Monday, July 19, 2021

 

                                   ಒಂದು ಟೀಶರ್ಟ್ ಪುರಾಣ            

ಅಚ್ಚಕಟ್ಟಾಗಿ ಅಪ್ಪ-ಅಮ್ಮಾ ತರೋ ಅಂಗಿ ಹಾಕ್ತಾ ಇರೋ ಕಾಲ. ಏನೋ ಹೈಸ್ಕೂಲ್ಗೆ ಹೋದ್ ಮೇಲೆ ಹೇಗೋ ಈ ಟೀಶರ್ಟ್ ಕಣ್ಣಿಗೆ ಬಿತ್ತು.  ಈ ಟೀಶರ್ಟ್ ಹಾಕೋ ಆಸೆಗೆ ಅಕ್ಕನಿಗೆ ಗಂಟು ಬಿದ್ದು ಒಂದು ಟೀಶರ್ಟ್ ತರಿಸಿದ್ದು ಆಯಿತು. ಮನೆಯಲ್ಲಿ ಅಪ್ಪನ ಎದುರು ಹಾಕಿಕೊಳ್ಳಲು ಸ್ವಲ್ಪ ಹಿಂಜರಿಕೆ. ಆದರು ಹಾಕಿಕೊಳ್ಳುವ ಆಸೆ ಮಾತ್ರ ಕೈ ಬಿಡಲಿಲ್ಲ.

ಆದಿತ್ಯವಾರ ಅಂದ್ರೆ ಶಾಲೆಗೆ ಹೋಗುವ ಮಕ್ಕಳ ತಲೆ ಸ್ನಾನ ಮಾಡುವ ವಾರ. ಆ ದಿನ ನಾನು ತಲೆ ಸ್ನಾನ ಮಾಡಿ ಸಾದಾ ಸ್ಕರ್ಟ ಮೇಲೆ ಟೀಶರ್ಟ್ ಹಾಕಿಕೊಂಡೆ. ಅಪ್ಪನಿಗೆ ಅಷ್ಟಾಗಿ ಗೊತ್ತಾಗಬಾರದು ಎಂದು ತಲೆಗೆ ಕಟ್ಟಿದ ಪಂಚೆಯನ್ನು ಟೀಶರ್ಟ್ ಮೇಲೆ ಇಳಿಬಿಟ್ಟೆ. ಅಮ್ಮಾ ಗೊಣಗಿದರು. ಅದು ಮಾಮುಲ್ ಎಂದು ಅಮ್ಮನ ಮಾತನ್ನು ಅಷ್ಟಾಗಿ ತಲೆಗೆ ಹಾಕಿಕೊಳ್ಳಲಿಲ್ಲ. ಅಪ್ಪಾ ಅಷ್ಟಾಗಿ ಭಾವಿಸಿಲ್ಲವೋ ಅಥವಾ ಏನು ಅನಿಸಿಲ್ಲವೋ ಯಾವಾಗಿನ ದಿನದ ತರವೇ ಇದ್ದರು. ನನಗೋ ಮೊದಲ ಬಾರಿ ಟಿ,ವಿ, ಯಲ್ಲಿ ನೋಡುವ ಟೀಶರ್ಟ್ ಹಾಕಿದ ಖುಶಿ.

ಮಧ್ಯಾನ್ನ ನಾಲ್ಕು ಗಂಟೆಗೆ ಅಪ್ಪನ ಚಾ ಕುಡಿಯುವ ಸಮಯ. ಆಗಷ್ಟೆ ನಾನು ಚನ್ನಾಗಿ ಕೂದಲನ್ನು ಒಣಗಿಸಿ  ಬಾಚಿಕೊಂಡಿದ್ದೆ. ಆಗ ಅಪ್ಪ ನನ್ನ ಕರೆದರು. “ಬಾರೇ ಇಲ್ಲಿ, ಇದೆಂತ ಅಂಗಿ ಸಿಕ್ಕಾಕಿಸಿಕೊಂಡಿದ್ದೆ. ಒಳ್ಳೆ ಗಂಡು ಮಕ್ಕಳ ಬನಿಯನ್ ತರ ಇದೆ. ಇದೆಲ್ಲಾ ಟಿ.ವಿ. ಯಲ್ಲಿ ನೋಡಲು ಚಂದ. ನಮ್ಮಂತವರಿಗೆ ಬೇಡ. ಮೊದಲು ಇದನ್ನು ಚೇಂಜ್ ಮಾಡು”. ಎಂದು ಸ್ವಲ್ಪ ಮುಖ ಕೆಂಪಗೆ ಮಾಡಿ ಖಾರವಾಗಿ ಹೇಳಿದರು. ಅಪ್ಪನ ಎದುರು ಮರು ಮಾತಾಡುವ ಧೈರ್ಯವಂತು ಇಲ್ಲ. ಬೇರೆ ದಾರಿ ಇಲ್ಲದೆ ಅಪ್ಪ ಹೇಳಿದ ಹಾಗೆ ಮಾಡಿದೆ.

ಹೊಸದಾಗಿ ತಂದ ಟೀಶರ್ಟನ್ನು ಹಾಳು ಮಾಡಲು ಮನಸ್ಸು ಮಾಡದೆ ಹೇಗಾದರು ಮಾಡಿ ತಮ್ಮನಿಗೆ ದಾಟಿಸುವ ಉಪಾಯ ಹೂಡಿದೆ. ತಮ್ಮನಿಗೆ ಟೀಶರ್ಟ್ ಕೊಡಲು ಹೋದೆ. “ನೋಡೋ, ಈ ಟೀಶರ್ಟ್ ನಿನಗೆ ಚನ್ನಾಗಿ ಕಾಣುತ್ತದೆ. ಆಟ ಆಡಲು ಆರಾಂ. ನೀನು ತಗೋ” ಎಂದೆ. ಆಗ ತಮ್ಮ   ಏಯ್, ಹೋಗೆ ಇದು ಹೆಣ್ಣು ಮಕ್ಕಳು ಹಾಕಿಕೊಳ್ಳುವ ಟೀಶರ್ಟ, ಅದು ಅಲ್ಲದೆ ಅಪ್ಪ ನಿನಗೆ ಬೈದಿದಕ್ಕೆ ನನಗೆ ಕೊಡ್ತಾ ಇದ್ದೀಯಾ, ಇದು ನನ್ಗೆ ಬೇಡಾ” ಎಂದು ತಮ್ಮ ಖಡಾಖಂಡಿತವಾಗಿ ನಿರಾಕರಿಸಿದ. ಅಂತು ಹೊಸದಾಗಿ ತಂದ ಟೀಶರ್ಟ್ ಕಪಾಟು ಸೇರಿತು.

ಒಮ್ಮೆ ಚಾಲಿ ಅಂಗಳಕ್ಕೆ ಬೆಚ್ಚು ನಿಲ್ಲಿಸುತ್ತಿದ್ದರು. ಒಂದು ಮಡಿಕೆಯಲ್ಲಿ ಅದಕ್ಕೆ ಮುಖ ಮಾಡಿದರು. ಬೆಚ್ಚಿಗೊಂದು ಅಂಗಿ ತೊಡಿಸಬೇಕು, ಒಂದು ಅಂಗಿ ಇದ್ದರೆ ಕೊಡಿ ಎಂದು ಆಳು ಕೇಳಿದನು. ಆಗ ಅಪ್ಪ ತಕ್ಷಣ, “ ಏಯ್, ಅಕ್ಕ ಮೊನ್ನೆ ಅದ್ಯಾವುದೋ ಬನಿಯನ್ ಬಟ್ಟೆ ಅಂಗಿ ಹಾಕಿದ್ನ್ಲು. ಅಂದ್ರನ್ನಾ ತಗೊಂಡು ಬಾ” ಎಂದರು. ಆಗ ತಮ್ಮ ಓಡಿ ಹೋಗಿ ಕಪಾಟಿನಲ್ಲಿದ್ದ ನನ್ನ ಟೀಶರ್ಟ್ ತಂದು ಕೊಟ್ಟ. ಆಳು ಅದನ್ನು ಬೆಚ್ಚಿಗೆ ತೊಡಿಸಿದ. ಎಲ್ಲರು ಬೆಚ್ಚಿಗೆ ಈ ಅಂಗಿ ಎಷ್ಟು ಚನ್ನಾಗಿ ಕಾಣತ್ತೆ ಎನ್ನುತ್ತಿದ್ದರು. ನಾನು ಅಕ್ಕ ಮೂಕ ಪ್ರೇಕ್ಷಕರಾಗಿ ದೂರದಿಂದ ನೋಡುತ್ತಾ ನಿಂತಿದ್ದೇವು.

 

 

 

No comments: