Saturday, June 23, 2018

ಸಂದರ್ಭಃ ಹೊಸದಾದ ಮದುವೆ ಆದ ಸಂಸಾರದಲ್ಲಿ ಅಪಸ್ವರ. ಅವರವರ ಅಮ್ಮನ ಹತ್ತಿರ ಕಷ್ಟ ಹೇಳಿ ಕೊಳ್ಳುವ ಗಂಡ ಹೆಂಡತಿ.


ಸಂದರ್ಭಃ ಹೊಸದಾದ ಮದುವೆ ಆದ ಸಂಸಾರದಲ್ಲಿ ಅಪಸ್ವರ. ಅವರವರ ಅಮ್ಮನ ಹತ್ತಿರ ಕಷ್ಟ ಹೇಳಿ ಕೊಳ್ಳುವ ಗಂಡ 

ಹೆಂಡತಿ.
ತವರು ಮನೆಲಿ ರಾಧಾ ಟೇಬಲ್ ಮೇಲೆ ಕುಳಿತಿರ್ತಾಳೆ. ಅವ್ಳ ಅಮ್ಮಾ ತರಕಾರಿ ಹೆಚ್ಚುತ್ತಾ ಇರ್ತಾಳೆ.
ಹೆಂಡ್ತಿ ಅಮ್ಮಾಃ (ಪ್ರೀತಿಯಿಂದ)
ಯಾಕೆ ಬಂದಾಗಿನಿಂದ ನೋಡ್ತಾ ಇದೀನಿ. ಏನೋ ಯೋಚ್ನೇಲಿ ಮುಳುಗೊಗಿರ್ತ್ತಿಯಾ.ಹೊಸ್ದಾಗಿ ಮದುವೆ ಆಗಿರೋಳು ಲವ್ ಲವ್ ಕೆಯಿಂದ ಇರೋದ್ ಬಿಟ್ಟು ಒಳ್ಳೆ ಆಕಾಶ ತಲೆ ಮೇಲ್ ಬಿದ್ದಿರೋ ತರ ಕೂತಿರ್ತಿಯಾ.  ಯಾಕ್ ಏನಾಯ್ತು?
ರಾಧಾಃ (ಬೆಸರದಿಂದ)
ಏನ್ ಹೊಸ್ ದಾಗಿ ಮದುವೆ ಆಗಿರೋದೋ ಏನ್ ಲವಲವಿಕೆನೋ ಅದೆಲ್ಲಾ ಟಿ,ವಿ, ನಲ್ಲಿ ನೋಡೊಕ್ ಚಂದ. ಜಾಲಿ ಆಗಿ ಇರೋದು ನನ್ ಹಣೆಲಿ ಬರ್ದಿಲ್ಲಾ. ಮದುವೆ ಆಗಿ ಆರ್ ತಿಂಗ್ಳಿಗೆ ಯಾಕೋ ಲೈಫ್ ಸಪ್ಪೆ ಅನ್ಸತಾ ಇದೆ. ಡಿಗ್ರಿ ಮುಗಿದ್ ತಕ್ಷಣ ಯಾವ್ದಾದ್ರು ಕೆಲ್ಸಕ್ಕೆ ಸೇರ್ ಬೇಕಿತ್ತು. ಯಾಕ್ ಆದ್ರು ಮದುವೆ ಆದ್ನೋ.
(ಅಮ್ಮಾ ಮಗಳ ಮಾತಿಗೆ ಪ್ರಶ್ನಾರ್ಥಕವಾಗಿ ಮತ್ತು ಬೆಸರದಿಂದ ನೋಡ್ತಾಳೆ)
Inter cut
ಗಂಡನ ಮನೆಲಿ ಗಂಡ ಮೊಬೈಲ್ ನಲ್ಲಿ ಏನೋ ನೋಡ್ತಾ ಇರ್ತಾನೆ. ಅವನ ಬಳಿ ಬಂದು ಕುಳಿತುಕೊಳ್ಳೊ  ಅಮ್ಮಾ.
ಗಂಡನ ಅಮ್ಮಾಃ (ವಿಚಾರಣೆಮಾಡೊ ರೀತಿ)
ಏನೋ ಮಾಡ್ತಾ ಇದೀಯಾ? ನಿನ್ನೆಯಿಂದ ಈ ಮೊಬೈಲ್  ಹಿಡ್ದೆ ಇದೀಯಾ? ಏನಾಯ್ತು?
ರವಿ; (ಉದಾಸೀನವಾಗಿ)
 ಏನಿಲ್ಲಮ್ಮಾ…ಸುಮ್ನೇ ಏನೋ ಓದ್ತಾ  ಇದ್ದೆ. ಅಪ್ಪಾ ಎಲ್ಲಿ ಕಾಣ್ತಾನೆ ಇಲ್ಲಾ.
ಗಂಡನ ಅಮ್ಮಾಃ(ಸಹಜವಾಗಿ)
ಏನೋ ಮಾರ್ಕೆಟ್ ಕಡೆ ಹೋಗ್  ಬರ್ತೀನಿ ಅಂದ್ರು. ಅದ್ ಬಿಡು.. ನಾನು ನಿನ್ನೆನೇ ಕೇಳ್ಬೇಕು ಅಂತ ಇದ್ದೆ. ಅಪ್ಪಾ ಇದ್ರು ಅಂತ ಸುಮ್ನೇ ಇದ್ದೆ.
ರವಿ; (ಪ್ರಶ್ನಾರ್ಥಕವಾಗಿ)
ಏನಮ್ಮಾ…ಏನ್ ಕೇಳೋದಿತ್ತು.
ಅಮ್ಮಾಃ(ವಿಚಾರಣೆ ಮಾಡೊ ತರ)
ಏನಿಲ್ಲಪ್ಪಾ….ಯಾಕೋ ರಾಧಾ ಈ ಸಲ ತವರ ಮನೆಗೆ ಹೋಗ್ ಬೇಕಿದ್ರೆ ಯಾವತ್ತಿನ ತರ ಹೋಗಿಲ್ಲಾ. ಏನೋ ಬೆಸರ ಮಾಡ್ಕೊಂಡು ಹೋದ್ ಹಾಗಿತ್ತು.
(ಅಮ್ಮನ ಮಾತಿಗೆ ಶಾಕ್ ಆಗಿ ಏನ್ ಹೇಳ್ಬೇಕು ಅಂತ ತೋಚದೆ…ತಡವರಿಸುತ್ತಾ)
ರವಿಃ
ಹಾಗೇನಿಲ್ಲಮ್ಮಾ…ಅವ್ಳ ತಂಗಿಗೇನೋ ಎಕ್ಸಾಮ್ ಮುಗಿತಂತೆ. ಫ್ರೀ ಆಗಿದಾಳೆ ಅದಿಕ್ಕೆ ಇವ್ಳು ಮಾತಾಡಿದ ಹಾಗೆ ಆಗತ್ತೆ ಅಂತ ಹೋದ್ಲು.
ಅಮ್ಮಾಃ(ಸಹಜವಾಗಿ)
ನೋಡೋ..ನೀನ್ ನನ್ನ ಹತ್ರ ಮುಚ್ಚಿಡೋಕೆ ನೋಡ್ಬೇಡ. ನಿನ್ನೆ ನಿಮ್ಮ್ ಅಪ್ಪಾ ಇದ್ರು ಅಂತ ಸುಮ್ನೆ ಇದ್ದೆ. ನನ್ಗೆ ನಿನ್ನೆ ನೇ ಅನ್ಸಿತ್ತು. ಅವ್ಳು ಯಾವತ್ತಿನ ತರ ಹೋಗಿಲ್ಲಾ. ಹೋಗ್ಬೇಕಿದ್ರೆ ನನ್ಗೆ ಮುಖ ಕೊಟ್ಟು ಹೋಗ್ ಬರ್ತಿನಿ  ಅಂತನು ಹೇಳ್ಲಿಲ್ಲಾ. ಯಾಕೆ ಇಬ್ರು ಜಗಳ ಮಾಡ್ಕೊಂಡ್ರಾ. ಗಾಯ ಹಳೆತಾದ್ರೆ ವಾಸಿ ಆಗೋದು ಕಷ್ಟ. ಹಾಗೆ ಏನಾದ್ರು ಮನಸ್ಥಾಪ ಆದ್ರೆ ಈಗ್ಲೇ ಬಗೆಹರಿಸಿಕೊಳ್ಳಿ.
(ಹೇಳ್ಲೋ ಬೇಡ್ವೋ ಅನ್ನೋ ತರ ಪೋಸ್ ಕೊಡ್ತಾನೆ.)
Cut to
ಹೆಂಡತಿ ಮನೆ
ಹೆಂಡತಿ ಅಮ್ಮಾಃ(ಕಾಳಜಿಯಿಂದ)
ಯಾಕ್ ಏನಾಯ್ತು ಅಂತ ನನ್ನ ಹತ್ರ ಹೇಳೆ ಮನ್ಸಲ್ಲೇ ಇಟ್ಗೊಂಡು ಕೊರ್ಗ ಬೇಡ. 
Inter cut
ಗಂಡನ ಮನೆ
ರವಿಃ ( ತಡವರಿಸುತ್ತಾ)
ನಿನ್ನ ಹತ್ರ ಹೇಳ್ಭಾರ್ದು ಅಂತ  ಅಲ್ಲಮ್ಮಾ.ನೀನ್ ಸುಮ್ನೇ ಮೂಡ್  ಆಫ್ ಮಾಡ್ಕೊಳ್ತೀಯಾ ಅಂತಾ. ಅದು ಅಲ್ದೆ ಜಗಳ ಏನು ಆಗಿಲ್ಲಾ. ಏನೋ ಸ್ವಲ್ಪ miss understanding.
Cut to
ಹೆಂಡತಿ ಮನೆ
ರಾಧಾಃ(ಬೆಸರದಲ್ಲಿ)
ಏನು ಅಂತ ಹೇಳ್ಲಿ.  ಮದುವೆ ಆದ ಹೊಸದರಲ್ಲಿ ಎಲ್ಲಾ ಹೆಂಡತಿ ಜೊತೆ ಟೈಮ್ ಕಳಿಯೋಕೆ ಇಷ್ಟ ಪಡ್ತಾರೆ. ಆದ್ರೆ ಇವ್ರಿಗೆ ಅದ್ ಏನೋ ಯಾವಾಗ್ಲು ಅಮ್ಮಾ…ಅಪ್ಪಾ..ತಂಮ್ಮಾ…ಅವ್ರ ಜೊತೆ ಟೈಮ್ ಕಳಿಯೋಕೆ ಇಷ್ಟ. ತಂಮ್ಮನ ಜೊತೆ ಜೋಕ್ಸ್ ಮಾಡ್ತಾ ಮಾತಾಡ್ದಷ್ಟು ನನ್ನ ಜೊತೆ ಮಾತಾಡಲ್ಲಾ. ನನ್ ಜೊತೆ ಒಂದ್ ಅರ್ಧ ಗಂಟೆ ಪ್ರೈವೆಟ್ ಆಗಿ ಟೈಮ್ ಕಳಿಯಲ್ಲಾ. ಹಾಳಾದ್ ಪ್ರೈವೆಸಿ ಅಂತಾನೆ ಇಲ್ಲಾ.
Inter cut
ಗಂಡನ ಮನೆ
ರವಿಃ(ಮೂಡ್ ಒಫ್ ಆಗಿ)
ಅವ್ಳಿಗೆ ನಾನ್ ಯಾವಾಗ್ಲು ಅವ್ಳ್ ಜೊತೆನೆ ಇರ್ಬೇಕು ಅಂತ. ತನ್ ಒಬ್ಳಿಗೆ importance  ಕೊಡ್ಬೇಕು. ಸ್ವಲ್ಪ್ ಹೊತ್ತು ನಿಮ್ಗಳ್ ಜೊತೆ ಟೈಮ್  ಸ್ಪೆನ್ಡ್ ಮಾಡಿದ್ರು ಕಿರಿಕಿರಿ ಮಾಡ್ತಾಳೆ. ನನ್ಗು ನಮ್ ಮನೆ ನನ್ ಪ್ರೇಂಡ್ಸ್ ಅಂತ ಇರಲ್ವಾ.  ಸಣ್ ಸಣ್ ದ್ರಲ್ಲೂ ತಪ್ಪು ಹುಡುಕಿದ್ರೆ ನಾನ್ ಏನ್ ಮಾಡ್ಲಿ. ನಾನ್ ಅವ್ಳ್ ಅಮ್ಮಾ ತಂಗಿ ಜೊತೆ ಮಾತಾಡಿದ್ರೆ ಹೀಗೆ ಮಾಡ್ತೀನಾ. ತುಂಬಾ selfish.
Cut to
ಹೆಂಡತಿ ಮನೆ
ರಾಧಾಃ (ಬೆಸರದಲ್ಲಿ)
ಅಮ್ಮಾ ನಾನ್ ಇವ್ರು ಮೂರ್ ಹೊತ್ತು ನನ್ ಜೊತೆನೆ ಇರ್ಲಿ ಅಂತ ಹೇಳಲ್ಲಾ. ಸ್ವಲ್ಪ ಆದ್ರು ನಾನು ನಮ್ದು ಅಂತ ನೋಡ್ಕೊಳ್ಳೊದಲ್ವಾ. ಸ್ವಲ್ಪವಾದ್ರು selfish ಇರ್ಬೇಕು. ಹೊಸ್ದಾಗಿ ಮದುವೆ ಆದಾಗ್ ನಮ್ಗು ಪ್ರೈವೆಸಿ ಬೇಕು ಅಂತ ಅನ್ಸಲ್ವಾ.
ನಾವು ಡಿನ್ನರ್ ಗೆ ಚಾಟ್ಸ್ ತಿನ್ನೋಕೆ ಇಬ್ರೆ ಹೋಗಿದ್ದೆ ಇಲ್ಲಾ.ಮನೆ ಮಂದಿ ಎಲ್ಲಾ ಸೇರ್ ಹೋಗೋದೆ. (ಸ್ವಲ್ಪ ರೇಗೊ ದ್ವನಿ)  ಒಳ್ಳೆ ಕುರಿ ಮಂದೆ ತರ. ಅದು ಮೊದ್ಲಿಂದನು ಅವ್ರ ಮನೆಲಿ ರೂಡಿ ಅಂತ ಮೊನ್ನೆ ಕಡ್ಡಿ ಮುರಿದ ಹಾಗೆ ಹೇಳಿದ್ರು.
Inter cut
ಗಂಡನ ಮನೆ
ರವಿಃ(ಬೆಸರದಿಂದ)
ಎಲ್ಲದಕ್ಕು ನಾವು ಇಬ್ರೆ ಇಬ್ರೆ ಅಂತ ಹೇಳೋದು. ನನ್ಗೆ ನಿಮ್ನ ಬಿಟ್ಟು ನಾವ್ ಆಚೆ ಊಟ ಮಾಡ್ಕೊಂಡು ಬರೋದು ಸರಿ ಹೋಗಲ್ಲ. ಅದು ಅವ್ಳಿಗೆ ಎಷ್ಟು ಸರಿ ಹೇಳಿದ್ರು ಅರ್ಥ ಆಗಲ್ಲಾ. ನಾವ್ ಟೂರ್ಗೆ  ಇಬ್ರೆ ಹೋಗ್ ಬಂದ್ವಿ…ನಾವಿಬ್ರೆ ಸುತ್ತಾಡ್ಕೊಂಡು ಬಂದ್ವಿ. ಮತ್ತೇನ್ ಇಲ್ಲಿ ಬಂದ್ ಮೇಲ್  ರಾಮಾಯಣನೋ…ಆಚೆ ಹೋದಾಗಂತು ಇಬ್ರೆ ಹೋಗ್ತಿವಿ. ಇಲ್ಲು ಇಬ್ರೆ ಇಬ್ರೆ ಅಂದ್ರೆ…
(ಎರಡು ಮನೆಲೂ ಅಮ್ಮಂದಿರು ಆಸಕ್ತಿಯಿಂದ ಕೇಳ್ತಾರೆ.)
Inter cut
ಗಂಡನ ಅಮ್ಮಾಃ(ಸಮಾಧಾನದಿಂದ)
ಅಯ್ಯೋ….ನಾನ್ ಯಾವ್ ದೊಡ್ಡ್ ಸಮಸ್ಯೆ ಅಂತ  ಅಂದ್ಕೊಂಡೆ. ಇದೆಲ್ಲಾ ಈಗಿನ್ ಎಲ್ಲಾ ಹೆಣ್ಣ್ ಮಕ್ಕಳ್ ಸಮಸ್ಯೆ. ಈಗಿನವ್ರು ಬೆಳಿಯೋ ವಾತಾವರಣನೋ ಏನೋ…ಈಗ್ ಇದು ಕಾಮನ್ ಆಗಿ ಬಿಟ್ಟಿದೆ. ಇದ್ನೇ ದೊಡ್ದ ಮಾಡ್ಬೇಡ. ಅವ್ಳಗೂ ಸ್ವಲ್ಪ ಸಮ್ಯ ಬೇಕಾಗತ್ತೆ. ಅವ್ಳಿಗೂ ಏನೋ ಆಸೆ ಕನಸು ಅಂತ ಇರತ್ತೆ. ನೀನು ಅದ್ರನ್ನಾ ಅರ್ಥ ಮಾಡ್ಕೊಂಡು ಹೋಗ್ಬೇಕಪ್ಪಾ.
ರವಿಃ (ಬೆಸರದಿಂದ,ಸ್ವಲ್ಪ ಕಿರಿಕಿರಿಯಾಗಿ)
ಏನ್ ಕನಸೊ…ಏನೋ..ಚಿಕ್ ಹುಡುಗಿನಾ..ಸ್ವಲ್ಪನು ನಮ್ಗೂ ಒಂದ್ ಪ್ಯಾಮಿಲಿ ಇದೆ ಅದ್ರ  importance ಗೊತ್ತಾಗಲ್ವಾ.?ಛೇ…
Cut to
ಹೆಂಡತಿ ಮನೆ
ಹೆಂಡತಿ ಅಮ್ಮಾಃ(ಸಮಾಧಾನ ಮಾಡೊ ತರ)
ನೋಡೆ ಇದೆಲ್ಲಾ ಎಲ್ಲರ ಮನೆಲೂ ಇದ್ದಿದ್ದೆ. ಇದ್ರನ್ನೇ ದೊಡ್ಡ ಮಾಡ್ಬೇಡ. ಏನೋ ಮೊದ್ಲಿನಿಂದ ಅಪ್ಪಾ..ಅಮ್ಮಾ..ತಂಮ್ಮ ಅಂತ ಬೆಳೆದ್ ಬಂದವ್ನು. ಅವ್ನಿಗೂ ಅವ್ನ ಮನೆ ಅಂತ ಇರಲ್ವಾ…ನೀನು ನಮ್ಗೆ ಒಂದ್ ದಿನ ಪೋನ್ ಮಾಡ್ದೆ ಇದ್ರೆ ಮಿಸ್ ಮಾಡ್ಕೊಂಡೆ ಅಂತ ಹೇಳಿ ಮೇಸೆಜ್ ಮಾಡಿದ್ ಹಾಗೆ. ನೀನು ಸ್ವಲ್ಪ ಸುಧಾರ್ಸಕೋ. ಅವ್ನು ಕ್ರಮೇಣ ಹೊಂದ್ಕೊಂಡು ಹೋಗ್ತಾನೆ. ನಿಧಾನಕ್ಕೆ ಪ್ರೀತಿಯಿಂದ  ನಿನ್ ದಾರಿಗೆ ತರ್ಬೇಕು. ಇಷ್ಟು ಚಿಕ್ಕ್ ವಿಷ್ಯಕ್ಕೆ ಇಲ್ಲ ಬಂದ್ ಕೂತ್ರೆ ಮತ್ತು ದೊಡ್ಡ್ ದಾಗೆ ಹೋಗತ್ತೆ. 
Inter cut
ಗಂಡನ ಮನೆ
ಗಂಡನ ಅಮ್ಮಾಃ(ಸಮಾಧಾನದಿಂದ)
ಹಾಗೆನಿಲ್ಲಾ ಅವ್ಳು ಸ್ವಲ್ಪ ಒಂಟಿ ಆಗೆ ಬೆಳ್ದಿದ್ದಾಳೆ. ಅಪ್ಪಾ ಇಲ್ಲಾ..ಬಂಧು ಬಳಗ ಅಂತ ಯಾರ್ನು ಹಚ್ಚಗೊಂಡಿಲ್ಲಾ. ತಾನು ತನ್ನ ಅಮ್ಮಾ..ತಂಗಿ. ಅವ್ಳಿಗೂ ಸ್ವಲ್ಪ ಸಮಯ ಬೇಕಾಗತ್ತೆ. ನೀನು ಹೀಗೆ ಸಿಟ್ಟು ಮಾಡಿ ಸಾದಿಸೊಕ್ ಹೋಗ್ಬೇಡ. ಕಡ್ಡಿನಾ ಉದ್ದ ಮಾಡಿ ನಮ್ ನೆಂಟ್ರು-ಇಷ್ಟ್ರ ಆಡ್ಕೊಳ್ಳೋ ತರ ಮಾಡ್ಬೇಡ.
ರವಿಃ(ಸಮಾಧಾನವಾಗಿ)
ಅಯ್ಯೋ…ಹಾಗೆನಿಲ್ಲಮ್ಮಾ..ನೀನ್ ಅಂದ್ಕೊಳ್ಳೊವಷ್ಟು ದೊಡ್ದಾಗಿಲ್ಲಾ. (ನಗ್ತಾ) ಹಾಗ್ ನೋಡೋಕ್ ಹೋದ್ರೆ ನನ್ಗೆ ಅವ್ಳ್ ಬಿಟ್ಟಿರೋದು ಕಷ್ಟನೇ.
ಅಮ್ಮಾಃ(ನಗ್ತಾ)
ಓ….ಮತ್ತ ಯಾಕ್ ಮೀನಾ ಮೇಷ ನೋಡ್ತೀಯಾ…ಈ ಶನಿವಾರ ಭಾನುವಾರ ಅವ್ಳ್ ಅಮ್ಮನ್ ಮನೆಗೆ ಹೋಗು. ಸ್ವಲ್ಪ್ ಸುತ್ತಾಡ್ಕೊಂಡು   ಮನೆಗೆ ಬನ್ನಿ.  ಅವ್ಳಿಗೂ ಸ್ವಲ್ಪ ಚೈಂಜ್ ಆಗತ್ತೆ.  
ರವಿಃ(ಸರಿ ಅನ್ನೊ ತರದಲ್ಲಿ)
ಪೋನ್ ಮಾಡಿ ನೋಡ್ತೀನಿ. ಅವ್ಳ್ ಏನ್ ಹೇಳ್ತಾಳೋ…?
Cut to
ಹೆಂಡತಿ ಮನೆ
ರಾಧಾಃ(ಸಮಾಧಾನದಿಂದ)
ಹೋಗಮ್ಮಾ…ದೊಡ್ಡದೇನಾಗಲ್ಲ. (ನಗ್ತಾ) ನನ್ಗೆ ಅವ್ರು ಯಾವಗ್ಲು ನನ್ನ ಜೊತೆ ಇರ್ಲಿ ಅನ್ನೊ ಆಸೆ ಹೊರತು ಅವ್ರನ್ನಾ ಬಿಟ್ ಇರೋಕ್ ಆಗಲ್ಲ.ಈ ವೀಕ್ ಎನ್ಡ್ ಇಲ್ಲಿಗೆ ಬರೋಕೆ ಮೇಸೆಜ್ ಮಾಡ್ತೀನಿ ಏನ್ ಹೇಳ್ತಾರೋ ನೋಡೋಣ.?
ರಾಧಾ ರವಿ ಮುಖ ಸ್ಕ್ರೀನ್ ಶೇರ್ ಆಗತ್ತೆ.
ಕಟ್       

ಸಂದರ್ಭಃ ಮಗು ಆಗ್ದೆ ಇರೋದಕ್ಕೆ ಜ್ಯೋತಿಷ್ಯ ಕೇಳೊ ಅತ್ತೆ ಸೊಸೆ, ಅದಕ್ಕೆ ಒರಟು ಉತ್ತರ ಕೊಡೊ ಮಗ.


ಸಂದರ್ಭಃ ಮಗು ಆಗ್ದೆ ಇರೋದಕ್ಕೆ ಜ್ಯೋತಿಷ್ಯ ಕೇಳೊ ಅತ್ತೆ ಸೊಸೆ, ಅದಕ್ಕೆ ಒರಟು ಉತ್ತರ ಕೊಡೊ ಮಗ.
ಅತ್ತೆ ಸೊಸೆ ಮುಂಬಾಗಿಲಲ್ಲಿ ನಿಂತಿರ್ತಾರೆ. ಶಾಸ್ತ್ರಿಗಳು ಹೋಗಿ ಬರ್ತಿನಿ ಅನ್ನೋದ್ರಲ್ಲಿ ಸೀನ್  ಓಪನ್ ಆಗತ್ತೆ.
ಶಾಸ್ತ್ರಿಃ (ನಯವಾಗಿ)
(ಅತ್ತೆ ನೋಡ್ತಾ) ಸರಿ ಅಮ್ಮಾ ನಾನ್ ಇನ್ನು ಬರ್ತಿನಿ. ನಿಮ್ ಹತ್ರ ನನ್ನ ಪೋನ್ ನಂಬರ್ ಇದ್ಯಲ್ಲಾ…ನಿಮ್ಗೆ ಯಾವಾಗ್ ಅನುಕೂಲನೋ ಒಂದ್ ಎರ್ಡು ದಿನ ಮುಂಚೆ ನನ್ಗೆ ಪೋನ್ ಮಾಡಿ ತಿಳಿಸಿ. ನನ್ಗೆ ತಯಾರಿ ಮಾಡ್ಕೊಳ್ಳೋಕೆ ಅನುಕೂಲ ಆಗತ್ತೆ.
ಅತ್ತೆಃ(ನಮಸ್ಕಾರ ಮಾಡ್ತಾ)
ಸರಿ ಶಾಸ್ತ್ರಿಗಳೆ ನೀವ್ ಹೇಳಿದ್ ಎರ್ಡು ದಿನದಲ್ಲಿ ಯಾವಾಗ ಅಂತ ನಿಮ್ಗೆ ಫೋನ್ ಮಾಡಿ ತಿಳ್ಸತ್ತೀವಿ.
ಶಾಸ್ತ್ರಿಃ(ಸಹಜವಾಗಿ)
ಸರಿ ಅಮ್ಮಾ ನಾನ್ ಬರ್ತ್ತೀನಿ..ಸಿಗೋಣ.
(ಶಾಸ್ತ್ರಿಗಳು ಗೇಟ್ ಹತ್ತಿರ ಹೋಗ್ತಾರೆ. ಅಷ್ಟರಲ್ಲೆ ಗೇಟ್ ಹತ್ತಿರ ಬರೋ ಮಗ. ಮಗ ತೋರ್ಗಾಣಿಕೆಗೆ ನಮಸ್ಕಾರ ಹೇಳ್ತಾನೆ. ಶಾಸ್ತ್ರಿಗಳು ಮುಗುಳು ನಗ್ತಾ/ನಮಸ್ಕಾರ ಮಾಡ್ತಾ  ಆಚೆ ಹೋಗ್ತಾರೆ. ಅವ್ರ ಹೋದ್ ಮೇಲೆ ಮಗ ಗಂಟು ಮುಖದಿಂದ ಅಮ್ಮಾ ಹೆಂಡತಿ ಕಡೆ ಬರ್ತಾನೆ.)
ಮಗಃ(ಕಿರಿಕಿರಿಯಿಂದ)
ಏನ್ ಅಮ್ಮಾ ನಿಮ್ಗೆ ಎಷ್ಟ್ ಸಲ ಹೇಳಿದ್ರು ಅರ್ಥ ಆಗಲ್ಲಾ ಅಲ್ವಾ… ಆ ಪೂಜೆ ಇನ್ನು ನಿಮ್ ತಲೆಯಿಂದ ಹೋಗಿಲ್ವಾ.
(ಅಮ್ಮಾ ಅರ್ದಕ್ಕೆ ತಡೆದು…)
ಅಮ್ಮಾಃ(ತಗ್ಗಿದ ದ್ವನಿಯಲ್ಲಿ)
ಶ್….ಇಲ್ಲೆನೋ ನಿನ್ದು. ಮೊದ್ಲು ಒಳಗ್ ಬಾ..ಕೂತ್ ಮಾತಾಡೋಣ. ಎಲ್ಲಾ ಹೇಳ್ತಿನಿ.
(ಮೂವರು ಒಳಗೆ ಹೋಗ್ತಾರೆ. ಸೋಫಾದಲ್ಲಿ ಕಳಿತುಕೊಳ್ತಾರೆ. ಈ ಎಲ್ಲಾ ಸೀನ್ ನಲ್ಲು ಸೊಸೆ ಅತ್ತೆ ಹಿಂದೆ ಸ್ವಲ್ಪ ಡಲ್ ಆಗಿ ಇರ್ತಾಳೆ.)
ಮಗ; (ಕಿರಿಕಿರಿಯಿಂದ)
ಇನ್ನೇನ್ ಮಾತಾಡೊದಮ್ಮಾ…ನಿಮ್ಗೆ ಎಷ್ಟ್ ಸಲ ಹೇಳಿದ್ರು ಅರ್ಥ ಆಗಲ್ವಾ…ಅಂಗೈ ತೋರಿಸಿ ಅವಲಕ್ಷಣ ಹೇಳ್ಸಗೊಳ್ಬೇಕು ಅಂತ ಡಿಸೈಡ್ ಮಾಡಿದ್ದೀರಾ. ಇವ್ರಿಗೆಲ್ಲಾ ನಿಮ್ ಹತ್ರ ಹೇಗ್ ಮಾತಾಡ್ಬೇಕು.. ನಿಮ್ನಾ ಹೇಗ್  ಫೂಲ್ ಮಾಡ್ಬೇಕು ಅಂತಾ ಚನಾಗ್ ಗೊತ್ತು.
ಅಮ್ಮಾ;(ತಿಳುವಳಿಕೆ ಹೇಳೋ ತರ)
ನೋಡೊ..ನೀನ್ ಅಂದ್ಕೊಂಡ್  ಹಾಗ್ ಇವ್ರಲ್ಲಾ. ನನ್ಗೆ ಇವ್ರ ಬಗ್ಗೆ ಚನಾಗ್  ಗೊತ್ತು. ಅದು ಅಲ್ದೆ ನಿನ್ನ್ ಸೀತಾ ದೊಡ್ಡಮ್ಮನ ಮಗ್ಳಿಗೆ ಇವ್ರೆ ಪೂಜೆ ಮಾಡಿದ್ದಕ್ಕೆ ಅವ್ಳಿಗೆ ಒಂದು ಮಗು ಅಂತ ಆಯ್ತು.
ಮಗಃ(ಸ್ವಲ್ಪ ಕೋಪ ಕಿರಿಕಿರಿ)
ಅಮ್ಮಾ ಪ್ಲೀಸ್….ಈ ತರ ಮಾತಾಡಿ ನನ್ಗೆ ಮತ್ತು ಇರಿಟೇಟ್ ಮಾಡ್ಬೇಡಿ. ಸೀತಾ ದೊಡ್ಡಮ್ಮಾ ನಿಮ್ದೆ ಇನ್ನೊಂದು ರೂಪಾ. ಇವ್ರು ದೊಡ್ಡಮ್ಮನಿಗು ಚನ್ನಾಗೆ ಬ್ರೇನ್ ವಾಶ್ ಮಾಡಿದ್ದಾರೆ.
(ಅಮ್ಮಾ…ಏನ್ ಹೇಳ್ಬೇಕು ಅಂತ ತೋಚದೆ ಕುಳಿತಿರ್ತಾಳೆ. )
ಸೊಸೆ;(ಕಣ್ಣಲ್ಲಿ ನೀರು ತುಂಬಿರತ್ತೆ)
ಯಾಕ್  ರೀ ಹೀಗ್ ವಾದ ಮಾಡ್ತಾ ಇದೀರಾ.  ನಾವ್ ಏನ್ ನಿಮ್ ಹತ್ರ ಸಂಜೀವಿನಿ ಪರ್ವತ ತಂದ್ಕೊಡಿ ಅಂತ ಕೇಳಿದ್ವಾ. ಒಂದ್ ಚಿಕ್ ಪೂಜೆ ಮನೆಲಿ ಇಟ್ಗೊಳ್ಳೊಣ ಅಂತ ಕೇಳ್ತಾ ಇದೀವಿ. ಅದು ನಮ್ಗೆ ಮಕ್ಳಾಗ್ಲಿ ಅಂತ. ನನ್ಗೊ ಏನೋ ಒಂದ್ ಮಗು ಆದ್ರೆ ಸಾಕು ಅಂತ ಆಗಿದೆ. ಎಲ್ಲರ್ ಹತ್ರ ಅಂದ್ಸಗೊಂಡ್ ಅಂದ್ಸಗೊಂಡ್ ಸಾಕಾಗಿದೆ.  ಇದ್ರ ಮೇಲ್ ಒಂದ್ ಪೂಜೆ ಮಾಡ್ಸೊದಕ್ಕೆ  ನೀವು ಇಷ್ಟು ಸಿಟ್ಟು ಮಾಡ್ಕೊಳ್ತಿರಾ.
ಮಗಃ(ಕಿರಿಕಿರಿಯಿಂದ)
What nonsence …educated ಆಗಿ ಈ ತರ ಮಾತಾಡ್ತಿಯಲ್ಲ. ಪೂಜೆ ಪುನಸ್ಕಾರದಿಂದ ಮಕ್ಳಾಗತ್ತೆ ಅಂದ್ರೆ ಊರಲ್ಲಿ ಇರೋ ಬರೋ ಹಾಸ್ಪಿಟಲ್ ಎಲ್ಲಾ ಮುಚ್ಗೊಂಡು ಹೋಗ್ಬೇಕಾಗಿತ್ತು. ನಿನ್ಗೆ ಸ್ವಲ್ಪ scientific ಆಗಿ ಯೋಚ್ನೇ ಮಾಡೊಕ್ ಬರಲ್ವಾ.
ಅಮ್ಮಾ;( ತಿಳಿಸಿ ಹೇಳೋ ತರ)
ಯಾಕೋ ಈ ತರ ಮಾತಾಡ್ತೀಯಾ. ನಾವ್ ಪೂಜೆಯಿಂದ ಮಕ್ಳಾಗತ್ತೆ ಅಂತ ಹೇಳ್ತಾ ಇಲ್ಲಾ. ಸ್ವಲ್ಪ ಆದ್ರು ದೈವ ಸಂಕಲ್ಪ ಅನ್ನೋದು ಇರ್ಲೇ ಬೇಕು. ಅದು ಅಲ್ದೆ ನೀನು ಪೂಜೆ ಬಗ್ಗೆ ತಲೆ ಕೆಡಿಸಿಕೊಳ್ ಬೇಡ. ನಾವ್ ಎಲ್ಲಾ ತಯಾರಿ ಮಾಡ್ಕೊಳ್ತೀವಿ. ನೀನು ಪೂಜೆಗೆ ಕೂತ್ರೆ ಸಾಕು.
(ಕಿರಿಕಿರಿಯಿಂದ ಕುಳಿತಿರೋ ಮಗ)
ಸೊಸೆಃ(ಬೇಡಿಕೊಳ್ಳೊತರ)
ನೋಡಿ ಯಾವ್ದಾದ್ರು ವೀಕ್ ಎನ್ಡ್ ಮಾಡ್ಸತ್ತೀವಿ. ನಿಮ್ಗೆ ಆಫೀಸ್ ಕೆಲ್ಸಕ್ಕು ತೊಂದ್ರೆ ಆಗಲ್ಲ. ಅದು ಅಲ್ದೆ ನಾವ್ ಮನೆವ್ರು ಅಷ್ಟೆ. ನೆಂಟ್ರನ್ನಾ ಯಾರು ಕರಿತಾ ಇಲ್ಲಾ.
ಅಮ್ಮಾಃ(ಸಮಾಧಾನದಿಂದ)
ಹೌದಪ್ಪಾ…ನಿನ್ಗೆ ಏನು ತೊಂದ್ರೆ ಆಗಲ್ಲ. ದಯವಿಟ್ಟು ಇದ್ ಒಂದ್ ಮಾತ್ ನಡ್ಸಗೊಡು. ದಿನ್ ಬೆಳ್ಗಾದ್ರೆ ನಿನ್ ಹೆಂಡ್ತಿ ಕಣ್ಣಿರ್ ಹಾಕೋದ್ ನೋಡಕಾಗಲ್ಲಾ. ನನ್ಗು ಒಂದ್  ಮೊಮ್ಮಗನೋ…ಮೊಮ್ಮಗಳೊ…ನೋಡೋ ಆಸೆ ಇದೆ.
(ಸೊಸೆ ಬಾಡಿದ ಮುಖದಲ್ಲಿ ಕುಳಿತಿರ್ತಾಳೆ.  ಮಗನಿಗೆ ಹೆಂಡ್ತಿ ಮುಖ ನೋಡಿ ಅಯ್ಯೋ ಅನ್ಸತ್ತೆ.)
ಮಗಃ(ಬೇಸರ ಆದ್ರು… ಸ್ವಲ್ಪ ಗಂಭಿರವಾಗಿ)
ನೋಡಿ…ನನ್ಗೆ ಈ ಪೂಜೆ ಮೇಲಲ್ಲಾ ನಂಬಿಕೆ ಇಲ್ಲಾ. ನಾನು scientific ಆಗಿ ಯೋಚ್ನೇ ಮಾಡೋವ್ನು. ಆದ್ರು ನಿಮ್ ಸಮಾಧಾನಕ್ಕೆ ಒಪ್ಗೊಳ್ತಾ ಇದೀನಿ. ಬಟ್ ಇದೇ ಲಾಸ್ಟ್ ಇನ್ನು ನೀವ್ ಜಪ್ಪಯ್ಯಾ ಅಂದ್ರು ನಾನ್ ಯಾವ್ ಪೂಜೆಗೆ ಒಪ್ಪಲ್ಲಾ…ಯಾವ್ ದೇವಸ್ಠಾನಕ್ಕು ಬರಲ್ಲಾ. ನೀವ್ ಅತ್ತೆ ಸೊಸೆ ಎಷ್ಟು  ಕೇಳ್ಕೋಂಡ್ರು ಅಷ್ಟೆ.
(ಅಮ್ಮಾ ಹೆಂಡತಿ ಮುಖನು ನೋಡ್ದೆ ಸಡನ್ನಾಗಿ ಎದ್ದು ಹೋಗ್ತಾನೆ. ಅಮ್ಮಾ ಸೊಸೆ ಒಬ್ರ ಮುಖ ಒಬ್ರು ನೋಡಿ ಸದ್ಯಾ ಒಪ್ಪಿದ್ನಲ್ಲಾ ಅನ್ನೊ ಪೋಸ್ ಕೊಡ್ತಾರೆ.)

ಕಟ್

ಸಂದರ್ಭಃ ಗಂಡನ ಕಳೆದುಕೊಂಡ ಸುಮಾಳ ಮಾನಸಿಕ ತೊಳಲಾಟ.


ಸಂದರ್ಭಃ ಗಂಡನ ಕಳೆದುಕೊಂಡ ಸುಮಾಳ ಮಾನಸಿಕ ತೊಳಲಾಟ.
ಸುಮಾ  ಸುಮ್ನೆ ಮಂಕಾಗಿ ಪೇಪರ್ ಓದ್ತಾ ಇರ್ತಾಳೆ. ಅಲ್ಲೆ ಮಗಳು(ಸುಮಾರು ೭-೮ ವರ್ಷ)  ತನ್ನ ಪಾಡಿಗೆ ಹೋಮ್  ವರ್ಕ ಮಾಡ್ತಾ ಇರ್ತಾಳೆ. ಅಷ್ಟರಲ್ಲೆ ಕಾಲಿಂಗ್ ಬೆಲ್ ಆಗತ್ತೆ. ಬಾಗಿಲ ತೆಗಿಯೋ ಸುಮಾ.  ಬಾಗಿಲಲ್ಲಿ ನಿಂತಿರೋ ರಾಜೇಶ್.(ಕೈ ಯಲ್ಲಿ  ಸ್ವಲ್ಪ ಪೇಪರ್ಸ ಇರತ್ತೆ).
ಸುಮಾಃ (ಸಹಜವಾಗಿ)
ಬನ್ನಿ ರಾಜೇಶ್....ನಾನೇ ನಿಮ್ಗೆ ಪೋನ್ ಮಾಡ್ಬೇಕು ಅಂತಾ ಇದ್ದೆ.
(ರಾಜೇಶ್ ಒಳಗೆ ಬರ್ತಾ ಸೋಫಾದ್ ಮೇಲ್ ಕುಳಿತುಕೊಳ್ತಾನೆ.)
ರಾಜೇಶಃ (ಸಹಜವಾಗಿ)
ಸಾರಿ..ಸುಮಾಅವ್ರೆ  ಸ್ವಲ್ಪ ಲೇಟ್  ಆಯ್ತು. ಎಕ್ಸಡನ್ಟ  ಮತ್  ಬೈಕ್ ಇನ್ಶುರನ್ಸ ಅಂತ ಏನೇನೊ formalities  ಇತ್ತು. ಎಲ್ಲಾ ಕ್ಲಿಯರ್ ಮಾಡೋ ತನಕ ಇಷ್ಟು ಟೈಮ್ ಹಿಡಿತು.
ಸುಮಾಃ (ಸ್ವಲ್ಪ್ ಡಲ್ ಆಗಿ)
ಓ ಹೌದಾ,,.ಮುಗಿತಾ ಇನ್ನೇನಾದ್ರು….
ರಾಜೇಶ್ಃ(ಸಹಜವಾಗಿ)
ಹಾಗೇನಿಲ್ಲಾ….ಎಲ್ಲಾ ಕ್ಲಿಯರ್ ಆಯ್ತು. ಇನ್ನೇನ್ fifteen days ಗೆ ನಿಮ್ ಕೈ ಗೆ ಅಮೌನ್ಟ್ ಬರತ್ತೆ.
(ಸುಮಾ ಗಂಭಿರವಾಗ್ತಾಳೆ…ಏನೋ ಯೋಚ್ನೆಲಿ ಕಳ್ದೊಗ್ತಾಳೆ. ಸುಮಾಳ ನೋಡ್ತಾ ರಾಜೇಶ್..)
ರಾಜೇಶಃ(ಬೇಸರ ಮತ್ತು ಗಂಭಿರ)
ನೋಡಿ ಸುಮಾ ಅವ್ರೆ ನನ್ಗೆ ನಿಮ್ ಪರಿಸ್ಥಿತಿ ಅರ್ಥ ಆಗತ್ತೆ. ಶಿವು ನನ್ಗೆ ಮೊದ್ಲಿಂದನು ಗೊತ್ತು ಅವ್ನು ಯಾವಾಗ್ಲು ಸೆವಿಂಗ್ಸ್…ಫ್ಯುಚರ್ ನಲ್ಲಿ ಮುಖ್ಯಾ ಅಂತ ಹೇಳ್ತಾ ಇದ್ದ. ಇವತ್ತು ನಿಮ್ನಾ ನಿಮ್ ಮಗ್ಳನ್ನಾ ಅವ್ನು ಅರ್ಧಕ್ಕೆ ಬಿಟ್ಟು ಹೋದ್ರು ಅವ್ನಾ ಆ ತೇರಿ ನಿಮ್ಮಾ ನಿಮ್ ಮಗ್ಳ ಜೀವ್ನಕ್ಕೆ  ಹೆಲ್ಪ ಆಗಿದೆ. ನೀವ್ ಏನು ಚಿಂತೆ ಮಾಡ್ಬೇಡಿ. ಸುಮಾರು 80 /90 ಲಕ್ಷ ಸಿಗತ್ತೆ.
(ಸುಮಾ ಶಾಕ್ ಆಗಿ ನೋಡ್ತಾಳೆ.  ಏನ್ ಹೇಳ್ಬೇಕು ಅಂತ ತೋಚದೆ ಸುಮ್ನೆ ಇರ್ತಾಳೆ.)
ರಾಜೇಶಃ(ಸಹಜವಾಗಿ)
ಸಾರಿ ಹೀಗ್ ಹೇಳ್ತೀನಿ ಅಂತ ತಪ್ಪು ತಿಳ್ಕೋ ಬೇಡಿ. ಶಿವು ನಿಮ್ ಜೀವ್ನದಲ್ಲಿ ಎಷ್ಟು ಮುಖ್ಯ ಅಂತ ನನ್ಗೆ ಗೊತ್ತು. ಏನೋ ವಿಧಿ ಆಟ ಆಗ್ಬಾರದ್ದು ಆಗ್ ಹೋಯ್ತು. ಅವ್ನು ಇಲ್ದೆ ಇದ್ರು ಫೈನಾನ್ಶಿಯಲ್ ಸಪೊರ್ಟ್ ನಿಮ್ಗೆ ಸಿಗ್ತಾ ಇದೆ. ನೀವ್ ಮನ್ಸ್ ಗಟ್ಟಿ ಮಾಡ್ಕೊಂಳ್ಬೇಕು. ನನ್ನ್ ಅಮ್ಮಾನು ಹೀಗೆ ಹೇಳ್ತಾ ಇದ್ರು. ಮೋಸ್ಟಲಿ ನಾಳೆ ನಾಡಿದ್ ಹಾಗೆ ಇಲ್ಲಿಗೆ ಬರ್ಬಹುದು
ಸುಮಾಃ(ಗಂಭಿರವಾಗಿ..ನಿಟ್ಟುಸಿರು ಬಿಡ್ತಾ)
ಏನೋ…ಯೋಚ್ನೆ ಮಾಡಿದಷ್ಟು ತಲೆ ಕೆಡತ್ತೆ. ಇನ್ಶುರನ್ಸ್ ದಲ್ಲಾ ನೀವ್ ನೋಡ್ಕೊಂಡಿದಕ್ಕೆ ತುಂಬಾ ಥ್ಯಾಂಕ್ಸ್. ಇಲ್ಲಾ ಅಂದ್ರೆ ನನ್ಗೆ ಕಷ್ಟ ಆಗ್ತಿತ್ತು.
ರಾಜೇಶಃ(ಸಹಜವಾಗಿ)
ಇದಿಕ್ಕೆಲ್ಲಾ ಯಾಕ್ ಥ್ಯಾಂಕ್ಸ್….ಅವ್ನ ಫ್ರೇಂಡ್ ಆಗಿ ಇಷ್ಟು ಮಾಡ್ದೆ ಇದ್ರೆ ಹೇಗೆ. ಇನ್ನೇನಾದ್ರು ಹೆಲ್ಪ್ ಬೇಕಿದ್ರೆ ನನ್ ಕೇಳಿ..ಸಂಕೋಚ ಮಾಡ್ಕೊಳ್ ಬೇಡಿ. ಸರಿ…ನಾನ್ ಇನ್ನು ಬರ್ತಿನಿ.
ಸುಮಾಃ(ಅವ್ರನ್ನಾ ತಡಿಯೋ ತರ)
ಅಯ್ಯೋ ತಾಳಿ ನಿಮ್ಗೆ ಒಂದ್ ಕಾಫಿ ನು ಕೇಳ್ಲೇ ಇಲ್ಲಾ. ಒಂದ್ ನಮಿಷ ಕುತ್ಗೊಳಿ. ಕಾಫಿ ಮಾಡ್ತೀನಿ.
ರಾಜೇಶ್ಃ(ನಿರಾಕರಿಸುವ ರೀತಿ)
ಬೇಡ..ಬರ್ಬೇಕಿದ್ರಷ್ಟೆ ಎಲ್ಲಾ ಮುಗ್ಸಗೊಂಡು ಬಂದೆ. (ಹೊರ್ಡೊ ರೀತಿ..ಸೋಫಾದಿಂದ ಏಳ್ತಾ) ಸರಿ ಇನ್ನು ನಾನ್ ಬರ್ತಿನಿ.
(ಅಲ್ಲೆ ಕುಳಿತಿರೋ ಮಗುಗೆ ಬೈ ಮಾಡ್ತಾ) ಬರ್ತಿನಿ.. ಪುಟ್ಟಿ…
( ಮಗಳು ಅವನಿಗೆ ಬೈ ಮಾಡ್ತಾಳೆ. ರಾಜೇಶ್ ಅಲ್ಲಿಂದ ಹೋರ್ಡ್ತಾನೆ. ಸುಮಾ ಬಾಗಿಲ ಹಾಕಿ ಓಳಗೆ ಬರ್ತಾಳೆ. ಮಂಕಾಗಿ ಕುಳಿತುಕೊಳ್ತಾಳೆ. ಸೋಫಾಕೆ ತಲೆ ಒರಗಿ ಕುಳಿತುಕೊಳ್ತಾ.)
ಸುಮಾಃ(ತನ್ನಷ್ಟಕ್ಕೆ)
ಗಂಡ ಸತ್ತ ಅಂತ ಬೇಸರ ಪಡ್ಲೋ ಅಥ್ವಾ…ಕೋಟಿ ದುಡ್ಡು ಬಂದಿದ್ದಕ್ಕೆ ಖುಷಿ ಪಡ್ಲೋ…. ಹತ್ತು ಹತ್ತ್ ರೂಪಾಯಿಗೂ ಲೆಕ್ಕ ಕೇಳೊ ಇವ್ರಿಗೆ ನೀವ್ ಸತ್ ಮೇಲ್ ಕೋಟಿ ತಗೊಂಡು ಹೋಗ್ತಾ ಇದ್ರಾ ಅಂತ ಕೇಳ್ತಿದ್ದೆ.…ಆದ್ರೆ ಕೋಟಿ ನನ್ಗೊಸ್ಕರ ಬಿಟ್ ಹೋಗಿದಾರೆ. ಯಾಕ್ರೀ…ಇದ್ದಾಗ್ ಒಂದ್ ದಿನ ನೆಮ್ದಿ ಇಂದ ಒಂದ್ ದಿನ್ ಉಂಡ್ಕೊಂಡ್ ತಿಂದ್ಕೊಂಡ್ ಇಲ್ಲಾ…ಇಗ್ ನಮ್ನಾ ನಿಮ್…
(ಒಂದೆ ಸಲಕ್ಕೆ ಜೋರಾಗಿ ಅಳು ಬರತ್ತೆ. ಮಗಳು ಅಲ್ಲಿಗೆ ಬರ್ತಾಳೆ.)
ಮಗಳು;(ಮುಗ್ದವಾಗಿ)
ಯಾಕಮ್ಮಾ…ಅಳ್ತಾ ಇದೀಯಾ. ಯಾಕ್ ಪಪ್ಪಾ ನೆನ್ಪ್ ಆದ್ರಾ..(ಅಮ್ಮನ ಮುದ್ದು ಮಾಡೊ ತರ) ಅಳ್ಬೇಡಾ…ಅಜ್ಜಿ ಹೇಳಿದಾರೆ ಪಪ್ಪಾ ಭೂಮಿ ಋಣ ತೀರ್ಸಗೊಂಡು ಸ್ವರ್ಗಕ್ಕೆ ಹೊಗಿದಾರೆ ಅಲ್ಲಿಂದನೆ ನಮ್ಮನ್ನಾ ನೋಡ್ತಾರೆ ಅಂತ. ನಾವ್ ಇಲ್ಲಿ ಖುಶಿ ಯಿಂದ ಇದ್ರೆ ಪಪ್ಪಾನು ಅಲ್ಲಿ ಖುಶಿ ಇಂದ ಇರ್ತಾರಂತೆ. ಅಳ್ಬೇಡಾ ಅಮ್ಮಾ…ಆಮೇಲ್ ಪಪ್ಪಾನು ಅಳ್ತಾರೆ.
(ಮಗಳ ಮಾತನ್ನು ಕೇಳಿ ಭಾವುಹಳಾಗೋ ಸುಮಾ. ಮಗಳನ್ನಾ ಮುದ್ದು ಮಾಡ್ತಾಳೆ.ದುಖಃ ಬರತ್ತೆ. ಅಳು ಕಂಟ್ರೊಲ್ ಮಾಡ್ಕೊಳ್ತಾ)
ಸುಮಾಃ 
ಪುಟಾ…ನಾನ್ ಅಳಲ್ಲಾ ನನ್ಗೆ ..ನೀನ್ ಇದೀಯಾ….ನಿನ್ನ ಮುದ್ದಾದ್ ಮಾತು ಆಟ…(ಅವ್ಳ ಗಲ್ಲ ಹಿಡಿತಾ) ನಾನ್ ಯಾವಾಗ್ಲು ಅಳಲ್ಲಾ…ನೀನು ಯಾವಾಗ್ಲು ಅಳ್ಬೇಡಾ..ಹೋಗು ನೀನು ಚನಾಗ್ ಓದು. ನನ್ಗೆ ಅಷ್ಟೆ ಸಾಕು ಪುಟ್ಟಿ.
(ಸರಿ ಅನ್ನೋ ತರ ಮಗಳು ಅಲ್ಲಿಂದ ಹೋಗ್ತಾಳೆ.  ಸುಮಾ ಅವಳು ಹೋಗಿದ್ದು ನೋಡ್ತಾ…ಭಾವುಕಳಾಗಿ ..)
ಸುಮಾಃ(ಸ್ವಗತ)
ಹ್ಮ್…ನಿಮ್ ಅಜ್ಜಿ ಹೇಳಿದ್ದು ನಿಜ. ಅವ್ರು ಮೇಲಿಂದ ನೋಡ್ತಾ ಇರೋದು…ನಾವು ಖುಶಿ ಇಂದ ಇರ್ಲಿ ಅಂತಾನೆ ದೇವ್ರು ಅವ್ರ ಬೇಗ ಕರ್ಸಗೊಂಡಿದ್ದಾ….ಅಥ್ವಾ…ಸದ್ಯಾ ನಾನೆ ಅವ್ರಿಂದ ಬೇರೆ ಹೋಗ್ತಿದ್ನಾ….ನಾನೆ ಬೇರೆ ಹೋದ್ರೆ ನನ್ಗೆ ಈಗ್ ಸಿಗೋ ಸಿಂಪತಿ ಸಿಗ್ತಾ ಇತ್ತಾ…ಅಥ್ವಾ…ದಿಮಾಕಿನ್ ಹೆಂಗ್ಸು ಅನ್ನೊ ಪಟ್ಟ ಕಡ್ತಿದ್ರಾ…ಇನ್ನು ಮಗ್ಳು….ಹ್ಮ್….ತ್ರಿಶಂಕು ಸ್ಥಿತಿನಾ.
(ಸುಮಾ ಸೋಫಾದಿಂದ ಏಳ್ತಾಳೆ…ಅತ್ತ ಇತ್ತ ಓಡಾಡ್ತಾಳೆ. ತಲೆಯಲ್ಲಿ ಏನೇನೋ ಯೋಚ್ನೆ ಬಂದ ತರ ಕೈ ಕಣ್ಣಿನ ಮೇಲೆ ಇಡ್ತಾ ನಿಲ್ತಾಳೆ.)
ಸುಮಾಃ(ತನ್ನಷ್ಟಕ್ಕೆ)
ರಾಜೇಶ್ ಹೇಳಿದ್ ಹಾಗೆ ಜೀವ್ನಕ್ಕೆ ತೊಂದ್ರೆ ಇಲ್ಲಾ. ಪೈನಾನ್ ಶಿಯಲ್ ಸಫೊರ್ಟ ಸಿಕ್ಕಿದೆ. ಆದ್ರೆ ಇದು ನನ್ಗೆ ಮತ್ ನನ್ ಮಗಳಿನ ಭವಿಷ್ಯಕ್ಕೆನಾ…ಅಥ್ವಾ ಇದಿಕ್ಕೆ ಇನ್ನೆರಡು ಕೈ ಸೇರತ್ತಾ. ಇದು ಮೇಲಿಂದ ನೀವ್ ನೋಡಿದ್ರು ಒಂದೆ.…ಇಲ್ಲಿದ್ದಾಗ ನೀವ್ ನೋಡ್ದಾಗ ಆಗಿದ್ದು ಒಂದೇ…
(ಅಷ್ಟರಲ್ಲೆ ಕೈ ನಲ್ಲಿದ್ದ ಮೊಬೈಲ್ ರಿಂಗ್ ಆಗತ್ತೆ. ಕೈ ನಲ್ಲಿ ಇದ್ದ ಮೊಬೈಲ್ ನೋಡತ್ತಾಳೆ. ಅತ್ತೆ ಅಂತ ಡಿಸ್ ಪ್ಲೇ ಬರತ್ತೆ. ಮೊಬೈಲ್ ನೋಡ್ತಾ   ವ್ಯಂಗ ನಗೊ ಸುಮಾ.)

ಕಟ್

ಸಂದರ್ಭಃ ಸಪ್ರೈಸ್ ಆಗಿ ಸೀರೆ ತರೋ ಗಂಡ ಮುನಿಸಿಗೊಂಡ ಹೆಂಡತಿ.


ಸಂದರ್ಭಃ ಸಪ್ರೈಸ್ ಆಗಿ ಸೀರೆ ತರೋ ಗಂಡ ಮುನಿಸಿಗೊಂಡ ಹೆಂಡತಿ.
ಕೈ ಯಲ್ಲಿ ಫುಲ್ ಲಗೇಜ್ (ಅವನ ಒಂದು ಬ್ಯಾಗ್ ಮತ್ತು ಸೀರೆ ಕವರ್ ಗಳು) ಹಿಡಿದುಕೊಂಡು ಬರೋ ಸುರೇಶ್. ಟಿ.ವಿ. ನೋಡ್ತಾ ಇರೋ ಅಮ್ಮಾ ತಂಗಿ. ಬಾಗಿಲು ತೆರೆದಿರತ್ತೆ.
ಸುರೇಶಃ (ಉತ್ಸಾಹದಲ್ಲಿ…ನಗ್ತಾ)
ಓಹೋ…ಇದೇನಿದು…ನನ್ಗೆ ವೇಲ್ಕಮ್  ಮಾಡ್ಬೇಕು ಅಂತ ಬಾಗಿಲ್ ತೆರ್ದೆ ಇದಿರಾ ಏನು?
(ಸುರೇಶ ತನ್ನ ಲಗೇಜ್ ಸಮೇತ ಸೋಫಾದ ಮೇಲ್ ಕುಳಿತುಕೊಳ್ತಾನೆ.)
ಅಮ್ಮಾಃ (ಆಶ್ಚರ್ಯದಿಂದ)
ಇದೇನಪ್ಪಾ ಇನ್ನೇರ್ಡ್ ದಿನ ಆಗತ್ತೆ ಅಂತ ರೂಪಾಗ್ ಪೋನ್ ಮಾಡಿದ್ಯಂತೆ. ಏನ್ ಇವತ್ತೆ ಬಂದೆ.
(ಸುರೇಶ ಏನೊ ಹೇಳೋಕ್ ಹೋರ್ಡತಾನೆ ಅಷ್ಟರಲ್ಲೆ ತಂಗಿ..)
ತಂಗಿಃ (ನಗ್ತಾ)
ಇದ್ ಒಳ್ಳೆ ತಮಾಷೆ ಆಯ್ತು…ಅಣ್ಣಾ ಇಷ್ಟು  ಬೇಗ್ ಬರ್ಬಾದಿತ್ತು ಇನ್ನೇರಡು ದಿನ ಲೇಟ್ ಆಗೆ ಬಂದ್ರೆ ಚನ್ನಾಗಿ ಇತ್ತು ಅನ್ನೋ  ತರ ಮಾತಾಡ್ತಾ ಇದೀರಾ.
(ಮೂವರು ಜೋರಾಗಿ ನಗ್ತಾರೆ. ಅಷ್ಟರಲ್ಲೆ ಹೆಂಡ್ತಿ ಹಾಲ್ ಗೆ ಬರ್ತಾಳೆ.)
ರೂಪಾಃ (ಆಶ್ಚರ್ಯದಿಂದ)
ಇದೇನ್ ದ್ರಿ  ಬೆಳಿಗ್ಗೆ ಲೇಟ್ ಆಗತ್ತೆ ಅಂತ ಹೇಳಿದ್ರಿ ಇಗ್ ನೋಡಿದ್ರೆ ದೀಡಿರ್ ಅಂತ ಪ್ರತ್ಯಕ್ಷ ಆಗ್ಬಿಟ್ಟಿದ್ದಿರಾ.
ಸುರೇಶಃ (ನಗ್ತಾ)
ಸುಮ್ನೆ ನಿಮ್ಗೆಲ್ಲಾ ಸರ್ಪ್ರೈಸ್ ಕೊಡೋಣ ಅಂತಾ.
ಅಮ್ಮಾಃ (ಕಾಳಜಿವಹಿಸಿ ಮಾತಾಡೋ ತರ)
ಇದೇನಿದು ಬಂದಾಗ್ಲಿಂದ ಅವ್ನ ಪ್ರಶ್ನೆ ಮಾಡೊದೆ ಆಯ್ತು. ಏನಾದ್ರು ಕುಡಿಯೋಕ್ ಬೇಕಾ. ಊಟಾ ಆಗಿದ್ಯಾ..ಬೇಕಿದ್ರೆ ಊಟಾನೆ ಮಾಡು. ಅನ್ನಾ ಹುಳಿ ಇದೆ. ಬೇಕಿದ್ರೆ ಕಲಸಿ ಕೊಡ್ತಿನಿ.
ಸುರೇಶಃ (ಸಹಜವಾಗಿ)
ಬೇಡಮ್ಮಾ….ಟ್ರೇನ್ ನಲ್ಲಿ ಬರಬೇಕಿದ್ರೆ ತಿಂದ್ಕೊಂಡೆ ಬಂದೆ. ಹಸಿವಿಲ್ಲಾ. ಸ್ವಲ್ಪ ಪ್ರೇಶ್ ಆಗ್ತೀನಿ. ಬಿಸಿ ಬಿಸಿ ಕಾಫಿ ಕೊಟ್ರೆ ಸಾಕು.
(ಅಷ್ಟರಲ್ಲೇ ತಂಗಿ ಅವನ ಹತ್ತಿರ ಇರೋ ಕವರ್  ನೋಡ್ತಾ…ಹತ್ತಿರ ಬಂದು ತೆಗಿತಾ)
ತಂಗಿಃ (ಕುತುಹಲದಿಂದ)
ಇದೇನಣ್ಣಾ ಇಷ್ಟೊಂದು  ಕವರ್. ಇದೇನಿದು ಸೀರೆ ಕವರ್. ಯಾರಿಗಿದು.
(ಎಲ್ಲರ ಲಕ್ಷ ಕವರ್ ಕಡೆ ಹೋಗತ್ತೆ. ಅಲ್ಲೇ ನೋಡ್ತಾರೆ.)
ಸುರೇಶಃ ( ಖುಷಿಯಿಂದ)
ಇನ್ಯಾರಿಗೆ ತರ್ಲೆ. ನಮ್ ಮನೆಲಿ ಇರೋ ಮೂರು ಮಹಿಳಾ ಮಣಿಗಳಿಗೆ.
(ಕವರ್ ನಲ್ಲಿ ಇರೋ ಸೀರೆ ಒಂದೊಂದಾಗಿ ತೆಗಿತಾ….)
ಸುರೇಶ್; (ಉತ್ಸಾಹದಲ್ಲಿ)
ಚನೈ ನಲ್ಲಿ ನಾನ್ ಇದ್ದ್ ಹೊಟೇಲ್ ಪಕ್ಕನೆ ಒಂದ್ ಸೀರೆ ಅಂಗಡಿ ಇತ್ತು. ನಮ್ ಹೊಟೇಲ್ ಬಾಯ್ ಹೇಳ್ದಾ ಅಲ್ ಒಳ್ಳೆ ಕಂಚಿ ಕಾಟನ್ ಸೀರೆ ಸಿಗತ್ತೆ ಅಂತ. ಹೇಗು ಇನ್ನು ದೀಪಾವಳಿ ಬರತ್ತೆ.  ಇರ್ಲಿ ಅಂತ ನಿಮ್ಗೆಲ್ಲಾ ಒಂದೊಂದು ಕಂಚಿ ಕಾಟನ್ ಸೀರೆ ತಂದೆ.
(ಇದ್ರನ್ನಾ ಹೇಳ್ತಾನೆ ಮೂವರಿಗೂ ಅವ್ರ್ ಅವ್ರ ಕವರ್ ಕೊಡ್ತಾನೆ. ತಂಗಿ ಉತ್ಸಾಹದಲ್ಲಿ ಸೀರೆ ತಗೋತಾಳೆ.ಅಮ್ಮಾ ಖುಶಿಯಿಂದ ತಗೊತಾಳೆ. ಹೆಂಡತಿ ಸ್ವಲ್ಪ ಗಂಭಿರವಾಗಿರ್ತಾಳೆ. ಆದ್ರೆ ಇವ್ರು ಯಾರು ಗಮನಿಸಿರಲ್ಲ.)
ತಂಗಿಃ (ಉತ್ಸಾಹದಲ್ಲಿ)
ಅಬ್ಬಾ…ಕಾಲೇಜ್ ಎತ್ನಿಕ್ ಡೇ ಗೆ ಅಮ್ಮ್ ನ್  ಸೀರೆಗೋ….ಅತ್ಗೆ ಸೀರೆಗೊ ಬ್ಲಂಸ್ ಸ್ಟಿಚ್ ಮಾಡ್ಸ್ ಬೇಕಿತ್ತು. ಈ ಸಲ ನಂದೆ ಹೊಸ ಸೀರೆ ಉಟ್ಗೊಂಡು ಹೋಗ್ ಬಹುದು. ಈಗ್ಲೇ  ಬ್ಲಂಸ್ ಸ್ಟಿಚ್ ಮಾಡೊಕ್ ಕೊಡ್ಬೇಕು.
(ಸೀರೆ ಕವರ್ ತಗೊಂಡು ತನ್ನ ರೂಮಿನ ಕಡೆ ಹೋಗ್ತಾಳೆ. ಅವ್ಳ ಉತ್ಸಾಹ ನೋಡಿ ಅಮ್ಮಾ…ಅಣ್ಣಾ ನಗ್ತಾರೆ. ರೂಪಾ ಗಂಭಿರವಾಗೆ ನಿಂತಿರ್ತಾಳೆ.)
ಅಮ್ಮಾಃ (ನಗ್ತಾ)
ಅಬ್ಬಾ ಹೊಸ ಬಟ್ಟೆ ತಂದ್ರೆ ಮುಗಿತು…ಕನ್ನಡಿ ಮುಂದೆ ನಿಲ್ಲೋಕೆ. (ಸಮಾಧಾನದಿಂದ) ಪ್ರೇಶ್ ಆಗಿ ಬಾರೋ…ಕಾಫಿ ಮಾಡ್ಕೊಡ್ತೀನಿ. ಹಾಗೆ ನಾನು ನಿನ್ನ್ ಜೊತೆ ಕುಡಿತೀನಿ.
(ಅಮ್ಮಾ ಕವರ್ ತಗೊಂಡು ಸೋಫಾದಿಂದ ಏಳ್ತಾಳೆ. ಸುರೇಶ ಸರಿ ಅಂತ ಹೇಳ್ತಾ ತನ್ನ ಬ್ಯಾಗ್ ತಗೊಂಡು ರೂಮ್ಗೆ ಹೋಗ್ತಾನೆ. ಅವನ ಹಿಂದೆ ಹೋಗೋ ರೂಪಾ.)
(ರೂಮುಗೆ ಹೋದ್ ತಕ್ಷಣ ಕವರ್ ಮಂಚದ ಮೇಲೆ ಸ್ವಲ್ಪ್ ಜೋರಾಗಿ ಇಡ್ತಾ ಸಿಡಿ ಮಿಡಿ ಯಲ್ಲಿ ಇರ್ತಾಳೆ. ಗಂಡ ಅವಳ ಮುಖ ನೋಡ್ತಾ.ನೆ.)
ಸುರೇಶ್; (ನಗ್ತಾ..ಕೀಟ್ಲೆ ಮಾಡೋ ತರ)
ಯಾಕ್ ಅಮ್ಮೊರು ಬುಸ್ಗುಡ್ತಾ ಇರೋದು. ಯಾಕೆ  ಗಂಡ ಎರ್ಡು ದಿನ ಮುಂಚೆ ಬಂದ ಅಂತಾನಾ.
(ಹೆಂಡತಿ ಹತ್ರ ಹೋಗಿ ಗಲ್ಲ ಹಿಡಿಯೋಕೆ ಹೋಗ್ತಾನೆ. ಅವಳು ಕೈ ತಳ್ತಾಳೆ.)
ರೂಪಾಃ (ಕಿರಿಕಿರಿಯಿಂದ)
ಸಾಕ್ ಸುಮ್ನೆ ಇರೀ…ನೀವ್ ಎರ್ಡು ದಿನ ಮುಂಚೆ ಬೇಕಿದ್ರು ಬನ್ನಿ…ಲೇಟ್ ಆಗಾದ್ರು ಬನ್ನಿ…ಅದು ನನ್ಗೆ ದೊಡ್ದಲ್ಲ. ಮೊದ್ಲು ಹೆಂಡ್ತಿ ಮಾತ್ ಕಿವಿಗೆ ಹಾಕ್ಕೊಂಡು  ಬೆಲೆ ಕೊಡಿ.
ಸುರೇಶ್; (ಏನು ಅರ್ಥ ಆಗದೆ)
ಯಾಕೆ ನಾನು ನಿನ್ನ ಯಾವ್ ಮಾತಿಗೆ ಇಲ್ಲಾ ಅಂತ ಹೇಳಿದ್ದೀನಿ. ಹದಿನೈದು ದಿನದ ಮೇಲ್ ಸಿಕ್ಕಿದೀನಿ. ಯಾಕೆ ಈ ತರ ಮಾತಾಡ್ತಾ ಇದೀಯಾ?
ರೂಪಾ;( ಕೋಪದಿಂದ)
ಮತ್ತೇನ್ ಮಾಡ್ಲಿ…ನಾನ್ ನಿಮ್ಗೆ ಹೋಗ್ಬೇಕಿದ್ರೆ ಹೇಳಿದ್ದೆ…ಈ ಸಲ ಹಬ್ಬಕ್ಕೆ ಚಿಕ್ಕ್ ಪೇಟೆಗೆ ನಾವಿಬ್ರು ಹೋಗಿ ಸೀರೆ ತರೋಣ ಅದು ಅಲ್ದೆ ನನ್ಗೆ ಬನಾರಸ್ ಸಿಲ್ಕ್ ಬೇಕು ಅಂತ ಹೇಳಿದ್ದೆ. ಆದ್ರೆ ನೀವ್ ನೋಡಿದ್ರೆ…
(ಅಷ್ಟರಲ್ಲೇ ಅರ್ಧಕ್ಕೆ ತಡೆದು..)
ಸುರೇಶಃ (ಸಮಾಧಾನ ಮಾಡ್ತಾ)
ಓ…ಹಾಗಾ ಅದೇನ್ ಆಯ್ತು ಅಂದ್ರೆ ನಮ್ ಹೊಟೇಲ್ ಪಕ್ಕದಲ್ಲೆ ಒಂದ್ …
ಹೆಂಡತಿಃ(ಕೋಪದಲ್ಲೇ)
ನೋಡಿ..ಇಗ್ ನಿಮ್ ಅಂತೆ ಕಂತೆ ಪುರಾಣ ಹೇಳೊಕ್ ಬರ್ಬೇಡಿ. ಅದು ಅಲ್ದೆ ನಾನು ನಿಮ್ಗೆ ದಿನ ಪೋನ್ ಮಾಡ್ತಾ ಇದ್ದೆ. ನನ್ನ್ ಒಂದು ಮಾತ್ ಕೇಳಿದ್ರಾ. ನನ್ಗೆ ಹಬ್ಬದ ನೆಕ್ಷ್ಟ ಡೇ ನೆ ಅಮ್ಮನ ಮನೆಲಿ ಪೂಜೆ ಇದೆ.  ಅಲ್ಲಿ ನನ್ನ್ ಕಸಿನ್ಸ್ ಎಲ್ಲಾ ಬರ್ತಾರೆ. ಆಗ್ ನನ್ಗೆ ಗ್ರಾಂಡ್ ಸೀರೆ ಬೇಕು. ಈ ಕಾಟನ್ ಸೀರೆ ಉಟ್ಗೊಂಡು ಹೋಗಲ್ಲ. ಅದು ಅಲ್ದೆ ಮೂರ್ ಜನಕ್ಕು ಯುನಿಫಾರ್ಮ್ ತರ ಒಂದೇ ವೇರೈಟಿ ಸೀರೆ ಯಾಕ್ ತರ್ಬೇಕಿತ್ತು.?  ನಿಮ್ ಅಮ್ಮಾ ಸೀರೆ ಬೇಡ ಅಂತ ಹೇಳಿದ್ರು. ಇನ್ನು ನಿಮ್ ತಂಗಿಗೆ ಕುರ್ಥಾ ಲೆಗ್ಗಿಂಗ್ಸ್ ಸಾಕಾಗಿತ್ತು.
ಸುರೇಶಃ (ಮೂಡ್ ಒಫ್ ಆಗಿ)
ಯಾಕ್ ಇಷ್ಟು ಸಣ್ಣ್ ವಿಷ್ಯಾನ ದೊಡ್ಡ್ ದಾಗಿ ಮಾಡ್ತೀಯಾ. ಏನೋ ಹಬ್ಬದ ಎದುರು ಚನ್ನೈ ಗೆ ಹೋಗಿದ್ದಕ್ಕೆ ಮನೆಯವ್ರಿಗೆಲ್ಲಾ ಸರ್ಪ್ರೈಸ್ ಆಗ್ಲಿ ಅಂತ ಸೀರೆ ತಂದೆ. ಅದಿಕ್ಕು ನಿನ್ ಪರ್ಮ್ಮೀಶನ್ ಕೇಳ್ಬೇಕು ಅಂತ ಗೊತ್ತಿಲ್ಲಾಗಿತ್ತು. ಏನೋ ಲೇಟೆಸ್ಟ್ ಪ್ಯಾಶನ್ ಖುಷಿ ಆಗತ್ತೆ ಅಂತ ನಾನ್ ಅಂದ್ಕೊಂಡ್ರೆ..
ಹೆಂಡತಿಃ ( ಕೋಪದಲ್ಲಿ)
ನೋಡಿ ನೀವ್ ಏನ್ ಅಂದ್ಕೊತಿರೊ ಬಿಡ್ತೀರೋ…ನಾನ್ ಮಾತ್ರ ಹಬ್ಬಕ್ಕೆ ಈ ಸೀರೆ ಉಡಲ್ಲಾ. ನನ್ಗೆ ಬೇರೆ ಸೀರೆ ಬೇಕು. ಇಲ್ಲಾ ಅಂದ್ರೆ ನಾನು ಹಬ್ಬಕ್ಕೆ ನಾಲ್ಕು ದಿನ ಮುಂಚೆ ಅಮ್ಮನ ಮನೆಗೆ ಹೋಗ್ತೀನಿ. ನೀವ್ ನಿಮ್ಮ್ ಅಮ್ಮಾ…ತಂಗಿ ಜೊತೆನೆ ಹಬ್ಬ ಮಾಡ್ಕೊಳಿ.
(ಗಂಟು ಮುಖ ಹಾಕಿ ಮಂಚದ ಮೇಲೆ ಕುಳಿತಿರ್ತಾಳೆ. ಸುರೇಶ್ ಮೂಡ್ ಆಫ್ ಮಾಡ್ಕೊಂಡು…ಬೆಸರದಲ್ಲಿ)
ಸುರೇಶ್;
ಛೇ…ನೀನ್ ಯಾಕಾದ್ರು ನನ್ನ್ ಅರ್ಥ ಮಾಡ್ಕೊಳಲ್ಲಾ…ನಿನ್ಗೆ ಎಷ್ಟು ಮಾಡಿದ್ರು ಅಷ್ಟೆ ಏನಾದ್ರು ಹುಡ್ಕತ್ತಾ ಇರ್ತೀಯಾ…ಯಾಕಾದ್ರು ಸರ್ ಫ್ರೈಸ್ ಕೊಡೊಕ್ ಹೋದ್ನೋ. (ತಲೆ ಜಜ್ಜಿಕೊಳ್ತಾ) ಎಲ್ಲಾ ನನ್ನ ಕರ್ಮ…
(ಅವಳು ಅಡ್ಡ ಮುಖ ಹಾಕಿ ಕೂತಿರೊದನ್ನು ನೋಡಿ….ಕೋಪ ಬರತ್ತೆ. )
ಸುರೇಶಃ(ಸ್ವಗತ)
ನಾನ್  ಹೇಗ್ ಇದ್ರು ಇವ್ಳು ಮೂರನೇ ಮಹಾ ಯುದ್ದಕ್ಕೆ ನಾಂದಿ ಮಾಡೊವ್ಳೇ.
(ಅಷ್ಟರಲ್ಲೇ ಅಮ್ಮಾ ಹೊರಗಿನಿಂದ ಕರಿತಾಳೆ.)
ಅಮ್ಮಾಃ(ದ್ವನಿ)
ಏಯ್..ಎಲ್ಲೋ ಹೋದೆ..ಕಾಫಿ ಆರೋಗತ್ತೆ…ಬೇಗ ಬಾ…
(ಸುರೇಶ್ ಸಮಾಧಾನ ತಂದ್ ಮುಖ ಮಾಡಿಕೊಂಡು ರೂಮಿನಿಂದ ಹೊರಗೆ ಹೋಗ್ತಾ..)
ಸುರೇಶಃ
ಹಾಂ….ಬಂದೆ ಅಮ್ಮಾ….
(ರೂಮಿನಿಂದ ಆಚೆ ಹೋದ್ ಮೇಲೆ ಬಾಗಿಲ ಕಡೆ ನೋಡೋ ರೂಪಾ….ಮೂತಿ ತಿರುವುತ್ತಾ)
ರೂಪಾ;
ಹಾ…ಹಾ…ಈ ತರ ಸಣ್ಣ ಸಣ್ಣ ವಿಷ್ಯನ ದೊಡ್ಡದಾಗಿ ಮಾಡ್ದೆ ಇದ್ರೆ ನನ್ನ ಗುಂಪಲ್ಲಿ ಗೊವಿಂದನ ಮಾಡೆ ಬಿಡ್ತಾರೆ. ನೋಡ್ತಾ ಇರಿ ಈ ಸಣ್ಣ್ ಸಣ್ಣ್ ವಿಷ್ಯ ದಿಂದನೇ ನಾನು ನನ್ನ ಮಾತ್ ನಡಿಯೋ ತರ ಮಾಡೊದು. ಇಲ್ಲಾ ಅಂದ್ರೆ ನಿಮ್ ಅಮ್ಮಾ ತಂಗಿ ಎಮೊಶ್ನಲ್ ಬ್ಲಾಕ್ ಮೇಲ್ ಮಾಡಿ ತಮ್ ತಾಳಕ್ಕೆ  ತಕ್ಕ ಹಾಗೆ ಕುಣ್ಸತಾರೆ. ಇಷ್ಟಕ್ಕೆ ಇದ್ ಮುಗಿಯಲ್ಲಾ….

ಕಟ್