Friday, August 24, 2018

ಲಂಚ್ ಬಾಕ್ಸ್ ಗಾಗಿ ಕಲರ್ ಕಲರ್ ರೈಸ್ ಐಟಮ್ .


                      ಲಂಚ್ ಬಾಕ್ಸ್ ಗಾಗಿ ಕಲರ್ ಕಲರ್ ರೈಸ್ ಐಟಮ್  


  ಎಲ್ಲಾ ಮಹಿಳೆಯರ  ಒಂದು ಸಮಸ್ಯೆಯೆಂದರೆ ನಾಳೆಯ ಲಂಚ್ ಬಾಕ್ಸ್ ಗೆ ಏನ್ ಮಾಡ್ಲಿ ಅಂತ? ಬೆಳಗಿನ  ಅವಸರದಲ್ಲಿ ಫಟಾ- ಫಟ್ ಆಗುವ ಐಟಮ್ ಗಳೆ ಒಳ್ಳೆದು. ಅದು ಅಲ್ಲದೆ ಮಧ್ಯಾನ್ನ “ ತುತ್ತು ಅನ್ನ ತಿಂದರೆ ಹೊಟ್ಟೆಗೆ ತಂಪು ಮತ್ತು ಆರೋಗ್ಯಕ್ಕು ಒಳ್ಳೆದು “ ಅಂತ ಅಜ್ಜಿ ಹೇಳಿದ ನೆನಪಿಗೆ ಬೇಗ-ಬೇಗ ಆಗುವಂತಹ ಕೆಲವು ರೈಸ್ ಐಟಮ್ ಗಳನ್ನು ಕೆಳಗೆ ಲಗುತ್ತಿಸಿದ್ದೆನೆ
                          
ಟೊಮೆಟೊ ಬಾತ್  

ಬೇಕಾಗುವ ಸಾಮಗ್ರಿಃ
ಟೊಮೆಟೊ 2, ಶಾ ಜೀರಿಗೆ ಅರ್ಧ ಚಮಚ, ಸೊಂಪ್ ಅರ್ಧ ಚಮಚ, ಬೆಳ್ಳುಳ್ಳಿ 4 ರಿಂದ 5 ಎಸಳು, ಅರ್ಧ ಇಂಚು ಶುಂಠಿ,  ಸಣ್ಣಗೆ ಹೆಚ್ಚಿದ ಈರುಳ್ಳಿ ಒಂದು ಕಪ್, ಕೊತ್ತುಂಬರಿ ಸೊಪ್ಪು,  ಉಪ್ಪು, ಅಚ್ಚ ಖಾರದ ಪುಡಿ, ಇಂಗು ಸ್ವಲ್ಪ,ಅರ್ಧ ಚಮಚ ಗರಂ ಮಸಾಲಾ,  1 ಕಪ್ ಅಕ್ಕಿ, ತುಪ್ಪ ಒಂದು ಚಮಚ, ನೀರು

ತಯಾರಿಸುವ ವಿಧಾನಃ
ಮೊದಲು ಟೊಮೆಟೊವನ್ನು ಬೇಯಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಸೊಂಪು ಹಾಕಿ ರುಬ್ಬಿಕೊಳ್ಳಿ. ಈಗ ಅದೆ ಜಾರಿಗೆ ಬೇಯಿಸಿದ ಟೊಮೆಟೊ, ಖಾರಕ್ಕೆ ತಕ್ಕಷ್ಟು ಅಚ್ಚ ಖಾರದ ಪುಡಿ, ಗರಂ ಮಸಾಲ ಹಾಕಿ ರುಬ್ಬಿ ಕೊಳ್ಳಿ.
ಕುಕ್ಕರಿಗೆ ಸ್ವಲ್ಪ ಎಣ್ಣೆ ಹಾಕಿ ಇದಕ್ಕೆ ಶಾ ಜೀರಿಗೆ ಹಾಕಿ. ಹಾಗೆ ಸ್ವಲ್ಪ ಇಂಗು ಹಾಕಿ. ನಂತರ ಈರುಳ್ಳಿ ಹಾಕಿ ಚನ್ನಾಗಿ ಫ್ರೈ ಮಾಡಿ. ಈಗ ರುಬ್ಬಿದ ಮಸಾಲಾ ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವ ವರೆಗೆ ಫ್ರೈ ಮಾಡಿ. ಈಗ ತೊಳೆದ ಅಕ್ಕಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈಗ ಎರಡು ಕಪ್ ನೀರು ಹಾಕಿ ಕುಕ್ಕರ್  ಅನ್ನು ಮೂರು ವಿಸಲ್ ಕೂಗಿಸಿ. ತಣ್ಣಗಾದ ಮೇಲೆ ಲಿಡ್ ತೆಗೆದು ಕುತ್ತುಂಬರಿ ಸೊಪ್ಪು ಮತ್ತು ತುಪ್ಪ ಹಾಕಿ   ಒಮ್ಮೆ ಚನ್ನಾಗಿ ಕೈಯಾಡಿಸಿ. 


ಕರಿ ಬೇವಿನ ಅನ್ನ 

ಬೇಕಾಗುವ ಸಾಮಗ್ರಿಃ
1 ಕಪ್ ಅನ್ನ, ಅರ್ಧ ಕಪ್ ಕರಿಬೇವಿನ ಸೊಪ್ಪು, ಅರ್ಧ ಕಪ್ ತೆಂಗಿನ ತುರಿ,  ಸ್ವಲ್ಪ ಇಂಗು, ಸ್ವಲ್ಪ ಅರಿಶಿಣ, ಖಾರಕ್ಕೆ ತಕ್ಕಷ್ಟು ಬ್ಯಾಡಗಿ ಮೆಣಸು,  5 ರಿಂದ 6 ಎಸಳು ಬೆಳ್ಳುಳ್ಳಿ, ಹುಣಸೆ ಹಣ್ಣು,  ಉದ್ದಿನ ಬೇಳೆ ಅರ್ಧ ಚಮಚ, ಅರ್ಧ ಚಮಚ ಸಾಸಿವೆ,   ಎಣ್ಣೆ, ಸಣ್ಣಗೆ ಹೆಚ್ಚಿದ  ಈರುಳ್ಳಿ ಒಂದು, ಸಣ್ಣಗೆ ಹೆಚ್ಚಿದ ಟೊಮೆಟೊ ಒಂದು, (ಬೇಕಿದ್ದರೆ ಬೇರೆ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಾಕಿಕೊಳ್ಳಬಹುದು)

ತಯಾರಿಸುವ ವಿಧಾನಃ      
ಮೊದಲು ಮಿಕ್ಸಿ ಜಾರಿಗೆ ತೆಂಗಿನ ತುರಿ, ಬ್ಯಾಡಗಿ ಮೆಣಸು, ಹುಣಸೆಹಣ್ಣು, ಕರಿಬೇವು, ಅರಿಶಿಣ,ಬೆಳ್ಳುಳ್ಳಿ,ಹಾಕಿ ಡ್ರೈ ಆಗಿ ರುಬ್ಬಿಕೊಳ್ಳಿ. ಈಗ ಒಂದು ಬಾಣೆಲೆಗೆ ಎಣ್ಣೆ ಹಾಕಿ ಇದಕ್ಕೆ ಉದ್ದಿನ ಬೇಳೆ, ಸಾಸಿವೆ, ಹಾಕಿ. ಇದು ಚಟ ಪಟ ಅನ್ನು ವಾಗ ಇಂಗು ಹಾಕಿ. ಈಗ ಈರುಳ್ಳಿ ಹಾಕಿ ಚನ್ನಾಗಿ ಪ್ರೈ ಮಾಡಿ. ಇದು ಪ್ರೈ ಆದ ಮೇಲೆ ಟೊಮೆಟೊ ಹಾಕಿ. ಇದು ಚನ್ನಾಗಿ ಪ್ರೈ ಆಗಲಿ. (ಈಗ ಬೇಕಿದ್ದರೆ ಸಣ್ಣಗೆ ಹೆಚ್ಚಿದ ಬೇರೆ ತರಕಾರಿಗಳನ್ನು ಹಾಕಬಹುದು.) ಈಗ ರುಬ್ಬಿದ ಮಸಾಲೆ ಹಾಕಿ. ಇದನ್ನು ಹಸಿ ವಾಸನೆ ಹೋಗುವ ವರೆಗೆ ಚನ್ನಾಗಿ ಪ್ರೈ ಮಾಡಿ. ಈಗ ಮೊದಲೆ ಮಾಡಿಟ್ಟ ಅನ್ನ ಹಾಕಿ  ಮಿಕ್ಸ್ ಮಾಡಿ. ಈಗ ಸ್ವಲ್ಪ ತುಪ್ಪ ಹಾಕಿ ಒಮ್ಮೆ ಚನ್ನಾಗಿ ಕೈಯಾಡಿಸಿ. 


ಶೇಂಗಾ (ಕಡ್ಲೆ ಬೀಜ) ಅನ್ನಃ

ಬೇಕಾಗುವ ಸಾಮಗ್ರಿಃ
ಅನ್ನ ಒಂದು ಕಪ್, ಸ್ವಲ್ಪ ಹುರಿದು ಸಿಪ್ಪೆ ತೆಗೆದ ಶೇಂಗಾ ಅರ್ಧ ಕಪ್, ಎಣ್ಣೆ, ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, 1 ಚಮಚ ಉದ್ದಿನ ಬೇಳೆ,  1ಚಮಚ ಕಡ್ಲೆ ಬೇಳೆ, 1 ಚಮಚ ಜೀರಿಗೆ, 1ಚಮಚ ಸಾಸಿವೆ, 1ಚಮಚ ಎಳ್ಳು, 5ರಿಂದ 6 ಬ್ಯಾಡಗಿ ಮೆಣಸು, ಕಾಲು ಕಪ್ ತೆಂಗಿನ ತುರಿ, 5 ರಿಂದ  6ಎಸಳು ಕರಿಬೇವು, ಚಿಟಿಕೆ ಇಂಗು, 2ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, (ಬೇಕಿದ್ದರೆ ಬೆಳ್ಳುಳ್ಳಿ 4 ರಿಂದ 5 ಎಸಳು ಹಾಕಬಹುದು.)

ತಯಾರಿಸುವ ವಿಧಾನಃ
ಮೊದಲು ಅನ್ನವನ್ನು ಉದುರುದುರಾಗಿ ಮಾಡಿ ಇಡಿ. ನಂತರ ಒಂದು ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ನಂತರ ಕಾಲು ಕಪ್ ಶೇಂಗಾ, ಉದ್ದಿನ ಬೇಳೆ, ಕಡ್ಲೆ ಬೇಳೆ,ಜೀರಿಗೆ, ಸಾಸಿವೆ, ಎಳ್ಳು, ಬ್ಯಾಡಗಿ ಮೆಣಸು,( ಬೇಕಿದ್ದರೆ ಬೆಳ್ಳುಳ್ಳಿ) ತೆಂಗಿನ ತುರಿ ಎಲ್ಲಾ ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ. ಈಗ ಇದನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿಟ್ಟುಕೊಳ್ಳಿ.
ಇನ್ನೊಮ್ಮೆ ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಕಾಲು ಕಪ್(ಉಳಿದ) ಶೇಂಗಾ, ಹೆಚ್ಚಿದ ಈರುಳ್ಳಿ, ಕರಿಬೇವು, ಇಂಗು ಎಲ್ಲಾ ಒಂದಾದ ಮೇಲೆ ಒಂದು ಹಾಕಿ ಹಾಕಿ ಫ್ರೈ ಮಾಡಿ.ಈಗ ಇದಕ್ಕೆ ಮೊದಲೆ ಮಾಡಿಟ್ಟ ಅನ್ನ ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಮೇಲಿಂದ ತುಪ್ಪ ಹಾಕಿ ಚನ್ನಾಗಿ ಕೈಯಾಡಿಸಿ ಸರ್ವ ಮಾಡಿ.


ಕುತ್ತುಂಬರಿ ಸೊಪ್ಪಿನ ಅನ್ನಃ

ಬೇಕಾಗುವ ಸಾಮಗ್ರಿಃ      
ಅನ್ನ 1 ಕಪ್,  ಈರುಳ್ಳಿ 1, ಲವಂಗ 4, ಚಕ್ಕೆ 2, ಹಸಿಮೆಣಸು 2, ಕುತ್ತುಂಬರಿ ಸೊಪ್ಪು 1 ಹಿಡಿ, ಶುಂಠಿ ಬೆಳ್ಳುಳ್ಳಿ ಪೆಸ್ಟ್ 1 ಚಮಚ, ಗೊಡಂಬಿ ಅರ್ಧ ಭಾಗ ಮಾಡಿದ್ದು ಅರ್ಧ  ಕಪ್, ಟೊಮೆಟೊ 1, ಹಸಿ ಬಟಾಣಿ ಸ್ವಲ್ಪ, (ಬೇಕಿದ್ದರೆ ಬೇರೆ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಾಕಿಕೊಳ್ಳಬಹುದು) ಎಣ್ಣೆ, ಉಪ್ಪು,ತುಪ್ಪ

ತಯಾರಿಸುವ ವಿಧಾನಃ
ಮೊದಲು ಅನ್ನವನ್ನು ಸ್ವಲ್ಪ ಉದುರುದುರಾಗಿ ಮಾಡಿಟ್ಟುಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಹೆಚ್ಚಿದ ಈರುಳ್ಳಿ, ಲವಂಗ,ಚಕ್ಕೆ, ಹಸಿಮೆಣಸು, ಕುತ್ತುಂಬರಿಸೊಪ್ಪು, ಎಲ್ಲಾ ಹಾಕಿ ರುಬ್ಬಿಕೊಳ್ಳಿ.
ಒಂದು ಬಾಣೆಲೆಗೆ ಎಣ್ಣೆ ಹಾಕಿ ಶುಂಟಿ ಬೆಳ್ಳುಳ್ಳಿ ಪೆಸ್ಟ, ಹೆಚ್ಚಿದ ಈರುಳ್ಳಿ ಹಾಕಿ ಪ್ರೈ ಮಾಡಿ. ಈಗ ಸಣ್ಣಗೆ ಹೆಚ್ಚಿದ ಟೊಮೆಟೊ ಹಾಕಿ ಪ್ರೈ ಮಾಡಿ. ಈಗ ಬಟಾಣಿ (ಬೇಯಿಸಿದ್ದು) ಹಾಕಿ.(ಬೇಕಿದ್ದರೆ ಬೇರೆ ತರಕಾರಿಗಳನ್ನು ಹಾಕಬಹುದು.) ಈಗ ರುಬ್ಬಿದ ಮಸಾಲೆ ಮತ್ತು ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಪ್ರೈ ಮಾಡಿ. ಈಗ ಮೊದಲೆ ಮಾಡಿಟ್ಟ ಅನ್ನ ಮಿಕ್ಸ್ ಮಾಡಿ ಚನ್ನಾಗಿ ಕೈಯಾಡಿಸಿ. ಈಗ ತುಪ್ಪದಲ್ಲಿ ಗೊಡಂಬಿಯನ್ನು ಹೊಂಬಣ್ಣ ಬರುವ ವರೆಗೆ ಪ್ರೈ ಮಾಡಿ ಅನ್ನದ ಮೇಲೆ ಹಾಕಿ.








No comments: