Sunday, June 20, 2021

ಕುಂಕ್ರಿಯ ಮದುವೆ ಮನೆ

 

                               ಕುಂಕ್ರಿಯ ಮದುವೆ ಮನೆ

ನಮ್ಮ ಆಪ್ತ ನೆಂಟರಲ್ಲಿ ಮದುವೆ ಗೊತ್ತಾಯಿತು ಅಂದ್ರೆ ಏನೋ ಸಡಗರ. ಯಾರದೋ ಮದುವೆ ಆದ್ರೆ ತಾಸಿನ ಮಟ್ಟಿಗೆ ಹೋಗಿ ಬರಬೇಕು. ಅದೇ ಆಪ್ತರದ್ದಾದರೆ ಎರಡು ಮೂರು ದಿನದ ತಿರುಗಾಟ. ಎಲ್ಲಾ ನೆಂಟರನ್ನು ನೋಡಬಹುದು ಮತ್ತು ಅವರ ಜೊತೆ ಹರಟೆ ಹೊಡೆಯುತ್ತಾ ಒಂದಷ್ಟು ಸುದ್ದಿಯನ್ನು ಸಂಗ್ರಹಿಸಬಹುದು.

ಇನ್ನು ಈ ಕುಂಕ್ರಿಯ ವಿಷಯಕ್ಕೆ ಬಂದರೆ ಮದುವೆ ಕರೆಯಲು ಬಂದಾಗಲೆ ತಾನು ಬರುವ ಆಶ್ವಾಸನೆ ನೀಡಲಾಗುತ್ತದೆ. ಅದರಲ್ಲು ತನಗೆ ಇಷ್ಟವಾದ ಬಟ್ಟೆ ಹಾಕಿಕೊಳ್ಳುವ ತಯಾರಿ ನಡೆಯುತ್ತದೆ.ಈ ಬಾರಿ ಕುಂಕ್ರಿಗೆ ಅವಳ ಅಪ್ಪನ ತಂಗಿ ಅಂದರೆ ಅವಳ ಅತ್ತೆ ಮಗನ ಮದುವೆ ಇತ್ತು. ಅತ್ತೆ ಕರೆಯಲು ಬಂದಾಗಲೆ ಹೇಳಿದ್ದಳು, “ನೋಡೆ ಕುಂಕ್ರಿ ನೀನು ಅಪ್ಪ ಅಮ್ಮನ ಜೋತೆ ನಾಲ್ಕು ದಿನ ಮುಂಚೆ ಬರಬೇಕು” ಅಂತ  ತನ್ನ ಅತ್ತಿಗೆಗೂ ತಾಗುವ ಹಾಗೆ ಹೇಳಿ ಹೋಗಿದ್ದಳು. ಈ ಕುಂಕ್ರಿಗೆ ಅತ್ತೆ ಮನೆ ಮದುವೆಗೆ ಹೋಗುವ ಸಂಭ್ಫ್ರಮ ಜೋರೆ.

ಒಂದು ದಿನ ಅಪ್ಪ ಅಮ್ಮನ ಜೊತೆ ಹೋಗಿ ಮದುವೆಗೆ ಹೊಸ ಬಟ್ಟೆ ಅದರ ಮ್ಯಾಚಿಂಗ್ ಸರ ಬಳೆ ಎಲ್ಲಾ ಖರಿದಿ ಮಾಡಿ ಬಂದಳು.ಕುಂಕ್ರಿ ದಿನ ಅದನ್ನೆಲ್ಲಾ ನೋಡುತ್ತಾ ಮದುವೆಗೆ ಹೋಗಲು ತುದಿಗಾಲಿನಲ್ಲಿ ನಿಂತಳು. ಆದರೆ ಕುಂಕ್ರಿಯ ಅಮ್ಮನಿಗೆ ತನಗೊಸ್ಕರ ತಂದ ಸೀರೆ ಅಷ್ಟಾಗಿ ಗ್ರಾಂಡ್ ಆಗಿ ಇಲ್ಲ, ನಾದಿನಿಯ ಮನೆಯಲ್ಲಿ ಮದುವೆ ದಿನ ತನ್ನ ಸೀರೆ ಸ್ವಲ್ಪ ಸದರವಾಯಿತೇನೊ ಅನ್ನೊ ಅಳುಕು ಶುರುವಾಯಿತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗದೆ ಗಂಡನ ಬಳಿ ಹೇಳಿಕೊಂಡಳು. ಗಂಡನು ಎನು ಮಾಡಲು ತೊಚದೆ ಸಪ್ಪೆ ಮುಖ ಮಾಡಿಕೊಂಡನು. ನಾವು ಒಂದು ಬಿಳಿ ಪಂಜೆ ಅಂಗಿ ಹಾಕಿದರು ಯಾರು ಕೇಳುವರಿಲ್ಲ. ಕುಂಕ್ರಿಗೆ ಒಳ್ಳೆ ಬಟ್ಟೆ ಬಂತು. ನಿನ್ಗೆ ಒಳ್ಳೆ ಕಾಂಚಿವರಂ ಸೀರೆ ತರೋಕೆ ಹೋದ್ರೆ ಹತ್ತು ಸಾವಿರಕಿಂತ ಕಮ್ಮಿ ಎನು ಸಿಗಲ್ಲ. ಏನ್ ಮಾಡ್ಲಿ ಈಗ ಮನೆ ಲೋನ್, ಗ್ರಹಪ್ರವೇಶಕ್ಕೆ ಆದ ಖರ್ಚು ಅಂತ ಸ್ವಲ್ಪ ಕೈ ಹಿಡಿಬೇಕಾಗಿದೆ. ಇನ್ನು ತಂಗಿಗೆ ಅಣ್ಣನಾಗಿ ತವರು ಮನೆ ಉಡುಗೊಗೆ ಅಂತ ಚನ್ನಾಗಿಯೆ ಕೊಡಬೇಕು. ಏನ್ ಮಾಡ್ಲಿ. ನನ್ನ ಪರಿಸ್ಥಿತಿನು ಅರ್ಥ ಮಾಡಿಕೊ ಎಂದು ತನ್ನ ಕಷ್ಟ ತೊಡಿಕೊಂಡನು. ಅಷ್ಟರಲ್ಲೆ ಕುಂಕ್ರಿ ತಟ್ ಅಂತ, “ಅಮ್ಮ ನಿನ್ನ ಪಿಂಕ್ ಸೀರೆ ಉಟ್ಟಗೊ. ಅದು ನನ್ನ ಪೇವರೆಟ್ ಕಲರ್. ತುಂಬಾ ಚನ್ನಾಗಿ ಇದೆ ಆ ಸೀರೆ ಅಂದಳು”. ಇದಕ್ಕೆ ಕುಂಕ್ರಿಯ ಅಪ್ಪನು ತಲೆ ಆಡಿಸಿದನು. ಆದರೆ ಇದು ಕುಂಕ್ರಿಯ ಅಮ್ಮನಿಗೆ ಸಮಾಧಾನ ಆಗಲಿಲ್ಲ. “ಸಾಕು ಸುಮ್ಮನಿರಿ ಯಾವುದೆ ಹುಟ್ಟುಹಬ್ಬ ಆಗಲಿ, ಮುಂಜಿ ಆಗಲಿ ಅದೆ ಸೀರೆ ಆಗಿದೆ. ನಮ್ಮ ನೆಂಟರು, ನಿಮ್ಮ ನೆಂಟರು ಎಲ್ಲಾ ನೋಡಿ ಆಗಿದೆ. ಯಾಕೋ ದೊಡ್ಡ ಮದುವೆ ನಮ್ಮ ಎಲ್ಲಾ ನೆಂಟರು ಬರುವರು.ಸ್ವಲ್ಪ ದೊಡ್ಡ ಸೀರೆ ಉಡುವ ಆಸೆ” ಎಂದು ಹೇಳಿಕೊಂಡಳು. ಆದರು ಗಂಡನ ಪರಿಸ್ಥಿತಿ ಅರ್ಥಮಾಡಿಕೊಂಡು ಗಂಡನಿಗು ಕಷ್ಟ ಕೊಡಲು ಮನಸ್ಸಿಲ್ಲದೆ ಏನ್ ಮಾಡಬೇಕು ಎಂದು ತೋಚದೆ ತನ್ನಷ್ಟಕ್ಕೆ ಆಲೋಚನೆ ಮಾಡಿದಳು.

ಆಗ ತಟ್ ಅಂತ ನೆನಪಾಗಿದ್ದು ತನ್ನ ತಂಗಿಯ ಹೊಸ ಕಾಂಚಿವರಂ ಸೀರೆಯ ನೆನಪಾಯಿತು. ಸ್ವಲ್ಪ ದಿನದ ಹಿಂದೆ ತಗೊಂಡಿದ್ದಳು. ಅವಳ ಕಡೆಯ ಯಾವುದೊ ಒಂದು  ಮದುವೆ ಗೆ ಉಟ್ಟಿದ್ದಳು. ಹೊಸದಾಗಿ ಗ್ರಾಂಡ್ ಆಗಿ ಇದೆ. ಅಕ್ಕ ತಂಗಿ ಬೇಕಾದಷ್ಟು ಸಲ ತಮ್ಮ ಸೀರೆಗಳನ್ನು ಬದಲಾಯಿಸಿಕೊಂಡಿದ್ದರು.  ಬೇಕಿದ್ದರೆ ನೀನು ಯಾವಾಗಾದರು ಊಡು ಅಂದಿದ್ದು ನೆನಪಾಯಿತು. ತಂಗಿಯ ಹೊಸ ಸೀರೆ ಉಟ್ಟು ಮದುವೆಗೆ ಹೋಗೋ ಪ್ಲಾನ್ ಮಾಡಿದಳು.

ಇನ್ನೇನು ಮದುವೆ ದಿನ ಬಂದೆಬಿಡ್ತು. ಎಲ್ಲಾ ರೆಡಿ ಆಗಿ ಹೋದರು. ಮದುವೆ ದಿನ ಕುಂಕ್ರಿ ಮಿಂಚಿದ್ದೆ ಮಿಂಚಿದ್ದು. ಎಲ್ಲರ ಸೀರೆ ಒಡವೆ ನೋಡುತ್ತಾ, ಮದುಮಗಳ ಜಡೆಬಿಲ್ಲೆ, ನತ್ತು, ಹೀಗೆ ತನ್ನ ಆಸಕ್ತಿ ಇರೋ ವಿಷಯದ ಮೇಲೆ ಪ್ರಶ್ನೇ ಕೇಳಿ ಎಲ್ಲರ ಗಮನ ಸೆಳೆದು ಒಡಾಡಿದಳು.

ಹೀಗೆ ಎಲ್ಲಾ ಹರಟೆ ಹೊಡೆಯುತ್ತ ಕುಳಿತಿದ್ದರು. ಅಲ್ಲೇ ಸಂಭಂದಿಕರಲ್ಲಿ ಒಬ್ಬರು ಕುಂಕ್ರಿಯ ತಾಯಿಯ ಹತ್ತಿರ ನಿಮ್ಮ ಸೀರೆ ತುಂಬಾ ಚನ್ನಾಗಿ ಇದೆ. ಎಲ್ಲಿ ತಗೊಂಡ್ರಿ ಅಂತ ಕೇಳಿದರು. ಆಗ ಕುಂಕ್ರಿಯ ಅಮ್ಮ ಸಂಬ್ರಮದಿಂದ ಮದುವೆ ಗೆ ಅಂತ ಒಂದು ದಿನ ಚಿಕ್ಕಪೇಟೆಗೆ ಹೋಗಿ ಸುದರ್ಶನ್ ಸಿಲ್ಕ್ ನಲ್ಲಿ ತಗೊಂಡೆ. ಹದಿನೈದು ಸಾವಿರ ಕಂಚಿ ಸೀರೆ ಅಂದಳು. ಆಗ ಅಲ್ಲೆ ಇದ್ದ ಸತ್ಯವಂತ  ಕುಂಕ್ರಿ ,”ಅಯ್ಯೊ..ಅಮ್ಮ ಇದು ನೀನು ತಗೊಂಡ ಸೀರೆ ಅಲ್ಲ. ಇದು ಚಿಕ್ಕಮ್ಮನ ಸೀರೆ. ನಾವು ಅವರ ಮನೆಗೆ ಒಂದು ದಿನ ಹೋಗಿ ತಂದ್ವಿ. ನಿನ್ನ ಸೀರೆ ಸಿಂಪಲ್ ಆಗಿ ಇದೆ ಅದನ್ನ ಉಡಲ್ಲ ಅಂತ ಅಪ್ಪನ ಹತ್ತಿರ ಹೇಳಿದ್ದು ಮರೆತು ಬಿಟ್ಯಾ” ಅಂತ ಕುಂಕ್ರಿ ಚಾಚು ತಪ್ಪದೆ ಸತ್ಯವನ್ನು ಒಂದೆ ಉಸುರಿಗೆ ಹೇಳಿದಳು. ಕುಂಕ್ರಿಯ ಮಾತಿಗೆ ಅಮ್ಮನ ಮುಖ ಪೆಚ್ಚಾಯಿತು. ಇನ್ನು ಉಳಿದವರು ಏನು ಮಾತಾಡದೆ ಮನಸ್ಸಿನಲ್ಲೆ ನಕ್ಕರು.

 

No comments: