Saturday, June 23, 2018

ಬಿಸಿಲು ನಾಡಲ್ಲಿ ತಂಪು ಮಜ್ಜಿಗೆ.


ಬಿಸಿಲು ನಾಡಲ್ಲಿ ತಂಪು ಮಜ್ಜಿಗೆ

ಜನವರಿಯಲ್ಲಿ ಕ್ರಮವಾಗಿ ನಾಲ್ಕು ದಿನ ರಜೆ ಬಂದ ಕಾರಣ ಬೆಂಗಳೂರಿನ ಗಿಜಿ ಬಿಜಿ ಬಿಟ್ಟು ಎಲ್ಲಾದರು ದೂರ ಹೋಗಬೇಕು ಅನ್ನೋ ಮನಸ್ಸಾಯಿತು. ಆಗ ನೆನಪಾದದ್ದೆ ಉತ್ತರ ಕರ್ನಾಟಕ ಹಂಪೆ ಮತ್ತು ಅದರ ಆಜು ಬಾಜು.
ಬೆಂಗಳೂರಿನಿಂದ ಸುಮಾರು  ಅರು-ಎಳು ತಾಸಿನ ಪ್ರಯಾಣ. ರಸ್ತೆ ಕೆಲವು ಕಡೆ ಹಾಳಾದರು ನಮಗೆ ಅಷ್ಟು ಕಷ್ಟ ಅಂತ ಅನ್ನಿಸಲಿಲ್ಲ. ಅದು ಅಲ್ಲದೆ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಇಲ್ಲಿನ ರಸ್ತೆಯ ಅಕ್ಕ ಪಕ್ಕದ ಕಲ್ಲು ಗುಡ್ಡಗಳು ಸ್ವಲ್ಪ ವಿಭಿನ್ನವಾಗಿ ಕಂಡವು. ಮೊದಲು ನಾವು ಹಂಪೆಗೆ ಹೋದೆವು. ಅಲ್ಲಿ ಬಿಸಿಲಿತ್ತು ಆದರು ನಮಗೆ ಸಖೆ ಅಂತ ಅನ್ನಿಸಲಿಲ್ಲ. ಆದರೆ ಅಲ್ಲಿನ ಕಲ್ಲು ಬಂಡೆಗಳ ಮೇಲೆ ನಡೆಯುವಾಗ ಮಾತ್ರ ಸೂರ್ಯ ಅವನ ತಾಪದ ಚುರುಕು ಮುಟ್ಟಿಸಿದ. ನಮಗೆ ಗೈಡ್ ಪ್ರತಿಯೊಂದನ್ನು ವಿವರಣೆಯಾಗಿ ಹೇಳುತ್ತಿದ್ದ. ವಿಜಯ ನಗರ ಸಾಂಬ್ರಾಜ್ಯದ ಕಥೆ ಮತ್ತು ಅಲ್ಲಿನ ವೈಭವ ವಿವರಿಸುತ್ತಾ ಹೋದಾಗ ನನಗೆ ಅಲ್ಲಿ ನೋಡಲು ಸಿಕ್ಕಿದ್ದು ಅಲ್ಲಿನ ದೇವಸ್ಥಾನ ಮತ್ತು ಕಲ್ಲಿನ ಗುಡ್ಡಗಳು.
ರಾಮಾಯಣದಲ್ಲಿ ಬರುವ ವಾಲಿ ಮತ್ತು ಸುಗ್ರೀವರ ಕದನ ಮತ್ತು ರಾಮಾ ಲಕ್ಷಮಣರು ತಂಗಿದ್ದ ಆ ಕಲ್ಲಿನ ಗುಡ್ಡ ನೋಡಿ ಯಾಕೋ ಮನಸ್ಸಿಗೆ ತುಂಬಾ ಹಿತ ಅನಿಸಿತು. ನನ್ನ ಮಗಳಿಗೆ ವಿಜಯ ನಗರ ಸಾಂಬ್ರಾಜ್ಯದ ಕಥೆಗಿಂತ ರಾಮ ಲಕ್ಷ್ಮಣ ವಾಲಿ ಸುಗ್ರೀವರ ಕಥೆ ಮತ್ತು ದೂರದಿಂದ ಆ ಕಲ್ಲಿನ ಗುಡ್ಡ ನೋಡಿ ಖುಶಿಯೋ ಖುಶಿ. ನಾವು ಹಂಪಿಯಲ್ಲಿ ವಿರುಪಾಕ್ಷ ದೇವಸ್ಥಾನ, ಕಡ್ಲೆ ಕಾಳು ಗಣೇಶ, ಸಾಸಿವೆ ಕಾಳು ಗಣೇಶ, ಲಕ್ಷ್ಮಿ ನರಸಿಂಹ, ವಿಜಯ ವಿಠಲ ದೇವಸ್ಥಾನ, ಹಜಾರ ರಾಮ ದೇವಸ್ಥಾನ. ವಿಜಯ ವಿಠಲ ದೇವಸ್ಥಾನದಲ್ಲಿ ಕಲ್ಲಿನ ರಥ ಎಲ್ಲರ ಗಮನ ಸೆಳೆಯಿತು. ರಥದ ಮುಂದೆ ಪ್ರವಾಸಿಗಳು ಸೆಲ್ಪಿ ಮತ್ತು ಗ್ರುಫ್ ಪೋಟೊಗಳಿಂದ ಗಿಜಿಗುಡುತಿತ್ತು.ಆಗಿನ ಕಾಲದಲ್ಲಿ ಯಾವುದೆ ಆಧುನಿಕ ಉಪಕರಣಗಳಿಲ್ಲದೆ ಪ್ರತಿಯೊಂದು ಕೈಯಲ್ಲಿ ಕೆತ್ತಿದ ಕಲಾಕಾರರಿಗೆ ಮನಸ್ಸಿನಲ್ಲಿಯೇ ಎಸ್ಟು ಬಾರಿ ನಮಿಸಿದೆನೋ. ಪ್ರತಿಯೊಂದು ದೇವಸ್ಥಾನದ ಪ್ರತಿ ಕೆತ್ತನೆಯು ಅದ್ಭುತವಾಗಿತ್ತು. ಆಗಿನ ವೈಭವ ನಶಿಸಿ ಹೋದರು ಅಲ್ಲಿನ ಕಲೆ ಸಾವಿರ ಕಥೆ ಹೇಳುತ್ತಿತ್ತು. ಆಗಿನ ವೖಭವದ ಚಿತ್ರಣ ಕಣ್ಣಿಗೆ ಕಟ್ಟುವಂತೆ ಇತ್ತು.
ಮರುದಿನ ನಾವು ಬಾದಾಮಿಗೆ ಹೊರಟೆವು.  ದಾರಿಯಲ್ಲಿ ಬನಶಂಕರಿ ಅಮ್ಮನಿಗೆ ಒಂದು ನಮಸ್ಕಾರ ಹಾಕಿ ಹೋದೆವು. ಪೂಜೆ ಪುನಸ್ಕಾರದ ಮೇಲೆ ನಂಬಿಕೆ ಇಲ್ಲದ ನನಗೆ ಬೇಗ ದೇಸ್ಥಾನದಿಂದ ಆಚೆ ಬಂದು ಅಲ್ಲಿ ಕೆಲವು ಹೆಂಗಸರು ಮಾರುವ ಜೋಳದ ರೊಟ್ಟಿ ಕಾಳು ಪಲ್ಯ ಸ್ವಾಹ ಮಾಡಲಾಯಿತು. ಬನಶಂಕರಿಯಿಂದ ಬಾದಾಮಿ ಗೆ ಹೊರಟೆವು. ಮರ ಗಿಡಗಳಿಲ್ಲದ ಕಲ್ಲಿನ ಗುಡ್ದ. ಸುಡು ಬಿಸಿಲು. ಆ ಬಿಸಿಲಿನಲ್ಲು ಬೇಸಾಯ ಮಾಡೋದನ್ನು ನೋಡಿ ಎ.ಸಿ. ಬಸ್ಸಿನಲ್ಲಿ ಕುಳಿತ ನನಗೆ ಬೆವರಿಳಿಯಿತು. ತುಂಬಾ ಶ್ರಮ ಜೀವಿಗಳು ಎಂದು ಭಾಸವಾಯಿತು. ನಾವು ಸುಮಾರು ಹತ್ತು ಗಂಟೆಗೆ ಬಾದಾಮಿ ತಲುಪಿದೆವು. ಆಗಲೇ ಸೂರ್ಯ ತನ್ನ ಪ್ರತಾಪ ತೋರಿಸುತ್ತಿದ್ದ. ಬಾದಾಮಿ ಕೇವ್ಸ್ ಚಾಲುಕ್ಯರ ಕಾಲದ್ದು ಎಂದು ಹಾಗು ಅದರ ಬಗ್ಗೆ ಇತಿಹಾಸದಲ್ಲಿ ಓದಿದ ನೆನಪು. ಅದರ ಜೊತೆ ಅಲ್ಲಿದ್ದ ಗೈಡ್ ನಮಗೆ ವಿವರಣೆ ಕೊಡ್ತಾ ಹೋದ.ಬಾದಾಮಿಯಲ್ಲಿ ಇರೋ ನಾಲ್ಕು ಗುಹೆ. ಒಂದಾದ್ ಮೇಲೆ ಒಂದು (ಅಡ್ಡವಾಗಿ)ಮೆಟ್ಟಿಲು ಹತ್ತಿ ಹೋಗಬೇಕು. ಅಲ್ಲಿ ಹೋಗುವಾಗ ಕಲ್ಲುಗಳು ತುಂಬಾ ನಣುಪಾಗಿವೆ. ಇದಕ್ಕೆ ಕಾರಣ ಜನರ ಓಡಾಟದಿಂದ ಅಂತ ನನಗೆ ಅನಿಸಿದೆ. ಅದಲ್ಲದೆ ಅಲ್ಲಿ ಮಂಗಗಳ ಕಾಟ. ಇವೆಲ್ಲಾ ಗಮನದಲ್ಲಿ ಇಟ್ಟು ಮಗಳ ಕೈಯನ್ನು ಹಿಡಿದು ನನ್ನನ್ನು ನಾನು ಸಂಭಾಳಿಸುತ್ತಾ ಜೋಪಾನವಾಗಿ ಒಂದೊಂದೆ  ಗುಹೆಗೆ ಹೋದೆವು.
ಮೊದಲನೇ ಗುಹೆಯಲ್ಲಿ ಶಿವ ತಾಂಡವ ಹಾಗು ನಟರಾಜನನ್ನು ಕಾಣಬಹುದು. ಎರಡನೇಯ ಗುಹೆ ವಿಷ್ಣು ಮತ್ತು ತ್ರಿವಿಕ್ರಮ ಹಾಗು ಮೊರನೇಯ ಗುಹೆಯಲ್ಲಿ ವಿಷ್ಣು ಮತ್ತು ನಂದಿಯನ್ನು ಚಿತ್ರಿಸಿದ್ದಾರೆ. ನಾಲ್ಕನೇಯ ಗುಹೆಯಲ್ಲಿ ಜೈನ ಧರ್ಮವನ್ನು ನೋಡಬಹುದು. ಇಲ್ಲಿ ಗೋಡೆಯ ಮೇಲೆ ಪುಟ್ಟ ಪುಟ್ಟ ಬಾಹುಬಲಿಯನ್ನು ಕೆತ್ತಿದ್ದಾರೆ. ಬಾದಾಮಿಯ ನಾಲ್ಕು ಗುಹೆಗಳ ಕೆತ್ತನೆಯು ಅದ್ಬುತವಾಗಿದೆ. ಅಲ್ಲಿನ ಪ್ರತಿ ಗುಹೆಗಳ ಕೆತ್ತನೆಯನ್ನು ವಿಸ್ತಾರವಾಗಿ ಬರಿತಾ ಹೋದರೆ ಒಂದೊಂದು ನಾಲ್ಕು ಪುಟಗಳಾಗುತ್ತವೆ. ಬಾದಾಮಿ ಕೇವ್ಸ್ ಮೇಲಿಂದ ನೋಡಿದರೆ ಅಲ್ಲಿನ ಸುತ್ತಲಿನ ವಾತಾವರಣವು ಸೊಗಸಾಗಿದೆ.
ನಾವು ಬಾದಾಮಿಯಿಂದ ಸುಮಾರು ಮುಕ್ಕಾಲು ಗಂಟೆಗೆ ಪಟ್ಟದಕಲ್ಲು ತಲುಪಿದೆವು. ಬಾದಾಮಿ ಕಣ್ಣಿಗೆ ತಂಪು ನೀಡಿದರೆ ಪಟ್ಟದಕಲ್ಲು ಹೊಟ್ಟೆಗೆ ತಂಪು ನೀಡಿತು. ಸರಿಯಾದ ಊಟದ ಸಮಯ ಬೇರೆ ಆಗಿತ್ತು. ಸುಸ್ತಾಗಿದ್ದ ನಮಗೆ ಹೊಟ್ಟೆ ಚುರ್ ಗುಡ್ತಾ ಇತ್ತು. ಹೊಟ್ಟೆಗೆ ತಂಪು ನೀಡಿದ್ದು ಅಲ್ಲಿ ಸಿಕ್ಕ ತಂಪು ಮಜ್ಜಿಗೆ ಜೋಳದ ರೊಟ್ಟಿ ಎಣಗಾಯಿ ಪಲ್ಯ. ಬನಶಂಕರಿ ಯಲ್ಲಿ ಬೆಳಿಗ್ಗೆ ತಿಂಟಿಗೆ ತಿಂದ  ರೊಟ್ಟಿಗೂ  ಇಲ್ಲಿ ಸಿಕ್ಕ ರೊಟ್ಟಿ ಊಟಕ್ಕ ಸ್ವಲ್ಪ ವ್ಯತ್ಯಾಸ ಅನಿಸಿದರು ರುಚಿಯಲ್ಲಿ ಎಲ್ಲು ಮೋಸ ಆಗಿಲ್ಲ. ನನಗಂತು ತುಂಬಾ ರುಚಿ ಅನಿಸಿತು. ತುಂಬಾ ಕಡಿಮೆ ಬೆಲೆಗೆ ಪ್ರೀತಿಯಿಂದ ಹೊಟ್ಟೆ ತುಂಬಾ ಊಟ ಬಡಿಸಿದರು. ಒಂದು ಕಡೆ ಕಣ್ಣು ಎಳೆಯುತ್ತಿದ್ದರು ಅಲ್ಲಿನ ದೇವಸ್ದಾನ ನಮ್ಮನ್ನು ಸೆಳೆಯಿತು.ಚಾಲುಕ್ಯರ ಕಾಲದಲ್ಲಿ ಮಲಪ್ಫ್ರಭಾ ನದಿಯ ದಂಡೆಯ ಮೇಲೆ ಕಟ್ಟಿದ ಸೊಗಸಾದ ದೇವಾಲಯ. ಶಾಲೆಯಲ್ಲಿ ಓದಿದ ಇತಿಹಾಸ ಮೇಲುಕು ಹಾಕುತ್ತಾ ಒಳಗೆ ಹೋದೆವು. ನಮ್ಮ ಗೈಡ್ ಹಂಪೆ ಮತ್ತು ಪಟ್ಟದಕಲ್ಲು unesco  ದವರು ಗುರುತಿಸಲ್ಪಟ್ಟಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡ. ಚನ್ನಾಗಿ ಮೆನ್ಟೇನ್ ಮಾಡಿದ್ದಾರೆ. ಇಲ್ಲಿ ಶಿವನ ದೇವಾಲಯ ನೋಡಬಹುದು. ಗೋಡೆಯ ಮೇಲೆ ಸೊಗಸಾಗಿ ರಾಮಾಯಣ ಮಹಾಭಾರತದ ಕೆತ್ತನೆಯನ್ನು ಮಾಡಲಾಗಿದೆ. ಇಲ್ಲಿ ತುಂಬಾ ನೋವಾಗುವ ಸಂಗತಿ ಅಂದರೆ ಇಲ್ಲಿನ ಹಲವು ವಿಗ್ರಹಗಳು ಭಿನ್ನವಾಗಿವೆ. ಒಂದು ಸುಂದರವಾದ ನಂದಿ ವಿಗ್ರಹ ತುಂಬಾ ಭಿನ್ನವಾಗಿದೆ. ಇದನ್ನು ನೋಡಿದರೆ ಯಾರಿಗಾದರು ಬೇಸರ ಆಗುತ್ತದೆ.  ಯಾಕೋ ಸ್ವಲ್ಪ ಭಾರವಾದ ಮನಸ್ಸಿನಿಂದಲೇ ಇಲ್ಲಿಂದ ನಮ್ಮ ಮುಂದಿನ ಪ್ರಯಾಣ ಐಹೊಳೆಗೆ ಬೆಳೆಸಿದೆವು.
ಐಹೊಳೆ ಯ ಚಾಲುಕ್ಯರ ಕಾಲದಲ್ಲೆ ನಿರ್ಮಾಣವಾಗಿದ್ದು ಇದು ಬಾದಾಮಿ ಮತ್ತು ಪಟ್ಟದಕಲ್ಲು ದೇವಸ್ಥಾನಕಿಂತ ಸ್ವಲ್ಪ ವಿಭಿನ್ನವಾಗಿದೆ. ಗೈಡ್ ಹೇಳುವ ಪ್ರಕಾರ ಇದು ತುಂಬಾ ವರುಷ ಬಾಳಿಕೆ ಬಾರದು ಮತ್ತು ಬೇಗ ನಶಿಸಿ ಹೋಗುವ ಸಾದ್ಯತೆ ಇದೆ ಎಂದು. ನಾವು ಸೂಕ್ಷ್ಮ್ ವಾಗಿ ಪರಿಕ್ಷಿಸಿದೇವು ನಮಗೂ ಹೌದು ಎನಿಸಿತು. ಏನೋ ಮರಳು ಮರಳಾಗಿದೆ. ಹೇಗಾದರು ಕಾಪಾಡಲಿ ನಮ್ಮ ಮುಂದಿನ ಪೀಳಿಗೆಯವರಿಗೂ ನೋಡಲಿ ಸಿಗಲಿ ಎಂದು ಮನಸ್ಸಿನಲ್ಲೆ ಅಂದುಕೊಂಡೆ. ಇವತ್ತಿನ ಸುತ್ತಾಟ ಮುಗಿಸಿ ನಾವು ಬಿಜಾಪುರಕ್ಕೆ ಹೋದೆವು. ರಾತ್ರಿ ಅಲ್ಲೆ ಉಳಿದು ಬೆಳಿಗ್ಗೆ ಬಿಜಾಪುರ್ ಸುತ್ತೊ ಪೋಗ್ರಾಮ್ ಆಗಿತ್ತು.
ಬಿಜಾಪುರದಲ್ಲಿ ಆದಿಲ್ ಶಾಹಿ ಬಿಜಾಪುರ ಸುಲ್ತಾನರ ಆಡಳಿತ ವಾದ್ದರಿಂದ ಇಲ್ಲಿ ಮುಸ್ಲಿಂ ಸ್ಮಾರಕಗಳೆ ಜಾಸ್ತಿ. ಮೊದಲು ಗೊಲ್ ಗುಮ್ಮಜ್ ಗೆ ಹೋದೆವು. ಗುಮ್ಮಜ್ ಒಳಗೆ ತುಂಬಾ ಕಿರಿದಾದ ಮೆಟ್ಟಿಲು. ಈ ಮೆಟ್ಟಿಲನ್ನು ಹತ್ತ ಬೇಕಿದ್ದರೆ ನಮ್ಮ ಗುಂಪಿನಲ್ಲೊಬ್ಬರು ಅಯ್ಯೋ ಇಷ್ಟು ಕಿರಿದಾದ ಮೆಟ್ಟಿಲನ್ನಾ ಆದಿಲ್ ಶಾಹಿ ಹೇಗೆ ಹತ್ತುತ್ತಿದ್ದನೋ ಅಂತ ತನ್ನ ಕಷ್ಟದ ಜೊತೆ ಆದಿಲ್ ಶಾಹಿಯ ಕಷ್ಟವನ್ನು ನೆನಪಿಸಿ ಕೊಂಡಳು. ಎಲ್ಲರಿಗೂ ತಿಳಿದ ಹಾಗೆ ಗುಮ್ಮಜ್  ಹೆಸರು ಮಾಡಿದ್ದೆ ಅಲ್ಲಿನ ವಿಸ್ಪರಿಂಗ್ ಗ್ಯಾಲರಿ ಮತ್ತು ಎಕೊ ಸೌಂಡ್. ಇದರ ಬಗ್ಗೆ ನಮ್ಮ ಗೈಡ್ ವಿವರಣೆ ಕೊಡ್ತಾ ಹೋದ ಹಾಗೆ ವಿಸ್ಪರಿಂಗ್ ಗ್ಯಾಲರಿಯ ಡೆಮೋ ತೋರಿಸಿದ. ನಾವು ಅವನು ಗೊಡೆಗೆ  ಹೇಳಿದ್ದನ್ನು ಇನ್ನೊಂದು ಗೊಡೆಗೆ ಕಿವಿಗೊಟ್ಟು ಹೇಳಿದೆವು. ನನಗೆ ಆಗ ತಕ್ಷಣ ನೆನಪಾದದ್ದು ನಮ್ಮ ಊರಿನ ಕೆರು ಮನೆಗಳಲ್ಲಿ(ಸಾಲು ಮನೆ) ಕೆಲವು ಹೆಂಗಸರು ಗೊಡೆಗೆ ಕಿವಿಗೊಟ್ಟು ಪಕ್ಕದ ಮನೆಯ ಸುದ್ದಿ ಕೇಳುವುದು. ನನಗೆ ಇಲ್ಲಿ ತುಂಬಾ ಇಷ್ಟವಾದದ್ದು ಏಳು ಸಲ ಎಕೋ ಕೇಳುವುದು. ಎಲ್ಲರು ತಮಗೆ ಇಷ್ಟವಾದ ಹೆಸರನ್ನು ಕೂಗಿದ್ದೆ ಕೂಗಿದ್ದು.ಗೈಡ್ ಒಂದು ಸಲ ಚಪ್ಪಾಳೆ ಹಾಕಿ ಸೈಲೆಂಟ್ ಆಗಿರಿ ಎಂದು ಬಿಟ್ಟಿ ಸಲಹೆ ಕೊಟ್ಟ. ಆದರೆ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಯಾರಿಗೂ ಇರಲಿಲ್ಲ. ಎಲ್ಲರು ತಮ್ಮ ಸಕಲ ಭಂದು ಭಾಂದವರ ಹಾಗು ತಮಗೆ ಇಷ್ಟವಾದ ಹೆಸರನ್ನು ಕೂಗಿದ್ದೆ ಕೂಗಿದ್ದು. ಗುಮ್ಮಜ್ ನ ಮೇಲೆ ಹೋಗಿ ಸುತ್ತಲು ನೋಡಿದರೆ ಬಿಜಾಪುರ ಪಟ್ಟಣ ನೋಡಬಹುದು. ಅಲ್ಲದೆ ತುಂಬಾ ಗುಮ್ಮಜ್ ಗಳನ್ನು ನೋಡಬಹುದು. ಇದಕ್ಕೆ ಬಿಜಾಪುರವನ್ನು ಗುಮ್ಮಜ್ ನಗರವೆಂದು ಕರೆಯುವುದು. ಗುಮ್ಮಜ್ ನ ಮೇಲಿಂದ ನೋಡಿದರೆ ಸುತ್ತಲಿನ ಉದ್ಯಾನವನ ತುಂಬಾ ಸೊಗಸಾಗಿ ಕಾಣುವುದು. ಅಲ್ಲದೆ ಸ್ವಚ್ಚವಾಗಿ ಇಡಲಾಗಿದೆ. ನಾವು ಹೀಗೆ ಬಿಜಾಪುರದ ಹಲವು ಪ್ರೇಕ್ಷಣಿಯ ಸ್ಠಳಗಳನ್ನು ನೋಡಿದೆವು.  ಜಮೀಯಾ ಮಸಿದಿ, ಇಬ್ರಾಹಿಮ್ಫ್ ರೊಸಾ,ಬಾರಹಾ ಕಮಾನ್, ಹೀಗೆ ಬಿಜಾಪುರ ಸುತ್ತಾಡಿ ಕೂಡಲ ಸಂಗಮಕ್ಕೆ ಹೋದೆವು.
ಕೂಡಲ ಸಂಗಮ ಸುಮಾರು ಎರಡು ಗಂಟೆಯ ಪ್ರಯಾಣ, ಅಲ್ಲಿ ಬಸವಣ್ಣನವರ ಸಮಾದಿಗೆ ಹೋದೆವು. ನನ್ನ ಮಗಳಿಗೆ ಬೆಳಿಗ್ಗೆ ಇಂದ  ಒಂದೇ ಪ್ರಶ್ನೆ ನಾವು ಇವತ್ತು ಯಾಕೆ ಸತ್ತವರ ಜಾಗಕ್ಕೆ ಹೋಗ್ತಾ ಇದ್ದೀವಿ ಅಂತ. ಏನು ಉತ್ತರ ಕೊಡಲು ತೋಚದೆ ಇದ್ದಾಗ ನನ್ನ ಪ್ರೇನ್ಡ್ ಶಿಲ್ಪಾ ತ್ರಿವೇಣಿ ಸಂಗಮ ಬೋಟಿಂಗ ಕಡೆ ಕೈ ಮಾಡಿದಳು. ಇಲ್ಲಿ ಕ್ರಷ್ಣಾ ಮತ್ತು ಮಲಪ್ರಭಾ ನದಿಗಳು ಸೇರುತ್ತವೆ. ನದಿಯ ಹಿಂದಿನ ಭಾಗದಲ್ಲಿ ಬೋಟಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ತುಂಬಾ ಸೊಗಸಾದ ಜಾಗ. ಒಂದು ರೌಂಡ್ ಹೋಗಿ ಬಂದೆವು. ಮಗಳಿಗೆ ಖುಶಿಯೋ ಖುಶಿ. ಬೋಟಿಂಗ್ ಮುಗಿಸಿ ಬಸವಣ್ಣ ನವರ ಸಮಾದಿಗೆ ಹೋದೆವು. ಅಲ್ಲಿಂದ ಸುತ್ತಲು ನದಿ ಅಲ್ಲಿನ ಪರಿಸರ ನೋಡೋಕೆ ಚಂದ. ಅಲ್ಲಿಂದ ಕೂಡಲ ಸಂಗಮ ಅನುಭವ ಮಂಟಪ ನೋಡಿದೆವು. ಪ್ರಶಾಂತವಾದ ಸ್ಥಳ. ಅಲ್ಲಿ ಬಸವಣ್ಣನವರ ಜೀವನ ಚರಿತ್ರೆಯನ್ನು ನೋಡಬಹುದು.ಗೋಡೆಯ ಮೇಲೆ ಪ್ರತಿಯೊಂದರ ಪೋಟೋ ಇಡಲಾಗಿದೆ.  ಅಲ್ಲಿ ಆಚೆ ಹೆಂಗಸರಿಗೆ ಪ್ರೀಯವಾದ ಸೀರೆ ಅಂಗಡಿ ಕಣ್ಣಿಗೆ ಬಿತ್ತು. ನಾವು ಮತ್ತು ನಮ್ಮ ಗುಂಪಿನವರು ಈ ಪ್ರವಾಸದ ನೆನಪಿಗಾಗಿ ಇಲ್ಲಿನ ಪ್ರಸಿದ್ದ ಇಳಕಲ್ಲು ಸೀರೆ ಖರೀದಿ ಮಾಡಿದೆವು.
ಹೀಗೆ ನಮ್ಮ ಮೂರು ದಿನದ ಪ್ರವಾಸ ಮುಗಿಸಿ ರಾತ್ರಿ ಬೆಂಗಳೂರಿನ ಅದೇ ರುಟೀನ್ ಜೀವನಕ್ಕೆ ಮರಳಿದೆವು.ಉತ್ತರ ಕರ್ನಾಟಕದಲ್ಲಿ ನೋಡುವಂತಹ ಪ್ರೇಕ್ಷಣಿಯ ಸ್ಥಳಗಳು ಬೇಕಾದಷ್ಟು ಇವೆ. ಈ ಮೂರು ದಿನಗಳಲ್ಲಿ ನಾವು ನೋಡಿದ ಪ್ರತಿಯೊಂದು ಸ್ಥಳಗಳು ನಮಗೆ ಖುಷಿ ಕೊಟ್ಟಿದೆ. ಕೆಲವೊಂದು ಕಡೆ ಇನ್ನು ಅಭಿವ್ರದ್ದಿ ಹೊಂದಲಿ ಅನ್ನೋ ಭಾವನೆ ಬಂದಿದೆ. ಕೆಲವೊಂದನ್ನು ಜೋಪಾನ ಮಾಡಲು ಶ್ರಮ ವಹಿಸಿರುವದನ್ನು ನೋಡಿ ಖುಷಿ ಆಗಿದೆ.ಅದು ಅಲ್ಲದೆ ನಮ್ಮಂತಹ ಪ್ರವಾಸಿಗರ ಮೇಲು ಈ ಹೊಣೆ ಇದೆ. ಇದು ನಮ್ಮ ಮುಂದಿನ ಪೀಳಿಗೆಯವರು ನೋಡಲಿ ಅನ್ನೋ ಆಸೆ. ಈ ಪ್ರವಾಸದಲ್ಲಿ ಬಿಸಿಲು ನಾಡಿನ ತಾಪ ಅಷ್ಟಾಗಿ ಕಾಣದಿದ್ದರು ಸ್ವಲ್ಪ ಆಯಾಸ ಆಗಿದೆ. ಈ ಆಯಾಸ ನೀಗಿದ್ದು ಇಲ್ಲಿನ ತಂಪು ಮಡಿಕೆ ಮೊಸರು ಹಾಗು ನನ್ನ ಪ್ರೀತಿಯ ಜೋಳದ ರೊಟ್ಟಿ ಎಣ್ಗಾಯಿ. ಹಿತವಾದ ಊಟ…ಸೊಗಸಾದ ಪ್ರೇಕ್ಷಣಿಯ ಸ್ಥಳಗಳು.


No comments: