Tuesday, December 11, 2018

ಹಸಿವು ಕಲಿಸಿದ ಪಾಠ


                                         ಹಸಿವು ಕಲಿಸಿದ ಪಾಠ

ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ಸುಶ್ರುತನೆಂಬ ಒಬ್ಬ ರಾಜಕುಮಾರನಿದ್ದ. ಅವನನ್ನು ಮೊದಲಿನಿಂದಲು ಸ್ವಲ್ಪ ಕಾಳಜಿಯಿಂದ ಬೆಳೆಸಿದ ಕಾರಣವೊ ಏನೋ ಯಾವಾಗಲು ಅತಿಯಾದ ಸ್ವಚ್ಚತೆ ಮತ್ತು ತನ್ನ ಮೇಲೆ ಅತಿಯಾದ ಕಾಳಜಿ. ತನಗೆ ಏನಾದರು ಒಂದು ರೋಗ ಅಂಟಿದರೆ ಅಥವಾ ತನಗೆ ಏನಾದರು ಆದರೆ ಎಂಬ ಯೋಚನೆಯಲ್ಲಿ ತನ್ನ ಪ್ರಪಂಚದಲ್ಲಿ ತಾನು ಇರುತ್ತಿದ್ದ. ವಯಸ್ಸಾದ ರಾಜನಿಗೆ ವಯಸ್ಸಿಗೆ ಬಂದ ರಾಜಕುಮಾರ ತನ್ನ ಜಾಗ ತುಂಬಿ ಪ್ರಜೆಗಳ ಯೋಗ ಕ್ಷೇಮ ವಿಚಾರಿಸಲಿ ಎಂದು ರಾಜ್ಯ ಪರ್ಯಟನೆಗೆ ಆಗಾಗ ಕಳಿಸುವ ಯೋಚನೆ ಮಾಡಿದ. ಹಾಗೆ ಒಂದೆರಡು ಸಲ ಅಂಗರಕ್ಷಕರ ಜೊತೆ ಕಳುಹಿಸಿದ. ಆದರೆ ಪ್ರಜೆಗಳ ಯೋಗ ಕ್ಷೇಮ ವಿಚಾರಿಸುವ ಬದಲು ರಾಜಕುಮಾರನ  ಯೋಗ ಕ್ಷೇಮ ನೋಡುವುದೆ ದೊಡ್ಡ ಸಾಹಸವಾಯಿತು. ರಾಜಕುಮಾರ ಹೊರಟನೆಂದರೆ ಆತನ ಜೊತೆ ಒಬ್ಬ ರಾಜಕುಮಾರನಿಗೆ ಬೇಕಾದ ಆಹಾರ, ನೀರು ಎಲ್ಲವನ್ನು ಮನೆಯಿಂದ ಕಟ್ಟಿಕೊಂಡು ಹೋಗಬೇಕಾಗಿತ್ತು. ಅಪ್ಪಿ-ತಪ್ಪಿಯು ದಾರಿಯಲ್ಲಿ ಸಿಗುವ ಹೊಳೆಯ ನೀರು ಅಥವಾ ಯಾವುದೆ ಅರಣ್ಯದಲ್ಲಿ ಸಿಗುವ ಹಣ್ಣು-ಹಂಪಲನ್ನು ತಿನ್ನುವವನಲ್ಲ. ಅತಿಯಾದರೆ ಅಮ್ರತವು ವಿಷವಾದಂತೆ ರಾಜಕುಮಾರನ ವರ್ತನೆ ದಿನಕ್ಕು ದಿನಕ್ಕು ಮಿತಿ ಮೀರಿತು.ಇದು ರಾಜನಿಗೆ ದೊಡ್ಡ ಸಮಸ್ಯೆ ಆಯಿತು. ಹೀಗೆ ಆದರೆ ರಾಜ್ಯದ ಗತಿ ಏನು?  ರಾಜ್ಯ ಪರ್ಯಟನೆ ಮಾಡಿ ರಾಜ್ಯ ನೋಡಿಕೊಳ್ಳುವುದು ಹೇಗೆಂದು ತನ್ನ ದುಖಃವನ್ನು ಮಂತ್ರಿಯ ಬಳಿ ತೊಡಿಕೊಂಡನು. ಮಂತ್ರಿಯು ಇದನ್ನು ಗಂಭಿರವಾಗಿ ಯೋಚಿಸಿ ಒಂದು ಉಪಾಯ ಕಂಡು ಹಿಡಿದನು.
ಒಮ್ಮೆ ರಾಜಕುಮಾರ ರಾಜ್ಯ ಪರ್ಯಟನೆಗೆ ಎಂದು ಹೋದಾಗ  ಯಥಾ ಪ್ರಕಾರ ಅವನ ಜೊತೆ ಒಬ್ಬ ಅಂಗರಕ್ಷಕ ರಾಜ ಕುಮಾರನಿಗೆ ಬೇಕಾಗುವ ನೀರು ಮತ್ತು ಆಹಾರಗಳನ್ನು ತೆಗೆದುಕೊಂಡು ಹೊರಟನು. ರಾಜಕುಮಾರನು ಮತ್ತು ಅವನ ಆಪ್ತ ಅಂಗರಕ್ಷಕ ಸ್ವಲ್ಪ ಮುಂದೆ ಹೋದರು. ಹಿಂದೆ ಆಹಾರ ತೆಗೆದುಕೊಂಡು ಹೋದ ಅಂಗರಕ್ಷಕ ಸ್ವಲ್ಪ ಹಿಂದೆ ಉಳಿದು ರಾಜಕುಮಾರನಿಂದ ಮರೆಯಾದನು. ಊಟದ ಸಮಯ ಬಂದಾಗ ರಾಜಕುಮಾರ ಮತ್ತು ಅವನ ಆಪ್ತ ಅಂಗರಕ್ಷಕ ಅಲ್ಲೆ ಒಂದು ಜಾಗವನ್ನು ನೋಡಿ ಕುಳಿತರು. ಆಹಾರ ತರುವವನು ಎಷ್ಟು ಸಮಯವಾದರು ಬರಲಿಲ್ಲ. ಇತ್ತ ರಾಜಕುಮಾರನಿಗೆ ಹಸಿವು ಮತ್ತು ಬಾಯಾರಿಕೆ ತಡೆಯಲಾಗಲಿಲ್ಲ. ಆತ ಬರುವ ಸೂಚನೆಯು ಕಾಣಲಿಲ್ಲ.  ಮೊದಲೆ ಮಂತ್ರಿ ಸೂಚಿಸಿದ ಹಾಗೆ ಆಪ್ತ ಅಂಗರಕ್ಷಕ ರಾಜಕುಮಾರನನ್ನು ಅಲ್ಲೆ ಹತ್ತಿರ ಇರುವ ಒಂದು ಪುಟ್ಟ ಹಳ್ಳಿಯ ಕಡೆ ಕರೆದುಕೊಂಡು ಹೋದನು. ಊಟದ ಸಮಯ ಆಗಿದ್ದರಿಂದ ಹಳ್ಳಿಯ ಜನರು ಇವರನ್ನು ಆದರದಿಂದ ಬರ ಮಾಡಿಕೊಂಡರು. ರಾಜಕುಮಾರನಿಗಾದ ಹಸಿವು ಊಟ ಬೇಡ ಎನ್ನಲಾಗಲಿಲ್ಲ.  ತಮಗಾಗಿ ತಯಾರಿಸಿದ ಊಟವನ್ನು ಇವರಿಗೂ ಬಡಿಸಿದರು. ಹಸಿದವನು ಬಲ್ಲ ಅನ್ನದ ರುಚಿ ಅನ್ನೋ ಹಾಗೆ ಹೊಟ್ಟೆ ತುಂಬಾ ರಾಜಕುಮಾರ ಊಟ ಮಾಡಿದನು. ಅಲ್ಲೆ ವಿಶ್ರಾಂತಿಗೆಂದು ಸ್ವಲ್ಪ ಹೊತ್ತು ತಲೆ ಊರಿದನು. ಕಣ್ಣು ತುಂಬಾ ನಿದ್ದೆ ಬಂತು. ನಂತರ  ಆ ಹಳ್ಳಿಯಲ್ಲಿ ಇರುವ ಜನರ ಜೀವನ ನೋಡಿದನು. ಕೆಲಸ ಮಾಡುವ ಶ್ರಮ ಜೀವಿಗಳು. ಆರೋಗ್ಯವಾಗಿ ಇದ್ದಾರೆ.  ಅಲ್ಲಿಯ ವಾತವರಣ ಸೂಕ್ಷ್ಮವಾಗಿ ನೋಡುತ್ತ ಬಂದನು.  ಅಲ್ಲಿ ಇದ್ದು ಅವರ ಕಷ್ಟ-ಸುಖ ವಿಚಾರಿಸಿ ಅವರ ಜೊತೆ ಕುಳಿತು ಅವರಂತೆ ಇದ್ದನು. ಅಲ್ಲಿ ಕೊಳದಲ್ಲಿ ಇದ್ದ ನೀರನ್ನು ಕುಡಿದನು. ಅರಣ್ಯದಲ್ಲಿ ಸಿಗುವ ಹಣ್ಣನ್ನು ತಿಂದನು.  ರಾಜಕುಮಾರನಲ್ಲಿ ಏನೋ ಬದಲಾವಣೆ ಕಾಣಿಸಿತು. ರಾಜಕುಮಾರ ತನ್ನ ತಲೆಯಲ್ಲಿ ಇದ್ದ ಅತಿಯಾದ ತನ್ನ ಮೇಲಿನ ಕಾಳಜಿ ಮತ್ತು ಸ್ವಚ್ಚತೆಯನ್ನು ಹೊರಹಾಕಿದನು. ಇದನ್ನು ಗಮನಿಸಿದ ರಾಜಕುಮಾರನ ಆಪ್ತ ಅಂಗರಕ್ಷಕ ಮಂತ್ರಿಯ ಉಪಾಯ ನೋಡಿ ಮೆಚ್ಚಿದನು.



No comments: