Thursday, September 5, 2019

ಅಥಿತಿ ದೇವೋ(ವ್ವ) ಭವ


                                           ಅಥಿತಿ ದೇವೋ(ವ್ವ) ಭವ

ಶಾಲಿನಿಯ ಇನ್ನೊಂದು ಹೆಸರೆ ಪ್ರೈಸ್ ಲಿಸ್ಟ್. ಯಾವಾಗಲು ಮಾತಾಡುವಾಗ ಎಲ್ಲದರ ಪ್ರೈಸ್ ಬಗ್ಗೆನೆ ಮಾತಾಡುವುದು. ತರಕಾರಿ ಎಷ್ಟು ದುಬಾರಿ ಆದರು ತರಕಾರಿ ಇಲ್ಲದೆ ಅಡುಗೆ ಮಾಡಲು ಆಗುವುದಿಲ್ಲ. ಏನ್ ಮಾಡ್ಬೇಕು ಅಂತ ತಿಳಿಯಲ್ಲ. ಊಟ ಮಾಡದೆ ಇರೋಕ್ ಆಗಲ್ಲ. ಹೀಗೆ ಯಾವಾಗಲು ಈ ವಿಷಯದ ಬಗ್ಗೆನೆ ಮಾತಾಡುತ್ತಿದ್ದಳು.
ಮನೆಗೆ ಹೋದರೆ ತುಂಬಾ ಆತ್ಮಿಯವಾಗಿ ಮಾತಾಡುವವಳು. ಆದರೆ ಟೀ ಕುಡಿಯುವಾಗ, “ಅಯ್ಯೊ, ಹಾಲಿನ ರೆಟ್ ಎಷ್ಟು ಜಾಸ್ತಿ ಆಗಿದೆ. ದಿನ ಎರಡು ಲೀಟರ್ ಹಾಲು ತಗೊಳ್ತಿನಿ. ಯಾರಾದ್ರು ಬಂದ್ರೆ ಎಕ್ಸಟ್ರಾ ಟೀ ಮಾಡ್ಬೇಕು. ಮರುದಿನ ಮಜ್ಜಿಗೆಗೆ ಮಾಡಲು ಹಾಲಿರಲ್ಲ”. ಅಂತ ನಿರಾಳವಾಗಿ ಹೇಳುವವಳು. ಅದು ಅವಳ ಸ್ವಾಭಾವಿಕ ಸ್ವಭಾವವೋ  ಏನೋ ಇನ್ನು ಯಾರಿಗು ಅರ್ಥ ಆಗಿಲ್ಲ.
ಮನೆಗೆ ನೆಂಟರು ಬಂದರೆ ಇಷ್ಟ. ಹರಟೆ ಹೊಡೆಯುವುದು ಮತ್ತು ಹೊಸ ಹೊಸ ರೀತಿಯ ತಿಂಡಿ ಮಾಡುವುದು ಅಂದರೆ ಬಹಳ ಪ್ರೀತಿ. ಆದರೆ ನೆಂಟರಲ್ಲಿ ಎರಡು ವಿಭಾಗಗಳು. ಅಮ್ಮನ ಮನೆಯ ಕಡೆ ನೆಂಟರು ಬಂದರೆ ಸುಮಾರಿಗೆ ಓ.ಕೆ..ಓ.ಕೆ. ಇನ್ನು ಗಂಡನ ಮನೆಯ ಕಡೆ ನೆಂಟರು ಬಂದರೆ ಆ ದೇವರೆ ಗತಿ.
ಒಮ್ಮೆ ಗಂಡನ ಮಾವನ ಮಗ ಬಂದ. ಅವನಿಗೆ ಬೆಂಗಳೂರಲ್ಲೆ ಕೆಲಸ ದೊರಕಿತು. ಕಂಪನಿ ಹತ್ತಿರ ಪಿ.ಜಿ. ಹುಡುಕುವ ತನಕ ಶಾಲಿನಿಯ ಮನೆಯೆ ಗತಿ ಆಯಿತು. ಹೇಳಿ-ಕೇಳಿ ಗಂಡನ ಕಡೆಯ ಸಂಭಂದಿ. ಅದು ಆತ ಬಂದಿರುವುದು ಎಪ್ರಿಲ್ ತಿಂಗಳಲ್ಲಿ. ಆಗ ತರಕಾರಿ ದರ ಸ್ವಲ್ಪ ದುಬಾರಿ. ಈ ಶಾಲಿನಿಯ ತಲೆ ಕೆಟ್ಟು ಚಿತ್ರಾನ್ನ ವಾಯಿತು. ಅದಕ್ಕಾಗಿ ಆತ ಹೋಗುವ ತನಕ ಒಂದು ಒಳ್ಳೆ ಉಪಾಯ ಹುಡಿದಳು. ಆತ ಹೋಗುವ ತನಕ ದಾಲ್, ಕಿಚಡಿ, ತಿಳಿ ಸಾರು….ಹೀಗೆ ಅವಳ ಮನೆ ಅಡಿಗೆ ಶುರುವಾಯಿತು. ಇದು ಬರಿ ತರಕಾರಿ ದುಬಾರಿ ಪ್ರಶ್ನೆ ಅಲ್ಲ. ಆತ ಇನ್ನು ಮುಂದೆ ಬೆಂಗಳೂರಲ್ಲೆ ಇರುತ್ತಾನೆ. ನಾನು ಚನ್ನಾಗಿ ಅಡುಗೆ ಮಾಡಿ ಹಾಕಿದರೆ ಪದೇ ಪದೇ ನಮ್ಮ ಮನೆಗೆ ಬರುವ ಸಂಭವ ಜಾಸ್ತಿ. ಆದ ಕಾರಣ ಆತನನ್ನು ಅಷ್ಟು ಚನ್ನಾಗಿ ವಿಚಾರಿಸಿಕೊಳ್ಳುತ್ತಿಲ್ಲ. ಇನ್ನು ಬೇರೆ ಊರು ಅಪರೂಪಕ್ಕೆ ಬಂದು ಹೋಗುವದಾದರೆ ಬೇರೆ ಪ್ರಶ್ನೆ ಎಂದು ಅವಳ ಅಗಾಧ ಬುದ್ದಿ ಮಟ್ಟವನ್ನು ಅವಳ ಗೆಳತಿಯರಲ್ಲಿ ಹೇಳಿಕೊಂಡಳು.


No comments: