Wednesday, December 4, 2019

ಚಿಕ್ಕಿಯ ಅವಾಂತರ


                                       ಚಿಕ್ಕಿಯ ಅವಾಂತರ
ಪ್ರತಿ ದಿನ ಶಾಲೆಯಿಂದ ಬರೋವಾಗ ನಾಣುನ ಅಂಗಡಿಲಿ ಐವತ್ತು ಪೈಸೆಗೆ ಚಿಕ್ಕಿ ತಗೊಂಡು ತಿನ್ನುತ್ತಾ ಬರೋದು ನನ್ನ ಮತ್ತು ಅಕ್ಕನ ರೂಢಿ ಆಗಿತ್ತು. ಆದ್ರೆ ಒಂದು ದಿನ ನಮ್ಮಿಬ್ಬರಿಗೂ ಮನೆಲೆ ಚಿಕ್ಕಿ ಮಾಡೋ ಆಸೆ ಆಯಿತು. ಅದಕ್ಕೆ ಸರಿಯಾಗಿ ಒಂದು ಭಾನುವಾರ ಅಪ್ಪ-ಅಮ್ಮ ಇಲ್ಲದೆ ಇದ್ದಾಗ ನಾನು ಮತ್ತು ಅಕ್ಕ ಚಿಕ್ಕಿ ಮಾಡಲು ತಯಾರಿ ನಡೆಸಿದೆವು. ಆಗ ಇಗಿನ ತರ ಯು ಟ್ಯೂಬ್ ಇಲ್ಲ. ಅಮ್ಮನ ಹತ್ತಿರ ಯಾವಾಗಲೊ ಕೇಳಿದ್ದನ್ನು ನೆನಪು ಮಾಡಿ ಮೊದಲು ಬೆಲ್ಲವನ್ನು ಕರಗಿಸಲು ಇಟ್ಟೆವು. ನಾನು ಶೇಂಗಾಬಿಜವನ್ನು ಹುರಿದು ಸಿಪ್ಪೆ ತೆಗೆದು ಅದನ್ನು ಎರಡು ಭಾಗ ಮಾಡಿದೆ. ನಾವು ಕೆಲಸ ಮಾಡುವಾಗ ತಮ್ಮ ಕುತೂಹಲದಿಂದ ನೋಡುತ್ತಿದ್ದ. ಎಲ್ಲಾ ಮುಗಿದು ಚಿಕ್ಕಿ ಯಾವುದರಲ್ಲಿ ಹರಡ ಬೇಕು ಅಂತ ತಿಳಿದೆ ಅಲ್ಲೆ ಇದ್ದ ಚಪಾತಿ ಲಟ್ಟಿಸುವುದರ ಮೇಲೆ ಹುಯ್ದು ಸೌಟಿನಿಂದಲೆ ಚೌಕಾಕಾರ ಮಾಡಿದೆವು. ಅಂತು ನಾಣುನ ಅಂಗಡಿಲಿ ಸಿಗೋ ಚಿಕ್ಕಿ ತರನೆ ಕಾಣ್ತಾ ಇದೆ ಅಂತ ನಿಟ್ಟುಸಿರು ಬಿಟ್ಟೆವು. ಸ್ವಲ್ಪ ಆರಿದ ಮೇಲೆ ಕತ್ತರಿಸಿದರಾಯಿತು ಅಂತ ಅಂದುಕೊಂಡೆವು.
ಸ್ವಲ್ಪ ಆರಿದ ಮೇಲೆ ಕತ್ತರಿಸಲು ಹೋದರೆ ಅದು ಕಟ್ ಮಾಡಲು ಬರಲಿಲ್ಲ. ಅದು ಅಲ್ಲದೆ ಜಪ್ಪಯ್ಯ ಅಂದರು ಚಪಾತಿ ಮಣೆಯಿಂದ ಎಳಲಿಲ್ಲ. ಅಷ್ಟರಲ್ಲೆ ಅಕ್ಕನಿಗೆ ಪ್ಲಾಶ್ ಆಯಿತು,”ಅಯ್ಯೊ ಚಪಾತಿ ಮಣೆಗೆ ತುಪ್ಪ ಸವರಲು ಮರೆತು ಹೋಯಿತು. ಅದಕ್ಕೆ ಎಳ್ತಾ ಇಲ್ಲ” ಅಂತ ಹೇಳಿದಳು. ಆಗ ಏನ್ ಮಾಡಬೇಕು ಅಂತ ತೋಚದೆ ಅಮ್ಮ ಬರೋ ವೆಳೆಗೆ ಚಪಾತಿ ಮಣೆ ಸರಿ ಮಾಡಬೇಕು ಅಂತ ಅಲ್ಲೆ ಹೊರಗೆ ಇದ್ದ ಅಕ್ಕಚ್ಚಿನ ಬಕೆಟ್ (ದನಕ್ಕೆ ಕೊಡುವ ನೀರು) ನಲ್ಲಿ ಮುಳುಗಿಸಿದೆವು. ಅಲ್ಲೆ ನೀರಿನಲ್ಲಿ ಶೇಂಗಾ, ಬೆಲ್ಲ ಬಿಟ್ಟುಕೊಳ್ಳತ್ತೆ ಅದನ್ನು ದನಕ್ಕೆ ಕೊಟ್ಟರಾಯಿತು ಹಾಗೆ ಚಪಾತಿ ಮಣೆ ಕ್ಲೀನ್ ಮಾಡಿದ ಹಾಗು ಆಗತ್ತೆ ಅಂತ ಉಪಾಯ ಮಾಡಿದೆವು.
ಸಂಜೆ ಅಮ್ಮ ಮನೆಗೆ ಬಂದ ಮೇಲೆ ಕೆಲಸದವರ ಹತ್ತಿರ ದನಕ್ಕೆ  ಅಕ್ಕಚ್ಚು, ಹುಲ್ಲು ಆಗಿದೆಯಾ ಅಂತ ಕೇಳುವಾಗ ತಮ್ಮ ಎಲ್ಲರ ಮುಂದು ನಮ್ಮ ಚಿಕ್ಕಿಯ ಕಥೆಯನ್ನು ಎಳೆ-ಎಳೆಯಾಗಿ ಹೇಳಿದ. ನಾವು ಇಂಗು ತಿಂದ ಮಂಗನಂತೆ ನಿಂತೆವು. ಎಲ್ಲರು ನಮ್ಮ ಚಿಕ್ಕಿಯ ಅವಾಂತರ ಕೇಳಿ ಮುಸಿ-ಮುಸಿ ನಕ್ಕರು.


No comments: