ಸತ್ಯವಂತ
ಕುಂಕ್ರಿ
ಕುಂಕ್ರಿಯ ಅಮ್ಮನಿಗೆ ಇಂದು ರಜಾ ಇರೋ
ಕಾರಣ ಎಲ್ಲಾದರು ಆಚೆ ಹೋಗಬೇಕು ಮತ್ತು ಆಚೆ ಊಟ ಮಾಡಿ ಬರಬೇಕು ಅನ್ನೋ ಹಂಬಲ ಇತ್ತು. ತನ್ನ ಈ ಬೇಡಿಕೆಯನ್ನು
ಗಂಡನ ಮುಂದೆ ಇಟ್ಟಳು. “ನೋಡ್ರಿ ಹೇಗು ಇಂದು ಫ್ರೀ ಆಗಿದ್ದೀರಾ ಎಲ್ಲಾದರು ಆಚೆ ಹೋಗಿ ಬರೋಣ. ನನಗೂ
ನನ್ನದೆ ಕೈ ಅಡಿಗೆ ತಿಂದು ನಾಲಿಗೆ ಕೆಟ್ಟು ಹೋಗಿದೆ. “ ಎಂದಳು. ಹೆಂಡತಿಯ ಮಾತಿಗೆ ಗಂಡ ಸರಿ ಎಂದ. ತುಂಬಾ ದಿನ ಆಯಿತು ಕುಂಕ್ರಿಯನ್ನು
ಆಚೆ ಕರೆದುಕೊಂಡು ಹೋಗದೆ ನೀವೆ ಎಲ್ಲಿ ಎಂದು ತಿರ್ಮಾನಿಸಿ ಎಂದು ಹೇಳಿದ. ಅಷ್ಟರಲ್ಲೆ ಅಲ್ಲೆ ಆಡ್ತಾ
ಇರೋ ಕುಂಕ್ರಿ ಓಡಿ ಬಂದು ಹೇಳಿದಳು, “ಅಮ್ಮಾ ನಿಮ್ಗೆ ಮರ್ತೊಗಿದಿಯಾ ಇವತ್ತು ಚಿರು ಚಿಕ್ಕಪ್ಪನ ಮನೆಯಲ್ಲಿ
ತನ್ಮಯ್ ಹುಟ್ಟುಹಬ್ಬ. ಸಂಜೆ ಬನ್ನಿ ಅಂತ ಕರೆದು ಹೋಗಿದ್ದು ನಿಮ್ಗೆ ನೆನಪಿಲ್ವಾ” ಅಂತ ಹೋಗುವ ಉತ್ಸಾಹದಲ್ಲಿ ಹೇಳಿದಳು. ಆಗ ಕುಂಕ್ರಿಯ ಅಪ್ಪ ಖುಷಿಯಲ್ಲಿ, “ಹೌದಲ್ಲೆ
ಕುಂಕ್ರಿ ನನ್ಗೆ ಮತ್ತು ನಿನ್ನ ಅಮ್ಮನಿಗೆ ಮರೆತೆ
ಹೋಗಿತ್ತು. ಜಾಣ ಮರಿ ನೆನ್ಪ್ ಮಾಡ್ದೆ. “ ಅಂತ ಮಗಳನ್ನು ಮುದ್ದಿಸಿದರು. ಕುಂಕ್ರಿಗು ಖುಶಿ. ಚಿರು
ಚಿಕ್ಕಪ್ಪನ ಮನೆಗೆ ಹೋಗೊದು ಮತ್ತು ತನ್ಮಯ್ ಜೊತೆ ಆಟ ಆಡೊದು ಅಂದ್ರೆ. ಆದ್ರೆ ಕುಂಕ್ರಿಯ ಅಮ್ಮ ಒಂದೆ
ಸಲ ಸಿಡಿಮಿಡಿಗೊಂಡು, “ನೋಡ್ರಿ ನನ್ಗೆ ನೆನ್ಪ್ ಇತ್ತು. ಅಲ್ಲಿಗೆ ಹೋಗೋದ್ ಬೇಡ ಅಂತಾನೆ ನಾನು ಆಚೆ
ಹೋಗೋ ಪ್ಲಾನ್ ಮಾಡಿದ್ದು. ನನ್ಗೆ ಅಲ್ಲಿಗೆ ಹೋಗೋ ಮನಸ್ಸಿಲ್ಲ. ನೀವೋ ಚಿರುನ ಜೊತೆ ಹರಟೆ ಹೊಡೆಯುತ್ತ
ಕುಳಿತಿರ್ತಿರಾ. ಇನ್ನು ಕುಂಕ್ರಿಗೆ ಆ ತನ್ಮಯ್ ಇದ್ರೆ ಅವರದ್ದೆ ಜಗತ್ತು. ನಾನ್ ಮಾತ್ರ ಆ ಶೋ ಅಪ್
ರಾಣಿ ಹತ್ತಿರ ಸಿಕ್ಕ್ ಹಾಕ್ಕೊಳ್ ಬೇಕು. ತಾನೊಂದು ಬೇಕಿಂಗ್ ಮಾಡ್ತಾ ಇದ್ದೀನಿ ಅಂತ ಜಗತ್ತೆ ಕಡಿದ
ಹಾಗೆ ಮಾತಾಡ್ತಾಳೆ. ನಿಮ್ಗೆ ಗೊತ್ತಿಲ್ಲ. ಇವತ್ತು
ಹುಟ್ಟುಹಬ್ಬಕ್ಕೆ ಅವಳು ಯಾವುದೋ ಕೇಕ್ ಮಾಡ್ತಾಳಂತೆ. ಅದ್ರನ್ನ ನಮ್ಮ ಮುಂದೆ ತೋರ್ಸಕೊಳ್ಳೋಕೆ ಕರೆದದ್ದು. ಇಗ್ಲೆ ವಾಟ್ಸ ಅಪ್ ಸ್ಟೇಟಸ್ ನಲ್ಲಿ ಹಾಕ್ತಾ ಇದ್ದಾಳೆ.
ಇನ್ನು ಮುಗಿದ ಮೇಲೆ ಏನ್ ಚಂದನೋ” ಅಂತ ಒಂದೆ ಸಮನೆ ಹೊಟ್ಟೆಲಿ ಇರೋದನ್ನ ಗಂಡ ನ ಮುಂದೆ ಹೇಳಿದಳು.
ಆದರೆ ಕುಂಕ್ರಿಯ ಅಪ್ಪನಿಗೆ ಚಿರು ನ
ಮನೆಗೆ ಹೋಗೋಕೆ ಮನಸ್ಸು. ಕುಂಕ್ರಿಯು ಹೋಗೋಣ ಅಂತ ಹಠ ಹಿಡಿದಳು. ಕುಂಕ್ರಿಯ ಅಮ್ಮ ಮಗಳಿಗೆ ಡ್ಯಾಶಿಂಗ್
ಕಾರ್ ಆಡುವ ಆಸೆ ತಲೆಗೆ ತುಂಬಿದಳು. ಅದು ಅಲ್ಲದೆ ಚಿಕ್ಕಮ್ಮ ಮಾಡುವ ಕೇಕ್ ಕಿಂತ ಇನ್ನು ಒಳ್ಳೋಳ್ಲೆ
ಕೇಕ್ ಮತ್ತು ಅದರ ಜೊತೆ ಐಸ್ ಕ್ರೀಮ್ ಕೊಡಿಸುವ ಪ್ರೋಮಿಸ್ ಮಾಡಿ ಕುಂಕ್ರಿಯನ್ನು ತಕ್ಕ ಮಟ್ಟಿಗೆ ಒಪ್ಪಿಸಿದಳು.
ಆದರೆ ಕುಂಕ್ರಿಯ ಅಪ್ಪನಿಗೆ ಬರದೆ ಇರೋದಕ್ಕೆ ಕಾರಣ ಹೇಳುವ ಚಿಂತೆ ಆಗಿತ್ತು. ಅದಕ್ಕು ಕುಂಕ್ರಿಯ ಅಮ್ಮ
ಉಪಾಯ ಹೂಡಿದಳು. ತನ್ನ ಸರು ಅತ್ತೆ ಮನೆ ಪೂಜೆಗೆ ಹೋಗಿದ್ವಿ. ಬರೋದು ಲೇಟ್ ಆಯಿತು ಅಂತ ಪ್ಲಾನ್ ಮಾಡಿದಳು.
ಅಂತು ಹೆಂಡತಿಯ ಮಾತಿಗೆ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ.
ಇದಾದ ಮೂರು-ನಾಲ್ಕು ದಿನಕ್ಕೆ ಚಿರು
ನ ಪ್ಯಾಮಿಲಿ ಕುಂಕ್ರಿ ಮನೆಗೆ ಬಂದರು. ಹುಟ್ಟುಹಬ್ಬದ ದಿನ ನಿಮ್ಮನ್ನ ತುಂಬಾ ಹೊತ್ತು ವೇಟ್ ಮಾಡ್ದವಿ.
ಯಾಕ ಬಂದಿಲ್ಲ ಅಂತ ಕೇಳಿದರು. ಮೊದಲೆ ಪ್ಲಾನ್ ಮಾಡಿದಂತೆ
ತನ್ನ ಅತ್ತೆ ಮನೆಲಿ ಪೂಜೆ ಇತ್ತು. ಬರೋದು ಲೇಟ್ ಆಯಿತು ಅಂತ ಹೇಳಿದಳು. ಆಗ ಅಷ್ಟರಲ್ಲೆ ಕುಂಕ್ರಿ
“ಇಲ್ಲ ಚಿಕ್ಕಮ್ಮ, ನಾವ್ ಆ ದಿನ ಮಂತ್ರಿ ಮಾಲ್ ಗೆ ಹೋಗಿ
ಡ್ಯಾಶಿಂಗ್ ಕಾರ್ ಆಡಿ, ಅಲ್ಲೆ ಕೇಕ್,ಐಸ್ ಕ್ರೀಮ್ ಎಲ್ಲಾ ತಿಂದ್ ಬಂದ್ವಿ.” ಅಂತ ಹೇಳಿದಳು.
ತಕ್ಷಣವೆ ಕುಂಕ್ರಿಯ ಅಮ್ಮ ಮಗಳ ಮಾತನ್ನು ಮರೆ ಮಾಚುವಂತೆ,
ಕುಂಕ್ರಿಗೆ ಯಾವಾಗ ಹೇಳಿ ಮರೆತು ಹೋಗಿದೆ. ‘ ಏಯ್, ನಾವ್ ಅಲ್ಲಿಗೆ ಹೋಗಿದ್ದು ಹಿಂದಿನ ವಾರ. ಮೊನ್ನೆ
ಸರು ಅಜ್ಜಿ ಮನೆ ಪೂಜೆಗೆ ಹೋಗಿದ್ದು” ಅಂತ ಸ್ವಲ್ಪ
ಕಣ್ಣು ಬಿಟ್ಟು ಹೇಳಿದಳು. ಆದ್ರೆ ಇದರ ಲಕ್ಷವೆ ಇಲ್ಲದೆ ಕುಂಕ್ರಿ ಇಲ್ಲಮ್ಮ, ಹುಟ್ಟು ಹಬ್ಬದ ದಿನ
ಹೋಗಿದ್ದು ಮಂತ್ರಿ ಮಾಲ್ ಗೆ. ಆ ಶೋ ಅಪ್ ರಾಣಿ ಮಾಡೋ ಲಡ್ಕಾಸಿ ಕೇಕ್ ತಿನ್ನೊದ್ ಬೇಡ, ನಿನಗೆ ಒಳ್ಳೊಳ್ಳೆ
ಕೇಕ್, ಐಸ್ಕ್ರೀಮ್ ಕೊಡ್ಸತ್ತೀನಿ ಮತ್ತು ಡ್ಯಾಶಿಂಗ್ ಕಾರ್ ಆಡೋಣ ಅಂತ ಹೇಳಿದ್ದು. ಅಪ್ಪ ಹೋಗೋಣ ಅಂದ್ರೆ
ನೀನೆ ಅಪ್ಪನ ಹತ್ತಿರ ಬೇಡ ಹೇಳಿ ಮಂತ್ರಿ ಮಾಲ್ ಗೆ ಕರೆದುಕೊಂಡು ಹೋದೆ” ಅಂತ ಇದ್ದ ಸತ್ಯವನ್ನು ಒಂದೆ
ಉಸಿರಲ್ಲಿ ಹೇಳಿದಳು. ಸತ್ಯವಂತ ಕುಂಕ್ರಿಯ ನೋಡಿ ಕುಂಕ್ರಿಯ ಅಮ್ಮನ ಮುಖ ಪೆಚ್ಚಾಯಿತು.