೆ 1 ಚಮಚ, ಸಾಸಿವೆ 1  ಚಮಚ.
ಮಾಡುವ ವಿಧಾನಃ
ಒಂದು ಬಾಣೆಲೆಗೆ ಎಣ್ಣೆ ಸ್ವಲ್ಪ ಜಾಸ್ತಿ ಹಾಕಿ. ಇದಕ್ಕೆ ಉದ್ದಿನ ಬೇಳೆ, ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಈರುಳ್ಳಿ ಹಾಕಿ ಪ್ರೈ ಮಾಡಿ. ಈಗ ಹೆಚ್ಚಿದ ಕಳಲೆ ಹಾಕಿ. ಇದು ಎಣ್ಣೆಲಿ ಚನ್ನಾಗಿ ಪ್ರೈ ಆಗಲಿ.
ಮಾಸಾಲೆಗೆಃ ಸ್ವಲ್ಪ ಎಣ್ಣೆಗೆ ಕಡ್ಲೆ ಬೇಳೆ, ಬ್ಯಾಡಗಿ ಮೆಣಸು,ಹಾಕಿ ಪ್ರೈ ಮಾಡಿ. ಇದಕ್ಕೆ ಮಸಾಲೆಗೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಪ್ರೈ ಮಾಡಿ. ಈಗ ಮಿಕ್ಸಿ ನಲ್ಲಿ ಡ್ರೈ ಯಾಗಿ ಪುಡಿ ಮಾಡಿ. ಈ ಪುಡಿಯನ್ನು ಮೇಲೆ ಪ್ರೈ ಆದ ಕಳಲೆಗೆ ಮಿಕ್ಸ್ ಮಾಡಿ. ಒಮ್ಮೆ ಚನ್ನಾಗಿ ಕಲಸಿ. ಇದು ಬಿಸಿ ಬಿಸಿ ಅನ್ನದ ಜೊತೆ ಚನ್ನಾಗಿ ಇರತ್ತೆ. 

ಕಳಲೆ ಪಕೋಡಃ
ಬೇಕಾಗುವ ಸಾಮಗ್ರಿಃ
ಸಂಸ್ಕರಿಸಿದ ಕಳಲೆ (ಚಿಕ್ಕದಾಗಿ ಕಟ್ ಮಾಡಿರಿ), ಕಡಲೆ ಹಿಟ್ಟು ಅರ್ಧ ಬಟ್ಟಲು, ಅಕ್ಕಿ ಹಿಟ್ಟು ಕಾಲು ಬಟ್ಟಲು.  ಉಪ್ಪು, ಅಚ್ಚ ಖಾರದ ಪುಡಿ, ಸೋಡ, ಕರಿಯಲು ಎಣ್ಣೆ,
ಮಾಡುವ ವಿಧಾನಃ
ಚಿಕ್ಕದಾಗಿ ಹೆಚ್ಚಿದ ಕಳಲೆಗೆ ರುಚಿಗೆ ತಕ್ಕಷ್ಟು ಉಪ್ಪು,  ಅರ್ಧ ಬಟ್ಟಲು ಕಡಲೆ ಹಿಟ್ಟು, ಕಾಲು ಬಟ್ಟಲು ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಅಚ್ಚ ಖಾರದ ಪುಡಿ, ಸ್ವಲ್ಪ ಸೋಡ ಹಾಕಿ ಸ್ವಲ್ಪ ನೀರು ಮಿಕ್ಸ್ ಮಾಡುತ್ತಾ ಪಕೋಡ ಹಿಟ್ಟಿನ ಹದಕ್ಕೆ ಕಲಸಿ.ಇದನ್ನು ಅರ್ಧ ಗಂಟೆ ಹಾಗೆ ಬಿಡಿ. ನಂತರ ಎಣ್ಣೆ ಯಲ್ಲಿ ಹೊಂಬಣ್ಣ ಬರುವ ವರೆಗೆ ಕರಿಯಿರಿ. ಇದು ಸಂಜೆ ಟೀ ಜೊತೆ ತುಂಬಾ ಚನ್ನಾಗಿರತ್ತೆ.

(ಅವಳು ಉದಯವಾಣಿ ಹೊಸ ರುಚಿ ವಿಭಾಗಕ್ಕೆ ಬರೆದ ಲೇಖನ.)