Monday, November 18, 2019

ಇಂದಿನ ಟ್ರಾಫಿಕ್ ನಲ್ಲಿ…


                                              ಇಂದಿನ ಟ್ರಾಫಿಕ್ ನಲ್ಲಿ…
ನಮ್ಮನೆ ಹತ್ತಿರದ ರಿಂಗ್ ರೋಡ್ಗೆ ವೈಟ ಟಾಪಿಂಗ್ ಮಾಡುತ್ತಿರುವ ಕಾರಣ ಪಕ್ಕದ ಸರ್ವಿಸ್ ರೋಡ್ ಫುಲ್ ರಶ್ ಆಗಿರತ್ತೆ. ಅದರಲ್ಲು ಬೆಳಿಗ್ಗೆ ಎಲ್ಲರಿಗೂ ಅವಸರ ಸ್ವಲ್ಪ ಜಾಸ್ತಿನೆ. ಸ್ಕೂಲ್ ಗೆ ಲೇಟ್ ಆಗತ್ತೆ, ಆಫೀಸ್ಗೆ ಲೇಟ್ ಆಗತ್ತೆ ಅಂತ ವಾಹನಗಳನ್ನು ಎಲ್ಲಿ ಅಂದರೆ ಅಲ್ಲಿ ನುಗ್ಗಿಸುವವರೆ.
ಇಂದು ಮಗಳನ್ನು ಸ್ಕೂಲ್ಗೆ ಬಿಡಲು ಹೋಗುತ್ತಿದ್ದೆ.  ಅದು ಏನೋ ಒಂದೇ ಸಲ ದಿನದಕ್ಕಿಂತ ಸ್ವಲ್ಪ ಜಾಸ್ತಿನೆ ವಾಹನಗಳು ಸೇರಿ ಜಾಮ್ ಆದವು. ನೆಟ್ಟಗೆ ಟ್ರಾಪಿಕ್ ರೂಲ್ಸ್ ಪಾಲಿಸಿದರೆ ಇಷ್ಟು ಆಗುತ್ತಿಲ್ಲವೋ ಏನೋ. ಆದರೆ ಅವಸರದಲ್ಲಿ ನುಗ್ಗುವವರೆ. ಇದರ ಮದ್ಯೆ ಹಿಂದಿನಿಂದ ಒಂದು ಆಂಬ್ಯುಲೆನ್ಸ್ ಒಂದೆ ಸಮನೆ ಹೊಡೆದುಕೊಳ್ಳುತ್ತಿತ್ತು. ಆದರೆ ಎಲ್ಲರಿಗೂ ತಮ್ಮ-ತಮ್ಮ ಕೆಲಸದ ಬಗ್ಗೆ ಚಿಂತೆ ಮತ್ತು ಸ್ಕೂಲ್  ಗೆ ಲೇಟ್ ಆದರೆ ಗೇಟ್ ಹಾಕುತ್ತಾರೆ ಮತ್ತು ಆಫೀಸ್ ಗೆ ಲೇಟ್ ಆದರೆ ಒಂದು ದಿನದ ಸಂಬಳ ಕಟ್  ಮಾಡುತ್ತಾರೆ ಎಂದು ಯೋಚಿಸುತ್ತಾರೆಯೆ ಹೊರತು ಆಂಬ್ಯುಲೆನ್ಸ್ ನಲ್ಲಿ ಒಂದು ಜೀವಕ್ಕೆ ತುಂಬಾ ಕಡಿಮೆ ಸಮಯ ಇರುವುದು ಮತ್ತು ಹಾಸ್ಪಿಟಲ್ ಗೆ ಆದಷ್ಟು ಬೇಗ ಹೋಗದೆ ಇದ್ದರೆ ಆ ಜೀವ ಇನ್ನೆಲ್ಲಿಗೊ ಶಾಶ್ವತವಾಗಿ ಹೋಗಬೇಕಾಗುತ್ತದೆ  ಅನ್ನುವ ಪರಿಕಲ್ಪನೆ ಇರುವುದಿಲ್ಲ.
ಇಂದಿನ ಟ್ರಾಫಿಕ್ ಜಾಮ್ ನಲ್ಲಿ ಆ ಆಂಬ್ಯುಲೆನ್ಸ್ ಗೆ ಸಾರ್ವಜನಿಕರು ಸ್ವಲ್ಪ ಸಹಕರಿಸಿದರೆ ಒಂದು ಲೈನ್ ಬಿಟ್ಟು ಕೊಡಬಹುದಿತ್ತು. ಅಲ್ಲಿಂದ ಐದು ನಿಮಿಷಕ್ಕೆ ಅಪೋಲೊ ಹಾಸ್ಪಿಟಲ್. ಆದರೆ ಅಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ ಆಬ್ಯುಲೆನ್ಸ್  ನ ಮುಂದೆ ಕುಳಿತಿರುವ ರೋಗಿಯ ಸಂಭಂದಿಯೆ ಇಳಿದು ಬೇಡಿಕೊಂಡ. ಮುಖದಲ್ಲಿ ದುಖಃ ಮತ್ತು ಭಯ ಎದ್ದು ಕಾಣುತ್ತಿತ್ತು. ಅಕ್ಷರಶಃ ಬೈಕಿನವರ ಹತ್ತಿರ ಬೇಡಿಕೊಂಡು ಆತನೆ  ಹೇಗೋ ಸಿಗ್ನಲ್ ದಾಟಿಸಿದ. ಅದೇ ಸಾರ್ವಜನಿಕರು ತಿಳಿದು ಮಾಡಿದಿದ್ದರೆ ಇನ್ನು ಒಂದು ಹತ್ತು ನಿಮಿಷ ಬೇಗ ಹೋಗುತ್ತಿದ್ದನೋ. ಅವರಿಗೆ ಒಂದೊಂದು ನಿಮಿಷವು ಅತಿ ಮುಖ್ಯ. ಸ್ವಲ್ಪ ತಡವಾಗಿ ಸ್ಕೂಲ್ ಮತ್ತು ಆಫೀಸಿಗೆ ಹೋದರೆ ಮರುದಿನ ಸರಿ ಪಡಿಸಿಕೊಳ್ಳಬಹುದು. ಇಲ್ಲವೇ ಸ್ವಲ್ಪ ಜಾಸ್ತಿ ಸಮಯ ಆಫೀಸಿನಲ್ಲಿ ಕುಳಿತು ಕೆಲಸ ಮುಗಿಸಿ ಬರಬಹುದು. ಆದರೆ ಹೋದ ಜೀವ ವಾಪಸ್ ತರುವುದು ಆಗದ ಮಾತು.  ಒಂದು ಅರ್ದ ಗಂಟೆ ಮುಂಚೆ ಕರೆದು ತಂದಿದ್ದರೆ ಅನ್ನೋ ಮಾತು ಕೇಳುವುದಕ್ಕಿಂತ  ಆಂಬ್ಯುಲೆನ್ಸ್ ಗೆ ಆದಷ್ಟು ಜಾಗ ಬಿಟ್ಟು ಸಹಕರಿಸುವುದು ಲೇಸು.

Wednesday, November 13, 2019

ಕುಂಕ್ರಿಯ ಸ್ವಚ್ಚ ಭಾರತ


                       ಕುಂಕ್ರಿಯ ಸ್ವಚ್ಚ ಭಾರತ
ದೀಪಾವಳಿ ಬಂತು ಅಂದರೆ ಏನೋ ಒಂದು ಸಡಗರ. ಅದರಲ್ಲು ಮಕ್ಕಳಲ್ಲಿ ಮೊದಲಿಗೆ ಎಷ್ಟು ದಿನ ಶಾಲೆಗೆ ರಜೆ ಎಂದು ಡೈರಿ ನೋಡಿರುತ್ತಾರೆ. ನಂತರ ಈ ಬಾರಿ ಯಾವ ಯಾವ ಪಟಾಕಿ ತರಬೇಕು ಅನ್ನುವ ಪ್ಲಾನ್. ಈ ಪಟಾಕಿ ಮಾತ್ರ ಅಪ್ಪಂದಿರ ಜೇಬಿಗೆ ಖನ್ನ. ಪಟಾಕಿ ಹೊಡೆಯುವಾಗಲು ಕೈ ಸುಟ್ಟುಕೊಳ್ಳುವ ಹಾಗೆ ಪಟಾಕಿ ತರಬೇಕಿದ್ದರು ಕೈ ಬಿಸಿ ಆಗುವುದು. ಆದರೆ ಏನ್ ಮಾಡೋದು ಪಕ್ಕದ ಮನೆ ಮಗು ಪಟಾಕಿ ಹೊಡೆಯಬೇಕಿದ್ದರೆ ನಮ್ಮನೆ ಮಕ್ಕಳು ಮನೆ ಒಳಗೆ ಕುತಿರಲ್ಲ. ಅವರು ಒಂದು ಪ್ಯಾಕ್ ರಾಕೆಟ್ ಹೊಡೆದರೆ ಇವರು ಒಂದು ಪ್ಯಾಕ್ ರಾಕೆಟ್ ತರುವುದೆ. ಹೆಣ್ಣು ಮಕ್ಕಳಿಗೆ ನೆಲ ಚಕ್ರ ಮತ್ತು ಪವರ್ ಪಾಟ್ ಮೇಲೆ ವಿಶೇಷ ಆಸಕ್ತಿ.ಅವರವರ ಆಸಕ್ತಿಯ ಅನುಸಾರ ಪಟಾಕಿಯ ಖರೀದಿ ಆಗುವುದು.
ಏನೇ ಅಂದರು ದೀಪಾವಳಿಗೆ  ಎರಡು-ಮೂರು ದಿನ ಶಾಲೆಗೆ  ರಜೆ ಗ್ಯಾರಂಟಿ. ಅದರ ಅನುಸಾರವಾಗಿ ಮೂರು ದಿನಕ್ಕೆ ಆಗುವಷ್ಟು ಪಟಾಕಿ ಕುಂಕ್ರಿಯ ಮನೆಗು ಬಂತು. ಹಾಗೆ ಪ್ಲಾಟ್ ನಲ್ಲಿ ಇರುವ ಅಕ್ಕ-ಪಕ್ಕ ದ ಮನೆಗು ಪಟಾಕಿಯ ಆಗಮನವಾಯಿತು. ಮೊದಲೆ ಮಕ್ಕಳಲ್ಲಿ ಮಾತು-ಕಥೆ ಆಗಿತ್ತು. ಎಲ್ಲಾ ಸೇರಿ ಸುಮಾರು ಏಳು ಗಂಟೆಯಿಂದ ಪಟಾಕಿ ಹೊಡೆಯಲು ಶುರು ಮಾಡುವುದೆಂದು. ಮಕ್ಕಳ ಖುಶಿ ಜೊತೆ ನಮ್ಮ ಖುಶಿಗು ಎಲ್ಲಾ ಸೇರಿ ದೀಪ ಹಚ್ಚಿ ಪಟಾಕಿ ಹೊಡೆಯಲು ಶುರು ಮಾಡಿದೆವು. ಕುಂಕ್ರಿ ಗೆ ಮತ್ತು ಅವಳ ಸ್ನೇಹಿತರಿಗೆ  ಪಟಾಕಿ ಹೊಡೆಯುವ ಉತ್ಸಾಹ. ಅಂತು ಮೊದಲನೆ ದಿನದ ಪಟಾಕಿ ಹೊಡೆದಾಯಿತು.
ಪಟಾಕಿ ಹೊಡೆದ ತಕ್ಷಣ ನಮಗೆಲ್ಲಾ ಟಿ.ವಿ ಯಲ್ಲಿ ಪ್ರಸಾರ ಆಗುವ ನಮ್ಮ ಮೆಚ್ಚಿನ ಕಾರ್ಯಕ್ರಮಗಳು ನೆನಪಾದವು. ಮನೆಗೆ ಹೋಗುವ  ಅವಸರದಲ್ಲಿ ಎಲ್ಲಾ ಬೆಸ್ಮೆನ್ಟಗೆ ಬಂದೆವು. ಆದರೆ ಕುಂಕ್ರಿ ಮತ್ತು ಅವಳ ಸ್ನೇಹಿತರು ಪುನಃ ರಸ್ತೆಗೆ ಕರೆದುಕೊಂಡು ಬಂದರು. ನಾವು ಇನ್ನೇನೋ ಪಟಾಕಿ ಹೊಡೆಯುವುದಿದೆ ಎಂದು, “ನೋಡಿ ಇವತ್ತಿಗೆ ಸಾಕು. ಇನ್ನು ಎರಡು ದಿನ ಇದೆ. ನಾಳೆ ನಾಡಿದ್ದು ಹೊಡೆದರಾಯಿತು. ಲೇಟ್ ಆಯಿತು ಮನೆಗೆ ಹೋಗೋಣ” ಎಂದು ಹೇಳಿದೆವು. ಆದರೆ ಕುಂಕ್ರಿ ಮತ್ತು ಅವಳ ಸ್ನೇಹಿತರು ನಾವು ಪಟಾಕಿ ಹೊಡೆಯಲು ಕರೆದಿಲ್ಲ. ಇವತ್ತಿಗೆ ಇಷ್ಟೆ ಸಾಕು. ಆದ್ರೆ ಇವತ್ತು ಹೊಡೆದ ಪಟಾಕಿ ಕಸ ಎಲ್ಲರು ಸೇರಿ ಕ್ನೀನ್ ಮಾಡೋಣ. ಹಾಗೆ ನಾಳೆ ನಾಡಿದ್ದು ಕೂಡ. ಟಿ.ವಿ ನಲ್ಲಿ ನರೇಂದ್ರ ಮೋದಿ ಭಾಷಣ ಕೇಳಿ ಚಪ್ಪಾಳೆ ಹಾಕ್ತೀರಾ. ಆದ್ರೆ ಅವರು ಹೇಳೊದು ನಾವು ಮಾಡೋದು ಬೇಡ್ವಾ? ಬನ್ನಿ ನಾವು ಮಾಡಿದ ಕಸನ ನಾವೆ ಕ್ಲೀನ್ ಮಾಡೋಣ ಅನ್ನುತ್ತಾ ಎಲ್ಲರ ಕೈಗು ಪೊರಕೆ ಕೊಟ್ಟರು. ನಮಗು ಮಕ್ಕಳು ಕೇಳಿದ್ದು ಸರಿ ಅನ್ನಿಸಿ ದೀಪಾವಳಿ ಆಚರಣೆಯ ಜೊತೆಗೆ ಮಕ್ಕಳ ಜೊತೆ ಸ್ವಚ್ಚ ಭಾರತದ ನಿಯಮವನ್ನು ಪಾಲಿಸಿದೆವು.