Wednesday, February 26, 2020

ಚಿತ್ರದುರ್ಗದ ಕಲ್ಲಿನ ಕೋಟೆ


                            ಚಿತ್ರದುರ್ಗದ ಕಲ್ಲಿನ ಕೋಟೆ

“ಚಿತ್ರದುರ್ಗದ ಕಲ್ಲಿನ ಕೋಟೆ…” ಈ ಹಾಡು ಕೇಳಿದ ತಕ್ಷಣ ನೆನಪಾಗುವುದೆ ವಿಷ್ಣುವರ್ದನ ಸರ್ ಮತ್ತು ಜಯಂತಿ ಅಮ್ಮ. ಚಿಕ್ಕ ವಯಸ್ಸಿನಲ್ಲಿ ನಾಗರಹಾವು ಸಿನಿಮಾ ನೋಡಿದಾಗಲೆ ಅಂದುಕೊಂಡಿದ್ದೆ ಯಾವಾಗಾದರು ದುರ್ಗದ ಕೋಟೆ ಹತ್ತಬೇಕು ಅಂತ.
ನಮ್ಮೂರಿಂದ ಬೆಂಗಳೂರಿಗೆ ಹೋಗುವಾಗ ಯಾವಾಗಲು ಚಿತ್ರದುರ್ಗದ ಮೇಲೆ ಹೋಗಬೇಕು. ಅಲ್ಲಿ ಬೇಕಾದಷ್ಟು ಬಾರಿ ಊಟ ಅಥವಾ ತಿಂಡಿ ತಿಂದು ಹೋಗಿದ್ವಿ. ಆದರೆ ಯಾವಾಗಲು ಕೋಟೆ ಹತ್ತಬೇಕು ಅಂತ ಅಂದುಕೊಂಡಾಗಲೆಲ್ಲ ಏನಾದರು ಕೆಲಸ ಅಥವಾ ಊರಿಗೆ ಹೋಗುವ ಅವಸರದಲ್ಲಿ ನಾಳೆ..ನಾಳೆ ಅಂತ ಅಂದುಕೊಂಡಿದ್ದು ಬರಲೆ ಇಲ್ಲ. ಮೊನ್ನೆ ಮಗಳು ಮದಕರಿ ನಾಯಕ ಪಾಠವನ್ನು ಓದುತ್ತಿದ್ದಳು. ಓಬವ್ವನ ಮೇಲೆ ಏನೇನೋ ಪ್ರಶ್ನೆ ಕೇಳುತ್ತಿದ್ದಳು. ಹಾಗೆ ಅಪ್ಪ-ಮಗಳ ಪ್ರಶ್ನೋತ್ತರದಲ್ಲಿ ಚಿತ್ರದುರ್ಗಕ್ಕೆ ಅಂತನೆ ಹೋಗಿ ಬರುವ ಪ್ಲಾನ್ ಮಾಡಿದೆವು.  ಯಾವ ಕೆಲಸದ ಒತ್ತಡವು ಇಲ್ಲದೆ ಚಿತ್ರದುರ್ಗಕ್ಕೆಂದೆ ಹೊರಟೆವು.
ಬಿಸಿಲು ನೆತ್ತಿಗೆ ಬರೋ ವೆಳೆಗೆ ಕೋಟೆ ಹತ್ತಿ-ಇಳಿಯ ಬೇಕು ಅಂತ ಮನೆಯನ್ನು ಸ್ವಲ್ಪ ಬೇಗ ಬಿಟ್ಟೆವು.ಅಲ್ಲಿನ ಒಂದು ಒಳ್ಳೆಯ (ಎಲ್ಲರ ಬಾಯಲ್ಲು ಕೇಳಿದ್ದು) ಹೋಟೆಲ್ಗೆ ಹೋದೆವು. ನನಗೆ ಆ ಹೋಟೆಲ್ ನಲ್ಲಿ ಬರೆದ ಬೊರ್ಡ ಬಾರಿ ವಿಚಿತ್ರವೆನಿಸಿತು. ಉದಾಹರಣೆಗೆ ನಿಮಗೆ ಖಾಲಿ ದೋಸೆಗೆ ಚಟ್ನಿ ಕೊಡಲಾಗುವುದು. ಪಲ್ಯ ಬೇಕಿದ್ದರೆ ಕೇಳಿ. ಪಲ್ಯಕ್ಕೆ ತುಪ್ಪ ಬೇಕಿದ್ದರೆ ಕೇಳಿ ತೆಗೆದುಕೊಳ್ಳಿ. ಹೀಗೆ ಎರಡು ಮೂರು ತರಹ ಬರೆದಿದ್ದರು. ಯಾವಾಗಲು ಪ್ಲೇಟ್ ನಲ್ಲಿ ಕೈ ತೊಳೆಯಬೇಡಿ. ಹೀಗೆ ಏನಾದರು ಬರೆದದ್ದು ನೋಡಿದೆ ಹೊರತು ಈ ತರಹ ಬೋರ್ಡ ಮೊದಲ ಬಾರಿ ನಾನು ನೋಡಿದ ಕಾರಣ ನನಗೆ ವಿಚಿತ್ರವೆನಿಸಿತು. ನಂತರ ಯೋಚಿಸಿದರೆ ಯಾವುದು ಹಾಳಾಗಬಾರದು ಎಂದು ಈ ನಿಯಮ ಮಾಡಿದ್ದಾರೆನೋ. ಬಂದವರ ಹತ್ತಿರ ಹೇಳಿದ್ದೆ ಹೇಳುತ್ತಾ ಇರುವುದಕಿಂತ ಬೋರ್ಡ ಹಾಕಿದರೆ ಮುಗಿಯಿತು. ಬೇಕಾದವರು ಓದಿಕೊಳ್ಳುತ್ತಾರೆ.  ಏನೆ ಆಗಲಿ ದೋಸೆ ಮಾತ್ರ ಸುಪರ್ ಆಗಿತ್ತು. ತುಪ್ಪ ಕೇಳಿ ತೆಗೆದುಕೊಂಡು ಚನ್ನಾಗಿ ತಿಂದೆವು.
ಸುಮಾರು ಎಂಟು ಗಂಟೆಯ ಹೊತ್ತಿಗೆ ಟಿಕೆಟ್ ತೆಗೆದುಕೊಂಡೆವು. ನಮಗೆ ಇಪ್ಪತೈದು ರೂಪಾಯಿ ಆದರೆ ಫಾರೆನರ್  ಅವರಿಗೆ ಮುನ್ನೂರು ರೂಪಾಯಿ. ಸ್ವಲ್ಪ ಅತಿ ಅನಿಸಿತು. ಎಲ್ಲಾ ಕಡೆ ಅವರಿಗೆ ಜಾಸ್ತಿನೆ. ಆದರೆ ಏಳು ಏಂಟು ಪಟ್ಟು ಜಾಸ್ತಿ ಇಡುವುದು ಅತಿ. ನಾವು ನಮ್ಮ ಟಿಕೆಟ್ ತೆಗೆದುಕೊಂಡು ಏಳು ಸುತ್ತಿನ ಕಲ್ಲಿನ ಗುಡ್ಡ ಹತ್ತಲು ಶುರು ಮಾಡಿದೆವು. ಅಲ್ಲಿ ಮ್ಯಾಪ್ ಹಾಕಿದ್ದರು. ಅದರ ಅನುಸಾರ ನೋಡುತ್ತಾ ಹೋದೆವು. ಮದ್ದು ಬಿಸುವ ಕಲ್ಲು, ಗಾರೆ ಬಿಸುವ ಕಲ್ಲು, ನೋಡಿದೆವು. ಕಲ್ಲಿನ ಮೆಟ್ಟಿಲು ಸುತ್ತಲು ಕಲ್ಲು ಬಂಡೆಗಳು. ಆದರು ಅಷ್ಟು ಕಷ್ಟ ಅಂತ ಅನಿಸಲಿಲ್ಲ.
ಇಲ್ಲಿ ನಮ್ಮೆಲ್ಲರಿಗೂ ಆಸಕ್ತಿ ಇರುವುದು ಒಬವ್ವನ ಕಿಂಡಿ. ನಾಗರಹಾವು ಸಿನಿಮಾದಲ್ಲಿ ತುಂಬಾ ಸೊಗಸಾಗಿ ತೋರಿಸಿದ ಕಾರಣವೋ, ಪುಸ್ತಕದಲ್ಲಿ ಓದಿದ ನೆನಪಿಗೆ ಬಹಳ ಉತ್ಸಾಹದಲ್ಲಿ ಹೋದೆವು. ಅಲ್ಲಿ ಎಲ್ಲಾ ಕಡೆ ನಾಮಫಲಕ ಹಾಕಿರುವ ಕಾರಣ ಗೈಡ್ ಏನು ಬೇಕಿಲ್ಲ. ಆದರು ಗೈಡ್ ತೆಗೆದುಕೊಳ್ಳುವುದು  ಅವರವರ ಆಸಕ್ತಿಗೆ ಬಿಟ್ಟಿದ್ದು.
ಅಲ್ಲಿ ಸ್ವಲ್ಪ ನೀರು ಹರಿಯುತ್ತಿತ್ತು. ಸ್ವಲ್ಪ ಮುಂದೆ ಓಬವ್ವನ ಕಿಂಡಿ. ಶತ್ರುಗಳು ನುಸುಳಿ ಬಂದು ಆಕೆ ಅವರನ್ನು ಸಾಯಿಸಿದ್ದು. ನಾವು ಅಲ್ಲಿ ಹೋಗಿ ಸ್ವಲ್ಪ ಪೋಟೋ ತೆಗೆದುಕೊಂಡು ಬಂದೆವು. ಬಂಡೆಯ ಮೇಲೆ ಕೆಲವರು ತಮ್ಮ ಹೆಸರು ಮತ್ತು ತಾವು ಪ್ರೀತಿಸುವವರ ಹೆಸರನ್ನು ಬರೆದಿದ್ದರು. ಬರೆಯಲು ಎಲ್ಲು ಪಟ್ಟಿ ಪೆನ್ನು ಸಿಗುವುದಿಲ್ಲವೇನೋ ಅನಿಸುವುದು.
ಆದದ ನಂತರ ಹಾಗೆ ಗುಡ್ಡ ಹತ್ತುತ್ತ ಕೆಲವು ದೇವಸ್ಥಾನಗಳು. ಪೂಜೆಗಳೆನು ನಡೆಯುತ್ತಿರಲಿಲ್ಲ. ಎಲ್ಲಾ ಕಲ್ಲಿನಲ್ಲಿ ಮಾಡಿರುವುದು. ಗುಡ್ಡದ ಮೇಲೆ ಹೋದ ಮೇಲೆ ಸುತ್ತಲಿನ ದೃಶ್ಯ ನೋಡಲು ತುಂಬಾ ಚನ್ನಾಗಿವೆ. ಸುತ್ತಲಿನ ಕಲ್ಲಿನ ಗುಡ್ಡ. ದೂರದಿಂದ ಕಾಣುವ ಗಾಳಿಯಂತ್ರ. ತುಂಬಾ ಸೊಗಸಾಗಿದೆ.
ಒಟ್ಟಿನಲ್ಲಿ ಒಮ್ಮೆ ದುರ್ಗದ ಕೋಟೆ ನೋಡುವಂತ ಜಾಗ.

No comments: