Wednesday, November 28, 2018

ಚುಮು ಚುಮು ಚಳಿಗೆ ಬಿಸಿ ಬಿಸಿ ಸಾರು


                                     ಚುಮು ಚುಮು ಚಳಿಗೆ ಬಿಸಿ ಬಿಸಿ ಸಾರು

ಚಳಿಗಾಲದಲ್ಲಿ ಬಿಸಿ ಬಿಸಿ ಆದ ಪದಾರ್ಥಗಳನ್ನು ತಿನ್ನೊ ಬಯಕೆ ಸಹಜ. ಅದರಲ್ಲೆ ದೇಹಕ್ಕೆ ಒಗ್ಗುವಂತಹದನ್ನು ಮಾಡಿದರೆ ಆರೋಗ್ಯಕ್ಕು ಒಳ್ಳೆಯದು.  ದೇಹದ ಉಷ್ಣಾಂಶ ಕಾಪಾಡುವಂತಹ ಮೆಣಸು, ಜೀರಿಗೆ, ಬೆಳ್ಳುಳ್ಳಿ ಉಪಯೋಗಿಸಿ ಸುಲಭವಾಗಿ ಮಾಡುವಂತಹ ಕೆಲವು ಸಾರುಗಳು ಇಲ್ಲಿವೆ.  
                                                         
ಜೀರಿಗೆ ಮೆಣಸು ಸಾರುಃ       
ಬೇಕಾಗುವ ಸಾಮಗ್ರಿಃ
ತೊಗರಿ ಬೇಳೆ ಕಾಲ್ ಕಪ್, ಟೊಮೆಟೊ 2, ಲಿಂಬು 1, ಕುತ್ತುಂಬರಿ ಸೊಪ್ಪು ಸ್ವಲ್ಪ, ಕರಿಬೇವು 8 ರಿಂದ 10 ಎಸಳು,  ರುಚಿಗೆ ಅನುಸಾರ ಬೆಲ್ಲ ಮತ್ತು ಉಪ್ಪು, ಮೆಣಸು ಮತ್ತು ಜೀರಿಗೆ 1 ಚಮಚ(ಎರಡು ಒಂದೆ ಅಳತೆಯಲ್ಲಿ ಇರಲಿ), ತುಪ್ಪ 1 ಚಮಚ, ಸಾಸಿವೆ 1 ಚಮಚ. ಅರಿಶಿಣ, ಇಂಗು.
ತಯಾರಿಸುವ ವಿಧಾನಃ
ಮೊದಲು ತೊಗರಿ ಬೇಳೆಯನ್ನು ತೊಳೆದು ಅದರ ಜೊತೆ ಟೊಮೆಟೊ ಕಟ್ ಮಾಡಿ ಕುಕ್ಕರಿನಲ್ಲಿ ಬೇಯಿಸಿ. ಇನ್ನೊಂದು ಪಾತ್ರೆ ಯಲ್ಲಿ ಮೆಣಸು ಮತ್ತು ಜೀರಿಗೆಯನ್ನು ಎಣ್ಣೆ ಹಾಕದೆ ಹಾಗೆ ಹುರಿದುಕೊಳ್ಳಿ. ಕೆಂಪಗಾಗಲಿ. ಈಗ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಈಗ ಕುಕ್ಕರಿನಲ್ಲಿ ಬೆಂದ ಬೇಳೆ ಮತ್ತು ಟೊಮೆಟೊವನ್ನು  ಸೌಟಿನಿಂದಲಿ ಚನ್ನಾಗಿ ಮಿಕ್ಸ   ಮಾಡಿಕೊಳ್ಳಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ. ಚನ್ನಾಗಿ ಕುದಿಸಿ. ಈಗ ಕುದಿಯುವಾಗ ಜೀರಿಗೆ-ಮೆಣಸಿನ ಪುಡಿ ಹಾಕಿ. ಕುತ್ತುಂಬರಿ ಸೊಪ್ಪು ಮತ್ತು ಕರಿಬೇವಿನ ಎಸಳು ಹಾಕಿ.   ಸ್ವಲ್ಪ ಕುದಿಸಿ ಸ್ಟೊವ್ ಆರಿಸಿ. ಈಗ ಒಗ್ಗರಣೆ ಸೌಟಿಗೆ ತುಪ್ಪ ಹಾಕಿ  ಇಂಗು ಸಾಸಿವೆ ಅರಿಶಿಣ ಹಾಕಿ ಒಗ್ಗರಣೆ ಕೊಡಿ. ಕೊನೆಯಲ್ಲಿ  ನಿಂಬು ರಸ ಹಾಕಿ.(ಇದು ಬೇಕಿದ್ದರೆ ಮಾತ್ರ, ಆದ್ರೆ ರುಚಿ ಚನ್ನಾಗಿ ಇರತ್ತೆ).
ಜೀರಿಗೆ-ಮೆಣಸು ಸಾರು ಜ್ವರ ಮತ್ತು ಶೀತ ಆದಾಗ ಬಾಯಿ ರುಚಿಗೆ ಮತ್ತು ದೇಹಕ್ಕೆ ಚನ್ನಾಗಿ ಇರತ್ತೆ. ಬಿಸಿ ಬಿಸಿ ಅನ್ನದ ಜೊತೆ ಈ ಸಾರನ್ನು ಸವಿಯಿರಿ.

ಹುರುಳಿ ಕಾಳು ಸಾರುಃ
ಬೇಕಾಗುವ ಸಾಮಗ್ರಿಃ
ಹುರುಳಿ ಕಾಳು 1 ಕಪ್, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಸಾಸಿವೆ, ಸ್ವಲ್ಪ ಅರಿಶಿಣ, 5 ರಿಂದ  6 ಎಸಳು ಬೆಳ್ಳುಳ್ಳಿ, 8 ರಿಂದ 10 ಎಸಳು ಕರಿಬೇವು, ಕುತ್ತುಂಬರಿ ಸೊಪ್ಪು ಸ್ವಲ್ಪ, ಹುಣಸೆ ರಸ ರುಚಿಗೆ ಅನುಸಾರ, ಅಚ್ಚ ಖಾರದ ಪುಡಿ ಖಾರಕ್ಕೆ ಅನುಸಾರವಾಗಿ, ಸಾರಿನ ಪುಡಿ 1 ಚಮಚ,  ಎಣ್ಣೆ,  ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ.
ತಯಾರಿಸುವ ವಿಧಾನಃ
ಮೊದಲು ಕುಕ್ಕರಿನಲ್ಲಿ ಹುರುಳಿ ಕಾಳನ್ನು ಬೇಯಿಸಲು ಇಡಿ.ಇದು ಬೆಯಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುವುದು. 5 ರಿಂದ 6 ಸೀಟಿ ಕೂಗಿಸಿ. ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಇದು ಬಿಸಿ ಆದ ಮೇಲೆ ಸಾಸಿವೆ ಜೀರಿಗೆ ಹಾಕಿ. ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ. ಇದು ಸ್ವಲ್ಪ ಪ್ರೈ ಆಗಲಿ. ಈಗ ಕರಿಬೇವು ಅಚ್ಚ ಖಾರದ ಪುಡಿ ಮತ್ತು ಸಾರಿನ ಪುಡಿ ಎಲ್ಲಾ ಹಾಕಿ. ಮೊದಲೆ ಬೇಯಿಸಿದ ಹುರುಳಿ ಕಾಳಿನ ನೀರನ್ನು ಮಾತ್ರ ಹಾಕಿ. (ಹುರುಳಿ ಕಾಳು ಮತ್ತು ನೀರನ್ನು ಬೇರೆ ಮಾಡಿ) ನಿಮಗೆ ಹುರುಳಿ ಕಾಳಿನ ಸಾರು ಸ್ವಲ್ಪ ಗಟ್ಟಿ ಬೇಕಿದ್ದರೆ ಬೆಂದ ಹುರುಳಿ ಕಾಳನ್ನು ಸ್ವಲ್ಪ ಮಿಕ್ಸಿನಲ್ಲಿ ರಬ್ಬಿ ಹಾಕಿ. ಈಗ ಹುಣಸೆ ರಸ, ಉಪ್ಪು, ಬೆಲ್ಲ ಎಲ್ಲ ಹಾಕಿ ಚನ್ನಾಗಿ ಕುದಿಸಿ. 
ಕೊನೆಯಲ್ಲಿ ಕುತ್ತುಂಬರಿ ಸೊಪ್ಪು ಕಾಕಿ ಒಂದೆರಡು ನಿಮಿಷ ಕುದಿಸಿದರೆ ಹುರುಳಿ ಕಾಳಿನ ಸಾರು ರೆಡಿ.

ಹುಣಸೆ ಸಾರುಃ
ಬೇಕಾಗುವ ಸಾಮಗ್ರಿಃ
ಒಂದು ನಿಂಬೆ ಗಾತ್ರದ ಹುಣಸೆ ಹಣ್ಣು, ಸಮ ಪ್ರಮಾಣ ಬೆಲ್ಲ, ಅಚ್ಚ ಖಾರದ ಪುಡಿ,  1 ಚಮಚ ತುಪ್ಪ, 1 ಚಮಚ ಜೀರಿಗೆ, ಅರ್ಧ ಚಮಚ ಸಾಸಿವೆ, 5 ರಿಂದ 6 ಎಸಳು ಕರಿಬೇವು, ಕುತ್ತುಂಬರಿ ಸೊಪ್ಪು, ಉಪ್ಪು, ಚಿಟಿಕೆ ಇಂಗು, ಎಣ್ಣೆ,
ತಯಾರಿಸುವ ವಿಧಾನಃ
ಮೊದಲು ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ಚನ್ನಾಗಿ ರಸ ತೆಗೆಯಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ  ಇದಕ್ಕೆ ಸಾಸಿವೆ, ಜೀರಿಗೆ, ಇಂಗು,ಒಂದೊಂದೆ ಹಾಕಿ ಮೀಡಿಯಂ ಉರಿಯಲ್ಲಿ ಪ್ರೈ ಮಾಡಿ. ಈಗ ಖಾರಕ್ಕೆ ಅನುಸಾರ ಅಚ್ಚ ಖಾರದ ಪುಡಿ ಹಾಕಿ. ಈಗ ಅರ್ಧ ಕಪ್ ನೀರು ಹಾಕಿ. ಈಗ ಇದು ಕುದಿಯಲು ಬರುವಾಗ ಹುಣಸೆ ರಸ ಹಾಕಿ. ನಂತರ ಬೆಲ್ಲ ಇದು ಅವರವರ ರುಚಿಗೆ ಅನುಸಾರ. ಇದು ಕುದಿಯುತ್ತಿರುವಾಗ ಕುತ್ತುಂಬರಿ ಸೊಪ್ಪು ಹಾಕಿ.
ಹುಣಸೆ ಸಾರು ಅನ್ನದ ಜೊತೆನು ಚನ್ನಾಗಿ ಇರತ್ತೆ. ಹಾಗೆ ಇದನ್ನು ಸೂಪ್ ತರ ಕುಡಿಯಬಹುದು.

ತೊಗರಿ ಬೇಳೆ ಸಾರುಃ     
ಬೇಕಾಗುವ ಸಾಮಗ್ರಿಃ
ತೊಗರಿ ಬೇಳೆ ಅರ್ಧ ಕಪ್, 2 ಟೊಮೆಟೊ, ಎಣ್ಣೆ 1 ಚಮಚ, ಅರಿಶಿಣ ಚಿಟಿಕೆ, ಸಾರಿನ ಪುಡಿ 1 ಚಮಚ, ಉಪ್ಪು ಬೆಲ್ಲ ರುಚಿಗೆ ತಕ್ಕಷ್ಟು, ಹುಣಸೆ ಹಣ್ಣಿನ ರಸ 2 ಚಮಚ, ಕರಿಬೇವು 5 ರಿಂದ 6 ಎಸಳು, ಕೊತ್ತುಂಬರಿ ಸೊಪ್ಪು, ಅರ್ಧ ನಿಂಬೆ ಹಣ್ಣು, ತುಪ್ಪ 1 ಚಮಚ, ಜೀರಿಗೆ ಅರ್ಧ ಚಮಚ, ಸಾಸಿವೆ ಅರ್ಧ ಚಮಚ, ಚಿಟಿಕೆ ಇಂಗು,
ತಯಾರಿಸುವ ವಿಧಾನಃ
ಮೊದಲು ತೊಗರಿ ಬೇಳೆ ಮತ್ತು ಟೊಮೆಟೊ ವನ್ನು ಬೇಯಿಸಿಕೊಳ್ಳಿ. ಟೊಮೆಟೊವನ್ನು ಚನ್ನಾಗಿ ಕಿವುಚಿಕೊಂಡು ಬೇಳೆ ಜೊತೆ ಚನ್ನಾಗಿ ಮಿಕ್ಸ್ ಆಗಲಿ. ಈಗ ಇದನ್ನು ಮೀಡಿಯಂ ಉರಿಯಲ್ಲಿ ಇಡಿ. ನಂತರ ಹುಣಸೆ ರಸ, ಬೆಲ್ಲ,ಉಪ್ಪು, ಕರಿಬೇವು,ಸಾರಿನ ಪುಡಿ, ಎಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಈಗ ಕುತ್ತುಂಬರಿ ಸೊಪ್ಪು ಹಾಕಿ. ಒಲೆಯಿಂದ  ಇಳಿಸಿ. ಈಗ  ಸ್ವಲ್ಪ ನಿಂಬೆ ರಸ ಹಾಕಿ. ಇದು ಸಾರಿನ ರುಚಿ ಹೆಚ್ಚಿಸುತ್ತದೆ. ಈಗ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ  ಸ್ವಲ್ಪ ಇಂಗು ಹಾಕಿ, ನಂತರ ಸಾಸಿವೆ ಸಿಡಿದ ಮೇಲೆ  ಸಾರಿಗೆ ಹಾಕಿ.  ಬಿಸಿ ಅನ್ನದ ಜೊತೆ ಸವಿಯಿರಿ.

Tuesday, November 27, 2018

ಕಳ್ಳತನದಲ್ಲು ಬದಲಾವಣೆ


                                      ಕಳ್ಳತನದಲ್ಲು   ಬದಲಾವಣೆ

ನಮ್ಮೂರು ಪೇಟೆಗೆ ಸಮೀಪ ಇರೋದ್ರಿಂದ ಕೆಲವೊಂದು ವಿಷಯದಲ್ಲಿ ಅನುಕೂಲ ಆದ್ರು ಕೆಲವೊಂದು ತುಂಬಾ ತಲೆ ನೋವಿನ ಸಂಗತಿಯಾಗಿತ್ತು.
ನಮಗೆ ದೊಡ್ಡ ಸಮಸ್ಯೆ ಅಂದರೆ ಅಡಿಕೆ ಕೊನೆ ಕಾಯ್ದುಕೊಳ್ಳುವುದು. ವರ್ಷವೆಲ್ಲಾ ಕೆಲಸ ಮಾಡಿ ಕಾಯ್ದುಕೊಂಡ ಫಸಲು ಇನ್ನೇನು ಕೈಗೆ ಬರತ್ತೆ ಅನ್ನೋ ಸಮಯಕ್ಕೆ ಕಳ್ಳತನ ಆಗುವುದು. ಸುಮಾರು ಇಪ್ಪತೈದು ವರ್ಷಕ್ಕೆ ಹೊಲಿಸಿದರೆ  ಈಗ ಅಡಿಕೆ ಕಳ್ಳತನ ಸ್ವಲ್ಪ ಕಡಿಮೆ ಆಗಿದೆ ಅಂತ ಅಪ್ಪ ಯಾವಗ್ಲು ಹೇಳ್ತಾ ಇರ್ತಾರೆ. ಬಹುಶ ಕಳ್ಳತನ ಮಾಡುವವರು ಆಳಸಿ ಆಗಿರ ಬೇಕು. ಮರ ಹತ್ತಿ ಅಡಿಕೆ ಕೊನೆ ಕೊಯ್ದು ಮಾರಾಟ ಮಾಡುವ ಬದಲು ಇನ್ನೇನಾದ್ರು  ಸುಲಭವಾಗಿ ಸಿಗೊದನ್ನ ಕಳ್ಳತನ ಮಾಡೋದು ಲೇಸು ಅಂತ ಭಾವಿಸಿರ ಬೇಕು.
ಅಪ್ಪನ ಪ್ರತಿ ದಿನದ ರೂಡಿ ಬೆಳಿಗ್ಗೆ ತೋಟಕ್ಕೆ ಹೋಗಿ ಬರುವುದು. ಅದು ಅಡಿಕೆ ಪೀಕ ಬಂದಾಗ  ಒಂದು ದಿನವು ಬಿಡದೆ ಬೆಳಿಗ್ಗೆ ಒಮ್ಮೊಮ್ಮೆ ಸಾಯಂಕಾಲ ತೋಟಕ್ಕೆ ಹೋಗ್ತಾ ಇದ್ರು. ಮೊದ್ಲೆ ಹೇಳಿದ ಹಾಗೆ ನಾವ್ ಚಿಕ್ಕವರು ಇದ್ದಾಗ ಅಡಿಕೆ ಕೊನೆ ಕಳ್ಳತನ ತುಂಬಾ ಆಗ್ತಾ ಇತ್ತು. ಸಲೀಸಾಗಿ ಪೇಟೆಗೆ ದಾಟಿಸಲು ಅನೂಕೂಲ ಆಗುವುದರಿಂದ ನಮ್ಮ ಮನೆ ತೋಟದ ಮೇಲೆ ಸ್ವಲ್ಪ ಕಳ್ಳರ ಒಲವಿತ್ತು. ಸುಮಾರು ವಾರಕ್ಕೆ ಎರಡು ದಿನವಂತು ಖಾಯಃ ಆಗಿ ಅಪ್ಪ ತೋಟದಿಂದ ಬರುವಾಗ ಹೇಳ್ತಾ ಇದ್ರು, “ಇವತ್ತು ಎಂಟು ಬಣ್ಣದಲ್ಲಿ (ತೋಟದ ಒಂದು ಭಾಗದ ಹೆಸರು) ಸುಮಾರು ಎಂಟ್ ರಿಂದ ಹತ್ತು ಮರದ  ಕೊನೆ ಹೋಯಿಯು” ಅಂತ ಹೇಳುವರು.  ಈ ಮಾತನ್ನು  ಹೇಳಿದಾಗ ನನಗೆ ಯಾಕೋ  ಮನಸ್ಸಿಗೆ  ತುಂಬಾ ಬೇಸರ ಆಗ್ತಾ ಇತ್ತು. ಹುಡುಗಾಟಿಕೆಯ ವಯಸ್ಸು ಆ ನಿಟ್ಟಿನಲ್ಲೆ ನನ್ನ ಯೋಚನೆ. ನಾವು ಯಾಕಾದ್ರು ಇಲ್ಲಿ ಇದ್ದಿವೋ, ದೊಡ್ಡಪ್ಪಂದಿರ ತರನೆ ದೂರ ಹಳ್ಳಿಯಲ್ಲಿ ಇರಬೇಕಾಗಿತ್ತು. ಅದು ಅಲ್ದೆ ಕಳ್ಳತನ ನಮ್ಮನೆ ತೋಟಕ್ಕೆ ಯಾಕ್ ಆಗತ್ತೆ? ಹೀಗೆ ಹಲವು ಯೋಚನೆ ನನ್ನ ತಲೆಲಿ ಹಾದು ಹೋಗ್ತಾ ಇತ್ತು.  ಆದ್ರೆ ಅಪ್ಪ ಯಾವಾಗ್ಲು ಬೇಸರ ಮಾಡ್ಕೊಳ್ತಾ ಇರ್ಲಿಲ್ಲ. ಯಾವಾಗ್ಲು ಹೇಳೋರು, “ ನಮ್ಗೆ ದಕ್ಕುವಷ್ಟು ದಕ್ಕತ್ತೆ. ನಮ್ಮ ಯೋಗ ಚನ್ನಾಗಿ ಇದ್ರೆ ಇನ್ನೇಲಿಂದನೋ ದೇವರು ಒಳ್ಳೆದು ಮಾಡ್ತಾನೆ” ಅಂತ ಸ್ವಲ್ಪ ದೇವರ ಮೇಲೆ ಭಾರ ಹಾಕೋದು ಜಾಸ್ತಿ.
ಎಷ್ಟೇ ದೇವರ ಮೇಲ್ ಭಾರ ಹಾಕಿದ್ರು ಅಡಿಕೆ ಕೊಯ್ಲಿನಲ್ಲಿ ತೋಟ ಕಾಯೊ ವ್ಯವಸ್ಥೆ ಮಾಡ್ಬೇಕಾಗಿತ್ತು. ಅದಿಕ್ಕಾಗೆ ಒಂದು ಆಳನ್ನಾ ನೇಮಿಸಿಡಲಾಗಿತ್ತು. ಆದ್ರು ಕಳ್ಳತನ ಕಮ್ಮಿ ಆಗಿಲ್ಲ. ಆಳು ಮಾಡಿದ್ದು ಹಾಳು ಅನ್ನೋ ಹಾಗೆ  ಒಂದು ದಿನ ಅಪ್ಪನಿಗೆ ಉಮೇದಿ ಬಂದು ತಾನು ಕುದ್ದಾಗಿ  ತೋಟ ಕಾಯಲು ಗಪ್ಪತಣ್ಣ ನನ್ನು ಕರೆದುಕೊಂಡು ಹೋಗುವ ಉಮೇಧಿ ಮಾಡಿದರು. ಇದಕ್ಕಾಗಿ ನಮ್ಮನೆಲಿ  ಒಂದು ಮಿಟಿಂಗ್ ಮಾಡಲಾಯಿತು. ಜಾಗ ಸಮಯ ವನ್ನೆಲ್ಲಾ ಅಪ್ಪ ಮತ್ತು ಗಪ್ಪತಣ್ಣ ಕುಳಿತು ಮಿಟಿಂಗ್ ನಲ್ಲಿ ಚರ್ಚೆ ಮಾಡಲಾಯಿತು. ಅದಕ್ಕಣುಗುಣವಾಗಿ ದಿನ ಗೊತ್ತು ಮಾಡಲಾಯಿತು. ಅಂತು ಅಪ್ಪ ಮತ್ತು ಗಪ್ಪತಣ್ಣನ ಸವಾರಿ ತೋಟ ಕಾಯಲು ಹೊರಟರು. ನಮ್ಮೂರಲ್ಲಿ ಸುಮಾರಾಗಿ ಎಲ್ಲರ ಮನೆಲು ಬಂದೂಕು ಇದ್ದೆ ಇರುತಿತ್ತು. ಅದ್ರಲಂತು ತೋಟ ಕಾಯಲು ಹೋಗುವಾಗ ಬಂದೂಕನ್ನು  ತಗೊಂಡು ಹೋಗೆ ಹೋಗ್ತಾ ಇದ್ರು. ಹಾಗೆ ಅಪ್ಪ ಮತ್ತು ಗಪ್ಪತಣ್ಣ ಬಂದೂಕು ಹಿಡಿದು ಚಳಿಗೆ ಸರಿಯಾಗಿ ತಮ್ಮನ್ನು ತಾವು ಪ್ಯಾಕ್ ಮಾಡಿಕೊಂಡು ಹೊರಟರು. ಸುಮಾರು ಬೆಳಗಿನ ಜಾವತನಕ ಅಲ್ಲೆ ಇರೋ ಪ್ಲಾನ್ ಇರೊದ್ರಿಂದ ಕಂಬಳಿನು ತಗೋಂಡು ಹೋದ್ರು. ತೋಟಕ್ಕೆ ಹೋದ್ ಮೇಲೆ ಒಂದು ಸುತ್ತು ತೋಟ ಓಡಾಡಿದರು. ಸ್ವಲ್ಪ ವಿಶ್ರಾಂತಿಗೆಂದು ಸ್ವಲ್ಪ ಹೊತ್ತು ಕಂಬಳಿ ಮೇಲೆ ತಲೆ ಊರಿದರಂತೆ.ಚನ್ನಾಗಿ ನಿದ್ದೆ ಹತ್ತಿತು. ಇತ್ತ ಯಥಾ ಪ್ರಕಾರ ಕಳ್ಳರು ತಂಮ್ಮ ಕೈ ಚಳಕ ತೋರಿಸಿಯೇ ಬಿಟ್ಟರು. ಇವರು ಮಲಗಿದ ಸ್ವಲ್ಪ ದೂರದ ಮರದಿಂದ ಕೊನೆ ಕಿತ್ತು ತೋಟದಿಂದ ಓಡಿ ಹೋಗಬೇಕಾದ್ರೆ ಒಂದು  ಕಳ್ಳ ಅಪ್ಪನ ಕಾಲನ್ನು ತುಳಿದೆ ಬಿಟ್ಟ. ಅಪ್ಪನಿಗೆ ಸಡನ್ನಾಗಿ ಎಚ್ಚರವಾಯಿತು. ಹಾಗೆ ಪಕ್ಕದಲ್ಲಿದ್ದ ಬಂದೂಕ್ ತೆಗೆದು ಗುಂಡು ಹಾರಿಸಿದರು.  ಕಾರ್ಡ್ತೂಸ್  ಕಳ್ಳನ ಕಾಲಿಗೆ ತಾಗಿತೆಂದು ಅಪ್ಪನ ಅನುಮಾನ. ಆತ ಚೀರಿದ್ದು ಮತ್ತು ಗಪ್ಪತಣ್ಣನ ಅರ್ಧ ನಿದ್ದೆಗಣ್ಣಿನಲ್ಲಿ ನೋಡಿದ್ದೆ  ಸಾಕ್ಷಿ. ಇನ್ನು  ಮಿಕ್ಕ ಇನ್ನಿಬ್ಬರು ಕದ್ದ ಅಡಿಕೆ ಕೊನೆಯನ್ನು ಅಲ್ಲೆ ಬಿಟ್ಟು ಭಟ್ರಾ ಬಿದ್ದು ಓಡಿದರಂತೆ. ಮಂಗನ ಟೋಪಿ ಮತ್ತು ಕತ್ತಲು ಅವರ ಮುಖ ಮರೆಮಾಚಿತ್ತು. ಅಲ್ಲಿ ಅವರು ಬಿಟ್ಟು ಹೋದ ಅಡಿಕೆ ಕೊನೆ ಮನೆಗೆ ತಂದು ಅಪ್ಪ ಮತ್ತು ಗಪ್ಪತಣ್ಣ  ಈ ಕಥೆ ಹೇಳಿದರು. ಆಗ ದೊಡ್ಡಪ್ಪ ಮತ್ತು ಇನ್ನಿತರರು  ಯಾರೋ ನಮ್ಮ ಮನೆ ತೋಟ ಗೊತ್ತಿರುವವರೆ ಈ ಕೆಲಸ ಮಾಡಿದ್ದು ಅಂತ ಅಭಿಪ್ರಾಯ ಪಟ್ಟರು.  ಅಪ್ಪ ಹೌದು ಪರಿಚಯದವರೆ ಮಾಡಿದ್ದು. ಯಾವ ಮರದಲ್ಲಿ ಒಳ್ಳೆ ಪೀಕ ಇದೆ ಮತ್ತು ಓಡಿ ಹೋಗುವ ದಾರಿ ಎಲ್ಲಾ ಗೊತ್ತಿರುವವರೆ. ಇದು ಹೊರಗಿನವರ ಕೆಲಸವಲ್ಲ. ನಮ್ಮೂರಿನವರೆ ಅಥವಾ ನಮ್ಮೂರಿಗೆ ಬರೋ ಕೆಲಸದವರೆ ಆಗಿರ ಬೇಕು. ನಿದ್ದೆ ಗಣ್ಣಿನಲ್ಲಿ ಯಾರು ಅಂತ ನಮಗೆ ತಿಳಿದಿಲ್ಲ ಅಷ್ಟೇ. ಆಗ ನನ್ನ ತಲೆಲಿ ಒಂದು ಹುಳ ಕೊರಿಯೋಕ್ ಶುರು ಆಯ್ತು. ಅಪ್ಪ ಹೊಡೆದ ಗುಂಡು ಕಾಲಿಗೆ ಬಿದ್ದರೆ, ಗಾಯದ ಮಾರ್ಕ್ ಇದ್ದೆ ಇರತ್ತೆ ಅಲ್ದೆ ಬ್ಯಾಂಡೆಜ್ ಕಟ್ಟಿರ್ತಾರೆ. ಅದ್ರನ್ನ ನೋಡಿ ಕಂಡು ಹಿಡಿಯಬಹಿದು ಅಂತ ಭಾವಿಸಿ ಸುಮಾರು ದಿನ ಮನೆ ತೋಟದ ಹತ್ತಿರ ಸುಳಿದಾಡುವರ ಕಾಲು ನೋಡ್ತಾ ಇದ್ದೆ. ಏನಾದ್ರು ಬ್ಯಾಂಡೆಜ್ ಕಟ್ಟಿದ್ರೆ ಕಳ್ಳನ ಹಿಡಿಯುವುದರಲ್ಲಿ ನನ್ನದು ಒಂದು ಅಳಿಲು ಸೇವೆ ಆಗಲಿ ಎಂದು.






Wednesday, November 21, 2018

ಥ್ರಿಲ್ಲರ್ ಕಥೆಗಳು


                                    ಥ್ರಿಲ್ಲರ್  ಕಥೆಗಳು

1  1.   ಅವಸರದಲ್ಲಿ ಮಾವಿನ ಮರದ ಕೆಳಗೆ ಮಾವಿನ ಹಣ್ಣನ್ನು ಬುಟ್ಟಿಗೆ ತುಂಬ್ತಾ ಇರೋವಾಗ  ಊರಿನ ಸಾವಿತ್ರಕ್ಕ ಬಂದು “ಇದು ನಿನ್ನ ಒಬ್ಬಳಿಂದ  ಆಗೋ ಕೆಲಸ ಅಲ್ಲ ನಾನು ಸಹಾಯ ಮಾಡ್ತೀನಿ” ಅಂತ  ಕೈ ಜೋಡಿಸಿದಳು.  ಅಂತು ಇಬ್ಬರಿಂದ ಮಾವಿನ ಹಣ್ಣಿನ ಬುಟ್ಟಿ ತುಂಬಿತು. ಸ್ವಲ್ಪ ಹಣ್ನನ್ನು ಕೊಡೋಕ್ ಹೋದ್ರೆ, “ ಬೇಡ ನೀನೆ ಮನೆಗೆ ತಗೋಂಡು ಹೋಗು” ಅಂತ ಹೇಳಿದಳು. ಸರಿ ಅಂತ ಖುಶಿಯಿಂದ ಮನೆಗೆ ಬಂದು ಮಾವಿನ ಹಣ್ಣಿನ ಬುಟ್ಟಿ ಅಮ್ಮನಿಗೆ ತೋರಿಸೋಕ್  ಹೋದೆ.  ಆದ್ರೆ ಅಮ್ಮ ಸಪ್ಪೆ ಮುಖ ಮಾಡಿ, “ಇವತ್ತು ಬೆಳಗಿನ ಜಾವ ನಮ್ಮೂರ  ಸಾವಿತ್ರಕ್ಕ ಸತ್ತು ಹೋದ್ರಂತೆ” ಅನ್ನೋ ಉತ್ತರ ಬಂತು. ಕೈಯಲ್ಲಿದ್ದ ಮಾವಿನ ಬುಟ್ಟಿ ನೋಡಿದೆ, ಎಲ್ಲಾ ಹಣ್ಣುಗಳು ನನ್ನನ್ನೇ ನೋಡಿದಂತೆ ಭಾಸವಾಗಿ ಕೈ ನಡುಗಿತು.


.  2. ನಮ್ಮ ಮನೆಲಿ ಸಾಕಿದ ಕಪ್ಪು ನಾಯಿ ಎಂದಿನಂತೆ  ಸ್ಕೂಲ್ ಬಿಡೊ ವೆಳೆಗೆ ಅಂಗಡಿ ಬಾಗಿಲಲ್ಲಿ ಸಿಕ್ಕಿತು. ಎಂದಿನಂತೆ ಬಿಸ್ಕತ್ ತಗೊಂಡು ಸ್ವಲ್ಪ ನಾಯಿಗೆ ಹಾಕಿದೆ. ತಿಂದು  ಮೇಲಿನ ರಸ್ತೆಯಲ್ಲಿ ಓಡಿ ಹೋಯಿತು. ಮನೆಗೆ ಬರೋವಷ್ಟರಲ್ಲಿ ತೋಟದ ಪಕ್ಕದಲ್ಲಿ ಆಳು ಗುಂಡಿ ತೆಗಿತಾ ಇರೋದ್ ನೋಡಿ, “ಇಲ್ಲಿ ಯಾಕ್ ಗುಂಡಿ ತೋಡ್ತಾ ಇದ್ದೀರಾ ಅಂತ ಕೇಳಿದೆ. ಆಳು ಕಣ್ಣಲ್ಲಿ ನೀರು ತುಂಬಿ “ಏನ್ ಮಾಡೊದ್ ಅಮ್ಮಾ ನೀವ್ ಇವತ್ತು ಆ ಕಡೆ ಸ್ಕೂಲ್ಗೆ ಹೋಗಿದ್ದೆ ಹೋಗಿದ್ದು  ಇಲ್ಲಿ ಹಾಳಾದ್ ಯಾವುದೋ ಒಂದ್ ಹುಚ್ಚು ನಾಯಿ ಬಂದು ನಮ್ಮನೆ ನಾಯಿಗೆ ಕಚ್ಚಿ ಅದ್ರನ ಸಾಯ್ಸ್ ಬಿಡ್ತು.” ಅವ್ರು ಹೇಳಿದ ಮಾತಿಗೆ ಕೈ ನಲ್ಲಿ ಇದ್ದ ಮಿಕ್ಕ ಬುಸ್ಕತ್ ಕೈ ಜಾರಿ ಗುಂಡಿಗೆ ಬಿದ್ದು ಕಕ್ಕಾ ಬಿಕ್ಕಿಯಾಗಿ ನಿಂತೆ.

ಉದಯವಾಣಿ ಜೋಶ್ ಪುರವಣಿಗೆಗೆ ಬರೆದ ಲೇಖನ.