Friday, March 29, 2019

ಊರಿಗೆ ಮರಳಿದಾಗ….


                                  ಊರಿಗೆ ಮರಳಿದಾಗ….

 ಸುಬ್ಬು ಜೋಯಿಸರು ಮೂಲತ ಶಿವವೊಗ್ಗ ಹತ್ತಿರದ ಜಾಲಳ್ಳಿ, ಆದರು ಜೀವನ ಕಟ್ಟಿಕೊಂಡಿದ್ದು ಬನಾರಸ್ ಕಾಶಿಯಲ್ಲಿ. ಇದಕ್ಕೆ ಕಾರಣ ತಾವು ಕೇಳುವಷ್ಟು ಸಂಭಾವನೆ ಜಾಲಳ್ಳಿ ಯಂತ ಊರಲ್ಲಿ ಸಿಗದೆ ಇರುವುದು. ಇನ್ನೊಂದು ಜೋಯಿಸರ ಹೆಂಡತಿ ಪಾರ್ವತಿ ಗೆ ಗಂಡನ ಮನೆಯ ಒರಗಿತ್ತಿಯರಿಗೆ ಹೊಂದಿಕೊಳ್ಳಲಾಗದೆ ಗಂಡನ ಹತ್ತಿರ ಬೇರೆ ಮನೆ ಮಾಡುವ ವಿಚಾರವನ್ನು  ಯಾವಗಲು ತಲೆಯಲ್ಲಿ ಹುಳಬಿಡುತ್ತಿದ್ದಳು. ಊರಲ್ಲೆ ಇದ್ದು ಬೇರೆ ಹೋಗುವುದು ಸ್ವಲ್ಪ ಕಷ್ಟವಾಗಿತ್ತು. ತಮ್ಮ ಅಣ್ಣಂದಿರಿಗೆ ಇರುವ ಶಿಷ್ಯ ವರ್ಗ ತಮಗೆ ದೊರಕುವುದು ಕಷ್ಟವೆಂದು ಅವರಿಗೆ ಮೊದಲೆ ತಿಳಿದಿತ್ತು. ಮೊದಲಿನಿಂದಲು ಸ್ವಲ್ಪ ವ್ಯಾಪಾರಿ ಬುದ್ದಿಯವರೆ ಆದ ಕಾರಣ ಭಾವನೆಗಳಿಗೆ ಬೆಲೆ ಕೊಡುವ ಅಣ್ಣಂದಿರು ಸುಬ್ಬು ಜೋಯಿಸರಿಗೆ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಇವರಿಗೆ ಸಿಕ್ಕ ಬಾಳ ಸಂಗಾತಿ.

ಒಮ್ಮೆ ಜೋಯಿಸರು ಮಾವನ ಮನೆ ಗೊಕರ್ಣಕ್ಕೆ ಹೋದರು. ಅಲ್ಲಿ ತಮ್ಮ ವಾರಗೆಯ ಭಾವಂದಿರ ಜೊತೆ ಮಾತಡುತ್ತಿರುವಾಗ ಬೇರೆ ಊರಿಗೆ ಹೋಗುವ ಯೋಚನೆ ಹೇಳಿದರು. ಅವರು “ ನಮ್ಮ್ ಊರಲ್ಲಿ ಅಷ್ಟಾಗಿ ಪುರೋಹಿತ್ಯ ಸಿಗುವುದಿಲ್ಲ. ಅದು ಅಲ್ದೆ ನಮ್ಮ ಹಿರಿಯಣ್ಣ ತೋಟದ ಕೆಲಸ ಮಾಡಲು ಆಗದ ಕಾರಣ ಅವರೆ ಕರೆದ ಕಡೆ ಹೋಗ್ತಾರೆ. ಸ್ವಲ್ಪ ದೂರದ ಊರಿಗೆ ನನ್ನ ಎರಡನೆ ಅಣ್ಣ ಹೋಗ್ತಾನೆ. ನನ್ಗೆ ಮೇಲಿನ ಸಂಪಾದನೆ ಅಂದ್ರೆ ಪುರೋಹಿತ್ಯಕ್ಕೆ ಹೋಗೋದು. ಈಗ ಕಲಿತು ಕೈ ಬರಿದಾಗಿ ಮನೆಲಿ ಉಳಿದಿದ್ದೀನಿ” ಅಂತ ಬೆಸರದಿಂದ ಹೇಳಿದರು. ಇದಕ್ಕೆ ಅವರ ಒಬ್ಬ ಭಾವ,” ಏನು ನೀವ್ ಇಷ್ಟು ಕಲಿತು ಎಲ್ಲು ಹೋಗಲ್ವ. ನಿಮ್ ಅರ್ದದಷ್ಟು ಕಲಿದೆ ಇರೋ ನಮ್ ಗೊಕರ್ಣದ ಮಕ್ಕಳು ಪಟ್ಟಣ ಸೇರಿ ಎಷ್ಟು ಚನ್ನಾಗಿ ದುಡಿತಿದ್ದಾರೆ. ಕೆಲವೊಬ್ಬರು  ಬೆಂಗಳೂರಂತ ನಗರದಲ್ಲಿ ಸ್ವಂತಕ್ಕೆಂದು ಮನೆ ಬೇರೆ ಮಾಡಿ ಬಾಡಿಗೆಗೆ ಕೊಟ್ಟಿದ್ದು ಇದೆ” ಅಂತ ಅತಿಶಯೋಯ್ತಿ ಮಾಡಿ ಹೇಳಿದರು. ಅಲ್ಲಿ ಕುಳಿತ ಸುಬ್ಬು ಜೋಯಿಸರಿಗೆ ತಲೆ ತಿರಿಗಿತು. ಅಣ್ಣನ ಹತ್ತಿರ ಕೈ ಚಾಚುವುದಕ್ಕಿಂತ ತನಗೆ ಕೈ ತುಂಬ ಸಂಬಳ ಬಂದರೆ ಎಂದು ಕನಸು ಕಂಡರು. ಅಲ್ಲೆ ಇರುವ ಇನ್ನೊಬ್ಬ “ನೀವು ಇಷ್ಟು ಚನ್ನಾಗಿ ಕಲಿತು ಯಾಕ್ ಮನೆಲಿ ಕೆಲಸ ಇಲ್ಲದೆ ಇರ್ತಿರಾ? ನಿಮಗೆ ಸಿಟಿ ಕಡೆನೋ, ಯಾವುದಾದ್ರು ಯಾತ್ರಾ ಸ್ಥಳಕ್ಕೆ ಹೋದ್ರೆ ಒಳ್ಳೆ ಸಂಪಾದನೆ ಮಾಡಬಹುದು” ಅಂದರು.
ಇದಲ್ಲ ಕೇಳುತ್ತಿದ್ದಂತೆ ಸುಬ್ಬು ಜೋಯಿಸರು ಯೋಚನಾ ಸಾಗರದಲ್ಲಿ ಮುಳುಗಿದರು. ಇವರ ಮಾತನ್ನು ನಡು ಮನೆಯಲ್ಲಿ ಇದ್ದ ಪಾರ್ವತಿ ಕೇಳಿದ್ದರು. ಮನಸ್ಸಿನಲ್ಲೆ ದೃಡ ನಿರ್ದಾರ ಮಾಡಿದರು. ಇದೆ ಸರಿಯಾದ ಸಮಯ ಹೇಗಾದರು ಮಾಡಿ ಮೊದಲು ಮನೆಯಿಂದ ಆಚೆ ಬರಬೇಕು. ಆ ಮನೆಯಲ್ಲಿ ಚಾಕರಿ ಮಾಡುತ್ತ ಅವರ ಕೈ ಕೆಳಗೆ ಇರೋದ್ಕಿಂತ  ನಮ್ಮದೆ ಆದ ಪುಟ್ಟ ಸಂಸಾರ ಕಟ್ಟಿಕೊಳ್ಳ ಬೇಕು ಅಂತ ತಿರ್ಮಾನಿಸಿದರು. ಎಲ್ಲ ಆಚೀಚೆ ತಮ್ಮ-ತಮ್ಮ ಕೆಲಸಕ್ಕೆ ಹೋದಾಗ ಪಾರ್ವತಿ ಉಪಾಯವಾಗಿ ಗಂಡನನ್ನು ಕರೆದು ಗಂಡನ ಕಿವಿ ಉದಿದರು.”ನೋಡ್ರಿ ಇದ್ ಸರಿಯಾದ ಸಮ್ಯ. ನನ್ನ ಅಣ್ಣಂದಿರು ಹೇಳಿದ ಹಾಗೆ ನಾವ್ ಹೇಗಾದ್ರು ಮಾಡಿ ನಗರಕ್ಕೊ ಅಥವಾ ಯಾತ್ರಾ ಸ್ಥಳಕ್ಕೊ ಹೋಗೋಣ. ಇದಕ್ಕೆ ಅವರು ಸಹಾಯ ಮಾಡ್ತಾರೆ. ಅವರ ಹತ್ತಿರ ನಾನು ಮಾತಾಡ್ತಿನಿ.  ಮನೆಗೆ ಇನ್ನೆರಡು ದಿನ ತಡವಾಗಿ ಹೋದರು ಪರವಾಗಿಲ್ಲ. ಈಗ್ ಬಂದಾಗ್ಲೆ ಯಾರನ್ನಾದ್ರು ಹಿಡಿದು ನಾವು ಒಂದ್ ಕೆಲಸ ಹಿಡಿದ್ರೆ ಆಯ್ತು. ನೀವು ಏನ್ ಚಿಂತೆ ಮಾಡ್ಬೇಡಿ. ಆ ಮನೆಲಿ ಚಾಕರಿ ಮಾಡಿ-ಮಾಡಿ ನಿಮ್ ಅತ್ತಿಗೆ ಹತ್ತಿರ ಹೇಳಿಸಿಕೊಳ್ಳೊದ್ಕಿಂತ ನಿಮ್  ಕೆಲಸದಲ್ಲಿ ಪ್ರಸಾದ ಮಾಡ್ಕೋಡೋದೊ ಏನೋ ಕೈಲಾಗಿದ್ದು ಕೆಲಸ ಮಾಡಿ ನಾನು ಸಹಾಯ ಮಾಡ್ತೀನಿ. ಗಟ್ಟಿ ಮನಸ್ಸು ಮಾಡಿ ಮನೆಯಿಂದ ಹೊರಗೆ ಬಿಳೋಣ. ಇನ್ನು ಯೋಚನೆ ಮಾಡ್ತಾ ಕೂತ್ರೆ ಹೀಗೆ ಮುದುಕರಾಗ್ತೀವಿ” ಅಂತ ಗಂಡನ ಮನಸ್ಸಿಗೆ ನಾಟುವಂತೆ ಹೇಳಿದಳು. ಸುಬ್ಬು ಜೋಯಿಸರಿಗೂ ಹೆಂಡತಿ ಮಾತು ಸರಿ ಅನ್ನಿಸಿತು. ವಯಸ್ಸಿದ್ದಾಗಲೆ ನಾಲ್ಕು ಖಾಸು ದುಡಿದುಕೊಳ್ಳ ಬೇಕು. ಇವಾಗಲೆ ಇಲ್ಲಿ ಯಾರನ್ನಾದರು ಹಿಡಿದು ಒಂದು ಕೆಲಸ ಗಿಟ್ಟಿಸಿಕೊಳ್ಳ ಬೇಕು ಅಂತ ತಿರ್ಮಾನಿಸಿದರು ಮತ್ತು ಈ ವಿಚಾರ ಹೆಂಡತಿಗೂ ಹೇಳಿದರು. ಪಾರ್ವತಿ ಖುಷಿಯಿಂದ ಮುಖ ಅರಳಿತು. 

ಸಂಜೆ ಊಟ ಮುಗಿಸಿ ಹೊರ ಜಗುಲಿಯಲ್ಲಿ ಎಲ್ಲಾ ಗಾಳಿ ಸೇವನೆಗೆಂದು ಕುಳಿತಿದ್ದರು. ಎಲ್ಲರು ಹರಟೆ ಹೊಡೆಯುವಾಗ ಸುಬ್ಬು ಜೋಯಿಸರು ನಿಧಾನವಾಗಿ ಮಾತಿಗೆ ಇಳಿದರು. “ ನಿಮಗೆ ಯಾರಾದರು ಪರಿಚಯದವರು ಇದ್ದರೆ ಹೇಳಿ ನನ್ನ ಕೆಲಸದ ಬಗ್ಗೆ ಅವರ ಹತ್ರ ವಿಚಾರ್ಸತ್ತೀನಿ. ನನ್ಗು  ಒಂದು ಕೆಲ್ಸ್ ಆದ್ರೆ ಸಾಕು. ಯಾವ ಊರಾದರು ಸರಿ. ನಾನು ಕಲಿತ ವಿದ್ಯೆಗೆ ಅನುಗುಣವಾಗಿದ್ದರೆ” ಅಂತ ಹೇಳಿದರು.
ಇತ್ತ ಪಾರ್ವತಿ ಇವರು ಹೇಳೊದ್ಕಿಂತ ಮುಂಚೆನೆ ತನ್ನ ಅಪ್ಪ-ಅಮ್ಮ ಮತ್ತು ಅಣ್ಣಂದಿರ ಹತ್ತಿರ ಮನೆಯ ವಿಚಾರ ಹೇಳಿದ್ದರು. ಅವಳಿಗೆ ಹೇಗಾದರು ಮನೆಯಿಂದ ಆಚೆ ಬರಬೇಕು ಅನ್ನೊದು ಇತ್ತು. ಇದಕ್ಕೆ ಅವಳ ಅಪ್ಪ-ಅಮ್ಮ ಮತ್ತು ಅಣ್ಣಂದಿರ ಬೆಂಬಲ ಇತ್ತು. ಈ ಕಾರಣಕ್ಕಾಗೆ  ಇವರು ಸುಬ್ಬು ಜೋಯಿಸರಿಗೆ ಸಹಾಯ ಮಾಡಲು ಮುಂದಾದರು. 

ಆ ಊರನ ಕಂಠಿ ಜೋಯಿಸರ ಮಗ ಮತ್ತು ಸೊಸೆ ವಾರಣಾಸಿ ಕಾಶಿಯಲ್ಲಿ ವಾಸವಾಗಿದ್ದರು. ಅಲ್ಲಿಗೆ ಬರೋ ಯಾತ್ರಿಗಳಿಗೆ ಪೂವ್ರಜರ ಪಿಂಡ ಕಾರ್ಯಗಳನ್ನು ಮತ್ತು ಇತರೆ ಧಾರ್ಮಿಕ ಕೆಲಸಗಳನ್ನು  ಮಾಡಿಸುತ್ತಿದ್ದರು.  ಅಪರೂಪಕ್ಕೆ ಊರಿಗೆ ಬಂದಾಗ ಅಲ್ಲಿಯ ಆದಾಯದ ಬಗ್ಗೆ ಹೇಳುತ್ತಿದ್ದರು. ಅದು ಅಲ್ಲದೆ ಕಂಠಿ ಜೋಯಿಸರು ಊರಲ್ಲಿ ಕಟ್ಟಿಸಿದ ಮನೆ ನೋಡಿ ಚನ್ನಾಗಿ ಸಂಪಾದಿಸುತ್ತಾರೆ ಎಂದು ಹೇಳಬಹುದಿತ್ತು. ಕಂಠಿ ಜೋಯಿಸರ ಮಗನ ಸಹಾಯ ಪಡೆದು ಸುಬ್ಬು ಜೋಯಿಸರನ್ನು ಕಾಶಿಗೆ ಕಳುಹಿಸುವ ಯೋಚನೆ ಮಾಡಿದರು. ಗೊಕರ್ಣದಿಂದ ಬೇಕಾದಷ್ಟು ಖಾಸಗಿ ಟುರಿಸ್ಟ ಬಸ್ ಹೋಗುತ್ತಿತ್ತು. ಕಾಶಿಗೂ ಗೊಕರ್ಣಕ್ಕು ಏನೋ ಒಂದು ಸಂಭಂದ. ಇಲ್ಲಿಯವರಿಗೆ ಅದು ದೂರದ ಊರಾದರು ಮಾಡುವ ಕೆಲಸ ಒಂದೆ ಆಗಿತ್ತು.

ಅತ್ತ ಸುಬ್ಬು ಜೋಯಿಸರು ತನ್ನ ಅಣ್ಣನ ಹತ್ತಿರ ಕಾಶಿಗೆ ಹೋಗೋ ವಿಷಯವನ್ನು ನಯವಾಗಿ ಮಾತಾಡಿದರು. ಒಮ್ಮೆ ಅಷ್ಟು ದೂರದ ಊರಿಗೆ ಬೇಡ ಅಂತ ಹೇಳಿದರು. ನಾವು ಭೂಮಿ ಇದ್ದು ಭೂತಾಯನ್ನು ಅನಾಥ ಮಾಡಿ ಹೋಗಬಾರದು ಅಂತ ಹೇಳಿದರು.  ಆದರೆ ಸುಬ್ಬು ಜೋಯಿಸರು ಅಣ್ಣನ ಹತ್ತಿರ ನಯವಾಗಿ,” ಇಲ್ಲಣ್ಣ ನಾನೇನು ಖಾಯಂ ಆಗಿ ಅಲ್ಲಿರಲು ಹೋಗ್ತಾ ಇಲ್ಲ. ಏನೋ ಸ್ವಲ್ಪ ದಿನ ದುಡಿದು ಊರಿಗೆ ಬರುತ್ತೇನೆ. ನಮ್ಗೂ ನಿಮ್ಮನ್ನೆಲ್ಲ ಬಿಟ್ಟಿರೊದು ಕಷ್ಟ” ಅಂತ ಅಣ್ಣನನ್ನು ಹೇಗೋ ಒಪ್ಪಿಸಿದರು. ಮನಸ್ಸಿಲ್ಲದ ಮನಸ್ಸಿನಿಂದ  ತಮ್ಮನನ್ನು  ಕಾಶಿಗೆ ಬಿಳ್ಕೋಟ್ಟರು. ಜೋಯಿಸರು ದಂಪತಿ ಸಮೇತ ಕಾಶಿಗೆ ಪ್ರಯಾಣ ಬೆಳೆಸಿದರು.

ಮೊದಲೆ ಎರ್ಪಾಡಾದಂತೆ ಕಂಠಿ ಜೋಯಿಸರ ಮಗ-ಸೊಸೆ ಕಾಶಿಯಲ್ಲಿ  ಅವರ ಸಹಾಯಕ್ಕೆ ನಿಂತರು. ಅವರಿಗಾಗಿ ಒಂದು ಸಣ್ಣ ಕೋಲಿಯನ್ನು ಹುಡುಕಿದರು. ಅದು ಅಲ್ಲದೆ ಅವರಿಗೆ ಮೊದಮೊದಲು ಸಣ್ಣ ಪುಟ್ಟ ಕೆಲಸ ದೊರಕಿತು. ಚನ್ನಾಗಿ ಓದಿಕೊಂಡಿರೋ ಜೋಯಿಸರಿಗೆ ಹಿಂದಿಯಲ್ಲಿ ಒಳ್ಳೆ ಹಿಡಿತವಿತ್ತು. ಅದು ಅಲ್ಲದೆ ದಂಪತಿಗಳು ವ್ಯವಹಾರದಲ್ಲಿ ಚಾಣಾಕ್ಷರು. ಜೋಯಿಸರು ಕಷ್ಟ ಪಟ್ಟು ಹಗಲು ರಾತ್ರಿ ದುಡಿಯಲು ಶುರು ಮಾಡಿದರು. ಅವರಿಗೆ ಸರಿಯಾಗಿ ಅವರ ದರ್ಮ ಪತ್ನಿ ಹೆಗಲಿಗೆ ಹೆಗಲಾಗಿ ನಿಂತಳು.
ಸುಬ್ಬು ಜೋಯಿಸರು ಬರುವ ಯಾತ್ರಿಗಳ ಹತ್ತಿರ ನಯವಾಗಿ ಮಾತಾಡಿ ಯಾವ್-ಯಾವುದೋ ಪೂಜೆ ಮಾಡಿಸುತ್ತಿದ್ದರು. ಇತ್ತ ಪಾರ್ವತಮ್ಮನವರೆ ಪ್ರಸಾದ ಮತ್ತು ಪೂಜೆಗೆ ಬೇಕಾಗುವದನ್ನು ಅಣಿ ಮಾಡಿರುತ್ತಿದ್ದರು. ಒಂದಕ್ಕೆ ಎರಡು ದರ ಹಾಕಿ ಭಕ್ತಾದಿಗಳಿಂದ ಹಣ ವಸೂಲಿ ಶುರುವಾಯಿತು. ಇವರ ಭಾಷೆಯ ಮೇಲಿನ ಹಿಡಿತ, ವ್ಯವಹಾರದ ಚಾಣಾಕ್ಷತನ. ಮತ್ತು ಕಾಶಿ ವಿಶ್ವನಾಥನ ಕೃಪೆಯಿಂದ ಸುಬ್ಬು ಜೋಯಿಸರಿಗೆ ಶುಕ್ರದೆಸೆ ಬಿಡಲೆಯಿಲ್ಲ. ತಮಗೆ ಮೊದಲು ಸಹಾಯ ಮಾಡಿದ ಕಂಠಿ ಜೋಯಿಸರು ಯಾವಾಗಲೊ ಮೂಲೆ ಗುಂಪಾದರು. ಅವರ ಕಥೆ ನದಿ ದಾಟಿದ ಮೇಲೆ ಅಂಬಿಗನನ್ನು ನೆನೆಯುವರಾರು ಅಂದಂತಾಯಿತು.

ಕಾಶಿಗೆ ಬಂದ ಮೇಲೆ ದಂಪತಿಗಳಿಗೆ ಒಂದು ಗಂಡು ಮಗು ವಿಶ್ವನಾಥ ಜನಿಸಿದನು.   ಅದರ ಬಾಳಂತನಕ್ಕೆಂದು ಊರಿಗೆ ಹೋಗಿದ್ದರು. ಆಗ ಶಾಸ್ತ್ರದ ಪೂರ್ತಿಗೆ ಗಂಡನ ಮನೆಗೆ ಹೋಗಿದ್ದರು. ಮತ್ತೆ  ಊರಿಗೆ ಹೋಗಿದ್ದು ತುಂಬಾ ವಿರಳ. ವಿಶ್ವನಾಥನ ಶಾಲೆ ಮತ್ತು ಕೆಲಸದ ನೆವ ವೊಡ್ಡಿ ಊರಿನ ಸಂಪರ್ಕದಿಂದ ಸ್ವಲ್ಪ ದೂರಾನೆ  ಉಳಿದರು. 

ಇತ್ತ ವಿಶ್ವನಾಥ ದೊಡ್ಡವನಾಗುತ್ತ ಅಪ್ಪನ ವಿದ್ಯೆಯನ್ನು ಕಲಿತ. ಮೊದಲಿನಿಂದಲು ಪೂಜೆ-ಪುನಸ್ಕಾರದಿಂದ ಬೆಳೆದ ವಿಶ್ವನಾಥನಿಗೆ  ಪುರೋಹಿತ್ಯದಲ್ಲಿ ಆಸಕ್ತಿ ಇತ್ತೊ ಇಲ್ಲವೋ ಅದರೆ ಅನುವಂಶಿಕವಾಗಿ ಅವನ ರಕ್ತದಲ್ಲಿ ಬಂದಿತ್ತು. ತುಂಬಾ ರಾಗವಾಗಿ ಸಂಸ್ಕೃತ ಶ್ಲೋಕವನ್ನು ಹೇಳುತ್ತಿದ್ದ. ಮೊದಲಿನಿಂದಲು ಅಪ್ಪನಿಗೆ ಸಹಾಯ ಮಾಡುತ್ತ ಬಂದ. ಪಿತ್ರ ಪಕ್ಷದಲ್ಲಿ ಕಾಶಿಗೆ ಬರುವ ಯಾತ್ರಿಗಳು ಸ್ವಲ್ಪ ಅಧಿಕ. ಆ ಸಮಯದಲ್ಲಿ ಪಿಂಡ ಕಾರ್ಯಗಳನ್ನು ಹೆಚ್ಚಾಗಿ ಮಾಡಿಸುವುದರಿಂದ ಮಗ ಕೆಲವೊಮ್ಮೆ ಶಾಲೆಗೆ ಹೋಗದೆ ಅಪ್ಪನ ಸಹಾಯಕ್ಕೆ ನಿಲ್ಲುತ್ತಿದ್ದ. 

ಗೊಕರ್ಣದಿಂದ ಬರೋ ಟುರಿಸ್ಟ ಬಸ್ ಪ್ರಯಾಣಿಕರು ಹೆಚ್ಚಾಗಿ ಇವರ ಬಳಿಯೆ ಬರುತ್ತಿದ್ದರು. ಸುಬ್ಬು ಜೋಯಿಸರಿಗೂ ಮತ್ತು ಅವರ ಭಾವನಿಗೂ ಕಮಿಶನ್  ವ್ಯವಹಾರ ಇತ್ತು. ಅಲ್ಲಿಂದ ಬರೋ ಯಾತ್ರಿಕರನ್ನು  ಸುಬ್ಬು ಜೋಯಿಸರ ಹತ್ತಿರನೆ ಕಳಿಸುತ್ತಿದ್ದರು. ಅವರೆಲ್ಲ ಪರಿಚಯ ಇಲ್ಲದ ಊರಲ್ಲಿ ಯಾರನ್ನು ಹುಡುಕುವುದು ಎಂದು ಇವರ ಬಳಿಯೆ ಪೂಜೆ ಮಾಡಿಸುತ್ತಿದ್ದರು. ಅದು ಅಲ್ಲದೆ ಮಗನನ್ನು ಇವರೊಟ್ಟಿಗೆ ಊರನ್ನು ತೋರಿಸಲು ಬಿಡುತ್ತಿದ್ದರು. ವಿಶ್ವನಾಥ ಅಪ್ಪ-ಅಮ್ಮನ ಬಳಿ ಹೊರತಾಗಿ ಇವರ ಬಳಿಯೆ ಕನ್ನಡ ಮಾತಡುವದಾಗಿತ್ತು. ವಿಶ್ವನಾಥನಿಗೆ ಕನ್ನಡ ಮಾತಾಡುವವರು ಬಂದರೆ ಎನೋ ಹರುಷ. ಅದು ಅಲ್ಲದೆ ಆ ಟೂರಿಸ್ಟಗಳನ್ನು ಕಾಶಿ ಬೀದಿ ಸುತ್ತಿಸುವ ಮತ್ತು ಗಂಗಾ ಗಿಂಡು, ರುದ್ರಾಕ್ಷಿ, ಹೀಗೆ ಕೆಲವು ಸಾಮಾನುಗಳನ್ನು ಖರೀದಿಸಲು  ಸುಬ್ಬು ಜೋಯಿಸರು ಮಗನನ್ನು ಕಳಿಸುತ್ತಿದ್ದರು. ಅವನು ಅಲ್ಲಿನ ಕೆಲವು ಪರಿಚಯದ ಅಂಗಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಇದಕ್ಕೆ ಜೋಯಿಸರು ಅಂಗಡಿಯವರ ಹತ್ತಿರ ಕಮಿಶನ್ ವ್ಯಾಪಾರ ಬೇರೆ ಇಟ್ಟಿದ್ದರು. ವಿಶ್ವನಾಥನಿಗೆ  ಯಾಕೋ ಕರ್ನಾಟಕದಿಂದ ಬಂದ ಯಾತ್ರಿಗಳ ಜೊತೆ ಹೋಗುವುದು ತುಂಬಾ ಇಷ್ಟವಾಗಿತ್ತು.  ಅವನು ಆ ಊರಿನ ಬಗ್ಗೆ ಕೇಳಿಕೊಳ್ಳುತ್ತಿದ್ದ. ಅಲ್ಲಿನ ಪರಿಸರ ನೋಡುವ ಆಸೆ ಆಯಿತು.   ಗಂಗಾ ನದಿಯಲ್ಲಿ ಆಡಿದ ವಿಶ್ವನಾಥನಿಗೆ ಅರಬ್ಬಿ ಸಮುದ್ರದಲ್ಲಿ ಆಡುವ ಆಸೆ ಆಯಿತು. ಚಿಕ್ಕ ವಯಸ್ಸಿನಲ್ಲಿ ನೋಡಿದ ಊರು ವಿಶ್ವನಾಥನಿಗೆ ಅಷ್ಟಾಗಿ ನೆನಪಿಲ್ಲದ ಕಾರಣ ಒಮ್ಮೆ ಊರಿಗೆ ಹೋಗುವ ಮನಸ್ಸಾಯಿತು. ಈ ವಿಚಾರವನ್ನು ಅವನು ಅಪ್ಪ-ಅಮ್ಮನ ಬಳಿ ಹೇಳಿದ. ಇದಕ್ಕೆ ಅಪ್ಪ-ಅಮ್ಮ ಯಾವ ಆಕ್ಷೇಪವು ತೋರಲಿಲ್ಲ. ಬೆಳೆದ ಮಗ ತನ್ನೂರನ್ನು ನೋಡಿ ಬರಲಿ ಎಂದು ಅನಿಸಿತು. ಇನ್ನೊಂದು ಕಾರಣ ಸುಬ್ಬು ಜೋಯಿಸರು ಬರಿ ಕೈನಲ್ಲಿ ಮನೆ ಬಿಟ್ಟು ಬಂದಿದ್ದರು. ಅವರಿಗೆ ಬರೋ ಪಿತ್ರಾರ್ಜಿತ ಆಸ್ತಿ ಅವರ ಅಣ್ಣನ ಬಳಿಯೇ ಇತ್ತು. ಈ ಆಸ್ತಿಯ ವಿಚಾರದ ಬಗ್ಗೆ ಯಾವಾಗಲು ಅಣ್ಣಂದಿರ ಹತ್ತಿರ ಮಾತಾಡಲಿಲ್ಲ. ಅದು ಅಲ್ಲದೆ ತಮ್ಮ ಕೆಲಸದಲ್ಲೆ ಮುಳುಗಿ ಹೋಗಿದ್ದರು. ಆಸ್ತಿ ವಿಷಯದ ಬಗ್ಗೆ ಆಗಲಿ ಅದರ ನೋಡಿಕೊಳ್ಳುವುದರ ಕುರಿತು ಇಲ್ಲಿಯ ವರೆಗೆ ಯಾವ ಮಾತು ಬರದೆ ಇದ್ದ ಕಾರಣ ಜೋಯಿಸರ  ಅಣ್ಣಂದಿರೆ ಎಲ್ಲಾ ಜಮೀನನ್ನು ನೋಡಿಕೊಳ್ಳುತ್ತಿದ್ದರು. ಈಗ ಜೋಯಿಸರಿಗೆ ತಮ್ಮ ಪಾಲಿನ ಜಮೀನಿನ ಮೇಲೆ ಆಸಕ್ತಿ ಬಂತು. ಇದಕ್ಕೆ ಅವರ ಹೆಂಡತಿಯ ಸಹಕಾರವು ಇತ್ತು. ಈ ವಿಚಾರವನ್ನು ಮನದಲ್ಲಿ ಇಟ್ಟುಕೊಂಡು ಜೋಯಿಸರು ಮಗನನ್ನು ಒಮ್ಮೆ ಊರಿಗೆ ಕಳಿಸಲು ಒಪ್ಪಿದರು. ಅಲ್ಲಿಯ ವಾತವರಣ ಮತ್ತು ಜಮೀನಿನ ಮೇಲೆ ಮಗನಿಗೆ ಯಾವ ತರಹದ ಭಾವನೆ ಇದೆ ಎಂದು ತಿಳಿಯುವ ಆಸಕ್ತಿಯಿಂದ.
ಅಪ್ಪ-ಅಮ್ಮನ ಅನುಮತಿ ಪಡೆದು ವಿಶ್ವನಾಥ ಗೊಕರ್ಣದಿಂದ ಬರೋ ಟುರಿಸ್ಟ್ ಬಸ್ ನವರ ಜೊತೆ ಅಜ್ಜಿಯ ಮನೆಗೆ ಹೋದ. ಅವನ ಆಸೆಯ ಪ್ರಕಾರ ಸಮುದ್ರದಲ್ಲಿ ಮನಸ್ಸೊ ಇಚ್ಚೆ ಆಟ ಆಡಿದ. ಕಾಶಿ ಗೂ ಗೊಕರ್ಣದ ರಥ ಬಿದಿಗೂ ಏನು ವ್ಯತ್ಯಾಸ ಕಾಣಲಿಲ್ಲ. ಅಲ್ಲು ಸಹ ಬರೋ ಯಾತ್ರಿಗಳ ಜೊತೆ ತಾವು ಮಾಡುವ ವ್ಯವಹಾರವೆ ಎಂದೆನಿಸಿತು. ಮಾವಂದಿರು ಯಾವಾಗಲು ದೇವಸ್ಠಾನದ ಪೂಜೆ ಮತ್ತು ಪಿಂಡ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಸ್ವಲ್ಪ ದಿನ ಅಲ್ಲಿ ಉಳಿದು ಮನಸೋ ಇಚ್ಚೇ ಸಮುದ್ರದಲ್ಲಿ ಆಟವಾಡಿ ತನ್ನ ತಂದೆ ಹುಟ್ಟುದ ಊರಿಗೆ ಹೊರಟನು. ಅಲ್ಲಿ ದೊಡ್ಡಪ್ಪಂದಿರಿಗೆ ಇವನು ಬರುವ ವಿಚಾರ ಸುಬ್ಬು ಜೋಯಿಸರು ಮೊದಲೆ ತಿಳಿಸಿದ್ದರು. ಆ ಕಾರಣ ವಿಶ್ವನಾಥನಿಗೆ ದಾರಿ ತಿಳಿಯುವುದೋ ಇಲ್ಲವೋ ಅನ್ನೋ ಕಾರಣದಿಂದ ತಮ್ಮ ಮಗ ಶಿವುನನ್ನು ಹೊನ್ನಳ್ಳಿ ಬಸ್ ಸ್ಟಾಪ್ ಗೆ ಕಳಿಸಿದ್ದರು.

ಹೊನ್ನಳ್ಳಿಗೆ ಬಂದ ವಿಶ್ವನಾಥನನ್ನು ಶಿವು ಅವನಾಗೆ ಪರಿಚಯ ಮಾಡಿಕೊಂಡು ತಮ್ಮ ಮನೆಗೆ ಕರೆ ತಂದನು. ಮನೆಗೆ ಬಂದ ತಮ್ಮನ ಮಗನನ್ನು ಅವನ ದೊಡ್ಡಪ್ಪಂದಿರು ಮತ್ತು ದೊಡ್ಡಮ್ಮಂದಿರು ತುಂಬಾ ಆತ್ಮಿಯವಾಗಿ ಪ್ರೀತಿಯಿಂದ ಬರ ಮಡಿಕೊಂದರು. ಚಿಕ್ಕ ವಯಸ್ಸಿನಲ್ಲಿ ನೋಡಿದ ವಿಶ್ವನ್ನಾಥನಿಗೂ ಇಗ ನೋಡೋದಕ್ಕು ತುಂಬಾ ವ್ಯತ್ಯಾಸ ಇದೆ ಅಂತ ಹೇಳಿದರು. ಇನ್ನೊಂದು ದೊಡ್ಡಪ್ಪನು ಪಕ್ಕಾ ನನ್ನ ಅಪ್ಪನ ಹೊಲಿಕೆಯೆ ಇದೆ “ಅಜ್ಜನ ಮೊಮ್ಮಗನೆ” ಅಂತ ಪ್ರೀತಿಯಿಂದ ತಲೆ ನೇವರಿಸಿದರು. ದೊಡ್ಡಮ್ಮಂದಿರು ವಾರಗಿತ್ತಿಯ ಮಗ ಎಂದು ನೋಡದೆ ಅವನ ಬಳಿ ಕಾಶಿಯ ಸುದ್ದಿ ಕೇಳಿದರು. ಅಲ್ಲಿಯ ತಿಂಡಿ ಮತ್ತು ಜನ ಜೀವನದ ಬಗ್ಗೆ ಕೇಳುತ್ತಿದ್ದರು. 

ವಿಶ್ವನಾಥನು ಒಮ್ಮೊಮ್ಮೆ ಅಮ್ಮನ ಹತ್ತಿರ ಕೇಳಿದ್ದುಂಟು, “ಅಮ್ಮಾ ನಮ್ಗೆ ನಮ್ಮ ಸಂಭಂದಿಕರಾಗಲಿ, ನಮ್ಮ ಮನೆಯವರಾಗಲಿ ಇಲ್ವಾ.” ಅಂತ ಕೇಳಿದ್ದಕ್ಕೆ  ಅವನ ತಾಯಿ ಏನೋ ಹಾರಿಕೆ ಉತ್ತರ ಕೊಡುತ್ತಿದ್ದರು. ಒಮ್ಮೆಯು ಅವನ ದೊಡ್ಡಪ್ಪನವರ ಬಗ್ಗೆ ಹೇಳಲಿಲ್ಲವಾಗಿತ್ತು. ಇನ್ನು ಇಲ್ಲಿಗೆ ಬಂದು ಉಳಿಯುವುದು ದೂರದ ಮಾತಾಗಿತ್ತು. ಈಗ ಇವರ ಪ್ರೀತಿ ಮತ್ತು ವಿಶ್ವಾಸ ನೋಡಿ ತಾನು ಇವರಿಂದ ದೂರ ಇದ್ದು ಇವರ ಪ್ರೀತಿಯಿಂದ ವಂಚಿತನಾದೆ ಎಂದೆನಿಸಿತು. ಯಾಕೆ ಅಪ್ಪ-ಅಮ್ಮ ಮನೆಯವರ ಬಗ್ಗೆ ಒಂದು ಮಾತಾಡದೆ ದೂರದ ಊರಲ್ಲಿ ಅಪರಿಚರಂತೆ ಇದ್ದರು ಎಂದು ಯೋಚಿಸಿದ.

ವಿಶ್ವನಾಥ ಬಂದಾಗಿನಿಂದ ಅವರ ದೊಡ್ಡಮ್ಮಂದಿರು ರುಚಿ-ರುಚಿಯಾಗಿ ಊಟ ಬಡಿಸುತ್ತಿದ್ದರು. ಮಾತಿಗೊಮ್ಮೆ” ಸಂಕೋಚ ಮಾಡಿಕೊಳ್ಳ ಬೇಡ” ಅನ್ನುತ್ತಿದ್ದರು. ಯಾರಾದರು ಊಟದ ಸಮಯಕ್ಕೆ ಇವರ ಮನೆ ಹತ್ತಿರದ ದೇವಸ್ಥಾನಕ್ಕೆ ಬಂದರೆ ಇವರ ಮನೆಗೆ ಬಂದು ಊಟ ಮಾಡುತ್ತಿದ್ದರು. ಅವರನ್ನು ತುಂಬಾ ಅಕ್ಕರೆಯಿಂದ ಬರ ಮಾಡಿಕೊಂಡು ಊಟ ಬಡಿಸುತ್ತಿದ್ದರು. ಇದನ್ನು ನೋಡಿದ ವಿಶ್ಬನಾಥನಿಗೆ ಬಹಳ ಆಶ್ಚರ್ಯವಾಯಿತು.  ತಮ್ಮ ಮನೆಯಲ್ಲಿ ಅಮ್ಮ ಒಂದು ಬೋರ್ಡ ಮಾಡಿ ಗೋಡೆಗೆ ತೂಗು ಹಾಕಿದ್ದರು. ಕಾಫಿ, ತಿಂಡಿ, ಊಟ, ಲಸ್ಸಿ, ಹೀಗೆ ಯಾವು ಯಾವುದಕ್ಕೆ ಎಷ್ಟೆಷ್ಟು ಅಂತ ದರಗಳನ್ನು ಬರೆದು ಇಟ್ಟಿದ್ದು ನೆನಪಾಯಿತು. ತೀರ ಧರ್ಮಕ್ಕಾಗಿ ಇಲ್ಲದಿದ್ದರು, ತಮ್ಮ ಊರಿನಿಂದ ಬಂದ ಪರಿಚಯದವರ ಹತ್ತಿರನು ಹಣ ಎಳೆಯುವುದು ಮತ್ತು ಕೆಲವು ಊರಿನ ಯಾತ್ರಿಗಳು ಕೆಲವೊಮ್ಮೆ ಜಗುಲಿಯಲ್ಲಿ ಮಲಗಿ ಹೋಗುವುದಕ್ಕು ಹಣ ಹೇಳುವುದು ನೆನಪಾಗಿ ಮನಸ್ಸಿನಲ್ಲೆ ನೋವಾಯಿತು. ಇಲ್ಲಿ ದೊಡ್ಡಮ್ಮ ಕೈ ತುಂಬಾ ಬಡಿಸುತ್ತಿದ್ದರು. ಬಿಸಿಲಲ್ಲಿ ಬಂದವರಿಗೆ  ಮಜ್ಜಿಗೆ ಕೊಡಿತ್ತಿದ್ದರು. ಇಲ್ಲಿಯ ವಾತಾವರಣಕ್ಕು ತಮ್ಮ ಮನೆಯ ವಾತವರಣಕ್ಕು ಅಜಗಜಾಂತರ ಎಂದೆನಿಸಿತು.

