Wednesday, November 28, 2018

ಚುಮು ಚುಮು ಚಳಿಗೆ ಬಿಸಿ ಬಿಸಿ ಸಾರು


                                     ಚುಮು ಚುಮು ಚಳಿಗೆ ಬಿಸಿ ಬಿಸಿ ಸಾರು

ಚಳಿಗಾಲದಲ್ಲಿ ಬಿಸಿ ಬಿಸಿ ಆದ ಪದಾರ್ಥಗಳನ್ನು ತಿನ್ನೊ ಬಯಕೆ ಸಹಜ. ಅದರಲ್ಲೆ ದೇಹಕ್ಕೆ ಒಗ್ಗುವಂತಹದನ್ನು ಮಾಡಿದರೆ ಆರೋಗ್ಯಕ್ಕು ಒಳ್ಳೆಯದು.  ದೇಹದ ಉಷ್ಣಾಂಶ ಕಾಪಾಡುವಂತಹ ಮೆಣಸು, ಜೀರಿಗೆ, ಬೆಳ್ಳುಳ್ಳಿ ಉಪಯೋಗಿಸಿ ಸುಲಭವಾಗಿ ಮಾಡುವಂತಹ ಕೆಲವು ಸಾರುಗಳು ಇಲ್ಲಿವೆ.  
                                                         
ಜೀರಿಗೆ ಮೆಣಸು ಸಾರುಃ       
ಬೇಕಾಗುವ ಸಾಮಗ್ರಿಃ
ತೊಗರಿ ಬೇಳೆ ಕಾಲ್ ಕಪ್, ಟೊಮೆಟೊ 2, ಲಿಂಬು 1, ಕುತ್ತುಂಬರಿ ಸೊಪ್ಪು ಸ್ವಲ್ಪ, ಕರಿಬೇವು 8 ರಿಂದ 10 ಎಸಳು,  ರುಚಿಗೆ ಅನುಸಾರ ಬೆಲ್ಲ ಮತ್ತು ಉಪ್ಪು, ಮೆಣಸು ಮತ್ತು ಜೀರಿಗೆ 1 ಚಮಚ(ಎರಡು ಒಂದೆ ಅಳತೆಯಲ್ಲಿ ಇರಲಿ), ತುಪ್ಪ 1 ಚಮಚ, ಸಾಸಿವೆ 1 ಚಮಚ. ಅರಿಶಿಣ, ಇಂಗು.
ತಯಾರಿಸುವ ವಿಧಾನಃ
ಮೊದಲು ತೊಗರಿ ಬೇಳೆಯನ್ನು ತೊಳೆದು ಅದರ ಜೊತೆ ಟೊಮೆಟೊ ಕಟ್ ಮಾಡಿ ಕುಕ್ಕರಿನಲ್ಲಿ ಬೇಯಿಸಿ. ಇನ್ನೊಂದು ಪಾತ್ರೆ ಯಲ್ಲಿ ಮೆಣಸು ಮತ್ತು ಜೀರಿಗೆಯನ್ನು ಎಣ್ಣೆ ಹಾಕದೆ ಹಾಗೆ ಹುರಿದುಕೊಳ್ಳಿ. ಕೆಂಪಗಾಗಲಿ. ಈಗ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಈಗ ಕುಕ್ಕರಿನಲ್ಲಿ ಬೆಂದ ಬೇಳೆ ಮತ್ತು ಟೊಮೆಟೊವನ್ನು  ಸೌಟಿನಿಂದಲಿ ಚನ್ನಾಗಿ ಮಿಕ್ಸ   ಮಾಡಿಕೊಳ್ಳಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ. ಚನ್ನಾಗಿ ಕುದಿಸಿ. ಈಗ ಕುದಿಯುವಾಗ ಜೀರಿಗೆ-ಮೆಣಸಿನ ಪುಡಿ ಹಾಕಿ. ಕುತ್ತುಂಬರಿ ಸೊಪ್ಪು ಮತ್ತು ಕರಿಬೇವಿನ ಎಸಳು ಹಾಕಿ.   ಸ್ವಲ್ಪ ಕುದಿಸಿ ಸ್ಟೊವ್ ಆರಿಸಿ. ಈಗ ಒಗ್ಗರಣೆ ಸೌಟಿಗೆ ತುಪ್ಪ ಹಾಕಿ  ಇಂಗು ಸಾಸಿವೆ ಅರಿಶಿಣ ಹಾಕಿ ಒಗ್ಗರಣೆ ಕೊಡಿ. ಕೊನೆಯಲ್ಲಿ  ನಿಂಬು ರಸ ಹಾಕಿ.(ಇದು ಬೇಕಿದ್ದರೆ ಮಾತ್ರ, ಆದ್ರೆ ರುಚಿ ಚನ್ನಾಗಿ ಇರತ್ತೆ).
ಜೀರಿಗೆ-ಮೆಣಸು ಸಾರು ಜ್ವರ ಮತ್ತು ಶೀತ ಆದಾಗ ಬಾಯಿ ರುಚಿಗೆ ಮತ್ತು ದೇಹಕ್ಕೆ ಚನ್ನಾಗಿ ಇರತ್ತೆ. ಬಿಸಿ ಬಿಸಿ ಅನ್ನದ ಜೊತೆ ಈ ಸಾರನ್ನು ಸವಿಯಿರಿ.

ಹುರುಳಿ ಕಾಳು ಸಾರುಃ
ಬೇಕಾಗುವ ಸಾಮಗ್ರಿಃ
ಹುರುಳಿ ಕಾಳು 1 ಕಪ್, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಸಾಸಿವೆ, ಸ್ವಲ್ಪ ಅರಿಶಿಣ, 5 ರಿಂದ  6 ಎಸಳು ಬೆಳ್ಳುಳ್ಳಿ, 8 ರಿಂದ 10 ಎಸಳು ಕರಿಬೇವು, ಕುತ್ತುಂಬರಿ ಸೊಪ್ಪು ಸ್ವಲ್ಪ, ಹುಣಸೆ ರಸ ರುಚಿಗೆ ಅನುಸಾರ, ಅಚ್ಚ ಖಾರದ ಪುಡಿ ಖಾರಕ್ಕೆ ಅನುಸಾರವಾಗಿ, ಸಾರಿನ ಪುಡಿ 1 ಚಮಚ,  ಎಣ್ಣೆ,  ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ.
ತಯಾರಿಸುವ ವಿಧಾನಃ
ಮೊದಲು ಕುಕ್ಕರಿನಲ್ಲಿ ಹುರುಳಿ ಕಾಳನ್ನು ಬೇಯಿಸಲು ಇಡಿ.ಇದು ಬೆಯಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುವುದು. 5 ರಿಂದ 6 ಸೀಟಿ ಕೂಗಿಸಿ. ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಇದು ಬಿಸಿ ಆದ ಮೇಲೆ ಸಾಸಿವೆ ಜೀರಿಗೆ ಹಾಕಿ. ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ. ಇದು ಸ್ವಲ್ಪ ಪ್ರೈ ಆಗಲಿ. ಈಗ ಕರಿಬೇವು ಅಚ್ಚ ಖಾರದ ಪುಡಿ ಮತ್ತು ಸಾರಿನ ಪುಡಿ ಎಲ್ಲಾ ಹಾಕಿ. ಮೊದಲೆ ಬೇಯಿಸಿದ ಹುರುಳಿ ಕಾಳಿನ ನೀರನ್ನು ಮಾತ್ರ ಹಾಕಿ. (ಹುರುಳಿ ಕಾಳು ಮತ್ತು ನೀರನ್ನು ಬೇರೆ ಮಾಡಿ) ನಿಮಗೆ ಹುರುಳಿ ಕಾಳಿನ ಸಾರು ಸ್ವಲ್ಪ ಗಟ್ಟಿ ಬೇಕಿದ್ದರೆ ಬೆಂದ ಹುರುಳಿ ಕಾಳನ್ನು ಸ್ವಲ್ಪ ಮಿಕ್ಸಿನಲ್ಲಿ ರಬ್ಬಿ ಹಾಕಿ. ಈಗ ಹುಣಸೆ ರಸ, ಉಪ್ಪು, ಬೆಲ್ಲ ಎಲ್ಲ ಹಾಕಿ ಚನ್ನಾಗಿ ಕುದಿಸಿ. 
ಕೊನೆಯಲ್ಲಿ ಕುತ್ತುಂಬರಿ ಸೊಪ್ಪು ಕಾಕಿ ಒಂದೆರಡು ನಿಮಿಷ ಕುದಿಸಿದರೆ ಹುರುಳಿ ಕಾಳಿನ ಸಾರು ರೆಡಿ.

ಹುಣಸೆ ಸಾರುಃ
ಬೇಕಾಗುವ ಸಾಮಗ್ರಿಃ
ಒಂದು ನಿಂಬೆ ಗಾತ್ರದ ಹುಣಸೆ ಹಣ್ಣು, ಸಮ ಪ್ರಮಾಣ ಬೆಲ್ಲ, ಅಚ್ಚ ಖಾರದ ಪುಡಿ,  1 ಚಮಚ ತುಪ್ಪ, 1 ಚಮಚ ಜೀರಿಗೆ, ಅರ್ಧ ಚಮಚ ಸಾಸಿವೆ, 5 ರಿಂದ 6 ಎಸಳು ಕರಿಬೇವು, ಕುತ್ತುಂಬರಿ ಸೊಪ್ಪು, ಉಪ್ಪು, ಚಿಟಿಕೆ ಇಂಗು, ಎಣ್ಣೆ,
ತಯಾರಿಸುವ ವಿಧಾನಃ
ಮೊದಲು ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ಚನ್ನಾಗಿ ರಸ ತೆಗೆಯಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ  ಇದಕ್ಕೆ ಸಾಸಿವೆ, ಜೀರಿಗೆ, ಇಂಗು,ಒಂದೊಂದೆ ಹಾಕಿ ಮೀಡಿಯಂ ಉರಿಯಲ್ಲಿ ಪ್ರೈ ಮಾಡಿ. ಈಗ ಖಾರಕ್ಕೆ ಅನುಸಾರ ಅಚ್ಚ ಖಾರದ ಪುಡಿ ಹಾಕಿ. ಈಗ ಅರ್ಧ ಕಪ್ ನೀರು ಹಾಕಿ. ಈಗ ಇದು ಕುದಿಯಲು ಬರುವಾಗ ಹುಣಸೆ ರಸ ಹಾಕಿ. ನಂತರ ಬೆಲ್ಲ ಇದು ಅವರವರ ರುಚಿಗೆ ಅನುಸಾರ. ಇದು ಕುದಿಯುತ್ತಿರುವಾಗ ಕುತ್ತುಂಬರಿ ಸೊಪ್ಪು ಹಾಕಿ.
ಹುಣಸೆ ಸಾರು ಅನ್ನದ ಜೊತೆನು ಚನ್ನಾಗಿ ಇರತ್ತೆ. ಹಾಗೆ ಇದನ್ನು ಸೂಪ್ ತರ ಕುಡಿಯಬಹುದು.

ತೊಗರಿ ಬೇಳೆ ಸಾರುಃ     
ಬೇಕಾಗುವ ಸಾಮಗ್ರಿಃ
ತೊಗರಿ ಬೇಳೆ ಅರ್ಧ ಕಪ್, 2 ಟೊಮೆಟೊ, ಎಣ್ಣೆ 1 ಚಮಚ, ಅರಿಶಿಣ ಚಿಟಿಕೆ, ಸಾರಿನ ಪುಡಿ 1 ಚಮಚ, ಉಪ್ಪು ಬೆಲ್ಲ ರುಚಿಗೆ ತಕ್ಕಷ್ಟು, ಹುಣಸೆ ಹಣ್ಣಿನ ರಸ 2 ಚಮಚ, ಕರಿಬೇವು 5 ರಿಂದ 6 ಎಸಳು, ಕೊತ್ತುಂಬರಿ ಸೊಪ್ಪು, ಅರ್ಧ ನಿಂಬೆ ಹಣ್ಣು, ತುಪ್ಪ 1 ಚಮಚ, ಜೀರಿಗೆ ಅರ್ಧ ಚಮಚ, ಸಾಸಿವೆ ಅರ್ಧ ಚಮಚ, ಚಿಟಿಕೆ ಇಂಗು,
ತಯಾರಿಸುವ ವಿಧಾನಃ
ಮೊದಲು ತೊಗರಿ ಬೇಳೆ ಮತ್ತು ಟೊಮೆಟೊ ವನ್ನು ಬೇಯಿಸಿಕೊಳ್ಳಿ. ಟೊಮೆಟೊವನ್ನು ಚನ್ನಾಗಿ ಕಿವುಚಿಕೊಂಡು ಬೇಳೆ ಜೊತೆ ಚನ್ನಾಗಿ ಮಿಕ್ಸ್ ಆಗಲಿ. ಈಗ ಇದನ್ನು ಮೀಡಿಯಂ ಉರಿಯಲ್ಲಿ ಇಡಿ. ನಂತರ ಹುಣಸೆ ರಸ, ಬೆಲ್ಲ,ಉಪ್ಪು, ಕರಿಬೇವು,ಸಾರಿನ ಪುಡಿ, ಎಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಈಗ ಕುತ್ತುಂಬರಿ ಸೊಪ್ಪು ಹಾಕಿ. ಒಲೆಯಿಂದ  ಇಳಿಸಿ. ಈಗ  ಸ್ವಲ್ಪ ನಿಂಬೆ ರಸ ಹಾಕಿ. ಇದು ಸಾರಿನ ರುಚಿ ಹೆಚ್ಚಿಸುತ್ತದೆ. ಈಗ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ  ಸ್ವಲ್ಪ ಇಂಗು ಹಾಕಿ, ನಂತರ ಸಾಸಿವೆ ಸಿಡಿದ ಮೇಲೆ  ಸಾರಿಗೆ ಹಾಕಿ.  ಬಿಸಿ ಅನ್ನದ ಜೊತೆ ಸವಿಯಿರಿ.

No comments: