Friday, January 24, 2020

ಚಳಿಗಾಲದ ಬೆಳಗು


                                            ಚಳಿಗಾಲದ ಬೆಳಗು 

ನಮ್ಮ ಮಲೆನಾದ ಚಳಿಗೆ ಮುಂಜಾನೆ ಏಳೊದೆಂದರೆ ಸ್ವಲ್ಪ ಆಳಸಿ. ಅದರಲ್ಲು ಬೆಳಿಗ್ಗೆ ಸ್ನಾನ ಮಾಡಿ ಶಾಲೆಗೆ ಹೋಗುವುದು ಇನ್ನು ಬೆಸರ. ಬೆಚ್ಚಗೆ ಕಟ್ಟಿಗೆ ಒಲೆಯ ಮುಂದೆ ಕುಳಿತು ಬೆಂಕಿ ಕಾಸಿದರೆ ಹಾ..ಹ..ಎನು ಹಿತ. ನಂತರ ಹಂಡೆಯಲ್ಲಿ ಇದ್ದ ಬಿಸಿ ಬಿಸಿ ನೀರಿನ ಸ್ನಾನ ಅಂತು ಇನ್ನು ಹಿತ.
ಸ್ನಾನ ಆದ ನಂತರ ಅಮ್ಮನ ಹತ್ತಿರ ಕುಳಿತು ಬಿಸಿ ಬಿಸಿ ತೆಳ್ಳೆವು ಅಂದರೆ ದೋಸೆ ತಿಂದರೆ ಇನ್ನು ಮಜ. ಇನ್ನು ಮುಂಜಾನೆಯಲ್ಲಿ ಶಾಲೆಗೆ ಹೋಗುವಾಗ ಇಬ್ಬನಿಯಲ್ಲಿ ನಾವೆ ದಾರಿ ಮಾಡುತ್ತಾ ಹುಲ್ಲುಗಳ ಮೇಲೆ ಇಬ್ಬನಿಯ ಜೊತೆ ಆಟ ಆಡುತ್ತಾ ಶಾಲೆಗೆ ಹೋಗಿ ಪ್ರಾರ್ಥನೆಗೆ ಬಿಸಿಲು ಕಾಯಿಸುತ್ತಾ ನಿಂತು ಚಳಿಗಾಲದ ಬೆಳಗನ್ನು ಸವಿಯುವುದರಲ್ಲಿ ಏನೋ ಹಿತ.                           

Thursday, January 23, 2020

ಮೊದಲ ಕನಸು


                                             ಮೊದಲ ಕನಸು
ನಾನು ನನ್ನ ಆತ್ಮ ಚರಿತ್ರೆ ಬರೆಯುವಷ್ಟು ದೊಡ್ಡ ಹೆಸರನ್ನೆನು ಮಾಡಿಲ್ಲ. ಆದ್ರು ನನಗೆ ನನ್ನದೆ ಆದ ಕನಸಿತ್ತು. ಭರತನಾಟ್ಯವನ್ನು ಕಲಿತು, ನಾಲ್ಕು ಜನರಿಗೆ ಕಲಿಸ ಬೇಕು. ನನ್ನದೆ ಆದ ಒಂದು ಸಂಸ್ಥೆ ಸ್ಥಾಪಿಸಿ ಪ್ರತಿಭಾವಂತ ನಾಟ್ಯಗಾರರನ್ನು ಈ ಸಮಾಜಕ್ಕೆ ಕೊಡಬೇಕು.  ನಮ್ಮ ದೇಶದ ಮೂಲೆ ಮೂಲೆಯಲ್ಲಿರುವ ನೄತ್ಯಗಳನ್ನು ಒಂದೇ ಸೂರಿನಡಿಯಲ್ಲಿ ಅಂದರೆ ನನ್ನ ಸಂಸ್ಥೆಯಲ್ಲಿ ಕಲಿತು, ನಮ್ಮ ದೇಶದ ಕಲೆಯನ್ನು ಇತರ ದೇಶದವರು ತಿಳಿದುಕೊಳ್ಳುವಂತಾಗ ಬೇಕು.
ನಾನು ಸುಮಾರು ಒಂದನೆ ಕ್ಲಾಸ್ ನಲ್ಲಿ ಟಿ.ವಿ. ಯಲ್ಲಿ ಬರೋ ಹಾಡಿಗೆ ಅಮ್ಮನ ದುಪ್ಪಟ್ಟಾ ಹಿಡಿದು ಕುಣಿದು ಕುಪ್ಪಳಿಸುತ್ತಿದ್ದೆ. ಅದನ್ನೆ ನೋಡಿ ಅಮ್ಮ ಹತ್ತಿರದಲ್ಲಿ ಇದ್ದ ಭರತನಾಟ್ಯ ದ ಕ್ಲಾಸಿಗೆ ಹಾಕಿದರು. ವಾರಕ್ಕೆ ಎರಡು ದಿನ ತುಂಬಾ ಖುಷಿಯಾಗಿ ಹೋಗುತ್ತಿದ್ದೆ. ನನಗೆ ಸಿಕ್ಕ ಗುರುಗಳು, ಮನೆಯ ವಾತಾವರಣ, ನನ್ನ ಆಸಕ್ತಿ ಎಲ್ಲಾ ಸೇರಿ ಭರತನಾಟ್ಯದಲ್ಲಿ ನಾನು ವಿದ್ವತ್ ಮಾಡಿದೆ.
ನನ್ನ ರಂಗ ಪ್ರವೇಶವನ್ನು ಅಪ್ಪ ತಮ್ಮ ಕೈಲಾದ ಮಟ್ಟಿಗೆ ಒಂದು ಸಭಾಂಗಣದಲ್ಲಿ ಮಾಡಲು ಎರ್ಪಡಿಸಿದರು. ಅದಕ್ಕೆ ನಾನು ಸರಿಯಾಗಿ ಅಭ್ಯಾಸ ಮಾಡಿದೆ. ಅಮ್ಮ ತನ್ನ ಭಂದು ಬಳಗದವರ ಹತ್ತಿರ ಮತ್ತು ತನ್ನ ಗೆಳತಿಯರ ಹತ್ತಿರ ನನ್ನ ರಂಗ ಪ್ರವೇಶದ ಬಗ್ಗೆ ಹೇಳಿ ಎಲ್ಲರನ್ನು ಕರೆದರು. ಎಲ್ಲರು ನನ್ನ ಭರತನಾಟ್ಯ ನೋಡುವ ಆಸೆಯಿಂದ ಸುಮಾರು ಜನ ಸೇರಿದರು. ಅಪ್ಪ ತನ್ನ ಶಕ್ತಿ ಮೀರಿ ಕಾರ್ಯಕ್ರಮವನ್ನು ಚಂದ ಗೊಳಿಸಿದರು.
ಕಾರ್ಯಕ್ರಮಕ್ಕೆ ಬಂದವರೆಲ್ಲ ನನ್ನ ಮತ್ತು ನನ್ನ ನಾಟ್ಯ ನೋಡಿ ಹೊಗಳಿದರು. ಅಲ್ಲೆ ತುಂಬಾ ಜನ ನನ್ನ ಮದುವೆ ಯ ಪ್ರಸ್ತಾಪವನ್ನು ಮಾಡಿದರು. ಅಪ್ಪ-ಅಮ್ಮ ನಿಗಂತು ಸ್ವರ್ಗಕ್ಕೆ ಮೂರೆ ಗೇಣು. ಮಗಳ ಪ್ರತಿಭೆ ಮತ್ತು ಒಳ್ಳೊಳ್ಳೆ ಸಂಭಂದ ಬರುವುದನ್ನು ನೋಡಿ ನನ್ನ ಭಾವಿ ಭವಿಷ್ಯದ ಕನಸು ಕಂಡರು.
ಈ ಕಾರ್ಯಕ್ರಮ ಮುಗಿದ ಮೇಲೆ ಅಮ್ಮನ ಲೇಡಿಸ್ ಕ್ಲಬ್ ಸ್ನೇಹಿತೆಯೊಬ್ಬರು ನಮ್ಮ ಮನೆಗೆ ಬಂದರು. ಮೊದಲ ಬಾರಿ ಒಂದು ದುಬಾರಿ ಕಾರ್ ನಮ್ಮ ಮನೆಗೆ ಬಂದಿದ್ದು ನೋಡಿ ನನಗೆ ಆಶ್ಚರ್ಯ ಆಯಿತು. ಹೆಚ್ಚಾಗಿ ಅಮ್ಮನ ಸ್ನೇಹಿತರು ಬಂದಾಗ ನಾನು ಅವರ ಮದ್ಯ ಹೋಗಲ್ಲ. ಅವರ ಪಾಡಿಗೆ ಅವರು ಮಾತಾಡಲಿ ಅಂತ ನನ್ನ ಕೋಣೆಯಲ್ಲಿ ನಾನಿರುತ್ತಿದ್ದೆ.  ಕಾರಿನಲ್ಲಿ ಒಂದವರು ಸುಮಾರು ಹೊತ್ತು ಕುಳಿತು  ಮಾತಾಡಿಕೊಂಡು ಹೋದರು.
ಸಂಜೆ ಅಪ್ಪ ಬಂದ ಮೇಲೆ ಅಮ್ಮ ಆ ಕಾರಿನಲ್ಲಿ ಬಂದವರ ವಿಚಾರ ಎತ್ತಿದರು. ಅವರು ವಿದ್ಯಾವತಿ ಎಂದು ಅಮ್ಮನ ಲೇಡಿಸ್ ಕ್ಲಬ್ ಗೆ ಬರುವರು ಎಂದು ಅಮ್ಮ ಮಾತನ್ನು ಶುರು ಮಾಡಿದರು. ಆಗ ಅಪ್ಪ, “ಏಯ್ ಆ ವಿದ್ಯಾವತಿ ಅಂದ್ರೆ ನಾಗಭೂಶಣ್  ಆ ಸಿವಿಲ್ ಕಾಂಟ್ರಾಕ್ಟ್ ಮಾಡ್ತಾರಲ್ಲ ಅವ್ರ ಹೆಂಡ್ತಿ ಅಲ್ವೆನೆ”. ಅಂದರು. ಆಗ ಅಮ್ಮ, ಸ್ವಲ್ಪ ಉತ್ಸಾಹದಲ್ಲಿ, “ಹೌದ್ರಿ, ನಿಮ್ಮ್ ಸರೋಜಾಚಿಕ್ಕಿ ಹೇಳ್ತಾ ಇದ್ರಲ್ಲ, ಗಟ್ಟಿ ಕುಳ ವಿದ್ಯಾವತಿ ಅವ್ರು ಅಂತ ಅವ್ರೆ. ಇವತ್ತು ನಮ್ ಮನೆಗೆ ಒಳ್ಳೆ ಭಾಗ್ಯಲಕ್ಷ್ಮಿ ಬಂದ ಹಾಗೆ ಬಂದ್ರು, “ ಅಂತ ನನ್ನ ಮುಖ ನೋಡಿ ನಕ್ಕರು. ಆಗ ನನ್ಗೆ ಏನು ಅರ್ಥ ಆಗಿಲ್ಲ. ನಂತರ ಅಪ್ಪನ ಹತ್ತಿರ ವಿವರವಾಗಿ ಹೇಳಿದರು. ಅವರು ನನ್ನ ಭರತನಾಟ್ಯ ನೋಡೊಕೆ ಲೇಡಿಸ್ ಕ್ಲಬ್ ನವರ ಜೊತೆ ಬಂದಿದ್ರಂತೆ. ಸಂಜೆ ಅವರನ್ನು ಪಿಕಪ್ ಮಾಡೋಕೆ ಅವರ ಮಗ ಸಂಧಿಪ್ ಬಂದಿದ್ನಂತೆ. ಅವನು ಒಂದು ಇಂಟ್ರನ್ಯಾಶನಲ್  ಕಂಪನಿಯಲ್ಲಿ ಒಳ್ಳೆ ಕೆಲಸದಲ್ಲಿ ಇದ್ದಾನೆ. ಆತನಿಗೆ ನಮ್ಮ ಮಗಳು ಅರ್ಚನಾ ತುಂಬಾ ಇಷ್ಟ ಆಗಿದ್ದಾಳೆ. ಇವತ್ತು ವಿದ್ಯಾವತಿ ಇದರ ಬಗ್ಗೆನೆ ಮಾತಾಡೋಕೆ ಬಂದಿದ್ರು ಅಂತ ಅಮ್ಮ ಹೇಳಿದರು.
ನನಗೆ ಮದುವೆ ಮೇಲೆ ಇಷ್ಟ ಇತ್ತು. ಆದ್ರೆ ನನ್ನ ಭರತ ನಾಟ್ಯವನ್ನು ಯಾವುದೆ ಕಾರಣಕ್ಕು ಬಿಡುವ ಮನಸ್ಸು ಇಲ್ಲವಾಗಿತ್ತು. ನನ್ನ ಗೆಳತಿಯರು ಸಹ ನನಗೆ ಯಾವಾಗಲು ಚುಡಾಯಿಸುತ್ತಿದ್ದರು, “ನಮ್ಮ ನಾಟ್ಯರಾಣಿಯನ್ನು ಯಾವುದಾದರು ನಾಟ್ಯ ಆರಾಧಕನೆ ಮದುವೆ ಆಗ್ತಾನೆ” ಎನ್ನುತ್ತಿದ್ದರು. ನನಗು ಅಷ್ಟೆ ನನ್ನ ಜೊತೆ ನನ್ನ ನಾಟ್ಯಕ್ಕೆ ಪ್ರೊತ್ಸಾಹ ನೀಡುವವನೆ ಬೇಕು ಎಂದಿತ್ತು.
ಅಮ್ಮ ಹೇಳಿದ ಮಾತಿಗೆ ನಾನು ಹೇಳಿದೆ, ನೋಡಮ್ಮ, ನಿಮ್ಗು ತಿಳಿದೆ ಇದೆ. ನಾನು ಡಾನ್ಸ್ ಎಷ್ಟು ಇಷ್ಟ ಪಡ್ತೀನಿ ಅಂತ. ನನ್ನ ಜೊತೆ ನನ್ನ ಭರತನಾಟ್ಯವನ್ನು ಇಷ್ಟಪಡುವವರಾದರೆ ಮಾತ್ರ ನಾನು ಮದುವೆ ಆಗೋದು. ಅವರು ಎಷ್ಟೇ ಶ್ರೀಮಂತರಾಗಲಿ, ಏನೇ ಆಗಲಿ ನನಗೆ ನನ್ನ  ಕನಸು ಮುಖ್ಯ” ಅಂತ ಹೇಳಿದೆ. ಆಗ ಅಪ್ಪ, “ನಿನ್ನ ಕನಸು ನಮ್ಗೆ ತಿಳಿದಿದ್ದೆ. ನೀನು ಆ ಹುಡುಗನ ಜೊತೆ ಮಾತಾಡು. ಇಬ್ಬರು ಇಷ್ಟ ಪಟ್ಟರಷ್ಟೆ ಮದುವೆ” ಅಂತ ಅಪ್ಪ ನನಗೆ ಸ್ವಾತಂತ್ರ ಕೊಟ್ಟರು. ಅಮ್ಮ ಏನೇ ಹೇಳದಿದ್ದರು, ಅವರಿಗೆ ವಿದ್ಯಾವತಿ ಮನೆಯವರು ಶ್ರೀಮಂತರು ಮತ್ತು ಒಂದೆ ಮಗ ಹೇಳುವುದು ತಲೆಯಲ್ಲಿ ಕೂತಿತ್ತು.
ಒಂದು ವಾರದ ನಂತರ ಸಂಧಿಪ ಮತ್ತು ಅವನ ಅಪ್ಪ-ಅಮ್ಮ ನಮ್ಮ ಮನೆಗೆ ಬಂದರು. ಅಮ್ಮ ನಿಗೆ ಸಡಗರ. ನನ್ನನ್ನು ಒಳ್ಳೆ ಕಾಟನ್ ಸಿಲ್ಕ್ ಸೀರೆ ಕೊಟ್ಟು ಚನ್ನಾಗೆ ತಯಾರಾಗು ಎಂದು ಹೇಳಿದರು. ಯಾಕೋ ಗೊತ್ತಿಲ್ಲ ನನಗೂ ಅವನನ್ನು ನೋಡುವ ಕುತೂಹಲವಿತ್ತು.
ಅವರು ಬಂದು ನಮ್ಮ ಮನೆ ಸೋಪಾದಲ್ಲಿ ಕುಳಿತಾಗ ನಾನು ಕಾಫಿ ಕೊಡಲು ಹೋದೆ.  ಅವನ ಮುಗುಳು ನಗೆ ಮತ್ತು ಶಾಂತ ಮುಖ ನನಗೆ  ತುಂಬಾ ಇಷ್ಟ ಆಯಿತು. ಯಾವಾಗಲು ನಾನು ಹೇಳುತ್ತಿದ್ದ ಚಾಕ್ ಲೇಟ್ ಹಿರೋ ಹಾಗೆ ಫೇರ್ ಆಗಿ ಹ್ಯಾಂಡ್ ಸಮ್ ಆಗಿ ಇದ್ದ. ಕಪ್ಪನೆಯ ಸಿಲ್ಕಿ ಹೇರ್ ಹಣೆಯ ಮೇಲೆ ಹಾರಡುತ್ತಿತ್ತು. ಮನಸ್ಸಿನಲ್ಲೆ ಅಂದುಕೊಂಡೆ ನನ್ನ ಕಲ್ಪನೆಯ ಹಿರೋನನ್ನು ಮೀರಿಸುವ ಹಾಗೆ ಇದ್ದ. ನಾನು ನನ್ನ ಮನಸ್ಸಿನಲ್ಲೆ ಏನೇನೋ ಯೋಚಿಸುತಿದ್ದೆ. ಎಲ್ಲ ಎನೇನೋ ಮಾತಾಡುತಿದ್ದರು. ಯಾವುದು ನನ್ನ ಕಿವಿಗೆ ಬಿಳಲೆ ಇಲ್ಲ. ಅಪ್ಪ, “ನೀವಿಬ್ಬರು ಮೇಲೆ ಬಾಲ್ಕನಿಗೆ ಹೋಗಿ ಮಾತಾಡಿಕೊಳ್ಳಿ” ಎಂದಾಗ ಒಮ್ಮೆಲೆ ಎಚ್ಚೆತ್ತು ಸರಿ ಎಂದು ಬಾಲ್ಕನಿ ಕಡೆ ಹೆಜ್ಜೆ ಹಾಕಿದೆ. ಇವರು ನನ್ನ ಹಿಂದೆ ಬಂದರು.
ಮೊದಲು ಹೇಗೆ ಮಾತು ಶುರು ಮಾಡುವುದು ಎಂದು ತಿಳಿಯಲಿಲ್ಲ. ಅವರು ಕೂಡ ನಾಚಿಕೆ ಸ್ವಭಾವದವರು ಅಂತ ಅನಿಸಿತು. ಏನೋ ತೊದಲುತ್ತ, ಗಂಟಲು ಸರಿ ಮಾಡಿಕೊಳ್ಳುತ್ತ ಮಾತು ಶುರು ಮಾಡಿದರು. “ನಾನು ನಿಮ್ಮ ಬಗ್ಗೆ ಅಮ್ಮನ ಹತ್ತಿರ ಹೇಳಿದೆ, ಅಮ್ಮ ಖುಶಿಯಿಂದ ನಿಮ್ಮ ಮನೆಗೆ ಬಂದು ಮಾತಾಡಿದರು. ನಿಮ್ಮನ್ನು ನಮ್ಮ ಆಫೀಸ್ ಹತ್ತಿರದ ಕಾಫಿ ಡೇ ದಲ್ಲಿ ತುಂಬಾ ಸಲ ನೋಡಿದ್ದೆ. ನೀವು ಯಾರು ಅಂತ ನನಗೆ ಗೊತ್ತಿಲ್ಲಾಗಿತ್ತು. ಅದು ಅಲ್ಲದೆ ನಿಮ್ಮ ಗೆಳತಿಯರೆಲ್ಲ ಇರುವಾಗ ನಿಮ್ಮ ಹತ್ತಿರ ಮಾತಾಡೋಕೆ ನನಗೆ ಸಂಕೋಚವಾಯಿತು” ಅಂತ ಹೇಳಿದರು. ಆಗ ನನಗೆ ಆಶ್ಚರ್ಯ ಆಯಿತು. ಆಶ್ಚರ್ಯದಲ್ಲಿ ಕೇಳಿದೆ, “ಏನು ನೀವು ನನ್ನ ಕಾಫೀ ಡೇ ದಲ್ಲಿ ನೋಡಿದ್ರಾ. ನಾನು ಯಾವಾಗಲು ನಿಮ್ಮ ನೋಡೆ ಇಲ್ಲ” ಅಂತ ಹೇಳಿದೆ. ಆಗ ಅವರು ನಗ್ತಾ, ನಾವು ಗಂಡು ಮಕ್ಕಳು ಆಚೆ ನಿಂತು ಕಾಪೀ ಕುಡಿದು ಹೋಗ್ತಾ ಇದ್ವಿ. ಆದ್ರೆ ನೀವು ಒಳಗೆ ಗಂಟೆ ಗಟ್ಟಲೆ ಕಾಪೀ ಹೀರುತ್ತ ಮಾತಾಡ್ತಾ ಇರ್ತಿದ್ರಿ.  ಅದ್ರಲ್ಲು ನಿಮ್ಗೆ  ಯಾರ್ ಕಡೆನು ಲಕ್ಷ ಇರ್ತಾ ಇರಲಿಲ್ಲ. ನಿಮ್ಮ ಗುಂಪಿನಲ್ಲಿ ಸಿಂಪಲ್ಲಾಗೆ, ಗಂಭಿರವಾಗಿ ಇರೋದು ನನಗೆ ತುಂಬಾ ಇಷ್ಟ ಆಯಿತು.” ಅಂತ ಹೇಳಿ ಸುಮ್ಮನೆ ಆದರು. ಅವರ ಮಾತಿಗೆ ನನಗೆ ಏನ್ ಹೇಳ್ ಬೇಕು ಅಂತ ತೋಚದೆ ಮನಸ್ಸಿನಲ್ಲೆ ಸಿಂಪಲ್. ಗಂಭಿರ, ಇಷ್ಟ ಇವನ್ನೆಲ್ಲಾ ಮನಸ್ಸಿನಲ್ಲಿ ಇನ್ನೊಮ್ಮೆ ಹೇಳಿಕೊಂಡು ಖುಷಿ ಪಟ್ಟೆ. ನಾನು ನನ್ನ ಭರತನಾಟ್ಯದ ಬಗ್ಗೆ, ನನ್ನ ಭವಿಶ್ಯದ ಪ್ಲಾನ್ ಬಗ್ಗೆ ಎನು ಹೇಳೆ ಇಲ್ಲ. ಯಾಕೆ ಅಂತ ತಿಳಿದಿಲ್ಲ. ಆ ಸಮಯದಲ್ಲಿ ನಾನು ನನ್ನಲ್ಲೆ ಕಳೆದು ಹೋದೆ. ಕನಸಿನ ಲೋಕದಲ್ಲಿ ಇದ್ದೆ ಹೊರತು ವಾಸ್ತವ ಪ್ರಪಂಚದ ಅರಿವು ಆಗ ನನಗಾಗಲಿಲ್ಲ.
ಮನೆಯವರೆಲ್ಲ ನಮ್ಮ ಅಭಿಪ್ರಾಯ ಕೇಳಿದರು, ಆಗ ನಾನು ಮೌನವಾಗಿ ತಲೆಯಾಡಿಸಿದೆ. ಸಂಧಿಪನ ಅಮ್ಮ ನಗ್ತಾ, “ನಮ್ಮ ಮಗ ಇಲ್ಲಿಗೆ ಬರೋ ಮೊದಲೆ ತನ್ನ ಅಭಿಪ್ರಾಯ ಹೇಳಿದಾನೆ” ಅಂತ ಹೇಳಿ ನಗೆಯ ಅಲೆಯನ್ನು ಎಬ್ಬಿಸಿದರು.
ಅವರು ಹೋದ ಮೇಲೆ ಅಪ್ಪ-ಅಮ್ಮ ಅವರನ್ನು ಹೊಗಳಿದ್ದೆ-ಹೊಗಳಿದ್ದು. ಇಷ್ಟು ಒಳ್ಳೆ ಸಂಭಂದ, ಅವರಾಗೆ ಬಂದಿದ್ದು ನಮ್ಮ ಅದ್ರಷ್ಟ ಅಂತ ಮಾತಿಗೊಮ್ಮೆ ಹೇಳುತ್ತಿದ್ದರು. ನಮ್ಮ ಪರಿಚಯದವರು ಇಂತ ಸಂಭಂದ ಸಿಗುವುದು ನಿಮ್ಮ ಮತ್ತು ಮಗಳ ಅದ್ರಷ್ಟ ಅಂತ ಹೇಳಿದರು.
ಸಂಧಿಪ್ ಇನ್ನೆರಡು ತಿಂಗಳಿಗೆ ಜರ್ಮನ್ ಗೆ ಹೋಗುವ ಸಲುವಾಗಿ ಮದುವೆಯನ್ನು ಅಷ್ಟರ ಒಳಗೆ ಮಾಡುವ ಆಲೋಚನೆ ಮಾಡಿದರು. ಎಲ್ಲವು ಕೂಡಿ ಬಂತು. ಈ ಎರಡು ತಿಂಗಳ ಒಳಗೆ ನಾನು ಸಂಧಿಪ್ ಬೇಕಾದಷ್ಟು ಮಾತಾಡಿದೆವು. ನನ್ನ ಭರತನಾಟ್ಯದ ಬಗ್ಗೆ ತಿಳಿದಿತ್ತೆ ಹೊರತು ನನ್ನ ಮುಂದಿನ ಕನಸಿನ ಬಗ್ಗೆ ನಾನು ಅವನಲ್ಲಿ ಹೇಳಿಕೊಳ್ಳಲಿಲ್ಲ. ಇದು ವಿಧಿ ಆಟವೋ, ನನ್ನ ದಡ್ಡ ತನವೋ ನನಗೆ ತಿಳಿದಿಲ್ಲ. ಈಗ ಯೋಚಿಸಿದರೆ ನನಗೆ ಆಶ್ಚರ್ಯ ಆಗುವುದು. ನಾನು ಜೀವಕ್ಕಿಂತ ಅಧಿಕವಾಗಿ ಪ್ರೀತಿಸುವ ಭರತನಾಟ್ಯದ ಬಗ್ಗೆ ಆತನಲ್ಲಿ ಹೇಳಿಕೊಳ್ಳಲಿಲ್ಲವೆಂದು.
ಅದ್ದೂರಿಯಾಗಿ ಮದುವೆ ಮುಗಿಯಿತು. ಮದುವೆಗೆಂದೆ ಸಂಧಿಪ್ ಖುದ್ದಾಗಿ ಸೀರೆ ಒಡವೆ ತೆಗೆದುಕೊಂಡು ಬಂದಿದ್ದ. ಜರ್ಮನಿಗೆ ಹೋಗಲೆಂದೆ ನನಗಾಗಿ ಒಳ್ಳೊಳ್ಳೆ ಡ್ರೆಸ್ ಗಳನ್ನು ತೆಗೆದುಕೊಡು ಬಂದ. ಹೂವಿನಂತೆ ಮುದ್ದಿಸಿದ. ಪುಟ್ಟ ಮಗುವಿನಂತೆ ಮುದ್ದಾಡಿದ. ಜೀವನ ಸುಂದರ ಅಂತ ಅನಿಸಿತು.
ಮದುವೆ ಆಗಿ ಹದಿನೈದು ದಿನದ ಮೇಲೆ ಮೊದಲ ಬಾರಿ ಅಪ್ಪ-ಅಮ್ಮನ ಬಿಟ್ಟು ಹೋಗ್ತಾ ಇದ್ದೀನಿ ಅಂತ ಅನಿಸಲೆ ಇಲ್ಲ. ಆ ಹದಿನೈದು ದಿನದಲ್ಲಿ ಸಂಧಿಪ್ ನನ್ನನ್ನು ಅಷ್ಟು ಆವರಿಸಿಕೊಂಡಿದ್ದ. ಪ್ರೀತಿಯ ಸುರಿಮಳೆ ಹರಿಸಿದ್ದ.
ಜರ್ಮನಿಗೆ ಹೋದ ಮೇಲು ನಾನು ಮತ್ತು ಸಂಧಿಪ್ ಚನ್ನಾಗಿ ಇದ್ವಿ. ನಾವು ಇಪ್ಪತ್ನಾಲ್ಕನೆ ಅಂತಸಿನಲ್ಲಿ ಇದ್ವಿ. ಅಲ್ಲಿ ನನಗೆ  ಡಾನ್ಸ್ ಪ್ರಾಕ್ಟಿಸ್ ಮಾಡುವುದು ಅಸಾದ್ಯವಾಗಿತ್ತು. ಮೂರು-ನಾಲ್ಕು ತಿಂಗಳಿಂದ ಡಾನ್ಸ್ ಮಾಡದೆ ಬೆಸರ ಆಗಿತ್ತು. ನೀರಿನಿಂದ ಆಚೆ ತೆಗೆದ ಮೀನಿನಂತೆ ಆಗಿತ್ತು ನನ್ನ ಪರಿಸ್ಥಿತಿ. ಆದರು ಸುಮ್ಮನೆ ಕೂರಲಿಲ್ಲ.  ಕೆಲವು ನೄತ್ಯಕ್ಕೆ ಸಂಭಂದಿಸಿದ ಪುಸ್ತಕವನ್ನು ತೆಗೆದುಕೊಂಡು ಹೋಗಿದ್ದೆ. ಇಂಟರ್ನೆಟ್ ನಲ್ಲಿ ಕೆಲವು ವಿಷಯಗಳನ್ನು ಸಂಗ್ರಹಿಸಿದೆ. ಮುಂದೆ ನನ್ನದೆ ಆದ ಸಂಸ್ಥೆ ತೆಗೆಯ ಬೇಕು ಅಂತ ಇದ್ದರೆ ಯಾವ ಯಾವ ವಿಷಯ ಬೇಕೋ ಎಲ್ಲಾ ಸಂಗ್ರಹಿಸಿ ಪಟ್ಟಿ ಮಾಡಿದೆ. ಕೆಲವೊಮ್ಮೆ   ನಾನು ಸಂಧಿಪನ ಬಳಿ ಡಾನ್ಸ್ ವಿಷಯ ತೆಗೆದಾಗ ಏನಾದರು ಹೇಳಿ ವಿಷಯ ಬೇರೆ ಮಾಡುತ್ತಿದ್ದ. ಇಲ್ಲಿ ಎಲ್ಲಿ ಅಂತ ನಿನ್ನ ಡಾನ್ಸ್ ಮಾಡ್ತೀಯ. ಹೊಸದಾಗಿ ಮದುವೆ ಆಗಿದ್ದೀವಿ ಆರಾಃ ಆಗಿ ಇರು. ಇಲ್ಲಿ ಇರುವಷ್ಟು ದಿನ ಹೊಸ-ಹೊಸ ಜಾಗ ನೋಡೋಣ ಅಂತ ಹೇಳಿದ. ಹೇಳಿದ ಹಾಗೆ ನಡೆದುಕೊಂಡ. ಹೋಗದೆ ಇರದ ಜಾಗ ಇಲ್ಲ. ಚನ್ನಾಗಿ ಸುತ್ತಿದ್ವಿ. ಎರಡು ವರ್ಷದ ಅವಧಿ ಮುಗಿಯಿತು. ನಮಗು ಅಪ್ಪ-ಅಮ್ಮ ನ ನೋಡುವ ಆಸೆ ಆಯಿತು. ಅದು ಅಲ್ಲದೆ ಅವರಿಗೆ ಮೊಮ್ಮಕ್ಕಳ ನೋಡುವ ಆಸೆ ಶುರುವಾಯಿತು. ಅವರ ಆಸೆಯಂತೆ ಬೆಂಗಳೂರಿಗೆ ಹೋಗುವಾಗ ನಾನು ಎರಡು ತಿಂಗಳ ಗರ್ಭಿಣಿ.
ಬೆಂಗಳೂರಿಗೆ ಬಂದ ಮೇಲೆ ನನ್ನನ್ನು ಅತ್ತೆ-ಮಾವ ಮಗಳಂತೆ ಕಂಡರು. ಗರ್ಭಿಣಿ ಹೆಂಗಸು ಅಂತ ನನಗೆ ಯಾವ ಕೆಲಸವನ್ನು ಮಾಡಲು ಬಿಡದೆ ಹೂವಿನ ಹಾಗೆ ನೋಡಿಕೊಂಡರು.ಸಂಧಿಪ್ ಕೂಡ ಅತಿಯಾದ ಕಾಳಜಿವಹಿಸುತ್ತಿದ್ದ. ಎಲ್ಲರ ಕಾಳಜಿಯ ಪರಿಣಾಮ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದೆ. ಅಮ್ಮ ಖುಶಿಯಿಂದ ಬಾಳಂತನ ಮಾಡಿದರು. ಅತ್ತೆ ಮನೆಯಲ್ಲಿ ನನಗಾಗೆ ಒಂದು ಕೆಲಸದ ಹೆಂಗಸನ್ನು ಗೊತ್ತು ಮಾಡಿದರು. ಈ ನಡುವೆ ನನ್ನ ಹಳೆ ಗೆಳತಿಯರು ಮತ್ತು ಡಾನ್ಸ್ ಕಲಿಸಿದ ಟೀಚರ್ ಎಲ್ಲರ ಬಳಕೆ ಆಗಿತ್ತು. ನನಗೆ ಕಲಿಸಿದ ಡಾನ್ಸ್ ಟೀಚರ್ ಗೆ ಸ್ವಲ್ಪ ವಯಸ್ಸಾದ ಕಾರಣ ಅವರಿಗೆ ಅವರಲ್ಲೆ ಕಲಿತ ವಿದ್ಯಾರ್ಥಿನಿ ಅವರ ಸಂಸ್ಥೆ ಯಲ್ಲಿ ಕಲಿಸಲು  ಮತ್ತು ಅದನ್ನು ಬೆಳೆಸಲು ಬೇಕಾಗಿತ್ತು. ಮೊದಮೊದಲು ವಾರಕ್ಕೆ ಎರಡು ದಿನವಾದರು ನನ್ನ ಬಳಿ ಬಂದು ಹೋಗು, ನಂತರ ಈ ಸಂಸ್ಥೆ ಯನ್ನು ಇನ್ನು ಚನ್ನಾಗಿ ಬೆಳೆಸು ಅಂತ ಹೇಳಿದರು. ಅವರ ಮಾತು ಕೇಳಿ ನನಗೆ ಖುಶಿ ಆಯುತು. ನನ್ನ ಕನಸಿನ ದಾರಿ ಇವರು ಮಾಡಿಕೊಟ್ಟಂತಾಯಿತು. ಇದನ್ನೆ ಹಿಡಿದು ನಾನು ನನ್ನ ದಾರಿಯತ್ತ ಪಯಣಿಸ ಬೇಕು ಅಂತ ಮನಸ್ಸಿನಲ್ಲೆ ನಿರ್ಧಾರ ಮಾಡಿದೆ. ಅದರಲ್ಲು ಈ ನಡುವೆ ನನಗು ಕಲಿತ ವಿದ್ಯೆ ಹಾಳಾಗಬಾರದು, ಏನಾದರು ಮಾಡಬೇಕು ಅಂತ ನನ್ನ ಕನಸು ಪದೆ-ಪದೆ ನೆನಪಾಗುತ್ತಿತ್ತು. ಮದುವೆ, ಮಗು ಜೊತೆ ನನ್ನ ಕನಸನ್ನು ಬೆಳೆಸಬೇಕು ಎಂಬ ಹಂಬಲದಿಂದ ಪುನಃ ನನ್ನ ಡಾನ್ಸ್ ಜೀವನ ಶುರು ಮಾಡಲು ಹೊರಟೆ.
ಈ ವಿಚಾರ ಮನೆಲಿ ತಿಳಿದ ತಕ್ಷಣ ಅತ್ತೆ-ಮಾವ ಹೆಚ್ಚಾಗಿ ಏನು ಪ್ರತಿಕ್ರಿಯಿಸಲಿಲ್ಲ. ನಿನ್ನ ಇಷ್ಟ ಅಂತ ಹೇಳಿದರು. ಆದರೆ ಯಾಕೋ ಸಂಧಿಪನ ನಡುವಳಿಕೆ ವಿಚಿತ್ರವೆನಿಸಿತು. ಯಾವಗಲು ಸಿಡಿ-ಸಿಡಿ ಅನ್ನದ ಸಂಧಿಪ್ ಸಿಡಿ-ಸಿಡಿ ಮಾಡತೊಡಗಿದ. ನನ್ನ ಜೊತೆ ಸರಿಯಾಗಿ ಮಾತಡಲಿಲ್ಲ. ಯಾವಾಗಲು ನೋಡದ ವರ್ತನೆ ವಿಚಿತ್ರವೆನಿಸಿತು.
ಒಮ್ಮೆ  ಹಿಂದಿನಿಂದ ಅವನನ್ನು ತಬ್ಬಿ ಪ್ರೀತಿಯಿಂದ ಮಾತಾಡುತ್ತ ಹೋದೆ. ಒಮ್ಮೆಲೆ ನನ್ನನ್ನು ದೂರ ತಳ್ಳಿ,” ಕುಣಿಯಲು ಕಲಿಸಲು ಹೋಗುವ ನಿನಗೆ ಇದೆಲ್ಲ ಯಾಕೆ ಬೇಕು? “ ಅಂತ ವಿಚಿತ್ರ ದ್ವನಿಯಲ್ಲಿ ಹೇಳಿದ. ಅವನ ಮಾತು ಕೇಳಿ ದಂಗಾಗಿ ಹೋದೆ. “ಕುಣಿಯುವ” ಅನ್ನೋ ಶಬ್ದ ನನ್ನ ಕಿವಿಗೆ ಹೋಗದೆ ಮನಸ್ಸಿಗೆ ನಾಟಿತು. ಯಾವಾಗಲು ಯಾರಿಗು ಎದುರು ಉತ್ತರ ಕೊಡದೆ ಇರುವುವವಳು, “ನೋಡಿ ನಾನು ಭರತನಾಟ್ಯದಲ್ಲಿ ವಿದ್ವತ್ ಮಾಡಿರುವವಳು. ನನ್ನ ಡಾನ್ಸ್ ನೋಡೆ ನೀವು ನನ್ನ ಮದುವೆ ಆಗಿದ್ದು. ಕಲಿತಿರುವ ವಿದ್ಯೆ ಬೇರೆಯವರಿಗೆ ಕಲಿಸಲು ಹೊರಟಿರುವೆ. ನನ್ನ ಮೊದಲ ಕನಸು ಭರತನಾಟ್ಯ, ಅದರಲ್ಲಿ ಹೆಸರು,ಸಾಧನೆ ಮಾಡುವುದು. ಭರತನಾಟ್ಯಕ್ಕು ಅದರದ್ದೆ ಆದ ಘನತೆ,ಗೌರವ ಇದೆ. ನೀವು ನಿಮ್ಮ ಮಾತಿನ ದಾಟಿ ಬದಲಾಯಿಸಿಕೊಳ್ಳಿ”  ಎಂದು ಸ್ವಲ್ಪ ಖಾರವಾಗಿ ಹೇಳಿದೆ. ಮೊದಲ ಬಾರಿ ಮಾತಿಗೆ ಮಾತು ಬೆಳೆಯಿತು. ನನ್ನ ಮಾತು ಮುಗಿಯುತ್ತಿದ್ದಂತೆ, “ನೋಡು ನೀನು ತಿಳಿದ ಹಾಗೆ ನಿನ್ನ ಭರತನಾಟ್ಯ ನೋಡಿ ನಿನ್ನ ನಾನು ಮೆಚ್ಚಲಿಲ್ಲ.  ಕಾಪೀ ಡೇ ದಲ್ಲಿ ನಿನ್ನ ನೋಡಿದ್ದೆ. ನಿನ್ನ ಇಷ್ಟ ಪಟ್ಟೆ. ನಂತರ ತಿಳಿಯಿತು ನೀನು ನನ್ನ ಅಮ್ಮನ ಗೆಳತಿಯ ಮಗಳೆಂದು. ನಿನ್ನ ಡಾನ್ಸಗು ನನಗು ಯಾವ ಸಂಭಂದವೆ ಇಲ್ಲ. ಇನ್ ಫಾಕ್ಟ್ ನನಗೆ ನೀನು ಡಾನ್ಸ್ ಮಾಡ್ತೀಯಾ ಅಂತ ತಿಳಿದ ತಕ್ಷಣ ಬೆಸರ ಆಯಿತು. ಆದರೆ ನೀನು ಮದುವೆ ಮುಂಚೆ ನಿನ್ನ ಡಾನ್ಸ ಬಗ್ಗೆ ಮಾತಾಡಲಿಲ್ಲ. ಏನೋ ಹವ್ಯಾಸಕ್ಕೆ ಕಲಿತಿರುವುದು, ಮದುವೆ ಮಕ್ಕಳಾದ ಮೇಲು ಇದರ  ಹುಚ್ಚು ಇರುವುದೆಂದು ನನಗೆ ತಿಳಿದಿರಲಿಲ್ಲ. ನನಗೆ ನೀನು ಒಳ್ಳೆ ಗೃಹಿಣಿ ಆದರೆ ಸಾಕು. ನೀನು ಪುನಃ ಡಾನ್ಸ, ಕನಸು, ಅಂತ ಶುರು ಮಾಡಿ ನಮ್ಮ ಸಂಸಾರದಲ್ಲಿ ಬಿರುಕು ಮೂಡಿಸ ಬೇಡ. ಇಷ್ಟು ದಿನ ಹೇಗಿತ್ತೊ ಹಾಗೆ ಇದ್ದರೆ ಒಳಿತು” ಅಂತ ಹೇಳಿದರು. ಇಲ್ಲಿಯ ವರೆಗೆ ನನಗೆ ತಿಳಿದಿರಲಿಲ್ಲ, ನನ್ನ ಡಾನ್ಸ ಮತ್ತು ಕನಸಿನ ಬಗ್ಗೆ ತಿಳಿದಿರಲಿಲ್ಲ. ಒಮ್ಮೆ ಕಳೆಯದನ್ನು ಮೆಲುಕು ಹಾಕಿದೆ, ಹೌದು ನಾನು ಯಾವಗಲು ಭರತನಾಟ್ಯದ ಬಗ್ಗೆ ಹೇಳಿದರೆ ಅಷ್ಟು ಆಸಕ್ತಿ ತೋರಿಸುತ್ತಿರಲಿಲ್ಲ. ನನಗೆ ಇವರ ಟೆನಿಸ್ ಆಟದ ಗಂಧ ಗಾಳಿ ಆಸಕ್ತಿ ಇಲ್ಲದಂತೆ ಇವರಿಗೂ ಭರತನಾಟ್ಯ ದ ಬಗ್ಗೆ ಆಸಕ್ತಿ ಇಲ್ಲ ಅಂತ ಅಂದುಕೊಂಡಿದ್ದೆ ಹೊರತು ಈ ರೀತಿಯ ಅಭಿಪ್ರಾಯ ಇದೆ ಅಂತ ಎಂದು ಭಾವಿಸಿರಲಿಲ್ಲ. ಮೊದಲ ಬಾರಿ ನೋಡಲು ಬಂದಾಗ ಹೇಳಬೇಕು ಅಂತ ಮನಸ್ಸಿನಲ್ಲೆ ಇತ್ತು ಹೊರತು,ಯಾವುದನ್ನು ಹೇಳಲಿಲ್ಲ. ಮೊದಲೆ ಹೇಳಿದ್ದರೆ ಈ ಸಂಭದ ಆಗ್ತಾ ಇತ್ತಾ ಅಂತ ಒಮ್ಮೆ ಯೋಚಿಸಿದೆ. ಒಮ್ಮೆಲೆ ಆಕಾಶ ಕಳಚಿಬಿದ್ದಂತಾಯಿತು. ಜೀವನದ ದಿಕ್ಕೆ ತಪ್ಪಿದಂತಾಯಿತು.
ಎರಡು ದಿನ ತಲೆಯಲ್ಲಿ ಸಾವಿರ ಯೋಚನೆ. ಅಪ್ಪ-ಅಮ್ಮ ನ ಬಳಿ ಹೇಳಿಕೊಂಡೆ. ಮಗಳ ಸಂಸಾರ ನೋಡಿ ಖುಶಿ ಇಂದ ಇದ್ದರು. ಅವರಿಗೆ ನನ್ನ ಕನಸಿನ ಆಳ ಅಷ್ಟಾಗಿ ತಿಳಿದಿರಲಿಲ್ಲ. ಅಮ್ಮ ಹೇಳಿದರು, ಹೆಣ್ಣಿಗೆ ಬೇಕಾದ ಸುಂದರ ಸಂಸಾರ ನಿನ್ನದಾಗಿದೆ. ಯಾಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವೆ. ಮುದ್ದಾದ ಗಂಡ, ಮಗ, ದೇವರಂತ ಅತ್ತೆ-ಮಾವ. ಯಾವ ಕಷ್ಟ ಕಾಣದೆ ಸುಖದಲ್ಲಿ ಇದ್ದೀಯಾ? ಸುಮ್ಮನೆ ಚಿಕ್ಕ ವಯಸ್ಸಿನಲ್ಲಿ ಕಂಡ ಕನಸನ್ನೆ ದೊಡ್ಡ ಮಾಡಿ ನಿನ್ನ ಭವಿಷ್ಯ ಹಾಳು ಮಾಡಿಕೊಳ್ಳ ಬೇಡ. ನಮ್ಮ ಸಂಭಂಧಿಕರಲ್ಲೆ ನಿನಗೆ ಸಿಕ್ಕಂತ ಮನೆ ಯಾರಿಗೂ ಸಿಕ್ಕಿಲ್ಲ. ನಿನ್ನ ಅದೃಷ್ಟ ನಿನ್ನ ಕೈಯಿಂದಲೆ ಹಾಳು ಮಾಡಿಕೊಳ್ಳ ಬೇಡ. ಗಂಡನಿಗೆ ನೀನು ಹೇಗಿರುವುದು ಇಷ್ಟವೋ ಹಾಗೆ ಇರು. ಅದೆ ಹೆಂಡತಿ ಆದವಳ ಧರ್ಮ” ಅಂತ ಹಳೆ ಕಾಲದ ಫಿಲೊಸಫಿ ಹೇಳಿದರು.  ಅಮ್ಮನ ಮಾತಿಗೆ ಅಪ್ಪ ಕೂಡ, “ಹೌದಮ್ಮ ಏನೋ ನಿನಗೆ ಆಸಕ್ತಿ ಇತ್ತು ಅಂತ ಚಿಕ್ಕ ವಯಸ್ಸಿನಲ್ಲಿ ಡಾನ್ಸ ಕಲಿಸಿದೆವು. ನೀನು ಚನ್ನಾಗಿ ಕಲಿತೆ. ಇನ್ನೇನು. ಏನೋ ನೆಮ್ಮದಿಯಿಂದ ಜೀವನ ನಡೆಸುವುದು ಮುಖ್ಯ. ದೇವರು ನಿನಗೆ ಯಾವುದು ಕೊರತೆ ಮಾಡಲಿಲ್ಲ. ಅಮ್ಮ ಹೇಳಿದ ಹಾಗೆ ಗಂಡನಿಗೆ ಇಷ್ಟವಾಗುವಂತೆ ಇರು” ಅಂತ ಹೇಳಿದರು. ಇಬ್ಬರ ಮಾತು ಕೇಳಿ ಏನು ಮಾಡಬೇಕು ಅಂತ ತಿಳಿಯದೆ ಕುಳಿತೆ. ಅಪ್ಪ-ಅಮ್ಮ ನಿಗೆ ನಾನು ಸುಖವಾಗಿ ಇರುವುದು ಬೇಕಿತ್ತು. ನನಗೆ ಸಂಧಿಪ ನ ಜೊತೆ ಯಾವ ಕಷ್ಟವು ಇಲ್ಲ. ಮೊದಲೆ ಭರತನಾಟ್ಯವನ್ನು ಮುಂದುವರೆಸುವದನ್ನು ತಿಳಿಸಿ ಮದುವೆ ಆಗದೆ ಇದ್ದದ್ದು ನನ್ನ ತಪ್ಪು ಅಂತ ಅನಿಸಿತು. ಇನ್ನೊಮ್ಮೆ ಈ ಎರಡು ವರೆ  ವರ್ಷದಲ್ಲಿ ಒಮ್ಮೆಯು ನೋವುಂಟು ಮಾಡದೆ ಗಿಳಿ ತರ ನೋಡಿಕೊಂಡ ಸಂಧಿಪ ನನ್ನ ಜೀವನದಲ್ಲಿ ಬರದೆ ಇದ್ದಿದ್ದರೆ…ಅಯ್ಯೋ ಕಲ್ಪನೆ ಮಾಡಿಕೊಳ್ಳಲು ಅಸಾದ್ಯ. ಪ್ರತಿ ಕ್ಷಣವು ಅವನ ಜೊತೆ ಚನ್ನಾಗಿ ಕಳೆದಿದ್ದೆ.
ಪ್ರೀತಿಯ ಚಕ್ರವ್ಯೂಹದಲ್ಲಿ ಸಿಲುಕಿದ್ದೆ. ಸಂಧಿಪನ ಬಿಟ್ಟು ಬದುಕುವ ಶಕ್ತಿ ನನ್ನಲಿಲ್ಲ. ಇನ್ನು ಚಿಕ್ಕ ವಯಸ್ಸಿನಿಂದಲು ಹೆಣೆದ ಕನಸು….ನನ್ನ ಉಸಿರಲ್ಲೆ ಬೆರೆತ ಭರತನಾಟ್ಯ ನೆನಪು ಅಷ್ಟೇ.
ಏನಾದರು ಪಡೆಯ ಬೇಕಿದ್ದರೆ, ಇನ್ನೊಂದನ್ನು ತ್ಯಾಗ ಮಾಡಬೇಕು. ನನ್ನ ಕನಸು ಎಷ್ಟು ಮುಖ್ಯವೋ ನನ್ನ ಮನೆ, ಸಂಸಾರವು ಅಷ್ಟೆ ಮುಖ್ಯ.  ಇವುಗಳಿಗೆ ಬೆನ್ನು ಹಾಕಿ ನನ್ನ ಕನಸನ್ನು ನನಸು ಮಾಡಿಕೊಳ್ಳುವ ಹುಡುಗಿ ನಾನಲ್ಲ. ನಾನು ಬೆಳೆದ ವಾತವರಣವೋ ಏನೋ. ವಾಸ್ಥವ ಅರಿತು ಬಾಳುವುದೆ ಮೇಲು.