ವಿಶ್ವನಾಥನ ದೊಡ್ಡಪ್ಪನ ಮಕ್ಕಳು ಅವನನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದರು. ಎಲ್ಲರು ಸೇರಿ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ ತಮ್ಮದೆ ಊರಿನ ವಾರಗೆಯ ಹುಡುಗರ ಜೊತೆ ಹರಟೆ ಹೊಡೆಯುತ್ತ ಅವರದೆ ಆದ ಒಂದು ಗೆಳೆಯರ ದಂಡಿತ್ತು. ಅಲ್ಲೆ ಹತ್ತಿರ ಹರಿಯುವ ತುಂಗಾ ನದಿಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದರು. ಅಲ್ಲಿನ ಪ್ರಶಾಂತತೆ ವಿಶ್ವನಾಥನಿಗೆ ಬಹಳ ಇಷ್ಟವಾಯಿತು. ಯಾವಾಗಲು ಗಿಜಿಗುಡೊ ಜನ, ಮಲೀನವಾದ ಗಂಗಾ ನೀರು, ಅದೆಲ್ಲ ನೋಡಿದ ವಿಶ್ವನಾಥನಿಗೆ ಯಾವುದೋ ಸ್ವರ್ಗಕ್ಕೆ ಬಂದಂತೆ ಭಾಸವಾಯಿತು. ಅಪ್ಪ-ಅಮ್ಮ ಇಷ್ಟು ಒಳ್ಳೆ ಊರು ಬಿಟ್ಟು ಯಾಕೆ ದೂರದ ಊರಲ್ಲಿ ಇದ್ದಾರೆ ಅನ್ನೋದೆ ಯಕ್ಷ ಪ್ರಶ್ನೆ ಆಯಿತು.

ಒಮ್ಮೆ ತಾನೊಬ್ಬನೆ ತೋಟ ಗದ್ದೆ ಒಡಾಡುವಾಗ ನಾವೆಲ್ಲರು ಇವರ ಬಳಿ ಬಂದು ಯಾಕೆ ಇರಬಾರದು ಅಂದೆನಿಸಿತು. ಅಪರಿಚಿತ ಊರಲ್ಲಿ ಅನಾಥರಂತೆ ದುಡಿತಾ ಇರೋದ್ಕಿಂತ ನಮ್ಮೂರಲ್ಲೆ ಎಲ್ಲರ ಜೊತೆ ಇರೋದು ಒಳ್ಳೆಯದು. ಒಬ್ಬರಿಗೊಬ್ಬರು ಕಷ್ಟ-ಸುಖಕ್ಕೆ ಆಗಬಹುದು ಅಂತ ಯೋಚಿಸಿದನು. 

ವಿಶ್ಬನಾಥ ಹೊರಡುವ ಸಮಯ ಬಂದಿತು. ಮನಸ್ಸಿಲ್ಲದ ಮನಸ್ಸಿನಿಂದ ದೊಡ್ಡಪ್ಪನವರ ಆಶೀರ್ವಾದ ಪಡೆದು ಹೊರಟನು. ಆಗ ದೊಡ್ಡಪ್ಪ,”ಅಪ್ಪ-ಅಮ್ಮನನ್ನು ಹೇಳಿದ್ದೀನಿ ಅಂತ ಹೇಳಪ್ಪ. ಅವರಿಗೂ ಊರ್ ಕಡೆ ಬರೋಕ್ ಹೇಳು” ಅಂತ ಹೇಳಿದರು. ಶಿವು ಮತ್ತು ಇತರರು ನೀನು ಹೀಗೆ ಬರ್ತಾ ಇರು ಅಂತ ಹೇಳಿದರು. ಇನ್ನೊಂದು ದೊಡ್ಡಪ್ಪ ನಿಮ್ಮದೆ ಆದ ಜಮೀನ್ ಇದೆ. ಅಷ್ಟು ದೂರದ ಊರಲ್ಲಿ ಯಾಕ್ ಇದ್ದೀರಾ. ಇಲ್ಲೆ ನಮ್ಮ ಜೊತೆ ಇರು ಅಂತ ಹೇಳಿದರು. ದೊಡ್ಡಮ್ಮಂದಿರು ಟ್ರೇನಿನಲ್ಲಿ ತಿನ್ನಲು ಬೇಕಾಗುವ ಕೆಲವು ತಿಂಡಿಗಳನ್ನು ಕಟ್ಟಿ ಕೊಟ್ಟರು. ಎಲ್ಲರು ಅವನ್ನನು ಪ್ರೀತಿಯಿಂದ ಬಿಳ್ಕೋಟ್ಟರು. ಶಿವು ತನ್ನ ಸ್ವಂತ ತಮ್ಮ ಎಂಬಂತೆ ಅಪ್ಪಿಕೊಂಡು ಬರ್ತಾ ಇರು ಅಂತ ತುಂಬಾ ಸಲ ಹೇಳಿದನು. 

ಹೊನ್ನಳ್ಳಿಯಿಂದ ಶಿವಮೊಗ್ಗಕ್ಕೆ ಬಂದು ರೈಲು ಹತ್ತಿದ ವಿಶ್ವನಾಥನಿಗೆ ಮನಸ್ಸು ತುಂಬಾ ಭಾರವಾಯಿತು. ಎಲ್ಲರು ಇದ್ದು ಅನಾಥ ಭಾವನೆ ಬರತೊಡಗಿತು. ಅವನ ಮನಸ್ಸಿನಲ್ಲಿ ತಾವೆಲ್ಲರು ಇಲ್ಲಿಗೆ ಬಂದು ತಮ್ಮೂರಲ್ಲೆ ಇರಬೇಕು ಎಂದೆನಿಸಿತು. ಕಾಶಿಗೆ ಹೋದ ಮೇಲೆ ಈ ವಿಷಯ ಮಾತಾಡ ಬೇಕು ಎಂದು ಅಂದುಕೊಂಡನು. ಅಪ್ಪ-ಅಮ್ಮ ಒಪ್ಪುವುದು ಸಂಶಯ ಇತ್ತಾದರು. ಹೇಗಾದ್ರುಮರಳಿ ಊರಿಗೆ ಬರುವುದು ಅವನ ದೃಡ ನಿರ್ಧಾರವಾಗಿತ್ತು.






No comments: