Tuesday, November 27, 2018

ಕಳ್ಳತನದಲ್ಲು ಬದಲಾವಣೆ


                                      ಕಳ್ಳತನದಲ್ಲು   ಬದಲಾವಣೆ

ನಮ್ಮೂರು ಪೇಟೆಗೆ ಸಮೀಪ ಇರೋದ್ರಿಂದ ಕೆಲವೊಂದು ವಿಷಯದಲ್ಲಿ ಅನುಕೂಲ ಆದ್ರು ಕೆಲವೊಂದು ತುಂಬಾ ತಲೆ ನೋವಿನ ಸಂಗತಿಯಾಗಿತ್ತು.
ನಮಗೆ ದೊಡ್ಡ ಸಮಸ್ಯೆ ಅಂದರೆ ಅಡಿಕೆ ಕೊನೆ ಕಾಯ್ದುಕೊಳ್ಳುವುದು. ವರ್ಷವೆಲ್ಲಾ ಕೆಲಸ ಮಾಡಿ ಕಾಯ್ದುಕೊಂಡ ಫಸಲು ಇನ್ನೇನು ಕೈಗೆ ಬರತ್ತೆ ಅನ್ನೋ ಸಮಯಕ್ಕೆ ಕಳ್ಳತನ ಆಗುವುದು. ಸುಮಾರು ಇಪ್ಪತೈದು ವರ್ಷಕ್ಕೆ ಹೊಲಿಸಿದರೆ  ಈಗ ಅಡಿಕೆ ಕಳ್ಳತನ ಸ್ವಲ್ಪ ಕಡಿಮೆ ಆಗಿದೆ ಅಂತ ಅಪ್ಪ ಯಾವಗ್ಲು ಹೇಳ್ತಾ ಇರ್ತಾರೆ. ಬಹುಶ ಕಳ್ಳತನ ಮಾಡುವವರು ಆಳಸಿ ಆಗಿರ ಬೇಕು. ಮರ ಹತ್ತಿ ಅಡಿಕೆ ಕೊನೆ ಕೊಯ್ದು ಮಾರಾಟ ಮಾಡುವ ಬದಲು ಇನ್ನೇನಾದ್ರು  ಸುಲಭವಾಗಿ ಸಿಗೊದನ್ನ ಕಳ್ಳತನ ಮಾಡೋದು ಲೇಸು ಅಂತ ಭಾವಿಸಿರ ಬೇಕು.
ಅಪ್ಪನ ಪ್ರತಿ ದಿನದ ರೂಡಿ ಬೆಳಿಗ್ಗೆ ತೋಟಕ್ಕೆ ಹೋಗಿ ಬರುವುದು. ಅದು ಅಡಿಕೆ ಪೀಕ ಬಂದಾಗ  ಒಂದು ದಿನವು ಬಿಡದೆ ಬೆಳಿಗ್ಗೆ ಒಮ್ಮೊಮ್ಮೆ ಸಾಯಂಕಾಲ ತೋಟಕ್ಕೆ ಹೋಗ್ತಾ ಇದ್ರು. ಮೊದ್ಲೆ ಹೇಳಿದ ಹಾಗೆ ನಾವ್ ಚಿಕ್ಕವರು ಇದ್ದಾಗ ಅಡಿಕೆ ಕೊನೆ ಕಳ್ಳತನ ತುಂಬಾ ಆಗ್ತಾ ಇತ್ತು. ಸಲೀಸಾಗಿ ಪೇಟೆಗೆ ದಾಟಿಸಲು ಅನೂಕೂಲ ಆಗುವುದರಿಂದ ನಮ್ಮ ಮನೆ ತೋಟದ ಮೇಲೆ ಸ್ವಲ್ಪ ಕಳ್ಳರ ಒಲವಿತ್ತು. ಸುಮಾರು ವಾರಕ್ಕೆ ಎರಡು ದಿನವಂತು ಖಾಯಃ ಆಗಿ ಅಪ್ಪ ತೋಟದಿಂದ ಬರುವಾಗ ಹೇಳ್ತಾ ಇದ್ರು, “ಇವತ್ತು ಎಂಟು ಬಣ್ಣದಲ್ಲಿ (ತೋಟದ ಒಂದು ಭಾಗದ ಹೆಸರು) ಸುಮಾರು ಎಂಟ್ ರಿಂದ ಹತ್ತು ಮರದ  ಕೊನೆ ಹೋಯಿಯು” ಅಂತ ಹೇಳುವರು.  ಈ ಮಾತನ್ನು  ಹೇಳಿದಾಗ ನನಗೆ ಯಾಕೋ  ಮನಸ್ಸಿಗೆ  ತುಂಬಾ ಬೇಸರ ಆಗ್ತಾ ಇತ್ತು. ಹುಡುಗಾಟಿಕೆಯ ವಯಸ್ಸು ಆ ನಿಟ್ಟಿನಲ್ಲೆ ನನ್ನ ಯೋಚನೆ. ನಾವು ಯಾಕಾದ್ರು ಇಲ್ಲಿ ಇದ್ದಿವೋ, ದೊಡ್ಡಪ್ಪಂದಿರ ತರನೆ ದೂರ ಹಳ್ಳಿಯಲ್ಲಿ ಇರಬೇಕಾಗಿತ್ತು. ಅದು ಅಲ್ದೆ ಕಳ್ಳತನ ನಮ್ಮನೆ ತೋಟಕ್ಕೆ ಯಾಕ್ ಆಗತ್ತೆ? ಹೀಗೆ ಹಲವು ಯೋಚನೆ ನನ್ನ ತಲೆಲಿ ಹಾದು ಹೋಗ್ತಾ ಇತ್ತು.  ಆದ್ರೆ ಅಪ್ಪ ಯಾವಾಗ್ಲು ಬೇಸರ ಮಾಡ್ಕೊಳ್ತಾ ಇರ್ಲಿಲ್ಲ. ಯಾವಾಗ್ಲು ಹೇಳೋರು, “ ನಮ್ಗೆ ದಕ್ಕುವಷ್ಟು ದಕ್ಕತ್ತೆ. ನಮ್ಮ ಯೋಗ ಚನ್ನಾಗಿ ಇದ್ರೆ ಇನ್ನೇಲಿಂದನೋ ದೇವರು ಒಳ್ಳೆದು ಮಾಡ್ತಾನೆ” ಅಂತ ಸ್ವಲ್ಪ ದೇವರ ಮೇಲೆ ಭಾರ ಹಾಕೋದು ಜಾಸ್ತಿ.
ಎಷ್ಟೇ ದೇವರ ಮೇಲ್ ಭಾರ ಹಾಕಿದ್ರು ಅಡಿಕೆ ಕೊಯ್ಲಿನಲ್ಲಿ ತೋಟ ಕಾಯೊ ವ್ಯವಸ್ಥೆ ಮಾಡ್ಬೇಕಾಗಿತ್ತು. ಅದಿಕ್ಕಾಗೆ ಒಂದು ಆಳನ್ನಾ ನೇಮಿಸಿಡಲಾಗಿತ್ತು. ಆದ್ರು ಕಳ್ಳತನ ಕಮ್ಮಿ ಆಗಿಲ್ಲ. ಆಳು ಮಾಡಿದ್ದು ಹಾಳು ಅನ್ನೋ ಹಾಗೆ  ಒಂದು ದಿನ ಅಪ್ಪನಿಗೆ ಉಮೇದಿ ಬಂದು ತಾನು ಕುದ್ದಾಗಿ  ತೋಟ ಕಾಯಲು ಗಪ್ಪತಣ್ಣ ನನ್ನು ಕರೆದುಕೊಂಡು ಹೋಗುವ ಉಮೇಧಿ ಮಾಡಿದರು. ಇದಕ್ಕಾಗಿ ನಮ್ಮನೆಲಿ  ಒಂದು ಮಿಟಿಂಗ್ ಮಾಡಲಾಯಿತು. ಜಾಗ ಸಮಯ ವನ್ನೆಲ್ಲಾ ಅಪ್ಪ ಮತ್ತು ಗಪ್ಪತಣ್ಣ ಕುಳಿತು ಮಿಟಿಂಗ್ ನಲ್ಲಿ ಚರ್ಚೆ ಮಾಡಲಾಯಿತು. ಅದಕ್ಕಣುಗುಣವಾಗಿ ದಿನ ಗೊತ್ತು ಮಾಡಲಾಯಿತು. ಅಂತು ಅಪ್ಪ ಮತ್ತು ಗಪ್ಪತಣ್ಣನ ಸವಾರಿ ತೋಟ ಕಾಯಲು ಹೊರಟರು. ನಮ್ಮೂರಲ್ಲಿ ಸುಮಾರಾಗಿ ಎಲ್ಲರ ಮನೆಲು ಬಂದೂಕು ಇದ್ದೆ ಇರುತಿತ್ತು. ಅದ್ರಲಂತು ತೋಟ ಕಾಯಲು ಹೋಗುವಾಗ ಬಂದೂಕನ್ನು  ತಗೊಂಡು ಹೋಗೆ ಹೋಗ್ತಾ ಇದ್ರು. ಹಾಗೆ ಅಪ್ಪ ಮತ್ತು ಗಪ್ಪತಣ್ಣ ಬಂದೂಕು ಹಿಡಿದು ಚಳಿಗೆ ಸರಿಯಾಗಿ ತಮ್ಮನ್ನು ತಾವು ಪ್ಯಾಕ್ ಮಾಡಿಕೊಂಡು ಹೊರಟರು. ಸುಮಾರು ಬೆಳಗಿನ ಜಾವತನಕ ಅಲ್ಲೆ ಇರೋ ಪ್ಲಾನ್ ಇರೊದ್ರಿಂದ ಕಂಬಳಿನು ತಗೋಂಡು ಹೋದ್ರು. ತೋಟಕ್ಕೆ ಹೋದ್ ಮೇಲೆ ಒಂದು ಸುತ್ತು ತೋಟ ಓಡಾಡಿದರು. ಸ್ವಲ್ಪ ವಿಶ್ರಾಂತಿಗೆಂದು ಸ್ವಲ್ಪ ಹೊತ್ತು ಕಂಬಳಿ ಮೇಲೆ ತಲೆ ಊರಿದರಂತೆ.ಚನ್ನಾಗಿ ನಿದ್ದೆ ಹತ್ತಿತು. ಇತ್ತ ಯಥಾ ಪ್ರಕಾರ ಕಳ್ಳರು ತಂಮ್ಮ ಕೈ ಚಳಕ ತೋರಿಸಿಯೇ ಬಿಟ್ಟರು. ಇವರು ಮಲಗಿದ ಸ್ವಲ್ಪ ದೂರದ ಮರದಿಂದ ಕೊನೆ ಕಿತ್ತು ತೋಟದಿಂದ ಓಡಿ ಹೋಗಬೇಕಾದ್ರೆ ಒಂದು  ಕಳ್ಳ ಅಪ್ಪನ ಕಾಲನ್ನು ತುಳಿದೆ ಬಿಟ್ಟ. ಅಪ್ಪನಿಗೆ ಸಡನ್ನಾಗಿ ಎಚ್ಚರವಾಯಿತು. ಹಾಗೆ ಪಕ್ಕದಲ್ಲಿದ್ದ ಬಂದೂಕ್ ತೆಗೆದು ಗುಂಡು ಹಾರಿಸಿದರು.  ಕಾರ್ಡ್ತೂಸ್  ಕಳ್ಳನ ಕಾಲಿಗೆ ತಾಗಿತೆಂದು ಅಪ್ಪನ ಅನುಮಾನ. ಆತ ಚೀರಿದ್ದು ಮತ್ತು ಗಪ್ಪತಣ್ಣನ ಅರ್ಧ ನಿದ್ದೆಗಣ್ಣಿನಲ್ಲಿ ನೋಡಿದ್ದೆ  ಸಾಕ್ಷಿ. ಇನ್ನು  ಮಿಕ್ಕ ಇನ್ನಿಬ್ಬರು ಕದ್ದ ಅಡಿಕೆ ಕೊನೆಯನ್ನು ಅಲ್ಲೆ ಬಿಟ್ಟು ಭಟ್ರಾ ಬಿದ್ದು ಓಡಿದರಂತೆ. ಮಂಗನ ಟೋಪಿ ಮತ್ತು ಕತ್ತಲು ಅವರ ಮುಖ ಮರೆಮಾಚಿತ್ತು. ಅಲ್ಲಿ ಅವರು ಬಿಟ್ಟು ಹೋದ ಅಡಿಕೆ ಕೊನೆ ಮನೆಗೆ ತಂದು ಅಪ್ಪ ಮತ್ತು ಗಪ್ಪತಣ್ಣ  ಈ ಕಥೆ ಹೇಳಿದರು. ಆಗ ದೊಡ್ಡಪ್ಪ ಮತ್ತು ಇನ್ನಿತರರು  ಯಾರೋ ನಮ್ಮ ಮನೆ ತೋಟ ಗೊತ್ತಿರುವವರೆ ಈ ಕೆಲಸ ಮಾಡಿದ್ದು ಅಂತ ಅಭಿಪ್ರಾಯ ಪಟ್ಟರು.  ಅಪ್ಪ ಹೌದು ಪರಿಚಯದವರೆ ಮಾಡಿದ್ದು. ಯಾವ ಮರದಲ್ಲಿ ಒಳ್ಳೆ ಪೀಕ ಇದೆ ಮತ್ತು ಓಡಿ ಹೋಗುವ ದಾರಿ ಎಲ್ಲಾ ಗೊತ್ತಿರುವವರೆ. ಇದು ಹೊರಗಿನವರ ಕೆಲಸವಲ್ಲ. ನಮ್ಮೂರಿನವರೆ ಅಥವಾ ನಮ್ಮೂರಿಗೆ ಬರೋ ಕೆಲಸದವರೆ ಆಗಿರ ಬೇಕು. ನಿದ್ದೆ ಗಣ್ಣಿನಲ್ಲಿ ಯಾರು ಅಂತ ನಮಗೆ ತಿಳಿದಿಲ್ಲ ಅಷ್ಟೇ. ಆಗ ನನ್ನ ತಲೆಲಿ ಒಂದು ಹುಳ ಕೊರಿಯೋಕ್ ಶುರು ಆಯ್ತು. ಅಪ್ಪ ಹೊಡೆದ ಗುಂಡು ಕಾಲಿಗೆ ಬಿದ್ದರೆ, ಗಾಯದ ಮಾರ್ಕ್ ಇದ್ದೆ ಇರತ್ತೆ ಅಲ್ದೆ ಬ್ಯಾಂಡೆಜ್ ಕಟ್ಟಿರ್ತಾರೆ. ಅದ್ರನ್ನ ನೋಡಿ ಕಂಡು ಹಿಡಿಯಬಹಿದು ಅಂತ ಭಾವಿಸಿ ಸುಮಾರು ದಿನ ಮನೆ ತೋಟದ ಹತ್ತಿರ ಸುಳಿದಾಡುವರ ಕಾಲು ನೋಡ್ತಾ ಇದ್ದೆ. ಏನಾದ್ರು ಬ್ಯಾಂಡೆಜ್ ಕಟ್ಟಿದ್ರೆ ಕಳ್ಳನ ಹಿಡಿಯುವುದರಲ್ಲಿ ನನ್ನದು ಒಂದು ಅಳಿಲು ಸೇವೆ ಆಗಲಿ ಎಂದು.






No comments: