Sunday, March 17, 2019

ಹಣ್ಣೆಲೆ ಮಾತಾಡಿದಾಗ


                                               ಹಣ್ಣೆಲೆ ಮಾತಾಡಿದಾಗ

ಸುಶೀಲಮ್ಮನಿಗೆ ಮಗನ ಮನೆಗೆ ಬಂದು ಉಳಿಯೋದು ಅನಿವಾರ್ಯವಾಯಿತು. ಗಂಡ ಸತ್ತ ಮೇಲೆ ಮಕ್ಕಳೆ ಆಸೆ ಅನ್ನೋ ಹಾಗೆ ಬೆಂಗಳೂರಿನಲ್ಲಿ ಇರುವ ಮಗನ ಮನೆಗೆ ಬಂದರು. ನಂಜನಗೂಡಿನಲ್ಲಿ ನಲವತ್ತು ವರ್ಷ ಬಾಳಿ ಬದುಕಿದ ಮನೆ ಊರು ಬಿಟ್ಟು ಬರುವುದು ಅಸಾದ್ಯವೆಂದೆ ತಿಳಿದಿದ್ದರು. ಆದರೆ ಪರಿಸ್ಥಿತಿ ಸಾದ್ಯ ಮಾಡಿತು.
ಮಗ ಪ್ರೇಸ್ಟಿಜ್ ನವರ ಅಪಾರ್ಟಮೆಂಟ್  ನಲ್ಲಿ ಒಂದು  ಪ್ಲಾಟ್ ಖರಿಧಿಸಿದ್ದ. ಅದು ಆಧುನಿಕ ಉಪಕರಣದಿಂದ ತುಂಬಾ ಚನ್ನಾಗಿ ಸುಸಜ್ಜಿತವಾಗಿತ್ತು. ಯವುದು ಇಲ್ಲ ಅನ್ನೊ ಹಾಗೆ ಇಲ್ಲ. ಬೆಳಿಗ್ಗೆ ಮಗ-ಸೊಸೆ ಕೆಲಸಕ್ಕೆ ಹೋದರೆ ಬರೋದು ಸಂಜೆ. ಮೊಮ್ಮಗ ನಿಖಿಲ್ ಮೂರನೆ ಕ್ಲಾಸ್. ಅಜ್ಜಿ ಬಂದ ಮೇಲೆ ಸ್ಕೂಲ್ ನಿಂದ ಸೀದಾ ಮನೆಗೆ ಬರುತ್ತಿದ್ದ.  ಇಲ್ಲ ಅಂದರೆ ಅಲ್ಲೆ ಹತ್ತಿರದ ಲಕ್ಷ್ಮಿ ಆಂಟಿ ಪ್ಲೇ ಹೋಮ್ ನಲ್ಲಿ ಇದ್ದು ಅಮ್ಮನ ಜೊತೆ ಸಂಜೆ ಬರುವ ವಾಡಿಕೆ ಆಗಿತ್ತು. ಆದರೆ ಈಗ ಅಜ್ಜಿಯ ದೆಸೆಯಿಂದ  ನಿಖಿಲ್ ಗೆ ಮನೆ ಮತ್ತು ಅಜ್ಜಿಯ ಪ್ರೀತಿ, ಊಟ, ಉಪಚಾರ ದೊರಕಿತು. ಸುಶೀಲಮ್ಮನಿಗೆ ಮೊಮ್ಮಗನೆ ಎಲ್ಲ ಆಗಿತ್ತು. ಅವನೊಬ್ಬ ನಿಲ್ಲದಿದ್ದರೆ ಅವರಿಗೆ ಇವರ ಪ್ಲಾಟ್ ಬಂಗಾರದ ಪಂಜರವೆ ಸರಿ. ಮೊಮ್ಮಗ ನಿಖಿಲ್  ಕೂಡ ಅಜ್ಜಿ ಗೆ ತುಂಬಾ ಹೊಂದಿಕೊಂಡಿದ್ದ.
ದಿನ ಸಂಜೆ ಅಜ್ಜಿ-ಮೊಮ್ಮಗ ಪ್ಲಾಟ್ ಆವರಣದಲ್ಲಿ ಇರೋ ಪಾರ್ಕ್ ಗೆ ಹೋಗುತ್ತಿದ್ದರು. ಅಲ್ಲಿ ನಿಖಿಲ್ ತನ್ನ ವಾರಗೆಯ ಇತರ ಮಕ್ಕಳ ಜೊತೆ ಆಟವಾಡಿತ್ತಿದ್ದ. ಇಲ್ಲ ಅಂದರೆ ಜಾರುಬಂಡಿ ಅಥವಾ ಜೋಕಾಲಿ ಆಡುತ್ತಿದ್ದ. ಇತ್ತ ಸುಶೀಲಮ್ಮನಿಗೆ ಅವರದೆ ವಯಸ್ಸಿನ ಕಮಲಮ್ಮ ಸಿಕ್ಕಿದರು. ಇಬ್ಬರು ಒಂದೆ ದೋಣಿಯ ಪ್ರಯಾಣಿಕರು. ಅವರು ವಯಸ್ಸಾದ ಮೇಲೆ ಗಂಡ ಮತ್ತು ಹೆಂಡತಿ ಇಬ್ಬರು  ತಮ್ಮ ಊರು ತಿರ್ಥಹಳ್ಳಿ  ಬಿಟ್ಟು ಮಗನ ಮನೆ ಸೇರಿದರು. ಇಬ್ಬರು ಸಮ ಕಾಲಿನರು ತಮ್ಮ ಮೊಮ್ಮಕ್ಕಳು ಆಟ ಆಡುವಾಗ ಹೊತ್ತು ಕಳೆಯಲು ಮಾತಾಡುತ್ತ ತಮ್ಮ ಕಷ್ಟ-ಸುಖ ಮಾತಾಡಿಕೊಳ್ಳುತ್ತಿದ್ದರು.
ಒಮ್ಮೆ ಸುಶೀಲಮ್ಮ ತುಂಬಾ ಮಂಕಾಗಿ ಕುಳಿತಿದ್ದರು. ಕಮಲಮ್ಮ ಸುಶೀಲಮ್ಮನ ವಿಚಾರಿಸುತ್ತ, “ಯಾಕ್ ಸುಶೀಲಮ್ಮ ಏನಾಯ್ತು? ಯಾಕ್ ಇಷ್ಟು ಮಂಕಾಗಿದ್ದೀರಾ?” ಎಂದರು. ಆಗ ಸುಶೀಲಮ್ಮ ಬೆಸರದಲ್ಲೆ, “ಏನಿಲ್ಲ ಬಿಡಿ. ದೇವ್ರು ಗಂಡ ಹೆಂಡ್ತಿನ ಜೊತೆಲೆ ಕರ್ಕೊಂಡ್  ಬಿಡ್ಬೇಕು ನೋಡ್ರಿ. ಇದ್ದವರಿಗೆ ಕಷ್ಟ. ಮುಂದೆ ಹೋದವ್ರೆ ಪುಣ್ಯಾತ್ಮರು”. ಅಂದರು. ಕಮಲಮ್ಮನಿಗೆ ಇಷ್ಟು ದಿನ ಒಡನಾಡಿದ ಗೆಳತಿಯ ಮಾತು ಕೇಳಿ ಬೆಸರವಾಯಿತು. ಅವರ ಬೆಸರದ ಬಗ್ಗೆ ತಿಳಿಯದೆ ಅವರಿಗೆ ಸಮಾಧಾನ ಮಾಡುತ್ತ, “ಯಾಕ್ರೀ ಹಾಗ್ ಹೋಗೊ ಮಾತ್ ಆಡ್ತೀರಾ? ನಿಮ್ಗೆ ಅಂತದ್ದು ಏನಾಗಿದೆ? ನೋಡಿ ಮುದ್ದಾದ ಮೊಮ್ಮಗ ನಿಮ್ಮನ್ನ ಎಷ್ಟ್ ಹಚ್ಗೊಂಡಿದ್ದಾನೆ. ಬಾಯ್ ತುಂಬಾ ಅಜ್ಜಿ ಅಂತ ನಿಮ್ ಸೇರಗಲ್ಲೆ ಇರ್ತಾನೆ” ಅಂದರು. ಆಗ ಸುಶೀಲಮ್ಮ ನಿಟ್ಟುಸಿರು ಬಿಡುತ್ತಾ, “ಅದೆ ಕಷ್ಟಕ್ಕೆ ಬಂದಿರೋದು ಕಮಲಮ್ನೋರೆ,,,,ನನ್ನಿಂದನೆ ಅವ್ನು ಓದೋದ್ರಲ್ಲಿ ಹಿಂದ್ ಬಿದ್ದಿದ್ದಾನೆ. ಬರಿ ಟಿ.ವಿ. ನೋಡೋದ್ ಕಲ್ತಿದಾನೆ ಅಂತ ನಿನ್ನೆ ನನ್ನ ಅತ್ತೆ ಅಂತ ನೋಡದೆ, ವಯಸ್ಸಲ್ಲಿ ಹಿರಿಯವಳು ಅಂತ ನೋಡ್ದೆ ರೇಗ್ ಬಿಟ್ಲು” ಅಂದರು. ಇವರ ಮಾತು ಕೇಳಿ ಕಮಲಮ್ಮ, ನಿಟ್ಟುಸಿರು ಬಿಡುತ್ತಾ, “ಅಯ್ಯೋ ಇಷ್ಟಕ್ಕಾ ನೀವು ಇಷ್ಟು ಸಪ್ಪೆ ಮುಖ ಹಾಕಿದ್ದು. ನಮ್ಮನೆಲಿ ಈ ತರ ದಿನ ನಿತ್ಯದ ಕಥೆ ಆಗಿದೆ. ನಾವ್ ಹೆಂಗಸರು ಏನೋ ಮೊದ್ಲಿಂದನು ಅನ್ನಿಸಿಗೊಂಡು ರೂಡಿ ಆಗಿರತ್ತೆ. ನಾಲ್ಕ್ ಹನಿ ಕಣ್ಣೀರ್ ಹಾಕಿ ಮರೆತು ಬಿಡ್ತಿವಿ. ಆದ್ರೆ ನಮ್ ಯಜಮಾನ್ರು ಒಳ್-ಒಳಗೆ ಸಂಕಟ ಪಡೋದು ನೋಡೋಕ್ ಆಗಲ್ಲಾರಿ. ಯಾಕ್ ಆದ್ರು ಮನೆ-ಮಠ ಮಾರಿ ಇಲ್ಲ ಬಂದ್ವೆನೋ ಅನ್ನಿಸಿ ಬಿಟ್ಟಿದೆ”. ಅಂತ ತಮ್ಮ ದುಖಃ ಹೇಳಿಕೊಂಡರು.  ಆಗ ಸುಶೀಲಮ್ಮ ಇವರು ಯಾವಗಲು ಖುಶಿಯಾಗಿ ಇರೋದನ್ನ ನೋಡಿ ,”ಯಾಕ್ರೀ? ಯಾವಗ್ಲು ಖುಶಿಯಾಗಿ ಇರ್ತಿರಾ? ನಿಮ್ಗೆ ಏನಾಯ್ತು? “ ಅಂತ ಕೇಳಿದರು. ಆಗ  ಕಮಲಮ್ಮನೋರು ಬೆಸರದಲ್ಲಿ, ಏನ್ ಖುಶಿನೋ…ಎಲ್ಲ ಹೊಟ್ಟೆಲೆ ಇಟ್ಗೊಳ್ತೀನಿ. ಯಾರತ್ರಾದ್ರು ಮನೆ ಸುದ್ದಿ ಹೇಳಿದೀನಿ ಅಂತ ತಿಳಿದ್ರೆ ಆಚೆ ಬರೋ ಹಾಗು ಇಲ್ಲ. ಮನೆಲೆ ಕುಕ್ಕರ್ ಬಡಿ ಬೇಕು. ಹಾಗ್ ಮಾಡ್ತಾಳೆ. ನಮ್ಮ್ ಯಜವಾನ್ರಂತು ಬಾಯ್ ಬಿಡೊದೆ ಇಲ್ಲ. ಮಾತ್ ಬಂದ್ರು ಮೂಖರ ಹಾಗೆ ಕುಳಿತಿರ್ತಾರೆ” ಅಂತ ಹೇಳಿದರು.
ಸುಶೀಲಮ್ಮನೋರು ಏನೋ ಯೋಚನೆ ಮಾಡ್ತಾ…”ಅಲ್ಲಾರಿ ಮತ್ ಬಾಯ್ ತುಂಬಾ ಅಮ್ಮ-ಅಮ್ಮಾ ಅಂತ ಹೇಳ್ತಾಳಲ್ಲ. ನಾನ್ ತುಂಬಾ ಮೄದು ಸ್ವಭಾವದವಳು ಅಂತ ಅಂದ್ಕೋಂಡಿದ್ದೆ ಅಷ್ಟು ಜೋರಿದ್ದಾಳಾ” ಅಂತ ಕೇಳಿದ್ರು. ಆಗ ಕಮಲಮ್ಮನೋರು “ಅಯ್ಯೋ ಹೊರಗಿನವರ ಹತ್ರ ಬೆಣ್ಣೆ ತರ, ಮನೆಲಿ ನಮ್ಮ ಎದುರಿಗೆ ಕಂಡಿದ್ದು ಹೇಳಿದ್ರೆ ಅವತಾರ ಬರೋದು. ನೋಡ್ರಿ ಸುಶೀಲಮ್ಮ ನಾವ್ ಮೊದ್ಲಿಂದನು ಸಂಪ್ರದಾಯಸ್ಥರು. ನಮ್ ಯಜಮಾನ್ರಂತು ಈರುಳ್ಳಿ-ಬೆಳ್ಳುಳ್ಳಿನು ತಿಂದವ್ರಲ್ಲ. ಈಗ್ ನಮ್ ಗ್ರಹಚಾರಕ್ಕೆ ಮೊಟ್ಟೆ ಬೇಯಿಸಿದ ಪಾತ್ರೆಲಿ ನಾವು ಬೇಯ್ಸಗೊಳ್ಳೊ ಪರಿಸ್ಥಿತಿ ಬಂದಿದೆ. ಇವ್ಳು ಸಂಪ್ರಧಾಯಸ್ಥರ ಮನೆಲೆ ಹುಟ್ಟಿ-ಬೆಳೆದಿದ್ದು. ಇವ್ಳು ಮೊಟ್ಟೆ ತಿಂದ್ ಬೆಳ್ದಿದ್ದಾ…ಈಗ್  ತನ್ನ ಮಕ್ಕಳಿಗೆ ಮೊಟ್ಟೆ ಬೆಯಿಸಿ ಕೊಡ್ತಾಳೆ. ಏನಾದ್ರು ಹೇಳೋಕ್ ಕೊದ್ರೆ ಮುಗಿತು ಮನೆ ರಣರಂಗ. ಬೇಕಿದ್ರೆ ಇರಿ, ಇಲ್ಲ ಅಂದ್ರೆ ಹೋಗಿ ಅನ್ನೋ ರೀತಿಲಿ ಮಾತಾಡೊಳು.  ಈ ವಯಸ್ಸಲ್ಲಿ ಎಲ್ಲಿ ಹೋಗೋದು.ಹೇಳಿದ್ರೆ ಮಗನಿಗೂ ಕಷ್ಟ.  ಉಗುಳೊಕು ಆಗದೆ ನುಂಗೊಕು ಆಗದೆ ನೋಡಿದ್ರು ನೋಡ್ದೆ ಇರೋ ತರ ಬಾಯ್ ಮುಚ್ಗೊಂಡು ಇದೀವಿ” ಅಂತ ತಮ್ಮ ದುಖಃ ಹೇಳಿಕೊಂಡರು.
ಇವರ ಮಾತನ್ನು ಕೇಳಿಸಿಗೊಳ್ಳುತ್ತಿರೋ ಸುಶೀಲಮ್ಮ ನಿಟ್ಟುಸಿರು ಬಿಡುತ್ತ, “ನಮ್ದು ಹೇಳಿ-ಕೇಳಿ ಪುರೋಹಿತ್ ಮಾಡಿದ್ ಕುಟುಂಬ. ಈಗ್ ನಾನು ಇಲ್ಲ್ ಬಂದ್ ಏನೇನ್ ಕಾಣ್ ಬೇಕೋ ಅನ್ನಿಸಿ ಬಿಟ್ಟಿದೆ. ನಮ್ಮನೆಲು ಇವಳು ಮೊಟ್ಟೆ ತಂದು ದೋಸೆ ಮಾಡ್ತಾಳೆ. ಅದೇನೋ ಸುಡಗಾಡ್ ಆಮ್ಲೇಟ್ ಏನೋ ಅಂತ ನಮ್ ನಿಖಿಲ್ ಹೇಳ್ತಾ ಇರ್ತಾನೆ. ಆ ಮೊಟ್ಟೆ ಬೆಯಿಸಿದ್ ದೋಸೆ ತವಾದಲ್ಲಿ ನಾನ್ ದೋಸೆ ಮಾಡ್ಕೊಳ್ ಬೇಕು. ನನ್ ಮಗ ಒಬ್ಬನೆ ಇದ್ದಾಗ ಸಮಾಧಾನದಲ್ಲಿ ಹೇಳ್ದೆ, ಅವ್ನು ಬಿಡಮ್ಮ ಈಗ ಮೊಟ್ಟೆ ಎಲ್ಲರು ತಿಂತಾರೆ. ನಿನ್ಗೆ ಬೇಡ ಅಂದ್ರೆ ತಿನ್ ಬೇಡ ಅಂತ ಹೆಂಡ್ತಿ ಪರನೆ ಮಾತಾಡ್ ಬಿಟ್ಟ” ಅಂತ ಮಗನ ಮೇಲು ಅಸಮಾಧಾನ ತೋರಿಸಿದರು.
ಆಗ ಕಮಲಮ್ಮ, ಸುಶೀಲಮ್ಮನಿಗೆ ಸಮಾಧಾನ ಮಾಡೋ ತರ, “ಸದ್ಯ ನಿಮ್ ಮಗ ಏನು ರೇಗದೆ ಸಮಾಧಾನದಲ್ಲಿ ಹೇಳಿದ. ಈಗ ಒಂದ್ ವಾರದ ಹಿಂದೆ ನಮ್ಮ ಯಜಮಾನ್ರು ನನ್ನ ಹತ್ತಿರ ಹೇಳಿದ್ರು, ಮೊಳ್ಕಾಲ್ ವರೆಗೆ ಬರೋ ಪ್ಯಾಂಟ್ ಹಾಕೋದ್ರ ಬದ್ಲು ಸೀರೆ ಅಂತು ಉಡಲ್ಲ. ಕೊನೆಪಕ್ಷ  ಲಕ್ಷಣವಾಗಿ ಮೈ ಮುಚ್ಚೊ ಚೂಡಿದಾರ ಆದ್ರು ಹಾಕ್ಲಿ ಅಂತ. ನಾನು ಇದನ್ ನನ್ ಮಗನಿಗೆ ಹೇಳಿದೆ, ಇವನು ನನ್ ಮೇಲೆ ಸಿಡಿ-ಸಿಡಿ ಮಾಡಿದ. ಈಗ್ ಸಿಟಿನಲ್ಲಿ ಈ ತರ ಡ್ರೇಸ್ ಮಾಡೊದ್ ಸಹಜ. ನೀವ್ ಸುಮ್ನೆ ಅವಳ್ ಬಟ್ಟೆ-ಬರೆ ವಿಷಯಕ್ಕೆ ಏನು ಹೇಳೊಕ್ ಹೋಗ್ಬೇಡಿ. ಅವ್ರ-ಅವ್ರಿಗೆ ಬೇಕಾದ ಹಾಗೆ ಡ್ರೇಸ್ ಮಾಡ್ಕೊಳ್ತಾರೆ.  ನನ್ಗೆ ಇರೋ ಅಫೀಸ್ ಟೆನ್ಶನ್ ಜೊತೆ ಇನ್ನು ಏನಾದ್ರು ತಲೆನೋವ್ ತರ್ಬೇಡಿ ಅಂತ ಕಡ್ಡಿ ಮುರಿದ ಹಾಗ್ ಹೇಳಿದ. ನೋಡ್ರಿ ಸುಶೀಲಮ್ಮ, ಅಪ್ಪ-ಅಮ್ಮ ಕಲ್ಸಿ ದೊಡ್ಡ್ ಮಾಡೊ ತನ್ಕ. ಆಮೇಲ್ ರೆಕ್ಕೆ ಬಲಿತ ಹಕ್ಕಿ ಹಾಗೆ. ಏನ್ ಹೇಳೋ ಹಾಗೆ ಇಲ್ಲ. ನಮ್ಮ್ ನಮ್ಮ್ ಪಾಡಿಗೆ ನಾವ್ ಇದ್ರೆ ಆಯ್ತು” ಅಂತ ಹೇಳಿದರು.
ಆಗ ಸುಶೀಲಮ್ಮ ಅದು ಸರಿ ಅನ್ನಿ, “ಈಗಿನ್ ಕಾಲದವ್ರು ಅವ್ರಿಗೆ ಬೇಕಾದ ಹಾಗೆ ಇರ್ತಾರೆ. ನಮ್ ತರ ಮಡಿ ಮೈಲಿಗೆ ಏನು ಕೇಳ್ ಬೇಡಿ. ಕೂದಲು ಶುಕ್ರವಾರ ಬೇಕಾದ್ರೆ ಆಗ್ಲಿ, ಮಂಗಳವಾರ ಬೇಕಿದ್ರೆ ಆಗ್ಲಿ,  ಯಾವಾಗ ಅಂದ್ರೆ ಯಾವಾಗ ಕಟ್ ಮಾಡ್ಸಗೊಳ್ತಾರೆ, ಚಿನ್ನ ನ್ನೆಲ್ಲ ಬ್ಯಾಂಕ್ ನಲ್ಲಿ ಇಟ್ಟು ಕಪ್ಪು ತಗಡು ಗಳನ್ನಾ ಕಿವಿಗೆ ಕುತ್ತಿಗೆಗೆ ಹಾಕೋದು. ಹಣೆಗೆ ಬೊಟ್ಟು ಇಟ್ಟಿದ್ದು ನಾ ಕಾಣೆ.  ಅದ್ ಏನ್ ಪ್ಯಾಶನ್ ನೋ ಏನ್ ಚಂದನೋ. ಮುತೈದೆ ತನದ ಮಹತ್ವ ಗೊತ್ತಿದ್ರೆ ತಾನೆ. ಇನ್ನು ಏನ್-ಏನ್ ಕಾಣ್ಬೇಕೊ ಆ ದೇವ್ರಿಗೆ ಗೊತ್ತು” ಅಂತ ಹೇಳಿದರು.
ಆಗ ಕಮಲಮ್ಮ ,”ಹೋಗ್ಲಿ ಬಿಡಿ. ಈಗ್ ಇದು ಎಲ್ಲರ ಮನೆ ಕಥೆ ಆಗಿದೆ. ಸದ್ಯ ಮೂರ್ ಹೊತ್ತು ಊಟ ಕೊಟ್ಟು ಮನೆಲಿ ಮೊಮ್ಮಕ್ಕಳ ಜೊತೆ ಇರೋ ಬಾಗ್ಯ ಆದ್ರು ಇದೆ ಅಂತ ಸಮಧಾನ ಮಾಡ್ಕೊಳ್ ಬೇಕು” ಅಂತ ಹೇಳಿದರು.
ಆಗ ಸುಶೀಲಮ್ಮ,” ನೀವ್ ಹೇಳೋದು ಸರಿ. ಇಲ್ಲ ಅಂದ್ರೆ ಈ ವಯಸ್ಸಲ್ಲಿ ಒಬ್ಬರೆ ಬೇಯಿಸಿಗೊಂಡು ತಿನ್ನೋ ಹಾಗು ಇಲ್ಲ ಬಿಡೊ ಹಾಗು ಇಲ್ಲ. ಏನೋ ಇಷ್ಟೆ ಗಟ್ಟಿ ಇದ್ದಾಗ್ಲೆ ದೇವ್ರು ಕರ್ಕೋಂಡು ಹೋಗ್ಲಿ ಅಂತ ಹೇಳ್ ಕೊಳ್ತೀನಿ. ಪರಸೇವೆ ಆಗಿ ಅವರಿಗೆ ಹೊರೆ ಆಗ್ದೆ ಇದ್ರೆ ಸಾಕು.” ಅಂತ ಹೇಳಿದರು.
ಆಗ ಕಮಲಮ್ಮನು ಹೌದು ಅನ್ನೊ ತರ ನಿಟ್ಟುಸಿರು ಬಿಟ್ಟರು. ಇಷ್ಟು ದಿನ ಏನೆ ಮಾತಾಡಿದರು ಇಷ್ಟು ಮನಸ್ಸು ಬಿಚ್ಚಿ ಮಾತಾಡಲಿಲ್ಲವಾಗಿತ್ತು. ಇಂದು ಮನಸ್ಸು ಬಿಚ್ಚಿ ತಮ್ಮ ಕಾಲದಿಂದ ಈಗಿನ ಕಾಲಕ್ಕೆ ಹೊಂದಿಕೊಳ್ಳುವ ಕಷ್ಟವನ್ನು ಹಂಚಿಕೊಂಡರು. ದಿನವು ಇಬ್ಬರಿಗೂ ಸ್ವಲ್ಪ ಹೊತ್ತು ಜೊತೆಯಾಗಿ ಮಾತಡಿ ಸ್ವಲ್ಪ ಸಮಯ  ಕಳೆಯುವ ವಾಡಿಕೆ ಇದರಿಂದ ಇಬ್ಬರಿಗೂ ನೆಮ್ಮದಿ ಸಿಗುತಿತ್ತು.

No comments: