Tuesday, July 10, 2018

ಮಾತಿಗ್ ಮಾತ್ ಹೊಡಿಯೋ ಮಲ್ಲಜ್ಜಿ...


ಮಾತಿಗ್ ಮಾತ್ ಹೊಡಿಯೋ ಮಲ್ಲಜ್ಜಿ.

ಸುಶೀಲಾ ಳಿಗೆ ಮದುವೆ ಆಗಿ ಆರು ಏಳು ತಿಂಗಳಿಗೆ ಯಾಕೋ ಅತ್ತೆ ಮಲ್ಲಜ್ಜಿಯ ಬಾಯಿಗೆ ಬೆಸತ್ತು ಹೋದಳು. ಮಲ್ಲಜ್ಜಿ ಯ ಸ್ವಭಾವ ಊರಿಗೆ ತಿಳಿದ ವಿಷಯ. ಆದ್ರೆ ಸುಶೀಲಾಳಿಗೆ ಅವ್ಳ ಸಹಿಸಿಕೊಳ್ಳೋದು  ಉಗುಳೊಕು ಆಗ್ದೆ ನುಂಗೊಕು ಆಗ್ದೆ ಇರೋ ಬಿಸಿ ತುಪ್ಪ. ಸುಶೀಲಾಳಿಗೆ ಗಂಡ ರಾಮುನಿಂದ ಯಾವ ತಲೆ ನೋವು ಇಲ್ಲ. ತನ್ನ ಹೈನುಗಾರಿಕೆಯಿಂದ ಹೇಗೊ ಮನೆ ನಡೆಸಿಕೊಂಡು ಹೋಗ್ಬಹುದಾಗಿತ್ತು. ಅದು ಅಲ್ದೆ ಮಿಕ್ಕ್ ಹಾಲಿನಿಂದ ಮೊಸರು ಹೆಪ್ಪು ಹಾಕಿ ಬೆಣ್ಣೆ ಮಾರ್ತಾ ಇದ್ರು.
 ಸುಶೀಲಾಳ ತಲೆ ನೋವು ಈ ಮಲ್ಲಜ್ಜಿಯ ಬೆಣ್ಣೆ ವ್ಯಾಪಾರ. ಮಲ್ಲಜ್ಜಿಯೇ ಸ್ವಂತ ಮೊಸರು ಕಡಿದು ತಾನೆ ಬೆಣ್ಣೆ ತೆಗೆದು ಬೆಣ್ಣೆ ಮಾರ್ತಾ ಇದ್ಲು. ತಾನು ಬೆಣ್ಣೆ ಕೊಡೊ ಖಾಯಂ ಮನೆಗೆ ಹೋಗಿ ಅವರ ಕಷ್ಟ ಸುಖ ಮತಾಡಿಕೊಂಡು ಬರ್ತಾ ಇದ್ಲು. ಇದು ಇಷ್ಟಕ್ಕೆ ಮುಗಿಯಲಿಲ್ಲ. ಮಲ್ಲಜ್ಜಿ ಬೇರೆ ಮನೆಯ ಕಷ್ಟ-ಸುಖ ವಿಚಾರಿಸುವುದರ ಜೊತೆ ತನ್ನ ಸೊಸೆಯ ಇಲ್ಲ ಸಲ್ಲದ ಗುಣಗಾನ ಮಾಡೋಕೆ ಶುರು ಮಾಡಿದ್ಲು. ಇದರ ಜೊತೆಗೆ ಬೆಣ್ಣೆ ಮಾರಿದ ಬಿಡಿ ಕಾಸು ಸುಶೀಲಾಳ ಕೈ ಗಾಗಲಿ ರಾಮುವಿನ ಕೈ ಗಾಗಲಿ ಸೇರ್ತಾ ಇಲ್ವಾಗಿತ್ತು.  ಒಮ್ಮೆ ಸುಶೀಲಾ ಅತ್ತೆ ಬಳಿ ಕೇಳಿದ್ಲು, “ ನಾನು ಮನೆ ಮನೆಗೆ ಹೋಗಿ ಬೆಣ್ಣೆ ಮಾರಿ ಬರ್ತೀನಿ. ನೀವು ಈ ವಯಸ್ಸಿನಲ್ಲಿ ಯಾಕೆ ಮನೆ ಮನೆ ಅಲಿತೀರ ಅಂತ”.  ಸೊಸೆ ಹೇಳಿದ ಈ ಮಾತಿಗೆ  ಕಾಗೆ ಬಾಯಲ್ಲಿ ಕೊಕ್ಕೆ ಹಾಕಿದ ಹಾಗೆ ಮಲ್ಲಜ್ಜಿ ಸೊಸೆಗೆ ಸಹಸ್ರ ನಾಮ ಶುರು ಮಾಡೆ ಬಿಟ್ಲು. “ನನಗೆ ವಯಸ್ಸಾಯಿತು ಅಂತ ಮೂಲೆಲಿ ಕುರಿಸಿ ನೀನು ಯಜಮಾನಿಕೆ ಮಾಡೊ ಹುನ್ನಾರಾ..ಇದೆಲ್ಲಾ ನನ್ನ ಹತ್ತಿರ ಬೇಡ ನನ್ನ ಕೈ ಕಾಲು ಗಟ್ಟಿ ಇರೋ ತನಕ ನಾನೇ ಮನೆ ಮನೆ ತಿರುಗಿ ಬೆಣ್ಣೆ ಮಾರುವವಳು “ ಅಂತ ಕಡ್ಡಿ ಮುರಿದ ಹಾಗೆ ಹೇಳಿದ್ದಳು. ಅದೇ ಕೊನೆ ಮಲ್ಲಜ್ಜಿಯ ಬಾಯಿಗೆ ಹೆದರಿ ಸುಶೀಲಾ ಅತ್ತೆಯ ಹತ್ತಿರ ಈ ವಿಚಾರ ಮಾತಾಡಿದ್ದೆ ಇಲ್ಲ.
ಒಮ್ಮೆ ಸುಶೀಲಾ ಜಾಣ್ಮೆಯಿಂದ ಗಂಡನ ಬಳಿ ತಾನು ಬೆಣ್ಣೆ ವ್ಯಾಪಾರಕ್ಕೆ ಹೋಗೊ ರಾಗ ಎಳೆದಳು. ತಾಯಿ ಗುಣ ತಿಳಿದಿರೋ ಮಗ ಅಷ್ಟೇ ಜಾಣ್ಮೆಯಿಂದ ತನಗೂ ಇದಿಕ್ಕು ಸಂಭಂದವೆ ಇಲ್ಲ ಅನ್ನೋ ರೀತಿ ನುಳುಚಿಕೊಂಡ. ಅತ್ತೆ ಸೊಸೆಯ ಮದ್ಯ ಬಂದರೆ ಆಗೋ ಅನಾಹುತ ಮೊದ್ಲೇ ಉಹಿಸಿದ್ದ. ಸುಶೀಲಾ ಯಾವ ದಾರಿನು ಕಾಣದೆ ಒಮ್ಮೆ ಮಾರಿ ಅಮ್ಮನ ಗುಡಿಯ ಒಳಗೆ ಸಪ್ಪಗೆ ಕುಳಿತಿದ್ದಳು. ಅದೇ ಸಮಯಕ್ಕೆ ಅದೇ ಊರಿನ ಗಂಗಜ್ಜಿ ಬಂದ್ಲು. ಸುಶೀಲಾಳ ಸಪ್ಪೆ ಮುಖ ನೋಡಿ ಅವಳ ಬಳಿ ಬಂದು ಪ್ರೀತಿಯಿಂದ…”ಯಾಕೆ ಸುಶೀಲಾ ಊಟದ್ ಸಮ್ಯ ಆಯ್ತು..ಮನೆಗೆ ಹೋಗ್ದೆ ಇಲ್ಲಿ ಯಾಕ್ ಕುತಿದೀಯಾ”  ಅಂತ ವಿಚಾರಿಸಿದ್ಲು. ಸುಶೀಲಾ ಗಂಗಜ್ಜಿಯ ಹತ್ತಿರ ಏನೋ ಹಾರಿಕೆ ಉತ್ತರ ಕೊಟ್ಲು. ಅತ್ತೆ ಗಂಗಜ್ಜಿ ಮನೆಗೆ ಬೆಣ್ಣೆ ಮಾರುವುದು ಸುಶೀಲಾಳಿಗೆ ತಿಳಿದ ವಿಚಾರವೇ. ಏನಾದ್ರು ಅತ್ತೆ ಕಿವಿಗೆ ಬಿದ್ದರೆ ತನ್ನ ಕಥೆ ಅಷ್ಟೇ ಅನ್ನೋ ಒಳ-ಒಳಗೆ ಭಯ ಇತ್ತು. ಆದ್ರು ಗಂಗಜ್ಜಿಗೂ ಮಲ್ಲಜ್ಜಿಯ ಸ್ವಭಾವ ತಿಳಿದ ಕಾರಣ ಸುಶೀಲಾಲ ಹತ್ತಿರ ನಯವಾಗಿ ಮಾತಾಡಿ ಇದ್ದ ವಿಷಯ ತಿಳಿದುಕೊಂಡಳು. ಗಂಗಜ್ಜಿ ಸುಶೀಲಾಳಿಗೆ ಸಮಾಧಾನ ಮಾಡ್ತಾ “ ನೋಡು ಸುಶೀಲಾ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯ ಬೇಕು. ಇದು ಹಾಗೆ. ಮಲ್ಲಜ್ಜಿ ನಮಗೆ ಮೊದ್ಲಿನಿಂದನು ಪರಿಚಯ. ಆಕೆಯ ಬಾಯಿಗೆ ಹೆದರಿ ಅವಳ ಗಂಡನು ಅವಳ ಹತ್ತಿರ ಯಜಮಾನಿಕೆ ಕೇಳಿದೋನಲ್ಲ. ಇನ್ನು ನಿನಗೆ ಬೆಣ್ಣೆ ವ್ಯಾಕಾರಕ್ಕೆ ಬಿಟ್ಟಾಳೆ. ಇದಕ್ಕೆ ನಾನು ಒಂದು ಉಪಾಯ ಮಾಡ್ತೀನಿ. ನೀನು ಇನ್ನು ಸ್ವಲ್ಪ ದಿನ ಕಾಯಿ. ನೋಡ್ತಾ ಇರು. ನಿನ್ನ ಸಮಸ್ಯೇ ಹೇಗೆ ಬಗೆ ಹರಿಯತ್ತೆ ಅಂತ”. ಇಷ್ಟು ಹೇಳಿದ್ದೆ ಹೇಳಿದ್ದು ಸುಶೀಲಾಳಿಗೆ ಏನೋ ಒಂದು ದಾರಿ ಕಾಣಿಸಿದ ಹಾಗೆ ಆಗಿ, “ನೋಡಿ ಗಂಗಜ್ಜಿ ನೀವು  ನನ್ಗೆ ಇದ್ವೊಂದು ಉಪಹಾರ ಮಾಡಿದ್ರೆ ನಾನು ನಿಮ್ಮನ್ನಾ ನನ್ನ ಉಸಿರು ಇರೋ ತನಕ ನೆನ್ಪಲ್ಲಿ ಇಟ್ಟುಗೊಳ್ತೀನಿ. ದಯವಿಟ್ಟು ಹೇಗಾದ್ರು ಮಾಡಿ ಅತ್ತೆ ಮನೆಲೇ ಇದ್ದು ಬೆಣ್ಣೆ ವ್ಯಾಪಾರ ನನ್ಗೆ ಕೊಡೋ ತರ ಮಾಡಿ”  ಅಂತ ಬೇಡಿಕೊಳ್ತಾಳೆ. ಗಂಗಜ್ಜಿ ಗೆ ಇವಳ ಸಂಕಟ ಅರ್ಥವಾಗಿ “ ಹೇಳಿದ್ನಲ್ಲಾ ಇನ್ನು ಸ್ವಲ್ಪ ದಿನ ತಾಳ್ಮೆಯಿಂದ ಕಾಯಿ ಅಂತ .ನೀನು ಈಗ ಮನೆಗೆ ಹೋಗಿ ಊಟ ಮಾಡು. ಹೀಗೆ ಹೊತ್ತು ಗೊತ್ತು ಇಲ್ಲದೆ ಯೋಚ್ನೆ ಮಾಡ್ತಾ ನಿನ್ನ ಆರೋಗ್ಯ ಹಾಳು ಮಾಡ್ಕೊಳ್ ಬೇಡ” ಅಂತ ಸುಶೀಲಾಳನ್ನು ಸಮಾಧಾನ ಮಾಡಿ  ಮನೆಗೆ ಕಳಿಸುತ್ತಾಳೆ. ಏನೋ ನೆಮ್ಮದಿಯಿಂದ ಸುಶೀಲಾ ಮನೆಗೆ ಬರ್ತಾಳೆ. ಇವಳು ಮನೆಲಿ ಇಲ್ಲದಿರುವದನ್ನು ನೋಡಿ ಕೆಂಡ ಕಾರ್ತಾ  ಮನೆಗೆ ಬರೋದೆ ಕಾಯ್ತಾ ಇರೋ ಮಲ್ಲಜ್ಜಿ ತನ್ನ ಮಾತಿನ ಚಟಾಕಿ ಶುರು ಮಾಡೆ ಬಿಡ್ತಾಳೆ. ಸೊಸೆನಾ ಕೆಂಗಣ್ಣಲ್ಲಿ ನೋಡ್ತಾ…” ಕಾಲಿಗೆ ನಾಯಿ ಗೆರೆ ಇದ್ರೆ ಹೀಗೆ ಊರ್ ಸುತ್ತುತ್ತಾ ಇರ್ಬೇಕು ಅನ್ನ್ಸೋದು. ಇಲ್ಲಿ ನಾನು ಮನೆಲಿ ಒಂದು ತುತ್ತು ಅನ್ನಾ ಇಲ್ದೆ ಸಾಯ್ತಾ ಇದ್ದೀನಿ ನೀನ್ ಎಲ್ಲಿ ಊರ್ ಸುತ್ತೋಕೆ ಹೋಗಿದ್ಯೆ. ನನ್ಗೆ ಒಂದ್ ತುತ್ತು ಬೇಯಿಸಿ ಹಾಕೋಕ್ ಆಗಲ್ವೇನೆ…” ಹೀಗೆ ಕೂಗ್ತಾ ತಟ್ಟೆಲಿ ಸುಶೀಲಾಳೆ ಮಾಡಿಟ್ಟ ಅನ್ನ ಹುಳಿಯನ್ನು ಬಡಿಸಿಕೊಳ್ಳುವಾಗ ಸುಶೀಲಾಳ ಪಿತ್ತ ನೆತ್ತಿಗೆ ಏರಿತ್ತು. ಆದ್ರು ಏನು ಮಾತಾಡದೇ ತನ್ನ ಪಾಡಿಗೆ ತನ್ನ ಕೆಲಸಕ್ಕೆ ಹೋದಳು. ಅವಳಿಗೆ ತಿಳಿದಿತ್ತು..ಕೊಚ್ಚೆಗೆ ಕಲ್ಲು ಎಸೆದರೆ ತನ್ನ ಮುಖಕ್ಕೆ ಸಿಡಿಯುವುದು ಎಂದು.
ಪ್ರತಿ ದಿನದ ತರ ಗಂಗಜ್ಜಿ ಮನೆಗೆ ಬೆಣ್ಣೆ ಮಾರಲು ಹೋದ ಮಲ್ಲಜ್ಜಿ ತನ್ನ ಕಷ್ಟ ಹೇಳಿಕೊಂಡಳು. ಅವಳ ಸೊಸೆಯ ಬಗ್ಗೆ ತಿಳಿದ ಗಂಗಜ್ಜಿ ಉಪಾಯವಾಗಿ ಮಾತ್ ಶುರು ಮಾಡಿದಳು. ”ನೋಡೆ ಮಲ್ಲು ನಾನು ಮನೆಲಿ ಹಾಯಾಗಿ ಕುಳಿತಿರ್ತೀನಿ. ನನ್ಗೆ ಯಾಕೆ ಈ ವ್ಯಾಪಾರ  ವ್ಯವಹಾರ ಎಲ್ಲಾ. ಮಗ-ಸೊಸೆ ನೋಡಿಕೊಳ್ಳುವಾಗ ನಾನು ಇವರು  ತಂದಿರೋದನ್ನಾ ತನ್ನ ಕೈಲಾದಷ್ಟು ಬೇಯಿಸಿ ಹಾಕ್ತಿನಿ. ಸುಮ್ನೆ ಯಾಕ್ ಈ ವಯಸ್ಸಿನಲ್ಲಿ ನಾವು ಕಷ್ಟ ಪಡೋದು. ನಮ್ಮ ಮಕ್ಕಳಿಗೂ ಕೆಲಸ ತಿಳಿದಿರಲಿ. ನಮ್ಗೆ ಯಾಕ್ ಈ ವಯಸ್ಸಿನಲ್ಲಿ ಈ ಎಲ್ಲಾ ರಾಮಾಯಣ “. ಅಂತ ಗಂಗಜ್ಜಿ ಮಲ್ಲಜ್ಜಿ  ಹತ್ತಿರ ದಿನ ಹೇಳ್ತಾ ಇದ್ಲು. ದಿನ ಹೇಳಿದ್ದೆ ಹೇಳ್ತಾ ಹೋದ್ರೆ ಒಂದಲ್ಲಾ ಒಂದು ದಿನ ಅವಳಿಗೆ ಅರ್ಥ ಆಗ್ಬಹುದು ಅನ್ನೊ ಗಂಗಜ್ಜಿಯ ನಂಬಿಕೆ. ಏನೇ  ಆದ್ರು ಜಗ್ಗದ ಮಲ್ಲಜ್ಜಿ. “ಇದೆಲ್ಲಾ ನಿನ್ಗೆ ಕಣೇ ಗಂಗು ನಾನ್ ಬದುಕಿರೋ ತನಕ ನನ್ನ ವ್ಯಾಪಾರ ಬಿಟ್ಗೊಡಲ್ಲ”. ಅಂತ ಮಲ್ಲಜ್ಜಿ ತನ್ನ ನಿರ್ಧಾರ ಹೇಳೆ ಬಿಟ್ಲು. ಗಂಗಜ್ಜಿ ಗೆ ಇವಳು ಇಷ್ಟು ಸಲೀಸಾಗಿ ಬಗ್ಗೊಳಲ್ಲ ಅಂತ ತಿಳಿದ ವಿಚಾರನೆ. ಆದರು ಸುಶೀಲೆಗೆ ಕೊಟ್ಟ ಮಾತು ಉಳಿಸಿಕೊಳ್ಳಲು  ಗಂಗಜ್ಜಿ ಇನ್ನೊಂದು ದಿನ ನಯವಾಗಿ ಮಲ್ಲಜ್ಜಿಯ  ತಲೆಗೆ ಹುಳ ಬಿಟ್ಟೆ ಬಿಟ್ಲು. “ ಏನ್ ಮಲ್ಲು..ನೀನು ಈ ಬಿಸಿಲಲ್ಲಿ  ಮನೆ ಮನೆ ತಿರುಗಿ ಬೆಣ್ಣೆ ಮಾರ್ತಾ ಇದ್ದೀಯ…ಅಲ್ಲಿ ನಿನ್ನ ಸೊಸೆ ಅರಾಂ ಆಗಿ ಮನೆಲಿ ಕುತಿರ್ತಾಳೆ. ಅದು ಅಲ್ದೆ ನೀನು ಈ ಕಡೆ ಬಂದಾಗ ಅವ್ಳು ರುಚಿ ರುಚಿ ಮಾಡ್ಕೊಂಡು ತಿಂದ್ರೆ…? ನಿನ್ಗೆ ಯಾಕ್ ಈ ಬಿಸ್ಲಲ್ಲಿ ಅಲೆಯೋ  ಕರ್ಮನೆ. ಸೊಸೆಗೆ ಕೆಲಸ ಕೊಡೋದ್ ಬಿಟ್ಟು ನೀನ್ ಯಾಕ್ ಕಷ್ಟ ಪಡ್ತಾ ಇದ್ದೀಯಾ..? ನಾನಂತು ಏಲೆ ಮಾರೋದಕ್ಕೆ ನನ್ನ ಸೊಸೆನೆ ಕಳಿಸೋದು. ನಾನು ತಂಪಾಗಿ ಮನೆಲೆ ಇದ್ದು ಬಿಡ್ತೀನಿ”. ಅಂತ ಗಂಗಜ್ಜಿ ಮಲ್ಲಜ್ಜಿಗೆ ತಾಗೋ ತರ ಹೇಳಿದಳು. ಮಲ್ಲಜ್ಜಿಗೆ ಸೊಸೆ ತಂಪಾಗಿ ಮನೆಲಿ ಇರೋದನ್ನೇ ಕಲ್ಪನೆ ಮಾಡ್ತಾ  ಸೀದಾ ಮನೆಗೆ ಬಂದ ಮಲ್ಲಜ್ಜಿಗೆ ಕಾಗೆ ಕೂರೊದಕ್ಕೂ ಹೆಣೆ ಮುರಿಯೊದಕ್ಕು ಸರಿ ಆದಂತೆ  ಮನೆಲಿ ಸೊಸೆ ಗಂಡನ ಜೊತೆ ಹರಟೆ ಹೊಡಿತಾ ಚಹಾ ಕುಡಿತಾ ಕುಳಿತಿದ್ದದ್ದು ನೋಡಿ ಪಿತ್ತ ಮತ್ತು ಕೆಣಕಿದ ಹಾಗೆ ಆಯ್ತು. ಬೆಣ್ಣೆ ಮಡಿಕೆಯನ್ನು ಅವಳ ಕೈ ನಲ್ಲಿ ಕೊಡ್ತಾ…”ನೋಡೆ ನೀನು ಮನೆಲಿ ಹಾಯಾಗಿ ಗಂಡನ ಜೊತೆ ಹರಟೆ ಹೊಡಿಯೋದ್ ಬೇಕಾಗಿಲ್ಲ. ನನ್ನ ತರನೇ ಮನೆ ಮನೆಗೆ ಅಲೆದು ಬೆಣ್ಣೆ ವ್ಯಾಪಾರ ಮಾಡು. ನಿನ್ಗು ನನ್ನ ಕಷ್ಟ ಏನು ಅಂತ ತಿಳಿಯತ್ತೆ. ನಾಳೆಯಿಂದ ಈ ಬೆಣ್ಣೆ ವ್ಯಾಪಾರ ಮತ್ತು ಈ ವ್ಯವಹಾರ ಎಲ್ಲಾ ನಿನ್ನದೆ. ನಾನು ಹಾಯಾಗಿ ಮನೆಲಿ ಅಡಿಗೆ ಮಾಡಿಕೊಂಡಿ ಇರ್ತೀನಿ”  ಅಂತ ಒಂದೇ ಉಸುರಿಗೆ ಹೇಳಿದಳು. ರಾಮುನಿಗೆ ತನ್ನ ತಾಯಿ ಬೆಣ್ಣೆ ವ್ಯಾಪಾರ ಸೊಸೆಗೆ ವಹಿಸಿದ್ದು ನೋಡಿ ಪರಮಾಶ್ಚರ್ಯ ವಾದರು ಸುಶೀಲೆಗೆ  ಗಂಗಜ್ಜಿ ಬಿಟ್ಟ ಬಾಣ ಏನು ಅನ್ನೊದು ಅರ್ಥವಾಯಿತು. ಮನಸ್ಸಿನಲ್ಲೆ ಒಮ್ಮೆ ನಕ್ಕು ಮಲ್ಲಜ್ಜಿಗೆ ನಯವಾಗಿ..” ನೀವು ಹೇಗೆ ಹೇಳ್ತಿರೊ ಹಾಗೆ ಆಗಲಿ”  ಅಂತ ತನ್ನ ನಿರ್ಧಾರ ಹೇಳಿದಳು.






No comments: