Wednesday, December 4, 2019

ಚಿಕ್ಕಿಯ ಅವಾಂತರ


                                       ಚಿಕ್ಕಿಯ ಅವಾಂತರ
ಪ್ರತಿ ದಿನ ಶಾಲೆಯಿಂದ ಬರೋವಾಗ ನಾಣುನ ಅಂಗಡಿಲಿ ಐವತ್ತು ಪೈಸೆಗೆ ಚಿಕ್ಕಿ ತಗೊಂಡು ತಿನ್ನುತ್ತಾ ಬರೋದು ನನ್ನ ಮತ್ತು ಅಕ್ಕನ ರೂಢಿ ಆಗಿತ್ತು. ಆದ್ರೆ ಒಂದು ದಿನ ನಮ್ಮಿಬ್ಬರಿಗೂ ಮನೆಲೆ ಚಿಕ್ಕಿ ಮಾಡೋ ಆಸೆ ಆಯಿತು. ಅದಕ್ಕೆ ಸರಿಯಾಗಿ ಒಂದು ಭಾನುವಾರ ಅಪ್ಪ-ಅಮ್ಮ ಇಲ್ಲದೆ ಇದ್ದಾಗ ನಾನು ಮತ್ತು ಅಕ್ಕ ಚಿಕ್ಕಿ ಮಾಡಲು ತಯಾರಿ ನಡೆಸಿದೆವು. ಆಗ ಇಗಿನ ತರ ಯು ಟ್ಯೂಬ್ ಇಲ್ಲ. ಅಮ್ಮನ ಹತ್ತಿರ ಯಾವಾಗಲೊ ಕೇಳಿದ್ದನ್ನು ನೆನಪು ಮಾಡಿ ಮೊದಲು ಬೆಲ್ಲವನ್ನು ಕರಗಿಸಲು ಇಟ್ಟೆವು. ನಾನು ಶೇಂಗಾಬಿಜವನ್ನು ಹುರಿದು ಸಿಪ್ಪೆ ತೆಗೆದು ಅದನ್ನು ಎರಡು ಭಾಗ ಮಾಡಿದೆ. ನಾವು ಕೆಲಸ ಮಾಡುವಾಗ ತಮ್ಮ ಕುತೂಹಲದಿಂದ ನೋಡುತ್ತಿದ್ದ. ಎಲ್ಲಾ ಮುಗಿದು ಚಿಕ್ಕಿ ಯಾವುದರಲ್ಲಿ ಹರಡ ಬೇಕು ಅಂತ ತಿಳಿದೆ ಅಲ್ಲೆ ಇದ್ದ ಚಪಾತಿ ಲಟ್ಟಿಸುವುದರ ಮೇಲೆ ಹುಯ್ದು ಸೌಟಿನಿಂದಲೆ ಚೌಕಾಕಾರ ಮಾಡಿದೆವು. ಅಂತು ನಾಣುನ ಅಂಗಡಿಲಿ ಸಿಗೋ ಚಿಕ್ಕಿ ತರನೆ ಕಾಣ್ತಾ ಇದೆ ಅಂತ ನಿಟ್ಟುಸಿರು ಬಿಟ್ಟೆವು. ಸ್ವಲ್ಪ ಆರಿದ ಮೇಲೆ ಕತ್ತರಿಸಿದರಾಯಿತು ಅಂತ ಅಂದುಕೊಂಡೆವು.
ಸ್ವಲ್ಪ ಆರಿದ ಮೇಲೆ ಕತ್ತರಿಸಲು ಹೋದರೆ ಅದು ಕಟ್ ಮಾಡಲು ಬರಲಿಲ್ಲ. ಅದು ಅಲ್ಲದೆ ಜಪ್ಪಯ್ಯ ಅಂದರು ಚಪಾತಿ ಮಣೆಯಿಂದ ಎಳಲಿಲ್ಲ. ಅಷ್ಟರಲ್ಲೆ ಅಕ್ಕನಿಗೆ ಪ್ಲಾಶ್ ಆಯಿತು,”ಅಯ್ಯೊ ಚಪಾತಿ ಮಣೆಗೆ ತುಪ್ಪ ಸವರಲು ಮರೆತು ಹೋಯಿತು. ಅದಕ್ಕೆ ಎಳ್ತಾ ಇಲ್ಲ” ಅಂತ ಹೇಳಿದಳು. ಆಗ ಏನ್ ಮಾಡಬೇಕು ಅಂತ ತೋಚದೆ ಅಮ್ಮ ಬರೋ ವೆಳೆಗೆ ಚಪಾತಿ ಮಣೆ ಸರಿ ಮಾಡಬೇಕು ಅಂತ ಅಲ್ಲೆ ಹೊರಗೆ ಇದ್ದ ಅಕ್ಕಚ್ಚಿನ ಬಕೆಟ್ (ದನಕ್ಕೆ ಕೊಡುವ ನೀರು) ನಲ್ಲಿ ಮುಳುಗಿಸಿದೆವು. ಅಲ್ಲೆ ನೀರಿನಲ್ಲಿ ಶೇಂಗಾ, ಬೆಲ್ಲ ಬಿಟ್ಟುಕೊಳ್ಳತ್ತೆ ಅದನ್ನು ದನಕ್ಕೆ ಕೊಟ್ಟರಾಯಿತು ಹಾಗೆ ಚಪಾತಿ ಮಣೆ ಕ್ಲೀನ್ ಮಾಡಿದ ಹಾಗು ಆಗತ್ತೆ ಅಂತ ಉಪಾಯ ಮಾಡಿದೆವು.
ಸಂಜೆ ಅಮ್ಮ ಮನೆಗೆ ಬಂದ ಮೇಲೆ ಕೆಲಸದವರ ಹತ್ತಿರ ದನಕ್ಕೆ  ಅಕ್ಕಚ್ಚು, ಹುಲ್ಲು ಆಗಿದೆಯಾ ಅಂತ ಕೇಳುವಾಗ ತಮ್ಮ ಎಲ್ಲರ ಮುಂದು ನಮ್ಮ ಚಿಕ್ಕಿಯ ಕಥೆಯನ್ನು ಎಳೆ-ಎಳೆಯಾಗಿ ಹೇಳಿದ. ನಾವು ಇಂಗು ತಿಂದ ಮಂಗನಂತೆ ನಿಂತೆವು. ಎಲ್ಲರು ನಮ್ಮ ಚಿಕ್ಕಿಯ ಅವಾಂತರ ಕೇಳಿ ಮುಸಿ-ಮುಸಿ ನಕ್ಕರು.


Monday, November 18, 2019

ಇಂದಿನ ಟ್ರಾಫಿಕ್ ನಲ್ಲಿ…


                                              ಇಂದಿನ ಟ್ರಾಫಿಕ್ ನಲ್ಲಿ…
ನಮ್ಮನೆ ಹತ್ತಿರದ ರಿಂಗ್ ರೋಡ್ಗೆ ವೈಟ ಟಾಪಿಂಗ್ ಮಾಡುತ್ತಿರುವ ಕಾರಣ ಪಕ್ಕದ ಸರ್ವಿಸ್ ರೋಡ್ ಫುಲ್ ರಶ್ ಆಗಿರತ್ತೆ. ಅದರಲ್ಲು ಬೆಳಿಗ್ಗೆ ಎಲ್ಲರಿಗೂ ಅವಸರ ಸ್ವಲ್ಪ ಜಾಸ್ತಿನೆ. ಸ್ಕೂಲ್ ಗೆ ಲೇಟ್ ಆಗತ್ತೆ, ಆಫೀಸ್ಗೆ ಲೇಟ್ ಆಗತ್ತೆ ಅಂತ ವಾಹನಗಳನ್ನು ಎಲ್ಲಿ ಅಂದರೆ ಅಲ್ಲಿ ನುಗ್ಗಿಸುವವರೆ.
ಇಂದು ಮಗಳನ್ನು ಸ್ಕೂಲ್ಗೆ ಬಿಡಲು ಹೋಗುತ್ತಿದ್ದೆ.  ಅದು ಏನೋ ಒಂದೇ ಸಲ ದಿನದಕ್ಕಿಂತ ಸ್ವಲ್ಪ ಜಾಸ್ತಿನೆ ವಾಹನಗಳು ಸೇರಿ ಜಾಮ್ ಆದವು. ನೆಟ್ಟಗೆ ಟ್ರಾಪಿಕ್ ರೂಲ್ಸ್ ಪಾಲಿಸಿದರೆ ಇಷ್ಟು ಆಗುತ್ತಿಲ್ಲವೋ ಏನೋ. ಆದರೆ ಅವಸರದಲ್ಲಿ ನುಗ್ಗುವವರೆ. ಇದರ ಮದ್ಯೆ ಹಿಂದಿನಿಂದ ಒಂದು ಆಂಬ್ಯುಲೆನ್ಸ್ ಒಂದೆ ಸಮನೆ ಹೊಡೆದುಕೊಳ್ಳುತ್ತಿತ್ತು. ಆದರೆ ಎಲ್ಲರಿಗೂ ತಮ್ಮ-ತಮ್ಮ ಕೆಲಸದ ಬಗ್ಗೆ ಚಿಂತೆ ಮತ್ತು ಸ್ಕೂಲ್  ಗೆ ಲೇಟ್ ಆದರೆ ಗೇಟ್ ಹಾಕುತ್ತಾರೆ ಮತ್ತು ಆಫೀಸ್ ಗೆ ಲೇಟ್ ಆದರೆ ಒಂದು ದಿನದ ಸಂಬಳ ಕಟ್  ಮಾಡುತ್ತಾರೆ ಎಂದು ಯೋಚಿಸುತ್ತಾರೆಯೆ ಹೊರತು ಆಂಬ್ಯುಲೆನ್ಸ್ ನಲ್ಲಿ ಒಂದು ಜೀವಕ್ಕೆ ತುಂಬಾ ಕಡಿಮೆ ಸಮಯ ಇರುವುದು ಮತ್ತು ಹಾಸ್ಪಿಟಲ್ ಗೆ ಆದಷ್ಟು ಬೇಗ ಹೋಗದೆ ಇದ್ದರೆ ಆ ಜೀವ ಇನ್ನೆಲ್ಲಿಗೊ ಶಾಶ್ವತವಾಗಿ ಹೋಗಬೇಕಾಗುತ್ತದೆ  ಅನ್ನುವ ಪರಿಕಲ್ಪನೆ ಇರುವುದಿಲ್ಲ.
ಇಂದಿನ ಟ್ರಾಫಿಕ್ ಜಾಮ್ ನಲ್ಲಿ ಆ ಆಂಬ್ಯುಲೆನ್ಸ್ ಗೆ ಸಾರ್ವಜನಿಕರು ಸ್ವಲ್ಪ ಸಹಕರಿಸಿದರೆ ಒಂದು ಲೈನ್ ಬಿಟ್ಟು ಕೊಡಬಹುದಿತ್ತು. ಅಲ್ಲಿಂದ ಐದು ನಿಮಿಷಕ್ಕೆ ಅಪೋಲೊ ಹಾಸ್ಪಿಟಲ್. ಆದರೆ ಅಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ ಆಬ್ಯುಲೆನ್ಸ್  ನ ಮುಂದೆ ಕುಳಿತಿರುವ ರೋಗಿಯ ಸಂಭಂದಿಯೆ ಇಳಿದು ಬೇಡಿಕೊಂಡ. ಮುಖದಲ್ಲಿ ದುಖಃ ಮತ್ತು ಭಯ ಎದ್ದು ಕಾಣುತ್ತಿತ್ತು. ಅಕ್ಷರಶಃ ಬೈಕಿನವರ ಹತ್ತಿರ ಬೇಡಿಕೊಂಡು ಆತನೆ  ಹೇಗೋ ಸಿಗ್ನಲ್ ದಾಟಿಸಿದ. ಅದೇ ಸಾರ್ವಜನಿಕರು ತಿಳಿದು ಮಾಡಿದಿದ್ದರೆ ಇನ್ನು ಒಂದು ಹತ್ತು ನಿಮಿಷ ಬೇಗ ಹೋಗುತ್ತಿದ್ದನೋ. ಅವರಿಗೆ ಒಂದೊಂದು ನಿಮಿಷವು ಅತಿ ಮುಖ್ಯ. ಸ್ವಲ್ಪ ತಡವಾಗಿ ಸ್ಕೂಲ್ ಮತ್ತು ಆಫೀಸಿಗೆ ಹೋದರೆ ಮರುದಿನ ಸರಿ ಪಡಿಸಿಕೊಳ್ಳಬಹುದು. ಇಲ್ಲವೇ ಸ್ವಲ್ಪ ಜಾಸ್ತಿ ಸಮಯ ಆಫೀಸಿನಲ್ಲಿ ಕುಳಿತು ಕೆಲಸ ಮುಗಿಸಿ ಬರಬಹುದು. ಆದರೆ ಹೋದ ಜೀವ ವಾಪಸ್ ತರುವುದು ಆಗದ ಮಾತು.  ಒಂದು ಅರ್ದ ಗಂಟೆ ಮುಂಚೆ ಕರೆದು ತಂದಿದ್ದರೆ ಅನ್ನೋ ಮಾತು ಕೇಳುವುದಕ್ಕಿಂತ  ಆಂಬ್ಯುಲೆನ್ಸ್ ಗೆ ಆದಷ್ಟು ಜಾಗ ಬಿಟ್ಟು ಸಹಕರಿಸುವುದು ಲೇಸು.

Wednesday, November 13, 2019

ಕುಂಕ್ರಿಯ ಸ್ವಚ್ಚ ಭಾರತ


                       ಕುಂಕ್ರಿಯ ಸ್ವಚ್ಚ ಭಾರತ
ದೀಪಾವಳಿ ಬಂತು ಅಂದರೆ ಏನೋ ಒಂದು ಸಡಗರ. ಅದರಲ್ಲು ಮಕ್ಕಳಲ್ಲಿ ಮೊದಲಿಗೆ ಎಷ್ಟು ದಿನ ಶಾಲೆಗೆ ರಜೆ ಎಂದು ಡೈರಿ ನೋಡಿರುತ್ತಾರೆ. ನಂತರ ಈ ಬಾರಿ ಯಾವ ಯಾವ ಪಟಾಕಿ ತರಬೇಕು ಅನ್ನುವ ಪ್ಲಾನ್. ಈ ಪಟಾಕಿ ಮಾತ್ರ ಅಪ್ಪಂದಿರ ಜೇಬಿಗೆ ಖನ್ನ. ಪಟಾಕಿ ಹೊಡೆಯುವಾಗಲು ಕೈ ಸುಟ್ಟುಕೊಳ್ಳುವ ಹಾಗೆ ಪಟಾಕಿ ತರಬೇಕಿದ್ದರು ಕೈ ಬಿಸಿ ಆಗುವುದು. ಆದರೆ ಏನ್ ಮಾಡೋದು ಪಕ್ಕದ ಮನೆ ಮಗು ಪಟಾಕಿ ಹೊಡೆಯಬೇಕಿದ್ದರೆ ನಮ್ಮನೆ ಮಕ್ಕಳು ಮನೆ ಒಳಗೆ ಕುತಿರಲ್ಲ. ಅವರು ಒಂದು ಪ್ಯಾಕ್ ರಾಕೆಟ್ ಹೊಡೆದರೆ ಇವರು ಒಂದು ಪ್ಯಾಕ್ ರಾಕೆಟ್ ತರುವುದೆ. ಹೆಣ್ಣು ಮಕ್ಕಳಿಗೆ ನೆಲ ಚಕ್ರ ಮತ್ತು ಪವರ್ ಪಾಟ್ ಮೇಲೆ ವಿಶೇಷ ಆಸಕ್ತಿ.ಅವರವರ ಆಸಕ್ತಿಯ ಅನುಸಾರ ಪಟಾಕಿಯ ಖರೀದಿ ಆಗುವುದು.
ಏನೇ ಅಂದರು ದೀಪಾವಳಿಗೆ  ಎರಡು-ಮೂರು ದಿನ ಶಾಲೆಗೆ  ರಜೆ ಗ್ಯಾರಂಟಿ. ಅದರ ಅನುಸಾರವಾಗಿ ಮೂರು ದಿನಕ್ಕೆ ಆಗುವಷ್ಟು ಪಟಾಕಿ ಕುಂಕ್ರಿಯ ಮನೆಗು ಬಂತು. ಹಾಗೆ ಪ್ಲಾಟ್ ನಲ್ಲಿ ಇರುವ ಅಕ್ಕ-ಪಕ್ಕ ದ ಮನೆಗು ಪಟಾಕಿಯ ಆಗಮನವಾಯಿತು. ಮೊದಲೆ ಮಕ್ಕಳಲ್ಲಿ ಮಾತು-ಕಥೆ ಆಗಿತ್ತು. ಎಲ್ಲಾ ಸೇರಿ ಸುಮಾರು ಏಳು ಗಂಟೆಯಿಂದ ಪಟಾಕಿ ಹೊಡೆಯಲು ಶುರು ಮಾಡುವುದೆಂದು. ಮಕ್ಕಳ ಖುಶಿ ಜೊತೆ ನಮ್ಮ ಖುಶಿಗು ಎಲ್ಲಾ ಸೇರಿ ದೀಪ ಹಚ್ಚಿ ಪಟಾಕಿ ಹೊಡೆಯಲು ಶುರು ಮಾಡಿದೆವು. ಕುಂಕ್ರಿ ಗೆ ಮತ್ತು ಅವಳ ಸ್ನೇಹಿತರಿಗೆ  ಪಟಾಕಿ ಹೊಡೆಯುವ ಉತ್ಸಾಹ. ಅಂತು ಮೊದಲನೆ ದಿನದ ಪಟಾಕಿ ಹೊಡೆದಾಯಿತು.
ಪಟಾಕಿ ಹೊಡೆದ ತಕ್ಷಣ ನಮಗೆಲ್ಲಾ ಟಿ.ವಿ ಯಲ್ಲಿ ಪ್ರಸಾರ ಆಗುವ ನಮ್ಮ ಮೆಚ್ಚಿನ ಕಾರ್ಯಕ್ರಮಗಳು ನೆನಪಾದವು. ಮನೆಗೆ ಹೋಗುವ  ಅವಸರದಲ್ಲಿ ಎಲ್ಲಾ ಬೆಸ್ಮೆನ್ಟಗೆ ಬಂದೆವು. ಆದರೆ ಕುಂಕ್ರಿ ಮತ್ತು ಅವಳ ಸ್ನೇಹಿತರು ಪುನಃ ರಸ್ತೆಗೆ ಕರೆದುಕೊಂಡು ಬಂದರು. ನಾವು ಇನ್ನೇನೋ ಪಟಾಕಿ ಹೊಡೆಯುವುದಿದೆ ಎಂದು, “ನೋಡಿ ಇವತ್ತಿಗೆ ಸಾಕು. ಇನ್ನು ಎರಡು ದಿನ ಇದೆ. ನಾಳೆ ನಾಡಿದ್ದು ಹೊಡೆದರಾಯಿತು. ಲೇಟ್ ಆಯಿತು ಮನೆಗೆ ಹೋಗೋಣ” ಎಂದು ಹೇಳಿದೆವು. ಆದರೆ ಕುಂಕ್ರಿ ಮತ್ತು ಅವಳ ಸ್ನೇಹಿತರು ನಾವು ಪಟಾಕಿ ಹೊಡೆಯಲು ಕರೆದಿಲ್ಲ. ಇವತ್ತಿಗೆ ಇಷ್ಟೆ ಸಾಕು. ಆದ್ರೆ ಇವತ್ತು ಹೊಡೆದ ಪಟಾಕಿ ಕಸ ಎಲ್ಲರು ಸೇರಿ ಕ್ನೀನ್ ಮಾಡೋಣ. ಹಾಗೆ ನಾಳೆ ನಾಡಿದ್ದು ಕೂಡ. ಟಿ.ವಿ ನಲ್ಲಿ ನರೇಂದ್ರ ಮೋದಿ ಭಾಷಣ ಕೇಳಿ ಚಪ್ಪಾಳೆ ಹಾಕ್ತೀರಾ. ಆದ್ರೆ ಅವರು ಹೇಳೊದು ನಾವು ಮಾಡೋದು ಬೇಡ್ವಾ? ಬನ್ನಿ ನಾವು ಮಾಡಿದ ಕಸನ ನಾವೆ ಕ್ಲೀನ್ ಮಾಡೋಣ ಅನ್ನುತ್ತಾ ಎಲ್ಲರ ಕೈಗು ಪೊರಕೆ ಕೊಟ್ಟರು. ನಮಗು ಮಕ್ಕಳು ಕೇಳಿದ್ದು ಸರಿ ಅನ್ನಿಸಿ ದೀಪಾವಳಿ ಆಚರಣೆಯ ಜೊತೆಗೆ ಮಕ್ಕಳ ಜೊತೆ ಸ್ವಚ್ಚ ಭಾರತದ ನಿಯಮವನ್ನು ಪಾಲಿಸಿದೆವು.


Wednesday, October 30, 2019

ಸೂತಕದ ಮನೆ


                                            ಸೂತಕದ ಮನೆ
ಹುಟ್ಟು-ಸಾವು ಕನ್ನಡದ ಜೋಡಿ ಪದ. ಹುಟ್ಟಿದ ಮನುಷ್ಯ ಸಾಯಲೆ ಬೇಕು. ಆದರೆ ಈ ಸಾವು ಯಾವಾಗ, ಏಲ್ಲಿ, ಹೇಗೆ ಅನ್ನುವುದು ಯಾರಿಗು ತಿಳಿಯದ ವಿಷಯ. ಸಾವು ಅನಿರಿಕ್ಷಿತವೆ.
ಮನುಷ್ಯ ಎಷ್ಟೆ ಕೆಟ್ಟವನಾದರು ಸತ್ತ ಕ್ಷಣ ಏನೋ ಒಂದು ಶೂನ್ಯ ಭಾವನೆ ಮನಸ್ಸಿಗೆ ಆವರಿಸುತ್ತದೆ. ಯಾರೆ ಆಗಲಿ ಒಮ್ಮೆ ಕನಿಕರದ ಮಾತು ಬಂದೆ ಬರುತ್ತದೆ. ಸತ್ತ ದಿನ ಮನೆ ತುಂಬಾ ಜನ ಮತ್ತು ಸಾಂತ್ವಾನದ ಮಾತಾಡುವವರು ಬೇಕಾದಷ್ಟು ಜನ ಇದ್ದೆ ಇರುತ್ತಾರೆ. ಹನ್ನೇರಡು ದಿನ ಧಾರ್ಮಿಕ ವಿಧಿ-ವಿಧಾನ ಮುಗಿದು ಸೂತಕ ಕಳೆಯುವ ತನಕ ನೆಂಟರಿಷ್ಟರು. ಇವೆಲ್ಲಾ ಮುಗಿದ ಮೇಲೆ ನಿಜವಾದ ಸೂತಕದ ಛಾಯೆ ಮನೆಯಲ್ಲಿ ಆವರಿಸುವುದು.
ಚಿಕ್ಕ ವಯಸ್ಸಿನಲ್ಲೆ ತಂದೆಯನ್ನು ಕಳೆದುಕೊಂಡರೆ ಮಗನಿಗೆ ಮನೆ ನಡೆಸಿಕೊಂಡು ಹೋಗುವ ಚಿಂತೆ. ಹಣಕಾಸಿನ ವಿಷಯದಲ್ಲಿ ಅನುಕೂಲವಿದ್ದು ತಂದೆ ಎಲ್ಲಾ ಜವಾಬ್ದಾರಿ ಮುಗಿಸಿದ್ದರೆ ತಕ್ಕ ಮಟ್ಟಿಗೆ ಜೀವನ ಸುಗಮವಾಗುವುದು. ಅದೇ ಏನಾದರು ಅಕ್ಕ-ತಂಗಿಯರ ಜವಾಬ್ದಾರಿ, ಮನೆ ಮೇಲೆ ಸಾಲ, ಎಲ್ಲಾ ಇವನ ತಲೆಗೆ ಬಂದರೆ ಒಮ್ಮೆಲೆ ಕಂಗಾಲಾಗುವುದು ಖಚಿತ.
ಇಳಿ ವಯಸ್ಸಿನಲ್ಲಿ ವಿದುರನ ಬಾಳು ಇನ್ನು ಕಷ್ಟ. ಯಾವಾಗಲು ಜೊತೆಯಾಗಿದ್ದ ಹೆಂಡತಿ ತನ್ನ ಬೇಕು-ಬೇಡಗಳನ್ನು ವಿಚಾರಿಸಿಕೊಳ್ಳಿತ್ತಿದ್ದವಳು, ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದವಳು, ಇನ್ನು ಇಲ್ಲ ಎಂದಾದರೆ ಒಮ್ಮೆಲೆ ಮುಸ್ಸಂಜೆ ಕಗ್ಗತ್ತಲಾಗುತ್ತದೆ.
ಗಂಡ ಸತ್ತ ಮೇಲೆ ವಿಧುವೆಯ ಬಾಳು ಇನ್ನೊಂದು ರೀತಿ. ಹುಟ್ಟಿದಾಗಿನಿಂದಲು ಹಚ್ಚಿಕೊಳ್ಳುವ ಕುಂಕುಮ ಕೊಡುವಾಗಲು ಮೀನಾ-ಮೇಷ ನೋಡುವರು. ಮಕ್ಕಳು ಕೈಗೆ ಬಂದರೆ ಸರಿ. ಇಲ್ಲ ಅಂದರೆ ಜೀವನ ಕಷ್ಟವೆ. ಸಮಾಜ ಆ ಹೆಣ್ಣನ್ನು ನೋಡುವ ದೃಷ್ಟಿಯೆ ಬೇರೆ.  ಹಣಕಾಸಿನ ವಿಷಯದಲ್ಲಿ ಸ್ವಲ್ಪ ಗಟ್ಟಿ ಇದ್ದು, ತವರು ಮನೆ ಮತ್ತು ಗಂಡನ ಮನೆಯ ಬೆಂಬಲ ಇದ್ದರೆ ಸರಿ. ಗಂಡನ ಮನೆಯಲ್ಲಿ ಅವಳ ಕಾಲ್ಗುಣ ಸರಿ ಇಲ್ಲ ಎಂದು, ತವರು ಮನೆಯಲ್ಲಿ ಅಣ್ಣ-ತಮ್ಮಂದಿರು ಕೈ ಬಿಟ್ಟರೆ ಜೀವನ ಕಷ್ಟವೆ.
ಸಾವು ಯಾವಾಗ, ಹೇಗೆ ಎಂದು ಹೇಳಲಾಗುವುದಿಲ್ಲ. ಬಂದದ್ದನ್ನು ಎದುರಿಸುವ ದೃಡ ಮನಸ್ಸು ಇರಬೇಕು. ಯಾಕೋ ಮೊನ್ನೆ ಊರಿಗೆ ಹೋದಗ ನನ್ನ ಸೋದರ ಮಾವ ಸತ್ತಾಗ ಪುರೋಹಿತರು ಹೇಳಿದ ಪ್ರವಚನ ತುಂಬಾ ಮನಸ್ಸಿಗೆ ನಾಟಿತು. ಆಗ ಸಾವಿನ ಬಗ್ಗೆ ಏನೇನೋ ಯೋಚನೆ ನನ್ನ ತಲೆಯಲ್ಲಿ ಬಂತು. ಮೊದಲ ಹನ್ನೇರಡು ದಿನ ಇರೋ ವಾತಾವರಣಕ್ಕು, ನಂತರದ ದಿನಕ್ಕು ತುಂಬಾ ವ್ಯತ್ಯಾಸ. ಮನೆ ಬಿಕೋ ಅನ್ನುವುದು ನಂತರದ ದಿನದಲ್ಲಿ.


Monday, September 23, 2019

ಸತ್ಯವಂತ ಕುಂಕ್ರಿ


                                              ಸತ್ಯವಂತ ಕುಂಕ್ರಿ
     
ಕುಂಕ್ರಿಯ ಅಮ್ಮನಿಗೆ ಇಂದು ರಜಾ ಇರೋ ಕಾರಣ ಎಲ್ಲಾದರು ಆಚೆ ಹೋಗಬೇಕು ಮತ್ತು ಆಚೆ ಊಟ ಮಾಡಿ ಬರಬೇಕು ಅನ್ನೋ ಹಂಬಲ ಇತ್ತು. ತನ್ನ ಈ ಬೇಡಿಕೆಯನ್ನು ಗಂಡನ ಮುಂದೆ ಇಟ್ಟಳು. “ನೋಡ್ರಿ ಹೇಗು ಇಂದು ಫ್ರೀ ಆಗಿದ್ದೀರಾ ಎಲ್ಲಾದರು ಆಚೆ ಹೋಗಿ ಬರೋಣ. ನನಗೂ ನನ್ನದೆ ಕೈ ಅಡಿಗೆ ತಿಂದು ನಾಲಿಗೆ ಕೆಟ್ಟು ಹೋಗಿದೆ. “ ಎಂದಳು.   ಹೆಂಡತಿಯ ಮಾತಿಗೆ ಗಂಡ ಸರಿ ಎಂದ. ತುಂಬಾ ದಿನ ಆಯಿತು ಕುಂಕ್ರಿಯನ್ನು ಆಚೆ ಕರೆದುಕೊಂಡು ಹೋಗದೆ ನೀವೆ ಎಲ್ಲಿ ಎಂದು ತಿರ್ಮಾನಿಸಿ ಎಂದು ಹೇಳಿದ. ಅಷ್ಟರಲ್ಲೆ ಅಲ್ಲೆ ಆಡ್ತಾ ಇರೋ ಕುಂಕ್ರಿ ಓಡಿ ಬಂದು ಹೇಳಿದಳು, “ಅಮ್ಮಾ ನಿಮ್ಗೆ ಮರ್ತೊಗಿದಿಯಾ ಇವತ್ತು ಚಿರು ಚಿಕ್ಕಪ್ಪನ ಮನೆಯಲ್ಲಿ ತನ್ಮಯ್ ಹುಟ್ಟುಹಬ್ಬ. ಸಂಜೆ ಬನ್ನಿ ಅಂತ ಕರೆದು ಹೋಗಿದ್ದು ನಿಮ್ಗೆ ನೆನಪಿಲ್ವಾ” ಅಂತ ಹೋಗುವ ಉತ್ಸಾಹದಲ್ಲಿ  ಹೇಳಿದಳು. ಆಗ ಕುಂಕ್ರಿಯ ಅಪ್ಪ ಖುಷಿಯಲ್ಲಿ, “ಹೌದಲ್ಲೆ ಕುಂಕ್ರಿ ನನ್ಗೆ ಮತ್ತು  ನಿನ್ನ ಅಮ್ಮನಿಗೆ ಮರೆತೆ ಹೋಗಿತ್ತು. ಜಾಣ ಮರಿ ನೆನ್ಪ್ ಮಾಡ್ದೆ. “ ಅಂತ ಮಗಳನ್ನು ಮುದ್ದಿಸಿದರು. ಕುಂಕ್ರಿಗು ಖುಶಿ. ಚಿರು ಚಿಕ್ಕಪ್ಪನ ಮನೆಗೆ ಹೋಗೊದು ಮತ್ತು ತನ್ಮಯ್ ಜೊತೆ ಆಟ ಆಡೊದು ಅಂದ್ರೆ. ಆದ್ರೆ ಕುಂಕ್ರಿಯ ಅಮ್ಮ ಒಂದೆ ಸಲ ಸಿಡಿಮಿಡಿಗೊಂಡು, “ನೋಡ್ರಿ ನನ್ಗೆ ನೆನ್ಪ್ ಇತ್ತು. ಅಲ್ಲಿಗೆ ಹೋಗೋದ್ ಬೇಡ ಅಂತಾನೆ ನಾನು ಆಚೆ ಹೋಗೋ ಪ್ಲಾನ್ ಮಾಡಿದ್ದು. ನನ್ಗೆ ಅಲ್ಲಿಗೆ ಹೋಗೋ ಮನಸ್ಸಿಲ್ಲ. ನೀವೋ ಚಿರುನ ಜೊತೆ ಹರಟೆ ಹೊಡೆಯುತ್ತ ಕುಳಿತಿರ್ತಿರಾ. ಇನ್ನು ಕುಂಕ್ರಿಗೆ ಆ ತನ್ಮಯ್ ಇದ್ರೆ ಅವರದ್ದೆ ಜಗತ್ತು. ನಾನ್ ಮಾತ್ರ ಆ ಶೋ ಅಪ್ ರಾಣಿ ಹತ್ತಿರ ಸಿಕ್ಕ್ ಹಾಕ್ಕೊಳ್ ಬೇಕು. ತಾನೊಂದು ಬೇಕಿಂಗ್ ಮಾಡ್ತಾ ಇದ್ದೀನಿ ಅಂತ ಜಗತ್ತೆ ಕಡಿದ ಹಾಗೆ ಮಾತಾಡ್ತಾಳೆ.  ನಿಮ್ಗೆ ಗೊತ್ತಿಲ್ಲ. ಇವತ್ತು ಹುಟ್ಟುಹಬ್ಬಕ್ಕೆ ಅವಳು ಯಾವುದೋ ಕೇಕ್ ಮಾಡ್ತಾಳಂತೆ. ಅದ್ರನ್ನ ನಮ್ಮ ಮುಂದೆ ತೋರ್ಸಕೊಳ್ಳೋಕೆ ಕರೆದದ್ದು.  ಇಗ್ಲೆ ವಾಟ್ಸ ಅಪ್ ಸ್ಟೇಟಸ್ ನಲ್ಲಿ ಹಾಕ್ತಾ ಇದ್ದಾಳೆ. ಇನ್ನು ಮುಗಿದ ಮೇಲೆ ಏನ್ ಚಂದನೋ” ಅಂತ ಒಂದೆ ಸಮನೆ ಹೊಟ್ಟೆಲಿ ಇರೋದನ್ನ ಗಂಡ ನ ಮುಂದೆ ಹೇಳಿದಳು.
ಆದರೆ ಕುಂಕ್ರಿಯ ಅಪ್ಪನಿಗೆ ಚಿರು ನ ಮನೆಗೆ ಹೋಗೋಕೆ ಮನಸ್ಸು. ಕುಂಕ್ರಿಯು ಹೋಗೋಣ ಅಂತ ಹಠ ಹಿಡಿದಳು. ಕುಂಕ್ರಿಯ ಅಮ್ಮ ಮಗಳಿಗೆ ಡ್ಯಾಶಿಂಗ್ ಕಾರ್ ಆಡುವ ಆಸೆ ತಲೆಗೆ ತುಂಬಿದಳು. ಅದು ಅಲ್ಲದೆ ಚಿಕ್ಕಮ್ಮ ಮಾಡುವ ಕೇಕ್ ಕಿಂತ ಇನ್ನು ಒಳ್ಳೋಳ್ಲೆ ಕೇಕ್ ಮತ್ತು ಅದರ ಜೊತೆ ಐಸ್ ಕ್ರೀಮ್ ಕೊಡಿಸುವ ಪ್ರೋಮಿಸ್ ಮಾಡಿ ಕುಂಕ್ರಿಯನ್ನು ತಕ್ಕ ಮಟ್ಟಿಗೆ ಒಪ್ಪಿಸಿದಳು. ಆದರೆ ಕುಂಕ್ರಿಯ ಅಪ್ಪನಿಗೆ ಬರದೆ ಇರೋದಕ್ಕೆ ಕಾರಣ ಹೇಳುವ ಚಿಂತೆ ಆಗಿತ್ತು. ಅದಕ್ಕು ಕುಂಕ್ರಿಯ ಅಮ್ಮ ಉಪಾಯ ಹೂಡಿದಳು. ತನ್ನ ಸರು ಅತ್ತೆ ಮನೆ ಪೂಜೆಗೆ ಹೋಗಿದ್ವಿ. ಬರೋದು ಲೇಟ್ ಆಯಿತು ಅಂತ ಪ್ಲಾನ್ ಮಾಡಿದಳು. ಅಂತು ಹೆಂಡತಿಯ ಮಾತಿಗೆ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ.
ಇದಾದ ಮೂರು-ನಾಲ್ಕು ದಿನಕ್ಕೆ ಚಿರು ನ ಪ್ಯಾಮಿಲಿ ಕುಂಕ್ರಿ ಮನೆಗೆ ಬಂದರು. ಹುಟ್ಟುಹಬ್ಬದ ದಿನ ನಿಮ್ಮನ್ನ ತುಂಬಾ ಹೊತ್ತು ವೇಟ್ ಮಾಡ್ದವಿ. ಯಾಕ ಬಂದಿಲ್ಲ ಅಂತ ಕೇಳಿದರು. ಮೊದಲೆ ಪ್ಲಾನ್ ಮಾಡಿದಂತೆ  ತನ್ನ ಅತ್ತೆ ಮನೆಲಿ ಪೂಜೆ ಇತ್ತು. ಬರೋದು ಲೇಟ್ ಆಯಿತು ಅಂತ ಹೇಳಿದಳು. ಆಗ ಅಷ್ಟರಲ್ಲೆ ಕುಂಕ್ರಿ “ಇಲ್ಲ ಚಿಕ್ಕಮ್ಮ, ನಾವ್ ಆ ದಿನ ಮಂತ್ರಿ ಮಾಲ್ ಗೆ ಹೋಗಿ  ಡ್ಯಾಶಿಂಗ್ ಕಾರ್ ಆಡಿ, ಅಲ್ಲೆ ಕೇಕ್,ಐಸ್ ಕ್ರೀಮ್ ಎಲ್ಲಾ ತಿಂದ್ ಬಂದ್ವಿ.” ಅಂತ ಹೇಳಿದಳು. ತಕ್ಷಣವೆ  ಕುಂಕ್ರಿಯ ಅಮ್ಮ ಮಗಳ ಮಾತನ್ನು ಮರೆ ಮಾಚುವಂತೆ, ಕುಂಕ್ರಿಗೆ ಯಾವಾಗ ಹೇಳಿ ಮರೆತು ಹೋಗಿದೆ. ‘ ಏಯ್, ನಾವ್ ಅಲ್ಲಿಗೆ ಹೋಗಿದ್ದು ಹಿಂದಿನ ವಾರ. ಮೊನ್ನೆ ಸರು ಅಜ್ಜಿ ಮನೆ ಪೂಜೆಗೆ ಹೋಗಿದ್ದು”  ಅಂತ ಸ್ವಲ್ಪ ಕಣ್ಣು ಬಿಟ್ಟು ಹೇಳಿದಳು. ಆದ್ರೆ ಇದರ ಲಕ್ಷವೆ ಇಲ್ಲದೆ ಕುಂಕ್ರಿ ಇಲ್ಲಮ್ಮ, ಹುಟ್ಟು ಹಬ್ಬದ ದಿನ ಹೋಗಿದ್ದು ಮಂತ್ರಿ ಮಾಲ್ ಗೆ. ಆ ಶೋ ಅಪ್ ರಾಣಿ ಮಾಡೋ ಲಡ್ಕಾಸಿ ಕೇಕ್ ತಿನ್ನೊದ್ ಬೇಡ, ನಿನಗೆ ಒಳ್ಳೊಳ್ಳೆ ಕೇಕ್, ಐಸ್ಕ್ರೀಮ್ ಕೊಡ್ಸತ್ತೀನಿ ಮತ್ತು ಡ್ಯಾಶಿಂಗ್ ಕಾರ್ ಆಡೋಣ ಅಂತ ಹೇಳಿದ್ದು. ಅಪ್ಪ ಹೋಗೋಣ ಅಂದ್ರೆ ನೀನೆ ಅಪ್ಪನ ಹತ್ತಿರ ಬೇಡ ಹೇಳಿ ಮಂತ್ರಿ ಮಾಲ್ ಗೆ ಕರೆದುಕೊಂಡು ಹೋದೆ” ಅಂತ ಇದ್ದ ಸತ್ಯವನ್ನು ಒಂದೆ ಉಸಿರಲ್ಲಿ ಹೇಳಿದಳು. ಸತ್ಯವಂತ ಕುಂಕ್ರಿಯ ನೋಡಿ ಕುಂಕ್ರಿಯ ಅಮ್ಮನ ಮುಖ ಪೆಚ್ಚಾಯಿತು.