ಸವತೆಕಾಯಿ vs ವೇಟ್
ಲಾಸ್
“ಐವತ್ ರೂಪಾಯ್ಗೆ ಮೂರ್ ಕೆಜಿ ಸವತೆಕಾಯ್….ಕೋಲಾರ್ ಕಡೆ ಎಳೆ ಸವತೆಕಾಯ್….”
ಅಂತ ಕೀಳು ದ್ವನಿಯಲ್ಲಿ ಒಂದೇ ಸಮನೆ ರಸ್ತೆ ಕಡೆಯಿಂದ ದ್ವನಿ ಕೇಳಿ ಬರುತ್ತಿತ್ತು. ಸವತೆಕಯಿ ಅಂದ
ತಕ್ಷಣ ನನ್ನ ಕಿವಿ ನೆಟ್ಟಗಾಯಿತು. ಈ ನಡುವೆ ವೆಟ್ ಲಾಸ್ ಮತ್ತು ಯೋಗ ಅಂತ ಶುರು ಮಾಡಿದ ಮೇಲೆ ಆದಷ್ಟು
ಬಾಯಿಯನ್ನು ಕುರುಕಲು ತಿಂಡಿಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದೆ. ಇಷ್ಟು ಕಡಿಮೆ ಬೆಲೆಗೆ ಎಳೆ
ಸವತೆಕಾಯಿ ಸಿಕ್ಕಿದರೆ ಕೇಳಬೇಕೆ. ಇದನ್ನು ತೆಗೆದುಕೊಂಡು ಪ್ರೇಡ್ಜ್ ನಲ್ಲಿ ಇಟ್ಟರೆ ಹದಿನೈದು ದಿನಕ್ಕೆ
ಯಾವ ಯೋಚನೆ ಇಲ್ಲ. ಅದು ಅಲ್ಲದೆ ಸವತೆಕಾಯಿ ತಿಂದರೆ ಬೇಗ ಸಣ್ಣಗಾಗುತ್ತಾರೆ ಅಂತ ಯೋಗ ಕ್ಲಾಸ್ ನಲ್ಲಿ
ಹೇಳಿದ್ದು ನೆನಪಾಯಿತು. ಹದಿನೈದು ದಿನದಲ್ಲಿ ಒಂದೆರಡು ಕೆ.ಜಿ. ಇಳಿದರೆ ಅಷ್ಟೇ ಸಾಕು ಅಂತ ಮನಸ್ಸಿನಲ್ಲಿ
ಲೆಕ್ಕಚಾರ ಹಾಕಿ ಮೂರು ಕೆ,ಜಿ ಸವತೆಕಾಯಿ ನಮ್ಮ ಮನೆ ಪ್ರೀಡ್ಜ್ ನಲ್ಲಿ ರಾರಾಜಿಸಿದವು.
ಮೊದಲ ದಿನ ಬಹಳ ಉತ್ಸಾಹದಲ್ಲಿ ಸವತೆಕಾಯಿ ಯನ್ನು ಗೋಲಾಕಾರದಲ್ಲಿ ಕತ್ತರಿಸಿ
ಉಪ್ಪು, ಖಾರ ಹಾಕಿ ತಿಂದೆ. ಬಾಯಿಗು ರುಚಿ ಅನಿಸಿತು. ಹೀಗೆ ಮಾಡಿದರೆ ಸ್ವಲ್ಪ ಸಣ್ಣಗಾಗುವುದಂತು ಕಂಡಿತ
ಅಂತ ಲೆಕ್ಕಚಾರ ಹಾಕಿದೆ. ಮಾರನೆ ದಿನ ಸಣ್ಣಗೆ ಹೆಚ್ಚಿ ಉಪ್ಪು ಖಾರ ಹಾಕಿ ತಿಂದೆ. ಪರವಾಗಿಲ್ಲ. ಆದರು
ಯಾಕೋ ಈ ಸವತೆಕಾಯಿ ತಿಂದರೆ ಶೀತ ಆಗುವುದು ಎಂದನಿಸಿತು. ಮತ್ತೆರಡು ದಿನ ಏನೇನೊ ಸರ್ಕಸ್ ಮಾಡಿ ಸವತೆಕಾಯಿ
ತಿಂದೆ. ಪ್ರೀಡ್ಜ್ ನಲ್ಲಿ ಇಟ್ಟರು ಯಾಕೋ ಸವತೆಕಾಯಿ ಬಾಡುವುದು ಎಂದನಿಸಿತು.
ಮಾರನೆ ದಿನ ಅಡುಗೆ ಮನೆ ಡಬ್ಬಗಳನ್ನು ಕ್ಲೀನ್ ಮಾಡುವಾಗ ಅಕ್ಕಿ ಹಿಟ್ಟು
ನೋಡಿದೆ. ತುಂಬಾ ದಿನ ಆಯಿತು ಉಪಯೋಗಿಸದೆ ಹಾಗೆ ಇಟ್ಟರೆ ಹಾಳಾಗುವುದು ಎಂದು ಯೋಚಿಸಿ, ಸವತೆಕಾಯಿ,ಈರುಳ್ಳಿ
ಹಾಕಿ ಒಡಪೆ(ಅಕ್ಕಿ ರೊಟ್ಟಿ) ಮಾಡಿವ ಪ್ಲಾನ್ ಮಾಡಿದೆ. ಚನ್ನಾಗಿ ಎಣ್ಣೆ ಹಾಕಿ ಬೆಯಿಸಿದ ರೊಟ್ಟಿ,
ಪಕ್ಕದಲ್ಲಿ ಬೆಣ್ಣೆ, ಊರಿನ ಜೋನಿ ಬೆಲ್ಲ, ಎಲ್ಲವು ಸೇರಿ ಒಂದೆರಡು ತುತ್ತು ಜಾಸ್ತಿಯೆ ಇಳಿಯಿತು.
ರೊಟ್ಟಿ ತಿನ್ನಬೇಕಿದ್ದರೆ ಮಗಳಿಗೆ ತಕ್ಷಣ ನೆನಪಾಯಿತು, “ಅಮ್ಮಾ, ಅಜ್ಜಿ
ಮಾಡೋ ಸವತೆಕಾಯಿ ಕರೆ(ಶೇವ್) ಮಾಡು. ಹೇಗೋ ಪ್ರೀಡ್ಜ್ ತುಂಬಾ ಸವತೆಕಾಯಿ ಇದೆ” ಅಂತ ಇನ್ನೊಂದು ಹೊಸ
ಐಡಿಯಾ ಕೊಟ್ಟಳು. ಅದಕ್ಕೆ ಮನೆಯವರು ಸಾಥ್ ನೀಡಿದರು. ಏನ್ ಮಾಡೋದು ಮೇಜೋರಿಟಿ ಸವತೆಕಾಯಿ ಕರೆಯ ಮೇಲೆ
ಇತ್ತು. ನನ್ನ ಮನಸ್ಸು ಅದನ್ನೆ ಹಂಬಲಿಸುತ್ತಿತ್ತು. ಮಾರನೆ ದಿನ ಸವತೆಕಾಯಿ ಕರೆ ಮಾಡುವ ಪ್ಲಾನ್ ಯಶಸ್ಸಾಯಿತು.
ನನ್ನ ಸವತೆಕಾಯಿ ದಯಟ್ ನಿಧಾನವಾಗಿ ಮೂಲೆಗೆ ಸರಿಯುತ್ತಿತ್ತು.
ಇನ್ನು ಮೂರ್ನಾಲ್ಕು ಸವತೆಕಾಯಿ ಪ್ರೀಡ್ಜ್ ನಲ್ಲಿ ರಾರಾಜಿಸುತ್ತಿತ್ತು.
ಒಂದು ದಿನ ಫಲಾವ ಮಾಡಿ ಅದಕ್ಕೆ ಸವತೆಕಾಯಿ ರೈತ ಮಾಡಿದೆ. ಇನ್ನೊದು ದಿನ ಮಜ್ಜಿಗೆ ಹುಳಿ, ಹೀಗೆ ದಿನ
ಒಂದೊಂದು ಮಾಡಿ ಪ್ರೀಡ್ಜ್ ನಲ್ಲಿ ಇದ್ದ ಸವತೆಕಾಯಿ ಖಾಲಿ ಮಾಡಿದೆ.
ಮರುದಿನ ಅದೇ ದ್ವನಿ “ಐವತ್
ರೂಪಾಯ್ಗೆ ಮೂರ್ ಕೆಜಿ ಸವತೆಕಾಯ್….ಕೋಲಾರ್ ಕಡೆ ಎಳೆ ಸವತೆಕಾಯ್….” ಕೇಳಿಸಿತು. ಅಪ್ಪಿ ತಪ್ಪಿಯು ಆ ಕಡೆ ಹೋಗಲಿಲ್ಲ.