Thursday, April 4, 2019

ಹೊಸತು


                                                ಹೊಸತು

ಹೊಸ, ನ್ಯೂ,ನಯಾ…ಹೀಗೆ ಬೇರೆ-ಬೇರೆ ಭಾಷೆಯಲ್ಲಿ ಬೇರೆ-ಬೇರೆ ತರಹ ಹೇಳುತ್ತಾರೆ. ಆದರೆ ಯಾವ ಭಾಷೆಯಲ್ಲೆ ಆಗಲಿ, ಯಾವ ಜನರಲ್ಲೆ ಆಗಲಿ ಈ ಶಬ್ದ ಕೇಳಿದ ತಕ್ಷಣ ಏನೋ ಒಂದು ತರ ಖುಶಿ….ಸಂಬ್ರಮ.
ಹೊಸ ಬಟ್ಟೆ ಬಂದರೆ ಅದನ್ನು ಹಾಕಿಕೊಳ್ಳುವ ತನಕ ಪುರುಸೊತ್ತಿಲ್ಲದೆ ಚನ್ನಾಗಿ ಪೋಲ್ಡ್ ಮಾಡಿ ಇಸ್ತ್ರಿ ಹೊಡೆದು ಇಡುತ್ತೇವೆ. ನಂತರದ ದಿನದಲ್ಲಿ  ಕಪಾಟುನಲ್ಲಿ ಎಲ್ಲಿ ಜಾಗವಿದೆಯೋ ಅಲ್ಲಿ ತುರುಕಿದರೆ ಆಯಿತು.
ಇನ್ನು ಹೊಸ ಕಾರ್ ತಂದ ಶುರುವಿನಲ್ಲಿ ತಾವೆ ಸ್ವಂತ ತೊಳೆದು ಕ್ಲೀನ್  ಮಾಡುವವರು,ಕೊನೆ ಕೊನೆಗೆ ಅದನ್ನು ಕೆಲಸದವರ ಹತ್ತಿರ ಹೇಳಿ  ತಾವು ಜಾರಿ ಕೊಳ್ಳುವರು.
ಇನ್ನು ಹೊಸ ಪುಸ್ತಕ ತಂದ ಶುರುವಿನಲ್ಲಿ ಪುಸ್ತಕದ ವಾಸನೆ ಮೂಸಿ-ಮೂಸಿ ನೋಡುತ್ತಾ ಪುಸ್ತಕಕ್ಕೆ ಬೈಂಡಿಂಗ್ ಹಾಕುವ ವಿದ್ಯಾರ್ಥಿ ಜೀವನದಲ್ಲಿ ಪರಿಕ್ಷೆ ಮುಗಿಯುತ್ತಿದ್ದಂತೆ ಅಮ್ಮನಿಗೆ ಆದಷ್ಟು ಬೇಗ ರದ್ದಿಗೆ ಹಾಕು ಅಂತ ಹೇಳುವುದುಂಟು.
 ಇನ್ನು ಮನೆಲಿ ಹೊಸ ಫಿರ್ಡ್ಜ್, ಗ್ರಾಂಡರ್, ಓವನ್ ಬಂದರಂತು ಮನೆ ಹೆಂಗಸರಿಗೆ ಮುಗಿತು ಅದನ್ನು ಕನ್ನಡಿ ಕಪಾಟಿನ ತರ ಪಳ-ಪಳ ಹೊಳೆಯುವಂತೆ ನೋಡಿಕೊಳ್ಳುತ್ತಾರೆ. ನಂತರದ ದಿನದಲ್ಲಿ “ಅಯ್ಯೋ ಹಾಳಾದ್ ದೂಳು ಎಷ್ಟು ಕ್ಲೀನ್ ಮಾಡಿದ್ರು ಅಷ್ಟೆ “ ಅಂತ ಕ್ಲೀನ್ ಮಾಡೋ ಕೆಲಸಕ್ಕೆ ಕೋಕ್ ಕೊಡ್ತಾರೆ.
ಹೊಸ ವರ್ಷದ ಶುರುವಿನಲ್ಲಿ ಎಲ್ಲರದ್ದು ಡೈರಿ ಬರೆಯುವ ಅಥವಾ ಮನೆ ಲೆಕ್ಕ ಬರೆಯುವ ಇನ್ನು ವಾಕಿಂಗ್, ಯೋಗ. ಹೀಗೆ ಅನೇಕ ಸಂಕಲ್ಪಗಳು ಜನವರಿ ತಿಂಗಳಲ್ಲಿ.  ಆದರೆ ಅರ್ಧಕ್ಕೆ ಅರ್ಧದಷ್ಟು ಜನರ ಸಂಕಲ್ಪ ಫೇಬ್ರವರಿ ದಾಟಲ್ಲ.
ಇನ್ನು ಮದುವೆ ಆದ ಹೊಸದರಲ್ಲಿ ನವ ಮಧುಗಳಿಗೆ ವಸಂತ ಮಾಸ. ಪ್ರತಿ ಹಬ್ಬವು ಹೊಸತು. ಹೆಂಡತಿಯ ಮಾತೆ ರತ್ನ. ಗಂಡ ಹೇಳಿದ್ದೆ ಸತ್ಯ. ನಂತರದ ದಿನದಲ್ಲಿ ಇಬ್ಬರ ಮಾತಿನ ಚಾತುರ್ಯತೆಯ ಅರಿವು ಆಗುವುದು. ಕೆಲವೊಮ್ಮೆ ಅಕ್ಕ-ಪಕ್ಕದವರಿಗೂ ಇವರ ಮಾತಿನ ಚಕಮಕಿಯ ಅರಿವು ಆಗುವುದುಂಟು.
ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುವುದು ಹನುಮಂತನ ಬಾಲದಂತೆ. ನಾನು ಇವತ್ತು ಹೇಳೋಕ್ ಹೊರಟಿದ್ದು ಇಷ್ಟೆ, ಈ ಬಾರಿ ನನಗೆ ಪ್ರತಿಲಿಪಿಯಲ್ಲಿ  ಯುಗಾದಿ ಮೊದಲ ಹೊಸ ಹಬ್ಬ.  ಈ ವರ್ಷ ಇನ್ನು ಹೊಸ-ಹೊಸ ಲೇಖನ ಬರಲಿ ಮತ್ತು ನಮಗೂ ಬರೆಯುವ ಉತ್ತೇಜನ ಸಿಗಲಿ ಎಂದು ಕೇಳಿಕೊಳ್ಳುತ್ತಾ, ನಮ್ಮ ಸಮಸ್ತ ಪ್ರತಿಲಿಪಿ ಬಳಗದವರಿಗೆ
                              “ಯುಗಾದಿಯ ಶುಭಾಶಯಗಳು”

No comments: