Tuesday, June 4, 2019

ವಿರಹಾ ನೂರು ನೂರು ತರಹಾ….


                                                ವಿರಹಾ ನೂರು ನೂರು ತರಹಾ….

ವಿರಹ ವೇದನೆ ಎಲ್ಲಾ ಯುಗಗಳಲ್ಲು ಇತ್ತು. ಕಲಿಯಗದಲ್ಲಿ ವಿರಹ ವೇದನೆಯನ್ನು ಪೋನ್ ಮತ್ತು ಆಧುನಿಕ ಉಪಕರಣಗಳು  ಬಂದು ತಕ್ಕ ಮಟ್ಟಿಗೆ ಕಡಿಮೆ ಮಾಡಿದೆ. ಆದರೆ ದ್ವಾಪರಾಗ ಮತ್ತು ತ್ರೇತಾಯುಗದಲ್ಲಿ ರಾಜ್ಯಕ್ಕೆ ರಾಜ-ರಾಣಿ ಆದರು ವಿರಹ ವೇದನೆ ತಪ್ಪಿದ್ದಲ್ಲ. ನಾರದ, ಹನುಮಂತ, ಹೀಗೆ ಕೆಲವರಿಂದ  ತಕ್ಕ ಮಟ್ಟಿಗೆ ಸಹಾಯ ಮಾಡಿದರು  ಇವರಿಂದ ಯೋಗ ಕ್ಷೇಮ ವಿಚಾರ ಮಾಡಬಹುದಿತ್ತೆ ಹೊರತು ಇಗಿನ ತರ ಕುದ್ದಾಗಿ ವಿಡಿಯೋ ಕಾಲ್ ಮಾಡಿ ಮಾತನ್ನಾಡುವ  ಅವಕಾಶ ಯಾವ ರಾಜ-ಮಹಾರಾಜರಿಗೆ  ಇರಲಿಲ್ಲ.
ರಾಮಾಯಣದಲ್ಲಿ ಪುತ್ರ ಕಾಮೇಷ್ಠಿ ಯಾಗ ಮಾಡಿ ನಾಲ್ಕು ಪುತ್ರರನ್ನು ಪಡೆದರು ದಶರಥ ಮಹಾರಾಜನಿಗೆ  ಮಕ್ಕಳಿಂದ ದೂರ ಇರುವುದು ತಪ್ಪಿದ್ದಲ್ಲ. ಮೊದಲಿಗೆ ಕುಮಾರರ ವಿದ್ಯಾಬ್ಯಾಸ, ನಂತರ ಪ್ರೀತಿಯ ಹೆಂಡತಿಗೆ ಕೊಟ್ಟ ಮಾತಿಗೆ ಮಗ-ಸೊಸೆಯರನ್ನು ಕಾಡಿಗೆ ಕಳುಹಿಸಿದ್ದು. ಇದು ವಿಧಿ ಲಿಖಿತ ಆದರು ಅರಿಯದೆ ಮಾಡಿದ ತಪ್ಪಿಗೆ ಸಾಯುವ ಕಾಲದಲ್ಲಿ  ಪುತ್ರ ವಿಯೋಗ.
ಇನ್ನು ಐಶಾರಾಮಿಯಾಗಿ ಬೆಳೆದ ಸೀತೆಯ ಗೊಳು ಯಾರಿಗೂ ಬೇಡ. ಆದರೆ ಎಷ್ಟೇ ಕಷ್ಟ ಪಟ್ಟರು ಸೀತೆಗೆ ಎಲ್ಲಾ ಮಾಹಾಕಾವ್ಯಗಳಲ್ಲು ಅವಳನ್ನು ಗುರುತಿಸಿದರು. ಗಂಡ ಸಂಶಯ ಪಟ್ಟು ಕಾಡಿಗೆ ಕಳುಹಿಸಿದರು ಮಾಹಾ ಪತಿವ್ರತೆಯೆಂಬ ಪಟ್ಟ ಬಂತು. ಅದು ಅವಳಿಗೆ ಸಲ್ಲುವಂತದ್ದೆ. ಆಕೆಯ ಬಗ್ಗೆ ಎರಡು ಮಾತಿಲ್ಲ.  ಅದರೆ ಈಗ ನಾನು ಹೇಳಲು ಹೊರಟಿರುವುದು  ಎಲೆ ಮರೆಯಲ್ಲಿ ಇದ್ದ ಭರತನ ಹೆಂಡತಿ ಮಂಡೊದರಿ ಮತ್ತು ಲಕ್ಷ್ಮಣನ ಹೆಂಡತಿ ಊರ್ಮಿಳಾ. ಇವರ ಬಗ್ಗೆ ನಾನು ಅಷ್ಟಾಗಿ ಎಲ್ಲು ಓದಿಲ್ಲ. ಇನ್ನು ತುಂಬಾ ವಿದ್ವಾಂಸರು ಓದುವ ಮಾಹಾಕಾವ್ಯಗಳಲ್ಲಿ ಇತ್ತೆ ಹೊರತು ನನ್ನಂತ ಸಾಮಾನ್ಯರು ಓದುವ ಪುಸ್ತಕಗಳಲ್ಲಿ ಎಲ್ಲು ಅಷ್ಟಾಗಿ ಉಲ್ಲೇಖಿಸಿಲ್ಲ.
ಉರ್ಮಿಳಾ ಮತ್ತು ಮಂಡೊದರಿಯರು ರಾಜ ಮನೆತನದಲ್ಲಿ ಹುಟ್ಟಿ ಬೆಳೆದು ಇನ್ನೊಂದು ರಾಜ ಮನೆತನಕ್ಕೆ  ಸೇರಿದರು. ಆದರೆ ಇವರಿಗೆ  ವಿರಹ ವೇದನೆ  ತಪ್ಪಿದ್ದಲ್ಲ. ಕೈಕೆ ದಶರಥ ಮಹಾರಾಜನಲ್ಲಿ ರಾಮನನ್ನು ವನವಾಸಕ್ಕೆ ಕಳುಹಿಸಲು ಭಾಷೆ ತೆಗೆದುಕೊಂಡಳು ಆದರೆ ಇದರ ಪರಿಣಾಮದ ಬಗ್ಗೆ ಯಾರು ಊಹಿಸಿರಲಿಲ್ಲ. ಸ್ವತಹ ಕೈಕೆಯು ಮಗ ಭರತ ತನ್ನ ತಿರಸ್ಕಾರದಿಂದ ನೋಡುತ್ತಾನೆ ಎಂಬ ಯೋಚನೆಯು ಬಂದಿರಲಿಲ್ಲ.
ರಾಮ ಕಾಡಿಗೆ ಹೊರಟಾಗ ಸೀತೆ ಹಠ ಹಿಡಿದು ತಾನು ಹೊರಟಳು. ಅವಳ ಹಠಕ್ಕೆ ಮಣಿದು ತನ್ನ ಜೊತೆ ಸೀತೆಯನ್ನು ಕರೆದುಕೊಂಡು ಹೋದ. ಅರಮನೆಯ ವಾಸ ಇಲ್ಲದೆ ಇದ್ದರು ಗಂಡ ಇದ್ದಲ್ಲೆ ಅರಮನೆ ಎಂದು ಅವಳು ಅವನ ಹಿಂದೆ ಹೊರಟಳು. ಇನ್ನು ರಾವಣ ಅವಳ ಕಿಡ್ನಾಪ್ ಮಾಡಿದ ಕಥೆ ಸದ್ಯಕ್ಕೆ ಬೇಡ. ಇನ್ನು ಅಣ್ಣ-ಅತ್ತಿಗೆಯರ ಯೋಗ ಕ್ಷೇಮ ವಿಚಾರಿಸಲೆಂದು ಲಕ್ಷ್ಮಣನು ಹೊರಟ. ಆದರೆ ಇಲ್ಲಿ ಉರ್ಮಿಳಾ ಎಷ್ಟೆ ಹಠ ಹಿಡಿದರು ಲಕ್ಷ್ಮಣ ಸುತಾರಂ ಒಪ್ಪಲಿಲ್ಲ. ಎಲ್ಲ ವನವಾಸಕ್ಕೆಂದು ಹೊರಟರೆ ಇಲ್ಲೆ ಇದ್ದು ಅಪ್ಪ ಮತ್ತು ಕೌಸಲ್ಯ ಮತ್ತು ಸುಮಿತ್ರ ಮಾತೆಯರನ್ನು  ಸಂಭಾಳಿಸು ಎಂದು  ಹೇಳಿರಬಹುದು.  ಆದರೆ ಯಾವುದೊ ಪುಸ್ತಕದಲ್ಲಿ ಓದಿದ ನೆನಪು ಲಕ್ಷ್ಮಣ ಹೆಂಡತಿಯಲ್ಲಿ ಹೇಳುತ್ತಾನೆ, ಅಣ್ಣ-ಅತ್ತಿಗೆಯರನ್ನು ನಾನು ಹಗಲು-ರಾತ್ರಿ ಕಾವಲುಗಾರನಾಗಿ ಕಾಯಬೇಕು ಇದರಿಂದ ನನಗೆ ನಿದ್ದೆ ಮಾಡಲು ಆಗದು. ನನ್ನ ಪಾಲಿನ ನಿದ್ದೆಯನ್ನು ನೀನೆ ಮಾಡು ಎಂದು ಹೇಳುತ್ತಾನೆ. ಇದರ ಅರ್ಥ ಉರ್ಮಿಳಾ ಸತತವಾಗಿ ಹದಿನಾಲ್ಕು ವರ್ಷ ನಿದ್ದೆ ಮಾಡಿದಳೆ? ಅಥವಾ ಗಂಡನ ವಿರಹ ವೇದನೆ ತಾಳದೆ ಒಂಟಿತನ ನಿಗಿಸಲು ನಿದ್ದೆಯಲ್ಲಿ ಕಳೆದಳೆ?  ಏನೆ ಇರಲಿ ಗಂಡನ ಯಾವ ಮಾಹಿತಿಯು ಸಿಗದೆ ವನವಾಸದಲ್ಲಿರುವ ಗಂಡನ ನೆನೆಯುತ್ತ ದಿನ ಕಳೆದಳು. ಎಷ್ಟೇ ರಾಜ ವೈಬೋಗ ಇದ್ದರು ಯಾವುದು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗುತ್ತಿರಲಿಲ್ಲ. ಕೈಕೆ ಮಂಥರೆಯ ಮಾತಿಗೆ ಕಿವಿ ಕೊಟ್ಟು ಹದಿನಾಲ್ಕು ವರುಷ ಇಡೀ ಅರಮನೆಯ ಖುಶಿ ಕಿತ್ತುಕೊಂಡಳು.
ಇತ್ತ ಲಕ್ಷ್ಮಣನ ಸ್ಥಿತಿ ನೋಡಿ, ಅಣ್ಣ-ಅತ್ತಿಗೆಯರು ಜೊತೆಯಾಗಿ ಇರುವಾಗ ಲಕ್ಷ್ಮಣನಿಗೆ ತನ್ನ ಹೆಂಡತಿಯ ನೆನಪಾಗುವುದು ಸಹಜ. ಆಗ ಲಕ್ಷ್ಮಣನು ಮನಸ್ಸಿನಲ್ಲೆ ಹೆಂಡತಿಯನ್ನು ನೆನೆಯುತ್ತಿರ ಬೇಕೆ ಹೊರತು ನೋಡುವುದಕ್ಕೆ ಒಂದು ಪೋಟೋನು ಇಲ್ಲ. ಕೆಲವೊಮ್ಮೆ ರಾಮಾಯಣದಲ್ಲಿ ರಾಮ-ಸೀತೆಯರಿಗಿಂತ ಲಕ್ಷ್ಮಣ-ಉರ್ಮಿಳಾ ಇವರ ವಿರಹ ವೇದನೆಯೆ ಬಹು ದೊಡ್ಡದಾಗಿ ಕಾಣುತ್ತದೆ. ಇವಳು ಯಾವ ಪತಿವ್ರತೆಗು ಕಮ್ಮಿ ಇಲ್ಲ. ಅವಳ ನೋವು ಅವಳಿಗೆ ಗೊತ್ತು.
ಇನ್ನು ಭರತನ ಹೆಂಡತಿ ಮಂಡೊದರಿ ಪರಿಸ್ಥಿತಿ ಇವರಿಬ್ಬರಿಗಿಂತ ಪರವಾಗಿಲ್ಲ. ಭರತ ರಾಜ್ಯದ ಹತ್ತಿರವೆ ತನ್ನ ಕುಟೀರ ಮಾಡಿಕೊಂಡಿರುವುದರಿಂದ ಮಂಡೊದರಿ ಆಗಾಗ ಪತಿಯ ದರ್ಶನ ಪಡೆಯಬಹುದಿತ್ತು ಮತ್ತು ಅವನ ಯೋಗ ಕ್ಷೇಮವನ್ನು ವಿಚಾರಿಸಬಹುದಿತ್ತು.
ಇದು ಬರಿ ರಾಮಾಯಣದ ಕಥೆ. ಇನ್ನು ಮಹಾಭಾರತ ಮತ್ತು ಪ್ರರಾಣ ಕಥೆಗಳಲ್ಲಿ ವಿರಹ ವೇದನೆಗೆನು ಕಮ್ಮಿ ಇಲ್ಲ. ಈಗ ಕೆಲಸದ ಮೇಲೆ ಅಪ್ಪ-ಅಮ್ಮನಿಂದ ಅಥವಾ ಹೆಂಡತಿಯಿಂದ ದೂರ ಹೋದರೆ ಆಗ ಯುದ್ದಕ್ಕೊ ಅಥವಾ ರಾಜ್ಯದ ಸಂರಕ್ಷಣೆಗಾಗಿ ಹೋಗಲೆ ಬೇಕಿತ್ತು. ಆದರೆ ವಿರಹ ಮಾತ್ರ ಯಾವ ಕಾಲದಲ್ಲು ಯಾರಿಗೂ ತಪ್ಪಿದ್ದಲ್ಲ. ಎಲ್ಲಾ ಕಾಲದಲ್ಲು ವಿರಹ ನೂರು ನೂರು ತರಹ….