Monday, September 23, 2019

ಸತ್ಯವಂತ ಕುಂಕ್ರಿ


                                              ಸತ್ಯವಂತ ಕುಂಕ್ರಿ
     
ಕುಂಕ್ರಿಯ ಅಮ್ಮನಿಗೆ ಇಂದು ರಜಾ ಇರೋ ಕಾರಣ ಎಲ್ಲಾದರು ಆಚೆ ಹೋಗಬೇಕು ಮತ್ತು ಆಚೆ ಊಟ ಮಾಡಿ ಬರಬೇಕು ಅನ್ನೋ ಹಂಬಲ ಇತ್ತು. ತನ್ನ ಈ ಬೇಡಿಕೆಯನ್ನು ಗಂಡನ ಮುಂದೆ ಇಟ್ಟಳು. “ನೋಡ್ರಿ ಹೇಗು ಇಂದು ಫ್ರೀ ಆಗಿದ್ದೀರಾ ಎಲ್ಲಾದರು ಆಚೆ ಹೋಗಿ ಬರೋಣ. ನನಗೂ ನನ್ನದೆ ಕೈ ಅಡಿಗೆ ತಿಂದು ನಾಲಿಗೆ ಕೆಟ್ಟು ಹೋಗಿದೆ. “ ಎಂದಳು.   ಹೆಂಡತಿಯ ಮಾತಿಗೆ ಗಂಡ ಸರಿ ಎಂದ. ತುಂಬಾ ದಿನ ಆಯಿತು ಕುಂಕ್ರಿಯನ್ನು ಆಚೆ ಕರೆದುಕೊಂಡು ಹೋಗದೆ ನೀವೆ ಎಲ್ಲಿ ಎಂದು ತಿರ್ಮಾನಿಸಿ ಎಂದು ಹೇಳಿದ. ಅಷ್ಟರಲ್ಲೆ ಅಲ್ಲೆ ಆಡ್ತಾ ಇರೋ ಕುಂಕ್ರಿ ಓಡಿ ಬಂದು ಹೇಳಿದಳು, “ಅಮ್ಮಾ ನಿಮ್ಗೆ ಮರ್ತೊಗಿದಿಯಾ ಇವತ್ತು ಚಿರು ಚಿಕ್ಕಪ್ಪನ ಮನೆಯಲ್ಲಿ ತನ್ಮಯ್ ಹುಟ್ಟುಹಬ್ಬ. ಸಂಜೆ ಬನ್ನಿ ಅಂತ ಕರೆದು ಹೋಗಿದ್ದು ನಿಮ್ಗೆ ನೆನಪಿಲ್ವಾ” ಅಂತ ಹೋಗುವ ಉತ್ಸಾಹದಲ್ಲಿ  ಹೇಳಿದಳು. ಆಗ ಕುಂಕ್ರಿಯ ಅಪ್ಪ ಖುಷಿಯಲ್ಲಿ, “ಹೌದಲ್ಲೆ ಕುಂಕ್ರಿ ನನ್ಗೆ ಮತ್ತು  ನಿನ್ನ ಅಮ್ಮನಿಗೆ ಮರೆತೆ ಹೋಗಿತ್ತು. ಜಾಣ ಮರಿ ನೆನ್ಪ್ ಮಾಡ್ದೆ. “ ಅಂತ ಮಗಳನ್ನು ಮುದ್ದಿಸಿದರು. ಕುಂಕ್ರಿಗು ಖುಶಿ. ಚಿರು ಚಿಕ್ಕಪ್ಪನ ಮನೆಗೆ ಹೋಗೊದು ಮತ್ತು ತನ್ಮಯ್ ಜೊತೆ ಆಟ ಆಡೊದು ಅಂದ್ರೆ. ಆದ್ರೆ ಕುಂಕ್ರಿಯ ಅಮ್ಮ ಒಂದೆ ಸಲ ಸಿಡಿಮಿಡಿಗೊಂಡು, “ನೋಡ್ರಿ ನನ್ಗೆ ನೆನ್ಪ್ ಇತ್ತು. ಅಲ್ಲಿಗೆ ಹೋಗೋದ್ ಬೇಡ ಅಂತಾನೆ ನಾನು ಆಚೆ ಹೋಗೋ ಪ್ಲಾನ್ ಮಾಡಿದ್ದು. ನನ್ಗೆ ಅಲ್ಲಿಗೆ ಹೋಗೋ ಮನಸ್ಸಿಲ್ಲ. ನೀವೋ ಚಿರುನ ಜೊತೆ ಹರಟೆ ಹೊಡೆಯುತ್ತ ಕುಳಿತಿರ್ತಿರಾ. ಇನ್ನು ಕುಂಕ್ರಿಗೆ ಆ ತನ್ಮಯ್ ಇದ್ರೆ ಅವರದ್ದೆ ಜಗತ್ತು. ನಾನ್ ಮಾತ್ರ ಆ ಶೋ ಅಪ್ ರಾಣಿ ಹತ್ತಿರ ಸಿಕ್ಕ್ ಹಾಕ್ಕೊಳ್ ಬೇಕು. ತಾನೊಂದು ಬೇಕಿಂಗ್ ಮಾಡ್ತಾ ಇದ್ದೀನಿ ಅಂತ ಜಗತ್ತೆ ಕಡಿದ ಹಾಗೆ ಮಾತಾಡ್ತಾಳೆ.  ನಿಮ್ಗೆ ಗೊತ್ತಿಲ್ಲ. ಇವತ್ತು ಹುಟ್ಟುಹಬ್ಬಕ್ಕೆ ಅವಳು ಯಾವುದೋ ಕೇಕ್ ಮಾಡ್ತಾಳಂತೆ. ಅದ್ರನ್ನ ನಮ್ಮ ಮುಂದೆ ತೋರ್ಸಕೊಳ್ಳೋಕೆ ಕರೆದದ್ದು.  ಇಗ್ಲೆ ವಾಟ್ಸ ಅಪ್ ಸ್ಟೇಟಸ್ ನಲ್ಲಿ ಹಾಕ್ತಾ ಇದ್ದಾಳೆ. ಇನ್ನು ಮುಗಿದ ಮೇಲೆ ಏನ್ ಚಂದನೋ” ಅಂತ ಒಂದೆ ಸಮನೆ ಹೊಟ್ಟೆಲಿ ಇರೋದನ್ನ ಗಂಡ ನ ಮುಂದೆ ಹೇಳಿದಳು.
ಆದರೆ ಕುಂಕ್ರಿಯ ಅಪ್ಪನಿಗೆ ಚಿರು ನ ಮನೆಗೆ ಹೋಗೋಕೆ ಮನಸ್ಸು. ಕುಂಕ್ರಿಯು ಹೋಗೋಣ ಅಂತ ಹಠ ಹಿಡಿದಳು. ಕುಂಕ್ರಿಯ ಅಮ್ಮ ಮಗಳಿಗೆ ಡ್ಯಾಶಿಂಗ್ ಕಾರ್ ಆಡುವ ಆಸೆ ತಲೆಗೆ ತುಂಬಿದಳು. ಅದು ಅಲ್ಲದೆ ಚಿಕ್ಕಮ್ಮ ಮಾಡುವ ಕೇಕ್ ಕಿಂತ ಇನ್ನು ಒಳ್ಳೋಳ್ಲೆ ಕೇಕ್ ಮತ್ತು ಅದರ ಜೊತೆ ಐಸ್ ಕ್ರೀಮ್ ಕೊಡಿಸುವ ಪ್ರೋಮಿಸ್ ಮಾಡಿ ಕುಂಕ್ರಿಯನ್ನು ತಕ್ಕ ಮಟ್ಟಿಗೆ ಒಪ್ಪಿಸಿದಳು. ಆದರೆ ಕುಂಕ್ರಿಯ ಅಪ್ಪನಿಗೆ ಬರದೆ ಇರೋದಕ್ಕೆ ಕಾರಣ ಹೇಳುವ ಚಿಂತೆ ಆಗಿತ್ತು. ಅದಕ್ಕು ಕುಂಕ್ರಿಯ ಅಮ್ಮ ಉಪಾಯ ಹೂಡಿದಳು. ತನ್ನ ಸರು ಅತ್ತೆ ಮನೆ ಪೂಜೆಗೆ ಹೋಗಿದ್ವಿ. ಬರೋದು ಲೇಟ್ ಆಯಿತು ಅಂತ ಪ್ಲಾನ್ ಮಾಡಿದಳು. ಅಂತು ಹೆಂಡತಿಯ ಮಾತಿಗೆ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ.
ಇದಾದ ಮೂರು-ನಾಲ್ಕು ದಿನಕ್ಕೆ ಚಿರು ನ ಪ್ಯಾಮಿಲಿ ಕುಂಕ್ರಿ ಮನೆಗೆ ಬಂದರು. ಹುಟ್ಟುಹಬ್ಬದ ದಿನ ನಿಮ್ಮನ್ನ ತುಂಬಾ ಹೊತ್ತು ವೇಟ್ ಮಾಡ್ದವಿ. ಯಾಕ ಬಂದಿಲ್ಲ ಅಂತ ಕೇಳಿದರು. ಮೊದಲೆ ಪ್ಲಾನ್ ಮಾಡಿದಂತೆ  ತನ್ನ ಅತ್ತೆ ಮನೆಲಿ ಪೂಜೆ ಇತ್ತು. ಬರೋದು ಲೇಟ್ ಆಯಿತು ಅಂತ ಹೇಳಿದಳು. ಆಗ ಅಷ್ಟರಲ್ಲೆ ಕುಂಕ್ರಿ “ಇಲ್ಲ ಚಿಕ್ಕಮ್ಮ, ನಾವ್ ಆ ದಿನ ಮಂತ್ರಿ ಮಾಲ್ ಗೆ ಹೋಗಿ  ಡ್ಯಾಶಿಂಗ್ ಕಾರ್ ಆಡಿ, ಅಲ್ಲೆ ಕೇಕ್,ಐಸ್ ಕ್ರೀಮ್ ಎಲ್ಲಾ ತಿಂದ್ ಬಂದ್ವಿ.” ಅಂತ ಹೇಳಿದಳು. ತಕ್ಷಣವೆ  ಕುಂಕ್ರಿಯ ಅಮ್ಮ ಮಗಳ ಮಾತನ್ನು ಮರೆ ಮಾಚುವಂತೆ, ಕುಂಕ್ರಿಗೆ ಯಾವಾಗ ಹೇಳಿ ಮರೆತು ಹೋಗಿದೆ. ‘ ಏಯ್, ನಾವ್ ಅಲ್ಲಿಗೆ ಹೋಗಿದ್ದು ಹಿಂದಿನ ವಾರ. ಮೊನ್ನೆ ಸರು ಅಜ್ಜಿ ಮನೆ ಪೂಜೆಗೆ ಹೋಗಿದ್ದು”  ಅಂತ ಸ್ವಲ್ಪ ಕಣ್ಣು ಬಿಟ್ಟು ಹೇಳಿದಳು. ಆದ್ರೆ ಇದರ ಲಕ್ಷವೆ ಇಲ್ಲದೆ ಕುಂಕ್ರಿ ಇಲ್ಲಮ್ಮ, ಹುಟ್ಟು ಹಬ್ಬದ ದಿನ ಹೋಗಿದ್ದು ಮಂತ್ರಿ ಮಾಲ್ ಗೆ. ಆ ಶೋ ಅಪ್ ರಾಣಿ ಮಾಡೋ ಲಡ್ಕಾಸಿ ಕೇಕ್ ತಿನ್ನೊದ್ ಬೇಡ, ನಿನಗೆ ಒಳ್ಳೊಳ್ಳೆ ಕೇಕ್, ಐಸ್ಕ್ರೀಮ್ ಕೊಡ್ಸತ್ತೀನಿ ಮತ್ತು ಡ್ಯಾಶಿಂಗ್ ಕಾರ್ ಆಡೋಣ ಅಂತ ಹೇಳಿದ್ದು. ಅಪ್ಪ ಹೋಗೋಣ ಅಂದ್ರೆ ನೀನೆ ಅಪ್ಪನ ಹತ್ತಿರ ಬೇಡ ಹೇಳಿ ಮಂತ್ರಿ ಮಾಲ್ ಗೆ ಕರೆದುಕೊಂಡು ಹೋದೆ” ಅಂತ ಇದ್ದ ಸತ್ಯವನ್ನು ಒಂದೆ ಉಸಿರಲ್ಲಿ ಹೇಳಿದಳು. ಸತ್ಯವಂತ ಕುಂಕ್ರಿಯ ನೋಡಿ ಕುಂಕ್ರಿಯ ಅಮ್ಮನ ಮುಖ ಪೆಚ್ಚಾಯಿತು.

Thursday, September 5, 2019

ಅಥಿತಿ ದೇವೋ(ವ್ವ) ಭವ


                                           ಅಥಿತಿ ದೇವೋ(ವ್ವ) ಭವ

ಶಾಲಿನಿಯ ಇನ್ನೊಂದು ಹೆಸರೆ ಪ್ರೈಸ್ ಲಿಸ್ಟ್. ಯಾವಾಗಲು ಮಾತಾಡುವಾಗ ಎಲ್ಲದರ ಪ್ರೈಸ್ ಬಗ್ಗೆನೆ ಮಾತಾಡುವುದು. ತರಕಾರಿ ಎಷ್ಟು ದುಬಾರಿ ಆದರು ತರಕಾರಿ ಇಲ್ಲದೆ ಅಡುಗೆ ಮಾಡಲು ಆಗುವುದಿಲ್ಲ. ಏನ್ ಮಾಡ್ಬೇಕು ಅಂತ ತಿಳಿಯಲ್ಲ. ಊಟ ಮಾಡದೆ ಇರೋಕ್ ಆಗಲ್ಲ. ಹೀಗೆ ಯಾವಾಗಲು ಈ ವಿಷಯದ ಬಗ್ಗೆನೆ ಮಾತಾಡುತ್ತಿದ್ದಳು.
ಮನೆಗೆ ಹೋದರೆ ತುಂಬಾ ಆತ್ಮಿಯವಾಗಿ ಮಾತಾಡುವವಳು. ಆದರೆ ಟೀ ಕುಡಿಯುವಾಗ, “ಅಯ್ಯೊ, ಹಾಲಿನ ರೆಟ್ ಎಷ್ಟು ಜಾಸ್ತಿ ಆಗಿದೆ. ದಿನ ಎರಡು ಲೀಟರ್ ಹಾಲು ತಗೊಳ್ತಿನಿ. ಯಾರಾದ್ರು ಬಂದ್ರೆ ಎಕ್ಸಟ್ರಾ ಟೀ ಮಾಡ್ಬೇಕು. ಮರುದಿನ ಮಜ್ಜಿಗೆಗೆ ಮಾಡಲು ಹಾಲಿರಲ್ಲ”. ಅಂತ ನಿರಾಳವಾಗಿ ಹೇಳುವವಳು. ಅದು ಅವಳ ಸ್ವಾಭಾವಿಕ ಸ್ವಭಾವವೋ  ಏನೋ ಇನ್ನು ಯಾರಿಗು ಅರ್ಥ ಆಗಿಲ್ಲ.
ಮನೆಗೆ ನೆಂಟರು ಬಂದರೆ ಇಷ್ಟ. ಹರಟೆ ಹೊಡೆಯುವುದು ಮತ್ತು ಹೊಸ ಹೊಸ ರೀತಿಯ ತಿಂಡಿ ಮಾಡುವುದು ಅಂದರೆ ಬಹಳ ಪ್ರೀತಿ. ಆದರೆ ನೆಂಟರಲ್ಲಿ ಎರಡು ವಿಭಾಗಗಳು. ಅಮ್ಮನ ಮನೆಯ ಕಡೆ ನೆಂಟರು ಬಂದರೆ ಸುಮಾರಿಗೆ ಓ.ಕೆ..ಓ.ಕೆ. ಇನ್ನು ಗಂಡನ ಮನೆಯ ಕಡೆ ನೆಂಟರು ಬಂದರೆ ಆ ದೇವರೆ ಗತಿ.
ಒಮ್ಮೆ ಗಂಡನ ಮಾವನ ಮಗ ಬಂದ. ಅವನಿಗೆ ಬೆಂಗಳೂರಲ್ಲೆ ಕೆಲಸ ದೊರಕಿತು. ಕಂಪನಿ ಹತ್ತಿರ ಪಿ.ಜಿ. ಹುಡುಕುವ ತನಕ ಶಾಲಿನಿಯ ಮನೆಯೆ ಗತಿ ಆಯಿತು. ಹೇಳಿ-ಕೇಳಿ ಗಂಡನ ಕಡೆಯ ಸಂಭಂದಿ. ಅದು ಆತ ಬಂದಿರುವುದು ಎಪ್ರಿಲ್ ತಿಂಗಳಲ್ಲಿ. ಆಗ ತರಕಾರಿ ದರ ಸ್ವಲ್ಪ ದುಬಾರಿ. ಈ ಶಾಲಿನಿಯ ತಲೆ ಕೆಟ್ಟು ಚಿತ್ರಾನ್ನ ವಾಯಿತು. ಅದಕ್ಕಾಗಿ ಆತ ಹೋಗುವ ತನಕ ಒಂದು ಒಳ್ಳೆ ಉಪಾಯ ಹುಡಿದಳು. ಆತ ಹೋಗುವ ತನಕ ದಾಲ್, ಕಿಚಡಿ, ತಿಳಿ ಸಾರು….ಹೀಗೆ ಅವಳ ಮನೆ ಅಡಿಗೆ ಶುರುವಾಯಿತು. ಇದು ಬರಿ ತರಕಾರಿ ದುಬಾರಿ ಪ್ರಶ್ನೆ ಅಲ್ಲ. ಆತ ಇನ್ನು ಮುಂದೆ ಬೆಂಗಳೂರಲ್ಲೆ ಇರುತ್ತಾನೆ. ನಾನು ಚನ್ನಾಗಿ ಅಡುಗೆ ಮಾಡಿ ಹಾಕಿದರೆ ಪದೇ ಪದೇ ನಮ್ಮ ಮನೆಗೆ ಬರುವ ಸಂಭವ ಜಾಸ್ತಿ. ಆದ ಕಾರಣ ಆತನನ್ನು ಅಷ್ಟು ಚನ್ನಾಗಿ ವಿಚಾರಿಸಿಕೊಳ್ಳುತ್ತಿಲ್ಲ. ಇನ್ನು ಬೇರೆ ಊರು ಅಪರೂಪಕ್ಕೆ ಬಂದು ಹೋಗುವದಾದರೆ ಬೇರೆ ಪ್ರಶ್ನೆ ಎಂದು ಅವಳ ಅಗಾಧ ಬುದ್ದಿ ಮಟ್ಟವನ್ನು ಅವಳ ಗೆಳತಿಯರಲ್ಲಿ ಹೇಳಿಕೊಂಡಳು.


Tuesday, September 3, 2019

ಕುಂಕ್ರಿಯ ಶಾಪಿಂಗ್


                                           ಕುಂಕ್ರಿಯ ಶಾಪಿಂಗ್
ಈ ಸುಪರ್ ಮಾರ್ಕೆಟ್ ಬಂದ್ ಮೇಲೆ ಶಾಪಿಂಗ್ ಹೋಗೋದು ದೊಡ್ಡ ತಲೆನೋವೆ. ಬೇಕಾಗಿರೋದು ನಾಲ್ಕು ಐಟಮ್ ಆದರೆ ತೆಗೆದುಕೊಳ್ಳೊದು ಎಂಟ್ ಐಟಮ್. ಗಂಡನ ಜೇಬಿಗೆ ಕತ್ತರಿಯಂತು ಗ್ಯಾರಂಟಿ. ಅದು ಅಲ್ಲದೆ ಒಂದು ತೆಗೆದುಕೊಂಡರೆ ಒಂದು ಪ್ರೀ, ಡಿಸ್ಕೌಂಟ್ ಸೇಲ್, ಎಲ್ಲಾ ಕಣ್ಣಿಗೆ ಬಿದ್ದರೆ ಹೆಂಗಳೆಯರ ಮನಸ್ಸು ಆ ಕಡೆ ವಾಲುವುದರಲ್ಲಿ ಸಂಶಯವಿಲ್ಲ.
ಒಮ್ಮೆ ಕುಂಕ್ರಿ ಮತ್ತು ಕುಂಕ್ರಿಯ ಅಮ್ಮ  ಡಿ- ಮಾರ್ಟ ಗೆ ಹೊರಟರು. ಹೊರಡುವಾಗಲೆ ಕುಂಕ್ರಿಯ ಅಪ್ಪ ಹೇಳಿದರು, “ ಸುಮ್ಮನೆ ಇರೋದ್-ಬರೋದ್ ಎಲ್ಲಾ ನಿಮ್ಮ ತಳ್ಳೊ ಗಾಡಿಗೆ ತುಂಬಿಸ ಬೇಡಿ. ಡಿಸ್ಕೌಂಟ್, ಪ್ರೀ ಎಲ್ಲಾ ಮುನ್ನೂರ ಅರವತ್ತು ದಿನವು ಇರುತ್ತದೆ. ಬೇಕಾಗಿದ್ದು ತನ್ನಿ ಆಮೇಲೆ ಮನೆ ಶಿಫ್ಟ ಮಾಡ್ಬೇಕಿದ್ರೆ ಒದ್ದಾಡೋದು ಬೇಡ” ಅಂತ ಹೇಳಿದರು. ಇದು ಕುಂಕ್ರಿಯ ಅಮ್ಮನಿಗೆ ಮಾಮುಲ್ ಆಗಿತ್ತು. ಸರಿ ಅಂತ ಹೇಳಿ  ಕುಂಕ್ರಿ ಮತ್ತು  ಅಮ್ಮ  ಡಿ-ಮಾರ್ಟಗೆ ಬಂದರು. ಯಥಾ ಪ್ರಕಾರ ತಳ್ಳೊ ಗಾಡಿ ತಗೆದುಕೊಂಡು ಒಂದು ರೌಂಡ್ ಹಾಕಿದ್ದೆ ಎಲ್ಲಿ ನೋಡಿದರು ಡಿಸ್ಕೌಂಟ್ ಸೇಲ್ ಮತ್ತು ಕಣ್ಣಿಗೆ ಕುಕ್ಕುವಂತ ಕಿಚನ್ ಐಟಮ್ ಗಳು. ಬೇಡ-ಬೇಡವೆಂದರು ಗಾಡಿಗೆ ಕೆಲವು ಐಟಮ್ ಗಳು ಬಿದ್ದವು.
ಕುಂಕ್ರಿ ತನ್ನ ಪಾಡಿಗೆ ಯಾವುದೊ ಪೆನ್ನು,ಕಲರ್ ಪೆನ್ಸಿಲ್ ನೋಡುವುದರಲ್ಲಿ ಇದ್ದಳು. ಎಲ್ಲಾ ಐಟಮ್ ತೆಗೆದುಕೊಂಡು ಬಿಲ್ಲಿಂಗ್ ಕೌಂಟರ್ ಗೆ ಬಂದಾಗ ಕುಂಕ್ರಿ ಅಮ್ಮ ತೆಗೆದುಕೊಂಡ ಬಕೆಟ್ ಕೆಲವು ಡಬ್ಬಗಳನ್ನು ನೋಡಿದಳು. ಆಗ ಅಮ್ಮನಲ್ಲಿ ಪ್ರಶ್ನಿಸಿದಳು, “ಯಾಕಮ್ಮ ನಮ್ಮನೆಲಿ ಬಕೆಟ್ ಮತ್ತು ಡಬ್ಬಗಳೆಲ್ಲ ಇವೆ. ಆದ್ರು ಯಾಕೆ ತಗೊಂಡೆ” ಅಂತ ಕೇಳಿದಳು. ಆಗ ಅಮ್ಮ, “ಸುಮ್ಮನಿರು ನಿಮ್ಮ ಅಪ್ಪನ ತರನೆ ಆಡಬೇಡ. ಬಕೆಟ್ ಎಲ್ಲಾ ಕಳೆತಾಗಿವೆ. ಇನ್ನು ಡಬ್ಬಗಳು ಗೌರಿ ಹಬ್ಬದ ಸಮಯದಲ್ಲಿ ಎಷ್ಟೇಲ್ಲಾ ತಿಂಡಿ ಮಾಡ್ತೀವಿ. ಆಗ  ಎಷ್ಟಿದ್ದರು ಡಬ್ಬಗಳು ಬೇಕೆ ಬೇಕು. ಅದು ಅಲ್ಲದೆ ಒಳ್ಳೆ ಸೇಲ್ ಇದೆ. ನೀನು ಸುಮ್ಮನಿರು. ಇದೆಲ್ಲಾ ನಿನ್ನ ಅಪ್ಪ ನ ಹತ್ತಿರ ಹೇಳೊಕ್ ಹೋಗ್ಬೇಡ” ಅಂತ ಹೇಳಿದರು. ಆಗ ಕುಂಕ್ರಿ ಅಮ್ಮನನ್ನೆ ಪ್ರಶ್ನಿಸಿದಳು, “ಎನಮ್ಮ ನನ್ನ ಹತ್ತಿರ ಹೈಡ್ ಮಾಡಬೇಡ ಏನಿದ್ದರು ಅಪ್ಪ-ಅಮ್ಮನ ಹತ್ತಿರ ಹೇಳು ಅಂತ ಹೇಳ್ತಿಯಾ? ಈಗ ನೀನೆ ನನ್ನ ಹತ್ತಿರ ಅಪ್ಪನ ಹತ್ತಿರ ಹೇಳಬೇಡ ಅಂತ ಹೇಳ್ತಿಯಾ? ಇದು ಸರಿನಾ? ನೀನು ಯಾವಾಗಲು  ಅಪ್ಪ ಹೇಳಿದ್ದನ್ನು ಕೇಳು ಅಂತ ಹೇಳಿ ನೀನೆ ಅಪ್ಪ ಹೇಳಿದ್ದು ಕೇಳದೆ ಎಲ್ಲಾ ತಗೊಳ್ತಾ ಇದೀಯಾ?” ಅಂತ ಹೇಳಿದಳು. ಮಗಳ ಮಾತಿಗೆ ಕುಂಕ್ರಿಯ ಅಮ್ಮ ಪೆಚ್ಚಾದಳು. ಮಕ್ಕಳಿಗೆ ಅಡ್ವೈಸ್ ಮಾಡೋದು ಸುಲಭ ಆದರೆ ನಾವ್ ಪಾಲಿಸೋದು ಕಷ್ಟ ಅಂತ ಅಂದುಕೊಂಡಳು. ಅವಳು ಯೋಚಿಸುತ್ತಿರವಾಗ ಕುಂಕ್ರಿ  ಗಾಡಿಯಲ್ಲಿ ಇದ್ದ ಬಕೆಟ್ ಮತ್ತು ಡಬ್ಬಗಳನ್ನೆಲ್ಲ ಅಲ್ಲೆ ಆಚೆ ತೆಗೆದಿಟ್ಟು ಬಂದಳು. ಹಾಗೆ ಬಿಲ್ ಕೌಂಟರ್ ಗೆ ಬಂದು ಹೇಳಿದಳು,” ಅಮ್ಮ ಅಪ್ಪ ಹೇಳಿದ ಹಾಗೆ ಬೇಕಾಗಿದ್ದಷ್ಟೆ ಇದೆ. ಈ ಸೇಲ್ ಯಾವಾಗಲು ಇರತ್ತೆ. ನಾನು ಸ್ಕೂಲ್ ಗೆ ಹೋಗುವಾಗ ಯಾವಾಗಲು ಬೋರ್ಡ್ ನೋಡ್ತಾ ಇರ್ತೀನಿ. ಬೇಕಾದಾಗ  ಪುನಃ ಇಲ್ಲಿಗೆ ಬಂದರಾಯಿತು” ಅಂತ ಹೇಳಿದಳು. ಕುಂಕ್ರಿಯ ಮಾತಿಗೆ ಮರು ಮಾತಾಡದೆ ತೆಪ್ಪಗೆ ಬಿಲ್ ಮಾಡಿಸಿದಳು ಕುಂಕ್ರಿಯ ಅಮ್ಮ.