Sunday, April 7, 2019

ಮಗಳ ಡೇ ಔಟ್…


                                            ಮಗಳ ಡೇ ಔಟ್…

ಮೊದ್ಲಿನಿಂದನು ಮೈಸೂರು ಅಂದ್ರೆ ಯಾಕೋ ಒಂದ್ ಚೂರ್ ಪ್ರೀತಿ ಜಾಸ್ತಿನೆ. ಚಿಕ್ಕ ವಯಸ್ಸಿನಲ್ಲಿ ಚೀಟಿನಲ್ಲಿ ಊರು,ಹೆಸರು,ತಿಂಡಿ,ಇನ್ನೊಂದು ಮರೆತು ಹೋಗಿದೆ. ಈ ಆಟ ಆಡ್ಬೇಕಿದ್ರೆ ಊರು ಜಾಗದಲ್ಲಿ “ಮ” ಅಕ್ಷರ ಬಂದರೆ ಮೊದಲು ಬರೆಯುವುದು ಮೈಸೂರ್ ಆಗಿತ್ತು. ನಮ್ಮೂರಿನಿಂದ ಮೈಸೂರ್ ಸ್ವಲ್ಪ ದೂರ ಆಗಿತ್ತು. ನಮ್ಮೂರಿನವರಿಗೆ ಮೈಸೂರು ಅಂದರೆ ಏನೋ ಒಂದು ಅದ್ಬುತವಾದ ಕಲ್ಪನೆ. ಮೈಸೂರಿಗೆ ಹೋಗುವುದು ಅಂದ್ರೆ ಏನೋ ಸಡಗರ. ಒಮ್ಮೆ  ಅಪ್ಪ ನಮ್ಮನ್ನ ಮೈಸೂರಿಗೆ  ಕರೆದುಕೊಂಡು ಬಂದಿದ್ದರು. ಅಪ್ಪ-ಅಮ್ಮನ ಜೊತೆ ಬಂದಿರುವ ಈ ಪ್ರವಾಸ ನನ್ನ ಲೈಫ್ ಲಾಂಗ್ ಎವರ್ ಗ್ರೀನ್ ಟ್ರಿಪ್.
ಮದುವೆ ಆಗಿ ಬೆಂಗಳೂರಿಗೆ ಬಂದ ಮೇಲೆ ತುಂಬಾ ಸಲ ಮೈಸೂರಿಗೆ ಹೋಗಿದ್ದೆ. ಆದರು ಪ್ರತಿ ಬಾರಿ ಹೋಗುವಾಗಲೂ ಏನೋ ಸಡಗರ. ಮೈಸೂರಿಗೆ ಹೋಗೋ ಸಂದರ್ಭ ಬಂದರೆ ಯಾವಾಗಲು ಇಲ್ಲ ಅನ್ನೋ ಮಾತೆ ಇಲ್ಲ. ನನ್ನ ಹಾಜರಾತಿ ಇದ್ದೆ ಇರುತ್ತೆ. ಅದ್ ಏನೋ “ನೂಲಿನಂತೆ ಸೀರೆ,ತಾಯಿಯಂತೆ ಮಗಳು” ಅನ್ನೊ ಗಾದೆ ಇದಿಯಲ್ಲ ಅದು ನನ್ನ ಮಗಳಿಗೆ ಅನ್ವಯಿಸುತ್ತದೆ. ಅವಳಿಗೆ ಮೈಸೂರ್ ಅದು ಟ್ರೇನ್ ನಲ್ಲಿ ಹೋಗೋದು ಅಂದ್ರೆ ಬಾಳ ಇಷ್ಟ. ಅವಳ ಆಸೆಯ ಪ್ರಕಾರ ಟ್ರೆನ್ ನಲ್ಲಿ ಒನ್ ಡೇ ಟ್ರಿಪ್ ಅಂತ ಪ್ಲಾನ್ ಮಾಡಿದ್ವಿ. ಟ್ರೆನ್ ಮಗಳ ಆಸೆ ಆದ್ರೆ ನಮ್ಮ ಯಜಮಾನರಿಗೆ ಬೆಂಗಳೂರ್-ಮೈಸೂರ್ ಕಾರ್ ಡ್ರೈವ್ ಮಾಡೋದು ಬೇಡ್ವಾಗಿತ್ತು. ಲಾಂಗ್ ವೀಕ್ ಎಂಡ್ ಆದ ಕಾರಣ ಮೈಸೂರ್ ರಸ್ತೆಯ ಟ್ರಾಫಿಕ್ ಗೆ ಹೆದರಿದ್ವಿ. ಅದು ಅಲ್ಲದೆ ನಮ್ಮ ಊರಿಗೆ ಟ್ರೆನ್ ಇಲ್ಲದ ಕಾರಣ ಮಗಳಿಗೆ ಟ್ರೇನ್ ಮೇಲೆ ಹೋಗೋದೆ ಒಂದು ಸಂಭ್ರಮ.
ಬೆಳಗಿನ ಆರು ಗಂಟೆಯ ಟ್ರೇನ್ ಗೆ ಹೊರಟೆವು. ಟ್ರೇನ್ ಕೂಡ ರಶ್ ಇತ್ತು. ಮೊದಲೆ ರಿಸರ್ವ ಮಾಡಿದ ಕಾರಣ ನಮಗೆ ಕಷ್ಟ ಆಗಲಿಲ್ಲ. ಮೈಸೂರ್ ಟ್ರೇನ್ ನಲ್ಲಿ ಹೆಚ್ಚಾಗಿ ಮದ್ದುರ್ ವಡಾ ಮಾರಲು ಬರುವುದು. ನಾನು ತುಂಬಾ ಸಲ ಮನೆಲಿ ಮಾಡಿದ್ರು ಆ ಲೊಕಲ್  ಮದ್ದೂರ್ ವಡಾ ಟೆಸ್ಟ ಬಂದೆ ಇಲ್ಲ. ನೀವು ಯಾವುದೆ ತಿಂಡಿ ತಗೊಳಿ ನಿಜವಾದ ರುಚಿ ನೋಡಬೇಕು ಅಂದ್ರೆ ಆ ಊರಲ್ಲೆ ತಿನ್ನಬೇಕು. ಬೇರೆ ಊರಲ್ಲಿ ತಿಂದರೆ ಅಷ್ಟು ರುಚಿ ಅನಿಸುವುದಿಲ್ಲ. ಇದು ನನ್ನ ವಯಕ್ತಿಕ ಅಭಿಪ್ರಾಯವೋ ಏನೊ ತಿಳಿದಿಲ್ಲ. ಇದರ ಅನುಭವವಾಗಿದ್ದು ಉತ್ತರ ಭಾರತದ ತಿಂಡಿ-ತಿನಿಸಿನಲ್ಲಿ. ಅದು ಲಸ್ಸಿ. ನಾವು ಮನೆಲೆ ಮಾಡಲಿ ಅಥವಾ ಆಚೆ ಕಡೆ ಕುಡಿಯಲಿ ಉತ್ತರ ಭಾರತದ ಕಡೆ ಸಿಗೋ ರುಚಿ ಇಲ್ಲಿ ಸಿಗುವುದಿಲ್ಲ.
ಮದ್ದೂರ್ ವಡಾ ಮತ್ತು ಇಡ್ಲಿ ಬೆಳಗಿನ ಉಪಹಾರಕ್ಕೆ ತಿಂದೆವು. ಇಂದು ಮಗಳ ಆಸೆಯಂತೆ ಮೈಸೂರಲ್ಲಿ ಓಡಾಡುವುದು ಎಂದು ತಿರ್ಮಾನಿಸಿದೆವು. ಆ ಕಾರಣದಿಂದ ಮೊದಲು ನಮ್ಮ ಆದ್ಯತೆ ಮೈಸೂರ್ ವೄಗಾಲಯ ಆಗಿತ್ತು. ಟ್ರೆನ್ ನಿಂದ ಇಳಿದು ಓಲಾ ಅಟೋದ ಮೇಲೆ ವೄಗಾಲಯಕ್ಕೆ ಹೋದೆವು.  ಮೈಸೂರ್ ಕ್ಲೀನ್ ಸಿಟಿ ಎಂದು ಕರೆಯಲ್ಪಟ್ಟಿತು. ಅದು ನಿಜ ಎಂದು ನನಗೆ ರೈಲ್ವೆ ಸ್ಟೇಶನ್ ನಲ್ಲು ಮತ್ತು ರಸ್ತೆಯ ಮೇಲೆ ಹೋಗುವಾಗ ಅನಿಸಿತು.
ಮೈಸೂರ್ ವೃಗಾಲಯ ಪ್ರವಾಸಿಗರಿಂದ ಗಿಜಿಗುಡುತಿತ್ತು. ನನಗೆ ದಿನವು ಇಷ್ಟೆ ಜನ ಬರ್ತಾರಾ ಅಂತ ಅನಿಸಿತು. ನಮ್ಮ ಮನೆಯವರ ಹತ್ತಿರ ಹೇಳಿದರೆ,”ನನಗೆನು ಗೊತ್ತು ನಾನ್ ಬಂದಾಗಲ್ಲ ಜನಕ್ಕೆನು ಬರಗಾಲ ಇಲ್ಲ” ಅಂದ್ರು. ಇವರ ಹತ್ತಿರ ಕೇಳಿ ಏನು ಪ್ರಯೋಜನ ಇಲ್ಲ ಇವರು ನನ್ನಷ್ಟೆ ಬಂದಿದ್ದು ಅಂತ ಯೋಚಿಸಿ ಅಲ್ಲೆ ಇದ್ದ ಸಿಬ್ಬಂದಿ ಹತ್ತಿರ ಕೇಳಿದೆ. ಆಕೆ ತುಂಬಾ ಖುಷಿಯಿಂದ “ ಅಮ್ಮ ನಮ್ಮ ಮೈಸೂರ್ ಯಾವಾಗ್ಲು ಪ್ರವಾಸಿಗರಿಂದಲೆ ತುಂಬಿರತ್ತೆ. ಅದು ಈ ಝೊ ಕ್ಕಂತು ಯಾವಾಗಲು ಪ್ರವಾಸಿಗರು ಬರ್ತಾ ಇರ್ತಾರೆ. ಸ್ಕೂಲ್ ಮಕ್ಕಳು ತುಂಬಾ ಬರ್ತಾರೆ” ಅಂತ ಒಂದೆ ಉಸಿರಲ್ಲಿ ಹೇಳಿದಳು.
ಝೊ ಎಲ್ಲರಿಗೂ ಚಿರಪರಿಚಿತ. ಮಗಳು ತನಗೆ ಇಷ್ಟವಾದ ಪ್ರಾಣಿ ಎಲ್ಲ ನೋಡಿ ಅವಳಿಗೆ ಎಷ್ಟು ಬೇಕೋ ಅಷ್ಟು ಸಮಯ ನೀಡಿದೆವು. ಝೊ ದ ಒಳಗೆ ಒಳ್ಳೆ ಉಪಹಾರ ಗ್ರಹಗಳು ಇದ್ದವು. ಯಾವುದಕ್ಕು ಕೊರತೆ ಇಲ್ಲ. ಅಲ್ಲಿ ಊಟ ಮುಗಿಸಿ ಅಲ್ಲೆ ಪಕ್ಕದಲ್ಲಿ ಕಾರಂಜಿ ಕೆರೆ ಇತ್ತು. ಅಲ್ಲಿ ಬೊಟಿಂಗ್ ಮಾಡಿ ಸ್ವಲ್ಪ ಸಮಯ ಕಳೆದು ಬಂದೆವು.
ನಮ್ಮ ಟ್ರೇನ್ ಸಂಜೆ ಎಳು ಗಂಟೆಗೆ ಆದ ಕಾರಣ ಸ್ವಲ್ಪ ಸಮಯ ಇತ್ತು ಅಲ್ಲೆ ಝೊ ದ ಹೊರಗೆ ಟಾಂಗ ಗಾಡಿ ಇತ್ತು. ಅದು ಮಗಳ ಆಸೆ. ಟಾಂಗ ಗಾಡಿಯಲ್ಲಿ ಹೋಗಬೇಕು ಎಂದು. ಝೊದಿಂದ ಅರಮನೆಗೆ ಟಾಂಗ ಗಾಡಿಯಲ್ಲಿ ಹೋದೆವು. ಈ ನಡುವೆ ಟಾಂಗ ಗಾಡಿಗಳು ಬೇರೆ ಊರಿನಲ್ಲಿ ಅಷ್ಟಾಗಿ ಇಲ್ಲ. ಮೈಸೂರಿನಲ್ಲಿ ತುಂಬಾ ಟಾಂಗ ಗಳು ಇವೆ.
ಅರಮನೆಗೆ ಹೋಗಿ ಸಮಯದ ಅನುಸಾರವಾಗಿ ಅರಮನೆಯನ್ನು ಒಂದು ರೌಂಡ್ ನೋಡಿ ಬಂದೆವು. ಇಂದು ಮಗಳ ಡೇ ಔಟ್. ಅವಳಿಗೆ ಯಾವುದು ಇಷ್ಟವೋ ಅವುಗಳನ್ನು ಮಾತ್ರ ನೋಡಿದೆವು. ಪುನಃ ರೈಲ್ವೆ ಸ್ಟೆಶನ್ಗೆ ಟಾಂಗದಲ್ಲೆ ಬಂದೆವು. ಸ್ವಲ್ಪ ಹಣ ಜಾಸ್ತಿ ಆದರು ಟಾಂಗದ ಮೇಲೆ ಹೋಗುವುದು ಏನೋ ಒಂದು ಖುಶಿ. ಆದರೆ ಆ ಕುದುರೆಯ ಪರಿಸ್ಥಿತಿ ನೋಡಿದರೆ ಬೆಸರ ಅಗುವುದು. ಏನ್ ಮಾಡೋದು ಅದು ಅವರ ಹೊಟ್ಟೆ ಪಾಡು.
ಏನೋ ಒಂದು ದಿನದ ಡೇ ಔಟ್ ನನ್ನ ಮತ್ತು ನನ್ನ ಮಗಳ ಇಷ್ಟವಾದ ಊರಿಗೆ ಹೋಗಿ ಬಂದೆವು. ನಾನು ಜಿರಾಫೆ ನಾ ಕಣ್ಣು ತುಂಬಿಸಿಕೊಂಡು ಬಂದರೆ ಮಗಳು ಹುಲಿ ಮತ್ತು ಕೆಲವು ಪಕ್ಷಿಗಳನ್ನು ಕಣ್ಣು ತುಂಬಿಕೊಡಳು. ಇನ್ನೊಮ್ಮೆ ಕಾರ್ ಮೇಲೆ ಹೋಗೊದ್ಕಿಂತ ಟ್ರೇನ್ ಮೇಲ್ ಹೋಗಿ ಟಾಂಗಾದ್ ಮೇಲ್ ಓಡಾಡೋದು ಇಷ್ಟ ಮುಂದಿನ ಬಾರಿಯು ಹೀಗೆ ಮಾಡೋಣ ಅಂತ ಒಂದು ಹೊಸ ಯೋಜನೆ ಹಾಕಿದಳು.



Saturday, April 6, 2019

ಪ್ಯಾಟೆ ಸ್ಕೂಲ್ ಗಮ್ಮತ್ತು…..


                                       ಪ್ಯಾಟೆ ಸ್ಕೂಲ್ ಗಮ್ಮತ್ತು…..

ರುಕ್ಮಿಣಿ ಪೇಟೆ ಹತ್ತಿರದ ಊರಿನವಳಾದ್ದರಿಂದ ಅಲ್ಲೆ ಪೇಟೆಗೆ ಹತ್ತಿರದ ಒಂದು ಸರಕಾರಿ ಶಾಲೆಗೆ ಹೋಗುತ್ತಿದ್ದಳು.ನಾಲ್ಕನೇ ತರಗತಿ ಆದರು ತುಂಬಾ ಚೂಟಿ ಆಗಿದ್ದಳು.  ಯಾವಾಗಲು ವಟವಟ ಅನ್ನೋ ರುಕ್ಮಿಣಿ ಎಲ್ಲರ ತಲೆ ತಿನ್ನುತ್ತಾ ತನ್ನದೆ ಏನೋ ಒಂದು ಕಥೆ ಹೇಳುತ್ತಿದ್ದಳು. ಆದರೆ ಎಲ್ಲರ ಕೈ ಮುದ್ದು ಆಗಿದ್ದಳು. ಅವಳನ್ನು ರೇಗಿಸೋದು, ಅವಳಿಗಾಗಿ ತರಹ-ತರಹದ ಹೆಸರಿಡುವುದು ಅಂದರೆ ಎಲ್ಲರಿಗೂ ಬಹು ಪ್ರೀತಿ.
ಬೆಸಿಗೆ ರಜೆ ಬಂತೆಂದರೆ ಇಗಿನ ತರ ಯಾವ ಸಮ್ಮರ್ ಕ್ಯಾಂಪ್ ಇಲ್ಲ, ನೆಂಟರ ಮನೆಯಲ್ಲಿಯೆ ಕ್ಯಾಂಪ್. ಪ್ರಕೃತಿಯೆ ಟೀಚರ್. ರುಕ್ಮಿಣಿಗೆ ಬೆಸಿಗೆ ರಜೆ ಬಂತೆಂದರೆ ಮನೆಯಲ್ಲಿ ಕಾಲು ನಿಲ್ಲುವುದಿಲ್ಲ. ಸ್ವಲ್ಪ ದೂರದ ಅಜ್ಜನ ಮನೆಗೆ ಹೋಗುತ್ತಿದ್ದಳು. ಅಲ್ಲಿ ಅವಳ ವಾರಗೆಯ ಹುಡುಗರು ಇದ್ದರು. ಅದು ಅಲ್ಲದೆ ಅಲ್ಲಿನ ಗದ್ದೆ ಮತ್ತು  ಹೊಳೆ ಬಹಳ ಪ್ರೀಯವಾಗಿತ್ತು.
ಬೆಸಿಗೆಯಲ್ಲಿ ಗದ್ದೆಗೆ ನೀರು ಬಿಡುವುದು ಮಕ್ಕಳಿಗೆ ಬಹು ಪ್ರೀತಿ, ಗದ್ದೆಯಲ್ಲಿ ಮಗೆಕಾಯಿ ಮತ್ತು ಇತರೆ ಬೆಸಿಗೆ ತರಕಾರಿಗಳನ್ನು ಹಾಕುತ್ತಿದ್ದರು. ಅವುಗಳಿಗೆ ನೀರು ಬಿಟ್ಟು ದಿನ ಕಲ್ಲಂಗಡಿ ಅಥವಾ ಇನ್ನು ಯಾವುದಾದರು ತರಕಾರಿ ಎಷ್ಟು ದೊಡ್ಡವಾಯಿತು ಯಾವಾಗ ಅದನ್ನು ಕೊಯ್ಯಬಹುದು ಎಂದು ಲೆಕ್ಕಹಾಕಿ ಪುನಃ ಅದರ ಮೇಲೆ ಹುಲ್ಲು ಮುಚ್ಚಿಡುವುದು.
ರುಕ್ಮಿಣಿಗೆ ಮೊದಲಿನಿಂದಲು ಮಾತು, ಜನರ ಒಡನಾಟ ಪ್ರೀತಿ ಆದ ಕಾರಣ ಯಾವಾಗಲು ಅವಳಿದ್ದಲ್ಲಿ ಒಂದು ಪುಟ್ಟ ಗ್ಯಾಂಗ್ ಇದ್ದೆ ಇರುತ್ತಿತ್ತು. ಅಜ್ಜನ ಮನೆಯ ಊರ ಮಕ್ಕಳೆಲ್ಲ ರುಕ್ಮಿಣಿ ಬಂದಾಗ ಇವಳ ಹಿಂದೆ ಇರುತ್ತಿದ್ದರು. ದಿನ ಬೆಸಿಗೆಯಲ್ಲಿ ಸಿಗುವ ಹಣ್ಣುಗಳನ್ನು ಕೊಯ್ಯಲು ಹೋಗುತ್ತಿದ್ದರು. ಅದು ಅಲ್ಲದೆ ಬೆಸಿಗೆಯಲ್ಲಿ ಮಾವಿನ ಹಣ್ಣಿನ ಸೀಸನ್ ಆದ ಕಾರಣ ತೋಟದಲ್ಲಿ ಬೀಳುವ ಮಾವಿನ ಹಣ್ಣನ್ನು ಆರಿಸಿಕೊಂಡು ಮನೆಗೆ ತಂದು ಕೊಡಬೇಕಾಗಿತ್ತು. ಇದರಿಂದ ಮನೆಯಲ್ಲಿ ಏನಾದರು ಪದಾರ್ಥಗಳನ್ನು ಮಾಡುತ್ತಿದ್ದರು.
ಒಮ್ಮೆ ದತ್ತರಾಜ ತಮ್ಮ ಶಾಲೆಯ ಹಿಂದಿನ ಮಾವಿನ ಮರದಲ್ಲಿ ಹಣ್ಣುಗಳು ತುಂಬಾ ಬಿಳುತ್ತಿವೆ ನಾಳೆ ಎಲ್ಲ ಹೋಗಿ ಆರಿಸಿಕೊಡು ಬರುವುದಾಗಿ ಹೇಳಿದ. ಇದಕ್ಕೆ ರುಕ್ಮಿಣಿಯು ಖುಶಿಯಿಂದ ಒಪ್ಪಿದಳು. ಇವಳ ಜೊತೆ ರೂಪ. ಅರುಣ,ಕವಿತಾ,ಪ್ರಸನ್ನ ಎಲ್ಲ ಅವರ ಶಾಲೆಯ ಹಿಂದಿನ ಮಾವಿನ ಮರಕ್ಕೆ ದಾಳಿ ಇಟ್ಟರು. ಶಾಲೆಯು  ಗದ್ದೆಯ ಕೊನೆಯಲ್ಲಿ ಇತ್ತು. ಪ್ರಶಾಂತವಾದ ವಾತಾವರಣ. ಬಯಲಾದ ಜಾಗ. ಅಲ್ಲೆ ಪಕ್ಕದಲ್ಲಿ ಒಂದು ಸಣ್ಣ ಕೆರೆ. ಅಲ್ಲಿಂದನೆ ಗದ್ದೆಗೆ ನೀರಿನ ವ್ಯವಸ್ಥೆ ಮಾಡಿದ್ದರು. ಸುತ್ತಲು ತರಹ-ತರಹದ ಮರಗಳು. ಬೆಸಿಗೆಯಲ್ಲು ತಂಪಾದ ವಾತಾವರಣ. ಆ ಶಾಲೆಯ ವಾತವರಣ ನೋಡಿ ರುಕ್ಮಿಣಿ ದಂಗಾದಳು. ತನ್ನ ಶಾಲೆ ರಸ್ತೆಯ ಪಕ್ಕದಲ್ಲೆ ಯಾವಗಲು ಮುಖ್ಯ ರಸ್ತೆಯ ವಾಹನಗಳ ಶಬ್ದ ದಿಂದ ಗಿಜಿಗುಡುವುದು ನೆನಪಾಯಿತು. ಇಲ್ಲಿನ ಶಾಲೆಯ ವಾತವರಣ ನೋಡಿ ಸ್ವಲ್ಪ ಹೊಟ್ಟೆ ಕಿಚ್ಚು ಶುರುವಾಯಿತು.
ದತ್ತರಾಜ ಅಂದ ಹಾಗೆ ಒಳ್ಳೆ ಮಾವಿನ ಹಣ್ಣುಗಳು ಇದ್ದವು. ಎಲ್ಲಾ ಸೇರಿ ಹಣ್ಣುಗಳನ್ನು ಆರಿಸಿಕೊಳ್ಳುವಾಗ ರೂಪಾ, “ಇಷ್ಟು ಒಳ್ಳೆ ಹಣ್ಣು ಇಲ್ಲಿ ಬಿಳ್ತಾ ಇದೆ ಅಂತ ನನ್ಗೆ ಗೊತ್ತೆ ಇರ್ಲಿಲ್ಲ” ಅಂತ ಹೇಳಿದಳು. ಆಗ ದತ್ತರಾಜ, “ಈ ಮರಕ್ಕೆ ಪುಟ್ಟ-ಪುಟ್ಟ ಕಾಯಿ ಬಂದಿದ್ದು ನಾನ್ ನೋಡಿದ್ದೀನಿ. ಅದಿಕ್ಕೆ ನಾನು ನಿಮ್ಮ್ ಇಲ್ಲಿಗೆ ಬರೋದಕ್ಕೆ ಹೇಳಿದ್ದು” ಅಂತ ಹೇಳಿದ. ಆಗ ರುಕ್ಮಿಣಿಯ ಹೊರತಾಗಿ ಬಾಕಿ ಮಕ್ಕಳು ಅವರವರೆ ಮಾತಾಡಿಕೊಂಡರು. ರೂಪಾ ಹೇಳಿದಳು,” ಶಾಲೆಯ ಬಿಡುವಿನ ಸಮಯದಲ್ಲಿ ಸೀಬೆಕಾಯಿ ಕೀಳೋ ಜೊತೆಗೆ ಮಾವಿನ ಹಣ್ಣನ್ನು ಕಿತ್ತು ತಿನ್ನಬಹುದು” ಅಂತ ಹೇಳಿದಳು.  ಆಗ ಅರುಣ ಹೇಳಿದಳು, “ಅಯ್ಯೊ ಹಣ್ಣು ಆಗೊ ತನಕ ಯಾರ್ ಕಾಯ್ತಾ ಇರ್ತಾರೆ,  ಮಾವಿನ ಪುಟ್ಟ ಕಾಯಿಗೆ  ಮನೆಯಿಂದ ಉಪ್ಪು ಖಾರ ಮಾಡಿಕೊಂಡು ಇಲ್ಲಿ ತಿಂದ್ರೆ ಆಯ್ತು. ಶಾಲೆ ಬಿಟ್ಟ ಮೇಲೆ ಆ ಕೆರೆದಂಡೆ ಮೇಲೆ ಸುಮ್ನೆ ಕೂತ್ ಬರ್ತ್ತಿದ್ವಿ. ಇನ್ನು ಮಾವಿನ ಕಾಯಿ ಪಾರ್ಟಿ ಮಾಡೋಣ” ಅಂತ ಉತ್ಸಾಹದಲ್ಲಿ ಹೇಳಿದಳು. ಎಲ್ಲರು ಅವಳು ಹೇಳಿದ್ದೆ ಸರಿ ಅಂತ ಹೇಳಿದರು. ಆಗ ದತ್ತರಾಜ ರುಕ್ಮಿಣಿಯ ಬಳಿ ಕೇಳಿದ, “ ಏಯ್, ನಿಮ್ ಶಾಲೆ ಹತ್ರ  ಯಾವ ಮರ ಇದೆ. ನೀವು ಶಾಲೆ ಬಿಟ್ಟ್ ಮೇಲ್ ಏನ್ ಮಾಡ್ತೀರಾ?” ಅಂತ ಇವಳ ಬಳಿ ಕೇಳಿದ. ಆಗ ರುಕ್ಮಿಣಿಗೆ ಇವಳ ಶಾಲೆಯ ಬಗ್ಗೆ ಏನು ಹೇಳಿಕೊಳ್ಳುವುದು ಅಂತ ತಿಳಿಯಲಿಲ್ಲ. ಇಲ್ಲಿನ ಶಾಲೆಯ ಒಂದ್ ಅಂಶನು ಅವಳ ಶಾಲೆಯ ಬಳಿ ಇಲ್ಲ. ಆದರೆ ಇವರ ಎದುರು ತೆಪ್ಪಗೆ ಇರುವ ಜಾಯ್ ಮಾನ ಅವಳದ್ದಲ್ಲ. ಬೇಕಂತನೆ ಹೊಟ್ಟೆ ಉರಿಸಲು ತಮ್ಮ ಶಾಲೆಯ ಬಳಿ ಕರೆ ತಂದಿದ್ದಾರೆ, ಅದಕ್ಕಾಗೆ ತನ್ನ ಶಾಲೆಯ ಸುದ್ದಿ ಕೇಳ್ತಾ ಇರೋದು ಅಂತ ತಿಳಿದು ತಾನು ಇವರ ಹೊಟ್ಟೆ ಉರಿಸ ಬೇಕು ಅಂತ ತನ್ನ ಶಾಲೆಯ ಬಗ್ಗೆ ರೈಲ್ ಹೊಡಿಯೊಕ್ ಶುರು ಮಾಡಿದಳು.
“ಅಯ್ಯೊ..ನಮ್ ಶಾಲೆ ಬಗ್ಗೆ ಏನ್ ಕೇಳ್ತಿರಾ. ನೀವ್ ಇಲ್ಲಿ ಮಾವಿನ ಹಣ್ಣು ನೀವೆ ಆರಿಸಿ ತಿಂದರೆ ನಮ್ ಶಾಲೆಲಿ ನಮ್ಗೆ ಜ್ಯೂಸ್ ತಂದ್ ಕೊಡ್ತಾರೆ. ನಾವ್ ಮನೆಯಿಂದ ನೀರಿನ ಬಾಟೆಲ್ ತಗೊಂಡ್ ಬರಲ್ಲ. ನಮ್ಗೆ ನೀರದಿಕೆ ಆದಾಗ ಜ್ಯೂಸ್ ಕೊಡ್ತಾರೆ. ಒಂದ್-ಒಂದ್ ದಿನ ಐಸ್ ಕ್ರೀಮ್ ಬೇರೆ ಕೊಡ್ತಾರೆ” ಅಂತ ಹೇಳಿದಳು. ಜ್ಯೂಸ್ ಮತ್ತು ಐಸ್ ಕ್ರೀಮ್ ಹೇಳಿದ್ದೆ-ಹೇಳಿದ್ದು ಎಲ್ಲಾ ಕಣ್ಣು ಬಾಯಿ ಬಿಟ್ಟು ಇವಳ ಮಾತು ಕೇಳಿದರು. ಅರಣು ಸ್ವಲ್ಪ ಬೆಸರದಲ್ಲಿ, “ನಮ್ಗೆ ಅಪ್ಪ-ಅಮ್ಮ ಕೇಳಿದ್ರು ಜ್ಯೂಸ್ ಮತ್ತೆ ಐಸ್ ಕ್ರೀಮ್ ತೆಕ್ಕೊಡಲ್ಲ. ನಿಮ್ಗೆ ಶಾಲೆಲಿ ಅಂದ್ನಲ್ಲ ಕೊಡ್ತಾರಾ..? “ ಅಂತ ಕೇಳಿದಳು. ಆಗ ದತ್ತರಾಜ “ ಅವಳು ಹೋಗೋದ್ ಪೇಟೆ ಶಾಲೆ ಕೊಡ್ತಾರೆನೋ. ಅವ್ರ ಶಾಲೆ ಹತ್ತಿರ ಒಂದ್ ಅಂಗಡಿ ಇದೆ. ಅಲ್ಲಿ ಅಪ್ಪ ಒಂದ್ ದಿನ ಐಸ್ ಕ್ಯಾಂಡಿ ತೆಕ್ಕೊಟ್ಟಿದ್ರು.” ಅಂತ ಹೇಳಿದ. ಆಗ ರುಕ್ಮಿಣಿ  “ಅದೇ ಅಂಗಡಿಯಿಂದನೆ ನಮ್ಗೆ ಜ್ಯೂಸ್ ಮತ್ತು ಐಸ್ ಕ್ರೀಮ್ ನಮ್ ಶಾಲೆಗೆ ಬರೋದು” ಅಂತ ಹೇಳಿದಳು. ಆಗ ರೂಪ , “ಮತ್ತ್ ನಿಮ್ ಶಾಲೆಲಿ ಮತ್ತೀನ್ನೇನ್ ಇದೆ” ಅಂತ ಕೇಳಿದಳು. ಎಲ್ಲ ಮಾತಾಡುತ್ತ ಬಂದು ಶಾಲೆಯ ಮೆಟ್ಟಿಲ ಮೇಲೆ ಕುಳಿತರು. ರುಕ್ಮಿಣಿ ಇವರು ತಮ್ಮ ಶಾಲೆಯ ಬಗ್ಗೆ ಹೇಳೊದು ನಂಬುತ್ತಾರೆ ಅಂತ ತಿಳಿದು ತನ್ನ ಶಾಲೆಯ ಬಗ್ಗೆ ಒಳ್ಳೆ ಕಥೆನೆ ಶುರು ಮಾಡಿದಳು. “ನೋಡಿ ನಮ್ ಶಾಲೆಲಿ ಇಲ್ಲಿ ತರ ಸಣ್ಣ ಬೆಂಚಿನ ಮೇಲೆ ನಾವ್ ಕುಳಿತು ಕೊಳ್ಳಲ್ಲ. ನಮ್ಗೆ ಅಂತ ಸೋಫಾ ಸೇಟ್ ಇದೆ. ಅದ್ರ ಮೇಲ್ ಕುಳಿತ್ರೆ ಅಕ್ಕುತ್ತೆ. ಅಷ್ಟು ಮೆತ್ತಗೆ ಇದೆ. ನಮ್ ಶಾಲೆಲಿ ಟಿ.ವಿ. ಬೇರೆ ಇದೆ. ವಾರಕ್ಕೊಮ್ಮೆ ಸಿನಿಮಾ ತೋರ್ಸ್ತಾರೆ. ಶಾಲೆ ಹಿಂದೆ ಜೋಕಾಲಿ, ಜಾರ್ ಬಂಡಿ ಎಲ್ಲಾ ಇದೆ. ನಾವ್ ಯಾವಾಗ್ ಬೇಕೋ ಆವಾಗ್ ಆಟ ಆಡ್ಬಹುದು.” ಅಂತ ಹೇಳಿದಳು.
ಸತ್ಯ ತಲೆ ಮೇಲೆ ಹೊಡೆದ ಹಾಗೆ ಹೇಳಿದ ರುಕ್ಮಿಣಿಯ ಮಾತು ಬಾಕಿ ಮಕ್ಕಳಲ್ಲಿ ತಮ್ಮ ಶಾಲೆಯ ಬಗ್ಗೆ ಕೀಳರಿಮೆ ಶುರುವಾಯಿತು. ತಾವು ಜಾರ್ ಬಂಡಿ ಮತ್ತು ಜೋಕಾಲಿ ವರ್ಷಕ್ಕೊಮ್ಮೆನು ಆಟ ಆಡ್ತಿವೋ ಇಲ್ಲವೋ ಅಂತ ಹೇಳಿಕೊಂಡರು. ಇನ್ನು ಐಸ್ ಕ್ರೀಮ್ ಮತ್ತು ಜ್ಯೂಸ್ ಪೇಟೆಗೆ ಹೋದ್ರೆ ಅಪರೂಪಕ್ಕೊಮ್ಮೆ ಸಿಕ್ಕಿದ್ರೆ ಸಿಕ್ಕಿತು ಇಲ್ಲ ಅಂದ್ರೆ ಇನ್ನೊಂದು ದಿನ ಅಂತ ಮನೆಗೆ ಕರೆದುಕೊಂಡು ಬರ್ತಾರೆ ಅಂತ ಹೇಳಿಕೊಂಡರು. ತಮ್ಮಲ್ಲೆ ತಾವು ಕೂಡ ಪೇಟೆ ಶಾಲೆಗೆ ಹೋಗ ಬೇಕು ಅಂತ ಅಂದುಕೊಂಡು ಮನೆ ಕಡೆ ನಡೆದರು.
ಇದಾದ ಮಾರನೆ ದಿನ ರುಕ್ಮಿಣಿ ತನ್ನ ಮನೆಗೆ ಹೋದಳು. ಆದರೆ ಇವಳು ತಲೆಯಲ್ಲಿ ಬಿಟ್ಟ ಹುಳ ಕೆಲಸ ಮಾಡಲು ಶುರು ಮಾಡಿತು.
ಇದಾದ ಹದಿನೈದು ದಿನಕ್ಕೆ ಒಂದು ಕಾರ್ಯಕ್ರಮಕ್ಕೆ ರುಕ್ಮಿಣಿ ತನ್ನ ಅಮ್ಮನ ಜೊತೆ ಹೊಗಿದ್ದಳು. ಅಲ್ಲಿ ದತ್ತರಾಜನ ಅಣ್ಣ ನಾಗರಾಜ ಬಂದಿದ್ದ. ರುಕ್ಮಿಣಿಯ ನೋಡಿದ್ದೆ “ಏನೇ ಚನ್ನಾಗಿ ನಿಮ್ ಸ್ಕೂಲ್ ಬಗ್ಗೆ ರೈಲ್ ಬಿಟ್ಟಿದೀಯಾ? ಅಲ್ಲಿ ನಿನ್ನ ಗ್ಯಾಂಗ್ ನವರೆಲ್ಲ ನಾವ್ ರುಕ್ಮಿಣಿ ಹೋಗೋ ಶಾಲೆಗೆ ಹೋಗ್ತಿವಿ ಅಂತ ಕೂತಿದ್ದಾರೆ” ಅಂತ ಹೇಳಿದ. ಆಗ ರುಕ್ಮಿಣಿಗೆ ತಾನು ಹೇಳಿದ್ದು ನಾಗರಾಜಣ್ಣನಿಗೆ ಇವರು ಹೇಳಿರುವುದು ತಿಳಿತು. ಹೇಗಾದ್ರು ಜಾರಿಕೊಳ್ಳ ಬೇಕು ಅಂತ,” ನಾನೇನ್ ರೈಲು ಬಿಟ್ಟಿಲ್ಲ. ನಮ್ ಶಾಲೆಲಿ ಇದ್ದದ್ದು ಹೇಳಿದೆ” ಅಂದಳು. ಆಗ ನಾಗರಾಜ “ಏನು ನಿಮ್ ಶಾಲೆಲಿ ಇರೋದಾ…ಸುಮ್ನಿರು ನನ್ನ ಹತ್ತನೆ ಕ್ಲಾಸ್ ಪರಿಕ್ಷೆ ಸೆನ್ಟರ್ ಅಲ್ಲೆ ಆಗಿತ್ತು. ನೆಟ್ಟಗೆ ಕೂರಲು ಆಗಲ್ಲ. ಸೊಳ್ಳೆ ಕಾಟ ಮೇನ್ ರೋಡ್ ವಾಹನಗಳ ಶಬ್ದ. ಎಂಟ್ ದಿನಕ್ಕೆ ತಲೆ ಚಿಟ್ಟು ಹಿಡಿತು. ನೆಟ್ಟಗೆ ಕುಡಿಯಲು ನೀರಿಲ್ಲ. ಇನ್ನು ಜ್ಯೂಸ್ ಮತ್ತೆ ಐಸ್ ಕ್ರೀಮ್ ಬೇರೆ ಕೆಡು. ನೀನ್ ಹೇಳಿದ ಮಾತಿಗೆ ಅವರಲ್ಲ ತಾವು ತಮ್ಮ ಊರಿನ್  ಶಾಲೆಗೆ ಹೋಗಲ್ಲ ಪೇಟೆ ಶಾಲೆಗೆ ಹೋಗ್ತಿವಿ ಅಂತ  ಹಠ ಮಾಡ್ತಾ ಇದ್ದಾರೆ” ಅಂತ ಹೇಳಿದ. ಆಗ ರುಕ್ಮಿಣಿಗೆ ಏನ್ ಹೇಳೋಕು ತೋಚಲಿಲ್ಲ. ಅಲ್ಲೆ ಇದ್ದ ರೌಕ್ಮಿಣಿಯ ಅಮ್ಮ,” ಇವಳಿಗೆ ಬಾಯಿ ತಡೆಯಲ್ಲ. ಹಿಂದೆ-ಮುಂದೆ ಯೋಚನೆ ಮಾಡ್ದೆ ಏನಾದ್ರು ಹೇಳ್ತಾಳೆ. ಆ ಶಾಲೆ ಎಷ್ಟು ಚಂದ ಅಂತ ನನ್ಗೆ ಗೊತ್ತು. ಅದು ನಾನ್ ಕಲಿತ ಶಾಲೆನು. ಅಲ್ಲಿನ ಪರಿಸರ ದುಡ್ಡು ಕೊಟ್ಟರು ಸಿಗಲ್ಲ” ಅಂತ ಹೇಳಿದರು.
ಆಗ ರುಕ್ಮಿಣಿಗೆ ತಾನು ಅವರ ಬಳಿ ಸುಳ್ಳು ಹೇಳಬಾರದಿತ್ತು ಅಂತ ಅನಿಸಿತು. ಪಾಪ ಅವರ ಶಾಲೆ ಎಷ್ಟು ಚಂದ ಇದೆ. ಸುಮ್ಮನೆ ತನ್ನ ಪೇಟೆ ಶಾಲೆಯ ಬಗ್ಗೆ ಸುಳ್ಳು ಹೇಳಿ ಅವರಿಗೆ ಬೇರೆ ಶಾಲೆಗೆ ಹೊಗುವ ತರ ಮಾಡಿದೆ ಅಂತ ಪಶ್ಚಾತಾಪ ಆಯಿತು.  ಇನ್ನಾದ್ರು ತನ್ನ ಸ್ವಭಾವ ಬದಲಿಸಿಕೊಳ್ಳುವ ನಿರ್ಧಾರ ಮಾಡಿದಳು.

Thursday, April 4, 2019

ಹೊಸತು


                                                ಹೊಸತು

ಹೊಸ, ನ್ಯೂ,ನಯಾ…ಹೀಗೆ ಬೇರೆ-ಬೇರೆ ಭಾಷೆಯಲ್ಲಿ ಬೇರೆ-ಬೇರೆ ತರಹ ಹೇಳುತ್ತಾರೆ. ಆದರೆ ಯಾವ ಭಾಷೆಯಲ್ಲೆ ಆಗಲಿ, ಯಾವ ಜನರಲ್ಲೆ ಆಗಲಿ ಈ ಶಬ್ದ ಕೇಳಿದ ತಕ್ಷಣ ಏನೋ ಒಂದು ತರ ಖುಶಿ….ಸಂಬ್ರಮ.
ಹೊಸ ಬಟ್ಟೆ ಬಂದರೆ ಅದನ್ನು ಹಾಕಿಕೊಳ್ಳುವ ತನಕ ಪುರುಸೊತ್ತಿಲ್ಲದೆ ಚನ್ನಾಗಿ ಪೋಲ್ಡ್ ಮಾಡಿ ಇಸ್ತ್ರಿ ಹೊಡೆದು ಇಡುತ್ತೇವೆ. ನಂತರದ ದಿನದಲ್ಲಿ  ಕಪಾಟುನಲ್ಲಿ ಎಲ್ಲಿ ಜಾಗವಿದೆಯೋ ಅಲ್ಲಿ ತುರುಕಿದರೆ ಆಯಿತು.
ಇನ್ನು ಹೊಸ ಕಾರ್ ತಂದ ಶುರುವಿನಲ್ಲಿ ತಾವೆ ಸ್ವಂತ ತೊಳೆದು ಕ್ಲೀನ್  ಮಾಡುವವರು,ಕೊನೆ ಕೊನೆಗೆ ಅದನ್ನು ಕೆಲಸದವರ ಹತ್ತಿರ ಹೇಳಿ  ತಾವು ಜಾರಿ ಕೊಳ್ಳುವರು.
ಇನ್ನು ಹೊಸ ಪುಸ್ತಕ ತಂದ ಶುರುವಿನಲ್ಲಿ ಪುಸ್ತಕದ ವಾಸನೆ ಮೂಸಿ-ಮೂಸಿ ನೋಡುತ್ತಾ ಪುಸ್ತಕಕ್ಕೆ ಬೈಂಡಿಂಗ್ ಹಾಕುವ ವಿದ್ಯಾರ್ಥಿ ಜೀವನದಲ್ಲಿ ಪರಿಕ್ಷೆ ಮುಗಿಯುತ್ತಿದ್ದಂತೆ ಅಮ್ಮನಿಗೆ ಆದಷ್ಟು ಬೇಗ ರದ್ದಿಗೆ ಹಾಕು ಅಂತ ಹೇಳುವುದುಂಟು.
 ಇನ್ನು ಮನೆಲಿ ಹೊಸ ಫಿರ್ಡ್ಜ್, ಗ್ರಾಂಡರ್, ಓವನ್ ಬಂದರಂತು ಮನೆ ಹೆಂಗಸರಿಗೆ ಮುಗಿತು ಅದನ್ನು ಕನ್ನಡಿ ಕಪಾಟಿನ ತರ ಪಳ-ಪಳ ಹೊಳೆಯುವಂತೆ ನೋಡಿಕೊಳ್ಳುತ್ತಾರೆ. ನಂತರದ ದಿನದಲ್ಲಿ “ಅಯ್ಯೋ ಹಾಳಾದ್ ದೂಳು ಎಷ್ಟು ಕ್ಲೀನ್ ಮಾಡಿದ್ರು ಅಷ್ಟೆ “ ಅಂತ ಕ್ಲೀನ್ ಮಾಡೋ ಕೆಲಸಕ್ಕೆ ಕೋಕ್ ಕೊಡ್ತಾರೆ.
ಹೊಸ ವರ್ಷದ ಶುರುವಿನಲ್ಲಿ ಎಲ್ಲರದ್ದು ಡೈರಿ ಬರೆಯುವ ಅಥವಾ ಮನೆ ಲೆಕ್ಕ ಬರೆಯುವ ಇನ್ನು ವಾಕಿಂಗ್, ಯೋಗ. ಹೀಗೆ ಅನೇಕ ಸಂಕಲ್ಪಗಳು ಜನವರಿ ತಿಂಗಳಲ್ಲಿ.  ಆದರೆ ಅರ್ಧಕ್ಕೆ ಅರ್ಧದಷ್ಟು ಜನರ ಸಂಕಲ್ಪ ಫೇಬ್ರವರಿ ದಾಟಲ್ಲ.
ಇನ್ನು ಮದುವೆ ಆದ ಹೊಸದರಲ್ಲಿ ನವ ಮಧುಗಳಿಗೆ ವಸಂತ ಮಾಸ. ಪ್ರತಿ ಹಬ್ಬವು ಹೊಸತು. ಹೆಂಡತಿಯ ಮಾತೆ ರತ್ನ. ಗಂಡ ಹೇಳಿದ್ದೆ ಸತ್ಯ. ನಂತರದ ದಿನದಲ್ಲಿ ಇಬ್ಬರ ಮಾತಿನ ಚಾತುರ್ಯತೆಯ ಅರಿವು ಆಗುವುದು. ಕೆಲವೊಮ್ಮೆ ಅಕ್ಕ-ಪಕ್ಕದವರಿಗೂ ಇವರ ಮಾತಿನ ಚಕಮಕಿಯ ಅರಿವು ಆಗುವುದುಂಟು.
ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುವುದು ಹನುಮಂತನ ಬಾಲದಂತೆ. ನಾನು ಇವತ್ತು ಹೇಳೋಕ್ ಹೊರಟಿದ್ದು ಇಷ್ಟೆ, ಈ ಬಾರಿ ನನಗೆ ಪ್ರತಿಲಿಪಿಯಲ್ಲಿ  ಯುಗಾದಿ ಮೊದಲ ಹೊಸ ಹಬ್ಬ.  ಈ ವರ್ಷ ಇನ್ನು ಹೊಸ-ಹೊಸ ಲೇಖನ ಬರಲಿ ಮತ್ತು ನಮಗೂ ಬರೆಯುವ ಉತ್ತೇಜನ ಸಿಗಲಿ ಎಂದು ಕೇಳಿಕೊಳ್ಳುತ್ತಾ, ನಮ್ಮ ಸಮಸ್ತ ಪ್ರತಿಲಿಪಿ ಬಳಗದವರಿಗೆ
                              “ಯುಗಾದಿಯ ಶುಭಾಶಯಗಳು”

ಕೆಸರಲ್ಲಿ ಹುಟ್ಟಿದ ಕಮಲ


                                             ಕೆಸರಲ್ಲಿ ಹುಟ್ಟಿದ ಕಮಲ 

ಲಕ್ಷ್ಮಿ ಪೇಪರ್ ಓದುತ್ತಾ ಇದ್ದಂತೆ ಕಣ್ಣಲ್ಲಿ ನೀರು ತುಂಬಿ ಬಂತು. ಹಾಗೆ ತಾನು ಕುಳಿತ ಖುರ್ಚಿಗೆ ತಲೆ ಚಾಚಿ ಯೋಚಿಸುತ್ತ ಇದ್ದಳು. ತಾನು ಈ ಊರಿಗೆ ಬಂದು ರಿಪೋರ್ಟ ಮಾಡಿಕೊಂಡು ಐದಾರು ತಿಂಗಳು ಆಗುತ್ತಾ ಬಂದರು ತನ್ನ ಆಫೀಸ್ ಕೆಲಸ ಮತ್ತು ಮನೆ ಬಿಟ್ಟು ತಾನು ಚಿಕ್ಕ ವಯಸ್ಸಿನಲ್ಲಿ ಓಡಾಡಿದ ಹಳ್ಳಿಯ ಕಡೆ ಒಮ್ಮೆಯು ಹೋಗದಿರುವುದು ನೆನಪಾಯಿತು. ಅಮ್ಮನಿಗೊ ಬಳ್ಳಾರಿಗೆ ತನ್ನ  ಟ್ರಾನ್ಸಫರ್ ಮಾಡಿದ್ದೆ ದೊಡ್ಡ ತಲೆನೋವಾಗಿತ್ತು.  ಇನ್ನು ಕಹಿ ನೆನಪು ಹೊತ್ತು ಬಂದ ಬ್ಯಾಗೂರಿಗೆ ಹೋಗುವುದು ಕನಸಲ್ಲು ಇಲ್ಲ ಅಂತ ಹೇಳಬಹುದು.
ಲಕ್ಷ್ಮಿಯ ತಾಯಿ ರೇಣಮ್ಮನಿಗೆ ಆದಷ್ಟು ಮಗಳನ್ನು ತಮ್ಮೂರಿನಿಂದ ದೂರ ಇಡಬೇಕು ಅನ್ನೋ ಆಸೆಯಿಂದಲೆ ಕಷ್ಟ ಪಟ್ಟು ಬೆಂಗಳೂರಿಗೆ ಹೋಗಿದ್ದರು. ಆದರೆ ವಿಧಿ ಅವರನ್ನು ಈ ಊರಿಗೆ ಬರುವಂತೆ ಮಾಡಿತು. ಆಗಿನ ಪರಿಸ್ಥಿತಿಗೂ ಈಗಿನ ಪ್ರಿಸ್ಥಿತಿಗೂ ತುಂಬಾ ವ್ಯತ್ಯಾಸ ಇತ್ತು. ಈಗ  ಮಗಳು ಕಲಿತು ಜಿಲ್ಲಾಧಿಕಾರಿ ಆಗಿದ್ದಳು. ಆದರು ಬೆನ್ನಿಗೆ ಅಂಟಿದ ಜಾತಿ ಮತ್ತು ಕೆಲವು ಅನಿಷ್ಟಗಳು ಮಗಳ ಜೀವನಕ್ಕೆ ಮುಳ್ಳಾಗಬಾರದು ಎಂದು ಎಲ್ಲರಿಂದ ದೂರ ಇರಿಸಿದ್ದಳು. ಬೆಂಗಳೂರಂತ ಊರಲ್ಲಿ ಅವರನ್ನು ಗುರುತು ಹಿಡಿಯುವವರು ಯಾರು ಇಲ್ಲದಿದ್ದರು, ಈ ಊರಿನಲ್ಲಿ ಸಾದ್ಯತೆ ಇತ್ತು. ಮಗಳಿಗೆ ತಮ್ಮ ದೇವದಾಸಿ ಪದ್ದತಿಯ ಬಗ್ಗೆ ತಿಳಿದಿದ್ದರು,ಅಪ್ಪ ಯಾರು ಅಂತ ತಿಳಿಯದ ಹೆಣ್ಣು ಮಗಳಿಗೆ ಈ ಊರಲ್ಲಿ ಎದುರಿಸುವ ಕಷ್ಟ ರೇಣುಕಮ್ಮನಿಗೆ ತಿಳಿದಿತ್ತು. ಲಕ್ಷ್ಮಿಯ ತಂದೆಯ ಕಾಲಂ ನಲ್ಲಿ ಅವಳು ತಾಯಿ ರೇಣುಕಮ್ಮನ ಹೆಸರೆ ಹಾಕುತ್ತಿದ್ದಳು.
ರೇಣುಕಮ್ಮ ಮಗಳಿಗೆ ಅಂತ ನೀಡಿದ ಮನೆಯಲ್ಲಿ ಆಳು-ಕಾಳು ಮತ್ತು ಸಹಲ ಸೌಭಾಗ್ಯವು ಇತ್ತು. ಸುಮ್ಮನೆ ಕುಳಿತು  ಒಮ್ಮೆ ತಮ್ಮ  ಗತ ಕಾಲದ ಬಗ್ಗೆ ಯೋಚಿಸಲು ತೊಡಗಿದಳು.
ಬ್ಯಾಗೂರಿನ ಬಡ ಕುಟುಂಬದಲ್ಲಿ  ಹುಟ್ಟಿದ ರೇಣುಕಮ್ಮನಿಗೆ ಸುಖದ ಅರ್ಥವೆ ತಿಳಿಯದಾಗಿತ್ತು. ದೇವದಾಸಿ ಜನಾಂಗದಲ್ಲಿ ಜನಿಸಿದ ರೇಣುಕಮ್ಮ ಅದನ್ನೆ ತಾವು ಪಾಲಿಸಿಕೊಂಡು ಬಂದರು. ಅವರಿಗೆ ಕಲಿಯುವ ಆಸೆ ಇತ್ತು. ಆದರೆ ಶಾಲೆಗೆ ಕಳಿಸುವ ಮನಸ್ಸು ಮನೆಯಲ್ಲಿ ಯಾರಿಗೂ ಇಲ್ಲವಾಗಿತ್ತು. ಅವರ ಮುಂದಿನ ಜೀವನ ಹೇಗೆ ಎಂಬುದು ಮೊದಲೆ ನಿರ್ಧಾರ ಆಗಿತ್ತು. ರೇಣುಕಮ್ಮ ದೊಡ್ಡವಳಾದ ತಕ್ಷಣ ಅವಳನ್ನು ದೇವದಾಸಿ ಮಾಡಲಾಗಿತ್ತು. ಹೆಸರಿಗೆ ಯಲ್ಲಮ್ಮನ ದಾಸಿ ಅಂತ ಆದರು ಊರ ಮುಖಂಡರು ಮತ್ತು ಹಣವಂತರು  ಹೇಳಿದ ತಕ್ಷಣ ಅವಳು ಅಲ್ಲಿಗೆ ಹೋಗಿ ತನ್ನನ್ನು ತಾನು ಅರ್ಪಿಸಿಕೊಳ್ಳ ಬೇಕಾಗಿತ್ತು. ಕಲಿಯದ ರೇಣುಕಮ್ಮನಿಗೆ ಇದನ್ನು ವಿರೋದಿಸುವ ದಿಟ್ಟತನ ಇಲ್ಲವಾಗಿತ್ತು. ತಮ್ಮ ಜನಾಂಗದವರನ್ನು ಈ ತರ ಉಪಯೋಗಿಸುವುದು ಖಂಡಿಸಲು ಏನಾದರು ಮಾಡಬೇಕು ಅಂತ ಯೋಚಿಸಿದ್ದಳು. ಆದರೆ ಅವಳ  ಸಪೊರ್ಟ ಗೆ ಯಾರು ಬರಲಿಲ್ಲ. ಆ ಕಾಲವು ಹಾಗೆ ಇತ್ತು.  ಗತಿ ಇಲ್ಲದೆ ಆ ಜೀವನಕ್ಕೆ ಹೊಂದಿಕೊಂಡಿದ್ದಳು. ಆದರೆ ಹೇಗಾದರು ಮಾಡಿ ಈ ಜನರಿಂದ ಆಚೆ ಹೋಗಬೇಕು, ತಾನೆ ಬೇರೆ ಜೀವನ ಕಟ್ಟಿಕೊಳ್ಳ ಬೇಕು ಎಂದು ದೃಡ ನಿರ್ಧಾರ ಮನಸ್ಸಿನ ಮೂಲೆಯಲ್ಲಿ ಇತ್ತು.
ಕಾಲ ಕಳೆದಂತೆ ರೇಣುಕಮ್ಮ ಒಂದು ಮಗಳಿನ ತಾಯಿ ಆದಳು. ಹೇಗೊ ಕಷ್ಟಪಟ್ಟು ಅವಳನ್ನು ಸಾಕುತ್ತಿದ್ದಳು. ಆಗ ತಾನೆ ಒಂದು ಕೋಲಿಯಲ್ಲಿ ಸರಕಾರಿ ಶಾಲೆಯನ್ನು ಶುರು ಮಾಡಿದ್ದರು. ಮಗಳನ್ನು ಶಾಲೆಗೆ ಕಳಿಸಿದ್ದಳು. ತನ್ನವರಿಂದಲೇ ಬೇಕಾದಷ್ಟು ವಿರೋದ ಇದ್ದರು ಹಠದಿಂದ ಮಗಳನ್ನು ಶಾಲೆಗೆ ಸೇರಿಸಿದ್ದಳು. ಪಕ್ಕದ ಮನೆ ಯಂಕಮ್ಮ ಹೇಳಿದ್ದಳು,” ಎಷ್ಟು ದಿನ ಅಂತ ಮಗಿನ ಶಾಲೆಗೆ ಕಳ್ಸ್ ಆಕ್ ಹತ್ತಿಮಗಿ ದೊಡ್ಡವಳು ಆಗ್ಲಿ ಗೆಜ್ಜೆ ಕಟ್ಟಿ ದೇವದಾಸಿ ಆಗ್ತಾಳ್ ನೋಡ್. ಮೈ ಕೈ ತುಂಬಿದ ಮಗಿನ್ ಸುಮ್ನೆ ಶಾಲಿಗ್ ಕಳ್ಸೊಕ್ ಆಗೈತೆನೆಅಂತ ಹೇಳಿದ್ದಳು. ಮಾತು ರೇಣಮ್ಮನ ಮನಸ್ಸಿಗೆ ನಾಟಿತ್ತು. ಇಗಲೆ ಲಕ್ಷಣವಾಗಿದ್ದ ಮಗು ಇನ್ನು ಬೆಳಿಯುತ್ತ ಇನ್ನು ಲಕ್ಷಣ ಆಗುವಳು ಎಂದು ಅನಿಸಿತು. ಹಾಗೆನಾದ್ರು ಆದರೆ ಇವರ ಮದ್ಯೆ ಅವಳಿಗೆ ಉಳಿಗಾಲವಿಲ್ಲ. ತಮ್ಮ ಕಸುಬನ್ನೆ ಮುಂದುವರಿಸಲು ಗೆಜ್ಜೆ ಕಟ್ಟುವರು. ಮೊದಲೆ ಪಟೇಲರ ಮನೆಯ ಬಗ್ಗೆ ತಿಳೀದಿತ್ತು. ಅಲ್ಲಿನ ಪರಂಪರಿಕವಾಗಿ ನಮ್ಮನ್ನು ಹತ್ತಿಕ್ಕಿದವರು ಇನ್ನು ತನ್ನ ಮಗಳ ಮೇಲೆ ಅಲ್ಲಿ ಇದ್ದ ಲಕ್ಷ್ಕಿ ವಯಸ್ಸಿನ ಗಂಡು ಮಕ್ಕಳು ಇವಳ ಮೇಲೆ ಕಣ್ಣು ಹಾಕುವುದು ಖಂಡಿತ ಎಂದು ಊಹೆ ಮಾಡಿದ್ದಳು. ಅವಳ ಊಹೆ ನಿಜ ಆಗಿತ್ತು. ಮೇಲಿನ ಜಾತಿ ಮತ್ತು ಹಣ ಉಳ್ಳವರು ಇವರನ್ನು ತುಂಬಾ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಹೇಗಾದರು ಮಾಡಿ ಇಲ್ಲಿಂದ ಕಾಲ್ ಕೀಳಬೇಕು ಅಂತ ಯೋಚಿಸಿದಳು. ಮಗಳು ಲಕ್ಷ್ಮಿ ಕಲಿಯಲು ಚುರುಕಾಗಿ ಇದ್ದಳು.  ಇವಳನ್ನು ಚನ್ನಾಗಿ ಓದಿಸುವುದೆ ರೇಣುಕಮ್ಮನ ಗುರಿ ಆಗಿತ್ತು. ಹಾಗೆಯೇ ಮಗಳನ್ನು ಈ ಕ್ರೂರ ಪ್ರಪಂಚದಿಂದ ದೂರ ಇಡುವುದು ಅವಳ ಆಸೆ ಆಗಿತ್ತು.
ಇನ್ನು ತಡ ಮಾಡಬಾರದು ಹೇಗಾದರು ಮಾಡಿ ಈ ಊರನ್ನು ಬಿಟ್ಟು ಮಗಳನ್ನು ಕಲಿಸ ಬೇಕು ಎಂದು ಯೋಚಿಸಿದಳು. ಅವಳ ಮುಂದಾಲೋಚನೆ ಚನ್ನಾಗಿ ಇತ್ತು. ಈ ವರ್ಷದ ವಾರ್ಷಿಕ ಪರಿಕ್ಷೆ ಮುಗಿಯಲಿ. ಅದಾದ ತಕ್ಷಣ ಹೊರಟರೆ ಬೇರೆ ಊರಲ್ಲಿ ಶಾಲೆಗೆ ಮೊದಲಿನಿಂದಲೆ ಸೇರಿಸಬಹುದು ಅಂತ ಯೋಚಿಸಿದಳು. ಅದು ಅಲ್ಲದೆ ಸ್ವಲ್ಪ ಹಣ ಹೊಂದಿಸಲು ಸಮಯ ಬೇಕಿತ್ತು. ಹಿಂದು-ಮುಂದು ಯೋಚನೆ ಮಾಡದೆ ಬರಿ ಕೈನಲ್ಲಿ ಹೋಗೋದು ಸರಿ ಅಲ್ಲ ಅಂತ ಯೋಚಿಸಿದ್ದಳು. ಇದನ್ನು ಯಾರ ಬಳಿಯು ಬಾಯಿ ಬಿಡಲಿಲ್ಲ. ಮಗಳ ಹತ್ತಿರವು ಏನು ಹೇಳಲಿಲ್ಲ. ಚಿಕ್ಕ ಹುಡುಗಿ ತನ್ನ ವಾರಗೆಯವರ ಜೊತೆ ಬಾಯಿ ಬಿಟ್ಟರೆ ಎಂಬ ಅಳುಕಿತ್ತು.  ಕಷ್ಟ ಪಟ್ಟು ಸ್ವಲ್ಪ ರೊಕ್ಕ ಹೊಂದಿಸಲು ಶುರು ಮಾಡಿದಳು. ತನ್ನಲ್ಲಿರುವ ದೊಡ್ಡ ಪಾತ್ರೆಗಳನ್ನು ಗುಜುರಿ ಅಂಗಡಿಗೆ ಹಾಕಿದ್ದಳು. ಚಿಕ್ಕ-ಚಿಕ್ಕ ಪಾತ್ರೆಗಳನ್ನು ಒಂದು ಚೀಲಕ್ಕೆ ತುಂಬುತ್ತ ಬಂದಳು. ತನ್ನಲ್ಲಿರುವ ಸೀರೆಯನ್ನು  ಖೌದಿ ಮಾಡಿದ್ದಳು. ತನಗೆ ಎಂದು ಕೆಂಪು ಕೆಲವು ಪಟ್ಟೆ ಸೀರೆಯನ್ನು ತಂದಿಟ್ಟು ಕೊಂಡಿದ್ದಳು. ಹೇಗೋ ಅಷ್ಟೊ-ಇಷ್ಟೋ ರೊಕ್ಕ ಹೊಂದಿಸಿದಳು. ಇನ್ನೇನು ಮಾರ್ಚ ತಿಂಗಳು ಬಂದು ಮಗಳ ನಾಲ್ಕನೆ ಇಯತ್ತೆ ಮುಗಿತು. ಆದಾದ ಸ್ವಲ್ಪ ದಿನಕ್ಕೆ ರೇಣುಕಮ್ಮ ಯಾರಿಗೂ ಹೇಳದೆ ಊರಿಂದ ಕಾಲ್ ಕಿತ್ತಿದ್ದಳು.
ಊರಲ್ಲಿ ರೇಣುಕಮ್ಮನ ಸುಳಿವೆ ಇಲ್ಲದ್ದನ್ನು ನೋಡಿ ಅವಳು ಎಲ್ಲೊ ಅವರ ಸಂಭಂದಿಕರ ಮನೆಗೆ ಹೋಗಿದ್ದಾಳೆನೋ ಅಂತ ಭಾವಿಸಿದ್ದರು. ತುಂಬಾ ದಿನ ಎಲ್ಲು ಕಾಣದೆ ಇದ್ದಾಗ ಏನೋ ಒಂದಿಷ್ಟು ಉಹಾಪೋಹದ ಕಥೆ ಹರಡಿತು.ಪುನಃ ಅವಳನ್ನು ಯಾರು ನೆನಪಿಸಿಕೊಳ್ಳಲಿಲ್ಲ.
ಇತ್ತ ರೇಣುಕಮ್ಮ ಮಗಳು ಲಕ್ಷ್ಮಿಯನ್ನು ಕಟ್ಟಿಕೊಂಡು ಬೆಂಗಳೂರು ಪಟ್ಟಣಕ್ಕೆ ಬಂದಳು. ಆಕೆಗೆ ಬಳ್ಳಾರಿ ಅಥವಾ ಅದರ ಆಸು-ಪಾಸು ಎಲ್ಲು ಹೋಗಲು ಮನಸ್ಸಾಗಲಿಲ್ಲ. ಗುರುತು ಸಿಗದ ಜಾಗದಲ್ಲಿ ಮಗಳ ಜೊತೆ ಹೊಸ ಬದುಕು ಕಟ್ಟಿಕೊಳ್ಳುವ ಆಸೆ ಆಗಿತ್ತು. ಊರು ಬಿಟ್ಟು ಬರುವಾಗ ಅವಳು ತನ್ನನ್ನೆ ಬದಲಿಸಿಕೊಂಡಿದ್ದಳು. ತನ್ನ ತಲೆಯ ಕೂದಲನ್ನು ತೆಗೆದು ಮಡಿ ಸೀರೆ ಉಟ್ಟಿದ್ದಳು.(ಗಂಡ ಸತ್ತ ನಂತರ ಊಡುವ  ಕೆಂಪು ಸೀರೆ). ಬಳ್ಳಾರಿಯ ಕಡೆ ಮೇಲ್ ಜಾತಿಯ ಹೆಂಗಸರು ಗಂಡ ಸತ್ತ ನಂತರ ಮಡಿ ಆಗಿದ್ದು ನೋಡಿದ್ದಳು. ತನ್ನ ಹಿನ್ನೆಲೆ , ಜಾತಿ ಎಲ್ಲವನ್ನು ಮರೆ ಮಾಡಿದ್ದಳು.
ಗೊತ್ತು ಗುರಿ ಇಲ್ಲದೆ ಪರ ಊರಿಗೆ ಬಂದ ಅವಿದ್ಯಾವಂತಳಿಗೆ ಜೀವನ ಕಷ್ಟ ಇತ್ತು. ಆದರೆ ರೇಣುಕಮ್ಮ ಎಲ್ಲವನ್ನು ಎದುರಿಸಲು ತಯಾರಾಗಿ ಇದ್ದಳು. ಅವಳಿಗೆ ಮಗಳದ್ದೆ ಒಂದು ದೊಡ್ಡ ಜವಬ್ದಾರಿ ಆಗಿದ್ದಳು.
ಬೆಂಗಳೂರಿಗೆ ಬಂದು ರೈಲು ಇಳಿದವಳು ಆಚೆ ಹೋಗಲೆ ಇಲ್ಲ.  ರೈಲು ನಿಲ್ದಾಣದಲ್ಲೆ ಸಿಕ್ಕಿದ್ದನ್ನು ತಿಂದು ಮತ್ತು ಕೆಲವು ತಿಂಡಿಗಳನ್ನು ಸ್ವಲ್ಪ  ಕಟ್ಟಿಕೊಂಡು ಬಂದಿದ್ದಳು. ಜೋಳದ ಕಡಕ್ ರೊಟ್ಟಿ ಮತ್ತು ಚಟ್ನಿ ಪುಡಿಗಳನ್ನು ಜಾಸ್ತಿಯೆ ಕಟ್ಟಿಕೊಂಡು ಬಂದಿದ್ದಳು. ರೈಲು ನಿಲ್ದಾಣದಲ್ಲೆ ಇರುವ  ಶೌಶಾಲಯವನ್ನು ಬಳಸಿದಳು. ಕೆಲವರು ಇವಳನ್ನು ಪ್ರಶ್ನೀಸಿದ್ದರು. ಏನೇನೋ ಉತ್ತರ ಕೊಟ್ಟು ಪಾರಾಗಿದ್ದಳು. ರೇಣುಕಮ್ಮನಿಗೆ ತಿಳಿದಿತ್ತು ರಾತ್ರಿ-ಹಗಲು ಗಿಜಿಗುಡೊ ರೈಲ್ವೆ ನಿಲ್ದಾಣ ಸುರಕ್ಷಿತ ಎಂದು ಅರಿತಿದ್ದಳು. ಏನು ಕಲಿದೆ ಇರೋ ರೆಣುಕಮ್ಮನಿಗೆ ಜೀವನವೆ ಮಹಾವಿದ್ಯಾಲಯ ಆಗಿತ್ತು. ದೈರ್ಯ, ಛಲ, ಅವಳನ್ನು ಗಟ್ಟಿ ಮಾಡಿತ್ತು. ರೈಲ್ವೆ ನಿಲ್ದಾಣ್ದಲ್ಲಿ ಕೆಲಸ ಮಾಡುವವರನ್ನು ಕೇಳಿದಳು,”ಇಲ್ಲಿ ಚೊಕ್ಕ್ ಮಾಡೋ ಕೆಲಸ ಇದ್ರೆ ನನ್ಗು ಹೇಳ್ರಿ. ನಾನು ನಿಮ್ ಕೂಡ್ ಕೆಲ್ಸ್ ಮಾಡ್ತೀನಿ” ಅಂತ ಅಲ್ಲಿ ಕಸ ಗುಡಿಸುವವರ ಬಳಿ ಕೇಳುತ್ತಿದ್ದಳು. ಕೆಲವೊಬ್ಬರು ಹೋಗಮ್ಮ ಅಂತ ಉದಾಸೀನ ತೋರಿಸಿದರೆ, ಇನ್ನು ಕೆಲವರು ಯಾವುದು ಉತ್ತರ ಕೂಡ ಕೊಡಲಿಲ್ಲ. ಆದರು ಬಿಡದೆ ಸ್ವಲ್ಪ ವಯಸ್ಸಾದ ಹೆಂಗಸರ ಹತ್ತಿರನೋ, ಅಥವಾ ಗಂಡಸರ ಹತ್ತಿರನೋ ಬೇಡಿಕೊಂಡಳು. “ನಿಮ್ಮ ಮುಖಂಡ ಯಾರ್ ಅಂತ ಹೇಳ್ರಿ ನಾನ್ ಅವ್ರ ಹತ್ರ ಕೇಳ್ಕೊಳ್ತೀನಿ. ನನ್ಗು ಒಂದ್ ಕೆಲ್ಸ್ ಅಂತ ಆದ್ರೆ ನಾನು ನನ್ನ್ ಮಗಿ ಬದ್ಕೊತ್ತಿವಿ” ಅಂತ ಕೇಳಿಕೊಂಡಳು. ಹೀಗೆ ಬೇಡಿಕೊಳ್ಳುವಾಗ ಅಲ್ಲಿ ಕೆಲಸ ಮಾಡುವ ಒಬ್ಬ ವಯಸ್ಸಾದ ಹೆಂಗಸಿಗೆ ಅವಳನ್ನು ಮತ್ತು ಅವಳ ಮಗಳನ್ನು ನೋಡಿ ಕನಿಕರ ಹುಟ್ಟಿತು. ಆಕೆ ಇವಳನ್ನು ವಿಚಾರಿಸಿದಳು,” ಯಾರಮ್ಮ ನೀನು. ಮೊನ್ನೆಯಿಂದ ಈ ಸ್ಟೇಶನ್ ನಲ್ಲಿ ಮಗಳನ್ನು ಕಟ್ಟಿಕೊಂಡು ಇಲ್ಲೆ ಇದ್ದೀಯಾ? ಯಾಕ್ ನಿಮ್ ಊರಿಗೆ ಹೋಗೋಕೆ ಖಾಸ್ ಇಲ್ವೇನಮ್ಮ?” ಅಂತ ಮೊದಲ ಬಾರಿ ಇಲ್ಲಿಗೆ ಬಂದ ಮೇಲೆ ಒಬ್ಬ ಹೆಂಗಸು ಅವಳನ್ನು ವಿಚಾರಿಸಿದಳು. ಆಗ ರೇಣುಕಮ್ಮ ತನ್ನ ಪೂರ್ವಾಪರದ ಯಾವ ವಿಷಯವನ್ನು ಹೇಳದೆ, “ನನ್ ಗಂಡ ಸತ್ತು ಹೋದ. ಅವ್ರು ತೀರ್ ಹೋದ್ ಮ್ಯಾಲ್ ನನ್  ಗಂಡನ್  ಮನ್ಯಾವ್ರು ಹೊರಗ್ ದಬ್ಬಿದ್ರಿ. ನನ್ ಕೂಡ್  ಯಾರು ಇಲ್ರಿ ಅದಿಕ್ಕೆ ಇರೋ ಒಂದ್ ಮಗಿನ್  ಕಟ್ಟಿಕೊಂಡ್ ಈ ಊರಿಗ್ ಬಂದೆನ್ರಿ. ಹೊಟ್ಟೆ ಪಾಡಿಗೆ ಏನಾದ್ರು ಕೆಲಸ ಅಂತ ಆದ್ರೆ ಸಾಕ್ರಿ” ಅಂತ ರೇಣುಕಮ್ಮ ತನ್ನ ಕಷ್ಟ ಹೇಳಿಕೊಂಡಳು. ರೇಣುಕಮ್ಮ ತಲೆ ಕೂದಲು ತೆಗೆದಿದ್ದನ್ನು ಮತ್ತು ಅವಳ ಸೀರೆ ಮತ್ತು ಮಾತು ಅವಳನ್ನು ಗಂಡ ಸತ್ತಿರುವ ಉತ್ತರ ಕರ್ನಾಟಕದ ಕಡೆಯವಳು ಅಂತ ಹೇಳಬಹುದು. ಆ ಹೆಂಗಸಿಗೆ ಆಕೆಯನ್ನು ಮತ್ತು ಮಗಳನ್ನು ನೋಡಿ ಕನಿಕರ ಬಂತು. ಆಕೆ ತನ್ನ ಹೆಸರು ರತ್ನಮ್ಮ ಎಂದು ಹೇಳಿ ಇವಳ ಪರಿಚಯ ಹೇಳಿದಳು. ಇವಳು ರೇಣುಕಾ ಅಂಥ ಹೆಸರು ಸರಿಯಗಿ ಹೇಳಿದರು ಊರ ಹೆಸರನ್ನು ಹೇಳಲಿಲ್ಲ. ಬಳ್ಳಾರಿ ಎಂದಷ್ಟೇ ಹೇಳಿದಳು. ರತ್ನಮ್ಮ ಮಯಸ್ಸಿನಲ್ಲಿ ಹಿರಿಯವಳಾದ ಕಾರಣಕ್ಕೆ ಇವಳನ್ನು ರೇಣು ಎಂದು ಸಂಭೋದಿಸಲು ಶುರು ಮಾಡಿದಳು. ರತ್ನಮ್ಮ ರೇಣುಕಮ್ಮನಿಗೆ  ಹೇಳಿದಳು, “ ನೋಡಮ್ಮ ಇಲ್ಲಿ ನನ್ನ ಕೆಲಸ ನಾಲ್ಕು ಗಂಟೆಗೆ ಮುಗಿಯುತ್ತದೆ. ನಂತರ ಇಲ್ಲೆ ಹತ್ತಿರ ನನ್ನ ಶೇಡ್ ಇದೆ. ಇವತ್ತು ಅಲ್ಲಿಗೆ ಹೋದರಾಯಿತು. ನಾಳೆ ನಿನ್ನ ಕೆಲಸದ ಬಗ್ಗೆ ಯೋಚಿಸೋಣ” ಅಂತ ಹೇಳಿದಳು. ಆಗ ರೇಣುಕಮ್ಮನಿಗೆ ಸಾಕ್ಷಾತ್ ಯಲ್ಲಮ್ಮ ಬಂದು ತನಗೆ ದಾರಿ ತೋರಿಸಿದ ಹಾಗಾಯಿತು. ಅವಳ ಕಣ್ಣಲ್ಲಿ ನೀರು ತುಂಬಿ ಬಂತು. ಕೈ ಮುಗಿದು “ನಿಮ್ ಉಪಕಾರನ್ನಾ ಈ ಜನ್ಮ್ ದಲ್ಲಿ ಮರಿಯಲ್ಲ ನನ್ ಅವ್ವ…ನೀವ್ ನನ್ ಪಾಲಿಗೆ ಸಾಕ್ಷಾತ್ ಯಲ್ಲಮ್ಮ್” ಅಂತ ಹೇಳಿದಳು. ಆಗ ರತ್ನಮ್ಮ್,” ಅದೆಲ್ಲ ಬೇಡ  ನಾನು ಹೊಟ್ಟೆಲಿ ಹುಟ್ಟಿದ ಮಕ್ಕಳಿಂದನೆ ದೂರ ಆಗಿ ಇಲ್ಲಿ ಒಬ್ಬಳೆ ದುಡಿದು ತಿನ್ನುತ್ತಾ ಇದ್ದೀನಿ. ನನ್ಗೆ ನಿನ್ನ ಕಷ್ಟ ಅರ್ಥ ಆಗತ್ತೆ. ಅದು ಅಲ್ದೆ ಈ ಸಣ್ಣ ಹೆಣ್ಣ್ ಮಗುನ ಬೇರೆ ಸೇರ್ಗಲ್ಲಿ ಕಟ್ಟಿಕೊಂಡಿದಿಯಾ. ಏನೋ ನಿನ್ಗೆ ಒಂದ್ ಕೆಲ್ಸ್ ಕೊಡ್ಸಿದ್ರೆ ನನ್ ಗಂಟೆನ್ ಹೋಗತ್ತೆ. ಸರಿಯಾಗಿ ನಾಲ್ಕು ಗಂಟೆಗೆ ಇಲ್ಲಿ ಸಿಗು” ಅಂತ ಹೇಳಿ ತಮ್ಮ ಕೆಲಸಕ್ಕೆ ಹೋದರು. ಇತ್ತ ರೇಣುಕಮ್ಮನಿಗೆ ರತ್ನಮ್ಮ ಸಿಕ್ಕಿದ್ದು ಮರಭೂಮಿಯಲ್ಲಿ ನೀರು ಸಿಕ್ಕಂತೆ ಆಯಿತು. ಇನ್ನೆಷ್ಟು ದಿನ ಈ ರೈಲ್ವೆ ಸ್ಟೇಷನ್ನಲ್ಲಿ ಇರ ಬೇಕು ಅಂತ ಯೋಚಿಸುತ್ತಿದ್ದಳು. ಅದರೆ ರತ್ನಮ್ಮ ಸಿಕ್ಕಿದ್ದು ಏನೋ ಸ್ವಲ್ಪ ಭರವಸೆ ಬಂತು. ಹೇಗಾದ್ರು ಒಂದು ಕೆಲಸ ಗಿಟ್ಟಿಸಿಕೊಳ್ಳ ಬೇಕು ಅಂತ ನಿರ್ಧಾರ ಮಾಡಿದಳು. ಅದು ಅಲ್ಲದೆ ರತ್ನಮ್ಮ ನೋಡಿದರೆ ಕೆಟ್ಟ ಹೆಂಗಸು ಅಂತ ಅನ್ನಿಸುತ್ತಿರಲಿಲ್ಲ. ಆದರೆ ತಾನೇ ಅವಳಿಗೆ ತನ್ನ ಪೂರ್ವಾಪರ ಹೇಳದೆ ಮೋಸ ಮಾಡಿದೆ ಅಂತ ಅನ್ನಿಸಿತು. ಆದ್ರೆ ಇದು ರೇಣುಕಮ್ಮನಿಗೆ ಅನಿವಾರ್ಯ ಆಗಿತ್ತು.
ರತ್ನಮ್ಮ ಹೇಳಿದ ಹಾಗೆ ಸರಿಯಾಗಿ ನಾಲ್ಕು ಗಂಟೆಗೆ ಅವಳು ಹೇಳಿದ ಜಾಗಕ್ಕೆ ಬಂದಳು. ಅವಳು ಬರುವ ಮೊದಲೆ ರೇಣುಕಮ್ಮ ತನ್ನ ಚೀಲದೊಂದಿಗೆ ಬಂದು ಕುಳಿತಿದ್ದಳು. ಇಲ್ಲಿ ಏನಾಗುತ್ತದೆ ಅಂತ ಅರಿವಿಲ್ಲದ ಮಗಳು ಲಕ್ಷ್ಮಿ ಹೋಗೋ ಬರೋ ಟ್ರೇನ್ ನೋಡುತ್ತಿದ್ದಳು. ಅಲ್ಲಿಗೆ ಬಂದ ರತ್ನಮ್ಮ ಇವರಿಬ್ಬರನ್ನು ಕರೆದುಕೊಂಡು ತನ್ನ ಶೇಡ್ ಗೆ ಹೋಗಿದ್ದಳು.
ರತ್ನಮ್ಮ ಇರುವುದು ಒಂದು ಸ್ಲಮ್. ಅಲ್ಲಿ ಕೆಲವು ಕೆಲಸ ಮಾಡುವವರ ಮನೆ ಇದ್ದವು. ಅಲ್ಲೆ ಸ್ವಲ್ಪ ಮೇಲೆ ಬಂದರೆ ಸ್ವಲ್ಪ ಮೇಲ್ವರ್ಗದವರು ವಾಸಿಸುವಂತ ಜಾಗ ಮತ್ತು ಒಳ್ಳೊಳ್ಳೆ  ಅಪಾರ್ಟ್ಮೆಂಟ್ ಇದ್ದವು.  ಸ್ಲಮ್ ನಿಂದ ಸ್ವಲ್ಪ ದೂರದಲ್ಲಿ  ಒಂದು ಪುಟ್ಟ ಶೇಡ್ ನಲ್ಲಿ ರತ್ನಮ್ಮ ಇದ್ದಳು. ಇಲ್ಲಿ ಎರಡು ಹೆಂಗಸರು ಮತ್ತು ಒಂದು ಮಗು ಹೇಗೋ ಇರಬಹುದು. ರತ್ನಮ್ಮ ಮನೆಗೆ ಬಂದವರು ರೇಣುಕಮ್ಮ ಸ್ವಲ್ಪ ನಿರಾಳವಾಗಿ ಉಸಿರು ತೆಗೆದಳು. ರತ್ನಮ್ಮನ ಬಳಿ “ನೀವ್ ಸಿಕ್ಕಿಲ್ಲ್ ಅಂದ್ರ ಇನ್ನ್ ಎಷ್ಟ್ ದಿನ್ ಅಂತ ರೈಲ್ವೆ ಸ್ಟೇಶನ್ ನಲ್ಲಿ ಇರಬೇಕಾಗಿತ್ತೇನ್ರಿ”  ಅಂತ ಹೇಳಿದಳು. ರತ್ನಮ್ಮ ,”ಯಾಕಮ್ಮ ಹುಟ್ಟುಸಿದವನು ಹುಲ್ಲು ಮೇಯಿಸುತ್ತಾನೆ. ಗಂಡ ಸತ್ತರೆನಂತೆ ನಿನಗೆ ದುಡಿದು ತಿನ್ನೊ ಶಕ್ತಿ ಇದೆ. ದುಡಿದು ತಿನ್ನು. ನನ್ನ ನೋಡು ದುಡಿಯುವ ನಾಲ್ಕು ಗಂಡ್ ಮಕ್ಕಳಿದ್ದರು ಒಬ್ಬಳೆ ಬೇಯಿಸಿಕೊಂಡು ತಿನ್ನೊ ಗತಿ ಬಂದಿದೆ” ಅಂತ ಬೆಸರದಲ್ಲಿ ಹೇಳಿದರು. ರೇಣುಕಮ್ಮನಿಗೆ ಇವರು ಮಕ್ಕಳಿಂದ ದೂರ ಬಂದಿರುವುದು ತಿಳಿದು ಜಾಸ್ತಿ ಏನು ಕೇಳಲಿಲ್ಲ.
ಮರುದಿನ ರತ್ನಮ್ಮ ಅಲ್ಲೆ ಇನ್ನೊಂದು ಶೇಡ್ ನಲ್ಲಿ ಇದ್ದ ಒಬ್ಬ ಹೆಂಗಸಿಗೆ ಹೇಳಿ ಅವಳು ಹೋಗುವ ಅಪಾರ್ಟ್ಮೆಂಟ್ ನಲ್ಲಿ ಏನಾದರು ಕೆಲಸ ಇದ್ದರೆ ಇವಳಿಗೆ ಹೇಳು ಅಂತ ಕೇಳಿದಳು. ಅಲ್ಲಿ ಕೆಲಸದವರ ಅವಶ್ಯಕತೆ ಇತ್ತು. ರೇಣುಕಮ್ಮನಿಗೂ ಒಂದೆರಡು ಮನೆ ತೋರಿಸಿದಳು. ರೇಣುಕಮ್ಮನ ಪ್ರಮಾಣಿಕ ಮತ್ತು ಅವಳ ಕೆಲಸ ನೋಡಿ ಅಪಾರ್ಟ್ಮೆಂಟ್ ನಲ್ಲಿ ಇನ್ನು ಕೆಲವು ಮನೆಗಳು ದೊರಕಿದವು. ರೇಣುಕಮ್ಮ ಮತ್ತು ರತ್ನಮ್ಮ ಇಬ್ಬರು ಒಂದೆ ಶೇಡ್ ನಲ್ಲಿ ಇದ್ದರು. ಒಬ್ಬರಿಗೊಬ್ಬರು ಆಸರೆ ಆಯಿತು. ಇಬ್ಬರು ಮನೆ ಖರ್ಚಿಗೆಂದು ತಮ್ಮ ಸಂಬಳವನ್ನು ಕೊಡುತ್ತಿದ್ದರು. ಲಕ್ಷ್ಮಿಗಂತು ರತ್ನಮ್ಮ ಅವಳ ಪಾಲಿಗೆ ದೊಡ್ಡಮ್ಮನಾದಳು. ಎಲ್ಲರಿಂದ ದೂರವಾದ ರತ್ನಮ್ಮನಿಗೆ ಮೊಮ್ಮಗಳು ಸಿಕ್ಕಂತಾಯಿತು.
ರೇಣುಕಮ್ಮ ಅಲ್ಲೆ ಹತ್ತಿರದಲ್ಲಿ ಇರುವ ಒಂದು ಸರಕಾರಿ ಶಾಲೆಗೆ ಹಾಕಿದಳು. ಕಲಿಯಲು ಮುಂದಿರುವ ಲಕ್ಷ್ಮಿ ಚನ್ನಾಗಿ ಓದುತ್ತಿದ್ದಳು. ರೇಣುಕಮ್ಮನಿಗೆ ಐದಾರು ಮನೆ ಕೆಲಸ ಸಿಕ್ಕಿತು. ಮನೆಗೆಲಸ ಮಾಡಿ ತನ್ನ ಮತ್ತು ಮಗಳ ಜೀವನ ಸಾಗುತ್ತಿತ್ತು. ರೇಣುಕಮ್ಮ ಹೋಗೋ ಒಂದು ಮನೆ ನಿವೃತ್ತಿ ಹೊಂದಿದ ಕಾಲೇಜ್ ಪ್ರೋಪೇಸರ್ ಆಗಿದ್ದರು. ಅವರ ಮನೆಯ ಒಂದು ರೂಮ್ ಪುಸ್ತಕದಲ್ಲಿ ತುಂಬಿತ್ತು. ಮಕ್ಕಳೆಲ್ಲ ಬೇರೆ-ಬೇರೆ ಊರಲ್ಲಿ ಇದ್ದರು. ಗಂಡ ಮತ್ತು ಹೆಂಡತಿ ಇಬ್ಬರು  ಸದಾ ಓದುವುದು ಮತ್ತು ಶಿಕ್ಷಣಿಕವಾಗಿ ಮಕ್ಕಳನ್ನು ಮುಂದೆ ತರುವುದರ ಬಗ್ಗೆ ಅವರ ಯೋಚನೆ ಮಾಡುತ್ತಿದ್ದರು. ಇದು ಲಕ್ಷ್ಮಿ ಪಾಲಿಗೆ ದೊಡ್ಡ ವರದಾನ ವಾಯಿತು. ಮೊದಮೊದಲು ರೇಣುಕಮ್ಮ ಮಗಳ ಓದುವ ಆಸಕ್ತಿ ಹೇಳಿ ಕೆಲವು ಪುಸ್ತಕಗಳನ್ನು ತಂದು ಕೊಡುತ್ತಿದ್ದಳು. ನಂತರದ ದಿನದಲ್ಲಿ ಲಕ್ಷ್ಮಿ ಆ ಪ್ರೋಪೇಸರ್ ಮನೆಗೆ ಹೋಗಿ ಅವರ ಮಾರ್ಗದರ್ಶನದಲ್ಲಿ ಓದುವುದು ಮುಂದುವರೆಸಿದಳು. ಲಕ್ಷ್ಮಿಯ ಓದಿನ ಆಸಕ್ತಿ ಮತ್ತು ಪ್ರೋಪೇಸರ್ ಅವರ ಮಾರ್ಗದರ್ಶನ ಲಕ್ಷ್ಮಿ ಐ ಎ ಎಸ್ ಪರೀಕ್ಷೆ ಕಟ್ಟಿದಳು.
ಇತ್ತ ರೇಣುಕಮ್ಮ ತನ್ನ ಮನೆ ಕೆಲಸದಿಂದ ಜೀವನ ಸಾಗುತ್ತಿತ್ತು. ಆದರೆ ಮಗಳ ಓದಿಗೆ ತುಂಬಾ ದುಡ್ಡು ಹೊಂದಿಸುವುದು ಕಷ್ಟ ಆದರು ಪ್ರೋಪೇಸರ್ ಲಕ್ಷ್ಮಿಯ ಯೋಗ್ಯತೆ ನೋಡಿ ಕೆಲವು ಸ್ಕೊಲರ್ಶಿಫ್ ಕೊಡಿಸಿದ್ದರು. ಅದು ಅಲ್ಲದೆ ತಾವು ಅನೇಕ ಸಲ ಅವಳ ಓದಿಗೆ ಸಹಾಯ ಮಾಡಿದ್ದರು.
ಇವೆಲ್ಲದರ ಪರಿಣಾಮ ಇಂದು ಲಕ್ಷ್ಮಿ ಐ.ಎ. ಎಸ್. ಆಗಿ ಜಿಲ್ಲಾಧಿಕಾರಿ ಆಗಿದ್ದಳು.
ರೇಣುಕಮ್ಮ ಒಮ್ಮೆ ತಾವು ಬಂದ ದಾರಿಯನ್ನು ಮೇಲಕು ಹಾಕುತ್ತ ನಿಟ್ಟುಸಿರು ಬಿಟ್ಟಳು. ಎಲ್ಲ ಮುಗಿದು ಆರಾಂ ಆಗಿ ಇರುವಾಗ ಯಾಕ್ ಈ ಊರಿಗೆ ವರ್ಗ ಆಯಿತು ದೇವರೆ ಇನ್ನೇನು ಕಾದಿದೆಯೋ ಅಂತ ಮನಸ್ಸಿನಲ್ಲಿ ಯೋಚಿಸಿದರು.
ಇತ್ತ ಲಕ್ಷ್ಮಿ ಇಂದಿನ ಪೇಪರ್ ನಲ್ಲಿ ಯಾವುದೋ ಒಂದು ಬಾಲಕಿ ದೇವದಾಸಿ ಆಗಲು ಒಪ್ಪಿಗೆ ಕೊಡದೆ ಇರೋ ಕಾರಣ ಕ್ಕೆ ಅವಳನ್ನು ಬಲತ್ಕಾರವಾಗಿ ದೇವದಾಸಿ ಮಾಡಿ ಊರಲ್ಲಿ ಮೆರವಣಿಗೆ ಮಾಡಿದುದರ  ಬಗ್ಗೆ ಓದಿ ಮನಸ್ಸು ಹಿಂಡಿದಂತಾಯಿತು. ಎಲ್ಲ ತನ್ನ ತಾಯಿಯ ತರ ಗಟ್ಟಿ ಇರುವುದಿಲ್ಲ. ಅವಳು ನನ್ನ ಊರು ಬಿಟ್ಟು ಬಚಾವ್ ಮಾಡಿದ ಹಾಗೆ ನಾನು ಈ ಊರಲ್ಲೆ ಇದ್ದು ಊರಿನ ಮತ್ತು ನನ್ನಂತ ಹೆಣ್ಣು ಮಕ್ಕಳನ್ನು ಈ ಅನಿಷ್ಟ ಪದ್ದತಿಯಿಂದ ಮುಕ್ತಿ ಕೊಡಬೇಕು ಎಂದು ತಿರ್ಮಾನಿಸಿದಳು. ನಾಳೆಯೆ ಬ್ಯಾಗೂರಿಗೆ ಹೋಗುವುದರ ಬಗ್ಗೆ ತಿರ್ಮಾನಿಸಿದಳು.
ಮನೆಗೆ ಬಂದ ಲಕ್ಷ್ಮಿ ತನ್ನ ತಲೆಯಲ್ಲಿ ಬಂದ ವಿಚಾರ ತಾಯಿಯ ಬಳಿ ಹೇಳಿದಾಗ, ರೇಣುಕಮ್ಮ ಸುತಾರಾಂ ಒಪ್ಪಲಿಲ್ಲ. ತಾನು ಇಲ್ಲಿಯ ವರೆಗೆ ಯಾರಲ್ಲು ಅಂದರೆ ರತ್ನಮ್ಮ ಆಗಲಿ ನಿಮ್ಮ್ ಪ್ರೋಪೆಸರ್ ಬಳಿ ಆಗಲಿ ನಿನ್ನ ಅಪ್ಪ ಸತ್ತಿದ್ದಾರೆ ಅಂತ ಹೇಳಿದ್ದೀನಿ ಹೊರತು ನಮ್ಮ ಕುಲದ ಬಗ್ಗೆ ಯಾರಲ್ಲು ಹೇಳಲಿಲ್ಲ, ದಯವಿಟ್ಟು ಎಲ್ಲಾ ಮುಗಿದು ಇನ್ನು ಒಳ್ಳೆ ಕಡೆ ಮದುವೆ ಆಗಿ ಹೋಗುವಾಗ ನಮ್ಮ ಹಳೆ ಪುರಾಣ ಕೆದಕೊಕ್ ಹೋಗ ಬೇಡ. ನನಗೆ ಈ ಊರಿಗೆ ಬಂದಾಗಲೆ ಗೊತ್ತಿತ್ತು ಎನಾದರು ತಲೆ ನೋವು ಶುರುವಾಗುವುದು ಎಂದು ತನ್ನ ಮನಸ್ಸಿನ ಭಾವನೆಯನ್ನು ಮಗಳಲ್ಲಿ ಹೇಳಿಕೊಂಡಳು. ಆದರೆ ಲಕ್ಷ್ಮಿ ಇದಕ್ಕೆ ಒಪ್ಪಲಿಲ್ಲ. ಲಕ್ಷ್ಮಿ ಅಮ್ಮನಿಗೆ ಸಮಾಧಾನ ಮಾಡುತ್ತ, ” ನೋಡಮ್ಮ ನೀನು ಹೇಗೆ ನನ್ನ ಆ ಊರಿನಿಂದ ಹೊರಗೆ ತಂದು ವಿದ್ಯಾವಂತೆ ಮಾಡಿದೀಯೋ, ನಾನು ಅಲ್ಲಿ ನನ್ನಂತಹ ಹೆಣ್ಣು ಮಕ್ಕಳಿಗೆ ಒಳ್ಳೆ ಜೀವನ ಕೊಡಿಸುತ್ತೇನೆ. ಮೊದಲು ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಅವರಿಗೆ ಅವರ ಜೀವನ ಕಟ್ಟಿ ಕೊಳ್ಳಲು ಸಹಾಯ ಮಾಡುತ್ತೇನೆ. ನನಗೆ ಪ್ರೋಪೆಸರ್ ಸಿಕ್ಕಿ ಹೇಗೆ ಸಹಾಯ ಮಾಡಿದರೋ  ಹಾಗೆ ನಾನು ನಾಲ್ಕು ಜನರಿಗೆ ಉಪಯೋಗ ಆಗುವಂತ ಕೆಲಸ ಮಾಡುತ್ತೇನೆ. ದಯವಿಟ್ಟು ನನ್ನ ತಡಿಬೇಡ. ನಾನು ದೇವದಾಸಿ ಮಗಳು ಎಂದು ಹೇಳಿಕೊಳ್ಳಲು ನನಗೆ ಯಾವ ಮುಜುಗರ ಇಲ್ಲ. ಅಷ್ಟಕ್ಕು ನೀನು ಬೇಕು ಅಂತ ಆಗಿದ್ದೇನು ಅಲ್ಲ. ಆದರೆ ನೀನು ದೈರ್ಯ ಮಾಡಿ ಆ ಜಗತ್ತಿನಿಂದ ಹೊರಗೆ ಬಂದು ನನ್ನ ಬಚಾವ್ ಮಾಡಿದೆ. ನಾನು ಇಗ ನನ್ನ ಕೈಲಾದಷ್ಟು ಸಹಾಯ ಮಾಡುತ್ತೀನಿ. ಖಡಾಖಂಡಿತವಾಗಿ ತನ್ನ ತಡಿಬೇಡ ಅಂತ ಹೇಳಿದಳು. ರೇಣುಕಮ್ಮನಿಗೆ ಮಗಳ ಮಾತು ಕೇಳಿ ತಲೆ ಚಿಟ್ಟು ಹಿಡಿಯಿತು. ಇವಳಿಗೆ ಯಾಕ್ ಬೇಕಿತ್ತು ಅಂತ ಅನಿಸಿದರು  ಎಷ್ಟು ಜನ ಹೆಣ್ಣು ಮಕ್ಕಳು ದೇವದಾಸಿ ಪದ್ದತಿಗೆ ಬಲಿ ಆಗುತ್ತಿದ್ದಾರೊ ಎಂದು ಬೆಸರವಾಯಿತು. ಮಗಳಿಂದ ಸಹಾಯ ಅದರೆ ಆಗಲಿ ಮುಂದಿನ ಅವಳ ಮದುವೆ ಹೇಗೋ ಆ ಯಲ್ಲಮ್ಮನೆ ದಾರಿ ತೋರಿಸುವಳು ಎಂದು ನಿಟ್ಟುಸಿರು ಬಿಟ್ಟಳು.
ಇತ್ತ ಲಕ್ಷ್ಮಿ ತಾನು ಅಂದುಕೊಂಡಂತೆ ಬ್ಯಾಗೂರಿಗೆ ಹೋದಳು. ಅವಳಿಗೆ ಊರಿನ ನೆನಪು ಅಷ್ಟಾಗಿ ಇರಲಿಲ್ಲ. ಇನ್ನು ಊರಿನ ಜನರ ಒಬ್ಬರ ಗುರುತು ಇಲ್ಲವಾಗಿತ್ತು. ಅಲ್ಲಿನ ಪರಿಸ್ಥಿತಿ ನೋಡಿ ತುಂಬಾ ಬೆಸರ ಏನಿಸಿತು. ಮೂಲಭೂತ ಸೌಲಬ್ಯವು ಇಲ್ಲದೆ ಇದ್ದರು. ತಾನು ನಾಲ್ಕನೆ ಕ್ಲಾಸ್ ತನಕ ಕಲಿತ ಶಾಲೆ ಹಾಗೆ ಇತ್ತು. ಆದರೆ ಅಲ್ಲಿ ಯಾವ ಶಿಕ್ಷಕರು ಇಲ್ಲ. ಒಮ್ಮೆ ಊರನ್ನು ನೋಡಿ ಆ ಊರಿನ ಮುಖಂಡರ ಮನೆಗೆ ಹೋದಳು. ಲೇಡಿ ಕಮಿಶ್ನರ್ ಅಂತ ಗೊತ್ತಾದ ತಕ್ಷಣ ಒಳ್ಳೆ ಮರ್ಯಾದಿನೆ ದೊರಕಿತು. ಅವರ ಮಗ ಇವಳಿಗಿಂತ ಎರಡು ವರ್ಷ ದೊಡ್ಡವನು ಒಳ್ಳೆ ಪುಂಡನಾಗಿದ್ದ. ಅವನನ್ನು ಪೇಪರಿನಲ್ಲಿ ನೋಡಿದ್ದಳು.
ಲಕ್ಷ್ಮಿ ಈ ಊರಿನ ಮೂಲ ಸೌಕರ್ಯದ ಬಗ್ಗೆ ಮತ್ತು ಶಾಲೆಯ ಸುಧಾರಣೆ ಬಗ್ಗೆ ಹೇಳಿದಾಗ ಆ ಊರಿನ ಮುಖಂಡರು ಹೇಳಿದರು, “ ಎಲ್ಲ ಆಫೀಸರ್ ಬಂದ್ ಹೀಂಗ ಹೇಳ್ ಹೋತ್ತಾರಿ ಆಮ್ಯಾಲ್  ಫನ್ಡ್ ರೀಲೀಸ್ ಆದ್  ಮ್ಯಾಲ್  ಯಾರ್  ಈ ಕಡಿ ತಲಿನು ಹಾಕವಲ್ರಿ” ಅಂತ ವ್ಯಂಗವಾಗಿ ಹೇಳಿದರು. ಆಗ ಲಕ್ಷ್ಮಿ ಗಂಭಿರವಾಗಿ, “ಹಾಗೆನಿಲ್ಲ ನಾನೆ ಮುಂದೆ ನಿಂತು ಇಲ್ಲಿನ ಕೆಲಸ ನೋಡುತ್ತೇನೆ. ಅಂದ ಹಾಗೆ ಇನ್ನೋಂದು ವಿಚಾರ, ಇಲ್ಲಿ ಮೊನ್ನೆ ಯಾವುದೊ ಹುಡುಗಿಗೆ ದೇವದಾಸಿ ಆಗಲ್ಲ ಅಂದಿದ್ದಕ್ಕೆ ಒತ್ತಾಯ ಪೂರಕವಾಗಿ ಗೆಜ್ಜೆ ಕಟ್ಟಿ ಮೆರವಣಿಗೆ ಮಾಡಿದಿರಂತೆ.” ಅಂತ ಅವಳ ಮಾತು ಶುರು ಮಾಡಿದಾಗ, ಅಲ್ಲೆ ಇರುವ ಊರ ಮುಖಂಡರ ಮಗ, “ಏನ್ ಮಾಡೋದ್ ಅಕ್ಕೋರೆ  ಆಕಿ ಜಾತಿ  ಪದ್ದತಿ ಒಲ್ಲೆ ಅಂದ್ರ್ ಹ್ಯಾಂಗ್. ಆಕಿ  ಆಗಲ್ಲ್-ಹೋಗಲ್ಲ ಅಂದ್ರೆ, ನೋಡ್ರಿ  ನೀವು ಈ ಊರಿನ ಶಾಲಿ ಬೇಕಿದ್ರ ರಿಪೇರಿ ಮಾಡ್ರಿ, ರಸ್ತೆ ಬೇಕಿದ್ರ ರಿಪೇರಿ ಮಾಡ್ರಿ, ಆದ್ರ ಈ ಊರಿನ ಅಚಾರ-ಪದ್ದತಿ ಮ್ಯಾಲ್ ಹೇಳೋಕ್ ಬರ್ಬೇಡಿ”  ಅಂತ ಅಫೀಸರ್ ಅಂತ ನೋಡದೆ ಯಾವುದೋ ಹೆಂಗಸಿಗೆ ಹೇಳಿದಂತೆ ಹೇಳಿದ. ಆಗ ಲಕ್ಷ್ಮಿ ಗೆ ಪಿತ್ತ ಕೆಣಕಿತು. ಸ್ವಲ್ಪ ಖಾರವಾಗಿ “ನೀವ್ ಮಾತಾಡೊದ್ ಏನು, ದೇವರ ಹೆಸರಲ್ಲಿ ಮದುವೆ ಮಾಡಿಸಿ, ನಿಮಗೆ ಬಂದಂತೆ ಅವಳನ್ನು ಉಪಯೋಯಿಸಿಕೊಳ್ಳ ಬಹುದು ಅಂತಾನ? ನೋಡಿ ನಾನು ಇದನ್ನು ಖಂಡಿಸುತ್ತೇನೆ. ನಿಮ್ಮ ದಬ್ಬಾಳಿಕೆ ಇನ್ನು ನಡಿಯಲ್ಲ. ಅದು ಅಲ್ಲದೆ ಇಗ ಬೇಕಾದಷ್ಟು ಕಾನುನು ಬಂದಿವೆ ಇದಲ್ಲ ನನ್ನ ಹತ್ತಿರ ನಡೆಯುವುದಿಲ್ಲ. ಈ ದೇವದಾಸಿ ಪದ್ದತಿಯಿಂದ ಎಷ್ಟು ಜನ ಹೆಣ್ಣು ಮಕ್ಕಳು ಕಷ್ಟ ಪಟ್ಟಿದ್ದಾರೆ ಅಂತ ನನಗೆ ಗೊತ್ತು. “ ಎಂದು ರೋಶದಲ್ಲಿ ಹೇಳಿದಳು. ಅವಳ ಮಾತು ಕೇಳಿ ವಿಚಿತ್ರ ವೆನಿಸಿತು. ಇವಳಿಗೂ ದೇವದಾಸಿ ಗು ಏನೊ ಸಂಭಂದ ವೆಂದು ಯೋಚಿಸಿದರು. ಆದರೆ ರೇಣುಕಮ್ಮನಾಗಲಿ ಅವಳ ಮಗಳ ಬಗ್ಗೆ ಯಾಗಲಿ ಊರಲ್ಲಿ ಗೊತ್ತಿರಲಿಲ್ಲ. ರೇಣುಕಮ್ಮ ತನ್ನ ವೇಶವನ್ನು ಯಾವಾಗಲೊ ಬದಲಾಯಿಸಿದ್ದಳು. ಯಾರೊ ಬೆಂಗಳುರಿನ ಆಫೀಸರ್ ಎಂದು ಹೇಳುತ್ತಿದ್ದರೆ ಹೊರತು ಇವರ ಪೂರ್ವಾಪರ ಯಾರಿಗು ತಿಳಿದಿಲ್ಲ.
ಲಕ್ಷ್ಮಿ ತನ್ನ ಅಧಿಕಾರದಿಂದ ಬ್ಯಾಗೂರು ಮತ್ತು ಆಸು-ಪಾಸಿನ ಹಳ್ಳಿಗಳಲ್ಲಿ ಕೆಲವು ಬದಲಾವಣೆಯನ್ನು ತಂದಳು. ಮುಖ್ಯವಾಗಿ ಶಿಕ್ಷಣದ ವ್ಯವಸ್ಥೆ ಮಾಡಿದಳು. ಹೆಣ್ಣು ಕಲಿತರೆ ತನ್ನ ತಾನು ರಕ್ಷಿಸಿಕೊಳ್ಳುತ್ತಾಳೆ ಯಾರ ಸಹಾಯವು ಬೇಡ ಅಂತ ಅರಿತಿದ್ದಳು. ಪ್ರೋಪೇಸರ್ ಹೇಗೆ ಇವಳ ಶಿಕ್ಷಣಕ್ಕೆ ಮಹತ್ವ ಕೊಟ್ಟು ಇವಳನ್ನು ಮುಂದೆ ತಂದರೋ ಲಕ್ಷ್ಮಿಯು ಮುಖ್ಯವಾಗಿ ಹೆಣ್ಣು ಮಕ್ಕಳ  ಶಿಕ್ಷಣಕ್ಕೆ ಒತ್ತು ಕೊಟ್ಟು ಅಲ್ಲಿನ ವಾತಾವರಣವನ್ನು ಕ್ರಮೇಣವಾಗಿ  ಸುಧಾರಿಸುತ್ತ  ಬಂದಳು.
ಯಾವಾಗಲು ತಾನಾಗಲಿ ಅಥವಾ ಇನ್ನು ಯಾರೋ  ಜೊತೆಯಲ್ಲಿ ಇದ್ದು ಕಾಪಾಡಲು ಸಾದ್ಯವಿಲ್ಲ ವೆಂದು ತಾನೆ ತನ್ನನ್ನು ರಕ್ಷಿಸಿಕೊಳ್ಳುವಂತೆ ತಯಾರು ಮಾಡಿದಳು. ಪ್ರತಿ ವಾರ ಒಂದೊಂದು ಊರಲ್ಲಿ ಕ್ಯಾಂಪ್ ಮಾಡಿ ಶಿಕ್ಷಣ ಮತ್ತು ಸ್ವಾವಲಂಭಿಯಾಗಿ ಬದುಕುವುದರ ಬಗ್ಗೆ ಅರಿವು ಮೂಡಿಸುತ್ತಿದ್ದಳು. ಇದಕ್ಕೆ ಊರಿನ ಮುಖಂಡರ ಮತ್ತು ಇಗಿನ ತರುವಾಯದ ಗಂಡು ಮಕ್ಕಳ ತರಹ-ತರಹ ವಿರೋಧ ತೋರಿಸಿದರು. ಅವರ ಯಾವ ಚಿಲ್ಲರೆ ಪ್ಲಾನ್ ಕೂಡ ಲಕ್ಷ್ಮಿಯ ಬಳಿ ನಡೆಯಲಿಲ್ಲ.
ಕ್ರಮೇಣ ದೇವದಾಸಿ ಜನಾಂಗದಲ್ಲಿ ಸುಧಾರಣೆ ಕಂಡವು. ಕೆಲವು ಹೆಣ್ಣು ಮಕ್ಕಳು ಲಕ್ಷ್ಮಿಯ ಸಹಾಯ ಮತ್ತು ಮಾರ್ಗದರ್ಶನದಲ್ಲಿ ಖೌದಿ ಹೊಲಿಯುವುದು, ಬಟ್ಟೆ ಹೊಲಿದು ಕೊಡುವುದು, ಕೈ ಕಸುತಿ, ಹೀಗೆ ಒಂದು ಸಣ್ಣ ಪ್ರಮಾಣದ ಉದ್ದಿಮೆ ಶುರು ಮಾಡಲು ಮುಂದಾದರು. ಅದಕ್ಕೆ ಬೇಕಾಗುವ ಹೊಲಿಗೆ ಮೇಶಿನ್ ಸರಕಾರದಿಂದ ಲಕ್ಷ್ಮಿ ಅವರಿಗಾಗಿ ತರಿಸಿ ಕೊಟ್ಟಳು. ಇದರ ಉದ್ಘಾಟನೆಗೆ ಲಕ್ಷ್ಮಿನೆ ಬರಬೇಕು ಎಂದು ಅಲ್ಲಿನ ಹೆಂಗಸರು ಮತ್ತು ಹಣ್ಣುಮಕ್ಕಳ ಆಸೆ ಆಗಿತ್ತು. ಲಕ್ಷ್ಮಿ ಮತ್ತು ಅವಳ ಕುಟುಂಬ ಸಮೇತ ಆ ದಿನ ಬರಬೇಕು ಎಂದು ಎಲ್ಲರು ಒತ್ತಾಯ ಪೂರ್ವಕ ಕರೆದರು.  ಇದಕ್ಕೆ ಲಕ್ಷ್ಮಿ ಒಪ್ಪಿಕೊಂಡು ಬರುವುದಾಗಿ ಹೇಳಿದಳು.
ಇತ್ತ ಲಕ್ಷ್ಮಿ ರೇಣುಕಮ್ಮನನ್ನು ಬ್ಯಾಗೂರಿಗೆ ಬರಲು ಒಪ್ಪಿಸಿದಳು. ರೇಣುಕಮ್ಮನಿಗೆ ಮೊದಲು ಸ್ವಲ್ಪ ಹೆದರಿಕೆ ಇದ್ದರು ಮಗಳ ದೈರ್ಯ ಮತ್ತು ಅವಳು ಮಾಡುವ ಕೆಲಸದ ಮೇಲೆ ಹೆಮ್ಮೆ ಇತ್ತು. ಯಾರು ತನ್ನ ಗುರುತಿಸದೆ ಇದ್ದರು ತಾನೆ ತನ್ನ ಪರಿಚಯದವರು ಸಿಕ್ಕರೆ ಗುರುತಿಸಿ ಮಾತಾಡಬೇಕು, ತನ್ನ ಮಗಳು ಎಂದು ಹೆಮ್ಮೆಯಿಂದ ಹೇಳಬೇಕು ಅಂತ ನಿರ್ಧರಿಸಿದಳು.
ಉದ್ಘಾಟನೆಯ ದಿವಸ ಲಕ್ಷ್ಮಿ ಮತ್ತು ರೇಣುಕಮ್ಮ ಬ್ಯಾಗೂರಿಗೆ ಹೊರಟರು. ಲಕ್ಷ್ಮಿ ಸೀರೆ ಉಟ್ಟು ಸಾಕ್ಷಾತ್ ಲಕ್ಷ್ಮಿ ತರನೆ ಕಾಣಿಸುತ್ತಿದ್ದಳು. ರೇಣುಕಮ್ಮ ಕೆಂಪು ಪಟ್ಟೆ ಸೀರೆ ಮತ್ತು ಕೂದಲು ತೆಗೆದ ತಲೆಗೆ ಸೆರಗನ್ನು ಹೊದ್ದಿದ್ದಳು. ಮಗಳು ಎಷ್ಟೇ ಹೇಳಿದರು ಈ ರೂಪವನ್ನು ಅವಳು ಬದಲಾಯಿಸಿಕೊಂಡಿರಲಿಲ್ಲ.
ಉದ್ಘಾಟನೆಯನ್ನು ಅಲ್ಲೆ ಶಾಲೆಯ ಪಕ್ಕದ ಕೋಲಿಯಲ್ಲಿ ಮಾಡಿದ್ದರು. ಅವರ ಅನುಕೂಲ ತಕ್ಕಂತೆ ಅದೊಂದು ಪುಟ್ಟ ಕಾರ್ಯಕ್ರಮವಾಗಿತ್ತು. ಅಲ್ಲಿ ದೇವದಾಸಿ ಗುಂಪಿನದೆ ಹೆಣ್ಣು ಮಕ್ಕಳಾಗಿದ್ದರು. ಅಲ್ಲಿಯೆ ಇದ್ದ ಆಸು ಪಾಸಿನ ಊರವರು ಇದ್ದರು. ಕೂತುಹಲಕ್ಕೆ ಊರಿನ ಕೆಲವರು ಬಂದಿದ್ದರು. ಲಕ್ಷ್ಕಿ ತಾನೆ ಪೇಪರಿನವರಿಗೆ ಹೇಳಿ ಕಳಿಸಿದ್ದಳು. ಉದ್ಘಾಟನೆ ಪ್ರಾರಂಭವಾಯಿತು. ಯಾವಾಗ ಲಕ್ಷ್ಮಿಯ ಹತ್ತಿರ ಎರಡು ಮಾತಾಡಲು ಹೇಳಿದರೊ ಲಕ್ಷ್ಮಿ ಮಾತಾಡುತ್ತ ಎಲ್ಲರ ಮುಂದೆ ತನ್ನ ತಾಯಿಯನ್ನು ಪರಿಚಯಿಸಿ ತಾವು ಊರು ಬಿಟ್ಟು ತನ್ನ ಐ.ಎ,ಎಸ್ ಮಾಡಿರುವ ತನಹ ಹೇಳಿದಳು. ಅವಳು ದೈರ್ಯವಾಗಿ ಎಲ್ಲರ ಮುಂದೆ,”ತಾನು ದೇವದಾಸಿಯ ಮಗಳೆ ಈ ಕ್ರೂರ ಪ್ರಪಂಚದಿಂದ ನನ್ನ ಅಮ್ಮ ನನ್ನ ಹೊರ ತಂದಳು. ಈಗ ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ” ಅಂದಳು. ಅಲ್ಲಿ ನೇರದಿದ್ದ ಕೆಲವು ಹೆಂಗಸರಿಗೆ ರೇಣುಕಮ್ಮನ ನೆನಪು ಇತ್ತು. ಅವಳ ಗುರುತಿಸಲಾಗದೆ ಇದ್ದರು. ಅಲ್ಲಿರುವವರಿಗೆ ಇವರ ಕಥೆ ಹೇಳಿ ಕಣ್ಣಲ್ಲಿ ನೀರು ತುಂಬಿತು.
ಮರುದಿನ ಪೇಪರಲ್ಲಿ ಇವಳ ಬಗ್ಗೆ ಒಂದು ಆರ್ಟಿಕಲ್ ಬಂತು. ಇದನ್ನು ಬ್ಯಾಗೂರು ಮತ್ತು ಅಸುಪಾಸಿನವರು  ರೇಣುಕಮ್ಮನ ದಿಟ್ಟತನ ನೋಡಿ ಕೊಂಡಾಡಿದರು. ಇನ್ನು ಕೆಲವರು ಕರುಬಿದರು. ಆದರೆ ದೇವದಾಸಿ ಪಂಗಡದ ಹೆಣ್ಣು ಮಕ್ಕಳು ಮತ್ತು ತಾಯಂದಿರು ಮಾತ್ರ ಲಕ್ಷ್ಮಿಯನ್ನು ದೇವತೆ ತರ ನೋಡಿದರು. ತಾನು ಕಲಿತು ತಮ್ಮನ್ನು ಈ ಅನಿಷ್ಟ ಪದ್ದತಿಯಿಂದ ಹೊರಗೆ ತಂದಿದ್ದಕ್ಕೆ ಅವಳನ್ನು ತಮ್ಮ ಪಾಲಿನ ದೇವರು ಎಂದು ಪರಿಗಣಿಸಿದರು. ಕೆಸರಲ್ಲಿ ಹುಟ್ಟಿದ ಕಮಲ ಆದಳು.