Thursday, September 5, 2019

ಅಥಿತಿ ದೇವೋ(ವ್ವ) ಭವ


                                           ಅಥಿತಿ ದೇವೋ(ವ್ವ) ಭವ

ಶಾಲಿನಿಯ ಇನ್ನೊಂದು ಹೆಸರೆ ಪ್ರೈಸ್ ಲಿಸ್ಟ್. ಯಾವಾಗಲು ಮಾತಾಡುವಾಗ ಎಲ್ಲದರ ಪ್ರೈಸ್ ಬಗ್ಗೆನೆ ಮಾತಾಡುವುದು. ತರಕಾರಿ ಎಷ್ಟು ದುಬಾರಿ ಆದರು ತರಕಾರಿ ಇಲ್ಲದೆ ಅಡುಗೆ ಮಾಡಲು ಆಗುವುದಿಲ್ಲ. ಏನ್ ಮಾಡ್ಬೇಕು ಅಂತ ತಿಳಿಯಲ್ಲ. ಊಟ ಮಾಡದೆ ಇರೋಕ್ ಆಗಲ್ಲ. ಹೀಗೆ ಯಾವಾಗಲು ಈ ವಿಷಯದ ಬಗ್ಗೆನೆ ಮಾತಾಡುತ್ತಿದ್ದಳು.
ಮನೆಗೆ ಹೋದರೆ ತುಂಬಾ ಆತ್ಮಿಯವಾಗಿ ಮಾತಾಡುವವಳು. ಆದರೆ ಟೀ ಕುಡಿಯುವಾಗ, “ಅಯ್ಯೊ, ಹಾಲಿನ ರೆಟ್ ಎಷ್ಟು ಜಾಸ್ತಿ ಆಗಿದೆ. ದಿನ ಎರಡು ಲೀಟರ್ ಹಾಲು ತಗೊಳ್ತಿನಿ. ಯಾರಾದ್ರು ಬಂದ್ರೆ ಎಕ್ಸಟ್ರಾ ಟೀ ಮಾಡ್ಬೇಕು. ಮರುದಿನ ಮಜ್ಜಿಗೆಗೆ ಮಾಡಲು ಹಾಲಿರಲ್ಲ”. ಅಂತ ನಿರಾಳವಾಗಿ ಹೇಳುವವಳು. ಅದು ಅವಳ ಸ್ವಾಭಾವಿಕ ಸ್ವಭಾವವೋ  ಏನೋ ಇನ್ನು ಯಾರಿಗು ಅರ್ಥ ಆಗಿಲ್ಲ.
ಮನೆಗೆ ನೆಂಟರು ಬಂದರೆ ಇಷ್ಟ. ಹರಟೆ ಹೊಡೆಯುವುದು ಮತ್ತು ಹೊಸ ಹೊಸ ರೀತಿಯ ತಿಂಡಿ ಮಾಡುವುದು ಅಂದರೆ ಬಹಳ ಪ್ರೀತಿ. ಆದರೆ ನೆಂಟರಲ್ಲಿ ಎರಡು ವಿಭಾಗಗಳು. ಅಮ್ಮನ ಮನೆಯ ಕಡೆ ನೆಂಟರು ಬಂದರೆ ಸುಮಾರಿಗೆ ಓ.ಕೆ..ಓ.ಕೆ. ಇನ್ನು ಗಂಡನ ಮನೆಯ ಕಡೆ ನೆಂಟರು ಬಂದರೆ ಆ ದೇವರೆ ಗತಿ.
ಒಮ್ಮೆ ಗಂಡನ ಮಾವನ ಮಗ ಬಂದ. ಅವನಿಗೆ ಬೆಂಗಳೂರಲ್ಲೆ ಕೆಲಸ ದೊರಕಿತು. ಕಂಪನಿ ಹತ್ತಿರ ಪಿ.ಜಿ. ಹುಡುಕುವ ತನಕ ಶಾಲಿನಿಯ ಮನೆಯೆ ಗತಿ ಆಯಿತು. ಹೇಳಿ-ಕೇಳಿ ಗಂಡನ ಕಡೆಯ ಸಂಭಂದಿ. ಅದು ಆತ ಬಂದಿರುವುದು ಎಪ್ರಿಲ್ ತಿಂಗಳಲ್ಲಿ. ಆಗ ತರಕಾರಿ ದರ ಸ್ವಲ್ಪ ದುಬಾರಿ. ಈ ಶಾಲಿನಿಯ ತಲೆ ಕೆಟ್ಟು ಚಿತ್ರಾನ್ನ ವಾಯಿತು. ಅದಕ್ಕಾಗಿ ಆತ ಹೋಗುವ ತನಕ ಒಂದು ಒಳ್ಳೆ ಉಪಾಯ ಹುಡಿದಳು. ಆತ ಹೋಗುವ ತನಕ ದಾಲ್, ಕಿಚಡಿ, ತಿಳಿ ಸಾರು….ಹೀಗೆ ಅವಳ ಮನೆ ಅಡಿಗೆ ಶುರುವಾಯಿತು. ಇದು ಬರಿ ತರಕಾರಿ ದುಬಾರಿ ಪ್ರಶ್ನೆ ಅಲ್ಲ. ಆತ ಇನ್ನು ಮುಂದೆ ಬೆಂಗಳೂರಲ್ಲೆ ಇರುತ್ತಾನೆ. ನಾನು ಚನ್ನಾಗಿ ಅಡುಗೆ ಮಾಡಿ ಹಾಕಿದರೆ ಪದೇ ಪದೇ ನಮ್ಮ ಮನೆಗೆ ಬರುವ ಸಂಭವ ಜಾಸ್ತಿ. ಆದ ಕಾರಣ ಆತನನ್ನು ಅಷ್ಟು ಚನ್ನಾಗಿ ವಿಚಾರಿಸಿಕೊಳ್ಳುತ್ತಿಲ್ಲ. ಇನ್ನು ಬೇರೆ ಊರು ಅಪರೂಪಕ್ಕೆ ಬಂದು ಹೋಗುವದಾದರೆ ಬೇರೆ ಪ್ರಶ್ನೆ ಎಂದು ಅವಳ ಅಗಾಧ ಬುದ್ದಿ ಮಟ್ಟವನ್ನು ಅವಳ ಗೆಳತಿಯರಲ್ಲಿ ಹೇಳಿಕೊಂಡಳು.


Tuesday, September 3, 2019

ಕುಂಕ್ರಿಯ ಶಾಪಿಂಗ್


                                           ಕುಂಕ್ರಿಯ ಶಾಪಿಂಗ್
ಈ ಸುಪರ್ ಮಾರ್ಕೆಟ್ ಬಂದ್ ಮೇಲೆ ಶಾಪಿಂಗ್ ಹೋಗೋದು ದೊಡ್ಡ ತಲೆನೋವೆ. ಬೇಕಾಗಿರೋದು ನಾಲ್ಕು ಐಟಮ್ ಆದರೆ ತೆಗೆದುಕೊಳ್ಳೊದು ಎಂಟ್ ಐಟಮ್. ಗಂಡನ ಜೇಬಿಗೆ ಕತ್ತರಿಯಂತು ಗ್ಯಾರಂಟಿ. ಅದು ಅಲ್ಲದೆ ಒಂದು ತೆಗೆದುಕೊಂಡರೆ ಒಂದು ಪ್ರೀ, ಡಿಸ್ಕೌಂಟ್ ಸೇಲ್, ಎಲ್ಲಾ ಕಣ್ಣಿಗೆ ಬಿದ್ದರೆ ಹೆಂಗಳೆಯರ ಮನಸ್ಸು ಆ ಕಡೆ ವಾಲುವುದರಲ್ಲಿ ಸಂಶಯವಿಲ್ಲ.
ಒಮ್ಮೆ ಕುಂಕ್ರಿ ಮತ್ತು ಕುಂಕ್ರಿಯ ಅಮ್ಮ  ಡಿ- ಮಾರ್ಟ ಗೆ ಹೊರಟರು. ಹೊರಡುವಾಗಲೆ ಕುಂಕ್ರಿಯ ಅಪ್ಪ ಹೇಳಿದರು, “ ಸುಮ್ಮನೆ ಇರೋದ್-ಬರೋದ್ ಎಲ್ಲಾ ನಿಮ್ಮ ತಳ್ಳೊ ಗಾಡಿಗೆ ತುಂಬಿಸ ಬೇಡಿ. ಡಿಸ್ಕೌಂಟ್, ಪ್ರೀ ಎಲ್ಲಾ ಮುನ್ನೂರ ಅರವತ್ತು ದಿನವು ಇರುತ್ತದೆ. ಬೇಕಾಗಿದ್ದು ತನ್ನಿ ಆಮೇಲೆ ಮನೆ ಶಿಫ್ಟ ಮಾಡ್ಬೇಕಿದ್ರೆ ಒದ್ದಾಡೋದು ಬೇಡ” ಅಂತ ಹೇಳಿದರು. ಇದು ಕುಂಕ್ರಿಯ ಅಮ್ಮನಿಗೆ ಮಾಮುಲ್ ಆಗಿತ್ತು. ಸರಿ ಅಂತ ಹೇಳಿ  ಕುಂಕ್ರಿ ಮತ್ತು  ಅಮ್ಮ  ಡಿ-ಮಾರ್ಟಗೆ ಬಂದರು. ಯಥಾ ಪ್ರಕಾರ ತಳ್ಳೊ ಗಾಡಿ ತಗೆದುಕೊಂಡು ಒಂದು ರೌಂಡ್ ಹಾಕಿದ್ದೆ ಎಲ್ಲಿ ನೋಡಿದರು ಡಿಸ್ಕೌಂಟ್ ಸೇಲ್ ಮತ್ತು ಕಣ್ಣಿಗೆ ಕುಕ್ಕುವಂತ ಕಿಚನ್ ಐಟಮ್ ಗಳು. ಬೇಡ-ಬೇಡವೆಂದರು ಗಾಡಿಗೆ ಕೆಲವು ಐಟಮ್ ಗಳು ಬಿದ್ದವು.
ಕುಂಕ್ರಿ ತನ್ನ ಪಾಡಿಗೆ ಯಾವುದೊ ಪೆನ್ನು,ಕಲರ್ ಪೆನ್ಸಿಲ್ ನೋಡುವುದರಲ್ಲಿ ಇದ್ದಳು. ಎಲ್ಲಾ ಐಟಮ್ ತೆಗೆದುಕೊಂಡು ಬಿಲ್ಲಿಂಗ್ ಕೌಂಟರ್ ಗೆ ಬಂದಾಗ ಕುಂಕ್ರಿ ಅಮ್ಮ ತೆಗೆದುಕೊಂಡ ಬಕೆಟ್ ಕೆಲವು ಡಬ್ಬಗಳನ್ನು ನೋಡಿದಳು. ಆಗ ಅಮ್ಮನಲ್ಲಿ ಪ್ರಶ್ನಿಸಿದಳು, “ಯಾಕಮ್ಮ ನಮ್ಮನೆಲಿ ಬಕೆಟ್ ಮತ್ತು ಡಬ್ಬಗಳೆಲ್ಲ ಇವೆ. ಆದ್ರು ಯಾಕೆ ತಗೊಂಡೆ” ಅಂತ ಕೇಳಿದಳು. ಆಗ ಅಮ್ಮ, “ಸುಮ್ಮನಿರು ನಿಮ್ಮ ಅಪ್ಪನ ತರನೆ ಆಡಬೇಡ. ಬಕೆಟ್ ಎಲ್ಲಾ ಕಳೆತಾಗಿವೆ. ಇನ್ನು ಡಬ್ಬಗಳು ಗೌರಿ ಹಬ್ಬದ ಸಮಯದಲ್ಲಿ ಎಷ್ಟೇಲ್ಲಾ ತಿಂಡಿ ಮಾಡ್ತೀವಿ. ಆಗ  ಎಷ್ಟಿದ್ದರು ಡಬ್ಬಗಳು ಬೇಕೆ ಬೇಕು. ಅದು ಅಲ್ಲದೆ ಒಳ್ಳೆ ಸೇಲ್ ಇದೆ. ನೀನು ಸುಮ್ಮನಿರು. ಇದೆಲ್ಲಾ ನಿನ್ನ ಅಪ್ಪ ನ ಹತ್ತಿರ ಹೇಳೊಕ್ ಹೋಗ್ಬೇಡ” ಅಂತ ಹೇಳಿದರು. ಆಗ ಕುಂಕ್ರಿ ಅಮ್ಮನನ್ನೆ ಪ್ರಶ್ನಿಸಿದಳು, “ಎನಮ್ಮ ನನ್ನ ಹತ್ತಿರ ಹೈಡ್ ಮಾಡಬೇಡ ಏನಿದ್ದರು ಅಪ್ಪ-ಅಮ್ಮನ ಹತ್ತಿರ ಹೇಳು ಅಂತ ಹೇಳ್ತಿಯಾ? ಈಗ ನೀನೆ ನನ್ನ ಹತ್ತಿರ ಅಪ್ಪನ ಹತ್ತಿರ ಹೇಳಬೇಡ ಅಂತ ಹೇಳ್ತಿಯಾ? ಇದು ಸರಿನಾ? ನೀನು ಯಾವಾಗಲು  ಅಪ್ಪ ಹೇಳಿದ್ದನ್ನು ಕೇಳು ಅಂತ ಹೇಳಿ ನೀನೆ ಅಪ್ಪ ಹೇಳಿದ್ದು ಕೇಳದೆ ಎಲ್ಲಾ ತಗೊಳ್ತಾ ಇದೀಯಾ?” ಅಂತ ಹೇಳಿದಳು. ಮಗಳ ಮಾತಿಗೆ ಕುಂಕ್ರಿಯ ಅಮ್ಮ ಪೆಚ್ಚಾದಳು. ಮಕ್ಕಳಿಗೆ ಅಡ್ವೈಸ್ ಮಾಡೋದು ಸುಲಭ ಆದರೆ ನಾವ್ ಪಾಲಿಸೋದು ಕಷ್ಟ ಅಂತ ಅಂದುಕೊಂಡಳು. ಅವಳು ಯೋಚಿಸುತ್ತಿರವಾಗ ಕುಂಕ್ರಿ  ಗಾಡಿಯಲ್ಲಿ ಇದ್ದ ಬಕೆಟ್ ಮತ್ತು ಡಬ್ಬಗಳನ್ನೆಲ್ಲ ಅಲ್ಲೆ ಆಚೆ ತೆಗೆದಿಟ್ಟು ಬಂದಳು. ಹಾಗೆ ಬಿಲ್ ಕೌಂಟರ್ ಗೆ ಬಂದು ಹೇಳಿದಳು,” ಅಮ್ಮ ಅಪ್ಪ ಹೇಳಿದ ಹಾಗೆ ಬೇಕಾಗಿದ್ದಷ್ಟೆ ಇದೆ. ಈ ಸೇಲ್ ಯಾವಾಗಲು ಇರತ್ತೆ. ನಾನು ಸ್ಕೂಲ್ ಗೆ ಹೋಗುವಾಗ ಯಾವಾಗಲು ಬೋರ್ಡ್ ನೋಡ್ತಾ ಇರ್ತೀನಿ. ಬೇಕಾದಾಗ  ಪುನಃ ಇಲ್ಲಿಗೆ ಬಂದರಾಯಿತು” ಅಂತ ಹೇಳಿದಳು. ಕುಂಕ್ರಿಯ ಮಾತಿಗೆ ಮರು ಮಾತಾಡದೆ ತೆಪ್ಪಗೆ ಬಿಲ್ ಮಾಡಿಸಿದಳು ಕುಂಕ್ರಿಯ ಅಮ್ಮ.


Thursday, August 29, 2019

ಕುಂಕ್ರಿಯ ಅಡುಗೆ


                                         ಕುಂಕ್ರಿಯ ಅಡುಗೆ
ಕುತ್ತಲ್ಲಿ ಕೂರದೆ ಇರೋ ಕುಂಕ್ರಿಗೆ ಶಾಲೆ ಇಲ್ಲದೆ ಇದ್ದಾಗ ಅವಳ ಅಮ್ಮನಿಗೆ ಅವಳನ್ನು ಸಂಭಾಳಿಸುವುದು ಬಹಳ ಕಷ್ಟದ ಕೆಲಸವೆ ಆಗಿತ್ತು. ಏನಾದರು ಮಾಡ್ತಾನೆ ಇರ್ಬೇಕು ಇವಳಿಗೆ. ಒಂದು ರವಿವಾರ ಕುಂಕ್ರಿಗೆ ಅಮ್ಮನ ಜೊತೆ ಅಡಿಗೆ ಮಾಡುವ ಆಸೆ ಶುರು ಆಯಿತು. ಅವಳು ಅಡಿಗೆ ಮನೆಗೆ ಬಂದರೆ ಏನು ಕೆಲಸ ಆಗದು ಎಂದು ಅಮ್ಮನ ತಕರಾರು. ಅದು ಅಲ್ಲದೆ ಏನಾದರು ಕೈ ಕೊರೆದುಕೊಂಡು ಏನಾದರು ಹೆಚ್ಚು ಕಮ್ಮಿ ಆದ್ರೆ ಅನ್ನೊ ಹೆದರಿಕೆ ಕುಂಕ್ರಿಯ ತಾಯಿಗೆ. ಆದರೆ ಈ ರವಿವಾರ ತನ್ನದೆ ಅಡಿಗೆ ಎಂದು ಹಠ ಹಿಡಿದಳು. ಅಮ್ಮ ಕುಂಕ್ರಿಗೆ ಎಷ್ಟೆ ಸಮಜಾಯಿಸಿದರು ಅವಳು ತನ್ನ ಹಠ ಬಿಡಲಿಲ್ಲ. ಆಗ ಹಾಲ್ ನಲ್ಲಿ ಪೇಪರ್ ಓದುತ್ತ ಕುಳಿತಿರುವ ಕುಂಕ್ರಿಯ ಅಪ್ಪ ಅಡಿಗೆ ಮನೆಗೆ ಬಂದು ಒಂದು ನಿರ್ಧಾರ ಮಾಡಿದರು. ಕುಂಕ್ರಿಯು  ಏನು ಚಿಕ್ಕ ಮಗು ಅಲ್ಲ. ಅವಳು ಒಂದೊಂದೆ ಕೆಲಸ ಕಲಿಯಲಿ. ಒಬ್ಬಳೆ ಮಗಳು ಎಂದು ಮನೆ ಕೆಲಸ  ಕಲಿಯದೆ ಇದ್ದರೆ ಮುಂದೆ ಅವಳಿಗೆ ತೊಂದರೆ ಎಂದು ಹೇಳಿದರು. ಅಪ್ಪ ನ ಮಾತಿಗೆ ಕುಂಕ್ರಿಗೆ ಖುಶಿ ಆಯಿತು. ಕುಂಕ್ರಿಯ ಅಮ್ಮನಿಗೂ ಹೌದು ಎನಿಸಿ ಮಗಳಿಗೆ ಹೇಳಿದಳು, “ಏನಾದರು ಬೇಕಿದ್ದರೆ ನನ್ನನ್ನು ಕರೆ. ನಾನು ಇವತ್ತು ಬೇರೆ ಕೆಲಸ ಮಾಡಿಕೊಳ್ಳುವೆ” ಎಂದಳು. ಕುಂಕ್ರಿಯು ಇದಕ್ಕೆ ತಲೆಯಾಡಿಸಿ “ಏನಾದರು ಬೇಕಿದ್ದರೆ ನಾನೆ ಕರೆಯುವೆ ನೀವು ಮದ್ಯ ಬಂದು ತೊಂದರೆ ಕೊಡಬೇಡಿ ಹಾಗು ತನ್ನ ಅಡುಗೆ ಮಗಿದ ಮೇಲೆ ನಾನೆ ಟೇಬಲ್ ಮೇಲೆ ತರುವೆ ನೀವು ಬರಬೇಡಿ” ಎಂದು ಹೇಳಿದ್ದಳು.  ಅಮ್ಮನ ಜೊತೆ ಯಾವಾಗಲು ಅಡಿಗೆ ಮನೆಯಲ್ಲಿ ಅವಳ ಹಿಂದೆ ಇರುವ ಕುಂಕ್ರಿಗೆ ಸುಮಾರಾಗಿ ಅಡುಗೆಗ ಮಾಹಿತಿ ಇತ್ತು. ತನ್ನ ಪ್ರೀತಿಯ ವೆಜಿಟೆಬಲ್ ಪಲಾವ್ ಮಾಡಲು ಅಣಿ ಮಾಡಿದಳು. ಒಂದೊಂದೆ ತರಕಾರಿಯನ್ನು ಹೆಚ್ಚಿದಳು. ತನ್ನದೆ ಆದ ರೀತಿಯಲ್ಲಿ ಮಸಾಲೆ ಹಾಕಿದಳು. ಅಂತು ಕುಕ್ಕರಿನಲ್ಲಿ ಪಲಾವ್ ಮಾಡಲು ಇಟ್ಟಳು. ಮೊದಲೆ ಅವಳು ಹೇಳಿದಂತೆ ಅಡುಗೆ ಆಗುವ ತನಕ ಅಲ್ಲಿ ಯಾರು ಬರಲಿಲ್ಲ. ಕುಂಕ್ರಿಯೆ ಟೇಬಲ್ ಮೇಲೆ ಕುಕ್ಕರ್ ತಂದಿಟ್ಟಳು. ಪ್ಲೇಟ್ ಹಾಕಿ ಅಪ್ಪ-ಅಮ್ಮನನ್ನು ಕರೆದಳು. ಕುಕ್ಕರ್ ಮುಚ್ಚಲ ತೆಗೆದಾಗ ಅನ್ನ ಎಲ್ಲ ಚನ್ನಾಗೆ ಬೆಂದಿತ್ತು. ಒಳ್ಳೆ ಘಮವು ಬರುತ್ತಿತ್ತು. ಅಪ್ಪ-ಅಮ್ಮನಿಗೆ ಉತ್ಸಾಹದಲ್ಲಿ ಬಡಿಸಿದಳು. ವೆಜಿಟೆಬಲ್ ಪಲಾವ್ ತುಂಬಾ ಚನ್ನಾಗಿ ಇತ್ತು. ಮಸಾಲೆ ಅದ್ಬುತವಾಗಿತ್ತು. ಅಮ್ಮ ಕೇಳಿದಳು,” ಕುಂಕ್ರಿ ಮಸಾಲೆಗೆ ಏನೇನ್ ಹಾಕಿದ್ದಿಯಾ ಮುಂದಿನ ಸಲ ನೀನೆ ಮಸಾಲೆ ಮಾಡು ಅಂತ. ಅದಕ್ಕೆ ಕುಂಕ್ರಿಯಲ್ಲಿ ಉತ್ತರ, “ಅಮ್ಮಾ ಅಡಿಗೆ ಮನೆಯಲ್ಲಿ ಏನೇನ್ ಮಸಾಲಾ ಡಬ್ಬದಲ್ಲಿ ಇದಿಯೋ ಅದೆಲ್ಲ ಸ್ವಲ್ಪ-ಸ್ವಲ್ಪ ಹಾಕಿದ್ದೀನಿ. ಈಗ್ ಕೇಳಿದರೆ ನನಗೆ ಹೇಳಲು ಬರಲ್ಲ” ಅಂದಳು. ಮಗಳ ಮಾತಿಗೆ ಅಪ್ಪ-ಅಮ್ಮನಿಗೆ ನಗು ಬಂದಿತು. ಎಲ್ಲ ಪಲಾವ್ ತಿಂದು ಅಡುಗೆ ಮನೆಗೆ ಹೋದರೆ ಎಲ್ಲಾ ಚಲ್ಲಾ-ಪಿಲ್ಲಿ ಆಗಿತ್ತು. ಗೊಡಂಬಿ ಡಬ್ಬ ಮತ್ತು ತುಪ್ಪ ಖಾಲಿ ಆಗಿತ್ತು.

Sunday, August 25, 2019

ನೀವೆ ಹೇಳಿ


                                            ನೀವೆ ಹೇಳಿ
ನಾನು ಸ್ವಲ್ಪ  ಮದ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಅಪ್ಪ ಒಳ್ಳೆ ಉದ್ಯೊಗದಲ್ಲಿ ಇದ್ದರು. ಅಮ್ಮ ಸ್ಕೊಲ್ ನಲ್ಲಿ ಟೀಚರ್ ಆಗಿದ್ದರು. ನಾನು ಮತ್ತು ಅಕ್ಕ ನಮ್ಮದೆ ಒಂದು ಪ್ರಪಂಚವಾಗಿತ್ತು.
ಮೊದಲಿನಿಂದಲು ನಾನು ಮತ್ತು ಅಕ್ಕ ಓದಿನಲ್ಲಿ ಮುಂದು. ಅದಕ್ಕೆ ಕಾರಣ ನಮ್ಮ ಅಮ್ಮ. ಅಮ್ಮ ಯಾವಗಲು ವಿದ್ಯಾಬ್ಯಾಸಕ್ಕೆ ತುಂಬಾ ಬೆಲೆ ಕೊಡುತ್ತಿದ್ದರು. ವಿದ್ಯೆ ಯಾರು ಕದಿಯಲು ಆಗದ ಆಸ್ತಿ ಎಂದು ಯಾವಾಗಲು ಹೇಳುತ್ತಿದ್ದರು. ಅದು ನಿಜವೆ. ಆದರೆ ಕೆಲವೊಮ್ಮೆ ಅಮೃತವು ವಿಷ ಆದಂತೆ ಅಮ್ಮ ನಮ್ಮನ್ನು ಪುಸ್ತಕದ ಹುಳವನ್ನಾಗಿ ಮಾಡಿ ಬಿಟ್ಟಿದ್ದರು. ಬೇರೆ ಪ್ರಪಂಚವೆ ನಮಗೆ ತಿಳಿದಿರಲಿಲ್ಲ.  ಸ್ಕೂಲ್ ನಲ್ಲಿ ನನ್ನ ವಾರಗೆಯವರು ಟಿ.ವಿ ಯಲ್ಲಿ ಬಂದ ಕೆಲವು ಕಾರ್ಯಕ್ರಮದ ಬಗ್ಗೆ ಮಾತಾಡುತ್ತಿದ್ದರೆ ನನಗೆ ಅದರ ಗಂಧ ಗಾಳಿಯು ಇಲ್ಲದೆ ತೆಪ್ಪಗೆ ಕುಳಿತಿರುತ್ತಿದ್ದೆ. ಇನ್ನು ಹೊಸದಾಗಿ ಬಂದ ಸಿನಿಮಾಗಳ ಬಗ್ಗೆ ಪೇಪರ್ ನಲ್ಲಿ ಓದುವ ಮತ್ತು ಪೋಟೋ ನೋಡುವ ಭಾಗ್ಯವೆ ಹೊರತು ನೋಡುವ ಭಾಗ್ಯ ಇರಲಿಲ್ಲ. ಒಂದು ದಿನವು ನಮ್ಮನ್ನು ಸಿನಿಮಾಕ್ಕೆ ಕರೆದುಕೊಂಡು ಹೊಗಿರಲಿಲ್ಲ.
ಇನ್ನು ಕಾಲೇಜ್ ನಲ್ಲಿ ಎಲ್ಲಾ ಹೊಟೆಲ್, ಕಾಫಿ ಡೇ ಅಂತ ಹೋದ್ರೆ ನಾನು ಮತ್ತು ಅಕ್ಕ ಯಾವಗಲು ಆ ಕಡೆ ತಲೆ ಹಾಕಿಲ್ಲ. ನಾವು ಪ್ರೇಂಡ್ಸ್ ಜೊತೆ ಆಚೆ ಹೋಗೊದು ಇರಲಿ ಅಪ್ಪ-ಅಮ್ಮನ  ಜೊತೆ ಆಚೆ ತಿನ್ನಲು ಹೋಗಿದ್ದಿಲ್ಲ. ನಮಗೆ ಹೊಟೆಲ್ ನಲ್ಲಿ ಸಿಗುವ ಕೆಲವು ತಿಂಡಿಗಳ ಹೆಸರೆ ಗೊತ್ತಿರಲಿಲ್ಲ. ಇಗಿನ ಕಾಲದಲ್ಲಿ ನಮ್ಮಂತವರು ಇರುವುದು ವಿರಳದಲ್ಲೆ ವಿರಳ ಅನ್ನಬಹುದು. ಕೇಳಿದವರಿಗು ಆಶ್ಚರ್ಯವಾಗಬಹುದು.
ನಮ್ಮ ಹುಟ್ಟು ಹಬ್ಬದ ದಿನ ಕೊಬ್ಬರಿ ಮಿಟಾಯಿ, ಕೆಸರಿ ಬಾತ್ ಮಾಡುತ್ತಿದ್ದರು. ನಮ್ಮ ಅಕ್ಕ-ಪಕ್ಕದಲ್ಲಿದ್ದ ಗೆಳೆಯರನ್ನು ಕರೆಯುತ್ತಿದ್ದೆವು. ಚಿಕ್ಕ ವಯಸ್ಸಿನಲ್ಲಿ ತುಂಬಾ ಖುಶಿ ಆಗುತ್ತಿತ್ತು. ಆಗ  ನಮಗೆ ಏನು ಅನಿಸುತ್ತಿರಲಿಲ್ಲ. ಕ್ರಮೇಣ ಹೈಸ್ಕೂಲ್ ಲೆವಲ್ ಗೆ ಬಂದ ಮೇಲೆ ಸ್ವಲ್ಪ ಇರಿಸು-ಮುರಿಸು ಆಗುತ್ತಿತ್ತು. ಬೇರೆಯವರ ಮನೆಯಲ್ಲಿ ಹೊಸ-ಹೊಸ ತಿಂಡಿಗಳಾದ  ಫಿಂಗರ್ ಚಿಪ್ಸ್, ಬರ್ಗರ್, ಮಾಡುತ್ತಿದ್ದರು. ಕೇಕ್ ತರುತ್ತಿದ್ದರು. ಆದರೆ ಅಮ್ಮ ಇದಕ್ಕೆಲ್ಲ ವಿರುದ್ದವಾಗಿದ್ದರು. ಸಂಪ್ರಧಾಯವಾಗಿ ಎಣ್ಣೆ ನೀರು, ದೇವಸ್ಥಾನ ಅಂತ ನಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು. ನಮ್ಮ ಆಸೆಯನ್ನು ಕೇಳಿದವರೆ ಅಲ್ಲ. ಆದರೆ ಅವರ ದೃಷ್ಟಿಯಲ್ಲಿ ನಮ್ಮನ್ನು ಚನ್ನಾಗಿಯೆ ಬೆಳೆಸಿದ್ದಾರೆ.
ಇನ್ನು ಅಪ್ಪ ಒಳ್ಳೆಯ ಕೆಲಸದಲ್ಲಿ ಇದ್ದರು. ನಮ್ಮ ಮನೆಯ ವ್ಯವಹಾರ ಅಮ್ಮನೆ ನೋಡಿಕೊಳ್ಳುವದಾಗಿತ್ತು. ಹತ್ತು ರೂಪಾಯಿಯಲ್ಲಿ ಎಂಟು ರೂಪಾಯಿ ಉಳಿಸುವ ಬುದ್ದಿ ಅವರದಾಗಿತ್ತು. ಅಪ್ಪ ನ ಆಸೆ ಏನಿತ್ತೊ ಗೊತ್ತಿಲ್ಲ ಆದರೆ ಅಮ್ಮ ಹೇಳಿದ ಹಾಗೆ ನಡೆಯುತ್ತಿತ್ತು. ಅವರು ಯಾವಾಗಲು ಕೈ ಬಿಚ್ಚಿ ಖರ್ಚು ಮಾಡಿದ್ದು ನೋಡಿಲ್ಲ. ಅವರ ವಯಕ್ತಿಕ ಆಸೆಯನ್ನು ಯಾವಾಗಲು ಹೊರ ಹಾಕಿಲ್ಲ.
ಅಮ್ಮ ನಮ್ಮ ಓದಿಗೆ ಮಾತ್ರ ಯಾವ ಒತ್ತಾಯವನ್ನು ಮಾಡಿರಲಿಲ್ಲ. ನಮಗೆ ಬೇಕಾದ ವಿಷಯ ಆರಿಸಿಕೊಳ್ಳುವ ಸ್ವಾತಂತ್ರ ನೀಡಿದ್ದರು. ಆ ಕಾರಣದಿಂದಲೆ ನಾನು ಇಂಜಿನಿಯರಿಂಗ್ ಓದಿದೆ. ಚನ್ನಾಗಿ ಓದಿದೆ. ಮನೆಯಲಲ್ಲು ಅಪ್ಪ-ಅಮ್ಮ ಒಳ್ಳೆ ಬೆಂಬಲ ದೊರಕಿತು. ಅಪ್ಪ ಅಮ್ಮ ಓದು ಮತ್ತು ಪುಸ್ತಕ ಕೊಡಿಸುವ ವಿಷಯದಲ್ಲಿ ಯಾವಾಗಲು ಚಕಾರ ಎತ್ತಿದವರಲ್ಲ. ಓದೆ ನನ್ನ ಪ್ರಪಂಚವಾದ ಕಾರಣ ಒಳ್ಳೆ ಅಂಕ ಪಡೆದು ಇಂಜಿನಿಯರ್ ಆದೆ. ಕ್ಯಾಂಪಸ್ ನಲ್ಲಿ ಒಳ್ಳೆ ಉದ್ಯೋಗ ದೊರಕಿತು. ಬೆಂಗಳೂರಿನಿಂದ ಮುಂಬೈ ನಲ್ಲಿ ಉದ್ಯೋಗ ದೊರಕಿತು. ಮೊದಲ ಬಾರಿ ಅಪ್ಪ-ಅಮ್ಮ ನ ಬಿಟ್ಟು ಮನೆಯಿಂದ ಆಚೆ ಹೋದೆ. ಹೊಸ ಊರು, ಕೈನಲ್ಲಿ ಒಳ್ಳೆ ಉದ್ಯೊಗ, ಒಳ್ಳೆ ಸಂಬಳ ಅದಕ್ಕು ಮಿಗಿಲಾಗಿ ಯಾವಾಗಲು ಸಿಗದೆ ಇರೋ ಸ್ವತಂತ್ರ.
ಯಾವಾಗಲು ಎರಡು ಪ್ಯಾಂಟ್-ಶರ್ಟ ಇದ್ದ ನನಗೆ ನನ್ನ ಕೈ ಗೆ  ದುಡ್ಡು ಬಂದ ತಕ್ಷಣ ಕಣ್ಣಿಗೆ ಕಂಡ ಬಟ್ಟೆಗಳನ್ನು ತೆಗೆದುಕೊಂಡೆ. ಮುಂಬೈ ನ ಎಲ್ಲಾ ತರಹದ ತಿಂಡಿಗಳನ್ನು ತಿಂದೆ. ಚನ್ನಾಗಿ ವಾರಾಂತ್ಯ ಸುತ್ತುತ್ತಿದ್ದೆ. ಒಳ್ಳೆ ಸಂಸ್ಕಾರ ನೀಡಿದ ಕಾರಣ ನನಗೆ ಯಾವ ವ್ಯಸನಗಳು ಮೈಗಂಟಿಕೊಂಡಿಲ್ಲ. ಮನೆಯಿಂದ ಬರುವಾಗ ಅಮ್ಮ ಹೇಳಿದ ಮಾತು, “ ನಿನ್ನ ಸಂಬಳ ನಮಗೆ ಕೊಡೋದು ಬೇಡ. ಚನ್ನಾಗಿ ಉಳಿಸು” ಅಂದಿದ್ದರು. ಆದರೆ ನಾನು ಅಷ್ಟಾಗಿ ಉಳಿಸುವ ಜಾಯ ಮಾನದವನಾಗಿರಲಿಲ್ಲ. ಮೊದಲಿನಿಂದಲು ಇದೇ ವಾತಾವರಣದಲ್ಲೆ ಬೆಳೆದ ನನಗೆ ಕೈ ಬಿಚ್ಚಿ ಖರ್ಚು ಮಾಡಬೇಕು ಜೀವನವನ್ನು ಬಿಂದಾಸ್ ಆಗಿ ಕಳೆಯಬೇಕು ಅನ್ನೊ ಆಸೆ ಇತ್ತು.  ಯಾವ ಜಂಜಾಟವನ್ನು ಹಚ್ಚಿಕೊಳ್ಳದೆ ಒಬ್ಬನೆ ಬದುಕುವ ಆಸೆ ಹೊಂದಿರುವೆ.
ಈಗ ನನ್ನ ಈಗಿನ ಪ್ರಶ್ನೆ  ಅಮ್ಮನ ಒಂದೆ ಒತ್ತಾಯ ನನ್ನ ಮದುವೆ ಆಗು ಎಂದು. ಆದರೆ ನನಗೆ ಸುತಾರಾಃ ಇಷ್ಟ ಇಲ್ಲ. ಯಾಕೆ ಅಂತ ಅಮ್ಮನ ಬಳಿ ಹೇಳುವ ಹಾಗೆ ಇಲ್ಲ. ಅಪ್ಪ-ಅಮ್ಮನಿಗೆ ಅವರು ನಮ್ಮನ್ನು ಚನ್ನಾಗಿ ಬೆಳೆಸಿದ್ದಾರೆ ಎಂದು. ಆದರೆ ಅಮ್ಮ ನಮ್ಮ ಮನಸ್ಸಿನ ಆಸೆ ಅರ್ಥ ಮಾಡಿಕೊಂಡಿಲ್ಲ ಎಂದು. ಆದರೆ ನನಗೆ ಒಳ್ಳೆ ವಿದ್ಯೆ ಕೊಡಿಸಿದ ಕಾರಣ ಇವತ್ತು ಕೈ ತುಂಬಾ ಸಂಬಳ ಎಣಿಸುತ್ತಿದ್ದೆನೆ. ಅಪ್ಪ-ಅಮ್ಮ ನನ್ನ ಭವಿಷ್ಯಕ್ಕೆ ಮೋಸ ಮಾಡಿಲ್ಲ. ಆದರು ಎನೋ ಒಂದು ಅಸಮಾಧಾನ. ಇಷ್ಟು ಮಾಡಿದ ಅಪ್ಪ-ಅಮ್ಮ ನ ಮೇಲೆ ನನಗೆ ಏನೋ ಅಸಮಾಧಾನ ಆಗಿರುವಾಗ ಮುಂದೆ ನನ್ನ ಮಕ್ಕಳಿಗೂ ನಾನು ನನ್ನದೆ ದೃಷ್ಟಿಯಲ್ಲಿ ಬೆಳೆಸಿ ಅವರ ಆಸೆ ಏನು ಅಂತ ಅರ್ಥ ಮಾಡಿಕೊಳ್ಳದೆ ಅವರು ನನ್ನ ಮೇಲೆ ಇದೆ ಭಾವನೆ ಬೆಳೆಸಿಕೊಂಡರೆ?  ಕಟ್ಟಿಕೊಂಡ ಹೆಂಡತಿಹೆ ಇನ್ನೆನೋ ಆಸೆ ಇದ್ದು ಇನ್ನು ಅವಳ ಜೊತೆ ಹೊಂದಾಣಿಕೆ ಆಗದೆ ಇದ್ದರೆ? ಯಾಕೋ ಸ್ವತಂತ್ರ ಜೀವನ ನಡೆಸಬೇಕು ಅನ್ನೊ ಆಸೆ ನನ್ನದು. ಇದನ್ನು ಅಪ್ಪ-ಅಮ್ಮ ನ ಹತ್ತಿರ ಹೇಳಿಕೊಳ್ಳದೆ ಒದ್ದಾಡುತ್ತಿರುವೆ. ಆದರೆ ದಿನ ಅಮ್ಮ ನ ಪೋನ್ ನನ್ನ ಮದುವೆ ವಿಚಾರವಾಗಿ. ಎಷ್ಟು ದಿನ ಅಂತ ಮುಂದುಡಲಿ ಎಂದು ತಿಳಿಯುತ್ತಿಲ್ಲ.
(ಇದು ಒಂದು ನಿಜವಾದ ಕಥೆ. ನಮ್ಮ ಮನೆ ಪಕ್ಕದಲ್ಲಿ ಲಖನೌ ದವರು ಇದ್ದಾರೆ. ಇದು ಅವರ ಮನೆ ಕಥೆ. ಅವರು (ಹುಡುಗನ ಅಕ್ಕ) ಹೇಳಿದ ಕಥೆಯನ್ನು ನಾನು ನನ್ನದೆ ಶೈಲಿಯಲ್ಲಿ ಬರೆದಿರುವೆ. ನಿರೂಪಣೆ ಮಾಡುವುದರಲ್ಲಿ ಸ್ವಲ್ಪ ಕಷ್ಟ ಆಯಿತು. ಆದರು ಪ್ರಯತ್ನ ಪಟ್ಟಿರುವೆ.)

Friday, August 16, 2019

ಗೂಗಲ್ ಅಣ್ಣ ಮತ್ತು ಯು ಟ್ಯೂಬ್ ಅಕ್ಕ


                                   ಗೂಗಲ್ ಅಣ್ಣ ಮತ್ತು ಯು ಟ್ಯೂಬ್ ಅಕ್ಕ

ಅಪ್ಪ ನಮ್ಮನ್ನ ಪ್ರವಾಸಕ್ಕೆಂದು ವರ್ಷಕ್ಕೊಮ್ಮೆ ಕರೆದುಕೊಂಡು ಹೋಗ್ತಾ ಇದ್ರು. ನನ್ನ ನೆನಪಿನ ಪ್ರಕಾರ ಒಮ್ಮೆ ತಮಿಳುನಾಡಿನ ಯಾವುದೊ ದೇವಸ್ಥಾನಕ್ಕೆ ಹೋಗಿದ್ವಿ. ಅಲ್ಲಿಂದ ನಾವು ಅಲ್ಲೆ ಹತ್ತಿರ ಯಾವುದಾದರು ಹೋಟೆಲ್ ನಲ್ಲಿ ರೂಮ್ ಮಾಡಬೇಕಿತ್ತು. ನಮ್ಗೊ ತಮಿಳು ಬರಲ್ಲ, ಅಲ್ಲಿ ತಮಿಳು ಬಿಟ್ಟು ಬೇರೆ ಭಾಷೆ ಅಷ್ಟಾಗಿ ಬರಲ್ಲ. ಒಳ್ಳೆ ಮೂಖರ ಸಹವಾಸ ಆದಂತೆ ಆಯಿತು. ಒಟ್ಟಿನಲ್ಲಿ ಕೈ ಸನ್ನೆ ಮೂಖ ಬಾಷೆಯಲ್ಲಿ ನಮ್ಮ ತಮಿಳು ನಾಡಿನ ಪ್ರವಾಸ ಮುಗಿಸಿದ್ವಿ. ನನಗೆ ಇಂದು ಈ ವಿಷಯ ನೆನಪಿಗೆ ಬಂದಿದ್ದು ಗೂಗಲ್ ಮ್ಯಾಪ್ ನಿಂದ. ನೀವು ಈಗ ಎಲ್ಲೆ ಹೋಗಿ ಗೂಗಲ್ ಮ್ಯಾಪ್ ನಮ್ಮನ್ನು ಗೈಡ್ ಮಾಡುತ್ತದೆ. ಹತ್ತಿರದ ದಾರಿ, ಹೋಟೆಲ್, ಎಲ್ಲವನ್ನು ಗೂಗಲ್ ಅಣ್ಣ ನಮಗೆ ಗೈಡ್ ಮಾಡುತ್ತ ಹೋಗುತ್ತಾನೆ. ಈ ಗೂಗಲ್ ಅಣ್ಣ ಬಂದ ಕಾರಣ ನಾವು ಯಾವ ಊರಿಗೆ ಹೋದರು ಭಾಷೆಯ ಸಮಸ್ಯೆ ಬರುವುದಿಲ್ಲ. ಗೂಗಲ ಮ್ಯಾಪ್ ಹಾಕಿ ಊರು ಸುತ್ತಿ ಬರಬಹುದು. ಇದರ ಹೊರತಾಗಿ  ಗೂಗಲ್ ಅಣ್ಣನ ಹತ್ತಿರ ಏನೆ ಕೇಳಿ ಉತ್ತರ ಹುಡುಕಿ ಕೊಡುತ್ತಾನೆ. ಯಾವುದಕ್ಕು ಬೆಸರ ಪಡದೆ, ಸಿಡಿ-ಸಿಡಿ ಮಾಡದೆ ಎಷ್ಟೇ ಸಲ ಕೇಳಿದರು ಸಮಸ್ಯೆ ಇಲ್ಲ.
ಗೂಗಲ್ ಅಣ್ಣನ ಉಪಕಾರ ಇದೊಂದೆ ಅಲ್ಲ ಹಲವು. ಈ ಯು ಟ್ಯೂಬ್ ಅಕ್ಕಂದಿರ ಉಪಕಾರ ಇನ್ನು ದೊಡ್ಡದು. ಹೆಚ್ಚಿನ ಪಕ್ಷ ಈಗಿನ ಹೆಣ್ಣು ಮಕ್ಕಳಿಗೆ ಅಡಿಗೆ ಅಷ್ಟಾಗಿ ಕಲಿಸಿರುವುದಿಲ್ಲ. ಮದುವೆ ಆದ ಮೇಲೆ ಗಂಡನ ಮೇಲೆ ಪ್ರಯೋಗ ಮಾಡಬೇಕು. ಮೊದಲು ಪುಸ್ತಕಲ್ಲಿ ಓದಿ ಅಥವಾ ಅಮ್ಮನ ಹತ್ತಿರ ಡೈರಿಯಲ್ಲಿ ಬರೆದಿಟ್ಟುಕೊಂಡು ಅದನ್ನು ಓದಿ ಅಡಿಗೆ ಮಾಡುತ್ತಿದ್ದರು. ಆದರೆ ಈಗ ಹಾಗಲ್ಲ. ಅಡಿಗೆ ಮನೆಯಲ್ಲೆ ಮೊಬೈಲ್ ನಲ್ಲಿ ಯು ಟೂಬ್ ಹಚ್ಚಿಕೊಂಡು  ಅಡಿಗೆ ಮಾಡುವುದು ಸಹಜವಾಗಿದೆ. ಏನಾದರು ನೆಟ್ ಮದ್ಯದಲ್ಲಿ ಕೈ ಕೊಟ್ಟರೆ ಆ ದೇವರೆ ಗತಿ.
ಯು ಟ್ಯೂಬ್ ನಲ್ಲಿ ಅಡಿಗೆ ಚಾನಲ್ ಗೆನು ಬರ ಇಲ್ಲ. ಯಾವ ದೇಶದ ಮೂಲೆ-ಮೂಲೆಯ ಅಡಿಗೆಯನ್ನು ಮಾಡಿ ತೋರಿಸುತ್ತಾರೆ. ಇದನ್ನು ತಿನ್ನುವವರು ಮಾತ್ರ…….?
ಇಗಿನ ಕಾಲದವರಿಗೆ ಮಾತ್ರ ಈ ಯು ಟ್ಯೂಬ್ ಅಕ್ಕಂದಿರು ಮತ್ತು ಗೂಗಲ್ ಅಣ್ಣಂದಿರು ವರದಾನವೆ ಸರಿ. ಈಗಿನವರ ಎಷ್ಟೋ ಕಷ್ಟಗಳನ್ನು ಕಡಿಮೆ ಮಾಡಿವೆ. ನಮ್ಮ ಎಷ್ಟೊ ಹವ್ಯಾಸ, ಹೊಸ ವಿಷಯ  ಕಲಿಯುವುದರಲ್ಲಿ, ಇವರ ಪಾಲು ಇದೆ. ಈ ಯು ಟ್ಯೂಬ್  ಅಕ್ಕ- ಗೂಗಲ್ ಅಣ್ಣನಿಗೆ ನನ್ನದೊಂದು ಸಲಾಂ.