Sunday, July 29, 2018

ಆರೋಗ್ಯದಾಯಕ ಕೆಸುವಿನ ಗಡ್ಡೆ.


ಆರೋಗ್ಯದಾಯಕ ಕೆಸುವಿನ ಗಡ್ಡೆ.

ನಮ್ಮ ದಿನದ  ಆಹಾರದಲ್ಲಿ  ಕೆಸುವಿನ ಗಡ್ಡೆಯ ಉಪಯೋಗ ಕಮ್ಮಿನೆ. ಆದರೆ ವಿರಳವಾಗಿ ಬಳಸುವ ಈ ಗಡ್ಡೆಯಲ್ಲಿ ಅತ್ಯಧಿಕ ಫೈಬರ್ ಅಂಶ ಹೊಂದಿದೆ. ಇದು ಜೀರ್ಣ ಕ್ರೀಯೆಗೆ ಅನುಕೂಲವಗುತ್ತದೆ. ಇದಲ್ಲದೆ ಇದರಲ್ಲಿ ಕೊಬ್ಬಿನಂಶ ಇರದ ಕಾರಣ ಮದುಮೇಹ ಮತ್ತು ತೀವ್ರ ರಕ್ತದೊತ್ತಡ ಇರುವವರಿಗೂ ಇದು ಒಳ್ಳೆಯ ಆಹಾರ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುವ ಕಾರಣ  ದೇಹ ತೂಕ ಕಡಿಮೆ ಮಾಡುವವರಿಗೂ ವರದಾನವೆ. ದೇಹಕ್ಕೆ ಬೇಕಾಗುವ ಎಲ್ಲ ರೀತಿಯ ವಿಟಾಮಿನ್, ಫೈಬರ್, ಫಾಲಿಕ್ ಆಸಿಡ್,ಕಬ್ಬಿಣಂಶ…ಇರುವ ಈ ಕೆಸುವಿನ ಗಡ್ಡೆಯನ್ನು ವಾರಕ್ಕೆ ಒಮ್ಮೆಯಾದರು ಉಪಯೋಗಿಸಿದರೆ ಒಳ್ಳೆಯದು.

ಕೆಸುವಿನ ಗಡ್ಡೆ ಗೊಜ್ಜು;

ಬೇಕಾಗುವ ಸಾಮಗ್ರಿಃ
ಕೆಸುವಿನ ಗಡ್ಡೆ 5 ರಿಂದ 6,  ಬ್ಯಾಡಗಿ ಮೆಣಸು 7 ರಿಂದ 8, ಎಣ್ಣೆ, ಕುತ್ತುಂಬರಿ ಬೀಜ 2 ಚಮಚ, ಕಡ್ಲೆ ಬೇಳೆ 2 ಚಮಚ, ಮೆಂತೆ 1 ಚಮಚ, ಜೀರಿಗೆ 1 ಚಮಚ,  ಸಾಸಿವೆ ½ ಚಮಚ, ಅರಿಶಿಣ ½  ಚಮಚ, ಇಂಗು, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನ ತುರಿ ಕಾಲ್ ಕಪ್, ಹುಣಸೆ ಹಣ್ಣು ಸುಮಾರು ನಿಂಬೆ ಗಾತ್ರ,  ಬೆಲ್ಲ ರುಚಿಗೆ ತಕ್ಕಷ್ಟು, ನೀರು, ಕರಿಬೇವು.
ತಯಾರಿಸುವ ವಿಧಾನಃ
ಮೊದಲು ಕೆಸುವಿನ ಗಡ್ಡೆಯನ್ನು  ಚನ್ನಾಗಿ  ತೊಳೆದು ಕುಕ್ಕರಿನಲ್ಲಿ ಎರಡು ವಿಸಲ್ ಕೂಗಿಸಿ. ಬೆಂದ ಕೆಸುವಿನ ಗಡ್ಡೆಯ ಸಿಪ್ಪೆ ತೆಗೆದು (ಆಲು ಗಡ್ಡೆ ತರಹ) ಒಂದರಲ್ಲಿ ಎರಡು ಭಾಗ ಗಳಾಗಿ ಮಾಡಿ.
ಮಸಾಲೆಗೆಃ
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ನಂತರ  ಎಣ್ಣೆಗೆ ಕಡ್ಲೆಬೇಳೆ, ಉದ್ದಿನ ಬೇಳೆ,ಮೆಂತೆ,ಜೀರಿಗೆ, ಸಾಸಿವೆ, ಮೆಣಸಿನಕಾಯಿ,ಎಲ್ಲ ಒಂದೊಂದೆ ಹಾಕಿ ಫ್ರೈ ಮಾಡ್ತಾ ಬನ್ನಿ. ಸ್ವಲ್ಪ ಫ್ರೈ ಆದ ಮೇಲೆ ಕರಿಬೇವು ಇದರ ಜೊತೆ ಫ್ರೈ ಆಗಲಿ.ಹೊಂಬಣ್ಣ ಬರುವ ವರೆಗೆ ಪ್ರೈ ಆಗಲಿ.ಈಗ ಕುತ್ತುಂಬರಿ ಬೀಜ ಕಾಕಿ. ಇದು ಸ್ವಲ್ಪ ಫ್ರೈ ಆಗಲಿ. ಈಗ ಮಿಕ್ಸಿಗೆ ಕಾಯಿತುರಿ ಹಾಕಿ ಮೇಲೆ ಪ್ರೈ ಮಾಡಿದ ಮಸಾಲೆ ಮಿಕ್ಸ್ ಮಾಡಿ. ಇದಕ್ಕೆ ನೀರು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿ. ಈಗ ಮಸಾಲ ರೆಡಿ.
ಇನ್ನೊಂದು ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಇದಕ್ಕೆ ಬಿಡಿಸಿಟ್ಟ ಕೆಸುವಿನ ಗಡ್ಡೆ ಹಾಕಿ ಪ್ರೈ ಮಾಡಿ. ಪ್ರೈ ಮಾಡುವಾಗಲೆ ಅರಿಶಿಣ ಮತ್ತು ಹುಣಸೆಹಣ್ಣು ಹಾಕಿ. ಕೆಸುವಿನ ಗಡ್ಡೆಯ ಲೊಳೆ ಅಂಶ ಹೋಗುವ ವರೆಗೆ ಪ್ರೈ ಆಗಲಿ. ಪ್ರೈ ಆದ ಮೇಲೆ ರುಬ್ಬಿದ ಮಸಾಲೆ ಹಾಕಿ. ನೀರು ಹಾಕಿ. ಇದು ಸ್ವಲ್ಪ ಗಟ್ಟಿಯಾಗೆ ಇರಲಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಹಾಕಿ.  ಚನ್ನಾಗಿ ಕುದಿಸಿ. ಕುದಿಯುವಾಗ ತಳ ಸೀದದ ಹಾಗೆ ಕೈ ಆಡಿಸುತ್ತಿರಿ. ಬೇಕಿದ್ದರೆ ಕೊನೆಯಲ್ಲಿ ಸಾಸಿವೆ ಇಂಗಿನ ಒಗ್ಗರಣೆ ಕೊಡಬಹುದು. ಇದು ಅನ್ನದ ಜೊತೆ ಚನ್ನಾಗಿ ಇರತ್ತೆ.

ಕೆಸುವಿನ ಗಡ್ಡೆಯ ಖಾರದ ಕಡ್ಡಿ:

ಬೇಕಾಗುವ ಸಾಮಗ್ರಿಃ
ಕೆಸುವಿನ ಗಡ್ಡೆ 10, ಅಕ್ಕಿ ಹಿಟ್ಟು 1 ಕಪ್, ಜೀರಿಗೆ ಪುಡಿ 1 ದೊಡ್ಡ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಇಂಗು ಸ್ವಲ್ಪ,ಅಚ್ ಖಾರದ ಪುಡಿ (ಖಾರಕ್ಕೆ ಅನುಸಾರವಾಗಿ), ಎಣ್ಣೆ ಕರಿಯಲು.
ತಯಾರಿಸುವ ವಿಧಾನಃ
ಮೊದಲು ಕೆಸುವಿನ ಗಡ್ಡೆಯನ್ನು ಚನ್ನಾಗಿ ತೊಳೆದು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಬೆಂದ ಕೆಸುವಿನ ಗಡ್ಡೆಯನ್ನು ಸಿಪ್ಪೆ ತೆಗೆದು ಚನ್ನಾಗಿ ನುರಿದುಕೊಳ್ಳಿ.(ಆಲುಗಡ್ಡೆ ತರಹ) ಈಗ ಇದಕ್ಕೆ ಜೀರಿಗೆ ಪುಡಿ, ಇಂಗು, ಅಚ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಇವೆಲ್ಲಾ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಈಗ ಅಕ್ಕಿ ಹಿಟ್ಟು ಮಿಕ್ಸ್ ಮಾಡುತ್ತಾ ಚನ್ನಾಗಿ ಕಲಸಿ. ಕೆಸುವಿನ ಗಡ್ಡೆಯಲ್ಲಿ ನೀರಿನ ಅಂಶ ಇರುವುದರಿಂದ ಮೇಲಿಂದ ನೀರು ಹಾಕುವುದು ಬೇಡ. ಎಷ್ಟು ಅಕ್ಕಿ ಹಿಟ್ಟು ಹಿಡಿಯುತ್ತದೆಯೋ ಅಷ್ಟು ಹಾಕಿ ಕಲಸಿ. ಇದು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಈಗ ಚಕ್ಕಲಿ ಒರಳಿಗೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ಇದರ ಒಳಗೆ ತುಂಬಿ ಕಾದ ಎಣ್ಣೆಯಲ್ಲಿ ಕರಿಯಿರಿ. ಸ್ವಲ್ಪ ಸಣ್ಣ ಉರಿಯಲ್ಲಿ ಕರಿಯಿರಿ. ಹೊಂಬಣ್ಣ ಬಂದ ಮೇಲೆ ತೆಗೆಯಿರಿ.  ಇದು ಸುಮಾರು ಹದಿನೈದು ದಿನ ಇಡಬಹುದು. ಸಂಜೆ ಟೀ, ಕಾಫಿ ಜೊತೆ ಚನ್ನಾಗಿ ಇರತ್ತೆ.

ಕೆಸುವಿನ ಗಡ್ಡೆ ಡ್ರೈ ಪಲ್ಯಃ

ಬೇಕಾಗುವ ಸಾಮಗ್ರಿಃ
ಕೆಸುವಿನ ಗಡ್ಡೆ 10, ಅಚ್ ಖಾರದ ಪುಡಿ 2  ಚಮಚ, ಜೀರಿಗೆ ಪುಡಿ ಮತ್ತು ದನಿಯಾ ಪುಡಿ 1 ಚಮಚ, ಇಂಗು ಸ್ವಲ್ಪ, ಹಳದಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಹುಟ್ಟು 2 ದೊಡ್ಡ ಚಮಚ, ಹುಳಿ ಪುಡಿ(ಆಮ್ ಚೂರ್ ಪುಡಿ) ಮೊಸರು, ಎಣ್ಣೆ
ತಯಾರಿಸುವ ವಿಧಾನಃ
ಮೊದಲಿಗೆ ಕೆಸುವಿನ ಗಡ್ಡೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಇದನ್ನು ಸ್ವಲ್ಪ ಗಟ್ಟಿಯಾಗೆ ಬೇಯಿಸಿಕೊಳ್ಳಿ. ಬೆಂದ ಕೆಸುವಿನ ಗಡ್ಡೆಯ ಸಿಪ್ಪೆ ತೆಗೆದು ಗೋಲಾಕಾರ ಸ್ಲೈಸ್ ಮಾಡಿ.
ಇನ್ನೊಂದು ಪಾತ್ರೆಯಲ್ಲಿ ಅಚ್ ಖಾರದ ಪುಡಿ, ಜೀರಿಗೆ ಮತ್ತು ದನಿಯಾ ಪುಡಿ, ಇಂಗಿ. ಉಪ್ಪು,ಹಳದಿ,ಹುಳಿಪುಡಿ, ಅಕ್ಕಿ ಹಿಟ್ಟು, ಎಲ್ಲಾ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಸ್ವಲ್ಪ ಮೊಸರು ಹಾಕಿ. ಬೈಂಡಿಂಗ್ ಗೆ ಅನುಕೂಲವಾಗುವಷ್ಟು. ಈಗ ಕಟ್ ಮಾಡಿಟ್ಟ ಕೆಸುವಿನ ಗಡ್ಡೆಯನ್ನು ಈ ಮಿಕ್ಸ್ ನಲ್ಲಿ ಉರುಳಿಸಿ . ಈಗ ಒಂದು ತವಾದಲ್ಲಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಎರಡು ಕಡೆ ಎಣ್ಣೆ ಹಾಕುತ್ತಾ ಬೇಯಿಸಿ. ಇದು ಮೊಸರನ್ನದ ಜೊತೆ ಸೈಡ್ ಡಿಶ್ ಆಗಿ ಚನ್ನಾಗಿ ಇರತ್ತೆ. ಬೇಕಿದ್ದರೆ ಚಪಾತಿ ಜೊತೆನು ತಿನ್ನಬಹುದು.

ಕೆಸುವಿನ ಗಡ್ಡೆ ಬೊಂಡಾಃ     
                
ಕೆಸುವಿನ ಗಡ್ಡೆ 10, ಈರುಳ್ಳಿ 2, ಹಸಿಮೆಣಸು, ಕರಿಬೇವು, ಕುತ್ತುಂಬರಿ ಸೊಪ್ಪು, ಇಂಗು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಕಡಲೆ ಹಿಟ್ಟು ½  ಕಪ್,  ಅಕ್ಕಿ ಹಿಟ್ಟು ½ ಕಪ್,  ಓಂ ಸ್ವಲ್ಪ, ಜೀರಿಗೆ ಪುಡಿ, ಅಚ್ ಖಾರದ ಪುಡಿ, ಕರಿಯಲು ಎಣ್ಣೆ,
ತಯಾರಿಸುವ ವಿಧಾನಃ
ಮೊದಲು ಕೆಸುವಿನ ಗಡ್ಡೆಯನ್ನು ಬೇಯಿಸಿಕೊಳ್ಳಿ. ಬೆಂದ ಕೆಸುವಿನ ಗಡ್ಡೆಯ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಈರುಳ್ಳಿ, ಹಸಿಮೆಣಸು, ಕರಿಬೇವು, ಕುತ್ತುಂಬರಿ ಸೊಪ್ಪು ಎಲ್ಲವನ್ನು ಹೆಚ್ಚಿಟ್ಟುಕೊಳ್ಳಿ.
ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಇದಕ್ಕೆ ಉದ್ದಿನ ಬೇಳೆ, ಸಾಸಿವೆ ಹಾಕಿ. ಸಾಸಿವೆ ಚಟ ಚಟ ಅಂದ ಮೇಲೆ ಇಂಗು ಹಸಿಮೆಣಸು, ಕರಿಬೇವು, ಕುತ್ತುಂಬರಿ ಸೊಪ್ಪು, ಹಾಕಿ ಫ್ರೈ ಮಾಡಿ. ಈಗ ಉಪ್ಪು ಮತ್ತು ಹುಳಿಪುಡಿಯನ್ನು ಮಿಕ್ಸ್ ಮಾಡಿ ಚನ್ನಾಗಿ ಪ್ರೈ ಆಗಲಿ. ಸ್ವಲ್ಪ ಎಣ್ಣೆ ಜಾಸ್ತಿ ಹಾಕಿ ಫ್ರೈ ಮಾಡಿ. ಕೆಸುವಿನ ಗಡ್ಡೆಯ ಲೊಳೆ ಅಂಶ ಹೋಗಲಿ. ಸ್ವಲ್ಪ ಆರಿದ ಮೇಲೆ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಇಟ್ಟುಕೊಳ್ಳಿ.
ಇನ್ನೊಂದು ಪಾತ್ರೆಗೆ ಅಕ್ಕಿಹಿಟ್ಟು, ಕಡಲೆಹಿಟ್ಟು, ಓಂ, ಜೀರಿಗೆ ಪುಡಿ,ಉಪ್ಪು ರುಚಿಗೆ ತಕ್ಕಷ್ಟು, ಖಾರದ ಪುಡಿ ರುಚಿಗೆ ಅನುಸಾರ, ಎಲ್ಲ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಈಗ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ರೆಡಿ ಮಾಡಿ. ಇದನ್ನು ಅರ್ಧ ಗಂಟೆ ಬಿಡಿ. ನಂತರ ಮೇಲೆ ಮಾಡಿಟ್ಟ ಉಂಡೆಗಳನ್ನು ಈ ಹಿಟ್ಟಿನಲ್ಲಿ ಅದ್ದು ಕಾದ ಎಣ್ಣೆಯಲ್ಲಿ ಕರಿಯಿರಿ. ಇದು ಹೊಂಬಣ್ಣ ಬಂದ ಮೇಲೆ ತೆಗೆಯಿರಿ. ಇದು ಸಂಜೆಯ ಟೀ, ಕಾಫಿ ಜೊತೆ ಚನ್ನಾಗಿ  ಇರತ್ತೆ.

No comments: