Friday, March 5, 2021

 

                         ಬೆಸಿಗೆಯ ಧಗೆಗೆ ತಂಪಾದ ತಂಬಳಿಗಳು

ಎಪ್ರೀಲ್ ಮತ್ತು ಮೇ ಬಂತೆಂದರೆ ಕಡು ಬಿಸಿಲು. ದೇಹಕ್ಕೆ ತಂಪಾದ ಆಹಾರ ಪದಾರ್ಥಗಳೆ ಒಳ್ಳೆಯದು. ಊಟಕ್ಕೆ ಬಿಸಿ ಬಿಸಿ ಸಾರು ಹುಳಿಗಿಂತ ತಂಪಾದ ತಂಬಳಿಗಳು ಒಳ್ಳೆಯದು. ಹೆಚ್ಚಾಗಿ ಮಲೆನಾಡಿನ ಕಡೆ ಊಟಕ್ಕೆ ಮೊದಲು ತಂಪಾದ ತಂಬಳಿಗಳನ್ನು ಬಡಿಸಿ ನಂತರ ಹುಳಿ ಕೇಳುವ ವಾಡಿಕೆ. ತಂಬಳಿಗಳಲ್ಲಿ ಅನೇಕ ವಿಧಗಳಿವೆ. ಶುಂಟಿ ತಂಬಳಿ, ಎಳ್ಳು-ಜೀರಿಗೆ ತಂಬಳಿ,ಬೆಳ್ಳುಳ್ಳಿ ತಂಬಳಿ, ದೊಡ್ಡ ಪತ್ರೆ ತಂಬಳಿ, ಪಾಲಕ್ ತಂಬಳಿ, ಮಜ್ಜಿಗೆ ಹುಲ್ಲಿನ ತಂಬಳಿ,ದಾಳಿಂಬೆ ಕುಡಿ ತಂಬಳಿ, ಒಂದೆಲಗದ ತಂಬಳಿ,ಬಸಳೆ ಸೊಪ್ಪಿನ ತಂಬಳಿ, ಹೀರೆಕಾಯಿ ತಂಬಳಿ, ಸವತೆ ಕಾಯಿ ತಂಬಳಿ….ಇನ್ನು ಅನೇಕ ರೀತಿಯ ತಂಬಳಿಗಳಿವೆ.  ಕೆಲವು ತಂಬಳಿಗಳು ದೇಹಕ್ಕೆ ಉಷ್ಣ ನೀಡಿದರೆ ಕೆಲವು ತಂಪು ನೀಡುತ್ತವೆ. ಬೆಸಿಗೆಗೆ ತಂಪು ನೀಡುವ ಕೆಲವು ತಂಬಳಿಗಳನ್ನು ಕೆಳಗೆ ಉಲ್ಲೆಖಿಸಿದ್ದೆನೆ.

ಹೀರೆಕಾಯಿ ತಂಬಳಿ

ಬೇಕಾಗುವ ಸಾಮಗ್ರಿಃ

ಹೀರೆಕಾಯಿ ಹೆಚ್ಚಿದ್ದು ಒಂದು ಹಿಡಿ, ಎಳ್ಳು ಒಂದು ಚಮಚ, ಬೆಲ್ಲ ಮತ್ತು ಉಪ್ಪು ರುಚಿಗೆ ಅನುಸಾರ, ಎಣ್ಣೆ, ತೆಂಗಿನ ತುರಿ, ಮಜ್ಜಿಗೆ

ತಯಾರಿಸುವ ವಿಧಾನಃ

ಮೊದಲು ಹೀರೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ. ಇದನ್ನು ಒಂದು ಬಾಣೆಲೆಗೆ ಹಾಕಿ ಎಣ್ಣೆಯಲ್ಲಿ ಹುರಿಯಿರಿ. ಇದನ್ನು ಹುರಿಯುವಾಗಲೆ ಎಳ್ಳು, ಬೆಲ್ಲ, ಉಪ್ಪು ಹಾಕಿ. ಹೀರೆಕಾಯಿ ಹೊಳು ಉಪ್ಪು ಬೆಲ್ಲವನ್ನು ಹೀರಿಕೊಂಡು ಇದರ ಜೊತೆ ಚನ್ನಾಗಿ ಬೇಯುವುದು. ಇದು ಆರಿದ ಮೇಲೆ ತೆಂಗಿನ ತುರಿಯ ಜೊತೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಇದಕ್ಕೆ ಮಜ್ಜಿಗೆಯನ್ನು ಸೇರಿಸಿಕೊಳ್ಳಿ,

ಹೀರೆಕಾಯಿ ತಂಬಳಿ ಸ್ವಲ್ಪ ಸಿಹಿಯಾಗಿದ್ದರೆ ರುಚಿ. ಹೀರೆಕಾಯಿ ದೇಹಕ್ಕೆ ತಂಪು. ಬೆಸಿಗೆಗೆ ಒಂದು ಒಳ್ಳೆಯ ಪದಾರ್ಥ.

ಮಜ್ಜಿಗೆ ಹುಲ್ಲಿನ ತಂಬಳಿ (ಲೆಮನ್ ಗ್ರಾಸ್)ಃ

ಬೇಕಾಗುವ ಸಾಮಗ್ರಿಃ

ಮಜ್ಜಿಗೆ ಹುಲ್ಲು ಒಂದು ಹಿಡಿ ಕತ್ತರಿಸಿದ್ದು, ತೆಂಗಿನ ತುರಿ, ಉಪ್ಪು, ಮಜ್ಜಿಗೆ

ತಯಾರಿಸುವ ವಿಧಾನಃ

ಮಜ್ಜಿಗೆ ಹುಲ್ಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದರಿಂದ ಮಿಕ್ಸಿಯಲ್ಲಿ ರುಬ್ಬಲು ಸುಲಭವಾಗುವುದು. ಮಜ್ಜಿಗೆ ಹುಲ್ಲನ್ನು ಸ್ವಲ್ಪ ನೀರು ಸೇರಿಸುತ್ತಾ ರುಬ್ಬಿ ಇದನ್ನು ಸೋಸಿಕೊಳ್ಳ ಬೇಕು. ಸೋಸಿದ ನಂತರ ಬಂದ ರಸಕ್ಕೆ, ರಸದ ಅರ್ಧದಷ್ಟು ಮಜ್ಜಿಗೆ ಸೇರಿಸ ಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಈ ತಂಬಳಿ ದೇಹಕ್ಕೆ ತಂಪು ನೀಡುವುದರ ಜೊತೆಗೆ  ಹೊಟ್ಟೆಗು ಒಳ್ಳೆಯದು.

 

ಒಂದೆಲಗದ ತಂಬಳಿಃ

ಬೇಕಾಗುವ ಸಾಮಗ್ರಿಃ

ಒಂದೆಲಗ ಒಂದು ಹಿಡಿ, ಎಣ್ಣೆ, ಜೀರಿಗೆ ಒಂದು ಚಮಚ, ಕಾಳು ಮೆಣಸು ಐದರಿಂದ ಆರು, ತೆಂಗಿನ ತುರಿ, ಮಜ್ಜಿಗೆ, ಉಪ್ಪು

ತಯಾರಿಸುವ ವಿಧಾನಃ

ಮೊದಲು ಎಣ್ಣೆಯಲ್ಲಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿದುಕೊಳ್ಳಿ. ಮಿಕ್ಸಿ ಗೆ ಒಂದೆಲಗ ಹಾಕಿ ರುಬ್ಬಿಕೊಳ್ಳಿ. ನಂತರ ತೆಂಗಿನತುರಿ ಹಾಕಿ ಇದರ ಜೊತೆ ಹುರಿದ ಜೀರಿಗೆ ಮತ್ತು ಕಾಳುಮೆಣಸು ಹಾಕಿ ನುಣ್ಣಗೆ ರುಬ್ಬಿ. ಈಗ ಇನ್ನೊಂದು ಪಾತ್ರೆಗೆ ತೆಗೆದು ಇದಕ್ಕೆ ಬೇಕಾದಷ್ಟು ಉಪ್ಪು ಮತ್ತು ಮಜ್ಜಿಗೆ ಹಾಕಿ.

ಒಂದೆಲಗದಲ್ಲಿ ಔಷದಿ ಗುಣ ಇರುವ ಕಾರಣ ಒಂದೆಲಗವನ್ನು ಹುರಿದೆ ಹಸಿಯಾಗಿ ರುಬ್ಬಲಾಗುವುದು. ಇದನ್ನು ಮಜ್ಜಿಗೆ ಹುಲ್ಲಿನ ತಂಬಳಿ ತರಹ ಕೂಡ ಮಾಡಬಹುದು.

 

ಸವತೆಕಾಯಿ ತಂಬಳಿಃ

ಬೇಕಾಗುವ ಸಾಮಗ್ರಿಃ

ಎಳೆ ಸವತೆಕಾಯಿ, ತೆಂಗಿನ ತುರಿ, ಉಪ್ಪು, ಎಣ್ಣೆ, ಎಳ್ಳು, ಹಸಿಮೆಣಸು

ತಯಾರಿಸುವ ವಿಧಾನಃ

ಮೊದಲು ಸ್ವಲ್ಪ ಎಣ್ಣೆಗೆ  ಎಳ್ಳು ಮತ್ತು ಹಸಿಮೆಣಸನ್ನು ಹಾಕಿ ಎಣ್ಣೆಯಲ್ಲಿ ಹುರಿಯಿರಿ. ನಂತರ ಇದನ್ನು ಕಾಯಿತುರಿಗೆ ಹಾಕಿ. ಇದಕ್ಕೆ ಕತ್ತರಿಸಿದ ಸವತೆಕಾಯಿ ಎಲ್ಲವನ್ನು ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ಅನುಸಾರ ಉಪ್ಪು ಹಾಕಿ. ಈ ತಂಬಳಿಗೆ ಮಜ್ಜಿಗೆಯನ್ನು  ಸ್ವಲ್ಪ ಸೇರಿಸಿ. ಸವತೆಕಾಯಿಯಲ್ಲಿ ಸ್ವಲ್ಪ ಹುಳಿ ಅಂಶ ಇರುವುದರಿಂದ ಮಜ್ಜಿಗೆ ಇಲ್ಲದಿದ್ದರು ನಡೆಯುತ್ತದೆ. ಇದು ಕೂಡ ದೇಹಕ್ಕೆ ತಂಪು ನೀಡುತ್ತದೆ.

ಎಲ್ಲಾ ತಂಬಳಿಗಳು ಸ್ವಲ್ಪ ತೆಳ್ಳಗೆ ಇರಲಿ. ತಂಬಳಿಗೆ ಕಾಳು ಮೆಣಸನ್ನು ಹಾಕಬಹುದು. ಇಲ್ಲವೆ ಖಾರ ಇಲ್ಲದೆ ಕೂಡ ಊಟ ಮಾಡಬಹುದು. ಆರೋಗ್ಯ ಮತ್ತು ರುಚಿಗೆ ಅನುಸಾರವಾಗಿ ನಮ್ಮ ಇಷ್ಟದ ಪ್ರಕಾರ ಮಾಡಿಕೊಳ್ಳಬಹುದು.

 

 

No comments: