Wednesday, July 31, 2019

ದಕ್ಷಿಣ ಕರಾವಳಿಯ ಸಾಲು ಸಾಲು ದೇವಾಲಯಗಳು


                             ದಕ್ಷಿಣ ಕರಾವಳಿಯ ಸಾಲು ಸಾಲು ದೇವಾಲಯಗಳು

ಒಂದನೇ ದಿನ
ಕರಾವಳಿ ಅಂದ ತಕ್ಷಣ ನೆನಪಾಗುವುದೆ ಸಮುದ್ರ ತೀರ, ತೆಂಗಿನ ಮರ,ಒಣ ಹವೆ, ಮೀನಿನ ವಾಸನೆ. ಸಮುದ್ರ ತೀರ. ಸಮುದ್ರ ತೀರ ನನ್ನ ಇಷ್ಟದಲ್ಲಿ ಒಂದು ಅಂತ ಹೇಳಬಹುದು. ತುಂಬಾ ಸಲ ಊರಿಗೆ ಹೋದಾಗ ಸಮುದ್ರದಲ್ಲಿ ಕಾಲ ಕಳೆಯ ಬೇಕೆಂದೆ ಕುಮಟಾದ ದಾರೆಶ್ವರ ಅಥವಾ ಬಾಡಾ ಬೀಚ್ ವರೆಗೆ ಹೋಗಿ ಬಂದಿರುವ ದಾಖಲೆ ಇದೆ. ನಮ್ಮೂರಿನಿಂದ ಸುಮಾರು ಎರಡು ತಾಸಿನ ಒಳಗೆ ಹೋಗಬಹುದು.
ಈ ಬಾರಿ ಯಾಕೋ ಅತ್ತೆ-ಮಾವ ನನ್ನು ಕರೆದುಕೊಂಡು ದಕ್ಷಿಣ ಕನ್ನಡವನ್ನು ಸುತ್ತೊ ಬಯಕೆ ಆಯಿತು. ಹೇಗೋ ರಜಾವನ್ನು ಹೊಂದಿಸಿ ಮೂರು ದಿನದ ಪ್ರವಾಸವನ್ನು ಕೈಗೊಂಡೆವು. ದೇವಾಲಯವು ನನಗೆ ಮತ್ತು ಮನೆಯವರಿಗೆ ಸ್ವಲ್ಪ ದೂರವಾದರು ಅಲ್ಲಿನ ಪ್ರಕೃತಿ ಸೌಂದರ್ಯ ಬಹಳ ಇಷ್ಟವಾಗಿತ್ತು. ಒಮ್ಮೆ ತವರು ಮನೆಯವರ ಜೊತೆ ಹೈಸ್ಕೂಲ್ ನಲ್ಲಿ ಇರ ಬೇಕಾದರೆ ಹೋಗಿದ್ದೆನಾದರು ಈಗ ಗಂಡನ ಮನೆಯವರ ಜೊತೆ ಹೋಗುವ ಪ್ರಸಂಗ ಒದಗಿ ಬಂತು. ಇದು ನನ್ನ ಮಗಳಿಗೆ ಮಾತ್ರ ಹೊಸತು. ನಾವೆಲ್ಲ ಬೇರೆ-ಬೇರೆ ಆಗಿ ಒಮ್ಮೆ ನೋಡಿ ಆಗಿತ್ತು.
ಮೊದಲಿಗೆ ಶೃಂಗೇರಿಯ ಶಾರದಾಂಬೆಯ ದರ್ಶನ ಮಾಡುವ ಯೋಜನೆ ಹಾಕಿದೆವು. ಗುಡಿಯಲ್ಲಿ ಇರುವ ಶಾರದಮ್ಮನನ್ನು ನೋಡಿದರೆ ಏನೋ ಮನಸ್ಸಿಗೆ ಖುಶಿ. ಅದು ಅಲ್ಲದೆ ದೇವಾಲಯದಲ್ಲಿ ಇದ್ದ ಕಲ್ಲಿನ ಕಂಬ ಮತ್ತು ಅದರಲ್ಲಿ ಕೆತ್ತಿದ ಹನ್ನೇರಡು ರಾಶಿಗಳ ಚಿತ್ರ ನನಗೆ ಅತಿ ಇಷ್ಟವಾಯಿತು.
ಇನ್ನು ಶೃಂಗೆರಿಯ ಅತ್ಯಂತ ಆಕರ್ಷಣೆ ಅಲ್ಲಿನ ಮೀನುಗಳು. ಇದನ್ನು ನಾನು ಮೊದಲೆ ಮಗಳ ಹತ್ತಿರ ಹೇಳಿದ ಕಾರಣ ಅವಳಿಗೆ ಅಲ್ಲಿಗೆ ಹೋಗುವ ಅವಸರ. ಮೀನಿಗೆ ಹಾಕಲೆಂದೆ ಮಂಡಕ್ಕಿಯನ್ನು ಹೊರಗಡೆ ತೆಗೆದುಕೊಂಡಿದ್ದೆವು. ಶಾರದಾಂಬೆಯ ದರುಶನ ಮಾಡಿ ನದಿಗೆ ಹೋದೆವು. ಅಲ್ಲಿನ ಮೀನುಗಳಿಗೆ ಒಂದೆ ತರಹದ ತಿಂಡಿ ತಿಂದು ಬೆಸರ ಬಂದಿದೆಯೇನೊ ಅಂತ ನನಗೆ ಅನಿಸಿತು. ನಾವು ಮಂಡಕ್ಕಿ ಹಾಕಿದರೆ ಅಷ್ಟಾಗಿ ಬರುತ್ತನೆ ಇರಲಿಲ್ಲ. ಅಲ್ಲೆ ನಮ್ಮ ಪಕ್ಕದಲ್ಲಿ ಇರುವವನು ಚಪಾತಿ ಹಿಟ್ಟಿನ ತರಹದ್ದೆ ಏನೊ ಒಂದನ್ನು ಸಣ್ಣ-ಸಣ್ಣ ಚೂರು ಮಾಡಿ ಹಾಕುತ್ತಿದ್ದ. ಅದಕ್ಕೆ ಮೀನುಗಳು ಮುತ್ತಿಕೊಳ್ಳುತ್ತಿದ್ದವು. ಆಗ ನನಗೆ ಅನಿಸಿತು ಮೀನಿಗೂ ಒಂದೆ ತರಹದ ತಿಂಡಿ ತಿಂದು ಬೆಸರ ಬಂದಿರಬಹುದು ಎಂದು. ಏನೇ ಆಗಲಿ ಅಲ್ಲಿನ ಮೀನುಗಳಿಗೆ ಆಹಾರಕ್ಕೆನು ಕೊರತೆ ಇಲ್ಲ. ಅಲ್ಲಿನ ನದಿ ಮತ್ತು ಸುತ್ತಲಿನ ಪರಿಸರ ನೋಡಲು ತುಂಬಾ ಸೊಗಸಾಗಿದೆ.
ಶೃಂಗೆರಿಯಿಂದ ನಮ್ಮ ಪ್ರಯಾಣ ಹೊರನಾಡಿಗೆ. ಶೃಂಗೆರಿಯಿಂದ  ಹೊರನಾಡಿಗೆ ಹೋಗುವಾಗ ಅಲ್ಲಿನ ಅಕ್ಕ-ಪಕ್ಕದ ಪರಿಸರ ಬಲು ಚಂದ. ಅಡಿಕೆ ತೋಟದ ಮದ್ಯೆ ಬೆಳೆದರು ಇಲ್ಲಿನ ಕಾಫಿ ತೋಟ ನೋಡಲು ತುಂಬಾ ಹಿತವೆನಿಸುವುದು.ಅದು ಅಲ್ಲದೆ ನಾವು ಹೋದಾಗ ಕಾಫಿ ಹೂವು ಬಿಟ್ಟಿತ್ತು. ಸುತ್ತಲಿನ ಪರಿಸರದಲ್ಲಿ ಮಲ್ಲಿಗೆ ಹೂವು ಅರಳಿದಂತಿತ್ತು. ನೂರಾರು ಎಕರೆಯಲ್ಲಿ ಅಚ್ಚ ಹಸುರಿನ ತೋಟ ಮತ್ತು ಬಿಳಿ ಬಣ್ಣದ ಹೂವು ನೋಡಲು ಎರಡು ಕಣ್ಣುಗಳು ಸಾಲದು. ರಸ್ತೆಗಳು ಸಾಧಾರಣವಾಗಿ ಇದ್ದರು ಪ್ರಕೃತಿ ಮಾತ್ರ ಅದ್ಭುತವಾಗಿತ್ತು. ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಹೊರನಾಡಿಗೆ ಹೋದೆವು. ಇಲ್ಲಿನ ದೇವಸ್ಥಾನವು ಸೊಗಸಾಗಿದೆ. ದೇವಿ ದರ್ಶನ ಮಾಡಿದೆವು. ದೇವಸ್ಥಾನದ ಹೊರಗೆ ಕೆಲವು ಅಂಗಡಿಗಳು ಇದ್ದವು. ಅಲ್ಲಿ ಡ್ರೈ ಪ್ರೂಟ್ಸ ಮತ್ತು ಕೆಲವು ಸಂಬಾರ್ ಪದಾರ್ಥಗಳನ್ನು ಖರಿದಿ ಮಾಡಿದೆವು. ಅಲ್ಲಿಯೇ ಟೀ ಕುಡಿದೆವು. ತುಂಬಾ ಸೊಗಸಾಗಿತ್ತು. ನಾಲಿಗೆಯಲ್ಲಿ ಇನ್ನು ಅದರ ರುಚಿ ಅಚ್ಚಾದಂತಿದೆ. ಹಾಗೆ ಹೊರನಾಡಿನ ಸುತ್ತ-ಮುತ್ತ ಸ್ವಲ್ಪ ಒಡಾಡಿದೆವು. ನಮ್ಮ ಮುಂದಿನ ಪ್ರಯಾಣ ದರ್ಮಸ್ಥಳ.
ಹೊರನಡಿನಿಂದ ದರ್ಮಸ್ಥಳಕ್ಕೆ ಹೊರಟೆವು. ಇಲ್ಲಿನ ಪರಿಸರವೆ ಒಂದಕ್ಕಿಂತ  ಒಂದು ಅದ್ಭುತವಾಗಿದೆ. ಪ್ರಕೃತಿ ಪ್ರೀಯರಿಗೆ ರಸದೌತಣ. ಈಗ ಕಾಫಿ ತೋಟದ ಜೊತೆ ಟೀ ತೋಟವನ್ನು ನೋಡಬಹುದು. ಸದ್ಯ ಟೀ ಎಲೆಗಳನ್ನು ಕಿತ್ತಿರ ಬೇಕು. ಆ ಕಾರಣದಿಂದ ಪೂರಾ ಬೆಟ್ಟ ಅಚ್ಚ ಹಸುರಾಗಿ ಒಂದೆ ಸಮನಾಗಿ ಗಿಡಗಳು ಬೆಳೆದಂತೆ ಕಾಣಬಹುದು. ಸ್ವಲ್ಪ ಸಮಯ ಕಾರ್ ನಿಲ್ಲಿಸಿ ಪೋಟೊ ಮತ್ತು ಅಲ್ಲಿ ಸ್ವಲ್ಪ ಓಡಾಡಿ ಟೀ ತೋಟದ ಸವಿಯನ್ನು ಕಣ್ಣು ತುಂಬಿಸಿಕೊಂಡೆವು. ಅಲ್ಲಿ-ಅಲ್ಲಿ ಒಂದು ಮನೆ. ಪೇಟೆ ಹೋಗೊದು ಅಂದರೆ ತುಂಬಾ ದೂರ. ಹತ್ತಿರದಲ್ಲಿ ಯಾವ ಪೇಟೆನು ಇಲ್ಲ. ನನ್ನ ಮಗಳಿಗೆ ಒಂದೆ ಪ್ರಶ್ನೆ, “ ಎಮರ್ಜನ್ಸಿಗೆ ಮ್ಯಾಗಿನೋ ಐಸ್ಕ್ರೀಮ್ ಏನಾದರು ಬೇಕಿದ್ದರೆ ಎಲ್ಲಿಗೆ ಹೋಗುತ್ತರೆ ಎಂದು?”.  ಸ್ವಲ್ಪ ಪೇಟೆಯ ಹತ್ತಿರವೆ ಬೆಳೆದ ನನಗೆ ಇದು ಬಹು ಕಷ್ಟ ಅನಿಸಿತು. ನನಗೆ ಉತ್ತರ ಕೊಡಲು ಆಗಲಿಲ್ಲ. ಮಗಳ ಪ್ರಶ್ನೆಗೆ ನನ್ನ ಅತ್ತೆ-ಮಾವ ಮತ್ತು ನನ್ನ ಮನೆಯವರೆ ಉತ್ತರಿಸಿದರು. ಹೀಗೆ ಮಾತು ಕಥೆಯಲ್ಲಿ  ದರ್ಮಸ್ಥಳ ಸೇರಿದೆವು. ಆಗ ರಾತ್ರಿಯಾಗಿತ್ತು. ಅದು ಅಲ್ಲದೆ ಎಲ್ಲರಿಗೂ ಸುಸ್ತಾದ ಕಾರಣ ಊಟ ಮಾಡಿ ಮಲಗಿದೆವು. ದರ್ಮಸ್ಥಳದಲ್ಲಿ ವಸತಿ ಗ್ರಹಕ್ಕೆನು ಕೊರತೆ ಇಲ್ಲ. ಒಳ್ಳೊಳ್ಳೆ ವಸತಿ ಗ್ರಹಗಳಿವೆ. ಆದರೆ ಅಲ್ಲಿನ ಸೆಖೆಗೆ ಎ.ಸಿ.ಯು ನಾಚಬೇಕು. ಆದರೆ  ಅಯಾಸ ಆದಾಗ ಅದು ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಚನ್ನಾಗಿಯೇ ನಿದ್ದೆ ಬರುವುದು.
ಎರಡನೇ ದಿನ
 ಮಾರನೆಯ ದಿನ ಮುಂಜಾನೆ ಬೇಗ ಎದ್ದು ಮೊದಲು ಬಾಹುಬಲಿ ನಂತರ ಮಂಜುನಾಥ ಸ್ವಾಮಿಯ ದರುಶನ ಮಾಡುವ ಪ್ಲಾನ್ ಹಾಕಿದೆವು. ಮುಂಜಾನೆ ಬಿಸಿಲು ತನ್ನ ಪ್ರತಾಪ ತೋರಿಸುವ ಮೊದಲೆ ಬಾಹುಬಲಿ ಇದ್ದಲ್ಲಿ ಹೋದೆವು. ಕಾರಿನಲ್ಲಿ ಹೋಗಬಹುದು. ಆದರೆ ನಾವು ನಡೆದುಕೊಂಡೆ ಹೋದೆವು. ಇಲ್ಲು ಪ್ರಕೃತಿಯ ಸೊಬಗು ಚನ್ನಾಗಿ ಇತ್ತು. ಅಲ್ಲಿ ಬಾಹುಬಲಿಯನ್ನು ನೋಡಿದೆವು. ಮುಂಜಾನಿನ ಸುತ್ತಲಿನ ವಾತಾವರಣ ಸೊಗಸಗಿತ್ತು.  ಬಾಹುಬಲಿಯನ್ನು ನೋಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಹೋದೆವು. ಅಷ್ಟಾಗಿ ದೊಡ್ಡ ಕ್ಯೂ ಇಲ್ಲವಾಗಿತ್ತು. ದೇವರ ದರ್ಶನ ಪಡೆದು ಕಾರ್ ಮ್ಯೂಸಿಯಮ್ ಗೆ ಹೋದೆವು. ತುಂಬಾ ಚನ್ನಾಗಿ ಇಡಲಾಗಿದೆ. ಅಲ್ಲೆ ದೇವಾಲಯದ ಸುತ್ತ ಓಡಾಡಿದೆವು.  ನಮ್ಮ ಮುಂದಿನ ಪ್ರಯಾಣ ಕುಕ್ಕೆ ಸುಬ್ರಮಣ್ಯ.
ನನಗೆ ಯಾಕೋ ಈ ಕುಕ್ಕೆ ಸುಬ್ರಮಣ್ಯ ಅಂದರೆ ಸ್ವಲ್ಪ ಹೆದರಿಕೆ. ಯಾವಾಗಲೊ ಕೇಳಿದ್ದೆ, ಕುಕ್ಕೆಯಲ್ಲಿ ಹಾವುಗಳು ಓಡಾಡುತ್ತ ಇರತ್ತೆ ಅಂತ ಹೇಳಿದ ನೆನಪು. ಇದರ ಜೊತೆ ನಮ್ಮ ಪಕ್ಕದ ಮನೆಯ ಹುಡುಗ ನನ್ನ ಮಗಳ ವಾರಗೆಯವನು ಹೇಳಿದ್ದ, “ಆಂಟಿ ಸುಬ್ರಮಣ್ಯಕ್ಕೆ ಹೋದಾಗ ಅಲ್ಲಿ ಹಾವುಗಳು ಓಡಾಡ್ತಾ ಇತ್ತು”. ಅಂತ ನನ್ನ ಹತ್ತಿರ ಮತ್ತು ನನ್ನ ಮಗಳ ಹತ್ತಿರ ಚನ್ನಾಗಿ ಕಥೆ ಹೇಳಿದ್ದ.  ಅದು ಅಲ್ಲದೆ ಅಲ್ಲಿ ತುಂಬಾ ಮಡಿ-ಮೈಲಿಗೆ ಆಗಬೇಕು ಅಂತ ಹೇಳಿದ್ದರು. ಮೊದಲೆ ಮಡಿ-ಮೈಲಿಗೆಯ ಬಗ್ಗೆ ಗಂಧ-ಗಾಳಿ ತಿಳಿಯದ ನನಗೆ ಒಳೊಳಗೆ ಅಳುಕು ಇತ್ತು. ಆದರೆ ನನ್ಗೆ ಸುಬ್ರಮಣ್ಯದಲ್ಲಿ ಯಾವ ಹಾವು ನೋಡಲು ಸಿಗಲಿಲ್ಲ. ದಾರಿಯಲ್ಲಿ ಹುತ್ತಗಳು ಮಾತ್ರ ಇತ್ತು. ದೇವಸ್ಥಾನ ತುಂಬಾ ಚನ್ನಾಗಿ ಇತ್ತು. ಅಲ್ಲಿ ಹರಕೆ ತಿರಿಸುವವರು ತುಂಬಾ ಜನರು ಇದ್ದರು. ಜನರ ಭಕ್ತಿ ಮತ್ತು ನಂಬಿಕೆಗೆ ಮಾರುಹೋದೆ. ದೇವರ ಪ್ರಸಾದ ತೆಗೆದುಕೊಂಡು ದೇವಸ್ಥಾನದ ಆವರಣದಲ್ಲಿ ಅಡ್ಡಾಡಿ ಆಚೆ ಬಂದೆವು. ಹೊರಗಡೆ ತಿಂಡಿ-ತಿರ್ಥಕ್ಕೆನು ಕೊರತೆ ಇಲ್ಲ. ಒಳ್ಳೊಳ್ಳೆ ಹೊಟೆಲ್ ಗಳಿದ್ದವು. ಅಲ್ಲೆ ತಿಂಡಿ ತಿಂದು ನಮ್ಮ ಮುಂದಿನ ಪ್ರಯಾಣ ಬೆಳೆಸಿದವು.
ನಿನ್ನೆ ಇಂದ ಬರಿ ದೇವಸ್ಥಾನ ನೋಡಿ-ನೋಡಿ ನನ್ನ ಮಗಳಿಗೆ ಸ್ವಲ್ಪ ಬೆಸರ ಬಂತು. ಅದು ಅಲ್ಲದೆ ನಾನು ಸಮುದ್ರ ಮತ್ತು ಐಲ್ಯಾಂಡ್ ಗೆ ನಿನ್ನ ಕರೆದುಕೊಂಡು ಹೋಗುತ್ತೆನೆ ಅಂತ ಬಿಲ್ಡ್ ಅಪ್ ಕೊಟ್ಟಿದ್ದೆ. ಇದಕ್ಕೊಸ್ಕರವೇ ಇನ್ನು ದೇವಸ್ಥಾನ ಸಾಕು ಸಮುದ್ರಕ್ಕೆ ಹೋಗೋಣ ಅಂತ ರಗಳೆ ಶುರು ಮಾಡಿದಳು. ನಮ್ಮ ಪ್ಲಾನ್ ಪ್ರಕಾರ ಕಟೀಲು ನೋಡಿ ಉಡುಪಿಗೆ ಹೋಗುವುದಿತ್ತು. ಇಲ್ಲಿಯ ವರೆಗೆ ಬಂದ ಮೇಲೆ ಕಟೀಲು ಯಾಕೆ ಬಿಡುವುದು ಎಂದು ಕಟೀಲು ದೇವಸ್ಥಾನಕ್ಕೆ ಹೋದೆವು.
ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನ. ನಾವು ಹೋದಾಗ ಸಾಮೂಹಿಕ ಮದುವೆ ನಡಿತಾ ಇತ್ತು. ಯಾವ ಆಡಂಬರ ಇಲ್ಲದೆ ಅಪ್ಪ-ಅಮ್ಮನಿಗೆ ಹೊರೆ ಆಗದೆ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಹೇಗಾಯಿತು ಅನ್ನೊದು ಮುಖ್ಯವಲ್ಲ. ಮುಂದೆ ಹೇಗಿರುತ್ತಾರೆ ಅನ್ನೋದು ಮುಖ್ಯ. ಒಂದೆ ಬಾರಿ ಹಲವು ಮದುಮಕ್ಕಳನ್ನು ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದು  ನೋಡಿ ಖುಶಿ ಅನಿಸಿತು.
ನಮ್ಮ ಮುಂದಿನ ಪ್ರಯಾಣ ಉಡುಪಿ. ಕಟೀಲಿನಿಂದ ಉಡುಪಿಗೆ ಹೋಗೋ ರಸ್ತೆ ತುಂಬಾ ಚನ್ನಾಗಿ ಇತ್ತು. ನಿನ್ನೆ ನೋಡಿದ್ದು ದಕ್ಷಿಣ ಕನ್ನಡದ ಬೆಟ್ಟ-ಗುಡ್ಡ. ಇಂದು ಪಕ್ಕಾ ಕರಾವಳಿ ವಾತಾವರಣ. ಒಣಹವೆ ಮತ್ತು ಸೆಖೆ ಇಲ್ಲದಿದ್ದರೆ ಬಾಕಿ ಎಲ್ಲ ಚಂದವೇ. ಉಡುಪಿ ಯವರ ಊಟ ಮತ್ತು ಉಡುಪಿಯವರ ಹೋಟೆಲ್ ಎಲ್ಲಾ ಕಡೆ ಎತ್ತಿದ ಕೈ. ಬೇರೆ-ಬೇರೆ ಊರುಗಳಲ್ಲಿ ಉಡುಪಿ ಹೋಟೆಲ್ ಗೆ ಹೋಗಿದ್ವಿ.  ಇಂದು  ಉಡುಪಿಯಲ್ಲಿ ಉಡುಪಿ ಉಪಚಾರದಲ್ಲಿ ಊಟ ಮಾಡುವಾಗ ಅವರ ಕೈ ರುಚಿ ಅದ್ಭುತವೆನಿಸಿತು.
ಸಂಜೆ ಆರು ಗಂಟೆಗೆ ಸೆಂಟ್ ಮೇರಿ ಐಲ್ಯಾಂಡ್ ಕ್ಲೊಸ್ ಆಗೋ ಕಾರಣ ಮೊದಲ ಆದ್ಯತೆ ಬೀಚ್ ನಂತರ ಶ್ರೀಕೃಷ್ಣ ಮಠ ಅಂತ ಪ್ಲಾನ್ ಮಾಡಿದ್ವಿ. ಮಲ್ಪೆ ಬೀಚ್ ನಿಂದ ಸೇಟ್ ಮೇರಿ ಐಲ್ಯಾಂಡ್ ಗೆ ಬೋಟ್ ಇದೆ. ಬೋಟ್ ಮೇಲೆ ಹೋಗುವುದೆ ಒಂದು ಖುಶಿ. ಅದರಲ್ಲು ಮಕ್ಕಳಿಗೆ. ಇಲ್ಲಿ ತುಂಬಾ ಸಿನಿಮಾಗಳು ಶೊಟ್ ಆಗಿವೆ. ತುಂಬಾ ಸಲ ಉಡುಪಿಗೆ ಹೋದರು ಐಲ್ಯಾಂಡ್ ಗೆ ಹೋಗಿರಲಿಲ್ಲ. ಅಲ್ಲಿನ ಪರಿಸರ ಚನ್ನಾಗಿದೆ. ನಮ್ಮ ಪರಿಸರದ ಸ್ವಚ್ಚತೆ ಕಾಪಾಡುವುದು ನಮ್ಮ ಕೈನಲ್ಲಿದೆ. ಎಲ್ಲಾ ಕಡೆ ಬೊರ್ಡ ಇದೆ ಹೊರತು ಯಾರು ಪಾಲಿಸಿಲ್ಲ. ಅಲ್ಲಿ ಸ್ವಲ್ಪ ಸಮಯ ಕಳೆದು ಪುನಃ ಬೋಟ್ ನಲ್ಲಿಯೇ ಬೀಚಗೆ ಬಂದೆವು.
ಮಲ್ಪೆ ಬೀಚ್ನಲ್ಲಿ ಏನುಂಟು ಏನಿಲ್ಲ ಅನ್ನೊ ಹಾಗಿದೆ. ಒಂಟೆ, ಕುದುರೆ ಸವಾರಿಯಿಂದ ಹಿಡಿದು ಅನೇಕ ಅನೇಕ ಗೇಮ್ಸ್ ಗಳಿವೆ. ಎಲ್ಲದರ ರೇಟ್  ಜೇಬಿಗೆ ಬಿಸಿ ತಟ್ಟುವಂತದ್ದೆ. ನನಗೆ ಮೊದಲಿನಿಂದಲು ಸಮುದ್ರದ ತೆರೆ ನೋಡುತ್ತ  ಅಲ್ಲಿ ನಡೆದಾಡುವುದು ತುಂಬಾ ಇಷ್ಟವಾಗಿತ್ತು. ಗೊತ್ತು ಗುರಿ ಇಲ್ಲದ ಗೇಮ್ ಆಟ ಆಡಿ ಜೇಬಿಗೆ ಕತ್ತರಿ ಬಿಳಿಸಿಕೊಳ್ಳುವುದಕ್ಕಿಂತ ನಮ್ಮ ಪಾಡಿಗೆ ನಾವು ಸಮುದ್ರದ ತೆರೆಯಲ್ಲಿ ಆಟ ಆಡಿದೆವು. ರವಿಯು ನಮಗೆ ಟಾಟಾ ಹೇಳಿದ ಮೇಲೆ ನಾವು ಶ್ರೀಕೃಷ್ಣ ಮಠಕ್ಕೆ ಬಂದೆವು. ಮಗಳು ಕನಕದಾಸರ ಕಥೆ ಪುಸ್ತಕದಲ್ಲಿ ಓದಿದ್ದಳು. ಕನಕನ ಕಿಂಡಿ ನೋಡುವ ಆಸೆ ಮಗಳಿಗೆ. ಓಳಗೆ ಹೋಗಲು ಸ್ವಲ್ಪ ರಶ್ ಇತ್ತು. ಸ್ವಲ್ಪ ಹೊತ್ತು ಸಾಲಿನಲ್ಲಿ ನಿಂತು ಹೋದೆವು. ಇಲ್ಲಿನ ಶ್ರೀಕೃಷ್ಣನ ಮೂರ್ತಿ ತುಂಬಾ ಚನ್ನಾಗಿ ಇದೆ. ಕೃಷ್ಣನ ದರುಶನ ಪಡೆದು ಬಂದೆವು. ಎಲ್ಲರಿಗೂ ಆಯಾಸ ಆದ ಕಾರಣ ಅಲ್ಲೆ ಆಚೆ ಸ್ವಲ್ಪ ಹೊಟ್ಟೆ ತುಂಬಿಸಿಕೊಂಡು ರೂಮಿಗೆ ಬಂದೆವು.
ಮೂರನೇ ದಿನ
ನಮ್ಮ ಈ ದಿವಸದ ಪ್ರವಾಸ ಆನೆಗುಡ್ಡೆ,ಕೊಲ್ಲುರು ಹಾಗೆ ಮನೆಯ ದಾರಿ. ಬೆಳಿಗ್ಗೆ ಬೇಗ ಎದ್ದು ನಾವು ಉಡುಪಿಯಿಂದ ಆನೆಗುಡ್ಡೆ ವಿನಾಯಕನ ದೇವಸ್ಥಾನಕ್ಕೆ ಹೋದೆವು. ಈ ಮೂರು ದಿನಗಳಲ್ಲಿ ದೇವಸ್ಥಾನ ಸುತ್ತಿ-ಸುತ್ತಿ ಇದು ಒಂಬತ್ತನೇಯ ದೇವಸ್ಥಾನವಾಗಿತ್ತು. ದಕ್ಷಿಣ ಕನ್ನಡ ದ ಸಾಲು-ಸಾಲು ದೇವಾಲಯಗಳಲ್ಲಿ ಎಲ್ಲವು ತುಂಬಾ ಚನ್ನಾಗಿ ಇದ್ದವು. ನಾವು ಹೋದಾಗ ಇಲ್ಲಿ ಪ್ರಸಾದಕ್ಕೆಂದು ಕಾಬೂಲ್ ಕಡಲೆ ಕುಸುಂಬರಿ ನೀಡಿದರು. ತುಂಬಾ ಚನ್ನಾಗಿ ಇತ್ತು. ಯಾವ ದೇವಾಲಯಗಳಲ್ಲಿ ಊಟ ಮಾಡದೆ ಇರೋ ಕಾರಣ ಸ್ವಲ್ಪ ಸಮಯ ಕಾದು ಇಲ್ಲಿನ ಪ್ರಸಾದ ತಿಂದೆ ಬಂದೆವು.
ನಮ್ಮ ಮುಂದಿನ ಪ್ರಯಾಣ ಕೊಲ್ಲುರು. ಆನೆಗುಡ್ಡೆಯಿಂದ ಕೊಲ್ಲೊರಿಗೆ ಹೋಗುವ ದಾರಿ ನಮ್ಮ ಊರಿನ ಪರಿಸರವೆ. ಕೊಲ್ಲೂರಿಗೆ ಬರುವ ವರೆಗೆ ದಕ್ಷಿಣ ಕನ್ನಡ ಮರೆಮಾಚಿ ನಮ್ಮ ಊರಿನ ಪರಿಸರ ಮತ್ತು ಅಡಿಕೆ ತೋಟಗಳು ಕಾಣಲು ಶುರುವಾದವು. ಕೊಲ್ಲೂರು ಸ್ವಲ್ಪ ಕೇರಳ ಶೈಲಿಯಲ್ಲಿದೆ ಅಂತ ನನಗೆ ಅನಿಸಿತು. ಅದು ಅಲ್ಲದೆ ನಾವು ಹೋದಾಗ ಅಲ್ಲಿ ಮಲಿಯಾಳಿಗಳು ಜಾಸ್ತಿ ಇದ್ದರು. ಕೆಲವು ಅಂಗಡಿ ಬೋರ್ಡ ಕೂಡ ಮಲಿಯಾಳಃ ದಲ್ಲಿ ಇತ್ತು. ಅದು ಅಲ್ಲದೆ ಮಲಿಯಾಳಿಗಳು ಉಡುವ ಸಾಂಪ್ರಧಾಯಿಕ  ಬಿಳಿ ಸೀರೆ ಬಂಗಾರದ ಅಂಚಿನ ಸೀರೆಗಳು ಮಾರಾಟಕ್ಕೆ ಇದ್ದವು. ಕೊಲ್ಲುರು ಮೂಕಾಂಬಿಕೆಯ ದರುಶನ ಮಾಡಿ ನಮ್ಮ ಮುಂದಿನ ಪ್ರಯಾಣ ಬೆಳಿಸಿದೆವು.
ನಮ್ಮ ಮೊದಲಿನ ಪ್ಲಾನ್ ಪ್ರಕಾರ ಕೊಲ್ಲೂರಿನಿಂದ ಸೀದಾ ನಮ್ಮೂರು ಸಿರಸಿಗೆ ಹೋಗುವ ಪ್ಲಾನ್ ಇತ್ತು. ಆದರೆ ಸ್ವಲ್ಪ ಸಮಯ ಇದ್ದ ಕಾರಣ ಮತ್ತು ಮಾತಿನ ಮದ್ಯೆ ಸಿಗಂದೂರು ಚೌಡೇಶ್ವರಿಯ ನೆನಪಾಯಿತು. ಆ ಕಾರಣದಿಂದ ಚೌಡೇಶ್ವರಿಯ ದರುಶನ ಮಾಡಿ ಸಾಗರ ದ ಮೇಲಿಂದ ಸಿರಸಿಗೆ ಹೋಗೋ ಪ್ಲಾನ್ ಮಾಡಿದೆವು.
ನಮ್ಮೂರಿನಲ್ಲಿ ಅಡಿಕೆ ಮತ್ತು ಇತರ ಬೆಳೆಗಳು ಕಳ್ಳತನ ಆಗದಂತೆ ಸಿಗಂದೂರು ಚೌಡೇಶ್ವರಿಗೆ ಹರಕೆ ಹೊತ್ತು ಒಂದು ಬೋರ್ಡ ಬರೆಸಿಕೊಂಡು ಆ ಜಾಗದಲ್ಲಿ ತೂಗು ಹಾಕುತ್ತಾರೆ. ಚೌಡೇಶ್ವರಿ ಎಷ್ಟರ ಮಟ್ಟಿಗೆ ಕಾಯುತ್ತಾಳೆ ಅಂತ ತಿಳಿದಿಲ್ಲ. ಆದರೆ ಆ ಬೋರ್ಡ ಹಾಕಿದ ಮೇಲೆ ಹೆಚ್ಚಾಗಿ  ಯಾರು ಕದಿಯುವ ಉಸಾಪರಿಗೆ ಹೋಗುವುದಿಲ್ಲ.
ದೇವಸ್ಥಾನಕ್ಕೆ ಹೋಗಬೇಕಿದ್ದರೆ ಶರಾವತಿ ಹಿನ್ನೀರಿನಲ್ಲಿ ಹೋಗಬೇಕು. ಅಲ್ಲಿನ ಸ್ಥಳಿಯರು ನಮ್ಮನ್ನು ಬಾರ್ಜ ಮೂಲಕ ಕರೆದುಕೊಂಡು ಹೋಗುತ್ತಾರೆ. ಅದರಲ್ಲಿ ಹೋಗುವುದೆ ಒಂದು ಮಜ. ಆದರೆ ನನಗೆ ಅಲ್ಲಿ ಹೋಗುವಾಗ ಅನಿಸಿದ್ದು ಆ ಮುಳುಗಡೆ ಆದ ಜಾಗದಲ್ಲಿ ಇದ್ದ ಊರಿನವರಿಗೆ ಹೇಗನ್ನಿಸ ಬೇಡ? ಅವರು ಮತ್ತು ಅವರ ಮನೆ,ಓಡಾಡಿದ ಜಾಗ, ತೋಟ ಇವುಗಳೆಲ್ಲ ಪೂರಾ ನೀರಿನ ಪಾಲಾಯಿತೆ ಅನ್ನಿಸುವುದಿಲ್ಲವೆ? ಯಾಕೋ ನಾನೇ ಸ್ವಲ್ಪ ಭಾವುಕಳಾದೆ ಅನ್ನಿಸಿತು.
ಚೌಡೇಶ್ವರಿಯ ದರ್ಶನ ಪಡೆದು ಪುನಃ ಬಾರ್ಜ ಮೂಲಕವೇ ಬಂದೆವು. ಇಲ್ಲಿಗೆ ನಮ್ಮ ನಾವು ಅಂದುಕೊಂಡಂತೆ ದಕ್ಷಿಣ ಕನ್ನಡದ ಪ್ರವಾಸ ಮುಗಿಸಿ ನಮ್ಮೂರಿನ ದಾರಿ ಹಿಡಿದೆವು.
ಈ ಬಾರಿ ನಮಗೆ ದೇವಸ್ಥಾನ ತಿರುಗುವ ಯೋಗ ಇತ್ತು ಅನಿಸುತ್ತದೆ. ಸಾಲು-ಸಾಲು ದೇವಸ್ಥಾನಗಳನ್ನು ನೋಡಿದೆವು. ನನಗೆ ಅತಿ ಇಷ್ಟವಾಗಿದ್ದು ಅಲ್ಲಿನ ಪ್ರಕೃತಿ ಸೌಂದರ್ಯ. ಮೂಲ ದೇವಸ್ಥಾನಗಳು ಹಾಗೆ ಇವೆ. ಹಾಗೇಯೆ ಇರಬೇಕು. ಅವು ಅದರ ಮೂಲ ಅಸ್ಥಿತ್ವವನ್ನು ಕಳೆದುಕೊಳ್ಳಬಾರದು. ಆದರೆ ಎಲ್ಲಾ ದೇವಾಲಯಗಳ ಹೊರಗೆ ಅಂಗಡಿಗಳು, ಹೊಟೆಲ್ ಗಳು ಅತಿಯಾಗಿ ಆಗಿವೆ. ಅವಶ್ಯಕತೆಗಿಂತ ಜಾಸ್ತಿ ಇವೆ. ಅದು ಅಲ್ಲದೆ ಸ್ವಲ್ಪ ಕಮರ್ಶಿಯಲ್ ಆಗಿವೆ.
ಏನೇ ಆಗಲಿ ಒಮ್ಮೆ ಬೇಟಿಕೊಡುವಂತಹ ಸ್ಥಳ. ತುಂಬಾ ಖುಶಿಯಾಗಿ ಮತ್ತು ಆರಾಮದಾಯಕವಾಗಿ  ನಮ್ಮ ಪ್ರವಾಸ ಮುಗಿಸಿ ಅದೇ ನಮ್ಮ ನಿತ್ಯದ ಬದುಕಿಗೆ ಬಂದೆವು.


Wednesday, July 10, 2019

ಈಜುಕೊಳದ ಕನಸ ಬೆನ್ನೇರಿ


                                        ಈಜುಕೊಳದ ಕನಸ ಬೆನ್ನೇರಿ    
 
ಚಿಕ್ಕ ವಯಸ್ಸಿನಲ್ಲಿ ಸಿನಿಮಾಗಳಲ್ಲಿ ಈಜುಕೊಳ ನೋಡಿದರೆ ಏನೋ ಒಂದು ತರ ವಿಶೇಷ. “ನಮ್ಮೂರಲ್ಲಿ ಯಾಕ್ ಇಲ್ಲ” ಅಂತ ನಾನು ಕೇಳಿದ್ದು ಇದೆ. ಅಪ್ಪ ಹೇಳ್ತಾ ಇದ್ರು,” ನಮ್ಮ್ ಊರಲ್ಲಿ ಇರೋ ಹಾಗೆ ಸಿಟಿ ಕಡೆ ಹೊಳೆ, ಬಾವಿಗಳಿರಲ್ಲ. ಅದಕ್ಕೊಸ್ಕರನೆ ಈಜುಕೊಳ ಮಾಡಿರ್ತಾರೆ”. ಅಂತ ಹೇಳಿದ್ರು. ನನಗೆ ಆಗ ಇದೆನಪ್ಪ ಒಳ್ಳೆ ಪಳ-ಪಳ ಹೊಳೆಯುವ  ಟೈಲ್ಸ ಹಾಕಿ ಈಜೋಕಂತನೆ ಒಂದು ಕೆರೆನೆ ನಿರ್ಮಾಣ ಮಾಡಿದ್ದಾರಾ ಅಂತ ಯೋಚನೆಗೆ ಬಿಳ್ತಾ ಇದ್ದೆ.
ನಮ್ಮನೆ ಪೇಟೆಗೆ ಸಮೀಪ ಆದ ಕಾರಣ ಅಲ್ಲಿ ಯಾವ ಹೊಳೆ ಅಥವಾ ಕೆರೆ ಇಲ್ಲವಾಗಿತ್ತು. ಆದ್ರೆ ಅಜ್ಜಿ ಮನೆಗೆ ಹೋದಾಗ ಅಲ್ಲಿ ಒಂದು ಹೊಳೆ ಇತ್ತು. ಅಲ್ಲಿ ನನ್ನ ವಾರಗೆಯ ಮಾವಂದಿರ ಮಕ್ಕಳು ಈಜಲು ಹೋಗುತ್ತಿದ್ದರು. ಆಗ ನನ್ಗೂ ಈಜು ಕಲಿಯ ಬೇಕೆಂದು ಅನ್ನಿಸುತ್ತಿತ್ತು. ಆದ್ರೆ ಹೇಳಿ ಕೊಡಲು ಯಾರು ಇಲ್ಲ. ಬೆಸಿಗೆ ರಜಾದಲ್ಲಿ ಹೋಗ್ತಾ ಇರೋದೆ ನಾಲ್ಕ ರಿಂದ ಐದು ದಿವಸ. “ನೆಟ್ಟಗೆ ಹದಿನೈದು ದಿವಸ ಉಳಿದುಕೊಂಡರೆ ಹೇಳಿ ಕೊಡುತ್ತಿವಿ ಆದ್ರೆ ನೀನು ಇಲ್ಲಿ ಉಳಿಯಲ್ಲ” ಅಂತ ಯಾವುದೊ ಮೇಲಿನ ಕೋಪ ವನ್ನು ನನ್ನ ಈಜು ಕಲಿಯುವುದರ ಮೇಲೆ ಹಾಕುತ್ತಿದ್ದರು. ಅದು ಸಾಲದೆಂದು ಮೇಲಿಂದ ಮಾವಂದಿರ ಒಗ್ಗರಣೆ,” ಅವಳಿಗೆ ಈ ಹೊಳೆ, ಕೆರೆ ಎಲ್ಲ ಅಪರೂಪ ನೀವು ಅವಳನ್ನ ಹೊಳೆಗೆ ಇಳಿಸ ಬೇಡಿ ಅಲ್ಲೆ ಗದ್ದೆ ಮೇಲೆ ನಿಂತು ನೋಡಲಿ” ಎಂದು ಹೇಳಿ ಕಳಿಸುತ್ತಿದ್ದರು. ಇದನ್ನು ಚಾಚು ತಪ್ಪದೆ ನಮ್ಮ ಕಪಿ ಸೈನ್ಯ ಪಾಲಿಸುತ್ತಿತ್ತು. ಇವೆಲ್ಲದುರ ಪರಿಣಾಮ ನನ್ನ ಈಜು ಕಲಿಯುವ ಕನಸು ಮೂಟೆ ಕಟ್ಟಿ ಒಂದು ಕಡೆ ಇಟ್ಟೆ.
ಮರೆತ ಕನಸಿಗೆ ಯಾಕೋ ಅಚಾನಕ್ ಆಗಿ ಜೀವ ಬಂತು.  ಅದಕ್ಕೆ ಕಾರಣ ನನ್ನ ಮಗಳು. ಅವಳ ಸ್ಕೂಲ್ ನಲ್ಲಿ ವಾರಕ್ಕೊಂದು ಸ್ವಿಮಿಂಗ್ ಕ್ಲಾಸ್. ಅವಳು ಬಹಳ ಆಸಕ್ತಿಯಿಂದ ಆ ದಿನ ಸ್ಕೂಲಿಗೆ ಹೋಗ್ತಾ ಇದ್ದಳು. ಅದು ಅಲ್ಲದೆ ಮಾತಿಗೊಮ್ಮೆ,”ಅಮ್ಮ ಸ್ವಿಮಿಂಗ್ ಸಕತ್ತಾಗಿ ಆಗತ್ತೆ. ನೀನು ಕಲಿ. ನಮ್ಮ ಮ್ಯಾಮ್ ಹತ್ತಿರ ಕೇಳು.” ಅಂತ ನನ್ನ ಕಮರಿದ ಕನಸಿಗೆ ಜೀವ ತಂದಳು. ನನಗೂ ಹೇಗೋ ಸ್ವಲ್ಪ ಪ್ರೀ ಆಗಿದ್ದೀನಿ ಕಲಿತರೆ ಕಲಿಯಬಹುದು ಅಂತ ಮನೆಯಲ್ಲಿ ಕೇಳಿದೆ. ಪತಿಯ ಪ್ರೋತ್ಸಾಹವು ದೊರಕಿತು. ಇನ್ನೇನು ತಡ ಮಗಳ ಸ್ವಿಮಿಂಗ್ ಮ್ಯಾಮ್ ಹತ್ತಿರ ವಿಚಾರಿಸಿದೆ. ಸ್ವಿಮಿಂಗ್ ಗೆ ಬೇಕಾದ ಡ್ರೇಸ್, ಕ್ಯಾಪ್, ಗಾಗಲ್, ಎಲ್ಲಾ ಮನೆಗೆ ಬಂತು.ಸ್ವಲ್ಪ ಜೊರಾಗಿಯೇ ಮನೆಯಲ್ಲಿ ತಯಾರಿ ನಡೆಯಿತು.  ಒಂದು ಶುಭ ದಿನ ಕನಸನ್ನು ನನಸಾಗಿಸಲು ಹೊರಟೆ.
ಮಗಳ ಸ್ವಿಮಿಂಗ್ ಮ್ಯಾಮ್ ಹೆಸರು ಅನಿತಾ. ನನ್ನ ಮತ್ತು ಮಗಳ ನೋಡಿ, “ ನೀವು ಕೊಸ್ಟಲ್ ಏರಿಯಾದವರು. ನಿಮಗೇನು ನೀರಿನ ಭಯವಿಲ್ಲ. ನೀವು ಬೇಗ ಕಲಿತಿರಾ ಏನು ಭಯ ಪಡಬೇಡಿ” ಅಂತ ಒಂದೆ ಉಸುರಿಗೆ  ತಮ್ಮ ಅಭಿಪ್ರಾಯ ಹೇಳಿದರು. ನಾನು ಕೊಸ್ಟಲ್ ಕಡೆಯವಳು ಅಲ್ಲ. ಅದಕ್ಕೆ ಹತ್ತಿರದವಳು ಅಂತ ಹೇಳೊಕು ಸಮಯ ಕೊಡದೆ ಡ್ರೆಸ್ ಛೇಂಜ್ ಮಾಡಿ ಬನ್ನಿ ಎಂಬ ಆದೇಶಕ್ಕೆ ತಲೆಭಾಗ ಬೇಕಾಯಿತು.
ಮೊದಲೆ ಮಗಳ ಹತ್ತಿರ ಮತ್ತು ಇಂಟರ್ನೆಟ್ ನಲ್ಲಿ ಸ್ವಿಂಮಿಂಗ್ ಮೇಲೆ ಸ್ವಲ್ಪ ವಿಷಯ ತಿಳಿದು ಕೊಂಡಿದ್ದೆ. ಮೊದಲ ದಿನ ಉತ್ಸಾಹದಿಂದಲೇ ಈಜುಕೊಳಕ್ಕೆ ಇಳಿದೆ. ಜೀವನದಲ್ಲಿ ಮೊದಲ ಬಾರಿ ಸ್ವಿಮಿಂಗ್ ಪೂಲ್ ಗೆ ಇಳಿದ ಕ್ಷಣ. ಮೊದಲು ಐದು ಸುತ್ತು ನೀರಲ್ಲಿ ನಡೆದಾಡಲು ಹೇಳಿದರು. ಅವರು ಹೇಳಿದ ಪ್ರಕಾರ ನಡೆದಾಡಿದೆ. ಆಗ ಚಿಕ್ಕ ವಯಸ್ಸಿನಲ್ಲಿ ಸ್ವಿಮಿಂಗ್ ಪೂಲ್  ಬಗ್ಗೆ ಇದ್ದ ಅಭಿಪ್ರಾಯ ಮತ್ತು ಸಿನಿಮಾದಲ್ಲಿ ಕಣ್ಣು ಬಾಯಿ ಬಿಟ್ಟು ನೋಡಿದ್ದು ನೆನಪಾಯಿತು.  ಗತಕಾಲದ ನೆನಪನ್ನು ಮೆಲುಕು ಹಾಕುತ್ತಾ ಮೊದಲ ದಿನ ಅವರು ಕೇಳಿದ ಹಾಗೆ ಮಾಡಿದೆ.
 ಅಲ್ಲಿ ಚಿಕ್ಕ ಮಕ್ಕಳು ಈಜುವುದು ನೋಡುವುದೆ ಚಂದ. ಆದರೆ ಕೆಲವು ಪಾಲಕರು ತೀರ ಚಿಕ್ಕ ಮಕ್ಕಳನ್ನು ಕರೆದು ತರುತ್ತಾರೆ. ಫೊಲ್ ಗೆ ಇಳಿಯಲು ಹೆದರಿ ಮೇಲೆ ನಿಂತು ಜೋರಾಗಿ ಅಳುತ್ತಾರೆ. ಅವರು ಅಳುವುದು ನೋಡಲು ಆಗುವುದಿಲ್ಲ. ಈ ಕೋಚ್ ಗಳಿಗೊ ವಿಧಿಯಿಲ್ಲ. ಪಡೆದ ಹಣಕ್ಕೆ ಒತ್ತಾಯ ಪೂರ್ವಕವಾಗಿ ಹೇಳಿಕೊಡಲೆ ಬೇಕು. ತುಂಬಾ ಒತ್ತಾಯ ಪೂರ್ವಕವಾಗಿ ಅವರನ್ನು ನೀರಿಗೆ ಇಳಿಸುತ್ತಾರೆ. ಮಕ್ಕಳೆ ಸ್ವಲ್ಪ ಭುದ್ದಿ ಬಂದ ಮೇಲೆ ಇಷ್ಟ ಪಟ್ಟು  ಬಂದು ಸೇರಿದರೆ ಚಂದ. ಯಾಕೆ  ಒತ್ತಾಯ ಪೂರ್ವಕವಾಗಿ ತುಂಬಾ ಚಿಕ್ಕ ವಯಸ್ಸಿನ ಅಂದರೆ ಐದಾರು ವರುಷದ ಮಕ್ಕಳನ್ನು ಕರೆ ತರುವರೋ? ಅಷ್ಟೊಂದು ಅವಸರವೇಕೆ? ಒಮ್ಮೆ ಮಕ್ಕಳ ಅಪ್ಪ-ಅಮ್ಮನ ಹತ್ತಿರ ಕೇಳೆ ಬಿಡೋಣ ಎಂದು ಅನಿಸಿತು. ಆದ್ರೆ ಅದು ಅಧಿಕ ಪ್ರಸಂಗವಾಗುವುದು ಎಂದು ನನ್ನ ಕಲಿಕೆಯ ಮೇಲೆ ಗಮನಕೊಟ್ಟೆ.
ಮೊದಲ ದಿನ ಯಾವ ರೀತಿಯು ತೊಂದರೆ ಆಗದೆ ಒಂದು ರೀತಿಯಲ್ಲಿ ಮುಗಿಯಿತು.  ಅದೇ ಉತ್ಸಾಹದಲ್ಲಿ ಎರಡನೇ ದಿನ ಹೋದೆ. ಅಲ್ಲಿ ಹೋಗಿದ್ದೆ ಸೆಕ್ಯುರಿಟಿ ಗಾರ್ಡ ಅಂದ, “ಮೇಡಮ್ ಇವತ್ತು ಸ್ವಿಮಿಂಗ್ ಕ್ಲಾಸ್ ಇಲ್ಲ. ನಾಳೆ ಬನ್ನಿ. ಈ ದಿನದ ಕ್ಲಾಸ್ ನಿಮಗೆ ಇನ್ನೊಂದು ದಿನ  ಕೊಡಲಾಗುತ್ತದೆ” ಎಂದು ಹೇಳಿ ಕಳುಹಿಸಿದ. ಇವನು ಕ್ಲಾಸ್ ಇಲ್ಲ ಅಂತ ಹೇಳಿದ್ದು ನನಗೆ ತಲೆಗೆ ಹೊಡೆದಂತಾಗಿತ್ತು. ಕ್ಲಾಸ್ ನನಗೆ ಸಿಗಬಹುದು. ಆದರೆ ನನಗೆ ಬೆಸರ ಆಗಿದ್ದು  “ದ್ವೀತಿಯ ವಿಗ್ನ” ವಾಯಿತೆಂದು. ಮೊದಲೆ ಹೇಳಿದರೆ ಎರಡು ದಿನ ಬಿಟ್ಟೆ ಸೇರುತ್ತಿದ್ದೆ. ಮೊದಲೆ ಅಳುಕಿತ್ತು, ಕಲಿತಿನೋ, ಇಲ್ಲವೋ ಎಂದು. ಈಗ ಮೇಲಿಂದ ದ್ವೀತಿಯ ವಿಗ್ನ ವೆಂಬ ಅಪಶಕುನ. ನನ್ನ ಬೆಸರವನ್ನು ಮನೆಯಲ್ಲಿ ಗಂಡನ ಬಳಿ ಹೇಳಿಕೊಂಡೆ. ಅವರು ನಕ್ಕು, “ಯಾವಾಗ ಇಷ್ಟು ಮೂಡನಂಬಿಕೆಯನ್ನು ನಂಬೋಕೆ ಶುರು ಮಾಡಿದೆ ಎಂದು ಹೇಳಿ ಇಷ್ಟ ಪಟ್ಟು ಸೇರಿದ್ದಿಯಾ, ಶ್ರದ್ದೆಯಿಂದ ಕಲಿ” ಎಂದು ಹೇಳಿದರು. ಏನೋ ನಿಟ್ಟುಸಿರು ಬಿಟ್ಟು ಕೊಟ್ಟ ಹಣಕ್ಕೆ ಹದಿನೈದು ಕ್ಲಾಸ್ ಮುಗಿಸಿದರಾಯಿತು. ಕಲಿತರೆ ಖುಷಿ, ಇಲ್ಲ ಅಂದರೆ ಪ್ರಯತ್ನ ಪಟ್ಟೆ ಎಂಬ  ಸಮಾಧಾನ.   
ಎರಡನೇ ಕ್ಲಾಸ್ಗೆ ಕಾಲಿಟ್ಟೆ. ಇಂದು ಸ್ವಿಮಿಂಗ್ ನ ಬಿಸಿ ತಟ್ಟಿತು. ನೀರಲ್ಲಿ ಉಸಿರು ಹಿಡಿಯುವುದು ಅಷ್ಟು ಸುಲಭ ಅಲ್ಲ. ಆ ಕ್ಲೊರಿನ್ ನೀರು ಮೂಗಿಗೆ ಹೋದರೆ ಇನ್ನೊಂದು ಕಷ್ಟ. ಏನೋ ಎರಡು-ಮೂರು ದಿನದಲ್ಲಿ  ಪ್ಲೋಟ್ ಮಾಡೋದ್ ಒಂದ್ ಕಲಿತೆ. ಫೋಲ್ ನಲ್ಲಿ ಯಾವ ತೊಂದರೆಯು ಇಲ್ಲದೆ ಈಜಬಹುದು. ಒಳ್ಳೆ ಸೆಕ್ಯುರಿಟಿ ಇರತ್ತೆ. ಸ್ವಲ್ಪ ಏನಾದರು ಆದ್ರೆ ಕೊಚ್ ಗಳು ಓಡಿ ಬರುತ್ತಾರೆ. ಆದ್ರೆ ನಮ್ಮ ಕೋಚ್ ಹಳ್ಳಿಯಲ್ಲಿ ಓಪನ್ ಬಾವಿ ಯಲ್ಲಿ ಕಲಿತವರಂತೆ. ನಾವು ಆ ತರ ಮಾಡುವುದು ಸುಲಭದ ಮಾತಲ್ಲ. ಆದರೆ ಅಲ್ಲಿನ ನೀರು ಚನ್ನಾಗಿ ಇರುತ್ತದೆ. ಆದರೆ ಇಲ್ಲಿನ ದೊಡ್ಡ ತಲೆನೋವು ಅಂದರೆ ಸ್ವಿಮಿಂಗ್ ಕ್ಲಾಸ್ ನ  ಕ್ಲೊರಿನ್ ನೀರು.
ಸುಮಾರು ಎಂಟು-ಹತ್ತು ಕ್ಲಾಸಿಗೆ ಬರೋ ವರೆಗೆ ಸ್ವಿಮಿಂಗ್ freeatyle ಕಲಿತೆ. ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ. ಆದರೆ ಒಳ್ಳೆಯ ವ್ಯಾಯಾಮ.  ಸ್ವಿಮಿಂಗ್ ಮಾಡೋದು ಮನಸ್ಸು ಮತ್ತು ದೇಹ ಎರಡಕ್ಕು ಒಳ್ಳೆಯದೆ. ಹೇಗೋ ಹದಿನೈದು ದಿನದ ಯಾತ್ರೆ ಮುಗಿಯಿತು. ತಕ್ಕ ಮಟ್ಟಿಗೆ ಈಜುವುದನ್ನು ಕಲತೆ. ಚಿಕ್ಕ ವಯಸ್ಸಿನ  ಈಜುಕೊಳದ ಕನಸು ನನಸಾಗಿತ್ತು. ಇದು ನನಗೆ ಬಹಳ ಖುಶಿಯಾದ ಸಂಗತಿ ಆಗಿತ್ತು. ಅದು ಅಲ್ಲದೆ ವಿಡಿಯೋ ಮಾಡಿ ಅಪ್ಪ-ಅಮ್ಮನಿಗೆ ಕಳಿಸಿ ಖುಶಿ ಹಂಚಿಕೊಂಡಿದ್ದೆ.