Saturday, June 23, 2018

ನಮ್ಮೂರ ಮಳೆಗಾಲ...


                                  ನಮ್ಮೂರ ಮಳೆಗಾಲ….

ಇವತ್ತು ಯಾಕೋ ತುಂಬಾ ಗಾಳಿ ಮತ್ತು ಚಳಿ. ಹಾಲು ತರೋಕ್ ರಸ್ತೆ ಮೇಲ್ ಹೋಗ್ತಾ ಇದ್ರೆ ನಮ್ಮನ್ನೇ ಹಾರಿಸಿಗೊಂಡ್ ಹೋಗತ್ತೇನೊ ಅನ್ನೋ ರೀತಿಲಿ ಗಾಳಿ ಬೀಸ್ತಾ ಇತ್ತು. ನನಗಂತು ಈ ವಾತಾವರಣ ನೋಡಿದ್ರೆ ತಟ್ಟನೆ ನೆನಪು ಆಗಿದ್ದೆ ನಮ್ಮ ಊರು. ಮಲೆನಾಡಿನ ಚಳಿ..ಬೆಚ್ಚಗಿನ ಅಮ್ಮನ ಮನೆ ವಾತಾವರಣ. ಸೀದಾ ಮನೆಗೆ ಬರ್ತಾನೆ ಪ್ಲಾಶ್ ಬ್ಯಾಕ್ ಗೆ ಹೋದೆ.
ಅಪ್ಪಾ ಯಾವಾಗ್ಲು ಬಚ್ಚಲ ಒಲೆಗೆ ಬೆಂಕಿ ಹಾಕ್ತಾ ಇದ್ದ, ಅಮ್ಮಾ ಹಾಲು ಕರೆದು ಬರುವಷ್ಟರಲ್ಲಿ ನಮ್ದು ಸ್ನಾನ ಆಗ್ಬೇಕಿತ್ತು. ಹಾಳಾದ್ ಶಾಲೆ ಇಲ್ಲಾ ಅಂದ್ರೆ ಇದ್ ಯಾವ್ದ್ರದ್ದು ರಗಳೆ ಇಲ್ಲಾಗಿತ್ತು. ಬೆಚ್ಚಗೆ ಮನೆಲೇ ಇರ್ಬಹುದು. ಏನ್ ಮಾಡೋದು ಎಲ್ಲಾ ತಿಂಗ್ಳನು ಎಪ್ರೀಲ್ ಮೇ ಆಗಲ್ಲಾ. ಏನೋ ಬೈಕೊತ್ತಾನೆ ಒಲೆ ಮುಂದೆ ಬೆಚ್ಚಗೆ ಬೆಂಕಿ ಕಾಯ್ಸತ್ತಾ ಕುಳಿತಾ ಇರ್ತಿದ್ವಿ. ಇರೋ ಒಂದ್ ಒಲೆ ಬೆಂಕಿ ಕಾಯಿಸೋದಕ್ಕೆ  ಕ್ಯೂ ಬೇರೆ. ಮೊದ್ಲು ಬಂದವ್ರಿಗೆ ಮೊದ್ಲ ಆದ್ಯತೆ ಅನ್ನೊ ಪದ್ದತಿ ಮಾಡ್ಬಹುದಿತ್ತು. ಆದ್ರೆ ಮಾಡೊವ್ರು ಇಲ್ಲಾ..ಕೇಳೊರು ಇಲ್ಲಾ. ತಂಮ್ಮಾ ಲೇಟ್ ಆಗಿ ಬಂದ್ರು ತಾನು ಒಲೆ ಮುಂದೆ ಕುಳಿತೆ ಬಿಡ್ತಾ ಇದ್ದ. ಏನೊ ತಕ್ಕ ಮಟ್ಟಿಗೆ ಬೆಚ್ಚಗೆ ಬೆಂಕಿ ಕಾಯಿಸಿ ಶಾಲೆಗೆ ರೆಡಿ ಆಗ್ತಾ ಇದ್ವಿ.
ಮಳೆಗಾಲದಲ್ಲಿ ಒಣಗಿಸಿ ಇಟ್ಟ ಹಲಸಿನ ಹಣ್ಣಿನ ಬೆಳೆ ಸುಟ್ಟುಗೊಂಡು ತಿನ್ನೊದು ತುಂಬಾ ಮಜ. ಈಗ್ ನಾವು ಮಳೆ ಬಂದಾಗ ಬಿಸಿ ಬಿಸಿ ಕಾಫಿ ಬೇಲ್ ಪುರಿ ಅಥ್ವಾ ಇನ್ನೇನೋ ಕುರ್ ಕುರ್ ಅಂತ ತಿಂಡಿ ತಿನ್ಬಹುದು. ಆದ್ರೆ ಒಲೆ ಮುಂದೆ ಕುಳಿತು ಕೆಂಡದಲ್ಲಿ ಹಲಸಿನ ಬೆಳೆ ಸುಡೊದು, ತಿನ್ನೊದು ಎರ್ಡು ಅನುಭವಿಸಿದವರಿಗೆ ಗೊತ್ತು. ಅಮ್ಮಾ ಹಲಸಿನ ಬೀಜ ಒಣಗಿಸಿ ತುಂಬಿಟ್ಟರೆ ಗಜಾನಣ್ಣ ಸುಡ್ತಾ ಇದ್ದ. ಅದ್ರ ತಿನ್ನೋಕ್ ಮಾತ್ರ ನಾನು, ಅಪ್ಪಾ,ತಂಮ್ಮಾ.ಅಕ್ಕಾ, ಎಲ್ಲಾ ಸೇರ್ತಾ ಇದ್ವಿ. ಒಲೆ ಮುಂದೆ ಕಸ ಮಾಡ್ತಾ ಇದ್ರಲೇ ಅಂತ ಅಮ್ಮಾ ಕೂಗ್ತಾ ಇದ್ರೆ ಕೇಳೋ ಸ್ಥಿತಿಯಲ್ಲಿ ಯಾರು ಇರ್ತಾ ಇರ್ಲಿಲ್ಲಾ.
ನಮ್ಮೂರಲ್ಲಿ ಯಾವಾಗ್ಲು ಮಳೆ ಸುರಿತಾ ಇರೋದ್ರಿಂದ ಮಳೆ ಅಂತ ರಜೆ ಕೊಡ್ತಾ ಇರ್ಲಿಲ್ಲಾ. ಏನೋ ರೇನ್ ಕೊಟ್ ಹಾಕಿದ್ರು ಅರ್ದ ಮೈ ಒದ್ದೆ ಮಾಡ್ಕೊಂಡೆ ಹೋಗ್ತಾ ಇದ್ವಿ. ಆದ್ರೆ ನನ್ಗೆ ಮಳೆಗಿಂತ ದೊಡ್ಡ ತಲೆ ನೋವು ಆಗಿದ್ದು ಈ ಉಂಬಳದ ಕಾಟ. ಯಾರ್ ಕಾಲಿಗೆ ಇಲ್ದೆ ಇದ್ರು ಗ್ರಹಚಾರಕ್ಕೆ ನನ್ನ ಕಾಲಿಗೆ ಹತ್ಗೊಳ್ತಾ ಇತ್ತು. ಅಪ್ಪಾ ಯಾವಾಗ್ಲು ತೋಟದಿಂದ ಬಂದೊವ್ನೆ ಒಂದು ಎರಡು ಅಂತ ಸುಮಾರು ಐದು ಆರರ ವರೆಗೆ ಲೆಕ್ಕ ಮಾಡ್ತಾ ಉಂಬಳಾನ ಒಲೆಗೆ ಹಾಕ್ತಾ ಇದ್ದ.  ನನ್ನ ಮಗಳ್ನಾ ಒಂದ್ ಬಾರಿ ಮಳೆಗಾಲದಲ್ಲಿ ಊರಿಗೆ  ಕರ್ಕೊಂಡು ಹೋಗಿದ್ದೆ. ಹೂ ಕೊಯ್ಯಲು ಹಿತ್ಲಿಗೆ ಹೋದಾಗ ಗ್ರಹಚಾರಕ್ಕೆ ಅವ್ಳ ಕಾಲಿಗೆ ಉಂಬಳ ಹತ್ತೆ ಬಿಡ್ತು. ನಾನೋ ಹೂ ಕೊಯ್ತಾ ಇದ್ರೆ ಇವ್ಳು ಅಮ್ಮಾ ಏನೋ ಹುಳ ನನ್ನ ಕಾಲೆ ಬಿಡ್ತಾ ಇಲ್ಲಾ ರಕ್ತಾ ಬೇರೆ ಬರ್ತಾ ಇದೆ ಅಂತ ರಗಳೆ ಶುರು ಮಾಡೆ ಬಿಡ್ತು. ಏನ್ ಮಾಡ್ಬೇಕು ಅನ್ನುವಷ್ಟರಲ್ಲಿ ತಂಮ್ಮಾ ಉಂಬಳದ ಅಂತ್ಯ ಸಂಸ್ಕಾರ ಮಾಡೆ ಬಿಟ್ಟಿದ್ದ. ಮಗಳಿಗೆ ಉಂಬಳದ ಕಥೆ ಹೇಳುವಷ್ಟರಲ್ಲಿ ಸಾಕ್ ಸಾಕಾಗಿತ್ತು.
ಮಳೆ ಶುರು ಆಯ್ತು ಅಂದ್ರೆ ಅಡಿಕೆ ತೋಟಕ್ಕೆ ಮದ್ದು(ಔಷದಿ) ಹೊಡಿಯೋ ಪ್ರೋಗ್ರಾಮ್ ಶುರು ಆಗ್ತಾ ಇತ್ತು. ಮಳೆಗಾಲದಲ್ಲಿ ನಮ್ ಮನೆ ತೋಟದಲ್ಲಿ ಇರೋ ಹಲಸಿನ ಮರಕ್ಕೆ ಸೀತಾ ದಂಡೆ ಆಗ್ತಾ ಇತ್ತು.ನಮ್ಮ ಮನೆ ಮದ್ದು ಹೊಡಿಯೋ ಗೌಡ ಸಿಕ್ದಾಗ್ ಎಲ್ಲಾ ನಮ್ಗೆ ಸೀತಾ ದಂಡೆ ತಂದು ಕೊಡ್ತಾ ಇದ್ದ.  ಅಪರೂಪಕ್ಕೆ ಒಂದೋ ಎರಡೊ ಆಗ್ತಾ ಇದ್ರು ನಾನು ಅಕ್ಕಾ ಸರದಿ ಮೇಲೆ ಮುಡ್ಕೊಳ್ತಾ ಇದ್ವಿ. ನನ್ಗೊ ಈ ಸೀತಾ ದಂಡೆ ಮೇಲ್ ಮೋಹನೋ ಅಥ್ವಾ ಕ್ಲಾಸ್ ನಲ್ಲಿ ಎಲ್ಲರ ಮುಂದು ಪೋಸ್ ಕೊಡೋ ಹುಚ್ಚೊ. ಅಮ್ಮಾ ಜಡೆಗೆ ಸೀತಾ ದಂಡೆ ಸುಡಿಸಿದಾಗ ಏನೋ ಒಂದ್ ಹತ್ತು ನಿಮಿಷ ಮೊದ್ಲೆ ಶಾಲೆಗೆ ಹೋಗ್ತಾ ಇದ್ದೆ. ಆದ್ರೆ ಈ ಸೀತಾ ದಂಡೆ ನನ್ನ ತಲೆ ಮೇಲ್ ಒಂದ್ ಅರ್ಧ ಗಂಟೆ ಅಷ್ಟೆ ಇರೋದು. ನಮ್ ಅಕ್ಕೊರಿಗೆ ಈ ಸೀತಾ ದಂಡೆ ಮೇಲ್ ನನ್ಗಿಂತ ಜಾಸ್ತಿ  ಮೋಹ. ನಿನ್ನ ಚೋಟುದ್ದ ಜಡೆಗೆ ಇದು ಸರಿ ಬರಲ್ವೆ ಅಂತ ತಂಮ್ಮ ಜಡೆಗೆ ನಾಜೂಕಾಗೆ ಸ್ಥಳಾಂತರ ಮಾಡೆ ಬಿಡ್ತಾ ಇದ್ರು. ಏನ್ ಮಾಡ್ಲಿ ಚೋಟ್ ಉದ್ದ ಜಡೆಗೆ ಬಯ್ಕೊಳ್ಳಲೋ…ಅಕ್ಕೋರ ಉದ್ದವಾದ್ ಜಡೆಗೆ ಬಯ್ಕೊಳ್ಳಲೋ ಮುಚ್ಗೊಂಡು ಕೊಡ್ತಾ ಇದ್ದೆ.
ಈ ಮಳೆಗಾಲ ಬಂತು ಅಂದ್ರೆ ಅಮ್ಮನ ವಿಚಿತ್ರ ವಿಚಿತ್ರ ಪದಾರ್ಥ ಶುರು ಆಗ್ತಾ ಇತ್ತು. ಕೆಸುವಿನ ಸೊಪ್ಪಿನ ಕರಕಲಿ, ಕಳಲೆ ಹುಳಿ, ಹೀಗೆ. ಕಳಲೆ ಕಟ್ ಮಾಡ್ಬೇಕಿದ್ರೆ ಏನೋ ಮಜ. ಆ ಸರ್ಕಲ್ ಸರ್ಕಲ್ ಆಗಿ ಕಟ್ ಮಾಡಿದ್ನಾ  ಗಾಲಿ ಮಾಡಿ ಆಟ ಆಡ್ತ ಇದ್ವಿ. ಆದ್ರೆ ಊಟ ಮಾಡ್ಬೇಕಿದ್ರೆ ಅಮ್ಮಂಗೆ ಬೈತಾ ನೆ ತಿನ್ತ ಇದ್ದೆ. ಆದ್ರೆ ಇಗ್ ಮಾತ್ರಾ ಮಂಗಳೂರ್ ಸ್ಟೋರ್ಸ್ ಹುಡ್ಕೊಂಡ್ ಹೋಗಿ ಕಳಲೆ ಕೆಸುವಿನ ಎಲೆ ತರೊದ್ ಆಗಿದೆ. ಅಮ್ಮಾ  ಈಗ್ ಹೇಳ್ತಾ ಇರ್ತಾರೆ ಆಗ್ ಬೈತಾ ಇದ್ದೆ ಈಗ್ ದುಡ್ಡು ಕೊಟ್ಟು ತಂದ್ ಕೊಂಡು ತಿಂದ್ರೆನೆ ರುಚಿನಾ ಅಂತಾ. ಅದ್ ಏನೋ ಆಗ್ ಇಷ್ಟ ಆಗ್ದೆ ಇದ್ದದ್ದು ಈಗ್ ಫೇವ್ರೇಟ್ ಲಿಸ್ಟ್ ಗೆ ಸೇರ್ಬಿಟ್ಟಿದೆ. ಆದ್ರೆ ಈಗ  ಹಿಸ್ಟರಿ ರಿಪೀಟ್ಸ್ ಅಂತಾರಲ್ಲಾ ಮಗಳು ನನಗೆ ಬೈತಿರ್ತಾಳೆ. ಇದಲ್ಲಾ ಎಲ್ಲಿಂದ ಹುಡ್ಕೊಂಡು ಬರ್ತ್ತಿಯಾ ಅಂತಾ.
ನಮ್ಮ ಊರಿನ ಮಳೆಗಾಲದ್ ಕಥೆ ಬರೀತಾ ಹೋದ್ರೆ ಮುಗಿಯೋದಲ್ಲಾ. ನೆಲ ಅಗೆದಷ್ಟು ವರತೆ ಬರ್ತಾ ಹೋಗತ್ತೆ. ಹಾಗೆ ಬರಿತಾ ಹೋದಷ್ಟು ಹನುಮಂತನ ಬಾಲ ಬೆಳಿತಾ ಹೋಗತ್ತೆ. ಬೆಂಗಳೂರಿನಲ್ಲಿ ಮಳೆಗೇನು ಕೊರತೆ ಇಲ್ಲಾ. ಯಾವಾಗ್ ಅಂದ್ರೆ ಯಾವಾಗ ಮಳೆ ಬರ್ತಾ ಇರತ್ತೆ. ಈ ಮಳೆ ನಮ್ಗೆ ಹಳೆ ನೆನಪು ಕಟ್ಟಿ ಕೊಡತ್ತೆ ಹೊರತು ನನ್ನ ಮಗಳಿಗೆ ಇದು ಮಳೆಗಾಲ ಒಂದ್ ಸುಂದರ್ ಅನುಭವ ಅಂತ ಯಾವಾಗ್ಲು ಆಗಲ್ಲಾ. ಏನೋ ಮಳೆ ಬರ್ತಾ ಇದೆ ಆಚೆ ಹೋಗೊಕ್ ಆಗ್ದೆ ಮನೆಲೆ ಕಾರ್ಟುನ್ ನೋಡಿದ್ರೆ ಆಯ್ತು ಅಷ್ಟೆ ಅವಳ ಪಾಲಿಗೆ. ಆದ್ರೆ ನನ್ಗೆ ಹಾಗಲ್ಲ. ಆ ಅನುಭವನೇ ಬೇರೆ. ಯಾಕೋ ಏನೋ ನನ್ಗಂತು  ನಮ್ಮೂರಲ್ಲಿ ನಾವ್ ನೋಡಿದ್  ಮಳೆಗಾಲನೇ ಬೇರೆ ಅಂತ ಅನ್ಸತ್ತೆ. ಇಲ್ಲಿ ಎಷ್ಟೆ ಮಳೆ ಬಂದ್ರು ನನ್ಗೆ  ಆ ಖುಶಿ ಸಿಕ್ಕೆ ಇಲ್ಲಾ.

No comments: