Thursday, August 29, 2019

ಕುಂಕ್ರಿಯ ಅಡುಗೆ


                                         ಕುಂಕ್ರಿಯ ಅಡುಗೆ
ಕುತ್ತಲ್ಲಿ ಕೂರದೆ ಇರೋ ಕುಂಕ್ರಿಗೆ ಶಾಲೆ ಇಲ್ಲದೆ ಇದ್ದಾಗ ಅವಳ ಅಮ್ಮನಿಗೆ ಅವಳನ್ನು ಸಂಭಾಳಿಸುವುದು ಬಹಳ ಕಷ್ಟದ ಕೆಲಸವೆ ಆಗಿತ್ತು. ಏನಾದರು ಮಾಡ್ತಾನೆ ಇರ್ಬೇಕು ಇವಳಿಗೆ. ಒಂದು ರವಿವಾರ ಕುಂಕ್ರಿಗೆ ಅಮ್ಮನ ಜೊತೆ ಅಡಿಗೆ ಮಾಡುವ ಆಸೆ ಶುರು ಆಯಿತು. ಅವಳು ಅಡಿಗೆ ಮನೆಗೆ ಬಂದರೆ ಏನು ಕೆಲಸ ಆಗದು ಎಂದು ಅಮ್ಮನ ತಕರಾರು. ಅದು ಅಲ್ಲದೆ ಏನಾದರು ಕೈ ಕೊರೆದುಕೊಂಡು ಏನಾದರು ಹೆಚ್ಚು ಕಮ್ಮಿ ಆದ್ರೆ ಅನ್ನೊ ಹೆದರಿಕೆ ಕುಂಕ್ರಿಯ ತಾಯಿಗೆ. ಆದರೆ ಈ ರವಿವಾರ ತನ್ನದೆ ಅಡಿಗೆ ಎಂದು ಹಠ ಹಿಡಿದಳು. ಅಮ್ಮ ಕುಂಕ್ರಿಗೆ ಎಷ್ಟೆ ಸಮಜಾಯಿಸಿದರು ಅವಳು ತನ್ನ ಹಠ ಬಿಡಲಿಲ್ಲ. ಆಗ ಹಾಲ್ ನಲ್ಲಿ ಪೇಪರ್ ಓದುತ್ತ ಕುಳಿತಿರುವ ಕುಂಕ್ರಿಯ ಅಪ್ಪ ಅಡಿಗೆ ಮನೆಗೆ ಬಂದು ಒಂದು ನಿರ್ಧಾರ ಮಾಡಿದರು. ಕುಂಕ್ರಿಯು  ಏನು ಚಿಕ್ಕ ಮಗು ಅಲ್ಲ. ಅವಳು ಒಂದೊಂದೆ ಕೆಲಸ ಕಲಿಯಲಿ. ಒಬ್ಬಳೆ ಮಗಳು ಎಂದು ಮನೆ ಕೆಲಸ  ಕಲಿಯದೆ ಇದ್ದರೆ ಮುಂದೆ ಅವಳಿಗೆ ತೊಂದರೆ ಎಂದು ಹೇಳಿದರು. ಅಪ್ಪ ನ ಮಾತಿಗೆ ಕುಂಕ್ರಿಗೆ ಖುಶಿ ಆಯಿತು. ಕುಂಕ್ರಿಯ ಅಮ್ಮನಿಗೂ ಹೌದು ಎನಿಸಿ ಮಗಳಿಗೆ ಹೇಳಿದಳು, “ಏನಾದರು ಬೇಕಿದ್ದರೆ ನನ್ನನ್ನು ಕರೆ. ನಾನು ಇವತ್ತು ಬೇರೆ ಕೆಲಸ ಮಾಡಿಕೊಳ್ಳುವೆ” ಎಂದಳು. ಕುಂಕ್ರಿಯು ಇದಕ್ಕೆ ತಲೆಯಾಡಿಸಿ “ಏನಾದರು ಬೇಕಿದ್ದರೆ ನಾನೆ ಕರೆಯುವೆ ನೀವು ಮದ್ಯ ಬಂದು ತೊಂದರೆ ಕೊಡಬೇಡಿ ಹಾಗು ತನ್ನ ಅಡುಗೆ ಮಗಿದ ಮೇಲೆ ನಾನೆ ಟೇಬಲ್ ಮೇಲೆ ತರುವೆ ನೀವು ಬರಬೇಡಿ” ಎಂದು ಹೇಳಿದ್ದಳು.  ಅಮ್ಮನ ಜೊತೆ ಯಾವಾಗಲು ಅಡಿಗೆ ಮನೆಯಲ್ಲಿ ಅವಳ ಹಿಂದೆ ಇರುವ ಕುಂಕ್ರಿಗೆ ಸುಮಾರಾಗಿ ಅಡುಗೆಗ ಮಾಹಿತಿ ಇತ್ತು. ತನ್ನ ಪ್ರೀತಿಯ ವೆಜಿಟೆಬಲ್ ಪಲಾವ್ ಮಾಡಲು ಅಣಿ ಮಾಡಿದಳು. ಒಂದೊಂದೆ ತರಕಾರಿಯನ್ನು ಹೆಚ್ಚಿದಳು. ತನ್ನದೆ ಆದ ರೀತಿಯಲ್ಲಿ ಮಸಾಲೆ ಹಾಕಿದಳು. ಅಂತು ಕುಕ್ಕರಿನಲ್ಲಿ ಪಲಾವ್ ಮಾಡಲು ಇಟ್ಟಳು. ಮೊದಲೆ ಅವಳು ಹೇಳಿದಂತೆ ಅಡುಗೆ ಆಗುವ ತನಕ ಅಲ್ಲಿ ಯಾರು ಬರಲಿಲ್ಲ. ಕುಂಕ್ರಿಯೆ ಟೇಬಲ್ ಮೇಲೆ ಕುಕ್ಕರ್ ತಂದಿಟ್ಟಳು. ಪ್ಲೇಟ್ ಹಾಕಿ ಅಪ್ಪ-ಅಮ್ಮನನ್ನು ಕರೆದಳು. ಕುಕ್ಕರ್ ಮುಚ್ಚಲ ತೆಗೆದಾಗ ಅನ್ನ ಎಲ್ಲ ಚನ್ನಾಗೆ ಬೆಂದಿತ್ತು. ಒಳ್ಳೆ ಘಮವು ಬರುತ್ತಿತ್ತು. ಅಪ್ಪ-ಅಮ್ಮನಿಗೆ ಉತ್ಸಾಹದಲ್ಲಿ ಬಡಿಸಿದಳು. ವೆಜಿಟೆಬಲ್ ಪಲಾವ್ ತುಂಬಾ ಚನ್ನಾಗಿ ಇತ್ತು. ಮಸಾಲೆ ಅದ್ಬುತವಾಗಿತ್ತು. ಅಮ್ಮ ಕೇಳಿದಳು,” ಕುಂಕ್ರಿ ಮಸಾಲೆಗೆ ಏನೇನ್ ಹಾಕಿದ್ದಿಯಾ ಮುಂದಿನ ಸಲ ನೀನೆ ಮಸಾಲೆ ಮಾಡು ಅಂತ. ಅದಕ್ಕೆ ಕುಂಕ್ರಿಯಲ್ಲಿ ಉತ್ತರ, “ಅಮ್ಮಾ ಅಡಿಗೆ ಮನೆಯಲ್ಲಿ ಏನೇನ್ ಮಸಾಲಾ ಡಬ್ಬದಲ್ಲಿ ಇದಿಯೋ ಅದೆಲ್ಲ ಸ್ವಲ್ಪ-ಸ್ವಲ್ಪ ಹಾಕಿದ್ದೀನಿ. ಈಗ್ ಕೇಳಿದರೆ ನನಗೆ ಹೇಳಲು ಬರಲ್ಲ” ಅಂದಳು. ಮಗಳ ಮಾತಿಗೆ ಅಪ್ಪ-ಅಮ್ಮನಿಗೆ ನಗು ಬಂದಿತು. ಎಲ್ಲ ಪಲಾವ್ ತಿಂದು ಅಡುಗೆ ಮನೆಗೆ ಹೋದರೆ ಎಲ್ಲಾ ಚಲ್ಲಾ-ಪಿಲ್ಲಿ ಆಗಿತ್ತು. ಗೊಡಂಬಿ ಡಬ್ಬ ಮತ್ತು ತುಪ್ಪ ಖಾಲಿ ಆಗಿತ್ತು.

No comments: