Sunday, June 27, 2021

ವಾರಾನ್ನ

 

                                     ವಾರಾನ್ನ

ಸ್ಕೊಲ್ ನಿಂದ ಬಂದ ಸಾನ್ವಿ ಒಂದೆ ಸಮನೆ ಅಮ್ಮನ ಹತ್ತಿರ ರಗಳೆ ಶುರು ಮಾಡಿದಳು. “ಏನಮ್ಮಾ,  ಇವತ್ತಾದ್ರು  ಪಾವ್ ಭಾಜಿ ಮಾಡ್ತಿಯಾ ಅಂದ್ಕೊಂಡಿದ್ದೆ. ಆದ್ರೆ ನೀನು ಸುಮ್ನೆ ಬ್ರೆಡ್ ಬೇಯಿಸಿದ್ದಿಯಾ. ನನಗೆ ಇವತ್ತು ಏನಾದ್ರು ಡಿಫರೆಂಟ್ ಆಗಿರೋದು ತಿನ್ನಬೇಕು  ಅಂತ ಆಸೆ ಆಗ್ತಾ ಇದೆ” ಅಂತ ಒಂದೆ ಸಮನೆ  ಸಾನ್ವಿ ಅಮ್ಮನ ಹತ್ತಿರ ರಗಳೆ ತೆಗೆದಳು. ಸಾನ್ವಿ ಅಮ್ಮ ಸರೋಜ ಮಗಳಿಗೆ ತಾನು ಶಾಲೆಯಿಂದ ಸುಸ್ತಾಗಿ ಬಂದಿದ್ದಿನಿ. ಅಲ್ಲದೆ ತನಗು ಒಂದೆ ಸಮನೆ ಒಂದಾದ ಮೇಲೆ ಒಂದು ತರಗತಿ ಹಾಗು ಅಲ್ಲಿ ಮಕ್ಕಳ ಹತ್ತಿರ ಕೂಗಿ ಸುಸ್ತಾಗಿರೋದನ್ನು ಸಾನ್ವಿಗೆ ತಿಳಿಸಿ ಹೇಳಲು ಪ್ರಯತ್ನಿಸುತ್ತಾಳೆ. ಆದರೆ ಇದೆಲ್ಲಾ ಅರ್ಥ ಆಗದೆ ಇರೋ ವಯಸ್ಸೆನಲ್ಲ ಸಾನ್ವಿದು. ಆದರೆ ಸಾನ್ವಿ  ಬೆಳೆದ ವಾತಾವರಣ ಅವಳಿಗೆ ಬೆರೆಯವರ ಕಷ್ಟದ ಅರಿವು ಇಲ್ಲದಂತೆ ಮಾಡಿತ್ತು. ಇದು ಸಾನ್ವಿಯ ತಪ್ಪು ಅನ್ನುವುದಕಿಂತ ಅವಳ ಬೆಳೆದ ಮತ್ತು ಬೆಳೆಸಿದವರ ಪಾತ್ರವೆ ಜಾಸ್ತಿ ಇತ್ತು.

ಸರೋಜ ಮತ್ತು ಶ್ರೀದರ ಕಷ್ಟಪಟ್ಟು ತಮ್ಮ ವಿದ್ಯಾಭ್ಯಾಸ ಮುಗಿಸಿದವರು. ತಾವು ಕಷ್ಟ ಪಟ್ಟಂತೆ ತಮ್ಮ ಮಗಳು ಕಷ್ಟ ಪಡುವುದು ಬೇಡ ಎಂದು ಮೊದಲಿನಿಂದಲು ಸ್ವಲ್ಪ ಮುದ್ದಾಗಿ ಬೆಳೆಸಿದರು. ಆದರೆ ಈ ನಡುವೆ ಮನೆಯಿಂದಲೆ ಕೆಲಸ ಮಾಡುವ ಕಾರಣ ಶ್ರೀದರನಿಗೆ ಮಗಳ ನಡುವಳಿಕೆ ಸ್ವಲ್ಪ ಕಿರಿಕಿರಿ ಉಂಟು ಮಾಡಿತ್ತು. ತಾವೆ ಎಲ್ಲೊ ಎಡವಿದೆವು ಅಂತ ಅನ್ನಿಸಲು ಶುರುವಾಯಿತು. ಹಾಗೆ ಯೋಚನೆಯಲ್ಲಿ ಮುಳುಗಿದ ಶ್ರೀದರನಿಗೆ ತನ್ನ ಹಳೆಯ ದಿನಗಳು ನೆನಪಾದವು.

 ಶಾಲೆಗೆ ಹೋಗುವ ದಿನದಲ್ಲಿ ಅಪ್ಪ-ಅಮ್ಮ ಕಷ್ಟಪಟ್ಟು ದುಡಿದು ಹೊಟ್ಟೆ ಬಟ್ಟೆ ನೋಡಿಕೊಳ್ಳುತ್ತಿದ್ದರು. ಅವರ ಕಾಲವಾದ ನಂತರ  ಅಣ್ಣಂದಿರು ತಮ್ಮ-ತಮ್ಮ ಹಿಸೆ ತೆಗೆದುಕೊಂಡರು. ಪುರೋಹಿತ್ಯ ಮಾಡುತ್ತಾ ತಮ್ಮ ನೆಲೆ ಕಂಡುಕೊಂಡರು. ಮನೆಯಲ್ಲಿ ಕಿರಿ ಮಗನಾದ ಕಾರಣ ಇನ್ನು ಎಲ್ಲು ನೆಲೆ ಕಾಣದೆ ಇರುವಾಗಲೆ ಅಪ್ಪ-ಅಮ್ಮನನ್ನು ಕಳೆದುಕೊಂಡು ಎಲ್ಲರು ಇದ್ದು ಯಾರು ಕೇಳದಂತಾದೆ. ಆಗ ನೆಂಟರಲ್ಲಿ ಒಬ್ಬ ಪುಣ್ಯಾತ್ಮರು  ಮುಂದೆ ಬಂದು ಸರ್ಕಾರಿ ಹೈಸ್ಕೂಲ್ ಗೆ ಸೇರಿಸಿದರು ಹಾಗೆ ಮುಂದಿನ ನನ್ನ ವಿದ್ಯಾಬ್ಯಾಸ ಸರಕಾರಿ ಕಾಲೇಜಿನಲ್ಲಿ ಆಯಿತು.  ಇನ್ನು ಊಟಕ್ಕೆ ದಿನಕ್ಕೊಂದು ಮನೆ ಗೊತ್ತು ಮಾಡಿಕೊಟ್ಟರು.  ವಾರಾನ್ನ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಪದ್ದತಿ. ಸೋಮವಾರ ಒಂದು ಮನೆ ಆದರೆ, ಮಂಗಳವಾರ ಒಂದು ಮನೆ…ಭುದುವಾರ ಇನ್ನೊಂದು. ಹೀಗೆ ದಿನ ಒಬ್ಬರ ಮನೆಯಲ್ಲಿ ಊಟದ ವ್ಯವಸ್ಥೆ ಆಗಿತ್ತು. ಹೊಟ್ಟೆ ತುಂಬುವಷ್ಟು ಅನ್ನ ಪದಾರ್ಥ ಸಿಗುತಿತ್ತು. ಆದರೆ ಎಷ್ಟೋ ಮನೆಯಲ್ಲಿ ಎಣ್ಣೆ ಬಂಡಿಯ ವಾಸನೆ ಬರುತ್ತಿತ್ತು. ಆದರೆ ಮಾಡಿರೋ ತಿಂಡಿ ಆಚೆ ಬರ್ತಾ ಇರಲಿಲ್ಲ. ತಿನ್ನೊ ವಯಸ್ಸು ಬಾಯಲ್ಲಿ ನೀರು ಬರುವುದು ಸಹಜ. ಇನ್ನು ಹಬ್ಬ-ಹರಿದಿನದಲ್ಲಿ ಚುರುಪಾರು ಪ್ರಸಾದ ಬಿಟ್ಟರೆ ಇನ್ನೇನು ಕಾಣೆ.

ಭುದುವಾರ ಹೋಗೊ ಮನೆಗೆ ಮಂಗಳವಾರ ಹೋದ್ರೆ ಅಲ್ಲಿ ಊಟ ಸಿಗಲ್ಲ. ಭುದುವಾರ ಹೋಗೋ ಮನೆಗೆ ಭುದುವಾರ, ಮಂಗಳವಾರ ಹೋಗೋ ಮನೆಗೆ ಮಂಗಳವಾರನೆ ಹೋಗ್ಬೇಕಿತ್ತು.

ಇನ್ನು ಎಷ್ಟೋ ಮನೆಯಲ್ಲಿ ಪ್ರೀತಿಯಿಂದ ಊಟ ಹಾಕ್ತಾ ಇದ್ರು. ಇನ್ನು ಎಷ್ಟೊ ಕಡೆ ಮನೆಗೆ ನೆಂಟರು ಬಂದರೆ ವಾರಾನ್ನಕ್ಕೆ ಬಂದ ಹುಡುಗನಿಗೆ ರೇಶನ್ ಪದ್ದತಿಯಲ್ಲಿ ಊಟ. ಮೊದ ಮೊದಲು ಅರ್ಥ ಆಗ್ತಾ ಇರಲಿಲ್ಲ. ನಂತರ ಪರಿಸ್ಥಿತಿ ಮತ್ತು ವಾತಾವರಣ ಎಲ್ಲವನ್ನು ರೊಢಿ ಮಾಡಿಸುತ್ತಾ ಹೋಯಿತು.

ಯಾರು ನಿನಗೆ ಎನು ಇಷ್ಟ ಅಂತ ಕೇಳಿ ಮಾಡುವರಿಲ್ಲ. ಹಸಿವಾದಾಗ ಏನೋ ತಿನ್ನಲು ಸಿಕ್ಕರೆ ಅದೇ ನಮ್ಮ ಪುಣ್ಯ. ಓದಿ ಒಳ್ಳೆಯ ಕೆಲಸ ಹಿಡಿಯಬೇಕು ಅನ್ನೊದು ಒಂದೆ ತಲೆಯಲ್ಲಿ ಇತ್ತು. ದಿನ ಊಟಕ್ಕೆಂದೆ ಒಬ್ಬೊಬ್ಬರ ಮನೆಗೆ ಹೋಗುವುದು ಸ್ವಲ್ಪ ಮುಜುಗರದ  ವಿಷಯವೆ ಆಗಿತ್ತು. ಏನೋ ಕಷ್ಟದ ದಿನದಲ್ಲಿ ಅಷ್ಟಾದರು ಸಹಾಯ ಸಿಕ್ಕಿ ಓದಿ ನನ್ನ ಕಾಲ ಮೇಲೆ ನಿಂತೆನೆಂಬ ಸಮಾಧಾನ.

ಇನ್ನು ವಾಸ್ಥವಕ್ಕೆ ಬಂದ ಶ್ರೀದರ ಮಗಳ ನಡುವಳಿಕೆ ಬದಲಿಸುವ ತಿರ್ಮಾನ ಮಾಡಿದ. ನಾವೆ ಅವಳಗೆ ಹಠ ಕಲಿಸುತ್ತಿದ್ದೆವೆ  ಎಂದು ಅರಿತ. ಮಗಳಿಗು ಸಣ್ಣ ಪುಟ್ಟ ಮನೆ ಕೆಲಸ ರೂಢಿ ಮಾಡಿಸುವ ತಿರ್ಮಾನ ಮಾಡಿದ. ಅಲ್ಲದೆ ಯಾವುದಾದರು ಬೇಕು ಅಂದ ತಕ್ಷಣ ಸಿಕ್ಕರೆ ಅದೇ ಅಭ್ಯಾಸ ಆಗಿಬಿಡುತ್ತದೆ. ಯಾವುದಾದರು ಇಲ್ಲದೆ, ಇದ್ದದ್ದರಲ್ಲೆ ಜೀವನ ನಡೆಸುವದನ್ನು ಕಲಿಸುವುದೆ ಸೂಕ್ತ. ಕಷ್ಟ ಬಂದರೆ ಎದುರಿಸ ಬೇಕು. ಇದ್ದುದರಲ್ಲೆ ಖುಷಿಯಾಗಿ ಇರಬೇಕು. ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ಸ್ವಲ್ಪ ತಿಳುವಳಿಕೆನು ಕಲಿಸಬೇಕು. ಮುಂದಿನ ಜೀವನಕ್ಕೆ  ಇವೆಲ್ಲಾ ಮುಖ್ಯ ಎಂದು ಮಗಳಿಗೆ ಹಂತ-ಹಂತವಾಗಿ ಅರ್ಥ ಮಾಡಿಸುವ ತಿರ್ಮಾನ ಮಾಡಿದ.

Sunday, June 20, 2021

ಕುಂಕ್ರಿಯ ಮದುವೆ ಮನೆ

 

                               ಕುಂಕ್ರಿಯ ಮದುವೆ ಮನೆ

ನಮ್ಮ ಆಪ್ತ ನೆಂಟರಲ್ಲಿ ಮದುವೆ ಗೊತ್ತಾಯಿತು ಅಂದ್ರೆ ಏನೋ ಸಡಗರ. ಯಾರದೋ ಮದುವೆ ಆದ್ರೆ ತಾಸಿನ ಮಟ್ಟಿಗೆ ಹೋಗಿ ಬರಬೇಕು. ಅದೇ ಆಪ್ತರದ್ದಾದರೆ ಎರಡು ಮೂರು ದಿನದ ತಿರುಗಾಟ. ಎಲ್ಲಾ ನೆಂಟರನ್ನು ನೋಡಬಹುದು ಮತ್ತು ಅವರ ಜೊತೆ ಹರಟೆ ಹೊಡೆಯುತ್ತಾ ಒಂದಷ್ಟು ಸುದ್ದಿಯನ್ನು ಸಂಗ್ರಹಿಸಬಹುದು.

ಇನ್ನು ಈ ಕುಂಕ್ರಿಯ ವಿಷಯಕ್ಕೆ ಬಂದರೆ ಮದುವೆ ಕರೆಯಲು ಬಂದಾಗಲೆ ತಾನು ಬರುವ ಆಶ್ವಾಸನೆ ನೀಡಲಾಗುತ್ತದೆ. ಅದರಲ್ಲು ತನಗೆ ಇಷ್ಟವಾದ ಬಟ್ಟೆ ಹಾಕಿಕೊಳ್ಳುವ ತಯಾರಿ ನಡೆಯುತ್ತದೆ.ಈ ಬಾರಿ ಕುಂಕ್ರಿಗೆ ಅವಳ ಅಪ್ಪನ ತಂಗಿ ಅಂದರೆ ಅವಳ ಅತ್ತೆ ಮಗನ ಮದುವೆ ಇತ್ತು. ಅತ್ತೆ ಕರೆಯಲು ಬಂದಾಗಲೆ ಹೇಳಿದ್ದಳು, “ನೋಡೆ ಕುಂಕ್ರಿ ನೀನು ಅಪ್ಪ ಅಮ್ಮನ ಜೋತೆ ನಾಲ್ಕು ದಿನ ಮುಂಚೆ ಬರಬೇಕು” ಅಂತ  ತನ್ನ ಅತ್ತಿಗೆಗೂ ತಾಗುವ ಹಾಗೆ ಹೇಳಿ ಹೋಗಿದ್ದಳು. ಈ ಕುಂಕ್ರಿಗೆ ಅತ್ತೆ ಮನೆ ಮದುವೆಗೆ ಹೋಗುವ ಸಂಭ್ಫ್ರಮ ಜೋರೆ.

ಒಂದು ದಿನ ಅಪ್ಪ ಅಮ್ಮನ ಜೊತೆ ಹೋಗಿ ಮದುವೆಗೆ ಹೊಸ ಬಟ್ಟೆ ಅದರ ಮ್ಯಾಚಿಂಗ್ ಸರ ಬಳೆ ಎಲ್ಲಾ ಖರಿದಿ ಮಾಡಿ ಬಂದಳು.ಕುಂಕ್ರಿ ದಿನ ಅದನ್ನೆಲ್ಲಾ ನೋಡುತ್ತಾ ಮದುವೆಗೆ ಹೋಗಲು ತುದಿಗಾಲಿನಲ್ಲಿ ನಿಂತಳು. ಆದರೆ ಕುಂಕ್ರಿಯ ಅಮ್ಮನಿಗೆ ತನಗೊಸ್ಕರ ತಂದ ಸೀರೆ ಅಷ್ಟಾಗಿ ಗ್ರಾಂಡ್ ಆಗಿ ಇಲ್ಲ, ನಾದಿನಿಯ ಮನೆಯಲ್ಲಿ ಮದುವೆ ದಿನ ತನ್ನ ಸೀರೆ ಸ್ವಲ್ಪ ಸದರವಾಯಿತೇನೊ ಅನ್ನೊ ಅಳುಕು ಶುರುವಾಯಿತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗದೆ ಗಂಡನ ಬಳಿ ಹೇಳಿಕೊಂಡಳು. ಗಂಡನು ಎನು ಮಾಡಲು ತೊಚದೆ ಸಪ್ಪೆ ಮುಖ ಮಾಡಿಕೊಂಡನು. ನಾವು ಒಂದು ಬಿಳಿ ಪಂಜೆ ಅಂಗಿ ಹಾಕಿದರು ಯಾರು ಕೇಳುವರಿಲ್ಲ. ಕುಂಕ್ರಿಗೆ ಒಳ್ಳೆ ಬಟ್ಟೆ ಬಂತು. ನಿನ್ಗೆ ಒಳ್ಳೆ ಕಾಂಚಿವರಂ ಸೀರೆ ತರೋಕೆ ಹೋದ್ರೆ ಹತ್ತು ಸಾವಿರಕಿಂತ ಕಮ್ಮಿ ಎನು ಸಿಗಲ್ಲ. ಏನ್ ಮಾಡ್ಲಿ ಈಗ ಮನೆ ಲೋನ್, ಗ್ರಹಪ್ರವೇಶಕ್ಕೆ ಆದ ಖರ್ಚು ಅಂತ ಸ್ವಲ್ಪ ಕೈ ಹಿಡಿಬೇಕಾಗಿದೆ. ಇನ್ನು ತಂಗಿಗೆ ಅಣ್ಣನಾಗಿ ತವರು ಮನೆ ಉಡುಗೊಗೆ ಅಂತ ಚನ್ನಾಗಿಯೆ ಕೊಡಬೇಕು. ಏನ್ ಮಾಡ್ಲಿ. ನನ್ನ ಪರಿಸ್ಥಿತಿನು ಅರ್ಥ ಮಾಡಿಕೊ ಎಂದು ತನ್ನ ಕಷ್ಟ ತೊಡಿಕೊಂಡನು. ಅಷ್ಟರಲ್ಲೆ ಕುಂಕ್ರಿ ತಟ್ ಅಂತ, “ಅಮ್ಮ ನಿನ್ನ ಪಿಂಕ್ ಸೀರೆ ಉಟ್ಟಗೊ. ಅದು ನನ್ನ ಪೇವರೆಟ್ ಕಲರ್. ತುಂಬಾ ಚನ್ನಾಗಿ ಇದೆ ಆ ಸೀರೆ ಅಂದಳು”. ಇದಕ್ಕೆ ಕುಂಕ್ರಿಯ ಅಪ್ಪನು ತಲೆ ಆಡಿಸಿದನು. ಆದರೆ ಇದು ಕುಂಕ್ರಿಯ ಅಮ್ಮನಿಗೆ ಸಮಾಧಾನ ಆಗಲಿಲ್ಲ. “ಸಾಕು ಸುಮ್ಮನಿರಿ ಯಾವುದೆ ಹುಟ್ಟುಹಬ್ಬ ಆಗಲಿ, ಮುಂಜಿ ಆಗಲಿ ಅದೆ ಸೀರೆ ಆಗಿದೆ. ನಮ್ಮ ನೆಂಟರು, ನಿಮ್ಮ ನೆಂಟರು ಎಲ್ಲಾ ನೋಡಿ ಆಗಿದೆ. ಯಾಕೋ ದೊಡ್ಡ ಮದುವೆ ನಮ್ಮ ಎಲ್ಲಾ ನೆಂಟರು ಬರುವರು.ಸ್ವಲ್ಪ ದೊಡ್ಡ ಸೀರೆ ಉಡುವ ಆಸೆ” ಎಂದು ಹೇಳಿಕೊಂಡಳು. ಆದರು ಗಂಡನ ಪರಿಸ್ಥಿತಿ ಅರ್ಥಮಾಡಿಕೊಂಡು ಗಂಡನಿಗು ಕಷ್ಟ ಕೊಡಲು ಮನಸ್ಸಿಲ್ಲದೆ ಏನ್ ಮಾಡಬೇಕು ಎಂದು ತೋಚದೆ ತನ್ನಷ್ಟಕ್ಕೆ ಆಲೋಚನೆ ಮಾಡಿದಳು.

ಆಗ ತಟ್ ಅಂತ ನೆನಪಾಗಿದ್ದು ತನ್ನ ತಂಗಿಯ ಹೊಸ ಕಾಂಚಿವರಂ ಸೀರೆಯ ನೆನಪಾಯಿತು. ಸ್ವಲ್ಪ ದಿನದ ಹಿಂದೆ ತಗೊಂಡಿದ್ದಳು. ಅವಳ ಕಡೆಯ ಯಾವುದೊ ಒಂದು  ಮದುವೆ ಗೆ ಉಟ್ಟಿದ್ದಳು. ಹೊಸದಾಗಿ ಗ್ರಾಂಡ್ ಆಗಿ ಇದೆ. ಅಕ್ಕ ತಂಗಿ ಬೇಕಾದಷ್ಟು ಸಲ ತಮ್ಮ ಸೀರೆಗಳನ್ನು ಬದಲಾಯಿಸಿಕೊಂಡಿದ್ದರು.  ಬೇಕಿದ್ದರೆ ನೀನು ಯಾವಾಗಾದರು ಊಡು ಅಂದಿದ್ದು ನೆನಪಾಯಿತು. ತಂಗಿಯ ಹೊಸ ಸೀರೆ ಉಟ್ಟು ಮದುವೆಗೆ ಹೋಗೋ ಪ್ಲಾನ್ ಮಾಡಿದಳು.

ಇನ್ನೇನು ಮದುವೆ ದಿನ ಬಂದೆಬಿಡ್ತು. ಎಲ್ಲಾ ರೆಡಿ ಆಗಿ ಹೋದರು. ಮದುವೆ ದಿನ ಕುಂಕ್ರಿ ಮಿಂಚಿದ್ದೆ ಮಿಂಚಿದ್ದು. ಎಲ್ಲರ ಸೀರೆ ಒಡವೆ ನೋಡುತ್ತಾ, ಮದುಮಗಳ ಜಡೆಬಿಲ್ಲೆ, ನತ್ತು, ಹೀಗೆ ತನ್ನ ಆಸಕ್ತಿ ಇರೋ ವಿಷಯದ ಮೇಲೆ ಪ್ರಶ್ನೇ ಕೇಳಿ ಎಲ್ಲರ ಗಮನ ಸೆಳೆದು ಒಡಾಡಿದಳು.

ಹೀಗೆ ಎಲ್ಲಾ ಹರಟೆ ಹೊಡೆಯುತ್ತ ಕುಳಿತಿದ್ದರು. ಅಲ್ಲೇ ಸಂಭಂದಿಕರಲ್ಲಿ ಒಬ್ಬರು ಕುಂಕ್ರಿಯ ತಾಯಿಯ ಹತ್ತಿರ ನಿಮ್ಮ ಸೀರೆ ತುಂಬಾ ಚನ್ನಾಗಿ ಇದೆ. ಎಲ್ಲಿ ತಗೊಂಡ್ರಿ ಅಂತ ಕೇಳಿದರು. ಆಗ ಕುಂಕ್ರಿಯ ಅಮ್ಮ ಸಂಬ್ರಮದಿಂದ ಮದುವೆ ಗೆ ಅಂತ ಒಂದು ದಿನ ಚಿಕ್ಕಪೇಟೆಗೆ ಹೋಗಿ ಸುದರ್ಶನ್ ಸಿಲ್ಕ್ ನಲ್ಲಿ ತಗೊಂಡೆ. ಹದಿನೈದು ಸಾವಿರ ಕಂಚಿ ಸೀರೆ ಅಂದಳು. ಆಗ ಅಲ್ಲೆ ಇದ್ದ ಸತ್ಯವಂತ  ಕುಂಕ್ರಿ ,”ಅಯ್ಯೊ..ಅಮ್ಮ ಇದು ನೀನು ತಗೊಂಡ ಸೀರೆ ಅಲ್ಲ. ಇದು ಚಿಕ್ಕಮ್ಮನ ಸೀರೆ. ನಾವು ಅವರ ಮನೆಗೆ ಒಂದು ದಿನ ಹೋಗಿ ತಂದ್ವಿ. ನಿನ್ನ ಸೀರೆ ಸಿಂಪಲ್ ಆಗಿ ಇದೆ ಅದನ್ನ ಉಡಲ್ಲ ಅಂತ ಅಪ್ಪನ ಹತ್ತಿರ ಹೇಳಿದ್ದು ಮರೆತು ಬಿಟ್ಯಾ” ಅಂತ ಕುಂಕ್ರಿ ಚಾಚು ತಪ್ಪದೆ ಸತ್ಯವನ್ನು ಒಂದೆ ಉಸುರಿಗೆ ಹೇಳಿದಳು. ಕುಂಕ್ರಿಯ ಮಾತಿಗೆ ಅಮ್ಮನ ಮುಖ ಪೆಚ್ಚಾಯಿತು. ಇನ್ನು ಉಳಿದವರು ಏನು ಮಾತಾಡದೆ ಮನಸ್ಸಿನಲ್ಲೆ ನಕ್ಕರು.

 

Friday, March 5, 2021

 

                         ಬೆಸಿಗೆಯ ಧಗೆಗೆ ತಂಪಾದ ತಂಬಳಿಗಳು

ಎಪ್ರೀಲ್ ಮತ್ತು ಮೇ ಬಂತೆಂದರೆ ಕಡು ಬಿಸಿಲು. ದೇಹಕ್ಕೆ ತಂಪಾದ ಆಹಾರ ಪದಾರ್ಥಗಳೆ ಒಳ್ಳೆಯದು. ಊಟಕ್ಕೆ ಬಿಸಿ ಬಿಸಿ ಸಾರು ಹುಳಿಗಿಂತ ತಂಪಾದ ತಂಬಳಿಗಳು ಒಳ್ಳೆಯದು. ಹೆಚ್ಚಾಗಿ ಮಲೆನಾಡಿನ ಕಡೆ ಊಟಕ್ಕೆ ಮೊದಲು ತಂಪಾದ ತಂಬಳಿಗಳನ್ನು ಬಡಿಸಿ ನಂತರ ಹುಳಿ ಕೇಳುವ ವಾಡಿಕೆ. ತಂಬಳಿಗಳಲ್ಲಿ ಅನೇಕ ವಿಧಗಳಿವೆ. ಶುಂಟಿ ತಂಬಳಿ, ಎಳ್ಳು-ಜೀರಿಗೆ ತಂಬಳಿ,ಬೆಳ್ಳುಳ್ಳಿ ತಂಬಳಿ, ದೊಡ್ಡ ಪತ್ರೆ ತಂಬಳಿ, ಪಾಲಕ್ ತಂಬಳಿ, ಮಜ್ಜಿಗೆ ಹುಲ್ಲಿನ ತಂಬಳಿ,ದಾಳಿಂಬೆ ಕುಡಿ ತಂಬಳಿ, ಒಂದೆಲಗದ ತಂಬಳಿ,ಬಸಳೆ ಸೊಪ್ಪಿನ ತಂಬಳಿ, ಹೀರೆಕಾಯಿ ತಂಬಳಿ, ಸವತೆ ಕಾಯಿ ತಂಬಳಿ….ಇನ್ನು ಅನೇಕ ರೀತಿಯ ತಂಬಳಿಗಳಿವೆ.  ಕೆಲವು ತಂಬಳಿಗಳು ದೇಹಕ್ಕೆ ಉಷ್ಣ ನೀಡಿದರೆ ಕೆಲವು ತಂಪು ನೀಡುತ್ತವೆ. ಬೆಸಿಗೆಗೆ ತಂಪು ನೀಡುವ ಕೆಲವು ತಂಬಳಿಗಳನ್ನು ಕೆಳಗೆ ಉಲ್ಲೆಖಿಸಿದ್ದೆನೆ.

ಹೀರೆಕಾಯಿ ತಂಬಳಿ

ಬೇಕಾಗುವ ಸಾಮಗ್ರಿಃ

ಹೀರೆಕಾಯಿ ಹೆಚ್ಚಿದ್ದು ಒಂದು ಹಿಡಿ, ಎಳ್ಳು ಒಂದು ಚಮಚ, ಬೆಲ್ಲ ಮತ್ತು ಉಪ್ಪು ರುಚಿಗೆ ಅನುಸಾರ, ಎಣ್ಣೆ, ತೆಂಗಿನ ತುರಿ, ಮಜ್ಜಿಗೆ

ತಯಾರಿಸುವ ವಿಧಾನಃ

ಮೊದಲು ಹೀರೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ. ಇದನ್ನು ಒಂದು ಬಾಣೆಲೆಗೆ ಹಾಕಿ ಎಣ್ಣೆಯಲ್ಲಿ ಹುರಿಯಿರಿ. ಇದನ್ನು ಹುರಿಯುವಾಗಲೆ ಎಳ್ಳು, ಬೆಲ್ಲ, ಉಪ್ಪು ಹಾಕಿ. ಹೀರೆಕಾಯಿ ಹೊಳು ಉಪ್ಪು ಬೆಲ್ಲವನ್ನು ಹೀರಿಕೊಂಡು ಇದರ ಜೊತೆ ಚನ್ನಾಗಿ ಬೇಯುವುದು. ಇದು ಆರಿದ ಮೇಲೆ ತೆಂಗಿನ ತುರಿಯ ಜೊತೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಇದಕ್ಕೆ ಮಜ್ಜಿಗೆಯನ್ನು ಸೇರಿಸಿಕೊಳ್ಳಿ,

ಹೀರೆಕಾಯಿ ತಂಬಳಿ ಸ್ವಲ್ಪ ಸಿಹಿಯಾಗಿದ್ದರೆ ರುಚಿ. ಹೀರೆಕಾಯಿ ದೇಹಕ್ಕೆ ತಂಪು. ಬೆಸಿಗೆಗೆ ಒಂದು ಒಳ್ಳೆಯ ಪದಾರ್ಥ.

ಮಜ್ಜಿಗೆ ಹುಲ್ಲಿನ ತಂಬಳಿ (ಲೆಮನ್ ಗ್ರಾಸ್)ಃ

ಬೇಕಾಗುವ ಸಾಮಗ್ರಿಃ

ಮಜ್ಜಿಗೆ ಹುಲ್ಲು ಒಂದು ಹಿಡಿ ಕತ್ತರಿಸಿದ್ದು, ತೆಂಗಿನ ತುರಿ, ಉಪ್ಪು, ಮಜ್ಜಿಗೆ

ತಯಾರಿಸುವ ವಿಧಾನಃ

ಮಜ್ಜಿಗೆ ಹುಲ್ಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದರಿಂದ ಮಿಕ್ಸಿಯಲ್ಲಿ ರುಬ್ಬಲು ಸುಲಭವಾಗುವುದು. ಮಜ್ಜಿಗೆ ಹುಲ್ಲನ್ನು ಸ್ವಲ್ಪ ನೀರು ಸೇರಿಸುತ್ತಾ ರುಬ್ಬಿ ಇದನ್ನು ಸೋಸಿಕೊಳ್ಳ ಬೇಕು. ಸೋಸಿದ ನಂತರ ಬಂದ ರಸಕ್ಕೆ, ರಸದ ಅರ್ಧದಷ್ಟು ಮಜ್ಜಿಗೆ ಸೇರಿಸ ಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಈ ತಂಬಳಿ ದೇಹಕ್ಕೆ ತಂಪು ನೀಡುವುದರ ಜೊತೆಗೆ  ಹೊಟ್ಟೆಗು ಒಳ್ಳೆಯದು.

 

ಒಂದೆಲಗದ ತಂಬಳಿಃ

ಬೇಕಾಗುವ ಸಾಮಗ್ರಿಃ

ಒಂದೆಲಗ ಒಂದು ಹಿಡಿ, ಎಣ್ಣೆ, ಜೀರಿಗೆ ಒಂದು ಚಮಚ, ಕಾಳು ಮೆಣಸು ಐದರಿಂದ ಆರು, ತೆಂಗಿನ ತುರಿ, ಮಜ್ಜಿಗೆ, ಉಪ್ಪು

ತಯಾರಿಸುವ ವಿಧಾನಃ

ಮೊದಲು ಎಣ್ಣೆಯಲ್ಲಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿದುಕೊಳ್ಳಿ. ಮಿಕ್ಸಿ ಗೆ ಒಂದೆಲಗ ಹಾಕಿ ರುಬ್ಬಿಕೊಳ್ಳಿ. ನಂತರ ತೆಂಗಿನತುರಿ ಹಾಕಿ ಇದರ ಜೊತೆ ಹುರಿದ ಜೀರಿಗೆ ಮತ್ತು ಕಾಳುಮೆಣಸು ಹಾಕಿ ನುಣ್ಣಗೆ ರುಬ್ಬಿ. ಈಗ ಇನ್ನೊಂದು ಪಾತ್ರೆಗೆ ತೆಗೆದು ಇದಕ್ಕೆ ಬೇಕಾದಷ್ಟು ಉಪ್ಪು ಮತ್ತು ಮಜ್ಜಿಗೆ ಹಾಕಿ.

ಒಂದೆಲಗದಲ್ಲಿ ಔಷದಿ ಗುಣ ಇರುವ ಕಾರಣ ಒಂದೆಲಗವನ್ನು ಹುರಿದೆ ಹಸಿಯಾಗಿ ರುಬ್ಬಲಾಗುವುದು. ಇದನ್ನು ಮಜ್ಜಿಗೆ ಹುಲ್ಲಿನ ತಂಬಳಿ ತರಹ ಕೂಡ ಮಾಡಬಹುದು.

 

ಸವತೆಕಾಯಿ ತಂಬಳಿಃ

ಬೇಕಾಗುವ ಸಾಮಗ್ರಿಃ

ಎಳೆ ಸವತೆಕಾಯಿ, ತೆಂಗಿನ ತುರಿ, ಉಪ್ಪು, ಎಣ್ಣೆ, ಎಳ್ಳು, ಹಸಿಮೆಣಸು

ತಯಾರಿಸುವ ವಿಧಾನಃ

ಮೊದಲು ಸ್ವಲ್ಪ ಎಣ್ಣೆಗೆ  ಎಳ್ಳು ಮತ್ತು ಹಸಿಮೆಣಸನ್ನು ಹಾಕಿ ಎಣ್ಣೆಯಲ್ಲಿ ಹುರಿಯಿರಿ. ನಂತರ ಇದನ್ನು ಕಾಯಿತುರಿಗೆ ಹಾಕಿ. ಇದಕ್ಕೆ ಕತ್ತರಿಸಿದ ಸವತೆಕಾಯಿ ಎಲ್ಲವನ್ನು ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ಅನುಸಾರ ಉಪ್ಪು ಹಾಕಿ. ಈ ತಂಬಳಿಗೆ ಮಜ್ಜಿಗೆಯನ್ನು  ಸ್ವಲ್ಪ ಸೇರಿಸಿ. ಸವತೆಕಾಯಿಯಲ್ಲಿ ಸ್ವಲ್ಪ ಹುಳಿ ಅಂಶ ಇರುವುದರಿಂದ ಮಜ್ಜಿಗೆ ಇಲ್ಲದಿದ್ದರು ನಡೆಯುತ್ತದೆ. ಇದು ಕೂಡ ದೇಹಕ್ಕೆ ತಂಪು ನೀಡುತ್ತದೆ.

ಎಲ್ಲಾ ತಂಬಳಿಗಳು ಸ್ವಲ್ಪ ತೆಳ್ಳಗೆ ಇರಲಿ. ತಂಬಳಿಗೆ ಕಾಳು ಮೆಣಸನ್ನು ಹಾಕಬಹುದು. ಇಲ್ಲವೆ ಖಾರ ಇಲ್ಲದೆ ಕೂಡ ಊಟ ಮಾಡಬಹುದು. ಆರೋಗ್ಯ ಮತ್ತು ರುಚಿಗೆ ಅನುಸಾರವಾಗಿ ನಮ್ಮ ಇಷ್ಟದ ಪ್ರಕಾರ ಮಾಡಿಕೊಳ್ಳಬಹುದು.

 

 

Wednesday, February 26, 2020

ಸವತೆಕಾಯಿ vs ವೇಟ್ ಲಾಸ್


                                ಸವತೆಕಾಯಿ vs ವೇಟ್ ಲಾಸ್  
                     
“ಐವತ್ ರೂಪಾಯ್ಗೆ ಮೂರ್ ಕೆಜಿ ಸವತೆಕಾಯ್….ಕೋಲಾರ್ ಕಡೆ ಎಳೆ ಸವತೆಕಾಯ್….” ಅಂತ ಕೀಳು ದ್ವನಿಯಲ್ಲಿ ಒಂದೇ ಸಮನೆ ರಸ್ತೆ ಕಡೆಯಿಂದ ದ್ವನಿ ಕೇಳಿ ಬರುತ್ತಿತ್ತು. ಸವತೆಕಯಿ ಅಂದ ತಕ್ಷಣ ನನ್ನ ಕಿವಿ ನೆಟ್ಟಗಾಯಿತು. ಈ ನಡುವೆ ವೆಟ್ ಲಾಸ್ ಮತ್ತು ಯೋಗ ಅಂತ ಶುರು ಮಾಡಿದ ಮೇಲೆ ಆದಷ್ಟು ಬಾಯಿಯನ್ನು ಕುರುಕಲು ತಿಂಡಿಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದೆ. ಇಷ್ಟು ಕಡಿಮೆ ಬೆಲೆಗೆ ಎಳೆ ಸವತೆಕಾಯಿ ಸಿಕ್ಕಿದರೆ ಕೇಳಬೇಕೆ. ಇದನ್ನು ತೆಗೆದುಕೊಂಡು ಪ್ರೇಡ್ಜ್ ನಲ್ಲಿ ಇಟ್ಟರೆ ಹದಿನೈದು ದಿನಕ್ಕೆ ಯಾವ ಯೋಚನೆ ಇಲ್ಲ. ಅದು ಅಲ್ಲದೆ ಸವತೆಕಾಯಿ ತಿಂದರೆ ಬೇಗ ಸಣ್ಣಗಾಗುತ್ತಾರೆ ಅಂತ ಯೋಗ ಕ್ಲಾಸ್ ನಲ್ಲಿ ಹೇಳಿದ್ದು ನೆನಪಾಯಿತು. ಹದಿನೈದು ದಿನದಲ್ಲಿ ಒಂದೆರಡು ಕೆ.ಜಿ. ಇಳಿದರೆ ಅಷ್ಟೇ ಸಾಕು ಅಂತ ಮನಸ್ಸಿನಲ್ಲಿ ಲೆಕ್ಕಚಾರ ಹಾಕಿ ಮೂರು ಕೆ,ಜಿ ಸವತೆಕಾಯಿ ನಮ್ಮ ಮನೆ ಪ್ರೀಡ್ಜ್ ನಲ್ಲಿ ರಾರಾಜಿಸಿದವು.
ಮೊದಲ ದಿನ ಬಹಳ ಉತ್ಸಾಹದಲ್ಲಿ ಸವತೆಕಾಯಿ ಯನ್ನು ಗೋಲಾಕಾರದಲ್ಲಿ ಕತ್ತರಿಸಿ ಉಪ್ಪು, ಖಾರ ಹಾಕಿ ತಿಂದೆ. ಬಾಯಿಗು ರುಚಿ ಅನಿಸಿತು. ಹೀಗೆ ಮಾಡಿದರೆ ಸ್ವಲ್ಪ ಸಣ್ಣಗಾಗುವುದಂತು ಕಂಡಿತ ಅಂತ ಲೆಕ್ಕಚಾರ ಹಾಕಿದೆ. ಮಾರನೆ ದಿನ ಸಣ್ಣಗೆ ಹೆಚ್ಚಿ ಉಪ್ಪು ಖಾರ ಹಾಕಿ ತಿಂದೆ. ಪರವಾಗಿಲ್ಲ. ಆದರು ಯಾಕೋ ಈ ಸವತೆಕಾಯಿ ತಿಂದರೆ ಶೀತ ಆಗುವುದು ಎಂದನಿಸಿತು. ಮತ್ತೆರಡು ದಿನ ಏನೇನೊ ಸರ್ಕಸ್ ಮಾಡಿ ಸವತೆಕಾಯಿ ತಿಂದೆ. ಪ್ರೀಡ್ಜ್ ನಲ್ಲಿ ಇಟ್ಟರು ಯಾಕೋ ಸವತೆಕಾಯಿ ಬಾಡುವುದು ಎಂದನಿಸಿತು.
ಮಾರನೆ ದಿನ ಅಡುಗೆ ಮನೆ ಡಬ್ಬಗಳನ್ನು ಕ್ಲೀನ್ ಮಾಡುವಾಗ ಅಕ್ಕಿ ಹಿಟ್ಟು ನೋಡಿದೆ. ತುಂಬಾ ದಿನ ಆಯಿತು ಉಪಯೋಗಿಸದೆ ಹಾಗೆ ಇಟ್ಟರೆ ಹಾಳಾಗುವುದು ಎಂದು ಯೋಚಿಸಿ, ಸವತೆಕಾಯಿ,ಈರುಳ್ಳಿ ಹಾಕಿ ಒಡಪೆ(ಅಕ್ಕಿ ರೊಟ್ಟಿ) ಮಾಡಿವ ಪ್ಲಾನ್ ಮಾಡಿದೆ. ಚನ್ನಾಗಿ ಎಣ್ಣೆ ಹಾಕಿ ಬೆಯಿಸಿದ ರೊಟ್ಟಿ, ಪಕ್ಕದಲ್ಲಿ ಬೆಣ್ಣೆ, ಊರಿನ ಜೋನಿ ಬೆಲ್ಲ, ಎಲ್ಲವು ಸೇರಿ ಒಂದೆರಡು ತುತ್ತು ಜಾಸ್ತಿಯೆ ಇಳಿಯಿತು.
ರೊಟ್ಟಿ ತಿನ್ನಬೇಕಿದ್ದರೆ ಮಗಳಿಗೆ ತಕ್ಷಣ ನೆನಪಾಯಿತು, “ಅಮ್ಮಾ, ಅಜ್ಜಿ ಮಾಡೋ ಸವತೆಕಾಯಿ ಕರೆ(ಶೇವ್) ಮಾಡು. ಹೇಗೋ ಪ್ರೀಡ್ಜ್ ತುಂಬಾ ಸವತೆಕಾಯಿ ಇದೆ” ಅಂತ ಇನ್ನೊಂದು ಹೊಸ ಐಡಿಯಾ ಕೊಟ್ಟಳು. ಅದಕ್ಕೆ ಮನೆಯವರು ಸಾಥ್ ನೀಡಿದರು. ಏನ್ ಮಾಡೋದು ಮೇಜೋರಿಟಿ ಸವತೆಕಾಯಿ ಕರೆಯ ಮೇಲೆ ಇತ್ತು. ನನ್ನ ಮನಸ್ಸು ಅದನ್ನೆ ಹಂಬಲಿಸುತ್ತಿತ್ತು. ಮಾರನೆ ದಿನ ಸವತೆಕಾಯಿ ಕರೆ ಮಾಡುವ ಪ್ಲಾನ್ ಯಶಸ್ಸಾಯಿತು. ನನ್ನ ಸವತೆಕಾಯಿ ದಯಟ್ ನಿಧಾನವಾಗಿ ಮೂಲೆಗೆ ಸರಿಯುತ್ತಿತ್ತು.
ಇನ್ನು ಮೂರ್ನಾಲ್ಕು ಸವತೆಕಾಯಿ ಪ್ರೀಡ್ಜ್ ನಲ್ಲಿ ರಾರಾಜಿಸುತ್ತಿತ್ತು. ಒಂದು ದಿನ ಫಲಾವ ಮಾಡಿ ಅದಕ್ಕೆ ಸವತೆಕಾಯಿ ರೈತ ಮಾಡಿದೆ. ಇನ್ನೊದು ದಿನ ಮಜ್ಜಿಗೆ ಹುಳಿ, ಹೀಗೆ ದಿನ ಒಂದೊಂದು ಮಾಡಿ ಪ್ರೀಡ್ಜ್ ನಲ್ಲಿ ಇದ್ದ ಸವತೆಕಾಯಿ ಖಾಲಿ ಮಾಡಿದೆ.
ಮರುದಿನ ಅದೇ ದ್ವನಿ  “ಐವತ್ ರೂಪಾಯ್ಗೆ ಮೂರ್ ಕೆಜಿ ಸವತೆಕಾಯ್….ಕೋಲಾರ್ ಕಡೆ ಎಳೆ ಸವತೆಕಾಯ್….”  ಕೇಳಿಸಿತು. ಅಪ್ಪಿ ತಪ್ಪಿಯು ಆ ಕಡೆ ಹೋಗಲಿಲ್ಲ.


ಚಿತ್ರದುರ್ಗದ ಕಲ್ಲಿನ ಕೋಟೆ


                            ಚಿತ್ರದುರ್ಗದ ಕಲ್ಲಿನ ಕೋಟೆ

“ಚಿತ್ರದುರ್ಗದ ಕಲ್ಲಿನ ಕೋಟೆ…” ಈ ಹಾಡು ಕೇಳಿದ ತಕ್ಷಣ ನೆನಪಾಗುವುದೆ ವಿಷ್ಣುವರ್ದನ ಸರ್ ಮತ್ತು ಜಯಂತಿ ಅಮ್ಮ. ಚಿಕ್ಕ ವಯಸ್ಸಿನಲ್ಲಿ ನಾಗರಹಾವು ಸಿನಿಮಾ ನೋಡಿದಾಗಲೆ ಅಂದುಕೊಂಡಿದ್ದೆ ಯಾವಾಗಾದರು ದುರ್ಗದ ಕೋಟೆ ಹತ್ತಬೇಕು ಅಂತ.
ನಮ್ಮೂರಿಂದ ಬೆಂಗಳೂರಿಗೆ ಹೋಗುವಾಗ ಯಾವಾಗಲು ಚಿತ್ರದುರ್ಗದ ಮೇಲೆ ಹೋಗಬೇಕು. ಅಲ್ಲಿ ಬೇಕಾದಷ್ಟು ಬಾರಿ ಊಟ ಅಥವಾ ತಿಂಡಿ ತಿಂದು ಹೋಗಿದ್ವಿ. ಆದರೆ ಯಾವಾಗಲು ಕೋಟೆ ಹತ್ತಬೇಕು ಅಂತ ಅಂದುಕೊಂಡಾಗಲೆಲ್ಲ ಏನಾದರು ಕೆಲಸ ಅಥವಾ ಊರಿಗೆ ಹೋಗುವ ಅವಸರದಲ್ಲಿ ನಾಳೆ..ನಾಳೆ ಅಂತ ಅಂದುಕೊಂಡಿದ್ದು ಬರಲೆ ಇಲ್ಲ. ಮೊನ್ನೆ ಮಗಳು ಮದಕರಿ ನಾಯಕ ಪಾಠವನ್ನು ಓದುತ್ತಿದ್ದಳು. ಓಬವ್ವನ ಮೇಲೆ ಏನೇನೋ ಪ್ರಶ್ನೆ ಕೇಳುತ್ತಿದ್ದಳು. ಹಾಗೆ ಅಪ್ಪ-ಮಗಳ ಪ್ರಶ್ನೋತ್ತರದಲ್ಲಿ ಚಿತ್ರದುರ್ಗಕ್ಕೆ ಅಂತನೆ ಹೋಗಿ ಬರುವ ಪ್ಲಾನ್ ಮಾಡಿದೆವು.  ಯಾವ ಕೆಲಸದ ಒತ್ತಡವು ಇಲ್ಲದೆ ಚಿತ್ರದುರ್ಗಕ್ಕೆಂದೆ ಹೊರಟೆವು.
ಬಿಸಿಲು ನೆತ್ತಿಗೆ ಬರೋ ವೆಳೆಗೆ ಕೋಟೆ ಹತ್ತಿ-ಇಳಿಯ ಬೇಕು ಅಂತ ಮನೆಯನ್ನು ಸ್ವಲ್ಪ ಬೇಗ ಬಿಟ್ಟೆವು.ಅಲ್ಲಿನ ಒಂದು ಒಳ್ಳೆಯ (ಎಲ್ಲರ ಬಾಯಲ್ಲು ಕೇಳಿದ್ದು) ಹೋಟೆಲ್ಗೆ ಹೋದೆವು. ನನಗೆ ಆ ಹೋಟೆಲ್ ನಲ್ಲಿ ಬರೆದ ಬೊರ್ಡ ಬಾರಿ ವಿಚಿತ್ರವೆನಿಸಿತು. ಉದಾಹರಣೆಗೆ ನಿಮಗೆ ಖಾಲಿ ದೋಸೆಗೆ ಚಟ್ನಿ ಕೊಡಲಾಗುವುದು. ಪಲ್ಯ ಬೇಕಿದ್ದರೆ ಕೇಳಿ. ಪಲ್ಯಕ್ಕೆ ತುಪ್ಪ ಬೇಕಿದ್ದರೆ ಕೇಳಿ ತೆಗೆದುಕೊಳ್ಳಿ. ಹೀಗೆ ಎರಡು ಮೂರು ತರಹ ಬರೆದಿದ್ದರು. ಯಾವಾಗಲು ಪ್ಲೇಟ್ ನಲ್ಲಿ ಕೈ ತೊಳೆಯಬೇಡಿ. ಹೀಗೆ ಏನಾದರು ಬರೆದದ್ದು ನೋಡಿದೆ ಹೊರತು ಈ ತರಹ ಬೋರ್ಡ ಮೊದಲ ಬಾರಿ ನಾನು ನೋಡಿದ ಕಾರಣ ನನಗೆ ವಿಚಿತ್ರವೆನಿಸಿತು. ನಂತರ ಯೋಚಿಸಿದರೆ ಯಾವುದು ಹಾಳಾಗಬಾರದು ಎಂದು ಈ ನಿಯಮ ಮಾಡಿದ್ದಾರೆನೋ. ಬಂದವರ ಹತ್ತಿರ ಹೇಳಿದ್ದೆ ಹೇಳುತ್ತಾ ಇರುವುದಕಿಂತ ಬೋರ್ಡ ಹಾಕಿದರೆ ಮುಗಿಯಿತು. ಬೇಕಾದವರು ಓದಿಕೊಳ್ಳುತ್ತಾರೆ.  ಏನೆ ಆಗಲಿ ದೋಸೆ ಮಾತ್ರ ಸುಪರ್ ಆಗಿತ್ತು. ತುಪ್ಪ ಕೇಳಿ ತೆಗೆದುಕೊಂಡು ಚನ್ನಾಗಿ ತಿಂದೆವು.
ಸುಮಾರು ಎಂಟು ಗಂಟೆಯ ಹೊತ್ತಿಗೆ ಟಿಕೆಟ್ ತೆಗೆದುಕೊಂಡೆವು. ನಮಗೆ ಇಪ್ಪತೈದು ರೂಪಾಯಿ ಆದರೆ ಫಾರೆನರ್  ಅವರಿಗೆ ಮುನ್ನೂರು ರೂಪಾಯಿ. ಸ್ವಲ್ಪ ಅತಿ ಅನಿಸಿತು. ಎಲ್ಲಾ ಕಡೆ ಅವರಿಗೆ ಜಾಸ್ತಿನೆ. ಆದರೆ ಏಳು ಏಂಟು ಪಟ್ಟು ಜಾಸ್ತಿ ಇಡುವುದು ಅತಿ. ನಾವು ನಮ್ಮ ಟಿಕೆಟ್ ತೆಗೆದುಕೊಂಡು ಏಳು ಸುತ್ತಿನ ಕಲ್ಲಿನ ಗುಡ್ಡ ಹತ್ತಲು ಶುರು ಮಾಡಿದೆವು. ಅಲ್ಲಿ ಮ್ಯಾಪ್ ಹಾಕಿದ್ದರು. ಅದರ ಅನುಸಾರ ನೋಡುತ್ತಾ ಹೋದೆವು. ಮದ್ದು ಬಿಸುವ ಕಲ್ಲು, ಗಾರೆ ಬಿಸುವ ಕಲ್ಲು, ನೋಡಿದೆವು. ಕಲ್ಲಿನ ಮೆಟ್ಟಿಲು ಸುತ್ತಲು ಕಲ್ಲು ಬಂಡೆಗಳು. ಆದರು ಅಷ್ಟು ಕಷ್ಟ ಅಂತ ಅನಿಸಲಿಲ್ಲ.
ಇಲ್ಲಿ ನಮ್ಮೆಲ್ಲರಿಗೂ ಆಸಕ್ತಿ ಇರುವುದು ಒಬವ್ವನ ಕಿಂಡಿ. ನಾಗರಹಾವು ಸಿನಿಮಾದಲ್ಲಿ ತುಂಬಾ ಸೊಗಸಾಗಿ ತೋರಿಸಿದ ಕಾರಣವೋ, ಪುಸ್ತಕದಲ್ಲಿ ಓದಿದ ನೆನಪಿಗೆ ಬಹಳ ಉತ್ಸಾಹದಲ್ಲಿ ಹೋದೆವು. ಅಲ್ಲಿ ಎಲ್ಲಾ ಕಡೆ ನಾಮಫಲಕ ಹಾಕಿರುವ ಕಾರಣ ಗೈಡ್ ಏನು ಬೇಕಿಲ್ಲ. ಆದರು ಗೈಡ್ ತೆಗೆದುಕೊಳ್ಳುವುದು  ಅವರವರ ಆಸಕ್ತಿಗೆ ಬಿಟ್ಟಿದ್ದು.
ಅಲ್ಲಿ ಸ್ವಲ್ಪ ನೀರು ಹರಿಯುತ್ತಿತ್ತು. ಸ್ವಲ್ಪ ಮುಂದೆ ಓಬವ್ವನ ಕಿಂಡಿ. ಶತ್ರುಗಳು ನುಸುಳಿ ಬಂದು ಆಕೆ ಅವರನ್ನು ಸಾಯಿಸಿದ್ದು. ನಾವು ಅಲ್ಲಿ ಹೋಗಿ ಸ್ವಲ್ಪ ಪೋಟೋ ತೆಗೆದುಕೊಂಡು ಬಂದೆವು. ಬಂಡೆಯ ಮೇಲೆ ಕೆಲವರು ತಮ್ಮ ಹೆಸರು ಮತ್ತು ತಾವು ಪ್ರೀತಿಸುವವರ ಹೆಸರನ್ನು ಬರೆದಿದ್ದರು. ಬರೆಯಲು ಎಲ್ಲು ಪಟ್ಟಿ ಪೆನ್ನು ಸಿಗುವುದಿಲ್ಲವೇನೋ ಅನಿಸುವುದು.
ಆದದ ನಂತರ ಹಾಗೆ ಗುಡ್ಡ ಹತ್ತುತ್ತ ಕೆಲವು ದೇವಸ್ಥಾನಗಳು. ಪೂಜೆಗಳೆನು ನಡೆಯುತ್ತಿರಲಿಲ್ಲ. ಎಲ್ಲಾ ಕಲ್ಲಿನಲ್ಲಿ ಮಾಡಿರುವುದು. ಗುಡ್ಡದ ಮೇಲೆ ಹೋದ ಮೇಲೆ ಸುತ್ತಲಿನ ದೃಶ್ಯ ನೋಡಲು ತುಂಬಾ ಚನ್ನಾಗಿವೆ. ಸುತ್ತಲಿನ ಕಲ್ಲಿನ ಗುಡ್ಡ. ದೂರದಿಂದ ಕಾಣುವ ಗಾಳಿಯಂತ್ರ. ತುಂಬಾ ಸೊಗಸಾಗಿದೆ.
ಒಟ್ಟಿನಲ್ಲಿ ಒಮ್ಮೆ ದುರ್ಗದ ಕೋಟೆ ನೋಡುವಂತ ಜಾಗ.

Friday, January 24, 2020

ಚಳಿಗಾಲದ ಬೆಳಗು


                                            ಚಳಿಗಾಲದ ಬೆಳಗು 

ನಮ್ಮ ಮಲೆನಾದ ಚಳಿಗೆ ಮುಂಜಾನೆ ಏಳೊದೆಂದರೆ ಸ್ವಲ್ಪ ಆಳಸಿ. ಅದರಲ್ಲು ಬೆಳಿಗ್ಗೆ ಸ್ನಾನ ಮಾಡಿ ಶಾಲೆಗೆ ಹೋಗುವುದು ಇನ್ನು ಬೆಸರ. ಬೆಚ್ಚಗೆ ಕಟ್ಟಿಗೆ ಒಲೆಯ ಮುಂದೆ ಕುಳಿತು ಬೆಂಕಿ ಕಾಸಿದರೆ ಹಾ..ಹ..ಎನು ಹಿತ. ನಂತರ ಹಂಡೆಯಲ್ಲಿ ಇದ್ದ ಬಿಸಿ ಬಿಸಿ ನೀರಿನ ಸ್ನಾನ ಅಂತು ಇನ್ನು ಹಿತ.
ಸ್ನಾನ ಆದ ನಂತರ ಅಮ್ಮನ ಹತ್ತಿರ ಕುಳಿತು ಬಿಸಿ ಬಿಸಿ ತೆಳ್ಳೆವು ಅಂದರೆ ದೋಸೆ ತಿಂದರೆ ಇನ್ನು ಮಜ. ಇನ್ನು ಮುಂಜಾನೆಯಲ್ಲಿ ಶಾಲೆಗೆ ಹೋಗುವಾಗ ಇಬ್ಬನಿಯಲ್ಲಿ ನಾವೆ ದಾರಿ ಮಾಡುತ್ತಾ ಹುಲ್ಲುಗಳ ಮೇಲೆ ಇಬ್ಬನಿಯ ಜೊತೆ ಆಟ ಆಡುತ್ತಾ ಶಾಲೆಗೆ ಹೋಗಿ ಪ್ರಾರ್ಥನೆಗೆ ಬಿಸಿಲು ಕಾಯಿಸುತ್ತಾ ನಿಂತು ಚಳಿಗಾಲದ ಬೆಳಗನ್ನು ಸವಿಯುವುದರಲ್ಲಿ ಏನೋ ಹಿತ.