Sunday, August 25, 2019

ನೀವೆ ಹೇಳಿ


                                            ನೀವೆ ಹೇಳಿ
ನಾನು ಸ್ವಲ್ಪ  ಮದ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಅಪ್ಪ ಒಳ್ಳೆ ಉದ್ಯೊಗದಲ್ಲಿ ಇದ್ದರು. ಅಮ್ಮ ಸ್ಕೊಲ್ ನಲ್ಲಿ ಟೀಚರ್ ಆಗಿದ್ದರು. ನಾನು ಮತ್ತು ಅಕ್ಕ ನಮ್ಮದೆ ಒಂದು ಪ್ರಪಂಚವಾಗಿತ್ತು.
ಮೊದಲಿನಿಂದಲು ನಾನು ಮತ್ತು ಅಕ್ಕ ಓದಿನಲ್ಲಿ ಮುಂದು. ಅದಕ್ಕೆ ಕಾರಣ ನಮ್ಮ ಅಮ್ಮ. ಅಮ್ಮ ಯಾವಗಲು ವಿದ್ಯಾಬ್ಯಾಸಕ್ಕೆ ತುಂಬಾ ಬೆಲೆ ಕೊಡುತ್ತಿದ್ದರು. ವಿದ್ಯೆ ಯಾರು ಕದಿಯಲು ಆಗದ ಆಸ್ತಿ ಎಂದು ಯಾವಾಗಲು ಹೇಳುತ್ತಿದ್ದರು. ಅದು ನಿಜವೆ. ಆದರೆ ಕೆಲವೊಮ್ಮೆ ಅಮೃತವು ವಿಷ ಆದಂತೆ ಅಮ್ಮ ನಮ್ಮನ್ನು ಪುಸ್ತಕದ ಹುಳವನ್ನಾಗಿ ಮಾಡಿ ಬಿಟ್ಟಿದ್ದರು. ಬೇರೆ ಪ್ರಪಂಚವೆ ನಮಗೆ ತಿಳಿದಿರಲಿಲ್ಲ.  ಸ್ಕೂಲ್ ನಲ್ಲಿ ನನ್ನ ವಾರಗೆಯವರು ಟಿ.ವಿ ಯಲ್ಲಿ ಬಂದ ಕೆಲವು ಕಾರ್ಯಕ್ರಮದ ಬಗ್ಗೆ ಮಾತಾಡುತ್ತಿದ್ದರೆ ನನಗೆ ಅದರ ಗಂಧ ಗಾಳಿಯು ಇಲ್ಲದೆ ತೆಪ್ಪಗೆ ಕುಳಿತಿರುತ್ತಿದ್ದೆ. ಇನ್ನು ಹೊಸದಾಗಿ ಬಂದ ಸಿನಿಮಾಗಳ ಬಗ್ಗೆ ಪೇಪರ್ ನಲ್ಲಿ ಓದುವ ಮತ್ತು ಪೋಟೋ ನೋಡುವ ಭಾಗ್ಯವೆ ಹೊರತು ನೋಡುವ ಭಾಗ್ಯ ಇರಲಿಲ್ಲ. ಒಂದು ದಿನವು ನಮ್ಮನ್ನು ಸಿನಿಮಾಕ್ಕೆ ಕರೆದುಕೊಂಡು ಹೊಗಿರಲಿಲ್ಲ.
ಇನ್ನು ಕಾಲೇಜ್ ನಲ್ಲಿ ಎಲ್ಲಾ ಹೊಟೆಲ್, ಕಾಫಿ ಡೇ ಅಂತ ಹೋದ್ರೆ ನಾನು ಮತ್ತು ಅಕ್ಕ ಯಾವಗಲು ಆ ಕಡೆ ತಲೆ ಹಾಕಿಲ್ಲ. ನಾವು ಪ್ರೇಂಡ್ಸ್ ಜೊತೆ ಆಚೆ ಹೋಗೊದು ಇರಲಿ ಅಪ್ಪ-ಅಮ್ಮನ  ಜೊತೆ ಆಚೆ ತಿನ್ನಲು ಹೋಗಿದ್ದಿಲ್ಲ. ನಮಗೆ ಹೊಟೆಲ್ ನಲ್ಲಿ ಸಿಗುವ ಕೆಲವು ತಿಂಡಿಗಳ ಹೆಸರೆ ಗೊತ್ತಿರಲಿಲ್ಲ. ಇಗಿನ ಕಾಲದಲ್ಲಿ ನಮ್ಮಂತವರು ಇರುವುದು ವಿರಳದಲ್ಲೆ ವಿರಳ ಅನ್ನಬಹುದು. ಕೇಳಿದವರಿಗು ಆಶ್ಚರ್ಯವಾಗಬಹುದು.
ನಮ್ಮ ಹುಟ್ಟು ಹಬ್ಬದ ದಿನ ಕೊಬ್ಬರಿ ಮಿಟಾಯಿ, ಕೆಸರಿ ಬಾತ್ ಮಾಡುತ್ತಿದ್ದರು. ನಮ್ಮ ಅಕ್ಕ-ಪಕ್ಕದಲ್ಲಿದ್ದ ಗೆಳೆಯರನ್ನು ಕರೆಯುತ್ತಿದ್ದೆವು. ಚಿಕ್ಕ ವಯಸ್ಸಿನಲ್ಲಿ ತುಂಬಾ ಖುಶಿ ಆಗುತ್ತಿತ್ತು. ಆಗ  ನಮಗೆ ಏನು ಅನಿಸುತ್ತಿರಲಿಲ್ಲ. ಕ್ರಮೇಣ ಹೈಸ್ಕೂಲ್ ಲೆವಲ್ ಗೆ ಬಂದ ಮೇಲೆ ಸ್ವಲ್ಪ ಇರಿಸು-ಮುರಿಸು ಆಗುತ್ತಿತ್ತು. ಬೇರೆಯವರ ಮನೆಯಲ್ಲಿ ಹೊಸ-ಹೊಸ ತಿಂಡಿಗಳಾದ  ಫಿಂಗರ್ ಚಿಪ್ಸ್, ಬರ್ಗರ್, ಮಾಡುತ್ತಿದ್ದರು. ಕೇಕ್ ತರುತ್ತಿದ್ದರು. ಆದರೆ ಅಮ್ಮ ಇದಕ್ಕೆಲ್ಲ ವಿರುದ್ದವಾಗಿದ್ದರು. ಸಂಪ್ರಧಾಯವಾಗಿ ಎಣ್ಣೆ ನೀರು, ದೇವಸ್ಥಾನ ಅಂತ ನಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು. ನಮ್ಮ ಆಸೆಯನ್ನು ಕೇಳಿದವರೆ ಅಲ್ಲ. ಆದರೆ ಅವರ ದೃಷ್ಟಿಯಲ್ಲಿ ನಮ್ಮನ್ನು ಚನ್ನಾಗಿಯೆ ಬೆಳೆಸಿದ್ದಾರೆ.
ಇನ್ನು ಅಪ್ಪ ಒಳ್ಳೆಯ ಕೆಲಸದಲ್ಲಿ ಇದ್ದರು. ನಮ್ಮ ಮನೆಯ ವ್ಯವಹಾರ ಅಮ್ಮನೆ ನೋಡಿಕೊಳ್ಳುವದಾಗಿತ್ತು. ಹತ್ತು ರೂಪಾಯಿಯಲ್ಲಿ ಎಂಟು ರೂಪಾಯಿ ಉಳಿಸುವ ಬುದ್ದಿ ಅವರದಾಗಿತ್ತು. ಅಪ್ಪ ನ ಆಸೆ ಏನಿತ್ತೊ ಗೊತ್ತಿಲ್ಲ ಆದರೆ ಅಮ್ಮ ಹೇಳಿದ ಹಾಗೆ ನಡೆಯುತ್ತಿತ್ತು. ಅವರು ಯಾವಾಗಲು ಕೈ ಬಿಚ್ಚಿ ಖರ್ಚು ಮಾಡಿದ್ದು ನೋಡಿಲ್ಲ. ಅವರ ವಯಕ್ತಿಕ ಆಸೆಯನ್ನು ಯಾವಾಗಲು ಹೊರ ಹಾಕಿಲ್ಲ.
ಅಮ್ಮ ನಮ್ಮ ಓದಿಗೆ ಮಾತ್ರ ಯಾವ ಒತ್ತಾಯವನ್ನು ಮಾಡಿರಲಿಲ್ಲ. ನಮಗೆ ಬೇಕಾದ ವಿಷಯ ಆರಿಸಿಕೊಳ್ಳುವ ಸ್ವಾತಂತ್ರ ನೀಡಿದ್ದರು. ಆ ಕಾರಣದಿಂದಲೆ ನಾನು ಇಂಜಿನಿಯರಿಂಗ್ ಓದಿದೆ. ಚನ್ನಾಗಿ ಓದಿದೆ. ಮನೆಯಲಲ್ಲು ಅಪ್ಪ-ಅಮ್ಮ ಒಳ್ಳೆ ಬೆಂಬಲ ದೊರಕಿತು. ಅಪ್ಪ ಅಮ್ಮ ಓದು ಮತ್ತು ಪುಸ್ತಕ ಕೊಡಿಸುವ ವಿಷಯದಲ್ಲಿ ಯಾವಾಗಲು ಚಕಾರ ಎತ್ತಿದವರಲ್ಲ. ಓದೆ ನನ್ನ ಪ್ರಪಂಚವಾದ ಕಾರಣ ಒಳ್ಳೆ ಅಂಕ ಪಡೆದು ಇಂಜಿನಿಯರ್ ಆದೆ. ಕ್ಯಾಂಪಸ್ ನಲ್ಲಿ ಒಳ್ಳೆ ಉದ್ಯೋಗ ದೊರಕಿತು. ಬೆಂಗಳೂರಿನಿಂದ ಮುಂಬೈ ನಲ್ಲಿ ಉದ್ಯೋಗ ದೊರಕಿತು. ಮೊದಲ ಬಾರಿ ಅಪ್ಪ-ಅಮ್ಮ ನ ಬಿಟ್ಟು ಮನೆಯಿಂದ ಆಚೆ ಹೋದೆ. ಹೊಸ ಊರು, ಕೈನಲ್ಲಿ ಒಳ್ಳೆ ಉದ್ಯೊಗ, ಒಳ್ಳೆ ಸಂಬಳ ಅದಕ್ಕು ಮಿಗಿಲಾಗಿ ಯಾವಾಗಲು ಸಿಗದೆ ಇರೋ ಸ್ವತಂತ್ರ.
ಯಾವಾಗಲು ಎರಡು ಪ್ಯಾಂಟ್-ಶರ್ಟ ಇದ್ದ ನನಗೆ ನನ್ನ ಕೈ ಗೆ  ದುಡ್ಡು ಬಂದ ತಕ್ಷಣ ಕಣ್ಣಿಗೆ ಕಂಡ ಬಟ್ಟೆಗಳನ್ನು ತೆಗೆದುಕೊಂಡೆ. ಮುಂಬೈ ನ ಎಲ್ಲಾ ತರಹದ ತಿಂಡಿಗಳನ್ನು ತಿಂದೆ. ಚನ್ನಾಗಿ ವಾರಾಂತ್ಯ ಸುತ್ತುತ್ತಿದ್ದೆ. ಒಳ್ಳೆ ಸಂಸ್ಕಾರ ನೀಡಿದ ಕಾರಣ ನನಗೆ ಯಾವ ವ್ಯಸನಗಳು ಮೈಗಂಟಿಕೊಂಡಿಲ್ಲ. ಮನೆಯಿಂದ ಬರುವಾಗ ಅಮ್ಮ ಹೇಳಿದ ಮಾತು, “ ನಿನ್ನ ಸಂಬಳ ನಮಗೆ ಕೊಡೋದು ಬೇಡ. ಚನ್ನಾಗಿ ಉಳಿಸು” ಅಂದಿದ್ದರು. ಆದರೆ ನಾನು ಅಷ್ಟಾಗಿ ಉಳಿಸುವ ಜಾಯ ಮಾನದವನಾಗಿರಲಿಲ್ಲ. ಮೊದಲಿನಿಂದಲು ಇದೇ ವಾತಾವರಣದಲ್ಲೆ ಬೆಳೆದ ನನಗೆ ಕೈ ಬಿಚ್ಚಿ ಖರ್ಚು ಮಾಡಬೇಕು ಜೀವನವನ್ನು ಬಿಂದಾಸ್ ಆಗಿ ಕಳೆಯಬೇಕು ಅನ್ನೊ ಆಸೆ ಇತ್ತು.  ಯಾವ ಜಂಜಾಟವನ್ನು ಹಚ್ಚಿಕೊಳ್ಳದೆ ಒಬ್ಬನೆ ಬದುಕುವ ಆಸೆ ಹೊಂದಿರುವೆ.
ಈಗ ನನ್ನ ಈಗಿನ ಪ್ರಶ್ನೆ  ಅಮ್ಮನ ಒಂದೆ ಒತ್ತಾಯ ನನ್ನ ಮದುವೆ ಆಗು ಎಂದು. ಆದರೆ ನನಗೆ ಸುತಾರಾಃ ಇಷ್ಟ ಇಲ್ಲ. ಯಾಕೆ ಅಂತ ಅಮ್ಮನ ಬಳಿ ಹೇಳುವ ಹಾಗೆ ಇಲ್ಲ. ಅಪ್ಪ-ಅಮ್ಮನಿಗೆ ಅವರು ನಮ್ಮನ್ನು ಚನ್ನಾಗಿ ಬೆಳೆಸಿದ್ದಾರೆ ಎಂದು. ಆದರೆ ಅಮ್ಮ ನಮ್ಮ ಮನಸ್ಸಿನ ಆಸೆ ಅರ್ಥ ಮಾಡಿಕೊಂಡಿಲ್ಲ ಎಂದು. ಆದರೆ ನನಗೆ ಒಳ್ಳೆ ವಿದ್ಯೆ ಕೊಡಿಸಿದ ಕಾರಣ ಇವತ್ತು ಕೈ ತುಂಬಾ ಸಂಬಳ ಎಣಿಸುತ್ತಿದ್ದೆನೆ. ಅಪ್ಪ-ಅಮ್ಮ ನನ್ನ ಭವಿಷ್ಯಕ್ಕೆ ಮೋಸ ಮಾಡಿಲ್ಲ. ಆದರು ಎನೋ ಒಂದು ಅಸಮಾಧಾನ. ಇಷ್ಟು ಮಾಡಿದ ಅಪ್ಪ-ಅಮ್ಮ ನ ಮೇಲೆ ನನಗೆ ಏನೋ ಅಸಮಾಧಾನ ಆಗಿರುವಾಗ ಮುಂದೆ ನನ್ನ ಮಕ್ಕಳಿಗೂ ನಾನು ನನ್ನದೆ ದೃಷ್ಟಿಯಲ್ಲಿ ಬೆಳೆಸಿ ಅವರ ಆಸೆ ಏನು ಅಂತ ಅರ್ಥ ಮಾಡಿಕೊಳ್ಳದೆ ಅವರು ನನ್ನ ಮೇಲೆ ಇದೆ ಭಾವನೆ ಬೆಳೆಸಿಕೊಂಡರೆ?  ಕಟ್ಟಿಕೊಂಡ ಹೆಂಡತಿಹೆ ಇನ್ನೆನೋ ಆಸೆ ಇದ್ದು ಇನ್ನು ಅವಳ ಜೊತೆ ಹೊಂದಾಣಿಕೆ ಆಗದೆ ಇದ್ದರೆ? ಯಾಕೋ ಸ್ವತಂತ್ರ ಜೀವನ ನಡೆಸಬೇಕು ಅನ್ನೊ ಆಸೆ ನನ್ನದು. ಇದನ್ನು ಅಪ್ಪ-ಅಮ್ಮ ನ ಹತ್ತಿರ ಹೇಳಿಕೊಳ್ಳದೆ ಒದ್ದಾಡುತ್ತಿರುವೆ. ಆದರೆ ದಿನ ಅಮ್ಮ ನ ಪೋನ್ ನನ್ನ ಮದುವೆ ವಿಚಾರವಾಗಿ. ಎಷ್ಟು ದಿನ ಅಂತ ಮುಂದುಡಲಿ ಎಂದು ತಿಳಿಯುತ್ತಿಲ್ಲ.
(ಇದು ಒಂದು ನಿಜವಾದ ಕಥೆ. ನಮ್ಮ ಮನೆ ಪಕ್ಕದಲ್ಲಿ ಲಖನೌ ದವರು ಇದ್ದಾರೆ. ಇದು ಅವರ ಮನೆ ಕಥೆ. ಅವರು (ಹುಡುಗನ ಅಕ್ಕ) ಹೇಳಿದ ಕಥೆಯನ್ನು ನಾನು ನನ್ನದೆ ಶೈಲಿಯಲ್ಲಿ ಬರೆದಿರುವೆ. ನಿರೂಪಣೆ ಮಾಡುವುದರಲ್ಲಿ ಸ್ವಲ್ಪ ಕಷ್ಟ ಆಯಿತು. ಆದರು ಪ್ರಯತ್ನ ಪಟ್ಟಿರುವೆ.)

No comments: