ನಾಗರ ಪಂಚಮಿ ನಾಡಿಗೆ ದೊಡ್ಡದು….
ನಿನ್ನೆ ಟಿ.ವಿ. ನೋಡ್ತಾ ಇದ್ದೆ. ಸುಬ್ರಮಣ್ಯ
ದೇವಸ್ಥಾನದ ಬಗ್ಗೆ ಮತ್ತು ನಾಗರ ಹಾವಿನ ಬಗ್ಗೆ ಯಾವುದೋ
ಕಾರ್ಯಕ್ರಮ ಬರ್ತಾ ಇತ್ತು. ಆಗಲೇ ನೆನಪಾದದ್ದು ಓ ನಾಳೆ ನಾಗರ ಪಂಚಮಿ ಎಂದು. ಶ್ರಾವಣ ಮಾಸ ಶುರುವಾಯಿತೆಂದರೆ
ಹಬ್ಬಗಳ ಸಾಲೆ-ಸಾಲು. ನಮಗೆ ಮರೆತು ಹೋದರು ಈ ಟಿ,ವಿ,ಯವರು ಒಳ್ಳೊಳ್ಳೆ ಕಾರ್ಯಕ್ರಮ ಮಾಡಿ ನೆನೆಪು
ಮಾಡುತ್ತಾರೆ.
ನಮ್ಮೂರಲ್ಲಿ ಸಂಪ್ರಧಾಯವಾಗಿ ಎಲ್ಲಾ
ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಯಾವ ಆಡಂಬರಗಳು ಇರುವುದಿಲ್ಲ. ಆ ಕಾಲದಲ್ಲಿ ಮನೆಯ ಹಿತ್ತಲಿನಲ್ಲಿ
ಅಥವಾ ತೋಟದಲ್ಲಿ ದೊರಕುವ ಹೂವು-ಹಣ್ಣು ಗಳಿಂದ ಪೂಜೆ ಮಾಡುತ್ತಾರೆ. ಕೆಲವು ಮನೆ ಮತ್ತು ಊರುಗಳಲ್ಲಿ ಕೆಲವು ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾಸ ಇದ್ದರು ಹೆಚ್ಚು-ಕಮ್ಮಿ ಒಂದೇ ತರಹ ಆಚರಿಸುತ್ತಾರೆ.
ನಾವು ಚಿಕ್ಕವರಿದ್ದಾಗ ನಾಗರ ಪಂಚಮಿ
ಬಂತು ಅಂದರೆ ಮೊದಲ ಮಾಡುವ ಕೆಲಸ ಮದರಂಗಿ ಸೊಪ್ಪು ತರುವುದು. ನಾಗರ ಪಂಚಮಿಗೆ ಮದರಂಗಿ ಹಚ್ಚಿಕೊಂಡರೆ
ಹಾವು ಕಚ್ಚುವುದಿಲ್ಲ ಅಂತ ಅಜ್ಜಿ ಹೇಳಿದ ನೆನಪು. ಅದು ಅಲ್ಲದೆ ಮಾರನೆಯ ದಿನ ಶಾಲೆಯಲ್ಲಿ ಯಾರ ಕೈ
ಮದರಂಗಿ ಚನ್ನಾಗಿ ಇದೆ ಎಂದು ನೋಡುವ ಹುಚ್ಚು. ನಾವು ಮದರಂಗಿ ಸೊಪ್ಪನ್ನು ಮನೆಯಲ್ಲಿ ಒರಳಲ್ಲಿ ರುಬ್ಬಿ
ಅದರನ್ನು ಕೈಗೆ ಮತ್ತು ಉಗುರಿಗೆ ಹಚ್ಚಿಕೊಳ್ಳುತ್ತಿದ್ದೆವು. ಈಗ ಬರುವ ಕೋನ್ ಮದರಂಗಿಕಿಂತ ಮನೆಯಲ್ಲಿ ಮಾಡಿದ ಮದರಂಗಿಯ ವಾಸನೆಯೆ ಬೇರೆ. ಅದು ಅಲ್ಲದೆ
ಈ ಮದರಂಗಿ ತುಂಬಾ ದಿನ ಉಳಿಯುತ್ತಿತ್ತು ಮತ್ತು ಆ ಬಣ್ಣವೆ ಕಡು ಕೆಂಪಾಗಿ ನೋಡಲು ಚನ್ನಾಗಿ ಇರುತಿತ್ತು.
ಈಗಲು ಮದರಂಗಿ ಅಂದರೆ ಒಳಕಲ್ಲಿನಲ್ಲಿ ಅಮ್ಮ ರುಬ್ಬಿದ ಮದರಂಗಿ ಮತ್ತು ಅದರ ವಾಸನೆಯೆ ನೆನಪಿಗೆ ಬರುವುದು.
ನಾಗರ ಪಂಚಮಿಯ ದಿನ ದೇವಸ್ಥಾನಕ್ಕೆ
ಹೋಗುವ ಪದ್ದತಿ ಇಲ್ಲವಾಗಿತ್ತು. ನಮ್ಮ ಮನೆಯ ತೋಟದಲ್ಲಿ ನಾಗರ ಕಲ್ಲು ಇತ್ತು. ಆ ತೋಟಕ್ಕೆ ನಾಗರಕಾನು
ಅಂತನೆ ಹೆಸರು. ನಾವು ಮತ್ತು ನಮ್ಮ ದೊಡ್ಡಪ್ಪನ ಮನೆಯವರೆಲ್ಲ ಅಲ್ಲೆ ಪೂಜೆ ಮಾಡುವುದು. ನಮ್ಮ ಕಡೆ
ಹೆಚ್ಚಾಗಿ ಎಲ್ಲರ ಮನೆಯಲ್ಲಿ ಅಥವಾ ಊರಲ್ಲಿ ನಾಗರಕಲ್ಲು, ಚೌಡಿ ಕಟ್ಟೆ, ಅಶ್ವಥ್ ಕಟ್ಟೆ ಇದ್ದೆ ಇರುವುದು.
ನಾಗರ ಪಂಚಮಿ ಮಳೆಗಾಲದಲ್ಲಿ ಬರುವ ಕಾರಣ ತೋಟಕ್ಕೆ ಹೋಗುವುದು ಕಷ್ಟವೆ. ಅದು ಅಲ್ಲದೆ ಉಂಬಳದ ಕಾಟ.
ಇದಕ್ಕಾಗಿ ಪೂಜೆಗೆ ಹೋಗುವುದು ದೊಡ್ಡ ತಲೆನೋವೆ. ಆದರೆ ಅಪ್ಪನ ಹತ್ತಿರ ನೈವೆದ್ಯ ಮತ್ತು ಪೂಜೆ ಸಾಮಗ್ರಿ
ಹಿಡಿದುಕೊಳ್ಳಲು ಆಗದ ಕಾರಣ ನಾನು ಮತ್ತು ಅಕ್ಕ ಅಪ್ಪನ ಜೊತೆ ಹೋಗುತ್ತಿದ್ದೆವು. ತಮ್ಮ ಜವಟೆ ಬಡಿಯುತ್ತಿದ್ದ.
ಪೂಜೆ ಮಾಡುವಾಗ ಅಪ್ಪ ಯಾವಾಗಲು ಹೇಳುತ್ತಿದ್ದರು, “ಅಲ್ಲೆ ಇದ್ದ ಸಂಪಿಗೆ ಮರದಲ್ಲಿ ನಾಗರ ಹಾವಿದೆ
ಅದು ನೋಡುತ್ತಾ ಇರುತ್ತದೆ ಎಂದು”. ಆದರೆ ಅದು ಯಾವಾಗಲು ನಮಗೆ ಕಾಣಿಸಲಿಲ್ಲ. ಆದರೆ ತೋಟದಲ್ಲಿ ಹಾವುಗಳಿರುವುದು
ಸರ್ವೆಸಾಮಾನ್ಯ. ಕಾಲಿಗೆ ಉಂಬಳ ಹತ್ತಿಸಿಕೊಂಡು ಮಳೆಯಲ್ಲಿ ನೆನೆದು ಅಂತು ಪೂಜೆ ಮುಗಿಸಿ ಬರುತ್ತಿದ್ದೆವು.
ಆಗ ಅದು ರಗಳೆ ಅನಿಸಿದರು ಈಗ ಅದು ನಮಗೆ ಸವಿ ನೆನಪು.
ನಾಗರ ಪಂಚಮಿಗೆ ಮಾಡುವ ಅಡುಗೆ ವಿಭಿನ್ನವಾಗಿತ್ತು.
ನೈವೆದ್ಯಕ್ಕೆ ಉಪ್ಪಿಲ್ಲದೆ ಮಾಡಿದರೆ ನಾವು ತಿನ್ನುವಾಗ ಉಪ್ಪು ಖಾರ ಚನ್ನಾಗಿ ಹಾಕಿಕೊಂಡು ತಿನ್ನುತ್ತಿದ್ದೆವು.
ಅರಿಶಿಣ ಎಲೆಯ ಕಡುಬು(ಪಾತೋಳಿ) ಅದನ್ನು ಹೆಚ್ಚಾಗಿ ಮಾಡುತ್ತಿದ್ದರು. ಅದು ಅಲ್ಲದೆ ಇನ್ನೊಂದು ಚಪ್ಪೆ
ಹೋಳಿಗೆ ಅಂತ. ಇದು ಹೋಳಿಗೆಯ ಯಾವ ಲಕ್ಷಣನು ಹೊಂದಿಲ್ಲ. ಹೆಸರು ಮಾತ್ರ ಚಪ್ಪೆ ಹೋಳಿಗೆ. ಆದರೆ ಇದರ
ರುಚಿ ಹೋಳಿಗೆಯ ಸಮಾನ ಅಂತಲೆ ಹೇಳಬಹುದು. ಇದನ್ನು ಸವತೆಕಾಯಿ ಮತ್ತು ಅಕ್ಕಿ ಹಿಟ್ಟನ್ನು ರುಬ್ಬಿ ಈ
ರುಬ್ಬಿದ ಹಿಟ್ಟನ್ನು ಬಾಳೆ ಎಲೆಯಲ್ಲಿ ಹಚ್ಚಿ ಅದನ್ನು ಒಲೆಯಲ್ಲೆ ಬೇಯಿಸುತ್ತಾರೆ. ಇದು ಒಳ್ಳೆ ಬಾಳೆ
ಎಲೆಯ ಘಮ ಹೀರಿಕೊಳ್ಳುವುದಕ್ಕೊ ಎನೊ ಇದರ ರುಚಿ ಅತ್ಯಧ್ಬುತ. ಮೊದಲೆ ಹೇಳಿದ ಹಾಗೆ ಬೇರೆ-ಬೇರೆ ಊರುಗಳಲ್ಲಿ
ಬೇರೆ-ಬೇರೆ ತರ ಆಚರಿಸುತ್ತಾರೆ. ನಮ್ಮೂರಲ್ಲಿ ಅಂದರೆ ನನ್ನ ತವರು ಮನೆಯಲ್ಲಿ ಇದನ್ನು ಮಾಡೆ ಮಾಡುತ್ತಿದ್ದರು.
ನಮ್ಮ ಮನೆಯಲ್ಲಿ ತಿಂದಿದ್ದು ಸಾಲ ಎಂದು ಮದ್ಯಾನ್ನದ ಮೇಲೆ ಅಕ್ಕ-ಪಕ್ಕದ ಮನೆಗೆ ಹೋಗಿ ರುಚಿ ನೋಡಿದ
ಧಾಖಲೆಯು ಇದೆ. ಇದು ನನಗೆ ಎಷ್ಟು ಇಷ್ಟ ಆಗಿತ್ತೆಂದರೆ ನಾನು ಬಸುರಿ ಇದ್ದಾಗ ಚಪ್ಪೆ ಹೋಳಿಗೆ ತಿನ್ನುವ
ಆಸೆ ಆಗಿ ಅಮ್ಮನ ಹತ್ತಿರ ಹೇಳಿ ಮಾಡಿಸಿಕೊಂಡಿದ್ದೆ.
ನಾಗರ ಪಂಚಮಿಯ ಇನ್ನೊಂದು ವಿಶೇಷ ಅಂದರೆ
ಹೊದ್ಲು(ಅರಳು) ಮತ್ತು ಹಲಸಿನ ಬೆಳೆಯನ್ನು ಬಿರುವುದು. ಹಲಸಿನ ಹಣ್ಣಿನ ಬೆಳೆಯನ್ನು ಬಿಸಿಲಿನಲ್ಲಿ
ಒಣಗಿಸಿ ಇಟ್ಟಿರುತ್ತಿದ್ದರು. ಅದನ್ನು ಕೆಂಡದಲ್ಲಿ ಸುಟ್ಟಿ ನಾಗರ ಕಲ್ಲಿಗೆ ನೈವೇದ್ಯ ಮಾಡುತ್ತಿದ್ದೆವು.
ಆ ನೈವೇದ್ಯ ಮಾಡಿದ ಹೊದ್ಲು ಮತ್ತು ಬೆಳೆಯನ್ನು ಮನೆಯ ಪ್ರಧಾನ ಬಾಗಿಲ ಮುಂದೆ ಮತ್ತು ದೇವರ ಮನೆಯಲ್ಲಿ ಬೀರುತ್ತಿದ್ದೆವು. ಆ ಬೀರಿದ ಹೊದ್ಲು ಮತ್ತು
ಬೆಳೆಯನ್ನು ನಾವು ತಿನ್ನುತ್ತಿದ್ದೆವು. ಅಮ್ಮ ಕಸ ಆಗುವುದು ಶಾಸ್ತ್ರಕ್ಕೆ ಬಿರಿ ಎನ್ನುತ್ತಿದ್ದರು.
ಆದ್ರೆ ನಾವು ಚನ್ನಾಗಿ ಬೀರುತ್ತಿದ್ದೆವು. ಹಲಸಿನ ಬೆಳೆ ಖಾಲಿಯಾಗುತ್ತಿತ್ತು. ಹೊದ್ಲು ಹಾಗೆ ಉಳಿಯುತ್ತಿತ್ತು.
ಇನ್ನು ಮದ್ಯಾನ್ನ ಜೋಕಾಲಿ ಕಟ್ಟುವ
ಸಂಬ್ರಮ. ಅದು ಯಾಕೆ ಅನ್ನೊದು ಗೊತ್ತಿಲ್ಲ ನಾಗರ ಪಂಚಮಿಯ ದಿನ ಜೋಕಾಲಿ ಕಟ್ಟಿ ಆಡುತ್ತಿದ್ದೆವು. ಹಳೆ
ಬಾವಿ ಹಗ್ಗದಲ್ಲಿ ಅಂಗಳದಲ್ಲಿ ಜೋಕಾಲಿ ಕಟ್ಟಿ ಅದಕ್ಕೆ ಕುಳಿತುಕೊಳ್ಳಲು ಗೋಣಿಚೀಲ ಹಾಕಿ ಜೋಕಾಲಿ ಅಟ ಆಡಿದರೆ ಏನೋ ಖುಷಿ. ಈಗ ಬಾಲ್ಕನಿಯಲ್ಲಿ ಬಿದಿರಿನ
ಜೋಕಾಲಿಯಲ್ಲಿ ಕುಳಿತುಕೊಂಡರೆ ಆರಾಃ ಆಗಬಹುದೆ ಹೊರತು, ಆಗ ಕುಂಡೆ ನೋಯಿಸಿಕೊಂಡು ಹಗ್ಗದಲ್ಲಿ ಕುಳಿತು
ಜೋಕಾಲಿ ಜೀಕುವುದೆ ಖುಷಿ ಕೊಡುತ್ತಿತ್ತು.
ನಾಳೆ ನಾಗರ ಪಂಚಮಿ ಅಂದ ತಕ್ಷಣ ಯಾಕೊ
ನಾವು ಚಿಕ್ಕವರಿದ್ದಾಗ ಆಚರಿಸುವ ನೆನಪು ಆಯಿತು. ಈಗ ನಮ್ಮ ಅಕ್ಕ-ಪಕ್ಕದ ಮನೆಯವರು ಆಚರಿಸುವಂತೆ ನನಗೆ
ಆಚರಿಸಲು ಬರುವುದಿಲ್ಲ. ಸುಮ್ಮನೆ ಮನೆಯಲ್ಲಿ ಅರಿಶಿಣ ಏಲೆಯ ಕಡುಬು ಮಾಡಿ ನಾಗಪ್ಪನಿಗೆ ನೈವೇದ್ಯ ಮಾಡುತ್ತೇನೆ. ಇದರ ಜೊತೆ ಹಳೆಯ ನೆನಪು ನೆನೆಯುತ್ತ, ನಿಮ್ಮೊಂದಿಗೆ ಮತ್ತು ಮನೆಯವರ
ಹತ್ತಿರ ಹಂಚಿಕೊಳ್ಳುತ್ತ ಆಚರಿಸುವೆ.
ಏನೆ ಆಗಲಿ ಆ ನಾಗಪ್ಪ ನಮ್ಮೆಲ್ಲರನ್ನು
ಕಾಪಾಡಲಿ ಎಂದು ಕೇಳಿಕೊಳ್ಳುತ್ತಾ, ನಿಮ್ಮೆಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು.