Saturday, June 23, 2018

ನಾ ಕಂಡ ಭುವನೇಶ್ವರಕ್ಕ...


ನಾ ಕಂಡ ಬುವನೇಶ್ವರಕ್ಕ….

ಇವಳು ದೊಡ್ಡ ಬರಹಗಾರತಿಯೋ, ಸಾಹಿತಿಯೋ  ಅಥವಾ ಯಾವ ದೊಡ್ಡ ವ್ಯಕ್ತಿ ಅಲ್ಲ. ಈಕೆ ನಮ್ಮ ಮನೆಯ ದೂರದ ಸಂಭಂದಿ. ಚಿಕ್ಕ ಮಯಸ್ಸಲ್ಲೆ ಗಂಡನ ಕಳೆದುಕೊಂಡು ಮಡಿ ಆದವಳು. ಅವರಿವರ ಮನೆಯಲ್ಲಿ ಅಡಿಗೆ ಬಾಳಂತನ ಮಾಡ್ತಾ ಇದ್ಲು. ನಮ್ಮ ಮನೆಯ ಅತ್ತೆಯಂದಿರ ಬಾಳಂತನ ಮತ್ತು ಹಬ್ಬದ ಅಡಿಗೆಗೆ ಬರ್ತಾ ಇದ್ಲಂತೆ. ವಯಸ್ಸಾದ ಮೇಲೆ  ಆಗಾಗ ನಮ್ ಮನೆಗೆ ಹಳೇ ಸಲುಗೆಯ ಮೇಲೆ ಬರ್ತಾ ಇದ್ಲು. ನಮ್ಗೆ ಭುವನೇಶ್ವರಕ್ಕ ಬಂದ್ರೆ ತುಂಬಾ ಖುಷಿ. ನನ್ಕಿಂತ ತಂಮ್ಮನಿಗೆ ಇನ್ನು ಖುಷಿ.
ಭುವನೇಶ್ವರಕ್ಕ ನಮ್ಮನ್ನೆಲ್ಲಾ  ಕೂರಿಸ್ಗೊಂಡು ಕಥೆ ಹೇಳ್ತಾ ಇದ್ಲು. ಅವ್ಳು ಕಥೆ ಹೇಳೊ ರೀತಿ ತುಂಬಾ ಚನ್ನಾಗಿ ಇರ್ತಾ ಇತ್ತು. ಅದು ಅಲ್ದೆ ಪ್ರತಿ ಕಥೆಲೂ ಏನಾದ್ರು ಒಂದು ನೀತಿ ಇರ್ತಾ ಇತ್ತು.  ತುಂಬಾ ಸಿಂಪಲ್ ಆದ ಕಥೆ. ಕಾಕಣ್ಣ ಗುಬ್ಬಣ್ಣ ನ ಕಥೆ ಆದ್ರು ಎಷ್ಟು ಚನ್ನಾಗೆ ಹೇಳ್ತಾ ಇದ್ಲು. ನಾನು ನನ್ನ ಮಗಳಿಗೆ ಯಾವ್ದಾದ್ರು ಕಥೆ ಹೇಳ್ಬೇಕಿದ್ರೆ ಅಯ್ಯೊ ನನ್ಗೆ ಭುವನೇಶ್ವರಕ್ಕನಷ್ಟು ಚನ್ನಾಗಿ ಹೇಳೊಕ್  ಬರಲ್ಲಾ ಅಂತ ಅಂದ್ಕೊತ್ತಿದ್ದೆ.  ನನ್ಗೆ ಅನ್ಸೊ ಪ್ರಕಾರ  ಕಥೆ ಹೇಳೋದು ಒಂದ್ ಕಲೆ ಇರ್ಬೇಕು.
 ಭುವನೇಶ್ವರಕ್ಕ ಯಾವಗ್ಲು ಹಾಡ್ ಹೇಳ್ತಾನೆ ಕೆಲಸ ಮಾಡ್ತಾ ಇದ್ಲು. ಸದಾ ದೇವರ ನಾಮ. ಈಗ್ ಇದ್ದ ಮೊಬೈಲ್ ಇದ್ರೆ ನಾನು ಅವ್ಳ್ ಹಾಡನ್ನಾ ರೆಕಾರ್ಡ ಮಾಡ್ತಾ ಇದ್ದೆ. ಆದ್ರೆ ಏನ್ ಮಾಡ್ಲಿ ಆಗ್ ನನ್ನ ಹತ್ರ ಅದ್ ಯಾವ್ದು ಇಲ್ಲಾಗಿತ್ತು. ಆದ್ರೆ ಅವ್ಳು ಹೇಳೋ ದೇವರ ನಾಮ ಇನ್ನು ನನ್ನ ಮನಸ್ಸಿನಲ್ಲಿದೆ. ಸದಾ ನನ್ನ ನೆನ್ಪಲ್ಲಿ ಇರತ್ತೆ. ಅಂದ್ ಹಾಗೆ  ಅವ್ಳ ಬಾಯಲ್ಲಿ ದೇವರ ನಾಮದ ಹೊರತು  ಯಾವಾಗ್ಲು ಕೆಟ್ಟ ಶಬ್ದ ಬಂದದ್ನಾ ನಾನು ಕೇಳ್ಲಿಲ್ಲಾ. ಏನಾದ್ರು ಆದ್ರೆ ಅಯ್ಯೋ…ಅನ್ನೋದ್ರ ಬದಲು ಶಿವನೇ…ಅಂತ ಅನ್ನೋಳು. ಊಟ ಮಾಡುವಾಗ್ಲು ತುತ್ತು ತುತ್ತಿಗೂ ರಾಮಾ….ರಾಮಾ….ಅನ್ನೋಳು. ಇನ್ನೊಂದು ಆಶ್ಚರ್ಯ ಅಂದ್ರೆ ನನ್ನ ಮಗಳು ಸುಮಾರು ಎಂಟು ಅಥ್ವಾ ಹತ್ತು ತಿಂಗಳಾಗಿರ್ಬೇಕು ಅವ್ಳು ತನ್ನಷ್ಟಕ್ಕೆ ತಾನು ರಾಮಾ..ರಾಮಾ..ಅಂತ ಹೇಳ್ತಾ ಇದ್ಲು. ಆಗಂತು ನಾನು ಭುವನೇಶ್ವರಕ್ಕನ ಎಷ್ಟು ನೆನೆಸಿಕೊಂಡ್ನೋ.
ನಾವು ಚಿಕ್ಕೊರಿದ್ದಾಗ ರಮಾನಂದ್ ಸಾಗರ್ ಅವರ ರಾಮಾಯಣ ಬರ್ತಾ ಇತ್ತು. ನಾವು ಎಲ್ಲಾ ಸೇರಿ ಈ ಧಾರಾವಾಹಿನಾ ನೋಡ್ತಾ ಇದ್ವಿ. ಭುವನೇಶ್ವರಕ್ಕನು ಭಕ್ತಿಯಿಂದ ನೋಡ್ತಾ ಇದ್ಲು. ರಾಮ ಅಥ್ವಾ ಶಿವನ್ನಾ ತೋರಿಸಿದ್ರೆ ಭಕ್ತಿಯಿಂದ ಟಿ.ವಿಗೆ ಕೈ ಮುಗಿತಾ ಇದ್ಲು. ನಮ್ಗೂ ಕೈ ಮುಗಿರಿ ಅಂತ ಹೇಳ್ತಾ ಇದ್ಲು.  ಇದು ಅವ್ಳ ಮುಗ್ದತೆನೋ..ಭಕ್ತಿಯೋ ತಿಳಿತಾ ಇಲ್ಲಾ. ಅವ್ಳಿಗೆ  ಭಕ್ತಿ ಎಷ್ಟು ಇತ್ತೊ ಅಷ್ಟೇ ಮಡಿ ಮೈಲಿಗೆ ಇತ್ತು. ಇದು ನಮ್ಮಂತವರಿಗೆ  ಸ್ವಲ್ಪ ಕಿರಿಕಿರಿ ಆದ ವಿಚಾರನೆ. ನಮ್ಮ ಬಳಗದಲ್ಲಂತು ಅವ್ಳ್ ಮಡಿಗೆ ಒಂದ್ ಗಾದೆ ಮಾತೆ ಹುಟ್ಗೊಂಡಿದೆ. ಯಾರಾದ್ರು ತುಂಬಾ ಮಡಿ ಮೈಲಿಗೆ ಅಂತ ಮಾಡಿದ್ರೆ “ಇದ್ ಎಂತ ಭವನೇಶ್ವರಕ್ಕನ ಶಾಸ್ತ್ರ ಶುರು ಮಾಡ್ತಾ ಇದ್ದಿ “ ಅಂತ ಕೇಳ್ತಾ ಇದ್ರು. ನಮ್ಗೆ ಕೆಲವೊಂದು ಸಲ ಅತಿ ಅನಿಸಿದ್ರು  ಯಾವಾಗ್ಲು ನಮ್ಗೆ ಉಸಿರು ಕಟ್ಟೊ ತರ ಅಗೇ ಇಲ್ಲ.  ನಮ್ಗೂ ಮಾಡಿ ಅಂತ ನಮ್ಮ ತಲೆ ಮೇಲೆ ಯಾವಾಗ್ಲು ಹೊರಿಸಿಲ್ಲಾ. ತನ್ನಷ್ಟಕ್ಕೆ ತನ್ನ ನಂಬಿಕೆಲಿ ಜೀವನ ಮಾಡ್ತಾ ಇದ್ಲು.
ಭುವನೇಶ್ವರಕ್ಕ ಚಿಕ್ಕ ವಯಸ್ಸಿನಿಂದಲೇ ಕಷ್ಟ ಅನುಭವಿಸಿದವಳು. ಕೆಲಸ ಮತ್ತು ದೇವರ ಪೂಜೆ ಎರಡೇ ಅವಳು ಜೀವನದಲ್ಲಿ ನೋಡಿದ್ದು. ಅದ್ರಲ್ಲೇ ಸುಖ ಕಂಡಿದ್ದು. ಆದ್ರೆ ಅವ್ಳು ಬೇರೆಯವರ ಸುಖ ನೋಡಿ ಯಾವಾಗ್ಲು ಹೊಟ್ಟೆ ಕಿಚ್ಚು ಪಟ್ಗೊಂಡಿಲ್ಲಾ. ತನ್ಗೆ ಸಿಗ್ದೆ ಇರೋದು ಇನ್ನೊಬ್ಬರಿಗೆ ಸಿಗ್ಬಾರದು ಅನ್ನೊ ಮನೋಭಾವದವಳು ಅಲ್ಲಾ. ಅವ್ಳಿಗೆ ಹೆಂಗಸರು ಮೈ ತುಂಬಾ ಒಡವೆ ಹಾಕ್ಕೊಳ್ಲಿ, ಒಳ್ಳೆ ಸೀರೆ ಉಡ್ಲಿ ಅನ್ನೊ ಮನಸ್ಸಿನವಳು.ಯಾರಾದ್ರು ಚಂದ ಹೆಂಗಸರು ಚಂದ ತಯಾರಾದ್ರೆ ತುಂಬಾ ಖುಷಿಯಿಂದ ನೋಡ್ತಾ ಇದ್ಲು. ವಡ್ ವಡ್ ಆಗಿ ತಯಾರಾದ್ರೆ ಅವ್ರಿಗೆ ಹೇಳ್ತಾ ಇದ್ಲು. ಸ್ವಲ್ಪ ಅಚ್ಕಟ್ಟಾಗಿ ಇರಿ ಅಂತ.  
ಭುವನೇಶ್ವರಕ್ಕನಿಗೆ  ಇಗೀನ ಕಾಲದ ಹೆಣ್ಣು ಮಕ್ಕಳು ಅಡಿಗೆ ಕೆಲಸ ಕಲಿಯಲ್ಲ ಅನ್ನೋ ಬೇಸರ ತುಂಬಾ ಇತ್ತು. ಅದು ಅಲ್ದೆ ಇಗೀನ ಅಪ್ಪ-ಅಮ್ಮಂದಿರು ಕೆಲಸ ಕಲ್ಸಲ್ಲ ಅನ್ನೋ ಬೇಸರ ಇತ್ತು. ಅವ್ಳು ಜೀವನಕ್ಕೆ ಅಡಿಗೆ ಕೆಲಸ ಮುಖ್ಯ ಅಂತ ನಂಬಿದ್ಲು. ಎಷ್ಟೇ ದೊಡ್ಡ ನೌಕರಿಗೆ ಹೋಗ್ಲಿ ನಮ್ಮ ಹೊಟ್ಟೆಗೆ ನಾವು ಏನಾದ್ರು ಬೆಯ್ಸಗೊಳ್ ಬೇಕು ಅಂತ ನಂಬಿದವಳು. ನಮ್ಗೂ ಯಾವಾಗ್ಲು ಹೇಳ್ತಾ ಇದ್ಲು ಅಮ್ಮನ ಜೊತೆ ಸ್ವಲ್ಪ ಸ್ವಲ್ಪ ಅಡಿಗೆ ಕಲಿರಿ ಅಂತ.
ಒಮ್ಮೆ ನನ್ನ ದೊಡ್ಡಪ್ಪನ ಮನೆಲಿ ಶತರುಧ್ರ ಹವನ  ಮತ್ತು ಲಕ್ಷ ಲಿಂಗಾರ್ಚನೆ ಇತ್ತು. ಆಗ ಭವನೇಶ್ವರಕ್ಕ ಬಂದು ನಮ್ಮ ಮನೆಲೆ ಉಳ್ದಿದ್ಲು. ಅಗ ಪ್ರತಿ ದಿನ ಉಪವಾಸ ಇದ್ದು ಲಿಂಗ ಮಾಡಿ ಬರ್ತಾ ಇದ್ಲು. ಐದು ದಿನದ ಪೂಜೆ ಆ ಐದು ದಿನಾಲು ಇವಳು ಅಲ್ಲಿ ಹೋಗಿ ಭಕ್ತಿಯಿಂದ ಪೂಜೆ ಮಾಡಿದ್ಲು. ಅದಾಗಿ ಸ್ವಲ್ಪ ದಿನ ನಮ್ಮ ಮನೆಲಿ ಇದ್ದು ಹೊರ್ಟ್ಲು. ಅವ್ಳು ಹೋಗ್ಬೇಕಿದ್ರೆ ಸಹಜವಾಗಿ ಕೇಳಿದ್ದೆ “ಭುವನೇಶ್ವರಕ್ಕ ಇನ್ನು ಯಾವಗ ನೀನು ನಮ್ಮ್ ಮನಿಗೆ ಬತ್ತೆ” ಹೇಳಿ. ಅವ್ಳು ಹೇಳಿದ್ಲು ಇಷ್ಟೆ ಗಟ್ಟಿ ಇದ್ರೆ ಅಕ್ಕಯ್ಯನ ಮದುವಿಗೆ ಬರ್ತ್ತಿ ಅಂತ. ಆಗ ನಮ್ಮನೆಲಿ ಅಕ್ಕನ ಮದುವೆ ಗೊತ್ತಾಗಿತ್ತು. ಅವ್ಳು ಅದಿಕ್ಕೆ ಬರೋ ಯೋಚ್ನೇಲಿ ಇದ್ಲು. ನಾನು ಅವ್ಳ ಅದಿಕ್ ಬರ್ತಾಳಲ್ಲಾ ಅಂತ ಅಂದ್ಕೊಂಡಿದ್ವಿ. ಆದ್ರೆ ಅವ್ಳು ಹೋಗಿ ಸ್ವಲ್ಪ ದಿನಕ್ಕೆ ಶಿವನ ಪಾದ ಸೇರಿಕೊಂಡ್ಲು. ಸ್ವಲ್ಪನು ಹುಷಾರು ತಪ್ಪಿ ಮಲ್ಗಲಿಲ್ಲ. ಇದು ಅವಳ ಯಾವಾಗ್ಲು ಹೇಳ್ತಾ ಇದ್ಲು “ಹಾಸಿಗೆ ಹಿಡಿದು ಮಲಗದಿದ್ರೆ ಸಾಕು “ ಅಂತ . ಅವ್ಳಿಗೆ ಅನ್ಸಸಿರ ಬೇಕು ತಾನು  ಮಲ್ಗಿದ್ರೆ ನನ್ನ ಯಾರು ನೋಡ್ಕೊಳ್ತಾರೆ ಅಂತ. ದೇವ್ರು ಅವ್ಳಿಗೆ ಎಷ್ಟೇ ಕಷ್ಟ ಕೊಟ್ರು ಒಳ್ಳೆ ಸಾವು ಅವ್ಳು ಅಂದ್ಕೊಂಡಂತೆ  ಆಯ್ತು. ದೇವರ ಪೂಜೆ ಮುಗಿಸಿ ತಿಂಡಿ ತಿನ್ನೋಕ್  ಬರ್ಬೇಕಿದ್ರೆ ಅಯಾ ತಪ್ಪಿ ಬಿದ್ದು ಅಗಿಂದ್ ಆಗೆ ತೀರಿ ಹೋದ್ಲು.
ಅವ್ಳು ಸತ್ತಾಗ ನಮ್ಮೆಲ್ಲರಿಗೂ ತುಂಬಾ ದುಖಃ ಆಯ್ತು. ನನ್ಗೆ ಸ್ವಲ್ಪ  ಅಳು ಬಂತು. ಆದ್ರೆ ತಂಮ್ಮ ಬಿಕ್ಕಿ ಬಿಕ್ಕಿ ಅಳೊದೊಂದೆ  ಮಾಡ್ದಾ. ಆದ್ರೆ  ಎಲ್ಲರ ಬಾಯಲ್ಲು ಒಂದೆ ಮಾತು. ಪುಣ್ಯಾತ್ಗಿತ್ತಿ…ಹಾಸಿಗೆ ಹಿಡಿದೆ ಸತ್ಲು ಅಂತ . ಅದು ನಿಜ. ಈಗಿನ್ ಕಾಲದಲ್ಲಿ ಮಕ್ಳು ಮರಿ ಇದ್ರು ನೋಡೊದು ಕಷ್ಟ.  ಇಂತಾ ಪರಿಸ್ಥಿತಿಯಲ್ಲಿ ಇವ್ಳು ಹಾಸಿಗೆ ಹಿಡಿದ್ರೆ ತುಂಬಾ ಕಷ್ಟ ಆಗ್ತಾ ಇತ್ತು. ವ್ಯವಹಾರಿಕವಾಗಿ ನೋಡಿದ್ರೆ ಅವ್ಳು ಸತ್ತಿದ್ದು ಒಳ್ಳೆದು ಅಂತಾನೆ ಅನ್ಸೊದು. ಆದ್ರೆ ಭಾವನೆ…ಮನಸ್ಸು ಅಂತ ಬಂದ್ರೆ ಅವ್ಳ ಸಾವು ತುಂಬಾ ಬೇಸರ ತರತ್ತೆ. ಅವ್ಳ ಕಥೆ..ಹಾಡು ಇನ್ನು ಕೇಳ್ಬೇಕು ಅನ್ನೊ ಮನಸ್ಸು ಹೇಳತ್ತೆ.

No comments: